ಪಟ್ಟೋಲೆ ಪಳಮೆಯು ಕೊಡಗಿನಲ್ಲಿ ಒಂದೇ ಒಂದು ಜನಾಂಗ ವಾಸಿಸುವ ‘ಯುಟೋಪಿಯನ್’ ದೇಶದ ಕಲ್ಪನೆಯನ್ನು ನಮ್ಮ ಮುಂದಿಡುತ್ತದೆ. “ಅರಿವು ಬರಹ ೩” (೧೯೯೨) ರಲ್ಲಿ ಪ್ರಕಟವಾದ “ಕೊಡಗಿನ ಚರಿತ್ರೆಯ ಮೇಲೆ ಕೆಲವು ಟಿಪ್ಪಣಿಗಳು” ಎನ್ನುವ ನನ್ನ ಲೇಖನದಲ್ಲಿ ಚಿಣ್ಣಪ್ಪನವರು ಪಟ್ಟೋಲೆ ಪಳಮೆಯಲ್ಲಿ ಹೇಳುವ “ಕೊಡಗರು” ಎಂದರೆ “ಕೊಡವ” ಎಂದು ಸಾಮಾನ್ಯೀರಣಗೊಂಡ ಒಂದು ಜನಾಂಗ ಮಾತ್ರ. ಅವರ ದೃಷ್ಟಿಯಲ್ಲಿ “ಕೊಡಗ” ರಲ್ಲದವರ ಬಗ್ಗೆ ನಂತರ ಚರ್ಚೆ ಮಾಡುವವನಿದ್ದೇನೆ. ಹಾಗಾದರೆ ಕೊಡವರೆಂದರೆ ಯಾರು ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಕೊಡಗರಲ್ಲಿ ಅಮ್ಮ, ಸಣ್ಣ, ಮಲ್ಲ ಹಾಗೂ ಬೊಡ್ಡು ಎನ್ನುವ ಪಂಗಡಗಳಿವೆ ಎಂದು ಕ್ಯಾಪ್ಟನ್ ರಾಜ್ ಕೋಲನ ಕೂರ್ಗ್ ಸಿವಲ್ ಲಾ (೧೮೭೦) ಹಾಗೂ ರಿಕ್ತರನ ಎತ್ನಾಗ್ರಫಿಕಲ್ ಕಂಪೇಂಡಿಯಮ್ ನ ಸಂಶೋಧನೆಗಳು ಹೇಳಿದರೂ (ಕೋಲ್ ೧೯೪೭; ರಿಕ್ತರ್ ೧೮೮೭) ಚಿಪ್ಪಣ್ಣನವರ ಅಭಿಪ್ರಾಯವು ಬೇರೇಯೇ ಆಗಿದೆ. ಚಿಣ್ಣಪ್ಪನವರ ಪ್ರಕಾರ “ಕೊಡಗರಲ್ಲಿ ಅಮ್ಮ, ಸಣ್ಣ, ಮಲ್ಲ ಮತ್ತು ಬೊಡ್ಡು ಕೊಡಗರೆಂಬ ನಾಲ್ಕು ಭೇದಗಳಿವೆಯೆಂದು ಕೆಲವರು ತಿಳಿದುಕೊಂಡಿದ್ದಾರೆ” ಎನ್ನುವುದು ಸರಿಯಲ್ಲ. ಹಾಗೆಯೇ ಅವರ ಪ್ರಕಾರ ಸಣ್ಣ ಕೊಡಗರು, ಮಲ್ಲ ಕೊಡಗರು ಮತ್ತು ಬೊಡ್ಡು ಕೊಡಗರೆಂಬ ಮಾತುಗಳು ಅಪಹಾಸ್ಯದ ಮಾತುಗಳಲ್ಲದೆ ಅಂಥ ಭೇದಗಳಿರುವುದಿಲ್ಲ ಈ ವಿಚಾರದಲ್ಲಿ ಮಾತ್ರ ಚಿಣ್ಣಪ್ಪನವರು ಮಿಷನರಿ/ಆಡಳಿತಗಾರ ವಿದ್ವಾಂಸರಿಗಿಂತ ಭಿನ್ನವಾದ ನಿಲುವನ್ನು ಹೊಂದಿರುವುದನ್ನು ಗಮನಿಸಬಹುದು. ಚಿಣ್ಣಪ್ಪನವರು ಇಂಥ ನಾಲ್ಕು ಭೇದಗಳು ಇಲ್ಲವೆಂದು ಪಟ್ಟೋಲೆ ಪಳಮೆಯಲ್ಲಿ ವಾದಿಸಿದರೂ ಜೀ.ಶಂ. ಪರಮಶಿವಯ್ಯನವರು ಪಟ್ಟೋಲೆ ಪಳಮೆಯ ದ್ವಿತೀಯ ಆವೃತ್ತಿಯ “ವಿಭಾಗ ಸಂಪಾದಕರ ಮಾತು” ಎನ್ನುವ ಶೀರ್ಷಿಕೆಯಡಿಯಲ್ಲಿ ಕೊಡಗರಲ್ಲಿ ಅಮ್ಮ, ಸಣ್ಣ, ಮಲ್ಲ ಮತ್ತು “ಜಮ್ಮ” ಕೊಡವರೆಂಬ ಒಳ ವಿಭಾಗಗಳಿವೆ ಎಂದು ಬರೆದಿದ್ದಾರೆನ್ನುವುದನ್ನು ಗಮನಿಸಬೇಕು. ಸುಮಾರು ಎರಡು ಶತಮಾನಗಳ ಹಿಂದೆ ಮೈಸೂರು ಪ್ರಾಂತ್ಯದಿಂದ ಕೊಡಗಿಗೆ ವಲಸೆ ಬಂದ ಗುಂಪನ್ನು “ಜಮ್ಮ ಕೊಡವರು” ಎಂದು ಕರೆಯುತ್ತಾರೆ. ಇವರು ಕನ್ನಡ ಭಾಷಿಕರು ಎನ್ನುವುದೂ ಇಲ್ಲಿ ಮುಖ್ಯ. ಇಲ್ಲಿ ಜೀ.ಶಂ.ಪ. ಅವರು ಕೊಡವರಿಗೆ ಎಲ್ಲಾ ರೀತಿಯಲ್ಲೂ ಸಾಮ್ಯವಿರುವ “ಬೊಡ್ಡು” ಎನ್ನುವ ಪಂಗಡದ ಬಗ್ಗೆ ಪ್ರಸ್ತಾಪಿಸದೆ, ಕೊಡವರಿಗೆ ಯಾವ ರೀತಿಯಲ್ಲೂ ಸಾಮ್ಯವಿಲ್ಲದ (“ಕೊಡವ” ಎನ್ನುವ ಹೆಸರನ್ನು ಬಿಟ್ಟು) “ಜಮ್ಮು” ಕೊಡವ ಎನ್ನುವ ಪಂಗಡವನ್ನು ತಾವು ಹೇಳುವ “ಒಳ ವಿಭಾಗಗಳಲ್ಲಿ” ಸೇರಿಸಿರುವುದು ಗಮನಾರ್ಹವಾಗಿದೆ. (ಚಿಣ್ಣಪ್ಪ ೧೯೭೪-x).

ಚಿಣ್ಣಪ್ಪನವರು ಹೇಳುವ ಪ್ರಕಾರದಂತೆ “೧೮೫೭ರಲ್ಲಿ ಹಿಂದು ದೇಶದಲ್ಲಿ ಎದ್ದ ದೊಡ್ಡ ದಂಗೆಯಲ್ಲಿ, ಕೊಡಗರು ಇಂಗ್ಲೀಷ್ ಸರಕಾರಕ್ಕೆ ರಾಜಭಕ್ತಿಯನ್ನು ತೋರಿಸಿದ್ದರ ಪ್ರತಿಫಲವಾಗಿ, ಈ ಚಿಕ್ಕವೀರ ಜನಾಂಗದವರ ಉನ್ನತ ಲಕ್ಷಣವಾದ ಘನತೆಯನ್ನೂ, ರಾಜಭಕ್ತಿಯನ್ನೂ, ಧೀರತ್ವವನ್ನು ನೆನಪಿಸಿಕೊಂಡು” ಕಮೀಷನರ್ ಮಾರ್ಕ್ ಕಬ್ಬನ್ ೧೮೬೧ರಂದು ಕೊಡಗರನ್ನು ನಿಶ್ಯಸ್ತ್ರ ಕಾಯಿದೆಯಿಂದ ವಿನಾಯ್ತಿ ನೀಡಿದನು (ಚಿಣ್ಣಪ್ಪ ೧೯೭೪, ೭೫-೭೬). ಚಿಣ್ಣಪ್ಪನವರ ವಾದಗಳ ಪ್ರಕಾರ ಕೊಡಗರಲ್ಲಿ ಅರ್ಥಾತ್ ಕೊಡವರಲ್ಲಿ ಒಳಪಂಗಡಗಳಿಲ್ಲ. ಜಾತಿ ಪ್ರಭೇದಗಳಿಲ್ಲ. ನಾಲ್ಕು ಭೇದಗಳಿವೆ ಎಂದು ಗುರುತಿಸುವುದು ತಪ್ಪು. ಕೊಡಗರೆಂದರೆ ಒಂದು ಜನಾಂಗ. ಆದ್ದರಿಂದಲೇ “ಈ ಚಿಕ್ಕವೀರ ಜನಾಂಗದವರ” ರಾಜಭಕ್ತಿಯನ್ನು ಮನ್ನಿಸಿ ಕೊಡಗರಿಗೆ ೧೮೬೧ರ ನಿಶ್ಯಸ್ತ್ರ ಕಾಯ್ದೆಯಿಂದ ಮಾರ್ಕ್ ಕಬ್ಬನ್ ವಿನಾಯಿತಿ ನೀಡಿದನು.

ನಮ್ಮಲ್ಲಿರುವ ಮಾಹಿತಿಗಳು, ಸಂಗ್ರಹಗಳು, ದಾಖಲೆಗಳು ಪಟ್ಟೋಲೆ ಪಳಮೆಯಲ್ಲಿರುವ ವಾದಗಳನ್ನು ಸಮರ್ಥಿಸುವುದಿಲ್ಲ. ೧೯೦೧ನೇ ಇಸವಿ ಸೆಪ್ಟೆಂಬರ್ ೧ ದಿನಾಂಕದಂದು ಸೆನ್ಸಸ್ ಸೂಪರಿಂಟೆಂಡೆಂಟನಾಗಿದ್ದ. ಡಬ್ಲು. ಫ್ರಾನ್ಸಿಸ್ ಎಂಬುವವನು ಫೊರ್ಟ್ ಸೇಂಟ್ ಜಾರ್ಜ್‌ನಲ್ಲಿ ಪ್ರಕಟಿಸಿದ ದಾಖಲೆಗಳು ಅಮ್ಮ ಕೊಡಗ, ಸಣ್ಣ ಕೊಡಗ ಹಾಗೂ ಮತ್ತಿತರರಿಗೆ ಕೊಡಗಿನಲ್ಲಿದ್ದ ಭೂ ಹಿಡುವಳಿಗಳ ಬಗ್ಗೆ, ಅವನ್ನು ಹೊಂದಿದ ಸ್ತ್ರೀ ಪುರುಷರ ಅಂಕಿ ಅಂಶಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ. (ಫೈಲ್ ನಂ. ೫೭ ಆಫ್ ೧೮೮೯, ಕೂರ್ಗ್ ರೆಕಾರ್ಡ್ ಆಫೀಸ್, ಮಡಿಕೇರಿ). ಇದಕ್ಕೂ ಹೆಚ್ಚಾಗಿ ಅಮ್ಮ ಕೊಡವ ಎನ್ನುವ ಸಮುದಾಯಕ್ಕೂ ಸಾಮಾನ್ಯೀಕರಣಗೊಂಡ ‘ಕೊಡಗ’ ಎನ್ನುವ ಸಮುದಾಯಕ್ಕೂ ಕುಟುಂಬ ವ್ಯವಸ್ಥೆ ಹಾಗೂ ಅದಕ್ಕೆ ಹೊಂದಿಕೊಂಡ ಪದ್ಧತಿ ಪರಂಪರೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ವ್ಯತ್ಯಾಸಗಳಿವೆ. ಅಮ್ಮ ಕೊಡವರು ಶಾಖಾಹಾರಿಗಳು, ಯಜ್ಞೋಪವಿತವನ್ನು ನವೆಂಬರ್ ೧೮೩೪ರ ನಂತರ ಧರಿಸಲು ಆರಂಭಿಸಿದರೆಂದು ಪಟ್ಟೋಲೆ ಪಳಮೆಯ ದಾಖಲೆಗಳು ಹೇಳುತ್ತವೆ (ಚಿಣ್ಣಪ್ಪ ೧೯೭೪, ೨೦) ಎನ್ನುವುದಕ್ಕಿಂತ, ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ಸುತ್ತಮುತ್ತಲಿನ ಅಮ್ಮ ಕೊಡವರು ಕೊಡಗಿನ ಕೃಷಿ ಮೂಲ ಹಬ್ಬವಾದ “ಕೈಲ್ – ಮುಹೂರ್ತ” ಹಬ್ಬವನ್ನು ಆಚರಿಸದಿರುವುದು ಕೊಡಗಿನ ಸಮಾಜದ ಸಂಕೀರ್ಣತೆಗೊಂದು ಸಾಕ್ಷಿಯಾಗುತ್ತದೆ. ನಾನು ಕೈಗೊಂಡ ಅಧ್ಯಯನಗಳ ಪ್ರಕಾರ “ಬೊಡ್ಡು ಕೊಡಗರು” ಎಂದು ಕರೆಸಿಕೊಳ್ಳುವ ಜನರು ಕೊಡಗಿನ ಸೂರ್ಲಬಿ, ಮಾದಾಪುರಗಳಲ್ಲಿ ನೆಲೆಗೊಂಡಿರುವ ಮಾಹಿತಿಗಳು ದೊರೆಯುತ್ತವೆ. ಬೊಡ್ಡು ಕೊಡಗರಿಗೂ ಮತ್ತುಳಿದ ಕೊಡಗರಿಗೂ ಯಾವುದೇ ರೀತಿಯ ಕೌಟುಂಬಿಕ ಸಂಬಂಧಗಳಿಲ್ಲ. ಪರಸ್ಪರ ವಿವಾಹ ಸಂಬಂಧಗಳು ಇಲ್ಲ. “ಬೊಡ್ಡು” ಅಥವಾ “ಮಂದ” ಸ್ವಭಾವದ ಜನರು ಇವರೆಂದು ಉಳಿದ ಕೊಡಗರು ಇವರನ್ನು ಉಪೇಕ್ಷಿಸುವುದನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು. ಬದಲಾದ ರಾಜಕೀಯ ಹಾಗೂ ಸಾಂಸ್ಕೃತಿಕ ಒತ್ತಡಗಳಿಂದ ತೀರಾ ಇತ್ತೀಚೆಗೆ ಅಲ್ಲಲ್ಲಿ ಉಳಿದ ಜಾತಿಗಳ ಜನರು ಕೊಡವರೊಂದಿಗೆ ವಿವಾಹ ಆಗುವ ರೀತಿಯಲ್ಲೇ ಬೊಡ್ಡು ಕೊಡವರೆಂದು ಕರೆಯಲ್ಪಡುವವರು “ಅಂತರ್ಜಾತಿ” ವಿವಾಹಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮಿಕ್ಕುಳಿದ ಜಾತಿಗಳು ಕೊಡವರೊಂದಿಗೆ ವಿವಾಹಸಂಬಂಧ ಏರ್ಪಟ್ಟಾಗ ಆಗುವ “ಗುಸುಗುಸು” ಕೊಡವ ಮತ್ತು ಬೊಡ್ಡು ಕೊಡವ ಎನ್ನುವ ಪಂಗಡಗಳ ನಡುವೆ ವಿವಾಹ ಸಂಬಂಧ ಏರ್ಪಟ್ಟಾಗ ಬಹಳ ಮಟ್ಟಿಗೆ ಕಂಡುಬರುವುದಿಲ್ಲ.

ಸಣ್ಣ ಮತ್ತು ಮಲ್ಲ ಕೊಡಗರಿಗೆ ಯಾವುದೇ ರೀತಿಯ ವೈವಾಹಿ ಸಂಬಂಧಗಳು ಇರಲಿಲ್ಲ ಎನ್ನುವುದು ೧೯ನೇ ಶತಮಾನದ ಕೋಲ್, ರಿಕ್ತರ್ನ ಸಂಶೋಧನೆಗಳಿಂದ ಮತ್ತು ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಅನಂತಕೃಷ್ಣ ಅಯ್ಯರ್ (೧೯೮೪) ಹಾಗೂ ಎಂ.ಎನ್.ಶ್ರೀನಿವಾಸ್‌ರಂಥ (೧೯೫೨) ಸಮಾಜಶಾಸ್ತ್ರಜ್ಞರ ಸಂಶೋಧನೆಗಳಿಂದ ವ್ಯಕ್ತವಾಗಿದೆ (ಕೋಲ್ ೧೯೪೭, ೧-೨; ರಿಕ್ತರ್ ೧೮೮೭, ೧೪-೧೬; ಅಯ್ಯರ್ ೧೯೪೮;ಶ್ರೀನಿವಾಸ್ ೧೯೮೯, ೩೪-೩೭). ಕೊಡಗಿನ ದಕ್ಷಿಣ ಭಾಗದಲ್ಲಿ ಹೆಚ್ಚು ಕೇಂದ್ರೀಕೃತವಾಗಿರುವ “ಸಣ್ಣ” ಮತ್ತು ಉತ್ತರಭಾಗದಲ್ಲಿ ಹೆಚ್ಚು ಕೇಂದ್ರಿಕೃತವಾಗಿರುವ “ಮಲ್ಲ” ಕೊಡಗರ ನಡುವೆ ಈಗ ಏನೊಂದು ವ್ಯತ್ಯಾಸಗಳು ಉಳಿದಿಲ್ಲ. ಈ ತಲೆಮಾರಿನ ಜನರಿಗೆ ಅದರ ಲವಲೇಶವೂ ಅರಿವಿಲ್ಲದಿರುವುದು ಬದಲಾದ ಸಾಮಾಜಿ ಮೌಲ್ಯಗಳ ಹಿರಿತನಕ್ಕೂ ಸಾಕ್ಷಿಯಾಗುತ್ತವೆ. ಹೀಗಿದ್ದರೂ ದಕ್ಷಿಣ ಕೊಡಗಿನ (ವಿಶೇಷವಾಗಿ ಸ್ವಾತಂತ್ರ್ಯಪೂರ್ವದ ಕಿಗ್ಗಟ್ಟುನಾಡು ಪ್ರದೇಶ) ಕೆಲವು ಕೊಡವ ಮನೆತನಗಳ ಹಳೇ ತಲೆಮಾರಿನವರು ತಮ್ಮ ಜಾತಿಯ ಕೊಡವರೊಂದಿಗೆ ವಿವಾಹ ಏರ್ಪಡಿಸುವಾಗಲೂ ಬಹಳ ಎಚ್ಚರಿಕೆಯಿಂದ ವರ್ತಿಸುವುದು ಅಪರೂಪವೇನಲ್ಲ. ಒಂದೇ ಭಾಷೆ ಮಾತಾಡುವ, ಸಂಪ್ರದಾಯವಿರುವ, ರೀತಿ ರಿವಾಜುಗಳಿರುವ ಹಬ್ಬ ಪದ್ಧತಿಗಳಿರುವ, ಜೀವನ ಶೈಲಿ, “ಒಕ್ಕ” “ಕಾರಣ”, ಮದುವೆ ಪದ್ಧತಿಗಳು, ಸಾವು ಸಂಸ್ಕಾರಗಳು ಇತ್ಯಾದಿಯಾಗಿ ಏನೂ ವ್ಯತ್ಯಾಸವಿಲ್ಲದ ಅಮ್ಮ, ಸಣ್ಣ, ಮಲ್ಲ ಮತ್ತು ಬೊಡ್ಡು ಕೊಡಗರನ್ನು ಪ್ರತ್ಯೇಕವಾಗಿ ನೋಡುವ ಸಂಕುಚಿತ ಮನೋಭಾವಕ್ಕೆ ಕಡಿವಾಣ ಹಾಕುವ ಉದ್ದೇಶ ಪಟ್ಟೋಲೆ ಪಳಮೆ ಕೃಷಿಕಾರರಿಗೆ ಇದ್ದಿರಬಹುದು.

ಪಟ್ಟೋಲೆ ಪಳಮೆಯನ್ನು ಬರೆಯುವ ವೇಳೆಗೆ ರಾಷ್ಟ್ರೀಯ ಚಳುವಳಿಯ ಮೂಲ ತಿಳುವಳಿಕೆಯಾದ ಒಂದೇ ಸಂಸ್ಕೃತಿಯನ್ನು, ಧರ್ಮವನ್ನು ಅನುಸರಿಸುವ, ಒಂದೇ ಭಾಷೆ ಮಾತಾಡುವ ಜನರಿರುವ ಆದರ್ಶ ರಾಜ್ಯ ಹಾಗೂ ರಾಷ್ಟ್ರೀಯತೆ ವಸಾಹತುಶಾಹಿ ಸರಕಾರವನ್ನು ಓಡಿಸಲು ಚಳುವಳಿಗಾರರಿಗೆ ಅನಿವಾರ್ಯ ಎನ್ನುವ ಕಾಲವೊಂದಿತ್ತು. ಬಾಲ್ಕನ್ ರಾಜ್ಯಗಳು, ಇಟಲಿ ಮತ್ತು ಜರ್ಮನ್ ರಾಷ್ಟ್ರಗಳ “ರಾಷ್ಟ್ರೀಯತೆ” ಕೂಡ ಪರಕೀಯರನ್ನು ಓಡಿಸಲು ೧೯ನೇ ಶತಮಾನದ ಮಧ್ಯಭಾಗದಲ್ಲಿ ಶಕ್ಯವಾಗಿತ್ತು. ಆದರೆ ಆ ಯಾವುದೇ ರೀತಿಯ ರಾಷ್ಟ್ರೀಯ ಚಳುವಳಿಯ ಛಾಯೆ ಚಿಣ್ಣಪ್ಪನವರ ಮೇಲಿರಲಿಲ್ಲ ಎನ್ನುವುದನ್ನು ನಾವು ನೋಡಬಹುದು. ಇದರ ಬದಲಿಗೆ ಅವರು ಬ್ರಿಟಿಷ್ ಆಳರಸರು ಬರೆಯುವ ಹಾಗೆ ಚರಿತ್ರೆಯನ್ನು ಬರೆಯಲು ಪ್ರಯತ್ನಿಸಿದ್ದನ್ನು ನಾನು ಈಗಾಗಲೇ ತಿಳಿಸಿದ್ದೇನೆ. ಈ ಹಿನ್ನಲೆಯಲ್ಲಿ ತಮ್ಮ ಸಂಸ್ಕೃತಿಯ ಮನುಷ್ಯ ಜೀವಿಗಳನ್ನು ಪ್ರತ್ಯೇಕವಾಗಿ ನೋಡುವ ಸಂಕುಚಿತತೆಗೆ ಕಡಿವಾಣ ಹಾಕುವ ಪ್ರವೃತ್ತಿಯೂ ಅವರಿಗಿರಲಿಲ್ಲ ಎಂಬುದಕ್ಕೆ ಪಟ್ಟೋಲೆ ಪಳಮೆಯಲ್ಲಿ ಅವರು ಬರೆದ ಈ ಕೆಳಕಂಡ ಅಂಶಗಳು ಮೂಕ ಸಾಕ್ಷಿಯಾಗಿವೆ. ಅವರು ಜಾತಿ ಪದ್ಧತಿಗಳ ಬಗ್ಗೆ ಬರೆಯುತ್ತಾ,

ನಾಯರು, ಭಂಟರು, ಒಕ್ಕಲಿಗರು, ಗೌಡುಗಳು, ವೆಳ್ಳಾರರು ಮತ್ತು ಈ ತರಗತಿಯ ಶೂದ್ರರು ಕೊಡಗರ ಮನೆಯ ಎಲ್ಲಾ ಭಾಗಗಳಿಗೂ ಬರಬಹುದು. ತೀಯರು, ಬಿಲ್ಲವರು, ಹೆಗ್ಗಡೆಗಳು, ಐರಿಗಳು, ಬಣ್ಣರು, ಅಗಸರು ಮತ್ತು ಈ ತರಗತಿಯ ಶೂದ್ರರು ನೆಲ್ಲಕ್ಕಿ ನಡುಬಾಡೆಗೂ, ಕನ್ನಿಕೋಂಬರೆಗೂ ಮತ್ತು ಅಡಿಗೆ ಮನೆಗೂ ಸೇರಕೂಡದು. ಆದರೆ ಮದುವೆಗೆ ಮೇಲ್ಕಟ್ಟು ಕಟ್ಟಿದ ಮೇಲೆಯೂ, ಕಾರಣ ತೆರೆ ಕಟ್ಟುವ ದಿವಸವೂ, ಈ ತರದ ಶೂದ್ರರು ನೆಲ್ಲಕ್ಕಿ ನಡುಬಾಡೆಗೆ ಬರಬಹುದು. ಆ ಮೇಲೆ ಶುದ್ಧ ಮಾಡುವರು. ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರರಿಂದ ಮತ ಬದಲಾದವರೂ ಮತ್ತು ಮ್ಲೇಂಛರೂ ಸಹ ಕೊಡಗರಂತೆ ಕುಪ್ಪಸ ಧರಿಸಿದರೆ, ಕೊಡಗರೊಡನೆ ಮಿಶ್ರವಾಗಿ ಮಂದುಮಾನಿಗಳಲ್ಲಿ ಕುಣಿಯಬಹುದು. ಎರವರು, ಕುರುಬರು, ಪಾಲೆಯರು ಮತ್ತು ಆ ತರಗತಿಯ ಜಾತಿಯವರು ಜಗಲಿಗೆ ಹತ್ತಬಹುದು. ಮೇದರು, ಹೊಲೆಯರು, ಮರ್ತರು ಮತ್ತು ಆ ತರಗತಿಯ ಜಾತಿಯವರು ಹಟ್ಟಿಯಲ್ಲಿ ನಿಲ್ಲಬೇಕು. ತನ್ನ ಮತ ಅಥವಾ ಜಾತಿ ಬದಲಾಯಿಸಿಕೊಂಡರೆ ಯಾವ ಮತದವನು ಅಥವಾ ಜಾತಿಯವನು ಎಲ್ಲಿವರೆಗೆ ಬರಬಹುದೊ ಅಲ್ಲಿಯವರೆಗೆ ಮಾತ್ರ ಬರಬಹುದು. ಆದರೆ ಬಲತ್ಕಾರದಿಂದ ಅಥವಾ ಮೋಸದಿಂದ ಜಾತಿ ಅಥವ ಮತ ಬದಲಾಯಿಸಲ್ಪಟ್ಟರೆ ಪ್ರಾಯಶ್ಚಿತ ಮಡಿ ಜಾತಿ ಮತ್ತು ಮತಕ್ಕೆ ತೆಗೆದುಕೊಳ್ಳಬಹುದು (ಚಿಣ್ಣಪ್ಪ ೧೯೭೪,೫೦೦).

ನಡಿಕೇರಿಯಂಡ ಚಿಣ್ಣಪ್ಪನವರ ಪಟ್ಟೋಲೆ ಪಳಮೆಯು ಕೆಲವು ಅಮಾನವೀಯ ಕಟ್ಟಳೆಗಳನ್ನು “ಚಾಂಡಾಳ”ರಿಗೆ ಅನ್ವಯಿಸುವುದನ್ನು ಅಪ್ಪಣೆ ಮಾಡುತ್ತದೆ. ಅವುಗಳು ಯಾವುದೆಂದರೆ:

ಕೋವಿಯನ್ನು ಮುಟ್ಟಬಾರದು
ಕಾಲಿಗೆ ಪಾದರಕ್ಷೆಯನ್ನು ಹಾಕಬಾರದು
ಬಟ್ಟೆ ಕೊಡೆ ಹಿಡಿಯಬಾರದು
ಭತ್ತ ಸಾರಾಯಿ ಮಾಡಬಾರದು
(ಭಟ್ಟಿ ಇಳಿಸಬಾರದು)
ಪುಳಿನೀರ್ ಕಾಯಿಸಬಾರದು
“ಪುಕ್ಕ ಪುಟ್ಟ” ಮಾಡಬಾರದು
ಭತ್ತವನ್ನು ಬೇಯಿಸಬಾರದು
ಪದಾರ್ಥಕ್ಕೆ ಒಗ್ಗರಣೆ ಹಾಕಬಾರದು
ಹಸು ಎಮ್ಮೆಗಳನ್ನು ಸಾಕಬಾರದು
ಚಿನ್ನದ ಆಭರಣಗಳನ್ನು ಧರಿಸಬಾರದು
ನಿಂತ ಮರವನ್ನು ಕಡಿದು ಸೌದೆ ಮಾಡಬಾರದು
ಹಣೆಗೆ ಗಂಧವನ್ನಾಗಲೀ ಕುಂಕುಮವನ್ನಾಗಲೀ ಹಾಕಬಾರದು

(ಚಿಣ್ಣಪ್ಪ ೧೯೭೪, ೫೦೨-೫೦೩).

ಹೆಗ್ಗಡೆಗಳು, ಐರಿಗಳು ಮತ್ತಿತರರು ಮಾತಾಡುವ ಭಾಷೆ, ಅನುಸರಿಸುವ ಸಂಸ್ಕೃತಿಗೂ, ಉಡುಗೆ-ತೊಡುಗೆಗಳಿಗೂ ಕೊಡವರು ಅನುಸರಿಸುವ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆಗಳಿಗೂ ಏನೊಂದು ವ್ಯತ್ಯಾಸವಿಲ್ಲ. ಹೆಗ್ಗಡೆಗಳು ಕೊಡವರಂತೆ ಬರೇ ಕೃಷಿಕರಾದರೆ, ಐರಿಗಳು ಕೃಷಿಯೊಂದಿಗೆ ಮರ ಹಾಗೂ ಕಬ್ಬಿಣಗಳನ್ನು ಉಪಯೋಗಿಸಿ ಕೆಲಸ ಮಾಡುತ್ತಿದ್ದ ಕುಶಲ ಕರ್ಮಿಗಳು. ಕೊಡಗಿನ ಕಲಾಸಂಸ್ಕೃತಿಯ ಭಾಗವಾದ ಕೊಡಗಿನ ಪ್ರಾಚೀನ ಮನೆಗಳಾದ “ಐನ್‌ಮನೆ”, “ಕೈಮಡ”ಗಳ (ಕೊಡಗಿನ ಜನರ ದೈವಸ್ಥಾನಗಳು) ವಿನ್ಯಾಸಗಳು ಕುಶಲಕರ್ಮಿಗಳಾದ ಐರಿಗಳದ್ದೇ. ಹಾಗೆಯೇ ಕೊಡಗಿನ “ಪೀಚೆಕತ್ತಿ, ಒಡಿಕತ್ತಿ” ಮುಂತಾದ ಸಾಂಪ್ರದಾಯಿಕ ಕತ್ತಿಗಳನ್ನು ವೈಶಿಷ್ಟ್ಯಪೂರ್ಣವಾದ ವಿನ್ಯಾಸಗಳಿಗಂದ ಕೊಡಗಿನ ಕಲಾ ಶ್ರೀಮಂತಿಕೆಯ ಸೊಗಡನ್ನು ನೀಡಿದವರೇ ಐರಿಗಳು. ಅಮ್ಮ ಕೊಡವ, ಹೆಗ್ಗಡೆ, ಮುಕ್ಕಾಟಿ (ಕರ್ಜೆನ್‌ವೆನ್ ಎನ್ನುವ ಅಡಳಿತಗಾರ -ವಿದ್ವಾಂಸ ಇವರನ್ನು ‘ಮಿನಿಯಲ್ ಬ್ರಾಹ್ಮಣ’ ಎಂದು ಕರೆದಿದ್ದಾನೆ) ಹಾಗೂ ಕೊಡವರು ಲಿಂಗರಾಜೇಂದ್ರನ ೨೫ನೇ “ಹುಕುಂ”ನ ಪ್ರಕಾರ “ತೆರಿಗೆ ವಿನಾಯಿತಿ ಗಳಿಸಿದ ಜಾತಿಗಳಾಗಿದ್ದವು” (ಲಿಂಗರಾಜೇಂದ್ರ ೧೯೧೧, ೨೨-೨೪). ಜಾತಿಗಳ ಆಧಾರದ ಮೇಲೆ ಮಿಕ್ಕುಳಿದ ಜಾತಿಗಳಿಗೆ ಲಿಂಗರಾಜನ ‘ಹುಕುಂ’ ತೆರಿಗೆ ಹೊರಿಸಿದ್ದನ್ನು ಗಮನಿಸಿದರೆ ಅದರಿಂದ ವಿನಾಯಿತಿ ಪಡೆದ ಜಾತಿಗಳು ಸಮಾಜದಲ್ಲಿ ಪ್ರಭಾವಿ ಸ್ಥಾನಮಾನವನ್ನು ಹೊಂದಿರುವುದನ್ನು ಕಂಡುಕೊಳ್ಳಬಹುದು. ಬದಲಾದ ರಾಜಕೀಯ ಪರಿಸ್ಥಿತಿಯಿಂದ ಉದ್ಭವಿಸಿದ ಬದಲಾದ ಮೌಲ್ಯಗಳು ಕೊಡವೇತರ ಜಾತಿಗಳು “ಕೀಳಾಗಿ” ಇರಲೇಬೇಕೆಂಬ ಮತ್ತು ಅದು ಶ್ರೇಣೀಕೃತ ವೈದಿಕ ವ್ಯವಸ್ಥೆ ಒಪ್ಪಿಕೊಂಡ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎನ್ನುವ ಏಕಸೂತ್ರದಲ್ಲೇ ಆಗಬೇಕೆಂಬ ತೀರ್ಮಾನ ಕಂಡುಕೊಂಡದ್ದನ್ನು ಚಿಣ್ಣಪ್ಪನವರ ಪಟ್ಟೋಲೆ ಪಳಮೆಯಲ್ಲಿ ನಾವು ನೋಡಬಹುದು.

ಪಟ್ಟೋಲೆ ಪಳಮೆಯಲ್ಲಿ ಎಲ್ಲೂ ನಮೂದಿಸದ “ಕೆಂಬಟ್ಟಿಗಳು” ಕೊಡಗಿನ ಮೂಲನಿವಾಸಿಗಳು, ಅವರ ಭಾಷೆಗೂ, ಆಚರಿಸುವ ಸಂಪ್ರದಾಯಗಳಿಗೂ, ರೀತಿ-ನೀತಿ-ಸಂಸ್ಕೃತಿಗೂ, ಒಕ್ಕಗಳಿಗೂ ಹಾಗೂ ಅಮ್ಮ ಕೊಡವ, ಹೆಗ್ಗಡೆ, ಕೊಡವ, ಐರಿ ಮತ್ತಿತರರು ಆಡುವ ಭಾಷೆಗೂ, ಆಚರಿಸುವ ಸಂಸ್ಕೃತಿಗೂ, ಒಕ್ಕಗಳಿಗೂ ಏನೊಂದು ವ್ಯತ್ಯಾಸವಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಕಾಲ ಘಟ್ಟಗಳಲ್ಲಿ, ಬೇರೆ ಬೇರೆ ಹಿನ್ನಲೆಯಲ್ಲಿ “ಕೊಡಗು” ಎಂದು ನಾವು ಗುರುತಿಸುವ ಭೌಗೋಳಿಕ ಪ್ರದೇಶಕ್ಕೆ ಬಂದು ನೆಲೆ ನಿಂತ ಕೆಂಬಟ್ಟಿಯೇತರ ಪ್ರಬಲ ಸಮುದಾಯಗಳು ಇಲ್ಲಿನ ಮೂಲನಿವಾಸಿಗಳಾದ ಕೆಂಬಟ್ಟಿಯವರ ಭಾಷೆ ಮತ್ತು ಸಾಂಸ್ಕೃತಿಕ ಇತಿಹಾಸವನ್ನೇ ಅಪಹರಿಸಿದರು. ಸಂವಿಧಾನ ಮಾಡಿರುವ ಯಾವುದೇ ಸವಲತ್ತುಗಳು ಕೆಂಬಟ್ಟಿ ದಲಿತರಿಗೆ ಸಿಕ್ಕಿಲ್ಲ. ೧೯೭೪ರಿಂದಲೂ ಅವರು ತಮ್ಮನ್ನು “ಪರಿಶಿಷ್ಟ ಜಾತಿಯ” ಪಟ್ಟಿಗೆ ಸೇರಿಸಬೇಕು ಎನ್ನುವ ಅವರ ಬೇಡಿಕೆಯು ಇಂದಿಗೂ ಅರಣ್ಯರೋಧನವಾಗಿದೆ. ಭೂಮಾಲೀಕತ್ವ ಹೊಂದಿದ ಈ ಬಲಿಷ್ಠ ಸಮುದಾಯಗಳು ತಮ್ಮ ಪಿತ್ರಾರ್ಜಿತ ಆಸ್ತಿಯೆಂದು ದೊಡ್ಡ ಗಂಟಲಲ್ಲಿ ಫೋಷಿಸಿಕೊಳ್ಳುವ “ಜಮ್ಮ” ಭೂಮಿಯಲ್ಲಿ (ಕೊಡಗಿನ ಪ್ರಬಲಜಾತಿಗಳ ಭೂಹಿಡುವಳಿಯನ್ನು ಜಮ್ಮ ಎಂದು ಕರೆಯುತ್ತಾರೆ) ಕೆಂಬಟ್ಟಿಗಳನ್ನು ಗುಲಾಮರನ್ನಾಗಿ ಅರ್ಥಾತ್ “ಭೂಮಿ ಜಮ್ಮದಾಳು”ಗಳನ್ನಾಗಿ ಮಾಡಿರುವ ಸಂಗತಿಯು ಪಟ್ಟೋಲೆ ಪಳಮೆ “ಅಧಿಕೃತಗೊಳಿಸಿರುವ” ಮಾಹಿತಿಗಳನ್ನು ಪುಷ್ಠೀಕರಿಸುವುದಿಲ್ಲ (ವಿಜಯ್ ಪೂಣಚ್ಚ ೨೦೦೦, ೩೬-೪೯).

ಪಟ್ಟೋಲೆ ಪಳಮೆಯು ಬಾಯಿಂದ ಬಾಯಿಗೆ ಹರಿದು ಬಂದ ಮಾತನ್ನೊಳಗೊಂಡ ಕೃತಿ. ಬಲಿಷ್ಠ ಜಾತಿಗಳ ಭೂ ಹಿಡುವಳಿದಾರರು ಭೂರಹಿತ ಸಾಂಪ್ರದಾಯಿಕ ಆಳುಗಳನ್ನು ಮತ್ತು ಅವರ ಕುಟುಂಬಗಳನ್ನು ಶೋಷಣೆ ಮಾಡಿದ್ದನ್ನಾಗಲಿ ಅಥವಾ ಆ ಶೋಷಣೆಯನ್ನು ಒಂದೇ ಬಾರಿಗೆ ದೃಢೀಕರಿಸುವ ಪ್ರಬಲ ಸಮುದಾಯದ ಸಂಸ್ಕೃತಿಯ ಪರಿಚಯನ್ನಾಗಲಿ ಅಥವಾ ಕೊಡಗಿನ ಜಾತಿ ಸಂಕೀರ್ಣಗಳನ್ನು ಪಟ್ಟೋಲೆ ಪಳಮೆಯಲ್ಲಿ ಏಕೆ ಹೊರಬರಲಿಲ್ಲ ಎನ್ನುವುದು ಇಲ್ಲಿ ಮುಖ್ಯ ಪ್ರಶ್ನೆಯಾಗುತ್ತದೆ. “ಕೊಡಗು” ಎನ್ನುವ ಗ್ರಹಿಕೆಯನ್ನು ಸ್ವಾತಂತ್ಯ್ರೋತ್ತರ ದಿನಗಳಲ್ಲಿ ಐ.ಎಂ. ಮುತ್ತಣ್ಣ, ಬಿ.ಡಿ. ಗಣಪತಿ, ಕೆ.ಕೆ. ಸುಬ್ಬಯ್ಯ, ಎಂ.ಪಿ. ಕಾರಿಯಪ್ಪ, ಪೊನ್ನಮ್ಮ, ಕಾರಿಯಪ್ಪ ಮತ್ತಿತರರು “ಕೊಡವ” ಶಬ್ದದೊಂದಿಗೆ ಸಮೀಕರಿಸಿ ಸಾರಿ, “ಕೊಡಗೆಂದರೆ ಕೊಡವರು, ಕೊಡವರೆಂದರೆ ಕೊಡಗು” ಎನ್ನುವ ಅಪಕ್ವ ಸಿದ್ಧಾಂತವನ್ನು ಜನಪ್ರಿಯಗೊಳಿಸಿದರು (ಗಣಪತಿ ೧೯೬೭; ಮುತ್ತಣ್ಣ ೧೯೫೩, ೧೩; ಸುಬ್ಬಯ್ಯ ೧೯೭೮, ೧೩೧; ಎಂ.ಪಿ.ಕಾರಿಯಪ್ಪ ಮತ್ತು ಪೊನ್ನಮ್ಮ ಕಾರಿಯಪ್ಪ ೧೯೮೧,೯). ಸ್ವಾತಂತ್ರ್ಯೋತ್ತರ ಬರಹಗಾರರಿಗಿಂತ ಪೂರ್ವದಲ್ಲೆ ಚಿಣ್ಣಪ್ಪನವರ ಗ್ರಹಿಕೆ ಕೂಡ ಇದೇ ಅಂಶವನ್ನು ಒಳಗೊಂಡಿತ್ತು. ಈ ರೀತಿಯ ಗ್ರಹಿಕೆಗಳು ಕೊಡಗಿನ “ಸಾಂಸ್ಕೃತಿಕ ವೈಭವವನ್ನು” ಘಂಟಾಘೋಷವಾಗಿ ಸಾರಲು ಕಾರಣವಾಯಿತು. ಇಲ್ಲಿ ಚಿಣ್ಣಪ್ಪನಂಥವರು ಬಹಳ ಪ್ರಯಾಸದಿಂದ ಸಾಮಾನ್ಯೀಕರಿಸಿದ “ಕೊಡಗರು” ಎನ್ನುವ ಸಮುದಾಯ ಮಾತ್ರ ನಾವು ಹೇಳುವ ಸಂಸ್ಕೃತಿಯ ಚಂದದ ಹಾಗೂ ಕರಾಳ ಮುಖಕ್ಕೆ ಕನ್ನಡಿಯಾಗುವುದಿಲ್ಲ. ಕೊಡಗಿನೊಳಗೆ ಬಹುಮುಖೀ ಸಂಸ್ಕೃತಿಯು ಪ್ರಬಲವಾಗಿತ್ತು. ಕೊಡಗರಲ್ಲದ ಅಥವಾ ಕೊಡ ಭಾಷೆ ಮಾತಾಡದ, ಆದರೆ ಕೊಡಗಿನ ಸಂಸ್ಕೃತಿಯ ಬೇರುಗಳಾದ ಶ್ರಮಿಕ ವರ್ಗದವರನ್ನೂ ಒಳಗೊಂಡ, ಭೂಸಂಬಂಧೀ ಸಂಪ್ರದಾಯಗಳನ್ನು ಕಾರ್ಯಗತಗೊಳಿಸುವ ಹಾಗೂ ಪ್ರಬಲ ಸಮುದಾಯಗಳ ಹಬ್ಬದ ದಿನಗಳಲ್ಲಿ ಬಣ್ಣ ಹಾಕಿಕೊಂಡೋ, ವೇಷ ತೊಟ್ಟುಕೊಂಡೋ ಅಥವಾ ಮಾಲೀಕರ ಹುಟ್ಟು, ಮದುವೆ, ಸಾವುಗಳಲ್ಲಿ ಡೋಲು ಬಡಿದುಕೊಂಡೋ ಅಥವಾ ಮಾಲೀಕರ ಭೂ-ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು “ಗುಳಿಕ”ನಾ (ಕುಳಿಯ)ಗಿಯೋ, “ಚೌಂಡಿ”ಯಾಗಿಯೋ, “ಪಾಷಾಣ ಮೂರ್ತಿ”ಯಾಗಿಯೋ ಜೀವಂತ ಕೋಳಿಗಳ ಕತ್ತನ್ನು ಕಚ್ಚಿ ರಕ್ತ ಹೀರುತ್ತಲೋ ಅಥವಾ ಕೊಡಗರ ಪ್ರೀತಿಯ ಪ್ರಾಣಿಯಾದ ಹಂದಿಯ ಕತ್ತನ್ನು ಕುಯ್ದ ನಂತರ ಅದರ ರಕ್ತವನ್ನು ನೆಕ್ಕುತ್ತಲೋ ಊರ ದೇವರ ಹೆಸರಲ್ಲಿ, ಸಂಸ್ಕೃತಿಯ ಹೆಸರಲ್ಲಿ, ಅದೃಶ್ಯ ಶಕ್ತಿಗಳ ಹೆಸರಲ್ಲಿ ಜೀವನವನ್ನು ಯಜಮಾನಿಕೆಯ ಸಂಸ್ಕೃತಿಗೆ ಮೀಸಲಿಟ್ಟ ಜನರ ನೋವು-ನಲಿವುಗಳು ಪಟ್ಟೋಲೆ ಪಳಮೆಯಲ್ಲಿ ಕಾಣ ಸಿಗುವುದಿಲ್ಲ. ಇದಕ್ಕೆ ಬದಲಾಗಿ “ಮದುವೆಗೆ ಮೇಲಕ್ಟ್ಟು ಕಟ್ಟಿದ ಮೇಲೆಯೂ, ಕಾರಣ ತೆರೆ ಕಟ್ಟುವ ದಿವಸವೂ, ಈ ತರದ ಶೂದ್ರರು ನೆಲ್ಲಕ್ಕಿ ನಡುಬಾಡೆಗೆ ಬರಬಹುದು. ಆ ಮೇಲೆ ಶುದ್ಧ ಮಾಡುವರು” ಎಂದು ಪಟ್ಟೋಲೆ ಪಳಮೆ ಹೇಳುತ್ತದೆ. ಚಿಣ್ಣಪ್ಪನವರ ಪಟ್ಟೋಲೆ ಪಳಮೆಗೆ “ಒಕ್ಕದ” (ಕೊಡಗಿನ ಅವಿಭಕ್ತ ಕುಟುಂಬವನ್ನು “ಒಕ್ಕ” ಎಂದು ಕರೆಯುತ್ತಾರೆ) ಗತ್ತುಗಾರಿಕೆಗೆ ನಡೆಸುವ “ಕಾರಣ ತೆರೆ”ಯ ಎಲ್ಲಾ ಕೆಲಸಗಳನ್ನು ಮಾಡಲು, ವೇಷ, ಬಣ್ಣ ತೊಟ್ಟು ತಮ್ಮ ಪಿತೃಗಳಿಗೆ ಸದ್ಘತಿ ದೊರಕಿಸಲು ಪಟ್ಟೋಲೆ ಪಳಮೆಯು ಘೋಷಿಸುವ “ಶೂದ್ರರು” ಬೇಕು. ಆ “ಶೂದ್ರ”ರನ್ನು ದುಡಿಸಿಕೊಂಡು ಮನೋರಂಜನೆ ಪಡೆದ ನಂತರ “ಶುದ್ಧ” ಮಾಡಿ, ಹೊರಗಟ್ಟುವುದು ಮುಖ್ಯವಾಯಿತೇ ಹೊರತು ಅವರಿಗೆ ಕೊಡಗಿನ ಚರಿತ್ರೆಯಲ್ಲಾಗಲಿ ಅಥವಾ ಸಂಸ್ಕೃತಿಯ ಅಟ್ಟಹಾಸದಲ್ಲಾಗಲಿ ಪಾಲು ಪಡೆಯಲು ಅಲ್ಲ ಎಂಬುದನ್ನು ಅಧಿಕೃತಗೊಳಿಸುವ ಕೆಲಸ ಪಟ್ಟೋಲೆ ಪಳಮೆಯಲ್ಲಾಗಿದೆ.

ಪಟ್ಟೋಲೆ ಪಳಮೆಯಲ್ಲಿ ಚಿಣ್ಣಪ್ಪನವರು ಮೇಲಿಂದ ಮೇಲೆ “ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ಮೇಂಛ, ಚಾಂಡಾಳ” ಎನ್ನುವ ಶಬ್ದಗಳನ್ನು ಬಳಸಿರುವುದನ್ನು ನೋಡಬಹುದು. ಕೊಡಗಿನ ಜಾತಿ ಪದ್ಧತಿಗಳ ಬಗ್ಗೆ ಅವೈದಿಕ ಮೂಲಕ ಆಕರಗಳಿಂದ ಹೊರಬಂದ ವಿಶ್ಲೇಷಣೆ/ವಿವರಗಳನ್ನು ನೀಡದೆ, ಕೊಡಗಿನ ಮಣ್ಣಿಗೆ ತೀರಾ ಪರಕೀಯವಾದ ವೈದಿಕ “ಟೂಲ್‌ಗಳನ್ನು” ಬಳಸಿ, ಕೃತಿಯುದ್ದಕ್ಕೂ ಗೊಂದಲಗಳನ್ನು ಸೃಷ್ಟಿಸಿಕೊಂಡಿರುವ ವಿಚಾರಗಳು ಅವರ ಬರವಣಿಗೆಯಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಈಗಾಗಲೇ ನಾನು ಪಟ್ಟೋಲೆ ಪಳಮೆಯನ್ನು ಜಾತಿ-ಪದ್ಧತಿಗೆ ಸಂಬಂಧಿತವಾಗಿ ಉದ್ಧರಿಸಿದ ಹಿನ್ನಲೆಯಲ್ಲಿ, ಚಿಣ್ಣಪ್ಪನವರು ಕೊಡವರ “ಕ್ಷತ್ರಿಯತನದ” ಬಗ್ಗೆ ನಮಗೆ ತಿಳಿ ಹೇಳುವ ಇನ್ನೂ ಕೆಲವು ಅಂಶಗಳನ್ನು ವಿವರಿಸುವವನಿದ್ದೇನೆ. ಅವರ ಪ್ರಕಾರ

ಸ್ಕಾಂದ ಪುರಾಣದಲ್ಲಿ ಅಡಕವಾಗಿರುವ ಕಾವೇರಿ ಪುರಾಣದಲ್ಲಿ ಹೇಳುವ ಮೇರೆಗೆ ಮತ್ಸ್ಯದೇಶದ ರಾಜನಾದ ಸಿದ್ಧಾರ್ಥನ ಕಿರಿಮಗ ಚಂದ್ರವರ್ಮನು ದಕ್ಷಿಣ ದೇಶದ ಎಲ್ಲಾ ಯಾತ್ರಾಸ್ಥಳಗಳನ್ನು ಸಂಚರಿಸಿ ಕೊನೆಗೆ ಕಾವೇರಿಯು ಹುಟ್ಟುವ ಬ್ರಹ್ಮಗಿರಿಗೆ ಬಂದು ಪಾರ್ವತಿಯನ್ನು ಕುರಿತು ತಪಸ್ಸು ಮಾಡಲು ಪಾರ್ವತಿಯು ಪ್ರಸನ್ನಳಾಗಿ ಅವನಿಗೆ ಒಂದು ಕುದುರೆಯನ್ನು, ಒಂದು ಕತ್ತಿಯನ್ನು, ಒಂದು ಸೈನ್ಯವನ್ನು ದಯಪಾಲಿಸಿ ಈ ದೇಶದಲ್ಲಿರುವ ಮ್ಲೇಂಛರನ್ನು ಗೆದ್ದು ಇಲ್ಲಿ ರಾಜ್ಯ ಭಾರವನ್ನು ಮಾಡಬೇಕಾಗಿ ವರವನ್ನಿತ್ತಳು. ತನ್ನ ಪಟ್ಟಕ್ಕೆ ರಾಣಿಯನ್ನು ಕೇಳಲು ತನ್ನ ಶಕ್ತಿಯಿಂದ ಸೃಷ್ಠಿಸಲ್ಪಟ್ಟ ಒಬ್ಬ ಶೂದ್ರ ಕನ್ನಿಕೆಯನ್ನು ಕೊಟ್ಟಳು. ಈ ಶೂದ್ರ ಸ್ತ್ರೀಯಿಂದ ಹನ್ನೊಂದು ಮಂದಿ ರಾಜಕುಮಾರರು ಹುಟ್ಟಿ ಕ್ಷತ್ರಿಯರಂತೆ ಬೆಳೆದು ವಿದರ್ಭ ದೇಶದ ರಾಜನಿಗೆ ಶೂದ್ರ ಸ್ತ್ರೀಯರಲ್ಲಿ ಹುಟ್ಟಿದ ನೂರು ಮಂದಿ ರಾಜಕುಮಾರಿಯರನ್ನು ಮದುವೆ ಮಾಡಿಕೊಂಡರು. ಇವರಿಗೆ ನೂರು ಮಂದಿ ಮಕ್ಕಳು ಹುಟ್ಟಿ ಇವರ ಸಂತಾನದವರು ದೇಶವನ್ನೆಲ್ಲಾ ಆಕ್ರಮಿಸಿ ಬೆಟ್ಟಗುಡ್ಡಗಳನ್ನು ಉಗುರುಗಳಿಂದ ಕೆರೆದು ಮಟ್ಟ ಮಾಡಿ ವ್ಯವಸಾಯಕ್ಕೆ ತಂದರು. ಕಾವೇರಿಯೇ ಪಾರ್ವತಿಯ ಅವತಾರವೆಂದು ಚಂದ್ರವರ್ಮನು ತನ್ನ ಮಕ್ಕಳಿಗೆ ತಿಳಿಸಿ ತನ್ನ ಹಿರಿಯ ಮಗನಾದ ದೇವಕಾಂತನಿಗೆ ಪಾರ್ವತಿಯು ಸ್ವಪ್ನದಲ್ಲಿ ಕಂಡು ತನ್ನ ಮಗಳ ವಂಶದಲ್ಲಿ ಉತ್ಪತ್ತಿಯಾದ ಸಮಸ್ತರೂ ಬಲಮುರಿಗೆ ಹೋಗಿ ತನ್ನ ಆಗಮನವನ್ನು ಕಾದರಿಬೇಕೆಂದು ಹೇಳಿ ಅಂತರ್ಧಾನಳಾದಳು. ಅದೇ ರೀತಿ ದೇವಕಾಂತನು ತನ್ನ ತಮ್ಮಂದಿರೇ ಮೊದಲಾದ ಸ್ವಜನರನ್ನು ಕೂಡಿದವನಾಗಿ ಬಲಮುರಿಯಲ್ಲಿ ಹೊಳೆಯಾಗಿ ಹರಿದು ಬರುವ ಕಾವೇರಿಯ ನೀರಿನಲ್ಲಿ ಸ್ನಾನವ ಮಾಡಲು ಸ್ತ್ರೀಯರು ಹಿಂದಣ ನೆರಿಗೆಯುಳ್ಳವರಾಗಿ ಆದರು (ಚಿಣ್ಣಪ್ಪ ೧೯೭೪, ೧೮-೧೯).

ಈ ಪುರಾಣವನ್ನು ನಮಗೆ ಹೇಳುವ ಮೂಲಕ ಚಿಣ್ಣಪ್ಪನವರು, ಕೊಡಗರೇ ಈ ದೇಶದ ಮುಖ್ಯ ನಿವಾಸಿಗಳಾಗಿರುವುದರಿಂದಲೂ, ಕೊಡಗರ ಹೆಂಗಸರೇ “ಹಿಂದಣ ನೆರಿಗೆಯುಳ್ಳವರಾಗಿರುವುದರಿಂದಲೂ” ಅಂದರೆ ಕೊಡಗಿನ ಮಹಿಳೆಯು ಸೀರೆಯನ್ನುಡುವಾಗ ನೆರಿಗೆಯನ್ನು ಹಿಂದಕ್ಕೆ ಕಟ್ಟುತ್ತಾಳೆ ಎಂದರ್ಥ (ಮಲೆನಾಡು ಮತ್ತು ಕರಾವಳಿಗಳಲ್ಲಿ ಹಿಂದಣ ನೆರಿಗೆ ಕಟ್ಟುವ ಕೃಷಿಕ, ದಲಿತ, ಬುಡಕಟ್ಟು ಸಮುದಾಯಗಳ ಮಹಿಳೆಯರನ್ನು ಈಗಲೂ ನೋಡಬಹುದು).

ಕೊಡಗರೇ ಬ್ರಾಹ್ಮಣರನ್ನು ತಮ್ಮ ಆಚಾರ ವಿಚಾರಗಳಲ್ಲಿ ಸೇರಿಸದೆ ಇರುವುದರಿಂದಲೂ, ಇರು ಚಂದ್ರವರ್ಮನ ವಂಶದವರೆಂದು ಹೇಳುವುದರಲ್ಲಿ ಸಂಶಯವಿಲ್ಲವೆಂದು ತೋರುತ್ತದೆ. ಹೀಗಾಗಿ ಕೊಡಗರು ಉಗ್ರರು. ಆದರೆ ಕೊಡಗು ತಾವು ಕ್ಷತ್ರಿಯರೆಂದು ಹೇಳಿಕೊಳ್ಳುವರು (ಚಿಣ್ಣಪ್ಪ ೧೯೭೪, ೧೯)

ಎಂದು ಚಿಣ್ಣಪ್ಪನವರು ಬರೆದಿದ್ದಾರೆ.

ಚಿಣ್ಣಪ್ಪನವರು ಹೇಳುವ ಪುರಾಣದಲ್ಲಿ “ಶೂದ್ರ ಸ್ತ್ರೀಯಿಂದ” ಹನ್ನೊಂದು ಮಂದಿ ರಾಜಕುಮಾರರು ಮತ್ಸ್ಯ ದೇಶದ ರಾಜಕುಮಾರ ಚಂದ್ರವರ್ಮನಿಗೆ ಹುಟ್ಟಿ “ಕ್ಷತ್ರಿಯರಂತೆ ಬೆಳೆದು” ವಿದರ್ಭ ದೇಶದ ರಾಜನಿಗೆ “ಶೂದ್ರ ಸ್ತ್ರೀಯರಿಗೆ” ಹುಟ್ಟಿದ ನೂರು ಮಂದಿ ರಾಜಕುಮಾರಿಯರನ್ನು ಮದುವೆ ಮಾಡಿಕೊಂಡರು. ಹೀಗೆಲ್ಲಾ ಪುರಾಣವನ್ನು ಆರಂಭ ಮಾಡಿ, ಕೊನೆಗೆ “ಕೊಡಗರು ತಾವು ಕ್ಷತ್ರಿಯರೆಂದು ಹೇಳಿಕೊಳ್ಳುವರು” ಎಂದು ಸಮಾಪ್ತಿ ಮಾಡುತ್ತಾರೆ. ಪಾಂಡಂಡ ಮುತ್ತಣ್ಣ, ಬಿ.ಡಿ. ಸುಬ್ಬಯ್ಯ (ಕಾಕೆಮಾನಿ). ಬಿ.ಡಿ. ಗಣಪತಿ, ಎಂ.ಪಿ. ಕಾರಿಯಪ್ಪ ಮತ್ತು ಪೊನ್ನಮ್ಮ ಕಾರಿಯಪ್ಪ ಅಭಿಪ್ರಾಯಪಡುವ ಸಿಂಧೂ ನಾಗರಿಕತೆಯ ಹರಪ್ಪಾ, ಮೊಹೆಂಜದಾರೋ, ಸಿಥಿಯನ್, ಅರಬ್, ಆರ್ಯೋಸಿಥಿಯನ್, ಸಿಥಿಯೊ-ಡ್ರಾವಿಡಿಯನ್, ಚಾಲುಕ್ಯ, ಕುರ್ದ್ ಇತ್ಯಾದಿ ಮೂಲಗಳನ್ನು ಕೊಡಗರು ಹೊಂದಿದ್ದಾರೆ. (ಮುತ್ತಣ್ಣ ೧೯೩೧, ೯-೨೮; ಗಣಪತಿ ೧೯೬೭, ೩-೭; ಎಂ.ಪಿ.ಕಾರಿಯಪ್ಪ ಮತ್ತು ಪೊನ್ನಮ್ಮ ಕಾರಿಯಪ್ಪ ೧೯೮೧, ೧೨೩-೨೨೪) ಎನ್ನುವ ವಾದಗಳಿಗಿಂತ ಹೆಚ್ಚಾಗಿ ಕೊಡವರು ಯಜ್ಞೋಪವೀತ ಧರಿಸದ್ದರಿಂದ ಅವರು “ದ್ವಿಜರಲ್ಲ” ಎನ್ನುವುದು ಮುಖ್ಯವಾಗಿದೆ.

ಹಿಂದೂ ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೊಡವರು ಅಥವಾ “ಕೊಡಗರು” “ಶೂದ್ರರಾಗಿರುತ್ತಾರೆ” ಹೊರತು ಹಂದಿ ತಿನ್ನುವ “ಬಾಸ್ಟರ್ಡ್ ಕ್ಷತ್ರಿಯರಾಗಲು” ಸಾಧ್ಯವಿಲ್ಲ ಎಂದು ೧೮೭೦ರಲ್ಲಿ ಜಿ. ರಿಕ್ತರರ್ನು ವ್ಯಂಗ್ಯವಾಗಿ ವಿಶ್ಲೇಷಿಸಿರುವುದನ್ನು ನೋಡಬಹುದು (ರಿಕ್ತರ್, ೧೮೭೦, ೧೯೮೭, ೧೧೭). ೧೯೫೨ರಲ್ಲಿ ಆಕ್ಸ್‌ಪರ್ಡ್ ಯುನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿದ ಎಂ.ಎನ್.ಶ್ರೀನಿವಾಸ್ ಅವರ ಮಹತ್ತರವಾದ ಕೃತಿಯಾದ “ದಿ ರಿಲಿಜನ್ ಅಂಡ್ ದಿ ಕೂರ್ಗ್ಸ್ ಆಫ್ ಸೌತ್ ಇಂಡಿಯಾ”ದ ವಿಶ್ಲೇಷಣೆ ಕೂಡ ಗಮನಾರ್ಹವಾದುದು. ಶ್ರೀನಿವಾಸ ಅವರ ಪ್ರಕಾರ, ಕೊಡಗರು “ಯಜ್ಞೋಪವಿತ” ಧರಿಸಿದ್ದರಿಂದ “ದ್ವಿಜರಾಗಲು” ಸಾಧ್ಯವಾಗುವುದಿಲ್ಲ. “ದ್ವಿಜ” ಎಂದು “ಎರಡು ಬಾರಿ ಹುಟ್ಟುವವರು” ಎಂದರ್ಥ. ಯಜ್ಞೋಪವಿತ ಧರಿಸದವರು “ಒಂದು ಬಾರಿ ಹುಟ್ಟಿದರೆ”, ಅದನ್ನು ಧರಿಸುವವರು “ಎರಡು ಭಾರಿ ಹುಟ್ಟಿರುತ್ತಾರೆ” ಎನ್ನುವ ಧಾರ್ಮಿಕ ವಿಶ್ಲೇಷಣೆ ಇಲ್ಲಿ ಮುಖ್ಯವಾಗುತ್ತದೆ. ಇದರ ಬಗ್ಗೆ ಶ್ರೀನಿವಾಸ್ ಅವರು ದೀರ್ಘವಾದ ವಿವರಣೆ ನೀಡಿರುವುದರಿಂದ ನಾನದನ್ನು ಮತ್ತಷ್ಟು ವಿವರಿಸುವ ಅಗತ್ಯವಿಲ್ಲ ಎಂದುಕೊಂಡಿದ್ದೇನೆ. (ಶ್ರೀನಿವಾಸ್ ಎಂ.ಎನ್. ೧೯೫೨, ೧೯೮೯, ೩೩). ಆದ್ದರಿಂದ ಕೊಡವರು ಕ್ಷತ್ರಿಯರಲ್ಲ ಎನ್ನುವ ವಾದ ಸೂಕ್ತವಾಗುತ್ತದೆ.

ಜಾತಿ ಆಧಾರಿತ ಭಾರತೀಯ ಸಮಾಜವು ದೌರ್ಜನ್ಯವನ್ನೇ ಮೂಲಭೂತವಾಗಿಟ್ಟುಕೊಂಡು ಯಾವುದೇ ಬದಲಾವಣೆಯನ್ನು ಒಪ್ಪಿಕೊಳ್ಳದಿರುವುದರಿಂದ ಭಾರತೀಯ ಸಮಾಜ ಎಂದೂ ಬದಲಾಗಲು ಸಾಧ್ಯವಿಲ್ಲ ಎನ್ನುವ ಕಲ್ಪನೆಯೊಂದಿಗೆ ಬೆಳೆದ ವಾದ “ಓರಿಯಂಟಲ್ ಡೆಸ್ಪಾಟಿಸಂ.” ೧೯ನೇ ಶತಮಾನದಲ್ಲಿ ಯುರೋಪಿನ ವಿದ್ವಾಂಸರಿಗೆಲ್ಲಾ ಬಹಳ ಪ್ರಿಯವಾದ ಮತ್ತು ಜನಜನಿತವಾಗಿದ್ದ ಈ ವಾದ ಏಷಿಯಾದ ಇತಿಹಾಸವನ್ನು “ರಚಿಸುವಾಗ” ಬಹಳ ಪರಿಣಾಮಕಾರಿಯಾಗಿ ಅವರ ಮೇಲೆ ಪ್ರಭಾವ ಬೀರಿತು. ಇದೇ ಸಂದರ್ಭದಲ್ಲಿ ಈ ವಿದ್ವಾಂಸರು ಪೌರ್ವಾತ್ಯ (ಓರಿಯಂಟಲ್) ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ (ಓಸಿಡೆಂಟಲ್) ಸಂಸ್ಕೃತಿ ಎಂದು ಎರಡು ಭಾಗಗಳಾಗಿ ಮಾಡಿ ಸಂಸ್ಕೃತಿಯನ್ನು ಅಭ್ಯಾಸ ಮಾಡತೊಡಗಿದರು. ಪೌರ್ವಾತ್ಯ ಸಂಸ್ಕೃತಿಯು “ಆಧ್ಯಾತ್ಮ”ವನ್ನೇ ಮೂಲಭೂತವಾಗಿಟ್ಟುಕೊಂಡು “ಐಹಿಕ” ಅಂಶಗಳನ್ನು ತಿರಸ್ಕರಿಸಿದರೆ, ಪಾಶ್ಚಿಮಾತ್ಯ ಸಂಸ್ಕೃತಿಯು “ಐಹಿಕ” ಮೌಲ್ಯಗಳಿಗೇ ಪ್ರಾಧ್ಯಾನ್ಯತೆಯನ್ನು ಕೊಡುವ ಅಂಶಗಳನ್ನು ಈ ವಿದ್ವಾಂಸರು ಬರೆಯುತ್ತಾರೆ (ಥಾಪರ್ ೧೯೭೯, ೫). ಮೌಲ್ಯಗಳನ್ನು ನಿರ್ಧರಿಸುವಾಗ ದ್ವಂದ್ವತೆಗಳನ್ನು ಈ ಸಂದರ್ಭದಲ್ಲಿ ಕಾಪಾಡಿಕೊಳ್ಳಲಾಯಿತು. ಭಾರತೀಯ ಮೌಲ್ಯಗಳನ್ನು “ಆಧ್ಯಾತ್ಮ”ವೆಂದೂ, ಐರೋಪ್ಯ ಮೌಲ್ಯಗಳನ್ನು “ಐಹಿಕ”ವೆಂದು ವರ್ಗೀಕರಿಸಿ, ಭಾರತವು ಆಧ್ಯಾತ್ಮದ ದೇಶವೆಂದು ಹೇಳುವ ಪ್ರಯತ್ನಗಳಾದವು (ಥಾಪರ್ ೧೯೭೯, ೧೬). ನಂತರದ ದಿನಗಳಲ್ಲಿ ಭಾರತದ ಇತಿಹಾಸವನ್ನು ರೂಪಿಸಲು ಪೌರಾತ್ಯ ಮತ್ತು ಪಾಶ್ಚಿಮಾತ್ಯ ಎಂಬ ವ್ಯತ್ಯಾಸಗಳು ಮಾತ್ರ ಕಾರಣವಾಗದೆ “ಆರ್ಯ” ಮತ್ತು “ಅನಾರ್ಯ” ಎನ್ನುವ ಅಂಶಗಳೂ ಕಾರಣವಾದವು. ಇವೆಲ್ಲವೂ ಐತಿಹಾಸಿಕ ಸತ್ಯಗಳನ್ನು ಅನ್ವೇಷಣೆ ಮಾಡುವ ವೈಜ್ಞಾನಿಕ ಮನೋಧರ್ಮಕ್ಕಿಂತ ರಾಜಕೀಯ ಉದ್ದೇಶಗಳನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ವಸ್ತು ವಿಷಯ ಏನೆಂದರೆ ಬ್ರಿಟಿಷ್ ಪೂರ್ವ ಭಾರತದಲ್ಲಿ ಇವ್ಯಾವುದರ ಕಲ್ಪನೆಯಾಗಲಿ ಅಥವಾ ಅವಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಪರಂಪರೆಯಾಗಲಿ ಇಲ್ಲದಿರುವುದು ಗಮನಾರ್ಹವಾದ ವಿಚಾರವಾಗುತ್ತದೆ (ಥಾಪರ್ ೧೯೭೯,೬).

ಕೊಡಗರು ಕ್ಷತ್ರಿಯರು, ಕ್ಷತ್ರಿಯರೆಂದರೆ ಆರ್ಯರು ಎನ್ನುವ ವಧ ಈ ಸಂದರ್ಭದಲ್ಲಿ ಪ್ರಶ್ನಾರ್ಹವಾಗುತ್ತದೆ. “ಆರ್ಯ ಜನಾಂಗ” ಎನ್ನುವ ಜನಾಂಗೀಯವಾದವೇ ಭಾರತೀಯ ಪರಂಪರೆಗೆ ತೀರಾ ಹೊಸದು. “ಮ್ಲೇಚ್ಛ” ಹಾಗೂ ಅನಾರ್ಯರಿಂದ ಭಿನ್ನ ಎನ್ನಲು ಜ್ಞಾನ ಸಂಪನ್ನರಾದ ಗೌರವಯುತರಾದ ಜನರನ್ನು “ಆರ್ಯ” ಎಂದು ಕರೆಯಲಾಗುತ್ತಿತ್ತು. ಆರ್ಯ ಎನ್ನುವುದು ಭಾಷೆ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿದ ವಿಚಾರವೇ ವಿನಹ ಅದೊಂದು ಜನಾಂಗವಲ್ಲ ಎಂಬುದನ್ನು ವಿದ್ವಾಂಸರು ಈಗಾಗಲೇ ತೀರ್ಮಾನಿಸಿರುವುದರಿಂದ ಅದರ ಮೇಲಿನ ಚರ್ಚೆ ಇಲ್ಲಿ ಅನಗತ್ಯ ಎಂದು ಭಾವಿಸಿದ್ದೇನೆ. ಬೇರೆ ಬೇರೆ ಆಕರಗಳು “ಆರ್ಯತನ” ಆಥವಾ “ಆರ್ಯವರ್ತ” ಅಥವಾ “ಆರ್ಯರ ಭೂಮಿ”ಯನ್ನು ಬೇರೆ ಬೇರೆಯಾಗಿ ವಿಶ್ಲೇಷಿಸುತ್ತವೆ. ಇವೆಲ್ಲವೂ ಭೌಗೋಳಿಕ ಅಂಶಗಳ ಮೇಲೆ ಕೇಂದ್ರಿಕೃತವಾಗಿರುವುದು ಕಂಡುಬರುತ್ತದೆ. ಕೊನೆಯ ವೇದಗಳ ಪ್ರಕಾರ “ಆರ್ಯಾವರ್ತ” ಎಂದರೆ ಗಂಗಾ ಯಮುನಾ ನದಿಯ ಸುತ್ತಲಿನ ಪ್ರದೇಶಗಳು ಮಾತ್ರ. ಈ ಪ್ರದೇಶಗಳನ್ನು ಬಿಟ್ಟು ಮಿಕ್ಕೆಲ್ಲಾ ಪ್ರದೇಶಗಳು “ಮ್ಲೇಚ್ಛ ದೇಶ” ಎಂದು ಕರೆಯಲ್ಪಡುತ್ತಿದ್ದವು. ಈಗಿನ ಬಿಹಾರ ರಾಜ್ಯದ ಪಾಟ್ನ, ಗಯಾ, ಭಾಗಲ್ಪುರ ಹಾಗೂ ಮೊಂಗ್ಲಾರ್ ಜಿಲ್ಲೆಗಳು ವೇದಗಳಲ್ಲಿ ಅಂಗದೇಶವೆಂದು ಗುರುತಿಸಲ್ಪಡುತ್ತಿತ್ತು. ಮಗಧ ಮತ್ತು ಅಂಗ ದೇಶಗಳ ಜನರು “ಸಂಕೀರ್ಣ ಜಾತಿ” ಅರ್ಥಾತ್ ಮಿಶ್ರ ಜಾತಿಗಳಿಗೆ ಸೇರಿದವರಾದ್ದರಿಂದ ಅವರು ಆರ್ಯರಾಗಲು ಅನರ್ಹರಾಗಿದ್ದರು ಎಂದು ತಿಳಿದು ಬರುತ್ತದೆ. ಜೈನ ಪುರಾಣಗಳ ಪ್ರಕಾರ “ದೋ ಅಬ್” ಪ್ರದೇಶದ ಪೂರ್ವಭಾಗ, ಈಗ ರಾಜಮಹಲ್ ಎಂದು ಗುರುತಿಸುವ ಸ್ಥಳ ಆರ್ಯಾವರ್ತವಾಗುತ್ತದೆ. ಮನುವಿನ ದಿನಗಳಲ್ಲಿಒ ಆರ್ಯವರ್ತವು ವಿಂಧ್ಯ ಪರ್ವತದ ಉತ್ತರಕ್ಕಿದ್ದ ಸ್ಥಳ ಅಂದರೆ ಈಗಿನ ಉತ್ತರಭಾರತವನ್ನು ಹೆಚ್ಚು ಕಡಿಮೆ ಹೊಂದಿತ್ತು ಎಂದು ಇತಿಹಾಸಕಾರ್ತಿ ರೋಮಿಲಾ ಥಾಪರ್ ಬರೆದಿದ್ದಾರೆ (ಥಾಪರ್ ೧೯೭೯, ೬-೭).

೧೮ನೇ ಶತಮಾನದಲ್ಲಿ ಯೂರೋಪಿಯನ್ ವಿದ್ವಾಂಸರು ಭಾರತದ ಇತಿಹಾಸದ ಬಗ್ಗೆ ಕಾಳಜಿ ತೋರಿಸುತ್ತಿದ್ದ ಸಂದರ್ಭದಲ್ಲಿ ಅವರು ಆಕರಗಳಿಗಾಗಿ ಬ್ರಾಹ್ಮಣ ಅರ್ಚಕರುಗಳನ್ನು ಹಾಗೂ ಪುರೋಹಿತರನ್ನು ಆಶ್ರಯಿಸುತ್ತಿದ್ದರು. ಆ ಪೂಜಾರಿಗಳು, ಪುರೋಹಿತರು ಸಾಮಾನ್ಯವಾಗಿ ಸಂಸ್ಕೃತ ಗ್ರಂಥಗಳ ಆಧಾರದ ಮೇಲೆ “ಭಾರತೀಯ ಪರಂಪರೆ”ಯನ್ನು ಸೃಷ್ಠಿಸುವ ಮೂಲಕ ಯುರೋಪಿನ ವಿದ್ವಾಂಸರಿಗೆ ತೀರಾ ಹತ್ತಿರವಾದರು. ಆದ್ದರಿಂದ ಪ್ರಾಚೀನ ಭಾರತದ ಇತಿಹಾಸ ಬರೆಯಲು ಸಂಸ್ಕೃತ ಗ್ರಂಥಗಳು ಕಾರಣೀಭೂತವಾದವು. ಆ ಗ್ರಂಥಗಳ ವ್ಯಾಖ್ಯಾನ ಮಾಡುವಾಗಲೂ ಬ್ರಾಹ್ಮಣ ಪುರೋಹಿತರು ಮಹತ್ತರ ಪೊಆತ್ರ ವಹಿಸಿದರು. ಧರ್ಮಶಾಸ್ತ್ರಗಳ ರಚನೆ ಹಾಗೂ ವ್ಯಾಖ್ಯಾನ ಕೂಡ ಬ್ರಾಹ್ಮಣ ಬುದ್ಧಿಜೀವಿಗಳಿಂದಲೇ ಆಯಿತು. ಆದ್ದರಿಂದ ಒಂದು ದೇಶದ ಚರಿತ್ರೆ ಬರೆಯುವಾಗ ಕೂಡ ಐತಿಹಾಸಿಕ ಅಂಶಗಳನ್ನು ಬದಿಗೊತ್ತಿ ಬ್ರಾಹ್ಮಣೀಕೃತ ವ್ಯಾಖ್ಯಾನಗಳನ್ನು ಅವಲಂಬಿಸುವ ಅನಿವಾರ್ಯತೆಗಳು ಉಂಟಾದವು. (ಥಾಪರ್ ೧೯೯೦, ೧೮-೧೯). ತಾತ್ವಿಕವಾಗಿ ಚಾತುವರ್ಣ್ಯಗಳಿದ್ದರೂ ವಾಸ್ತವಿಕ ಭಾರತದ ಉಪಖಂಡದಲ್ಲಿ ಪರಸ್ಪರ ಸೇರದ, ಊಟ ಮಾಡದ, ಮದುವೆಯಾಗದ ಸಾವಿರಾರು ಜಾತಿಗಳಿವೆ. ಇತಿಹಾಸಕಾರ ಡಿ.ಡಿ.ಕೋಸಾಂಬಿ ಅಭಿಪ್ರಾಯ ಪಡುವ ಹಾಗೇ ಬ್ರಾಹ್ಮಣ ಅಕರಗಳಿಗೆ ಐರೋಪ್ಯ ವಿದ್ವಾಂಸರು ಜೋತುಬಿದ್ದುದರಿಂದ ಅವರಿಗೆ ಪುರಾಣ ಮತ್ತು ವಾಸ್ತವಿಕತೆಯ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಸಾಮರ್ಥ್ಯವಿಲ್ಲವಾಯಿತು. (ಕೋಸಾಂಬಿ ೧೯೬೨-೬೩, ೧೭೭-೨೦೨; ಸೈಯ್ಯದ್ ೧೯೮೫, ೧-೨; ಕೋಸಾಂಬಿ ೧೯೯೧, ೧-೨೫). ಹಾಗಾಗಿ ಭಾರತ ಉಪಖಂಡದ ಶೇ. ೮೫ಕ್ಕೂ ಹೆಚ್ಚಿನ ಜನರು ಬ್ರಾಹ್ಮಣೀಕೃತ ಪರಧಿಯೊಳಗೆ ಬಾರದಿದ್ದರೂ ಅವರನ್ನು ಚರಿತ್ರೆಯ, ಸಂಸ್ಕೃತಿಯ ಹೆಸರಲ್ಲಿ “ಹೈಜಾಕ್” ಮಾಡಲಾಯಿತು. ಕೊಡಗಿನ ಚರಿತ್ರೆ ರಚನೆಯೂ ಈ ಸಂದರ್ಭದಲ್ಲಿ ಅಪವಾದವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಪಟ್ಟೋಲೆಪಳಮೆಯ ಕೃತಿಕಾರ ಕೂಡ ಈ ಬಗೆಯ “ಟ್ರಾಪ್‌ಗೆ” ಒಳಗಾಗಿರುವುದು ಆಶ್ಚರ್ಯವೆಂದೆನ್ನಿಸುವುದಿಲ್ಲ.