ಕಳೆದ ಹತ್ತು ವರ್ಷಗಳಲ್ಲಿ ಜಾನಪದ-ಬುಡಕಟ್ಟುಗಳ ಬಗ್ಗೆ ಅಲ್ಲಲ್ಲಿ ಲೇಖನಗಳನ್ನು ಬರೆದಿದ್ದರೂ, ಅದೇ ವಸ್ತುವಿಷಯವನ್ನು ಇಟ್ಟುಕೊಂಡು ಯೋಜನೆಯೊಂದನ್ನು ಮಾಡಬಹುದು ಎಂಬ ಧೈರ್ಯ ನನಗೆ ಬಂದದ್ದೇ ಕನ್ನಡ ವಿಶ್ವವಿದ್ಯಾಲಯದಲ್ಲಿ ಅದಕ್ಕೆ ಬಹಳ ಮುಖ್ಯವಾದ ಕಾರಣ ಬುಡಕಟ್ಟು ವಿಭಾಗದ ಪ್ರಾಧ್ಯಾಪಕರಾದ ಡಾ. ಹಿ.ಚಿ. ಬೋರಲಿಂಗಯ್ಯನವರು. ಜನಪದ ಕಾವ್ಯಗಳ ಬಹುಬಗೆಯ ವಿನ್ಯಾಸಗಳನ್ನು ಪರಿಚಯ ಮಾಡಿಕೊಟ್ಟ ಡಾ. ಹಿ.ಚಿ. ಬೋರಲಿಂಗಯ್ಯನವರಿಗೆ ನಾನು ಕೃತಜ್ಞನಾಗಿದ್ದೇನೆ.

ಪ್ರಸ್ತುತ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿದ ಕುಲಪತಿಗಳಾಗಿದ್ದ ಡಾ. ಎಂ.ಎಂ. ಕಲಬುರ್ಗಿಯವರಿಗೆ, ಈ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲಿ ನನಗೆ ಸಹಾಯ ಮಾಡಿದ ಮಾನ್ಯ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರಿಗೆ ನಾನು ಆಭಾರಿಯಾಗಿದ್ದೇನೆ. ಜನಪದ ಕಾವ್ಯಗಳ ಮೇಲಿನ ನನ್ನ ಸಂಶೋಧನಾ ಪ್ರಬಂಧಗಳನ್ನು ಓದಿ, ವಿಮರ್ಶಿಸಿ ನನ್ನ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದ ನಮ್ಮ ಆರಂಭಿಕ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪ್ರೊ. ಕಾಳೇಗೌಡ ನಾಗವಾರ ಅವರಿಗೆ ನಾನು ಋಣಿಯಾಗಿದ್ದೇನೆ.

ಸಂಶೋಧನಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮೌಖಿಕ ಜನಪದ ಕಾವ್ಯಗಳು ಮತ್ತು ಕೊಡಗಿನ ‘ಪಟ್ಟೋಲೆ ಪಳಮೆ’ಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಲು ನನ್ನನ್ನು ಪ್ರೋತ್ಸಾಹಿಸಿದ ಪ್ರೊ. ಬಿ.ಎ. ವಿವೇಕ ರೈ ಹಾಗೂ ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಅವರಿಗೆ ನನ್ನ ಕೃತಜ್ಞತೆಗಳು.

ಕನ್ನಡ ವಿಶ್ವವಿದ್ಯಾಲಯದ ಆರಂಭದ ದಿನಗಳ ‘ದಿನಮಾತಿ’ನಲ್ಲಿ ಜಾನಪದ ಲೋಕಕ್ಕೆ ಸಂಬಂಧಿಸಿದಂತೆ ನಡೆದ ಮಹತ್ವಪೂರ್ಣ ಚರ್ಚೆಗಳು ನನ್ನ ಮೇಲೆ ಬಹಳ ಪ್ರಭಾವಗಳನ್ನು ಬೀರಿವೆ. ಇಂತಹ ಚರ್ಚೆಗಳನ್ನು ಮಾಡುವ ಮೂಲಕ ನನ್ನ ಚಿಂತನೆಗೆ ಗ್ರಾಸ ನೀಡಿದ ಡಾ. ಕೆ.ವಿ. ನಾರಾಯಣ, ಡಾ. ಟಿ.ಎಸ್. ಸತ್ಯನಾಥ್, ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ಪ್ರೊ. ಎ.ವಿ. ನಾವಡ ಮೊದಲಾದ ವಿದ್ವಾಂಸರಿಗೆ ನನ್ನ ಕೃತಜ್ಞತೆಗಳು.

ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಬಳಿಯಿದ್ದ ಅಮೂಲ್ಯ ಪುಸ್ತಕಗಳನ್ನು ನನಗೆ ನೀಡಿ, ನನ್ನ ಓದಿನ ಮಿತಿಯನ್ನು ವಿಸ್ತರಿಸಲು ಸಹಾಯ ಮಾಡಿದ ಡಾ. ವೆಂಕಟೇಶ್ ಇಂದ್ವಾಡಿ, ಪ್ರೊ. ಎ.ವಿ.ನಾವಡ, ಪ್ರೊ. ಹಿ.ಚಿ. ಬೋರಲಿಂಗಯ್ಯ, ಎ.ಎಸ್. ಪ್ರಭಾಕರ್, ಡಾ.ಎ.ಸುಬ್ಬಣ್ಣರೈ. ಡಾ. ಮೋಹನ್ ಕುಂಟಾರ್ ಮತ್ತು ಡಾ.ಕೆ. ಕೇಶವನ್ ಪ್ರಸಾದ್ ಅವರಿಗೆ ನನ್ನ ಕೃತಜ್ಞತೆಗಳು.

ನನ್ನ ಯೋಜನೆಗೆ ಸಂಬಂಧಿಸಿದಂತೆ ಸಂವಾದಗಳನ್ನು ಮಾಡುವ ಮೂಲಕ ನನ್ನನ್ನು ಈ ಯೋಜನೆಗೆ ತೊಡಗಲು ಪ್ರೇರೇಪಿಸಿದ ಸಹೋದ್ಯೋಗಿ ಮಿತ್ರರು ಹಲವರು. ಶ್ರೀ ಎ.ಎಸ್.ಪ್ರಭಾಕರ, ಡಾ.ವಿ.ಬಿ.ತಾರಕೇಶ್ವರ, ಡಾ. ಎಂ. ಚಂದ್ರಪೂಜಾರಿ. ಡಾ. ಮೊಗಳ್ಳಿ ಗಣೇಶ್, ಕೆ. ಮೋಹನ್‌ಕೃಷ್ಣ ರೈ, ಡಾ. ಕೆ.ಎಂ. ಮೈತ್ರಿ, ಡಾ. ಶೈಲಜಾ ಹಿರೇಮಠ, ಡಾ. ಹೆಬ್ಬಾಲೆ ನಾಗೇಶ್, ಡಾ. ಮಾಧವ ಪೆರಾಜೆ, ಡಾ. ಮಂಜುನಾಥ ಬೇವಿನಕಟ್ಟಿ, ಡಾ. ಸ.ಚಿ. ರಮೇಶ್, ಡಾ. ಪಿ. ಮಹದೇವಯ್ಯ ಮತ್ತು ಡಾ. ಸಿ.ಟಿ. ಗುರುಪ್ರಸಾದ್ ಅವರಿಗೆ ಈ ನಿಟ್ಟಿನಲ್ಲಿ ನಾನು ಅಭಾರಿಯಾಗಿದ್ದೇನೆ.

ದಶಕಗಳ ಮೆಗಾ ಪ್ರಾಜೆಕ್ಟ್ ಒಂದು ಒಳಗೊಳ್ಳಬಹುದಾದ ಅಧ್ಯಾಯಗಳನ್ನು ಒಂದು ವರ್ಷದ ಯೋಜನೆಗಾಗಿ ನಾನು ತೆಗೆದುಕೊಳ್ಳಬೇಕಾಯಿತು. ವಿಶ್ವವಿದ್ಯಾಲಯದ ನಿಯಮಗಳಿಗಾನುಸಾರವಾಗಿ ಒಂದೆರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆಯನ್ನು ಇಲ್ಲಿ ಮೀರಲು ಪ್ರಯತ್ನಿಸಿದ್ದೇನೆ. ಚರಿತ್ರೆಯ ಸಂಶೋಧಕನಾದ ನನಗೆ ಮೌಖಿಕ ಚರಿತ್ರೆಯಲ್ಲಿ ಕುತೂಹಲ ಮೂಡಿಸಲು ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಹಾಗೂ ಜಾನಪದ ವಿಭಾಗಗಳ ಅತ್ಯಮೂಲ್ಯವಾದ ಸಂಗ್ರಹಗಳು, ಆಕರಗಳು ಮತ್ತು ಸಂಪಾದಿತ ಕೃತಿಗಳು ಕಾರಣವಾಗಿವೆ. ಈ ಹಿನ್ನಲೆಯಲ್ಲಿ ಇವೆರಡು ವಿಭಾಗಗಳಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

ಮೌಖಿಕ ಚರಿತ್ರೆಗೆ ಸಂಬಂಧಿಸಿದಂತಿರುವ ಸಂಶೋಧನೆಗಳು ಕಡೆಗೆ ನನ್ನ ಗಮನವನ್ನು ಸೆಳೆದವರು ಪ್ರೊ. ಲಕ್ಷ್ಮಣ್ ತೆಲಗಾವಿಯವರು. ಅವರಿಗೂ ಹಾಗೂ ವಿಭಾಗದಲ್ಲಿ ನನ್ನ ಈ ಯೋಜನೆಗೆ ಸಂಬಂಧಿಸಿದಂತೆ ನನ್ನೊಡನೆ ವಿಚಾರಗಳನ್ನು ಹಂಚಿಕೊಂಡ ಡಾ. ಸಿ.ಆರ್. ಗೋವಿಂದರಾಜು, ಕೆ. ಮೋಹನಕೃಷ್ಣ ರೈ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹಾಗೂ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಇವರಿಗೆ ನಾನು ಅಭಾರಿಯಾಗಿದ್ದೇನೆ.

ನನ್ನ ಹಸ್ತಪ್ರತಿಯನ್ನು ಕೂಲಂಕಷವಾಗಿ ಓದಿ, ತಮ್ಮ ಅಭಿಪ್ರಾಯಗಳನ್ನು ನನ್ನೊಡನೆ ಹಂಚಿಕೊಂಡ ವಿದ್ವಾಂಸರಾದ ಡಾ. ರಾಜಾರಾಮ ಹೆಗಡೆ ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಕರಡುಪ್ರತಿಯನ್ನು ಗಮನಿಸಿದ ಓ. ದೇವರಾಜ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ ಕೆ.ಕೆ. ಮಕಾಳಿ ಅವರಿಗೆ, ಪುಸ್ತಕ ವಿನ್ಯಾಸವನ್ನು ಮಾಡಿದ ಸುಜ್ಞಾನಮೂರ್ತಿ ಅವರಿಗೆ, ಅಕ್ಷರ ಸಂಯೋಜನೆ ಮಾಡಿದ ರಚನಾ ಗ್ರಾಫಿಕ್ಸ್ ಮತ್ತು ಪುಟ ವಿನ್ಯಾಸ ಮಾಡಿದ ವೈ.ಎಂ. ಶರಣಬಸವ ಅವರಿಗೆ ನನ್ನ ಕೃತಜ್ಞತೆಗಳು.

ವಿಜಯ್ ಪೂಣಚ್ಚ ತಂಬಂಡ
೦೧.೧೦.೨೦೦೩