ಮೈಲಾರ ಲಿಂಗ

ದಕ್ಷಿಣ ಕರ್ನಾಟಕದ ವೃತ್ತಿಗಾಯಕ ಸಂಪ್ರದಾಯಗಳಲ್ಲಿ ‘ಗೊರವ’ ಸಂಪ್ರದಾಯ ಕೂಡ ಒಂದು. ಇವರೆಲ್ಲರೂ ಮೈಲಾರಲಿಂಗನ ಸಂಪ್ರದಾಯಕ್ಕೆ ಸೇರಿದವರು. ಇವರು ಧಾರ್ಮಿಕ ವೃತ್ತಿಗಾಯಕರೆಂದು ಗುರುತಿಸಲ್ಪಟ್ಟವರು. ಸಮಗ್ರ ರಾತ್ರಿ ನಡೆಯುತ್ತಿದ್ದ ಇವರ ಗೋಷ್ಠಿಯನ್ನು ‘ಗೊರವರ ಮೇಳ’ ಎಂದು ಕರೆಯಲಾಗುತ್ತಿತ್ತು. ಮೂವರು ಗೊರವರಿಂದ ಆರಂಭವಾಗುವ ಈ ಮೇಳದ ಮಧ್ಯೆ ಕುಳಿತ ಮುಖ್ಯ ಕಥೆಗಾರ ಢಮರುಗ ಆಡಿಸುತ್ತ ಕಥೆಯನ್ನು ನಿರೂಪಿಸಿಕೊಂಡು ಹೋದರೆ, ಮಿಕ್ಕವರೂ ಹಾಗೆಯೇ ನುಡಿಸುತ್ತಾ ಹಿಮ್ಮೇಳ ಹಾಡುತ್ತಾರೆ. ಮೈಲಾರ ಸಂಪ್ರದಾಯಕ್ಕೆ ಸೇರಿದ ಭಕ್ತರ ಮನೆಗಳಲ್ಲಿ ಇವರ ಮೇಳಗಳು ನಡೆಯುತ್ತವೆ. ದಕ್ಷಿಣ ಕರ್ನಾಟಕದ ಗೊರವರಿಗೂ ಹಾಗೂ ಉತ್ತರ ಕರ್ನಾಟಕದ ಗೊರವರಿಗೂ ವೇಷಭೂಷಣದಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಉತ್ತರ ಕರ್ನಾಟಕದ ಗೊರವರಲ್ಲಿ ಕಂಬಳಿಯ ನಿಲುವಂಗಿ, ಕೊರಳಿನಲ್ಲಿ ಹುಲಿಚರ್ಮದ ಭಂಡಾರದ ಚೀಲ, ಕವಡೆಸರ, ಹೆಗಲಲ್ಲಿ ಭಿಕ್ಷಾ ಪಾತ್ರೆ, ದೋಣಿ, ಕೈಯಲ್ಲಿ ಢಮರುಗ, ತ್ರಿಶೂಲ ಇವು ಮುಖ್ಯವಾಗಿ ಕಾಣುತ್ತವೆ. ತಲೆಗೆ ಬಿಳಿಯ ರುಮಾಲನ್ನು ಸುತ್ತುವುದು ಈ ಭಾಗದ ಗೊರವರಲ್ಲಿ ವಿಶೇಷ. ದಕ್ಷಿಣ ಕರ್ನಾಟಕದ ಗೊರವರು ತಲೆಯ ಮೇಲೆ ಕರಡಿಯ ಕೂದಲ ಕುಲಾವಿಗಳನ್ನು ತೊಡುತ್ತಾರೆ. ಇವರು ಉತ್ತರ ಕರ್ನಾಟಕದವರಂತೆ ವೇಷ ಭೂಷಣಗಳನ್ನು ಹಾಕುವುದರ ಜೊತೆಗೆ ‘ಒಕ್ಕಟಗಂಟ’, ‘ಹುಲಿಚರ್ಮ’, ‘ರಟ್ಟೆಬಳೆ’, ‘ಕಾಲಗೆಜ್ಜೆ’, ‘ಕೊರಳಕವಡೆ’, ‘ಎಲೆಸಂಚಿ’, ‘ಕವಡೆಪಟ್ಟಿ’,’ಭಂಡಾರ ಚೀಲ’, ;ಪಿಳ್ಳಂಗೋವಿ’, ಮುಂತಾದವುಗಳನ್ನು ಬಳಸುತ್ತಾರೆ. ಇದರ ಜೊತೆಗೆ ಹಣೆ ಮತ್ತು ಕಣ್ಣುಗಳು ತುಂಬುವಂತೆ ವಿಭೂತಿ ಪಟ್ಟಿಗಳನ್ನು ಬಳಿದು ನಡುವೆ ಕುಂಕುಮವನ್ನು ಲೇಪಿಸುವರು. ಹಾಗೆಯೇ ಕುತ್ತಿಗೆಯನ್ನು ವಿಭೂತಿಯು ಆವರಿಸುತ್ತದೆ (ಜೀ.ಶಂ.ಪ. ೧೯೭೯, ೨೪೭-೨೪೮).

ಮೈಲಾರಲಿಂಗನ ಕ್ಷೇತ್ರಗಳು ದಕ್ಷಿಣಭಾರತದಲ್ಲಿ ಬೇಕಾದಷ್ಟು ಕಡೆ ಇದ್ದರೂ, ಕರ್ನಾಟಕದಲ್ಲಿ ಪ್ರಮುಖವಾಗಿ ವ್ಯಾಪಿಸಿವೆ. ರಾಯಚೂರು ಜಿಲ್ಲೆಯ ಆನೆಗೊಂದಿ, ಬೆಳಗಾವಿ ಜಿಲ್ಲೆಯ ಕಾರಿಮನಿ, ಶಿವಮೊಗ್ಗ ಜಿಲ್ಲೆಯ ಕುಬಟೂರು, ಧಾರವಾಡ ಜಿಲ್ಲೆಯ ದೇವರಗುಡ್ಡ, ಧಾರವಾಡ ಜಿಲ್ಲೆಯ ದೇವೀ ಹೊಸೂರು ಹಾಗೂ ಮೇಲಾರ ದೇವರಗುಡ್ಡ, ಬೀದರ ಜಿಲ್ಲೆಯ ಮೈಲಾರಪುರ, ಬಳ್ಳಾರಿಜಿಲ್ಲೆಯ ಮಣ್ಣಿ ಮೈಲಾರ, ಬೆಳಗಾಂ ಜಿಲ್ಲೆಯ ಮಂಗಸೂಳಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮೈಲಾರಪಟ್ಟಣ, ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಎಳ್ಳಾಗರ ಮತ್ತು ಮೈಸೂರು ಜಿಲ್ಲೆಯ ಮುಡುಕುತೊರೆ ಕ್ಷೇತ್ರಗಳಲ್ಲಿ ಮೈಲಾರಲಿಂಗನ ನೆಲೆಗಳಿವೆ. ಜೀ.ಶಂ.ಪ. ಅವರ ಪ್ರಕಾರ ದೇವರಗುಡ್ಡ ಕ್ಷೇತ್ರವೇ ಈ ನೆಲೆಗಳಲೆಲ್ಲಾ ಮುಖ್ಯವಾದವು. ಆದ್ದರಿಂದ ಇದನ್ನು “ಹಿರಿಯ ಮೈಲಾರ” ಎಂದು ಕರೆಯಲಾಗುತ್ತದೆ.

ಮೈಲಾರಲಿಂಗನಿಗೆ ಸಂಬಂಧಿಸಿದ ಸಂಸ್ಕೃತ ಕಾವ್ಯವೊಂದರ ಸ್ಥಳಪುರಾಣ ಹಾಗೂ ಗೊರವರ ಸಂಪ್ರದಾಯವು ಜಾನಪದ ಗದ್ಯದಲ್ಲಿ ನಿರೂಪಿಸಿದ ವಿವರಗಳನ್ನು ಜೀ.ಶಂ.ಪ. ಅವರು ಚರ್ಚಿಸಿದ್ದಾರೆ. ಸ್ಥಳಪುರಾಣದ ಪ್ರಕಾರ ಮಣಿಜೂಲ ಪರ್ವತದ ತಮ್ಮ ಆಶ್ರಮದಲ್ಲಿ ಏಳುಜನ ಋಷಿಗಳು ತಪ್ಪಸ್ಸನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ಮನನೊಂದ ರಾಕ್ಷಸ ತನ್ನ ಪರಿವಾರದೊಂದಿಗೆ ಬಂದು ಆಶ್ರಮವನ್ನೆಲ್ಲ ಹಾಳುಮಾಡಿದ. ಪರಿಣಾಮವಾಗಿ ಋಷಿಗಳು ದುಃಖದಿಂದ ದೇವೇಂದ್ರನಿಗೆ ದೂರು ಕೊಟ್ಟರು. ಬ್ರಹ್ಮನ ವರವನ್ನು ಪಡೆದ ಅವನನ್ನು ಮತ್ತು ಅವನ ತಮ್ಮ ಮಣಿಯನ್ನು ತಾನು ಕೊಲ್ಲಲು ಸಾಧ್ಯವಿಲ್ಲ ಎಂದು ನುಡಿದು, ವಿಷ್ಣುವಿನ ಬಳಿಗೆ ಕಳಿಸಿದನು. ವಿಷ್ಣುವೂ ತನ್ನ ಅಸಹಾಯಕತೆಯನ್ನು ತೋಡಿಕೊಂಡ ಮೆಲೆ ಋಷಿಗಳು ಶಿವನಲ್ಲಿ ಮೊರೆಯಿಟ್ಟರು. ಶಿವನು ಮಾರ್ತಾಂಡಭೈರವ ರೂಪ ತಾಳಿ ಮಣಿಯನ್ನು, ರಾಕ್ಷಸಪರಿವಾರವನ್ನು ಕೊಂದನು. ಕೊನೆಗೆ ಶಿವನ ಕಾಲಿಗೆ ಬಿದ್ದ ಮಲ್ಲನು ಭೈರವನ ಹೆಸರಿನಲ್ಲಿ ತನ್ನ ಹೆಸರೂ ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ಬೇಡಿಕೊಂಡನು. ಆದುದರಿಂದ ಭೈರವ ಮಲ್ಲನ ಅರಿ ‘ಮಲ್ಲಾರಿ’ ಯಾದ. ಅಸುರರ ಪ್ರಾರ್ಥನೆಯಂತೆ ಮಾರ್ತಾಂಡ ಭೈರವನಾಗಿ ಅವತಾರ ಎತ್ತಿದ ಸ್ಥಳದಲ್ಲಿ ಸ್ವಯಂಭು ಲಿಂಗರೂಪಿನಲ್ಲಿ ನೆಲೆಸಿ ಭಕ್ತರಿಗೆ ವರಗಳನ್ನು ಕೊಟ್ಟನು. ಆದರೆ, ಸ್ಥಳಪುರಾಣದ ಮೇಲಿನ ಕಥೆಗಳು ‘ಗೊರವ’ ಸಂಪ್ರದಾಯದ ಜೊತೆಗೆ ಹೊಂದಿಕೊಳ್ಳುವುದಿಲ್ಲ. ಬದಲಿಗೆ, ಗೊರವರ ಸಂಪ್ರದಾಯದ ಜನಪರದ ಗದ್ಯದಲ್ಲಿ ಅಡಕವಾದ ಕಥೆಗಳನ್ನು ಸಂಗ್ರಹಿಸಿದ ಜೀ.ಶಂ.ಪ. ಅವರು ಅದನ್ನು ಭಿನ್ನ ಬಗೆಯಲ್ಲಿ ನಿರೂಪಿಸಿದ್ದಾರೆ. ಇದರ ಪ್ರಕಾರ ಮಣಿಶೂಲ ಪರ್ವತದಲ್ಲಿ ಬ್ರಹ್ಮನ ವರ ಪಡೆದ ಮಣಿಮಲ್ಲಾಪುರ ಎಂಬ ರಾಕ್ಷಸ ಅಲ್ಲಿರುವ ಯತಿಗಳ ಯಾಗಭಂಗ ಹಾಗೂ ಸ್ತ್ರೀಯರ ಮಾನಭಂಗ ಮಾಡುವುದಲ್ಲದೆ, ಗೋವುಗಳನ್ನು ಮತ್ತು ಶಿಶುಗಳನ್ನು ಕೊಲ್ಲಲು ಆರಂಭಿಸಿದನು. ಇವನ ಹಿಂಸೆ ತಡೆಯಲಾರದೆ ದೇವತೆಗಳು ಪರಮೇಶ್ವರನಿಗೆ ಮೊರೆಯಿಟ್ಟರು. ಇಂಥ ಸುದ್ಧಿಯನ್ನು ಕೇಳಿ ಅಗ್ನಿಯು ಕೋಪದಿಂದ ತನ್ನ ಜಡೆಯನ್ನು ನೆಲಕ್ಕೆ ಒರಸಿದಾಗ “ಗುರುತುಮಾರಿ” ಎಂಬ ಶಕ್ತಿದೇವತೆ ಉದ್ಭವವಾದಳು. ಇವಳಿಗೆ “ಗಂಗಮಾಳಮ್ಮ” ಎನ್ನುವ ಹೆಸರು ಕೂಡ ಇದೆ. ಶಿವನ ಸಮಸ್ತ ಪರಿವಾರವು ಸಾವಿರಾರು ವರ್ಷ ಈ ರಾಕ್ಷಸರನ್ನು ಕೊನೆಗಾಣಿಸಲು ಸಾಧ್ಯವಾಗದಿದ್ದಾಗ, ಶಿವನು ಗೊರವಯ್ಯನ ಅವತಾರ ತಾಳಿ “ಕರಡಿಚರ್ಮ ತಲೆಗೆ ಹಾಕಿ” ಢಮರುಗ ತೆಗೆದುಕೊಂಡು ಮಣಿಮಲ್ಲಾಸುರನನ್ನು ಕೊಂದುಬಿಡುವನು. ಏನೂ ಮಾಡಿದರೂ ಸಾಯದ ರಾಕ್ಷಸನನ್ನು ಕೊಲ್ಲಲು ಅಂತಿಮವಾಗಿ ಶಿವನು ಗೊರವನ ರೂಪದಲ್ಲಿ ಕಾಣಿಸಿಕೊಂಡ ಎಂದು ಹೇಳುವ ಮೂಲಕ ‘ಗೊರವ’ ಹಾಗೂ ‘ಮೈಲಾರಲಿಂಗನ’ ಸಂಬಂಧವನ್ನು ಜೀ.ಶಂ.ಪ. ಖಚಿತಪಡಿಸಲು ಪ್ರಯತ್ನಿಸಿದ್ದಾರೆ. (ಜೀ.ಶಂ.ಪ. ೧೯೭೯, ೨೪೫-೨೫೨).

ಕುರುಬರು ಮೂಲತಃ ವಲಸೆಗಾರರಾದರೂ ಕಾಲಾನುಕ್ರಮದಲ್ಲಿ ಒಂದು ಕಡೆ ನೆಲೆ ನಿಂತವರು. ಆ ಪ್ರಕ್ರಿಯೆ ಬಗ್ಗೆ ಕೆಲವು ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಮೈಲಾರನ “ಮದುವೆಗಳ” ಬಗ್ಗೆ ಅಧ್ಯಯನವನ್ನು ನಡೆಸಿದ ಪುರುಷೋತ್ತಮ ಬಿಳಿಮಲೆ ಅವರ ಪ್ರಕಾರ ಮೈಲಾರನು ತಾನು ಮದುವೆಯಾದ ಹೆಣ್ಣುಗಳಿಗೆ ಕಟ್ಟಿಸಿದ ಶಿಲ್ಪಗಳು, ಗುಡಿಗಳು ಮತ್ತು ಮೈಲಾರ ಪರಂಪರೆಯ ಚರಿತ್ರೆಯು ವಿಭಿನ್ನ ಘಟ್ಟಗಳಲ್ಲಿ ಬೇರೆ ಬೇರೆ ಸಮುದಾಯಗಳೊಂದಿಗೆ ನಡೆಸಿದ ಸಂಘರ್ಷ ಮತ್ತು ಮಾಡಿಕೊಂಡ ಹೊಂದಾಣಿಕೆಯನ್ನು ಸಂಕೇತಿಸುತ್ತದೆ. ಮೊದಲ ಹಂತದ ಸಂಘರ್ಷವು “ವಲಸೆಗಾರ” ಕುರುಬರು ಮತ್ತು “ಮೂಲನಿವಾಸಿಗಳ” ನಡುವೆ ನೆಲ ಮೇಲಿನ ಒಡೆತನಕ್ಕಾಗಿ ನಡೆದಿದೆ. ಎರಡನೇ ಹಂತದಲ್ಲಿ ನೆಲೆನಿಂತ ಕುರುಬರು ಕೃಷಿ ವಿಸ್ತರಣೆ ಮತ್ತು ಕಾಡಿನ ಮೇಲಿನ ಅಧಿಪತ್ಯಕ್ಕಾಗಿ ತಮ್ಮದೇ ಆದ ಸಮುದಾಯಗಳೊಂದಿಗೆಸಂಘರ್ಷಿಸಬೇಕಾಯಿತು. ಕೊನೆಯ ಹಂತದಲ್ಲಿ ಅದು ಶ್ರೀಮಂತ ವರ್ತಕರೊಡನೆ ಮುಖಾಮುಖಿ ಆಗಬೇಕಾಯಿತು ಎನ್ನುವ ಬಿಳಿಮಲೆ ಅವರು ಇಂಥ ಸಂಘರ್ಷಗಳು ಮದುವೆಯಲ್ಲಿ ಮುಕ್ತಾಯವಾಗಿದ್ದರ ಬಗ್ಗೆ ಗಮನ ಸೆಳೆಯುತ್ತಾರೆ. ವಾಸ್ತವವಾಗಿ ಈ ಬಗೆಯ ಸಂಪ್ರದಾಯಗಳ “ಪುನರ್ ಕೂಡುಕಟ್ಟು” ಹೊಂದಾಣಿಕೆಯೇ ಆಗಿದೆ ಎಂದು ವಿಶ್ಲೇಷಿಸಿದ್ದಾರೆ (ಬಿಳಿಮಲೆ ೧೯೯೭, ೩೧). ಮೈಲಾರಲಿಂಗನು “ಸಾಂಸ್ಕೃತಿಕ ವೀರನಾಗಿ” ರೂಪುಗೊಂಡಿದ್ದೇ ಆ ನಂತರದಲ್ಲಿ ಎನ್ನುತ್ತಾರೆ ಮಂಜುನಾಥ ಬೇವಿನಕಟ್ಟಿ ಅವರು. ಇವರು “ಮೈಲಾರಲಿಂಗ ನಂತರದಲ್ಲಿ ಸ್ಥಾಪಿತ ಧರ್ಮಗಳಾದ ಬ್ರಾಹ್ಮಣ, ವೀರಶೈವಗಳಂತಹ ಬಹುಸಂಖ್ಯಾತ ಜನಾಂಗದ ದಬ್ಬಾಳಿಕೆ ಪ್ರವೃತ್ತಿಯನ್ನು ಎದುರಿಸಿದ್ದಾನೆ. ದಬ್ಬಾಳಿಕೆ ಪ್ರವೃತ್ತಿಯನ್ನು ಎದುರಿಸುವ ಮೂಲಕ ಉತ್ತರ ಮತ್ತು ಮಧ್ಯ ಕರ್ನಾಟಕದ ಇಡೀ ಕೆಳವರ್ಗದ ಶೂದ್ರ ಸಮುದಾಯವನ್ನು ಒಂದುಗೂಡಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ” ಎಂದು ತಮ್ಮ ಮೈಲಾರಲಿಂಗ ಕಾವ್ಯದ ಪ್ರಸ್ತಾವನೆಯಲ್ಲಿ ಬರೆದಿದ್ದಾರೆ. (ಬೇವಿನಕಟ್ಟಿ ೧೯೯೯, ೯). ತುಳಿತಕ್ಕೊಳಗಾದವರ ಆಶಯಗಳನ್ನು ಮೈಲಾರಲಿಂಗನು ಪ್ರತಿನಿಧಿಸುತ್ತಿದ್ದನು ಹಾಗೂ ಪ್ರಾಬಲ್ಯದಲ್ಲಿದ್ದ ಜಾತಿಗಳ ದೌರ್ಜನ್ಯಗಳನ್ನು ಪ್ರತಿಭಟಿಸುತ್ತಿದ್ದನು ಎನ್ನುವ ರೀತಿಯ ಬೇವಿನಕಟ್ಟಿಯವರ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಆದರೆ “ಶೂದ್ರ ಸಮುದಾಯವನ್ನು ಒಂದುಗೂಡಿಸಿದ” ಎನ್ನುವ ವಿವರಗಳಿಗೆ ಸಂಬಂಧಿಸಿದ ಮಾಹಿತಿಗಳಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಘಟನೆಗಳಾಗಲಿ ನಮಗೆ ಸಿಗುವುದಿಲ್ಲ. ಆದರೆ, ಇಂದಿನ ರಾಜಕೀಯ-ಸಾಮಾಜಿಕ ನೆಲೆಗಟ್ಟಿನಲ್ಲಿ ಮೈಲಾರಲಿಂಗನನ್ನು “ಶೂದ್ರ ಸಮುದಾಯವನ್ನು ಒಂದುಗೂಡಿಸಲು” ಒಂದು ಪ್ರತೀಕವಾಗಿ ಬಳಸಿಕೊಳ್ಳಬಹುದು. ಈಗಾಗಲೇ ಈ ಬಗೆಯ ರಾಜಕೀಯ – ಸಾಮಾಜಿಕ ಆಂದೋಲನಗಳು ಈ ನಿಟ್ಟಿನಲ್ಲಿ ಕಾಲಿಟ್ಟಿರುವುದನ್ನು ನಾವು ಗಮನಿಸಬಹುದು.

ಇತ್ತೀಚಿನ ಕೆಲವು ಸಂಶೊಧನೆಗಳು, ಮೈಲಾರಲಿಂಗನು ಕೇವರ ‘ಗೊರವರಿಗೆ’ ಮಾತ್ರ ಮೀಸಲಾಗಿಲ್ಲ ಅಥವಾ ಯಾವ ಒಂದು ಜಾತಿ / ಬುಡಕಟ್ಟಿಗೆ ಸೀಮಿತವಾಗಿಲ್ಲ ಎನ್ನುವ ಅಂಶಗಳನ್ನು ಚರ್ಚಿಸಿವೆ. ಬ್ರಾಹ್ಮಣರಾದಿಯಾಗಿ ಅಂತ್ಯಜ ಕಡೆಯಾಗಿ ಎಲ್ಲರೂ ಮೈಲಾರನ ಒಕ್ಕಲುಗಳೆಂದು ನಡೆದುಕೊಳ್ಳುತ್ತಾರೆ ಎನ್ನುವ ನೇಗಿನಹಾಳ ಅವರ ಪ್ರಕಾರ ಈ ಸಂಪ್ರದಾಯದಲ್ಲಿ ಕುರುಬ, ಗೌಳಿ – ಗೊಲ್ಲ, ಬೇಡ ಮತ್ತು ಬೆಸ್ತ ಸಮುದಾಯಗಳು ತಮ್ಮನ್ನು ಗುರುತಿಸಿಕೊಂಡಿವೆ. ಊರೂರಿನಲ್ಲಿ ನಡೆಯುವ ಮೈಲಾರನ ಪ್ರತಿಜಾತ್ರೆಯಲ್ಲೂ ಲಕ್ಷಾಂತರ ಜನರು ಸೇರುತ್ತಾರೆ. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಮೈಲಾರದಲ್ಲಿ ಪ್ರತಿವರ್ಷ ಭರತ ಹುಣ್ಣಿಮೆಯಂದು ನಡೆಯುವ “ಕಾರಣಿಕೋತ್ಸವದಲ್ಲಿ” ಏನಿಲ್ಲವೆಂದರೂ ಕನಿಷ್ಠ ನಾಲ್ಕು ಲಕ್ಷ ಜನ ಸೇರುತ್ತಾರೆಂದು ಪುರುಷೋತ್ತಮ ಬಿಳಿಮಲೆಯವರು ಬರೆದಿರುವುದನ್ನು ನೋಡಿದರೆ, ಮೈಲಾರನು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಹಳ ಮುಖ್ಯನು ಎಂಬುದು ಅರ್ಥವಾಗುತ್ತದೆ (ನೇಗಿನಹಾಳ ೧೯೯೫; ಬಿಳಿಮಲೆ ೧೯೯೭

***

ಕುಮಾರರಾಮ

ಕ್ರಿ.ಶ. ಸುಮಾರು ೧೩೩೭ರಲ್ಲಿ ಬದುಕಿದ್ದ ಎನ್ನಲಾದ ಕುಮಾರರಾಮನು ನಂತರದ ಏಳುನೂರು ವರ್ಷಗಳಲ್ಲಿ ಬಗೆಬಗೆಯಾಗಿ ಪುನರ್ ಸೃಷ್ಠಿಗೊಳ್ಳುತ್ತಾನೆ. ಇವನ ಬಗ್ಗೆ ಬಗೆಬಗೆಯಾದ ಕಥೆಗಳು, ಕಾವ್ಯಗಳು, ಪಠ್ಯಗಳು ಹುಟ್ಟುಕೊಳ್ಳುತ್ತಲೇ ಬಂದಿರುವುದು ಕುತೂಹಲಕಾರಿಯಾದ ವಿಚಾರ. ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟಿರುವಂತೆ

ರಾಜಕೀಯವಾಗಿ ಕುಮಾರರಾಮನು ಕರ್ನಾಟಕದ ಮಹತ್ವದ ಅರಸನೇನೂ ಅಲ್ಲ. ಅವನಿಗಿಂತ ಶ್ರೇಷ್ಠರಾದ ಅನೇಕ ಅರಸರು ಕರ್ನಾಟಕದಲ್ಲಿ ಆಗಿ ಹೋಗಿರುವುದನ್ನು ನಮ್ಮ ಚರಿತ್ರೆಕಾರರು ಈಗಾಗಲೇ ಗುರುತಿಸಿದ್ದಾರೆ. ಹೀಗಿದ್ದರೂ ಕರ್ನಾಟಕದ ಜನಸಾಮಾನ್ಯರ ನಡುವೆ ಇಂದಿಗೂ ಜನಪ್ರಿಯನಾಗಿರುವವನೆಂದರೆ ಕುಮಾರರಾಮನೇ ಆಗಿದ್ದಾನೆ. ಆತ ರಾಜ್ಯ ವಿಸ್ತರಣೆ ಮಾಡಿಲ್ಲ. ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬಲ್ಲಂಥ ಬೃಹತ್ ದೇವಾಲಯಗಳನ್ನು ಕಟ್ಟಿಲ್ಲ. ಧಾರ್ಮಿಕ ಆಂದೋಲನವನ್ನು ಹುಟ್ಟು ಹಾಕಿಲ್ಲ. ಇಂಥ ಯಾವುದೇ ಮಹಾನ್ ಸಾಧನೆಗಳನ್ನು ಮಾಡದ ವ್ಯಕ್ತಿತ್ವವೊಂದು ಕರ್ನಾಟಕದ ಜನತೆಗೆ ಇಷ್ಟವಾಗಲು ಕಾರಣಗಳೇನೆಂಬುದನ್ನು ನಾವೀಗ ಶೋಧಿಸಿಕೊಳ್ಳಬೇಕಾಗಿದೆ (ಬಿಳಿಮಲೆ ೧೯೯೯)

ಎನ್ನುವುದು ಗಮನಾರ್ಹವಾಗಿದೆ. ಕುಮಾರರಾಮನಿಗೆ ಸಂಬಂಧಿಸಿದ ಅನೇಕನೇಕ ಲಿಖಿತ ಮಹಾಕಾವ್ಯಗಳು, ಗದ್ಯಗಳು, ಕಥೆಗಳು ಬಹಳಷ್ಟಿವೆ. ಕ್ರಿ.ಶ. ೧೫೧೨ರಲ್ಲಿ ನಂಜುಂಡ ಕವಿಯು ಬರೆದ “ಕುಮಾರರಾಮ ಚರಿತೆ”ಯಿಂದ ೧೯೯೦ರ ದಶಕದವರೆಗೆ ಬಂದ ಕೃತಿಗಳು ಕುಮಾರರಾಮನ ಬಗೆಬಗೆಯ ವಿನ್ಯಾಸಗಳನ್ನು ತಿಳಿಹೇಳುತ್ತವೆ. ಈ ಕಾವ್ಯಗಳಲ್ಲಿ ಅನೇಕರು ಕುಮಾರರಾಮನನ್ನು ರಾಮನೊಡನೆ, ಅರ್ಜುನನೊಡನೆ ಸಮೀಕರಿಸಿದರೆ, ಮತ್ತೂ ಕೆಲವರು ಅವನನ್ನು “ಮಾತಂಗಿ-ಕಳ್ಳರಾಮ”ನನ್ನಾಗಿ ಕೂಡ ನೋಡುತ್ತಾರೆ. ಇಪ್ಪತ್ತನೆಯ ಶತಮಾನದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕುಮಾರರಾಮನನ್ನು “ದೇಶಪ್ರೇಮಿ” ಎಂಬಂತೆ ಕೂಡ ನಿರೂಪಿಸಲಾಯಿತು. ಇವನ ಬಗೆಗೆ ವಿಪುಲವಾದ ಸಾಹಿತ್ಯ ಕೃತಿಗಳು, ಕನ್ನಡ, ತೆಲುಗು, ತುಳು ಮತ್ತು ತಮಿಳು ಭಾಷೆಗಳಲ್ಲಿವೆ. ಕಂಪ್ಲಿ ಕಮ್ಮಟದುರ್ಗ ಪರಿಸರದ ಕೃಷಿಕ ಮತ್ತು ಕೃಷಿ ಪೂರಕ ಕೆಲಸಗಳನ್ನು ಮಾಡುತ್ತಿರುವ ಜನಪದರು ದೈವದ ರೂಪದಲ್ಲಿ, ಪುರಾಣ, ಕಾವ್ಯ, ಆಚರಣೆ, ಜಾತ್ರೆ, ನಂಬಿಕೆ, ಸಂಪ್ರದಾಯ, ಹರಕೆ, ಬಲಿ, ವಿಧಿ-ನಿಷೇಧಗಳ ಮೂಲಕ ಕುಮಾರರಾಮನ ಸಂಪ್ರದಾಯವನ್ನು ರೂಪಿಸಿಕೊಂಡಿದ್ದಾರೆ (ಸಾವಿತ್ರಿ ೨೦೦೨,೧).

ಕುಮಾರರಾಮನ ಮಹಾಕಾವ್ಯದ ಕಥಾನಾಯಕ ಐತಿಹಾಸಿಕ ಕುಮಾರರಾಮನೇ ಆಗಿರುವನು ಎನ್ನುವ ಕೆ.ಎಂ. ಮೈತ್ರಿಯವರು, ಅವನ ಬಗ್ಗೆ ತಾವು ಸಂಗ್ರಹಿಸಿದ ಕಾವ್ಯಗಳ ಮೂಲಕ ಮಾಹಿತಿಗಳನ್ನು ನೀಡಿದ್ದಾರೆ. ಅವನು ಜಟಿಂಗೇಶ್ವರ ಬಾಳೆಹಣ್ಣಿನ ಪ್ರಸಾದದಿಂದ ಕಂಪಿಲರಾಜನ ಹೆಂಡತಿ ಹರಿಯಾಳದೇವಿಯ ಉದರದಲ್ಲಿ ಆನೆಗೊಂದಿಯಲ್ಲಿ ಜನಿಸುವನು “ಬಾಳೆಹಣ್ಣಿನ ಸಿಪ್ಪೆಯಿಂದ” ಹರಿಯಾಳದೇವಿಯ ದಾಸಿ ಚಿನ್ನುಮಾಯಿ ತಾಯಮ್ಮಳ ಹೊಟ್ಟೆಯಿಂದ ಜನಕರಾಮ ಹುಟ್ಟುವನು. ಸಹೋದರರು ನಂತರ ಅನ್ಯೋನ್ಯವಾಗಿರುತ್ತಾರೆ. ಇವರ ಬಾಲ್ಯವು ಹರಿಯಾಳದೇವಿ ಹಾಗೂ ಸೋದರಮಾವ ಬಚ್ಚಣ್ಣನ ಆಶ್ರಯದಲ್ಲಿ ಕಳೆಯುವುದು. ಕುಮಾರರಾಮನು ಓರಗಲ್ಲಿನ ರಾಜ ಗಣಪತಿಯ ಮಗ ಗಣರಾಮನನ್ನು ಸಂಹರಿಸಿ “ವಜ್ರ-ವೈಡೂರ್ಯ, ಮುತ್ತು-ರತ್ನ, ಏಳುದಡೆವು ಚಂದ್ರಾಯುಧ ಹಾಗೂ ಎರಡು ರೆಕ್ಕೆ ನಾಲ್ಕು ಪಾದದ ದೇವತಾ ಕುದುರೆ ಗೆದ್ದು ” ವಿಜಯಶಾಲಿಯಾಗಿ ಆನೆಗೊಂದಿ ಕಂಪ್ಲಿಗೆ ಮರಳುವನು. ದಿಲ್ಲಿ ಸುಲ್ತಾನನೊಂದಿಗೆ ಮೂರು ಸಲ ಯುದ್ಧದಲ್ಲಿ ಗೆದ್ದು ಅಪ್ರತಿಮ ವೀರ ಎನಿಸಿಕೊಳ್ಳುವನು (ಮೈತ್ರಿ ೧೯೯೭, ೯-೧೧). ಕುಮಾರರಾಮನ ಶೌರ್ಯಸಾಹಸಗಳ, ರೂಪಲಾವಣ್ಯಗಳಂಥ ಗುಣಗಳ ಮೂಲಕ ಅವನು ಹೆಂಗಳೆಯರಿಗೆ ಪ್ರಿಯವಾಗಿದ್ದನು. ಲೋಕೋತ್ತರ ಸೌಂದರ್ಯವನ್ನು ಹೊಂದಿದ್ದ ಕುಮಾರಾಮನು ಐವರು ಸುಂದರ ಕನ್ಯೆಯರನ್ನು ಮದುವೆಯಾಗಿದ್ದರೂ ಸ್ತ್ರೀಕುಲ ಹೃದಯವನ್ನು ಸೂರೆಗೊಂಡಿದ್ದನು. ದೆಹಲಿ ಸುಲ್ತಾನರ ಮಗಳು “ಬಾಬಮ್ಮ”, “ಮಾತಂಗಿ” ಹಾಗೂ ಸ್ವಂತ ಚಿಕ್ಕಮ್ಮ “ರತ್ನಾಜಿ”ಯರು ಇವನನ್ನು ಇಷ್ಟಪಟ್ಟರೂ ಕುಮಾರರಾಮನಿಗೆ ಅವರ ಮೇಲೆ ಇಷ್ಟವಿಲ್ಲದಿರುವ ಬಗ್ಗೆ ವಿವರಗಳನ್ನು ಸಾವಿತ್ರಿಯವರು ನೀಡಿದ್ದಾರೆ. (ಸಾವಿತ್ರಿ ೨೦೦೨,೯). ಮಾತಂಗಿಯ ಬಗ್ಗೆ ವಿವರಗಳನ್ನು ನೀಡುತ್ತಾ ಸಾವಿತ್ರಿಯವರು ಮಾತಂಗಿಯು ಮಾದಿಗರ ದೈವವಾಗಿ ಆರಾಧನೆಗೊಳ್ಳುತ್ತಿದ್ದಾಳೆ ಎನ್ನುವ ಸಂಗತಿಯನ್ನು ತಿಳಿಸಿದ್ದಾರೆ. ಹಾಗೆಯೇ ಮಾತಂಗಿಯು ದೆಹಲಿ ಸುಲ್ತಾನರ ಮಗಳೆಂದು, ಬಿಜಾಪುರ ಸುಲ್ತಾನನ ಮಗಳೆಂದೂ ಹಾಗೂ ಹುಲಿಗೆಯ ಹುಲಿಗೆಮ್ಮಳೇ ಮಾತಂಗಿಯಾದಳು ಎಂಬ ರೀತಿಯ ಪ್ರತೀತಿಗಳನ್ನು ಗಮನಿಸಬಹುದು. ಕುಮಾರರಾಮನನ್ನು ಹೇಗಾದರೂ ಒಲಿಸಿಕೊಳ್ಳಬೇಕೆಂದು, ಕುಮಾರರಾಮ ಮತ್ತು ಅವನ ಗೆಳೆಯರು ಆಡುತ್ತಿದ್ದ ಚೆಂಡು ತನ್ನ ಉಪ್ಪರಿಗೆಗೆ ಬಂದು ಬೀಳುವಂತೆ ಮಾಡಲು ಪ್ರಾರ್ಥಿಸಿದ ರತ್ನಾಜಿಗೆ ಹುಲಿಗೆಮ್ಮ ಸಹಾಯ ಮಾಡಿದಳು ಎನ್ನುವ ಪ್ರತೀತಿಯೂ ಇದೆ (ಸಾವಿತ್ರಿ ೨೦೦೨, ೩೦-೩೧).

ಪರಾಕ್ರಮಿ ಕುಮಾರರಾಮನೊಂದಿಗೆ ಮದುವೆ ಆಗಬೇಕಾಗಿದ್ದ ಚೆಲುವೆ ರತ್ನಾಕ್ಷಿಯ ಮದುವೆಯು ಕುಮಾರರಾಮನ ಅಪ್ಪ ಕಂಪಿಲರಾಜನೊಂದಿಗೆ ಆಗುವುದು. “ಕಾಮಾಂಧ” ರತ್ನಾಕ್ಷಿ ಕುಮಾರರಾಮನೊಂದಿಗೆ “ಕಾಮತೃಪ್ತಿಪಡಿಸಿಕೊಳ್ಳಲು” ಹೊಂಚು ಹಾಕಿ ವಿಫಲವಾಗುವಳು ಎಂದು ಮೈತ್ರಿಯವರು ವಿವರಿಸಿದ್ದಾರೆ. (ಮೈತ್ರಿ ೧೯೯೭, ೯-೧೧). ಕುಮಾರರಾಮನಿಂದ ತಿರಸ್ಕರಿಸಲಾದ ರತ್ನಾಜಿಯು ಹೆಮ್ಮಾರಿಯಾಗಿ ಸೇಡು ತೀರಿಸಿಕೊಳ್ಳಲು ತನ್ನ ಗಂಡ ಕಂಪಿಲರಾಯನಿಗೆ ಕುಮಾರರಾಮನ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸಿದಳು. ಮೋಹದ ಹೆಂಡತಿಯ ಮಾತನ್ನು ನಂಬಿದ ಕಂಪಿಲರಾಯನು ಕುಮಾರರಾಮನಿಗೆ ಮರಣದಂಡನೆ ವಿಧಿಸಿದನು. ಚತುರನಾದ ಮಂತ್ರಿ ಬೈತಪ್ಪನು ಬೇರೊಬ್ಬನ ತಲೆಯನ್ನು ಕಡಿದು, ಕುಮಾರರಾಮನನ್ನು ನೆಲಮಾಳಿಗೆಯಲ್ಲಿ ಮುಚ್ಚಿಟ್ಟನು. ಕುಮಾರರಾಮನು ಮೃತನಾದನೆಂಬ ಸುದ್ದಿ ಕೇಳಿ ದೆಹಲಿ ಸುಲ್ತಾನನು ಕುಮ್ಮಟದುರ್ಗಕ್ಕೆ ಮುತ್ತಿಗೆ ಹಾಕಿದಾಗ ಚಿಂತಾಕ್ರಾಂತನಾದ ಕಂಪಿಲರಾಯನಿಗೆ ಅವನ ಮಂತ್ರಿಯು ಕುಮಾರರಾಮನು ಬದುಕಿರುವ ವಿಷಯ ತಿಳಿಸಿದನು. ಕುಮಾರರಾಮನು ವೀರಾವೇಷದಿಂದ ಹೋರಾಡಿ ಸುಲ್ತಾನನ್ನು ಹಿಮ್ಮೆಟಿಸಿದನು. ದೆಹಲಿ ಸುಲ್ತಾನನು ತನ್ನ ದಳಪತಿಗಳೊಂದಿಗೆ ಕುಮಾರರಾಮನನ್ನು ಸಂಹರಿಸಲಲು ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತಂಗಿಯು ತನಗೆ ಸೈನ್ಯ ಕೊಟ್ಟರೆ ಕುಮಾರರಾಮನ ತಲೆ ಒಪ್ಪಿಸುವುದಾಗಿ ಸುಲ್ತಾನನಿಗೆ ಮಾತುಕೊಡುವಳು. ಹಿಂದೊಮ್ಮೆ ಅವನನ್ನು ಮೋಹಿಸಿ, ತಿರಸ್ಕರಿತಳಾದ ಅವಳ ಸೇಡು ಕುಮಾರರಾಮನೊಂದಿಗಿನ ಯುದ್ಧದಲ್ಲಿ ಕಾಣತೊಡಗಿತು. ಅವನೊಂದಿಗೆ ಯುದ್ಧ ಮಾಡುತ್ತಿರುವಾಗ ಕತ್ತಿಯನ್ನು ಮೇಲಕೆತ್ತಿ ಹೊಡೆಯಲು ಹೋದಾಗ, ಅವಳು ಸ್ತ್ರೀಯೆಂದು ತಿಳಿದು ತಟಸ್ಥನಾಗಿ ಕುಮಾರರಾಮನು ತನ್ನನ್ನು ತಾನೇ ಸಂಹರಿಸಿಕೊಂಡನು. ಇತ್ತ ಕಂಪಿಲರಾಯನು ಹತನಾಗುವನು. ಕುಮಾರರಾಮನ ರುಂಡವನ್ನು ದೆಹಲಿಗೆ ಕಳಿಸಲಾಯಿತು. ಸುಲ್ತಾನನಿಗೆ ಇದು ಸಂತೋಷದ ವಿಚಾರವಾದರೂ ಅವನ ಮಗಳು “ಬಾಬಮ್ಮ”ಳಿಗೆ ಸಹಿಸಲಾಗದ ವ್ಯಥೆಯಾಯಿತು. ಅವಳು ಹತಾಶಳಾಗಿ ಪ್ರಾಣವನ್ನು ತೃಜಿಸುವಳು. ಕುಮಾರರಾಮನ ರುಂಡವು ದೆಹಲಿಯಲ್ಲಿದ್ದಷ್ಟು ದಿನ “ಅಪಶಕುನಗಳಾದ” ಕಾರಣ ಆ ರುಂಡವನ್ನು ಕಮ್ಮಟದುರ್ಗಕ್ಕೆ ಕಳುಹಿಸಲಾಯಿತು. (ಸಾವಿತ್ರಿ ೨೦೦೨, ೯-೧೦).

ಕುಮಾರರಾಮನ ಕಾಲದಲ್ಲಿ ತೊಘಲಕನ ಆಡಳಿತ ನಡಯುತ್ತಿತ್ತು. ಅವನ ದಂಡನಾಯಕ ಮಲ್ಲಿಕಾಫರ್ ಕುಮ್ಮಟದುರ್ಗಕ್ಕೆ ದಂಡೆತ್ತಿ ಬರುತ್ತಾನೆ. ಅವನು ಖೋಜಾನಾಗಿದ್ದ ಎಂಬುದು “ಐತಿಹಾಸಿಕ ಸತ್ಯ” ಎನ್ನುವ ಸಾವಿತ್ರಿಯವರು, ಈ ಹಿನ್ನೆಲೆಯಲ್ಲಿ ಕಾವ್ಯ ಕಥೆಗಳಲ್ಲಿ “ಗಂಡುಭೇದದ ಹೆಣ್ಣು” ಎಂದು ವರ್ಣಿತವಾಗಿರುವ ವ್ಯಕ್ತಿಯು ಮಲ್ಲಿಕಾಫರ್ ಎಂದು ತರ್ಕಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಂಚೆ ಮತ್ತು ಮಾತಂಗಿಮಠ ಕತೆಗಳು ಈಗಾಗಲೇ ಪ್ರಚಲಿತದಲ್ಲಿರುವುದನ್ನು ಅವರು ಉದಾಹರಿಸುತ್ತಾರೆ. (ಸಾವಿತ್ರಿ ೨೦೦೨, ೬೪)

ಕರ್ನಾಟಕದ ವಿವಿಧೆಡೆಗಳಲ್ಲಿ ಕುಮಾರರಾಮನನ್ನು ದೈವವಾಗಿ ಪೂಜಿಸಲಾಗುತ್ತದೆ. ಕುಮಾರರಾಮನ “ಮಹಾಕಾವ್ಯವು” ವೇದ, ವಾಲ್ಮೀಕಿ, ನಾಯಕ, ಗಂಗಾಮತ – ಹಾಲ್ಮತ ಸಮುದಾಯಗಳಿಂದ ಪೂಜ್ಯನೀಯಗೊಂಡಿರುವುದು ವೇದ್ಯವಾಗುವುದು (ಮೈತ್ರಿ ೧೯೯೭). ಕುಮಾರರಾಮ ವಾಸಿಸಿದ್ದ ಎನ್ನಲಾದ ಕುಮ್ಮಟದುರ್ಗದಲ್ಲಿ ಕುಮಾರರಾಮನು ‘ರಾಮಸ್ವಾಮಿ’ಯಾಗಿ ಆರಾಧನೆಗೊಳ್ಳುತ್ತಿರುವುದನ್ನು ಮುಂದೆ ವಿವರಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಅಂಕೋಲಗಳಲ್ಲಿ ಕುಮಾರರಾಮನು ‘ಹಸ್ರರಾಯ’ ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಿದ್ದರೆ, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಈತ ‘ಕುಮಾರ’ ಮತ್ತು ‘ಗ್ರಾಮದೇವರು’ ಆಗಿದ್ದಾನೆ. ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಕುಮಾರರಾಮನು ‘ಗ್ರಾಮೇಶ್ವರ’ ಆಗಿದ್ದಾನೆ. ಸಾಮಾನ್ಯವಾಗಿ ಸುಗ್ಗಿ ತಿಂಗಳಲ್ಲಿ ಈ ದೈವದ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಕುಮಾರರಾಮನನ್ನು ಸಂಕೇತಿಸುವ ಉರುಟಾದ ಕಲ್ಲು ಗುಂಡುಗಳನ್ನು ಮೆರವಣಿಗೆ ಮಾಡಿಸಲಾಗುತ್ತದೆ. ಉತ್ತರ ಕನ್ನಡದ ‘ಅಣಿಲಗೋಡು’ವಿನಲ್ಲಿ ನಡೆಯುವ ‘ಕಳ್ಳರಾಮನ ಜಾತ್ರೆ’ ಈ ದೃಷ್ಟಿಯಲ್ಲಿ ಪ್ರಮುಖವಾದುದು. ಹೀಗೆ ಕಮ್ಮಟದುರ್ಗದಿಂದ ಪಶ್ಚಿಮದ ಅರಬ್ಬಿ ಸಮುದ್ರದವರೆಗೂ ಕುಮಾರರಾಮನು ದೈವಿಕ ಪುರುಷನಾಗಿ ಇಂದಿಗೂ ಆರಾಧನೆಗೊಳ್ಳುತ್ತಿರುವುದನ್ನು ಕಾಣಬಹುದು (ಬಿಳಿಮಲೆ ೧೯೯೯,೩).

ಇತಿಹಾಸದಲ್ಲಿ ಬಂದ ಕುಮಾರರಾಮನು ದೈವವಾದುದು ಅಥವಾ ದೇವಮಾನವನಾದುದು ಹೇಗೆ ಎಂದು ಸಾವಿತ್ರಿಯವರು ವಿಶ್ಲೇಷಿಸುತ್ತಾ, ಕುದುರೆಯನ್ನು ಹೊಂದಿದ್ದ “ಮುಸ್ಲಿಂ ಸೈನಿಕರೊಡನೆ” ಹೋರಾಡಿ, ಅವರನ್ನು ಸೋಲಿಸಿದ ವ್ಯಕ್ತಿಯಾಗಿ ಕುಮಾರರಾಮನು ಜನಪದರ ದೃಷ್ಟಿಯಲ್ಲಿ ಅತೀ ಉನ್ನತ ಸ್ಥಾನಕ್ಕೇರುತ್ತಾನೆ ಎಂದು ಬರೆದಿದ್ದಾರೆ. ಅನೇಕ ಕಾವ್ಯಗಳಲ್ಲಿ ಪುರಾಣ ಮಾದರಿಯ ಸಾಂಗತ್ಯಗಳಿಂದಾಗಿ ಜನರಲ್ಲಿ ಭಕ್ತಿ ಹೆಚ್ಚಾಗಲು ಸಾಧ್ಯವಿದೆ ಎನ್ನುವ ಸಾವಿತ್ರಿಯವರು ಕಾವ್ಯಗಳ ಕಥಾವಸ್ತುವಾದ ಕುಮಾರರಾಮನನ್ನು ಕೃತಿಕಾರರು ಅರ್ಜುನ, ಜಟ್ಟಂಗಿರಾಮ ಮತ್ತು ಪರಶುರಾಮನಿಗೆ ಹೋಲಿಸಿರುವುದನ್ನು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಬೇಡ ಸಮುದಾಯದವರು ಈತನನ್ನು ಶ್ರೀರಾಮನೆಂದು ತಮ್ಮ ಆರಾಧ್ಯ ಮನೆದೇವರೆಂದುಕೊಂಡಿದ್ದಾರೆ ಎನ್ನುವ ವಿವರಗಳು ನಮ್ಮ ಗಮನ ಸೆಳೆಯುತ್ತವೆ. ರತ್ನಾಜಿ, ಬಾಬಮ್ಮ ಮತ್ತು ಮಾತಂಗಿಯರು ಇವನನ್ನು ಮೋಹಿಸಿದರೂ, ಈತ “ಪರನಾರಿ ಸೋದರ” ಎಂಬ ವಿಚಾರಕ್ಕೆ ಒತ್ತುಕೊಟ್ಟಿರುವ ಅಂಶ ಇವನನ್ನು ದೇವಮಾನವನನ್ನಾಗಿಸಿರಬಹುದು (ಸಾವಿತ್ರಿ, ೨೦೦೨, ೨೭-೨೮). ಇನ್ನೊಂದೆಡೆಯಲ್ಲಿ ಸಾವಿತ್ರಿಯವರು ಹೇಳುವಂತೆ ಮುದುಕ ಕಂಪಿಲರಾಯ ದೊಂಬರ ತರುಣಿ ರತ್ನಾಜಿಯನ್ನು ಮದುವೆಯಾಗುವ ವಿಚಾರವು ಕಂಪಿಲಿಯ ಪರಿವಾರದವರಿಗೆ ಅಸಮಾಧಾನವನ್ನು ತಂದಿತ್ತು. ಈ ಅಸಮಾಧನವೇ ರತ್ನಾಜಿಯನ್ನು “ವ್ಯಭಿಚಾರಿಣಿ”ಯನ್ನಾಗಿ ಮಾಡಿರುವ ಸಾಧ್ಯತೆಗಳಿವೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಾತಿಯ ಹಿನ್ನಲೆಯಿಂದಲೇ ಕುಮಾರಾಮನು”ಪರನಾರಿ ಸೋದರ” ನಾಗುವುದು ಮತ್ತು ರತ್ನಾಜಿಯು ‘ವ್ಯಭಿಚಾರಿಣಿ’ ಯಾಗುವುದು ಎನ್ನುವ ವಿಶ್ಲೇಷಣೆಯು ಗಮನಾರ್ಹವಾದುದು (ಸಾವಿತ್ರಿ ೨೦೦೨, ೬೫).

ಟಿಪ್ಪಣಿಗಳು

೧ ಬೋರಲಿಂಗಯ್ಯ ಹಿ.ಚಿ. (ಸಂ), ಮಂಟೇಸ್ವಾಮಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

೨. ಬೋರಲಿಂಗಯ್ಯ ಹಿ.ಚಿ. ಮಂಟೇಸ್ವಾಮಿ ಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೮.

೩. ಬೋರಲಿಂಗಯ್ಯ ಹಿ.ಚಿ. ತಿಮ್ಮಪ್ಪಗೊಂಡ ಹಾಡಿದ ಗೊಂಡರ ರಾಮಾಯಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೪. ಬೋರಲಿಂಗಯ್ಯ ಹಿ.ಚಿ. ಗಿರಿಜನನಾಡಿಗೆ ಪಯಣ, ರಾಗಿರೊಟ್ಟಿ ಪ್ರಕಾಶನ, ಮಯೂರ ಪ್ರಿಂಟ್ ಆಡ್ಸ್, ಎರಡನೇ ಮುದ್ರಣ, ಬೆಂಗಳೂರು, ೨೦೦೦.

೫. ರಾಜಶೇಖರ್ ಪಿ.ಕೆ, ಮಲೆಯ ಮಾದೇಶ್ವರ: ಸಂಗ್ರಹ ಮತ್ತು ಸಂಪಾದನೆ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

೬. ಪರಮಶಿವಯ್ಯ ಜಿ.ಶಂ, ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೯.

೭. ಕಾಳೇಗೌಡ ನಾಗವಾರ, ಜನಪದ ಸಾಹಿತ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೬.

೮. ಕಾಳೇಗೌಡ ನಾಗವಾರ, ಅಂಬಳಿಕೆ ಹಿರಿಯಣ್ಣ (ಸಂ), ಜೀಶಂಪ ಅವರ ಜಾನಪದ ಬರಹಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮಯೂರ ಪ್ರಿಂಟ್ ಆಡ್ಸ್, ಬೆಂಗಳೂರು, ೨೦೦೦.

೯. ಕಾಳೇಗೌಡ ನಾಗವಾರ ಮತ್ತು ಹಿ.ಚಿ.ಬೋರಲಿಂಗಯ್ಯ, ಗಿರಿಜನ ಕಾವ್ಯ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು, ೨೦೦೦.

೧೦. ರಾಮಚಂದ್ರನ್ ಸಿ.ಎನ್(ಅನು), ಕೇಶವನ್ ಪ್ರಸಾದ್ ಕೆ. (ಸಂ), ಮಲೆಮಾದೇಶ್ವರ, ಸಾಹಿತ್ಯ ಅಕಾಡೆಮಿ, ರತನ್ ಎಂಟರ್‌ಪ್ರೈಸಸ್, ನವದೆಹಲಿ, ೨೦೦೦.

೧೧. ರಾಮಚಂದ್ರನ್ ಸಿ.ಎನ್. ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಸಂಪುಟಗಳು, ೧.೧೨.೨೦೦೧, ೧೩.೦೧.೨೦೦೨, ೨೭.೦೧.೨೦೦೨, ೦೭.೦೨.೨೦೦೨, ೧೦.೦೨.೨೦೦೨, ೧೭.೦೨.೨೦೦೨ ಮತ್ತು ೨೪.೦೨.೨೦೦೨.

೧೨. ಸ್ವಾಮಿ ಬಿ.ಎಸ್. ಮಲೆಯ ಮಾದೇಶ್ವರ ಪರಂಪರೆ-ಕಾವ್ಯ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

೧೩. ಪುರುಷೋತ್ತಮ ಬಿಳಿಮಲೆ, ಚೆಲುವರಾಜು, ಹಂಪಿ ಜಾನಪದ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ನೇತ್ರಾ ಪ್ರಿಂಟರ್ಸ್, ಹಂಪಿ, ೧೯೯೬.

೧೪. ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಆನಂದಕಂದ ಗ್ರಂಥಮಾಲೆ, ಲಿಪಿ ಮುದ್ರಣ, ಪ್ರಥಮ ಮುದ್ರಣ, ಮಲ್ಲಾಡಿಹಳ್ಳಿ, ೧೯೯೭.

೧೫. ಪುರುಷೋತ್ತಮ ಬಿಳಿಮಲೆ, ಕುಮಾರರಾಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

೧೬. ನಾಗಭೂಷಣಸ್ವಾಮಿ ಓ.ಎಲ್, ಮಂಟೇಸ್ವಾಮಿ ಕಾವ್ಯ ಮತ್ತು ನಮ್ಮತನದ ಹುಡುಕಾಟ, ಕನ್ನಡ ಅಧ್ಯಯನ, ಮಳೆ ಸಂಚಿಕೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ತ್ರೈಮಾಸಿಕ, ಸಂಪುಟ – ೮, ಸಂಚಿಕೆ – ೧,೨೦೦೧

೧೭. ನಾಗಭೂಷಣಸ್ವಾಮಿ ಓ.ಎಲ್, ಮಾದಪ್ಪನ ಕಥೆಯ ಸುತ್ತಮುತ್ತ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮

೧೮. ಹಿರೇಮಠ ಎಸ್.ಎಸ್, ಮಲೆಯ ಮಾದೇಶ್ವರ ಪರಂಪರೆ-ಕಾವ್ಯ ಐತಿಹಾಸಿಕ ನೆಲೆ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

೧೯. ಅಂಬಳಿಕೆ ಹಿರಿಯಣ್ಣ, ಮಲೆಯ ಮಾದೇಶ್ವರ ಪರಂಪರೆ – ರಚನಾತ್ಮಕ ನೆಲೆ, ಪ್ರಬುದ್ಧ ಕರ್ನಾಟಕ, ಸಂಪುಟ ೭೮-೭೯, ಸಂಚಿಕೆಗಳು ೩೦೭-೩೧೪, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೯೮.

೨೦. ಚಂದ್ರು ಕಾಳೇನಹಳ್ಳಿ, ಮಂಟೇಸ್ವಾಮಿ ಕಾವ್ಯ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

೨೧. ವೆಂಕಟೇಶ್ ಇಂದ್ವಾಡಿ, ಮಂಟೇಸ್ವಾಮಿ ಪರಂಪರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.

೨೨. ನಾಗರಾಜ ಡಿ.ಆರ್. ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೯.

೨೩. ಚಲುವರಾಜು, ಜುಂಜಪ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

೨೪. ನೇಗಿನಹಾಳ ಎಂ.ಬಿ. ಜುಂಜಪ್ಪನ ಕಾವ್ಯ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ.ಶಂಕರನಾರಾಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ, ಬೆಂಗಳೂರು, ೧೯೯೮.

೨೫. ಮೀರಾಸಾಬಿಹಳ್ಳಿ ಶಿವಣ್ಣ, ಕರ್ನಾಟಕ ಜನಪದ ಮಹಾಕಾವ್ಯಗಳು, ತೀ.ನಂ. ಶಂಕರನಾರಯಣ (ಸಂ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೮.

೨೬. ಶಂಕರನಾರಾಯಣ ತೀ.ನಂ. ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೮೨.

೨೭. ಚಂದ್ರಪ್ಪ ಎನ್. ಎಲ್ಲಮ್ಮ -ಒಂದು ಜಾನಪದೀಯ ಅಧ್ಯಯನ, ಮುಂಡ ಪ್ರಕಾಶನ, ಬೆಂಗಳೂರು, ೨೦೦೨.

೨೮. ಮೈತ್ರಿ ಕೆ.ಎಂ., ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

೨೯. ಮೈತ್ರಿ ಕೆ.ಎಂ., ಕೃಷ್ಣಗೊಲ್ಲರ ಕಥನಕಾವ್ಯಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦.

೩೦. ಮಂಜುನಾಥ ಬೇವಿನಕಟ್ಟಿ, ಮೈಲಾರಲಿಂಗನ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

೩೧. ಸಾವಿತ್ರಿ ಎಸ್.ಎಂ. ಕುಮಾರಸ್ವಾಮಿ ಸಂಪ್ರದಾಯದ ಅಧ್ಯಯನ, ಚಿತ್ರಶ್ರೀ ಪ್ರಕಾಶನ, ಹೊಸಪೇಟೆ, ೨೦೦೨.

೩೨. ಮಾಧವ ಪೆರಾಜೆ, “ಕರ್ನಾಟಕದ ಗಂಡು ಜೋಗಮ್ಮರು : ಉಭಯಲಿಂಗಿ ಸಂಸ್ಕೃತಿಯ ಪೂರ್ವಪೀಠಿಕೆ”, ಕನ್ನಡ ಅಧ್ಯಯನ, ಜುಲೈ-ಸೆಪ್ಟೆಂಬರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೧೯೯೯.

೩೩. ಜೋಷಿ ಶಂ.ಭಾ, ಹಾಲುಮತ ದರ್ಶನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩.