ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗೆ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನು ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವು ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ, ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ, ಕೋಟಿ ಶ್ರೀ ಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜೆಯಗಿ ಅರಳಿ ನಳನಳಿಸಬೇಕು ; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಇತಿಹಾಸ ಒಂದು ಅಥವಾ ಹಲವು ಕಾಲಘಟ್ಟಗಳಲ್ಲಿ, ನಿರ್ದಿಷ್ಟ ಪ್ರದೇಶ ಅಥವಾ ಪ್ರದೇಶಗಳಲ್ಲಿ ನಡೆದ ಐತಿಹಾಸಿಕ, ಸಾಂಸ್ಕೃತಿಕ ಸಂಗತಿಗಳನ್ನು ಆಧಾರಭೂತವಾಗಿ ಶೋಧಿಸಿ, ಅಧಿಕೃತವಾಗಿ ದೊರೆತ ಮಾಹಿತಿಗಳ ಆಧಾರದ ಮೇಲೆ ಕಟ್ಟಿಕೊಡುವ ಸತ್ಯಕಥನ, ಸಮಕಾಲೀನ ಇತಿಹಾಸದ ಅಧ್ಯಯನ, ಶೋಧನೆ, ವಿವೇಚನೆ ಮತ್ತು ವಿಶ್ಲೇಷಣೆಗಳು ಅಷ್ಟು ಕಷ್ಟಕರವಲ್ಲ. ಆದರೆ, ಪ್ರಾಚೀನ ಇತಿಹಾಸವನ್ನು ನಿಜಕ್ಕೆ ಎರವಾಗದಂತೆ ನಿರೂಪಿಸುವುದು ಮತ್ತು ಅದು ಅಪೇಕ್ಷಿಸುವ ಪರಿವಲಯದ ತಥ್ಯಗಳನ್ನು ಬಹುಮೂಲಗಳಿಂದ ಪರಿಶ್ರಮಪೂರ್ವಕವಾಗಿ ಎಕ್ಕಿ ತೆಗೆದು ಪರಿಶೀಲಿಸಿ ಅವುಗಳ ಆಧಾರದ ಮೇಲೆ ಗತ ಇತಿಹಾಸವನ್ನು ಕಟ್ಟಿಕೊಡುವುದು ಕಷ್ಟಕರವಾದ ಮತ್ತು ತುಂಬ ಜವಾಬ್ದಾರಿಯುತವಾದ ಸಂಗತಿ. ಸತ್ಯ ಘಟನೆಗಳ ಮೇಲೆ ಕಾಲ, ದೇಶಗಳು ಅವುಗಳೊಳಗೆ ಅಂರ್ತಗತವಾದ ಜನರ ಭಾವ, ಭಾವನೆಗಳು ಅವುಗಳ ಮೇಲೆ ಹಬ್ಬಿಕೊಂಡ ಪರ, ವಿರೋಧ ಕಲ್ಪನೆಗಳು, ಒಂದು ಇತಿಹಾಸದ ಕಾಲ ಹಳೆಯದಾದಂತೆಲ್ಲ ಮೂಲ ಸತ್ಯವನ್ನು ಮರೆಮಾಚುತ್ತಾ ಹೋಗುತ್ತವೆ. ಹಾಗೆಯೇ ಆ ಘಟನೆಗಳ ಪರ, ವಿರೋಧಗಳು ಕಾಲಕ್ರಮೇಣ ಗರಿಗಟ್ಟಿಕೊಳ್ಳುತ್ತಾ ಪರಸ್ಪರ ವಿರುದ್ಧ ಅಭಿಪ್ರಾಯಗಳತ್ತ ಕೈ ಮಾಡುತ್ತವೆ. ಕೊನೆ ಕೊನೆಗೆ ಇತಿಹಾಸ ಜನಪದವಾಗಿ, ಪುರಾಣವಾಗಿ ರೂಪುಗೊಳ್ಳುತ್ತ ಅತಿಮಾನುಷ ನೆಲೆಯಲ್ಲಿ ವೈಭವೀಕೃತವಾಗುತ್ತದೆ. ಇಂತ ಬೆಳವಣಿಗೆ ಹೆಚ್ಚು ಕಾಲ ತೆಗೆದುಕೊಂಡಂತೆಲ್ಲ ಅದು ಸತ್ಯದಿಂದ ದೂರ ದೂರ ಸರಿಯುತ್ತಾ ಹೋಗುತ್ತದೆ. ಇಂತಹ ಕಲ್ಪನೆಗಳಿಂದ, ಮಿಥ್ಯಗಳಿಂದ, ಕಥೆಗಳಿಂದ ಆವೃತ್ತವಾದ ಚಾರಿತ್ರಿಕ ಅಂಶಗಳನ್ನು ಅವುಗಳ ಸೆರೆಯಿಂದ ಕಳಚಿ ನ್ಯಾಯ ನಿಷ್ಠುರವಾದ ಕಣ್ನಿನಿಂದ ಮತ್ತು ಮನಸ್ಸಿನಿಂದ ಪರಿಗ್ರಹಿಸಿ ನಿಜ ಸ್ವರೂಪವನ್ನು ಬಯಲು ಮಾಡುವುದು ಚರಿತ್ರಕಾರನ ಆದ್ಯ ಕರ್ತವ್ಯವಾಗಿರುತ್ತದೆ. ಲಿಖಿತ ಆಧಾರಗಳು ದಟ್ಟವಾಗಿ ಸಿಗುವ ಕಡೆಗಳಲ್ಲಿ ಚರಿತ್ರೆಕಾರ ಸತ್ಯಕ್ಕೆ ಹತ್ತಿರವಾದ ನಿರ್ಣಯಗಳನ್ನು ಮತ್ತು ನಿರೂಪಣೆಯನ್ನು ಮಾಡಲು ಸಾಧ್ಯವಾಗುತ್ತದೆ. ಗಟ್ಟಿಯಾದ ನಂಬಲರ್ಹವಾದ ಆಧಾರಗಳು ಸಿಗದಿದ್ದಾಗ, ತನಗೆ ಸಿಕ್ಕಷ್ಟೇ ಮಾಹಿತಿಗಳಿಂದ ಚರಿತ್ರೆಯನ್ನು ಪುನಾರಚಿಸಲು ಆತ ತೊಡಗುತ್ತಾನೆ. ಎಷ್ಟೋ ಸಂದರ್ಭಗಳಲ್ಲಿ ಅಂತಹ ವಿಶ್ವಾಸಾರ್ಹ ಆಧಾರಗಳು ಕಡಿಮೆ ಇದ್ದಾಗ ಸತ್ಯಪ್ರಿಯತೆಯ ನಿಷ್ಠುರದೃಷ್ಟಿಯಿಂದ ಅದಕ್ಕೆ ಪೂರಕವಾದ ಇತರ ಮಾಹಿತಿಗಳನ್ನು ನಿರಾಕರಿಸುತ್ತ ಹೋಗುತ್ತಾನೆ. ಆದರೆ, ಅಕ್ಷರಸ್ಥ ಮತ್ತು ಪ್ರಬುದ್ಧ ಇತಿಹಾಸ ರಚನಕಾರರು ತಮಗೆ ದೊರೆತ ಮಾಹಿತಿಗಳಿಂದಷ್ಟೇ ಕಟ್ಟಿಕೊಡುವ ಚರಿತ್ರೆ ಅರೆಬರೆಯಾಗುತ್ತದೆ, ಏಕಮುಖವಾಗುತ್ತದೆ. ಏಕೆಂದರೆ ಒಂದು ಪ್ರದೇಶವನ್ನು ಗೆದ್ದ, ಆಳಿದ ವ್ಯಕ್ತಿ ಅಥವಾ ವ್ಯಕ್ತಿಗಳು ಆನಂತರದ ದಿನಗಳಲ್ಲಿ ನಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ಬರೆಯಿಸಿ ಅದರ ಹಿಂದಿನ ನಿಗೂಢ ಕರಾಳ ಸತ್ಯಗಳನ್ನು ಮರೆಮಾಚುತ್ತಾ ತನ್ನ ಕಾಲವನ್ನು ಮತ್ತು ಕಾರ್ಯವನ್ನು ಮಾತ್ರ ವೈಭವೀಕರಣಗೊಳಿಸಲು ಪ್ರಯತ್ನಿಸುತ್ತಾನೆ. ಆಳರಸರ ಆಸ್ಥಾನ ವಿದ್ವಾಂಸರುಗಳು, ಅವರಿಂದ ಪರಿಪೋಷಿತವಾಗಿ ಸ್ಥಾನಮಾನಗಳನ್ನು ಪಡೆಯುತ್ತಾ ಹೋಗುವ ಇತಿಹಾಸಕಾರರೆಂಬ ಹೆಸರನ್ನು ಹೊತ್ತವರು ಸ್ವಾಮಿ ಋಣ ತೀರಿಸುವುದಕ್ಕೆ ಸತ್ಯ ಘಟನೆಗಳನ್ನು ಮರೆಮಾಚಿ ಅಸತ್ಯದ ಸೌಧವನ್ನು ತಮ್ಮ ಕಲ್ಪನೆ ಮತ್ತು ಬುದ್ಧಿಕೌಶಲಗಳಿಂದ ನಿರ್ಮಿಸುತ್ತಾ ಹೋಗುತ್ತಾರೆ. ಆಗ ಚರಿತ್ರೆ ವಿರೂಪಗೊಳ್ಳುತ್ತದೆ. ಸತ್ಯವನ್ನು ಸಮಾಧಿ ಮಾಡುತ್ತದೆ.

ಇತಿಹಾಸಕಾರರು ಮೂರು ಪ್ರಕಾರಗಳನ್ನು ಗುರುತಿಸಬಹುದು. ಒಂದು, ವೃತ್ತಿಪರ ಇತಿಹಾಸಕಾರರು ಎರಡು, ಅಧಿಕಾರಶಾಹಿ ಇತಿಹಾಸಕಾರರು ಮೂರು ಸಮಗ್ರ ದೃಷ್ಟಿಯ ಸಾಂಸ್ಕೃತಿಕ ಇತಿಹಾಸಕಾರರು. ಮೊದಲನೆಯ ಗುಂಪು ಇತಿಹಾಸದ ಅಧ್ಯಯನ, ವಿಶ್ಲೇಷಣೆಗಳನ್ನು ವೃತ್ತಿಪರವಾಗಿ ಎಂದರೆ ವಿಶೇಷವಾಗಿ ಯಾಂತ್ರಿಕವಾಗಿ ವಸ್ತುಸಂಗತಿಗಳ ಬಗ್ಗೆ ತಮಗೆ ದೊರೆತ ವಿವರಗಳ ಚೌಕಟ್ಟಿನಲ್ಲೇ ಅವುಗಳ ಸತ್ಯಾಸತ್ಯತೆಯನ್ನು ನಿರ್ಧರಿಸುವ ಕಂಪ್ಯೂಟರಿಗರದು. ಎರಡನೆಯ ಗುಂಪು ಸರ್ಕಾರದಿಂದ ಅಥವಾ ಸಂಸ್ಥೆಗಳಿಂದ ಸಂಬಳ ಪಡೆಯುತ್ತಾ ತಮ್ಮ ಆಳರಸರ ದೃಷ್ಟಿ ಧೋರಣೆಗೆ ಅನುಗುಣವಾಗಿ ಮಾಹಿತಿಗಳನ್ನು ಕಲೆಹಾಕಿ ಅದರ ಉದ್ದೇಶಿತ ಫಲಿತಗಳನ್ನು ಪರಮ ಸತ್ಯವೆಂಬಂತೆ ನಂಬಿಸಲು ಟೊಂಕ ಕಟ್ಟಿದವರು. ಮೂರನೆಯ ಗುಂಪು ವೃತ್ತಿಪರತೆಯ ಗಾಂಭೀರ್ಯವನ್ನು ಅಧಿಕಾರಶಾಹಿಯ ಇಕ್ಕಟ್ಟು ಬಿಕ್ಕಟ್ಟುಗಳನ್ನು ದೂರೀಕರಿಸಿ ತಮಗೆ ದೊರೆತ ಪರ ವಿರೋಧವಾದ ಎಲ್ಲ ಮಾಹಿತಿಗಳನ್ನು ಕ್ರೋಡೀಕರಿಸಿ ಅವುಗಳ ಹಿನ್ನಲೆ ಮುನ್ನಲೆಗಳನ್ನು ವಿವೇಚಿಸಿ ಪ್ರದೇಶದ ಅಥವಾ ರಾಷ್ಟ್ರದ ಸಾಂಸ್ಕೃತಿಕ ಒತ್ತಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸತ್ಯದರ್ಶನ ಮಾಡಿಸುವ ಹಂಬಲ ಉಳ್ಳವರು. ಈ ಮೂರು ಗುಂಪುಗಳಲ್ಲದೆ ನಾಲ್ಕನೆಯ ಮತ್ತೊಂದು ಗುಂಪೂ ಇದೆ. ಇವರು ತಾವು ಕಂಡು ಕೇಳಿದ ವ್ಯಕ್ತಿಗಳ, ಸ್ಥಳಗಳ, ಸಂಗತಿಗಳ ಮತ್ತು ಕಾಲಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಂಡವರಲ್ಲ. ಆ ವ್ಯಕ್ತಿ, ಕಾಲ, ಘಟನೆಗಳ ಬಗ್ಗೆ ತಮ್ಮ ಕಾಲದ ವಿವಿಧ ವರ್ಗದ ಜನಸಮುದಾಯ ತಾಳಿದ ಭಾವನೆ, ಕಲ್ಪನೆಗಳನ್ನು, ಗತಿಸಿದ ವ್ಯಕ್ತಿ, ಸಂಗತಿಗಳ ಬಗ್ಗೆ ತಮ್ಮ ಕಾಲ ಮತ್ತು ಸಾಂಸ್ಕೃತಿಕ ಕಥನಕಾರರು ಜರಡಿ ಹಿಡಿದು, ಬೇಡವಾದ್ದನ್ನು ನಿರಾಕರಿಸಿ ಬೇಕಾದ್ದನ್ನು ಸ್ವೀಕರಿಸುವ ಮೂಲಕ ಸತ್ಯ ಘಟನೆಯ ಬಗ್ಗೆ ಬೆಳೆದು ನಿಂತ ಎಲ್ಲ ಮೌಖಿಕ ಪರಂಪರೆಯನ್ನೂ ಅನುಭವಸಿದ್ಧವಾಗಿ ರೂಢಿಸಿಕೊಳ್ಳುವ ಮೂಲಕ ಜನಪದ ಕಥನವನ್ನು ಬಿಂಬಿಸುವವರು. ಇಂಥ ಕಥನಗಾರಿಕೆಯಲ್ಲಿ ಕುರಿತೋದಿದ ಗಂಭೀರ ಮತ್ತು ತಾವು ಕಾಣುವುದೊಂದೇ ಸತ್ಯ ಎಂದು ಭಾವಿಸಿದ ವಿದ್ವತ್ ಇತಿಹಾಸಕಾರರು ಕಾಣದಿರುವ ಸೂಕ್ಷ್ಮಗಳನ್ನು ಸಂಸ್ಕೃತಿಯ ಒಳಕಣ್ಣುಗಳನ್ನು ಗುರುತಿಸಬಲ್ಲ ಅಂತರ್‌ದರ್ಶನವುಳ್ಳವರು. ಹೀಗಾಗಿ ಮೊದಲ ಮೂರು ಗುಂಪಿನ ಇತಿಹಾಸಕಾರರು ವಸ್ತುಸಂಗತಿಗಳ ಅಸ್ತಿಪಂಜರವನ್ನು ಮಾತ್ರ ಕಂಡುಹಿಡಿದು ಪ್ರದರ್ಶನವನ್ನು ಮಾಡಿದರೆ, ಮೌಖಿಕ ಚರಿತ್ರೆ ಮತ್ತು ಸಂಸ್ಕೃತಿಯನ್ನು ಆಧರಿಸಿದ ಜನಪದ ಕಥನಕಾರರು ಆ ಕಾಲದ ಮೂಲ ಆಶಯಗಳ ನಾಡಿಗಳನ್ನು ಹಿಡಿದು ಮತ್ತು ಇತಿಹಾಸದಲ್ಲಿ ಆಗಿಹೋದ ವಸ್ತುಸಂಗತಿಗಳು ಜನಮನದ ಮೇಲೆ ಬೀರಿರುವ ಆಳವಾದ ಪ್ರಭಾವಗಳನ್ನು ಪರಿಭಾವಿಸಿ ಚರಿತ್ರೆಯನ್ನು ಕಟ್ಟತೊಡಗುತ್ತಾರೆ. ಈ ಚರಿತ್ರೆ ಹೆಚ್ಚು ಜೀವಂತವೂ ಅನುಭವ ಶ್ರೀಮಂತವೂ ಆಗಿರುತ್ತದೆ. ಇದು ಗತಾನುಗತಿಕವಾದ ಚರಿತ್ರೆಯ ಪದ್ಧತಿಗೆ ಹೊಸ ಮೌಲ್ಯಗಳನ್ನು ದಾನ ಮಾಡುತ್ತದೆ. ಈ ಕಾರಣದಿಂದಾಗಿ ಮೌಖಿಕ ಚರಿತ್ರೆಯನ್ನು ಧಿಕ್ಕರಿಸುವ ಕೃತಿನಿಷ್ಠ ಅಥವಾ ಉದ್ದೇಶನಿಷ್ಠ ಚರಿತ್ರೆಕಾರರಿಗಿಂತ ವಿಭಿನ್ನ ನೆಲೆಗಳಲ್ಲಿ ವಿವರಿಸುವುದರಿಂದ ನಿಜವಾದ ಚರಿತ್ರೆ ಮೌಖಿಕ ಆಕರಗಳನ್ನು ಒಳಗೊಳ್ಳದಿದ್ದರೆ ನಿಸ್ತೇಜವಾಗುತ್ತದೆ, ಜೀವವಿರಹಿತವಾಗುತ್ತದೆ ಮತ್ತು ಆ ಕಾರಣದಿಂದ ಪೇಲವವೂ ಆಗಿ ಅಪೂರ್ಣವೆನಿಸುತ್ತದೆ. ಇತ್ತೀಚೆಗೆ ಬೆಳೆಯುತ್ತಿರುವ ಈ ಹೊಸ ಇತಿಹಾಸ ದೃಷ್ಟಿಯ ಕಾರಣದಿಂದಾಗಿ ನೈಜ ಇತಿಹಾಸ ರಚನೆಯಲ್ಲಿ ಮೌಖಿಕ ಆಕರಗಳು ಮಹತ್ತರ ಸ್ಥಾನವನ್ನು ಪಡೆಯುತ್ತಿವೆ.

ಮೇಲಿನ ಹಿನ್ನಲೆಯಲ್ಲಿ ಕನ್ನಡ, ಕೊಡಗು, ತುಳುನಾಡಿನ ಅಧ್ಯಯನವನ್ನು ಮೌಖಿಕ ಆಕರಗಳು ಕಟ್ಟಿಕೊಡುವ ದೃಷ್ಟಿಕೋನಗಳ ಮೂಲಕವಾಗಿ ಡಾ. ವಿಜಯ್‌ ಪೂಣಚ್ಚ ಇಲ್ಲಿ ನಿರೂಪಿಸಿದ್ದಾರೆ. ಸ್ವತಃ ಕೊಡಗಿನಲ್ಲಿ ಜನ್ಮ ತಾಳಿದ ಈ ಸಂಶೋಧಕರು ಕೊಡಗಿನ ಪರಸರಕ್ಕೆ ಪೂರಕವಾಗಿರುವ ಕನ್ನಡ ಮತ್ತು ತುಳುನಾಡುಗಳ ಅಧ್ಯಯನಗಳನ್ನು ನಿಕಟ ಪರಿಚಯದಿಂದ ಸುಸೂಕ್ಷ್ಮ ಶೋಧನೆ ಮತ್ತು ಸಂಶೋಧನೆಗಳಿಂದ, ಅವುಗಳು ದೊರಕಿಸಿಕೊಡುವ ಆಕರಗಳ ಗಂಭೀರ ಅಧ್ಯಯನದಿಂದ ಇಂಥದೊಂದು ವಿಶಿಷ್ಟ ಇತಿಹಾಸ ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಕನ್ನಡ ಜನಪದ ಕಾವ್ಯಗಳು ಸೃಷ್ಟಿಸಿರುವ ಸಾಂಸ್ಕೃತಿಕ ವೀರರನ್ನು ಕುರಿತ ಬಹುಮುಖಿ ಅಧ್ಯಯನದ ದಾರಿಯಲ್ಲಿ ಕ್ರಮಿಸಿ ಅವರಿಂದ ವ್ಯಕ್ತವಾಗುವ ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯ ವಿಶಿಷ್ಟ ಮುಖಗಳ ವಿನ್ಯಾಸಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಕೊಡಗಿನ ಜನಪದ ಕಾವ್ಯಗಳು, ಇದುವರೆಗೆ ಕೊಡಗಿನ ಬಗ್ಗೆ ಲಭ್ಯವಾದ ಚಾರಿತ್ರಿಕ ಆಕರ ಮತ್ತು ಸಾಂಸ್ಕೃತಿಕ ಒಳನೋಟಗಳು ಪ್ರಸ್ತುತಪಡಿಸುವ ಪರಂಪರಾಗತ ಚರಿತ್ರೆಗಿಂತ ಭಿನ್ನವಾದ ಒಳನೋಟಗಳನ್ನು ಕಂಡು ಕಾಣಿಸಿದ್ದಾರೆ ಇಲ್ಲಿ. ಹಾಗೆಯೇ ದೈವೀ ನಂಬಿಕೆಯ ಗಾಢವಾದ ನೆಲೆಯಲ್ಲಿ ಮೈದಳೆದಿರುವ ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಅಲ್ಲಿನ ವಿಶಿಷ್ಟ ಮತ್ತು ಶ್ರೀಮಂತ ಭೂತಾರಾಧನೆಯ ಪರಂಪರೆಯ ಹಾಗೂ ಅದನ್ನು ಸುತ್ತವರಿದ ಸಮಾಜದ ಬದುಕಿನ ಅಂತರಂಗವನ್ನು ದರ್ಶಿಸುವುದರ ಮೂಲಕ ಈ ಭೂತರಾಧನೆ ಮತ್ತು ಸಮಾಜಗಳು ಕರ್ನಾಟಕದ ಉಳಿದ ಪ್ರದೇಶಗಳಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಕಟ್ಟಿಕೊಡುವ ತನ್ನದೇ ಆದ ಸ್ವತಂತ್ರ ಸಾಂಸ್ಕೃತಿಕ ಚರಿತ್ರೆಯನ್ನು ಇಲ್ಲಿ ಸುಸಂಗತ ನಿದರ್ಶನ ಮತ್ತು ವಿವೇಚನೆಗಳ ಮೂಲಕ ನಿರೂಪಿಸಿದ್ದಾರೆ. ಇದುವರೆಗೆ ಬೆಳೆದು ಬಂದ ಪಾರಂಪಾರಿಕ ಇತಿಹಾಸ ದೃಷ್ಟಿಕೋನಗಳ ಜೊತೆಯಲ್ಲಿ ಮೌಖಿಕ ಆಕರಗಳು ಸೃಷ್ಟಿಸುವ ಇತಿಹಾಸವನ್ನು ನಿಷ್ಠುರ ತೌಲನಿಕ ಪರಿಶೀಲನೆಗೆ ಮುಖಾಮುಖಿಯಾಗಿಸಿ ಚರ್ಚೆಯನ್ನು ಬೆಳೆಸುವುದಕ್ಕಿಂತ ಮಿಗಿಲಾಗಿ ಇವರು ಸಂಶೋಧನೆಗೆ ಆರಿಸಿಕೊಂಡಿರುವ ಪ್ರದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಇನ್ನೂ ದಟ್ಟವಾಗಿ ಉಳಿದುಕೊಂಡಿರುವ ಮೌಖಿಕ ಆಕರಗಳನ್ನು ಪ್ರಬಲವಾಗಿ ಅವಲಂಬಿಸಿ, ಇಲ್ಲಿನ ಜನಜೀವನದ ಮೂಲಸತ್ವ ಮತ್ತು ಸತ್ಯಗಳನ್ನು ಹಾಗೂ ಈ ಮೂರು ಪ್ರದೇಶಗಳ ಭಿನ್ನ ಭಿನ್ನವಾದ ಸಾಂಸ್ಕೃತಿಕ ನೆಲೆಗಳು ಬಿಚ್ಚಿಕೊಡುವ ಆಚರಣಾ ಪ್ರಧಾನವಾದ ನೈಜ ವಿವರಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಿದ್ದಾರೆ. ಹಳೆಯದರ ಬಗ್ಗೆ ಅನಾದರ ಮತ್ತು ಅವಜ್ಞೆಗಳು ಅಧಿಕವಾಗುತ್ತಿರುವ ವರ್ತಮಾನ ಕಾಲದಲ್ಲಿ ವಿವಿಧ ಚಾರಿತ್ರಿಕ ಸಿದ್ಧಾಂತಗಳ ಅಧ್ಯಯನದ ಎಳೆಗಳನ್ನು ಹಿಡಿದೂ ಕೂಡ ಪ್ರಾಚೀನರ ಅನುಭವ ಪ್ರಪಂಚದ ಮುಖ್ಯ ಭಾಗಗಳಾಗಿರುವ ಮೌಖಿಕ ವಸ್ತುಸಂಗತಿಗಳನ್ನು ಸಮಾವೇಶಗೊಳಿಸಿಕೊಂಡು, ಯಾವುದನ್ನೂ ಅವಿಚಾರಿತವಾಗಿ ವಿಜೃಂಭಿಸದೆ ಡಾ. ವಿಜಯ್ ಪೂಣಚ್ಚ ಅವರು ಇಲ್ಲಿ ನಿರೂಪಿಸಿದ್ದಾರೆ. ಇತಿಹಾಸಕಾರನ ಸತ್ಯ, ನಿಷ್ಠುರತೆ, ಸಾಂಸ್ಕೃತಿಕ ಸಂಶೋಧಕನ ಜೀವನಪರವಾದ ಕಾಳಜಿ ಮತ್ತು ಒಳನೋಟಗಳನ್ನು ವೈಚಾರಿಕವಾದ ಜಿಜ್ಞಾಸೆಗೆ ಒಳಪಡಿಸಿ ತಮ್ಮ ಕೃತಿಗೆ ಬಳಸಿಕೊಂಡಿರುವುದು ತುಂಬ ಮೆಚ್ಚುವ ಅಂಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಾಡಿನ ಚರಿತ್ರೆಯ ಅರೆಕೊರೆಗಳನ್ನು ತುಂಬಬಹುದಾದ ಸಾಧ್ಯತೆಗಳನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ಅವರ ಈ ವಿಶಿಷ್ಟ ದೃಷ್ಟಿಕೋನ ಹಾಗೂ ನಿಷ್ಠಾವಂತ ಪ್ರಯತ್ನ ಗಳಿಗಾಗಿ ಅವರನ್ನು ಅಭಿನಂದಿಸುತ್ತೇನೆ.

ಡಾ. ಎಚ್.ಜಿ.ಲಕ್ಕಪ್ಪಗೌಡ
ಕುಲಪತಿಯವರು