ಸಿರಿ

೧೯೫೨ರ ಸುಮಾರಿಗೆ ಶೀನಪ್ಪ ಹೆಗಡೆಯವರು ಗದ್ಯದ ರೂಪದಲ್ಲಿ “ಸಿರಿ”ಯನ್ನು ರೂಪಿಸಿದರು. ೧೯೭೩ರಲ್ಲಿ ಕೆ.ಜೆ. ಶೆಲ್ಪಕಡಂದಲೆ ಅವರು ‘ಸಿರಿ’ಯನ್ನು ಕನ್ನಡದಲ್ಲಿ ನಿರೂಪಿಸಲು ಪ್ರಯತ್ನವೊಂದನ್ನು ಮಾಡಿದರು. ೧೯೭೫ರಲ್ಲಿ ಪೀಟರ್ ಜೆ.ಕ್ಲಾಸ್ ಅವರು ಬರೆದ ದಿ ಸಿರಿ ವಿಥ್ ಆಯಂಡ್ ರಿಚುಯಲ್ : ಎ ಮಾಸ್ ಪೊಸೆಷನ್ ಕಲ್ಟ್ ಆಫ್ ಸೌತ್ ಇಂಡಿಯಾ ಎನ್ನುವ ಕೃತಿ, ಹಾಗೂ ಅದರ ಅನುವಾದ (ಎ.ವಿ.ನಾವಡ ಹಾಗೂ ಸುಭಾಶ್ಚಂದ್ರ) ಈ ನಿಟ್ಟಿನಲ್ಲಿ ಒಂದು ಮೈಲಿಗಲ್ಲು. ೧೯೮೪ರಲ್ಲಿ ಎನ್.ವಿ.ರಾವ್ ಅವರು ‘ಸಿರಿ’ ಯನ್ನು ಕಾದಂಬರಿಯಾಗಿಸುವ ಪ್ರಯತ್ನ ಮಾಡಿದ್ದಾರೆ. ೧೯೮೫ರಲ್ಲಿ ಬಿ.ಎ. ವಿವೇಕರೈ ಅವರ “ತುಳು ಜನಪದ ಸಾಹಿತ್ಯ”ವು ಸಿರಿಯ ಬಗ್ಗೆ ಮಹತ್ವಪೂರ್ಣವಾದ ವಿವರಗಳನ್ನು ನೀಡುತ್ತದೆ. ೧೯೯೭ರಲ್ಲಿ ಅಮೃತ ಸೋಮೇಶ್ವರ ಅವರು, ಹಾಗೆಯೆ ೧೯೯೯ರಲ್ಲಿ ಎ.ವಿ.ನಾವಡ ಅವರು ಈ ಕುರಿತಂತೆ ಸಿರಿಯ ಬಗೆಗಿನ ಭಿನ್ನ ಬಗೆಯ ಪಾಡ್ದಾನಗಳನ್ನು ಪ್ರಕಟಿಸಿದ್ದಾರೆ. ೧೯೯೯ರಲ್ಲಿ ಲಾರಿಹಾಂಕೊ ಮತ್ತಿತರ ವಿದ್ವಾಂಸರು ಗೋಪಾಲನಾಯ್ಕರಿಂದ ಸಂಗ್ರಹಿತವಾದ ಸಿರಿಕಾವ್ಯವನ್ನು ಪ್ರಕಟಿಸಿದರು. ಗಾಯಿತ್ರಿ ನಾವಡ ಅವರ “ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು” (೧೯೯೯) ಎನ್ನುವ ಕೃತಿಯು ಸಿರಿಯ ಮೇಲಿನ ಇತ್ತೀಚಿನ ಅಧ್ಯಯನವಾಗಿದೆ.

ಕರಾವಳಿಯ ಉಡುಪಿ, ಕಾರ್ಕಳ, ಬೆಳ್ತಂಗಡಿ, ಮಂಗಳೂರು ಮತ್ತು ಬಂಟ್ವಾಳದ ಪರಿಸರದ ಬಂಟ ಸಮುದಾಯದಲ್ಲಿ ಬಹಳ ಪ್ರಚಲಿತದಲ್ಲಿರುವ ಜನಪದ ಕಾವ್ಯ ಸಿರಿ. ಬಂಟ ಸಮುದಾಯದವರು ಸಿರಿಯನ್ನು ತಮ್ಮ ಸಮುದಾಯದ “ಮೂಲಸ್ತ್ರೀ” ಎಂದು ನಂಬುತ್ತಾರೆ. ಅವಳ ಕೃಪೆಗೆ ಒಳಗಾದವರಿಗೆ ಕುಟುಂಬದಲ್ಲಿ ಸ್ಥಾನ-ಮಾನ, ಗೌರವ ಲಭಿಸುವುದಾಗಿ ತಿಳಿಯಲಾಗಿದೆ.

ತುಳುನಾಡಿನ ಇವರ ಆರಾಧನಾ ಪ್ರಕಾರಗಳಾದ ಭೂತಾರಾಧನೆ, ನಾಗಾರಾಧನೆ ಹಾಗೂ ಶಿಷ್ಯದೇವತೆಗಳ ಜಾತ್ರೆಗಳೊಂದಿಗೆ ಹೋಲಿಸಿದರೆ ಸಿರಿ ಜಾತ್ರೆಯ ವಿಶಿಷ್ಟತೆ ಮತ್ತು ಅನನ್ಯತೆಗಳು ಸ್ಪಷ್ಟವಾಗುತ್ತವೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು, ಸಾಮೂಹಿಕ ಆವೇಶಕ್ಕೆ ಒಳಗಾಗುವುದು, ಅಪರಿಚಿತರಾಗಿರುವ ವಿಭಿನ್ನ ಜಾತಿವರ್ಗದ ಮಹಿಳೆಯರು ಅವೇಶಿತರಾದಾಗ ವೈಯಕ್ತಿಕತೆಯನ್ನು ಕಳೆದುಕೊಂಡು ಸಿರಿಕುಟುಂಬದ ಸದಸ್ಯರಾಗಿ ರೂಪಾಂತರಗೊಳ್ಳುವುದು, ನೋವು ಒತ್ತಡಗಳಿಗೆ ಬಿಡುಗಡೆ ಒದಗಿಸುವುದು, ಮಹಿಳೆಯರ ವಾಸ್ತವ ಬದುಕಿಗೂ ಆರಾಧನೆಗೂ ಇರುವ ಅಂತಃಸಂಬಂಧ ಹಾಗೂ ಸಿರಿಯು ಮೈದುಂಬುವ ಹೆಣ್ಣು ಗಳಿಸುವ ಕೌಟುಂಬಿಕ – ಸಾಮಾಜಿಕ ಗೌರವ ಮನ್ನಣೆಗಳು – ಹೀಗೆ ಹಲವು ನಿಟ್ಟಿನಿಂದ ಸಿರಿ ಆರಾಧನೆಯು ಸಂಕೀರ್ಣತೆಯನ್ನು ಪಡೆದುಕೊಂಡಿದೆ (ನಾವಡ ೧೯೯೯, ೫೨). ಸಿರಿ ಪಾಡ್ದಾನದಲ್ಲಿ ಸಿರಿಯ ಕೌಟುಂಬಿಕ, ಸಾಮಾಜಿಕ ಸಂದರ್ಭ, ವಿಚ್ಛೇದನ, ಮರುಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಕಲ್ಪನೆಗಳು, ಗಂಡಿನ ಮೋಸ, ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ. ಇದರಿಂದಾಗಿ ಬಂಟ ಸಮುದಾಯದ ಮೂಲಹೆಣ್ಣೆಂದು ಗ್ರಹೀತಳಾದ ಸಿರಿಯೊಂದಿಗೆ ತುಳುನಾಡಿನ ಎಲ್ಲ ಮಾತೃರೂಪಿ ಕುಟುಂಬದ ಹೆಣ್ಣುಗಳು ತಮ್ಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ (ನಾವಡ ೧೯೯೯, ೫೩).

ಪಾಡ್ದಾನಗಳಲ್ಲಿ ‘ಸಿರಿಯ’ ಪಾಡ್ದಾನವು ನಾಲ್ಕು ತಲೆಮಾರುಗಳ ಸುದೀರ್ಘವಾದ ಒಂದು ಕತೆ. ಜನಪ್ರಿಯವಾದ, ದುರಂತ ಸ್ವರೂಪದ ಈ ಸಿರಿಗಳ ಸಂಧಿ ಅಥವಾ ಪಾಡ್ದಾನವು ಆರಾಧನೆಯ ಮಟ್ಟದಲ್ಲೂ ಬಹಳ ಮುಖ್ಯವಾದುದು. ಬಂಟ ಜಾತಿಯ ಅನೇಕ ವ್ಯಕ್ತಿಗಳು ಈ ಕಾವ್ಯದುದ್ದಕ್ಕೂ ಬಂದು ಹೋಗುತ್ತಾರೆ. ಈ ಹಿನ್ನಲೆಯಲ್ಲಿ ಒಂದು ಬಗೆಯ ಸಾಮಾಜಿಕ ಚರಿತ್ರೆಯ ಮಜಲೊಂದನ್ನು ಅರ್ಥಮಾಡಿಕೊಳ್ಳಲು ‘ಸಿರಿ’ ಕಾವ್ಯವು ಸಹಾಯವಾಗಬಲ್ಲದು.

ವಿವೇಕ ರೈ ಅವರ “ತುಳು ಜಾನಪದ ಸಾಹಿತ್ಯ” ಮತ್ತು ಎ.ವಿ.ನಾವಡ ಅವರ “ಗಿಡಿಕೆರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಪಾಡ್ದಾನ” ಎನ್ನುವ ಗ್ರಂಥಗಳನ್ನು ಸಿರಿಯ ಬಗ್ಗೆ ವಿವರಗಳನ್ನು ನೀಡುವ ಸಂದರ್ಭದಲ್ಲಿ ಬಳಸಿಕೊಂಡಿದ್ದೇನೆ. ಗಾಯಿತ್ರಿನಾವಡ ಅವರು ನೀಡಿರುವ ವಿವರಗಳನ್ನು, ಮಾಡಿರುವ ವಿಶ್ಲೇಷಣೆಗಳನ್ನು ಸಿರಿಯನ್ನು ಈ ಅಧ್ಯಯನದುದ್ದಕ್ಕೂ ಬಳಸಿಕೊಳ್ಳಲಾಗಿದೆ.

* * *

ಲಂಕಾ ನಾಡಿನಲ್ಲಿ ಬರ್ಮ ಅಥವಾ ಬೆರ್ಮ ಆಳ್ವ ಎಂಬ ಶ್ರೀಮಂತನನ್ನು ಎಲ್ಲರು “ಆಜ್ಜೆರ್” ಎಂದು ಕರೆಯುತ್ತಿದ್ದರು. ಆಗರ್ಭ ಶ್ರೀಮಂತನಾಗಿದ್ದರೂ, “ಸತ್ಯನಾಪುರ” ಎಂಬ ಅರಮನೆಯನ್ನು ಕಟ್ಟಿಸಿದ್ದರೂ, ಸಂತತಿ ಇಲ್ಲದೆ ಕೊರಗುತ್ತಿದ್ದರು. ಅದು “ಸತ್ಯದ ಕಾಲವಾದ್ದರಿಂದ” ಇವನ ದುಃಖವನ್ನು ಅರಿತ ಬ್ರಹ್ಮನು ಆಳ್ವನ ವ್ಯಸನದ ಕಾರಣವನ್ನು ಕೇಳಿದನು. ಅದನ್ನು ತಿಳಿದುಕೊಂಡ ಬ್ರಾಹ್ಮಣನು ಆಳ್ವನಿಗೆ ಹಾಳುಬಿದ್ದು ಕಾಡಾಗಿರುವ ಲಂಕೆ ಲೋಕನಾಡಿನ ಬ್ರಹ್ಮಸ್ಥಾನವನ್ನು “ಜೀರ್ಣೋದ್ಧಾರ ಮಾಡಿ ದೇವರಿಗೆ ನಿತ್ಯ ಪೂಜೆ ಮಾಡಿಸಿದರೆ” ಸಂತಾನ ಪ್ರಾಪ್ತಿಯಾಗುತ್ತದೆ ಎಂದನು. ಅದರಂತೆ ಆಳ್ವನು ಗುಡಿಯನ್ನು ನವೀಕರಿಸಿ, ಸುಗ್ಗಿ ಹುಣ್ಣಿಮೆಯ ದಿನ ಜಾತ್ರೆ ಏರ್ಪಡಿಸಿದನು. ಆರಾಧನೆ ನಡೆಸುವಾಗ ಒಳಗಿನಿಂದ ದೇವರು “ಬ್ರಾಹ್ಮಣ” ವೇಷದಿಂದಲೆ ಬಂದು “ಸಿಂಗಾರದ ಹಾಳೆಯನ್ನು” (ಅಡಿಕೆ ಹೂವು ಆಗುವ ಮೊದಲು ಹಾಳೆಯ ರೀತಿಯಲ್ಲಿ ಇರುತ್ತದೆ. ಅದನ್ನು ಸಿಂಗಾರದ ಹಾಳೆ ಎನ್ನುತ್ತಾರೆ) ನೀಡಿ, ಮಾಯವಾಗುತ್ತಾರೆ (ವಿವೇಕ ರೈ ೧೯೮೫, ೬೨-೬೩). ಅಲ್ಲಿ ಸಿಂಗಾರದ ಹೂ ಬಿಟ್ಟುಕೊಂಡು ಅದರಲ್ಲಿ ಹೆಣ್ಣು ಮಗುವೊಂದು ಕಾಣಿಸಿಕೊಳ್ಳುತ್ತದೆ. “ಸತ್ಯದ ಮಗುವಾದ್ದರಿಂದ” ಆಳ್ವನು ಆ ಮಗುವಿಗೆ “ಸತ್ಯಮಾಲೋಕದ ಸಿರಿ” ಎಂದು ಹೆಸರಿಡುತ್ತಾನೆ. (ಗಾಯತ್ರಿ ನಾವಡ ೧೯೯೯, ೧೪೦). ಮಗುವಿಗೆ ಒಂದು ತಿಂಗಳಾಗುವಷ್ಟರಲ್ಲಿ ಒಂದು ವರ್ಷದ ಬೆಳವಣಿಗೆ ಕಾಣಿಸಿತು. ಮೂರು ತಿಂಗಳ ಬಾಲೆ ಏಳು ಏಳುವರೆ ವರ್ಷದ ಹೆಣ್ಣಿನಂತೆ ಮೈತುಂಬಿಕೊಂಡಳು. ಸಿರಿ ಅರಳಿ ಬೆಳೆದಂತೆ ಇಡಿಯ ಸತ್ಯನಾಪುರವೇ ಅರಳಿತು. ಮಗುವು ಬೆಳೆದು ಪ್ರಾಯದವಳಾದಾಗ, ಆಳ್ವನು ಅವಳನ್ನು ಬಸರೂರಿನ ಅಂಗಡಿ ಕಾಂತಪೂಂಜನಿಗೆ ಲಗ್ನಮಾಡಿಕೊಡುತ್ತಾನೆ. ಕಾಂತಪೂಂಜನು “ಸ್ವಲ್ಪ ವ್ಯಭಿಚಾರಿಯಾಗಿದ್ದನು” ಎಂದು ವಿವೇಕ ರೈ ಅವರು ಬರೆದಿದ್ದಾರೆ (ವಿವೇಕ ರೈ ೧೯೮೫, ೬೩). ಇದೇ ಸಂದರ್ಭದಲ್ಲಿ ಸಿರಿಯು ಗರ್ಭಿಣಿಯಾದಳು. ಅವಳಿಗೆ “ಸೀಮಂತ”ದ (ಗರ್ಭಿಣಿಯಾಗುವ ಸಂದರ್ಭದಲ್ಲಿ ಗರ್ಭವತಿಗೆ ಸಂಬಂಧಿಸಿದಂತೆ ಮಾಡುವ ಒಂದು ಆಚರಣೆ) ಏರ್ಪಾಟಾಗುತ್ತದೆ. ಆ ಸಂದರ್ಭದಲ್ಲಿ ಪೂಂಜನು ಮಡದಿಗೆಂದು ಸೀರೆಯೊಂದನ್ನು ಕೊಂಡನು. ಮನೆಗೆ ನೇರವಾಗಿ ಹೋಗುವ ಬದಲು “ಬಸರೂರ ಸೂಳೆಯ” ಮನೆಗೆ ಹೋದನು. ಆ “ಸೂಳೆಯು” ಕಾಂತ ಪೂಂಜಾನು ತನ್ನ ಮಡದಿಗೆಂದು ತಂದ ಸೀರೆಯನ್ನು ಉಟ್ಟುಬಿಟ್ಟಳು. ಅವನು ಗದರಿಸಿದಾಗ, ಆ ಸೀರೆಯನ್ನು ಬಿಚ್ಚಿ, ಮಡಿಸಿಕೊಟ್ಟಳು. “ಈ ಪಟ್ಟಿ ಸೀರೆ ಕಡೇರಿ ಕಾಲನದ ಕೊಡಿಕುಂಬಳೆಯ ಸೂಳೆಸಿದ್ದು ಉಟ್ಟು ಬಿಟ್ಟ ಪಟ್ಟೆ ಸೀರೆ. ಅದನ್ನು ನನ್ನ ಮೈಯಲ್ಲಿ ಉಡಲಾರೆ. ಇಂದು ನಾನು ಉಟ್ಟ ಹಳೆಯ ಸೀರೆಯಲ್ಲೆ ನನಗೆ ಬಯಕೆ ಮದುವೆಯ ಸಮ್ಮಾನ ಆಗಬೇಕು” ಎಂದಳು (ನಾವಡ ೧೯೯೯, ೭೧). ಈ ಮೂಲಕ ಅವಳು ಕಾಂತಪೂಂಜನ “ಮರ್ಯಾದಿಯನ್ನು” ಸಾರ್ವಜನಿಕವಾಗಿ ಕಳೆಯುತ್ತಾಳೆ. ತಿಂಗಳು ತುಂಬಿ ಸಿರಿಯು ಗಂಡುಮಗುವನ್ನು ಹೆತ್ತರೂ, ಅವಳನ್ನಾಗಲಿ ಅಥವಾ ಮಗುವನ್ನಾಗಲಿ ಗಂಡನು ನೋಡಲು ಬರುವುದಿಲ್ಲ. ಮಗನಿಗೆ “ಕುಮಾರ” ಎಂದು ನಾಮಕರಣವಾಗುತ್ತದೆ. “ಮಗುವು ಅಜ್ಜನನ್ನು ನೋಡಿದರೆ ಅಜ್ಜನು ಪ್ರಾಣವನ್ನು ಕಳೆದುಕೊಳ್ಳುವನು” ಎಂಬ ಜ್ಯೋತಿಷಿಗಳ ಮಾತು ಮಗು ಹುಟ್ಟಿದ ಆರು ತಿಂಗಳಲ್ಲಿ ನಿಜವಾಗಿ ಬಿಡುತ್ತದೆ. ಸಿರಿಯು ತಂದೆಯನ್ನು ಕಳೆದುಕೊಂಡು ವ್ಯಥೆಯಲ್ಲಿದ್ದಾಗ ಸೂಡವ ಶಂಕರ ಆಳ್ವ ಎನ್ನು ಅಜ್ಜರ ಬಂಧುವೊಬ್ಬ ಅಜ್ಜರ ಆಸ್ತಿಯೆಲ್ಲಾ ತನ್ನದೇ ಎಂದು ವಾದಿಸಿ, “ಪತ್ತೇರಿ ಕೂಟದ” (ಹತ್ತು ಮಂದಿ/ಪಂಚಾಯತದಾರರು) ಮಂದಿಗೆ, ವಿವೇಕ ರೈ ಅವರು ಹೇಳುವಂತೆ “ಕೈ ತುಂಬಾ ಹಣ ಕೊಟ್ಟು” ಆಸ್ತಿಯನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುತ್ತಾನೆ. ಈ ಕುತಂತ್ರದಲ್ಲಿ ಅವಳ ಗಂಡ ಕೂಡ ಭಾಗಿಯಾಗುತ್ತಾನೆ. “ಹೆಂಗಸರಿಗೆ ಅಧಿಕಾರವಿಲ್ಲ” ಎನ್ನುವ ಕೂಟದ ತೀರ್ಮಾನವನ್ನು ಕೇಳಿ ಅವಮಾನಿತಳಾದ ಸಿರಿಯು “ಸತ್ಯನಾಪುರದ ನೆಲೆ ಬಂಜರು ಬೀಳಲಿ, ಅರಮನೆ ಸುಟ್ಟು ಹೋಗಲಿ” ಎಂದು ಶಾಪ ಹಾಕುವುದರೊಂದಿಗೆ ಅರಮನೆಯ ಅಂಗಳದಲ್ಲಿ ನಿಂತು ತನ್ನ ಗಂಡನಿಗೆ ‘ಬರ’ (ವಿಚ್ಛೇದನ) ಹೇಳುವಳು. “ಇನ್ನು ಮುಂದಾದರೂ ದುಷ್ಟ ಗಂಡನೊಂದಿಗೆ ಬಾಳುವ ಹೆಣ್ಣಿನ ಗೋಳು ತಪ್ಪಬೇಕು. ಅಂಥ ಹೆಣ್ಣಿಗೆ ಮರುಮದುವೆಯಾಗುವ ನಿಯಮ ಇಂದಿನಿಂದಲೇ ಬರಬೇಕು. ಒಮ್ಮೆ ವಿಧವೆಯಾದವಳು ಮತ್ತೊಮ್ಮೆ ಮುತ್ತೈದೆಯಾಗುವ ನಿಯಮ ಇಂದಿನಿಂದಲೇ ಬರಬೇಕು. ಒಮ್ಮೆ ವಿಧವೆಯಾದವಳು ಮತ್ತೊಮ್ಮೆ ಮುತ್ತೈದೆಯಾಗುವ ಭಾಗ್ಯ ಬರಬೇಕು” ಎಂದು ಹೇಳಿ ಹೊರಟುಹೋಗುತ್ತಾಳೆ (ಗಾಯತ್ತಿ ನಾಔಡ ೧೯೯೯, ೧೪೦). ಹಾಗೆಯೇ ಸಿರಿಯು “ಇಂದಿನ ತನಕ ಬಸರೂರು ಅರಮನೆಗೆ ಲೋಕಕ್ಕೇ ನೀಡುವಷ್ಟು ಬದುಕು ಭಾಗ್ಯ ಇದ್ದಿತ್ತು. ಇಂದಿನಿಂದ ಕುಡಿಯಲು ಗಂಜಿ ಇರದಷ್ಟು ಬಡತನ ಒತ್ತಬೇಕು. ಹಟ್ಟಿ ತುಂಬ ಜಾನುವಾರುಗಳಿದ್ದಲ್ಲಿ ಒಂದು ಕಣ್ಣಿನ ಎತ್ತು ಮಾತ್ರ ಉಳಿಯಬೇಕು. ನನ್ನ ಗಂಡ ನಾಲ್ಕು ಮನೆ ಭಿಕ್ಷೆ ಬೇಡುತ್ತಾ ಮೂರು ಮನೆ ತಿರುಗುತ್ತಾ ಉಣ್ಣಲು ಗತಿ ಇಲ್ಲದ ಸ್ಥಿತಿಗೆ ಬರಬೇಕು” ಎಂದು ಮಣ್ಣುಮುಟ್ಟಿ ಶಾಪ ನೀಡಿದಳು (ನಾವಡ ೧೯೯೯, ೭೫).

ಅವಮಾನಿತಳಾಗಿ ಮುಂದೆ ಹೋಗುತ್ತಿದ್ದ ಸಿರಿಗೆ ಎದುರಾದವರು ಕರಿಂಗ ಕಾಳಿಯ ಮತ್ತು ಮೊಳಿಯ ದೇಸಿಂಗ ಎನ್ನುವ ಕ್ಷತ್ರಿಯ” ಸಹೋದರರು. ತಂಗಿಯಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆಯೊಂದಿಗೆ ಅವರು ಸಿರಿಗೆ ಸಹಾಯದ ಹಸ್ತವನ್ನು ನೀಡುತ್ತಾರೆ. ಆ ಸಂದರ್ಭದಲ್ಲಿ ವಿವೇಕ ರೈ ಅವರು ಹೇಳುವ ಹಾಗೆ “ಆರು ತಿಂಗಳ:” ಮಗುವು “ಅಮ್ಮಾ, ನಿನಗೆ ಅಣ್ಣಂದಿರು ದೊರಕಿದರು. ನೀನು ಅಲ್ಲಿಗೆ ಹೋಗಿ ಸುಖವಾಗಿ ಬಾಳು. ನಾನು ಬ್ರಹ್ಮದೇವರ ಬಳಿಗೆ ಹೋಗಿ ಬೆಳ್ಳಿ ಬೆಟ್ಟು ಸ್ಥಾನದಲ್ಲಿ ನಿಲ್ಲುತ್ತೇನೆ. ಅಲ್ಲಿ ಬೆಳೆಯುತ್ತೇನೆ….” ಎಂದು ಹೇಳಿತು. (ವಿವೇಕ ರೈ ೧೯೮೫, ೬೫). ಆದರೆ ಗಾಯಿತ್ತಿ ನಾವಡ ಅವರು ತಮ್ಮ ಪುಸ್ತಕದಲ್ಲಿ ಇದೇ ಸಂದರ್ಭದಲ್ಲಿ ಮಗುವು “ಒಬ್ಬ ತಂದೆಗೆ ಹುಟ್ಟಿ ಇನ್ನೊಬ್ಬನನ್ನು ತಂದೆ ಎಂದು ಕರೆಯಲಾರೆ” ಎನ್ನುತ್ತದೆ. ಮಗನ ಕೋರಿಕೆಯಂತೆ ಸಿರಿಯು ಅವನನ್ನು ‘ಮಾಯ’ ಮಾಡುತ್ತಾಳೆ; (ಗಾಯತ್ರಿ ನಾವಡ ೧೯೯೯, ೧೪೯). ಇದೇ ಅಭಿಪ್ರಾಯವನ್ನು ಎ.ವಿ.ನಾವಡರ ಕೃತಿಯಲ್ಲಿಯೂ ನೋಡಬಹುದು (ನಾವಡ ೧೯೯೯, ೭೬). ವಿವೇಕ ರೈ ಅವರ ಪ್ರಕಾರ “ಒಳ್ಳೆಯ ಅಣ್ಣಂದಿರು ದೊರಕಿದ ಹಿನ್ನಲೆಯಲ್ಲಿ” ಕುಮಾರನು ಮಾಯವಾದರೆ ನಾವಡ ಹಾಗೂ ಗಾಯತ್ರಿ ನಾವಡ ಅವರ ಪ್ರಕಾರ “ಇನ್ನೊಬ್ಬನನ್ನು ತಂದೆ ಎಂದು ಕರೆಯಲಾರೆ” ಎನ್ನುವ ಕಾರಣಕ್ಕೆ ಕುಮರನು “ಮಾಯ”ವಾದ ಸ್ಥಿತಿಯನ್ನು ನಾವು ಗಮನಿಸಬಹುದು. ಬಹುಶಃ ಅಣ್ಣಂದಿರು ಮತ್ತು ಸಿರಿಯ ನಡುವಿನ ಸಂಭಾಷಣೆಯಲ್ಲಿ ಸಿರಿಯ ಮರುಮದುವೆಯ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕುಮಾರನು “ಮಾಯ”ವಾಗಿರಬಹುದು ಎಂದು ಊಹಿಸಬಹುದು. ಮುಂದೆ ಅವರು ಸಿರಿಯನ್ನು ಈಗಾಗಲೆ ಮದುವೆಯಾಗಿದ್ದ ಕೊಡ್ಸರಾಳ್ವನಿಗೆ ಮದುವೆ ಮಾಡಿ ಕೊಡುವರು. “ಮಗ ಕುಮಾರನ ಪ್ರತಿರೋಧವನ್ನು ಎದುರಿಸಿಯೇ ಸಿರಿ ಕೊಡ್ಸರಾಳ್ವನನ್ನು ಮದುವೆ ಆಗುತ್ತಾಳೆ” ಎನ್ನುವ ಎ.ವಿ.ನಾವಡ ಅವರ ಹೇಳಿಕೆ ಸಿರಿಯ ಇನ್ನೊಂದು ಮದುವೆ ಬಗ್ಗೆ ವಿಶ್ಲೇಷಿಸಲು ಅನುಕೂಲ ಮಾಡಿಕೊಡುತ್ತದೆ. (ನಾವಡ ೧೯೯೯, ೫೨)

ಕೊಡ್ಸರಾಳ್ವನಿಗೆ ಈಗಾಗಲೇ ಮದುವೆಯಾಗಿ ಸಾಮು ಆಳ್ವೆದಿ ಎನ್ನುವ ಹೆಂಡತಿಯಿದ್ದಳು. ಆದ್ದರಿಂದ ಸಿರಿಯನ್ನು ಮದುವೆಯಾಗಲು ಅವನಿಗೆ ಸಂಕೋಚವೆನ್ನಿಸಿದರೂ, ಚತ್ತೇರಿಗಳು (ಕಾಸಿಂಗ ಮತ್ತು ದೇಸಿಂಗ) ಸಾಮುವನ್ನು “ಸತಾಯಿಸಿ ತವರು ಮನೆಗೆ ಹೋಗುವಂತೆ ಮಾಡು” ಎಂಬ ರೀತಿಯ ಸಲಹೆಯಿಂದ ಪುಳಕಿತಗೊಂಡರು. ಸಾಮುವನ್ನು ತವರುಮನೆಗೆ ಕಳಿಸಿ ಸಿರಿಯನ್ನು ಕೊಡ್ಸರಾಳ್ವನು ಮದುವೆಯಾದನು. ಮದುವೆಯ ನಂತರ ಸಾಮುವಿನ ಮತ್ತು ಸಿರಿಯ ನಡುವಿನ ಸಂಬಂಧ ಕೆಟ್ಟುಹೋಯಿತು. ಮುಟ್ಟಿನ ಸೂತಕ ಮೀಯಲು ಸಾಮುವು ಹೊರಟದ್ದನ್ನು ಗಮನಿಸಿದ ಸಿರಿಯು ತಾನು “ಸತ್ಯದ ಮಗಳು ಹೌದೆಂದಾದರೆ” ಕೊಟ್ಟರಾಡಿಯ ಕೆರೆಯಲ್ಲಿ ನೀರಿರಬಾರದೆಂದು ಶಾಪವಿತ್ತಳು. ಸೂತಕ ಮೀಯಲು ಹೋದ ಸಾಮುವಿಗೆ ಕೆರೆಯಲ್ಲಿ ಒಂದು ಹನಿ ಕೂಡ ನೀರಿರಲಿಲ್ಲ. ಆಗ ಅವಳು ತನ್ನ ಗೆಜ್ಜೆ ಕತ್ತಿ ತೆಗೆದು ನೆಲವನ್ನು ಗೀರಿದಾಗ, ಚಿಮ್ಮಿದ ನೀರಿನಿಂದ ಕೆರೆ ತುಂಬಿಬಂದಿತು. ಸಾಮುವು ಮಿಂದು ಮನೆ ಹೊಕ್ಕಳು. ಆಶ್ಚರ್ಯ ಏನೆಂದರೆ ಸಾಮುವು ಕೂಡ ಸಿರಿ ಸ್ನಾನಕ್ಕೆ ಹೋಗುವ ವೇಳೆಯಲ್ಲಿ ಒಂದು ತೊಟ್ಟು ನೀರಿರಬಾರದೆಂದು ಶಾಪ ಹಾಕಿದ ಪ್ರಸಂಗ. ಸಿರಿಯು ಗೆಜ್ಜೆಕತ್ತಿಯಿಂದ ನೆಲವನ್ನು ಗೀರಿದಾಗ ನೀರು ಚಿಮ್ಮಲಿಲ್ಲ. ಕೆರೆ ತುಂಬಲಿಲ್ಲ. ಗಂಡನಿಗೆ ದೂರು ಕೊಟ್ಟ ನಂತರ, ಸಾಮುವಿನ ಮೂಲಕವೇ ಮತ್ತೆ ಕೆರೆಗೆ ನೀರು ಬರುವಂತಾಯಿತು (ನಾವಡ ೧೯೯೯, ೭೪-೭೯).

ಇತ್ತ ಸಿರಿಯ ಮೊದಲಗಂಡ ಕಾಂತಪೂಂಜಗೆ ಗಂಜಿಕುಡಿಯಲೂ ಗತಿ ಇಲ್ಲದೆ ಭಿಕ್ಷೆ ಬೇಡುವ ಸ್ಥಿತಿಗಿಳಿದನು. ಭಿಕ್ಷೆ ಬೇಡಿಕೊಂಡು ಬಂದ ಕಾಂತಪೂಂಜನನ್ನು ಕೊಡ್ಸರಾಳ್ವನು ಸತ್ಕರಿಸುವನು. ಅದೂ-ಇದೂ ಮಾತನಾಡಿ ತನ್ನ ಬಡತನದ ದುಃಸ್ಥಿತಿಯಿಂದ ಪಾರು ಮಾಡಲು ಸಿರಿಯಿಂದ ತನಗೊಂದು ವರ ಕೊಡಿಸಬೇಕೆಂದು ಕೊಡ್ಸರಾಳ್ವನಿಗೆ ಕಾಂತಣಾಳ್ವನು ದುಂಬಾಲು ಬೀಳುತ್ತಾನೆ. ತನ್ನ ಒಡಲಿಗೆ ಬೆಂಕಿಯಿಟ್ಟ ಕಾಂತಣಾಳ್ವನಿಗೆ ವರವನ್ನು ನೀಡಲು ಮನಸ್ಸಿಲ್ಲದಿದ್ದರೂ, ಕೊಡ್ಸರಾಳ್ವನ ಒತ್ತಾಯದಿಂದ ವರವನ್ನು ನೀಡುತ್ತಾಳೆ. ಹಂಗಿಸಿ ಹಂಗಿಸಿ ವರವನ್ನೂ ನೀಡಿದರೂ, ಆ ವರದಾನದಿಂದ ಕಾಂತಣಾಳ್ವನ ಜೀವನವು ಸಮೃದ್ಧಿಗೊಂಡಿತು (ನಾವಡ ೧೯೯೯, ೭೯-೮೦).

ದಿನಗಳೆದಂತೆ ಸಾಮು-ಸಿರಿಯರು ಅನ್ಯೋನ್ಯವಾಗಿರಲು ಆರಂಭಿಸಿದರು. ಕಾಲಕ್ರಮೇಣ ಸಿರಿಯು ಬಸುರಿಯಾಗುತ್ತಾಳೆ. ಸಾಮು ಆಳ್ವೆದಿಯ ತವರು ಮನೆಯಲ್ಲಿ ಬಯಕೆ ಸಮ್ಮಾನಗಳು ನಡೆಯುತ್ತದೆ. ಅಲ್ಲಿಂದ ವಾಪಾಸ್ಸು ಬರುವಾಗ ಸಿರಿಗೆ ಹೆರಿಗೆ ನೋವು ಬಂದು, ಹೆರಿಗೆಯಾಗುತ್ತದೆ. “ಬಡಬ್ರಾಹ್ಮಣನ” ವೇಷದಲ್ಲಿ ಕುಮಾರನು (ಸಿರಿಯ ಮೊದಲನೆಯ ಮಗ) ಕಾಣಿಸಿಕೊಂಡು ಪ್ರವಾಹವನ್ನು ಸೃಷ್ಟಿಸುತ್ತಾನೆ. ಆ ಪ್ರವಾಹದಲ್ಲಿ ತೇಲುತ್ತಾ ಕುಟುಂಬದ ಅಜ್ಜರಾದ ಕಾನಬೆಟ್ಟು ಅಜ್ಜನಲ್ಲಿಗೆ ಹೋಗುವಂತೆ ಹುಟ್ಟಿದ ಮಗುವಿಗೆ ಹೇಳುತ್ತಾನೆ. ಹಾಗೆಯೇ ಕುಮಾರನು ಸಿರಿಯನ್ನು “ಮಾಯೆ” ಮಾಡುತ್ತಾನೆ. (ಗಾಯತ್ರಿ ನಾವಡ, ೧೪೧). ಈ ಕಥೆಯು ಕ್ಲೈಮ್ಯಾಕ್ಸ್‌ನ ಇನ್ನೊಂದು ರೂಪದ ಪ್ರಕಾರ, “ಬಯಕೆ ಸಮ್ಮಾನಗಳ” ನಂತರ ಸಿರಿಯು ವಾಪಸ್ಸು ಬರುತ್ತಿದ್ದಾಗ, ದಾರಿಯಲ್ಲಿ ಹೊಟ್ಟೆನೋವು ಆರಂಭವಾಯಿತು. ಹೆಣ್ಣುಮಗುವನ್ನು ಹೆತ್ತ ಆಕೆ, ಆ ಮಗುವನ್ನು ಅಡಿಕೆ ಹಾಳೆಯಲ್ಲಿ ಮಲಗಿಸಿ ಸಾಮು ಆಳ್ವದಿ ಕೈಯಲ್ಲಿ ಕೊಟ್ಟು, “ಅಕ್ಕಾ, ಈ ಮಗುವನ್ನು ನನ್ನ ಅಜ್ಜ ಕಾನಬೆಟ್ಟಿನ ಅರಮನೆ ಚಂದವಣ್ಣ ಪೆರ್ಗಡೆಯವರ ಕೈಯಲ್ಲಿ ಕೊಡಿರಿ, ನಾನು ನನ್ನ ಮಗ ಕುಮಾರನಿದ್ದಲ್ಲಿಗೆ ಹೋಗುತ್ತೇನೆ” ಎಂದು ಹೇಳಿ “ಮಾಯವಾದಳು”. ನಂತರ ಮಗುವನ್ನು ಇವರೇ ಸಾಕಬೇಕೆಂದು ಎಷ್ಟೊಂದು ಪ್ರಯತ್ನವನ್ನು ಮಾಡಿದರೂ, ಮಗುವು ಚಂಡಿ ಹಿಡಿದು ಅಳುತ್ತಾ ಇರುವುದನ್ನು ನೋಡಿ ಸಿರಿಯ ಆಶಯದಂತೆ ಪೆರ್ಗಡೆಯವರೆಗೆ ಮಗುವನ್ನು ನೀಡಿದರು (ವಿವೇಕ ರೈ ೧೯೮೫, ೬೬-೬೭). ಸಿರಿಯೊಂದಿಗೆ ನೇರವಾಗಿ ಹೆಣೆದುಕೊಂಡ ಜನಪದವು ಇಲ್ಲಿಗೆ ಮುಗಿದವು ಎಂದೆನ್ನಿಸಿದರೂ. ಅವಳು “ಮಾಯವಾದ” ನಂತರ ಹುಟ್ಟಿಕ್ಕೊಂಡ “ಸಂಧಿ”ಗಳು ವಿದ್ವಾಂಸರ ಗಮನವನ್ನು ಸೆಳೆದಿವೆ. ಅವು ಕೂಡ ಮುಖ್ಯವೆನ್ನಿಸಿದರೂ ಪ್ರಸ್ತುತ ಪ್ರಬಂಧದ ಚೌಕಟ್ಟಿನ ಮಿತಿಯಲ್ಲಿ ಅವುಗಳನ್ನು ವಿವರಿಸಿಲ್ಲ. (ವಿವೇಕರೈ, ಎ.ವಿ.ನಾವಡ, ಪೀಟರ್ ಜೆ.ಕ್ಲಾಸ್ ಮೊದಲಾದ ವಿದ್ವಾಂಸರ ಗ್ರಂಥಗಳಲ್ಲಿ ಅವುಗಳನ್ನು ವಿವರಿಸಲಾಗಿದೆ.).

ಸಿರಿ ಪಾಡ್ದಾನದಲ್ಲಿ ಸಿರಿಯ ಕೌಟುಂಬಿಕ, ಸಾಮಾಜಿಕ ಸಂದರ್ಭ, ವಿಚ್ಛೇದನ, ಮರುಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಪರಿಕಲ್ಪನೆಗಳು, ಗಂಡಿನ ಮೋಸ, ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ ಎಂದು ಎ.ವಿ.ನಾವಡ ಅವರು ಅಭಿಪ್ರಾಯಪಟ್ಟಿರುವುದನ್ನು ಈಗಾಗಲೇ ನಾನು ಪ್ರಸ್ತಾಪಿಸಿದ್ದೇನೆ. ಸಿರಿಯೊಂದಿಗೆ ತುಳುನಾಡಿನ ಎಲ್ಲ ಮಾತೃರೂಪಿ ಕುಟುಂಬದ ಹೆಣ್ಣುಗಳು ತಮ್ಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ (ನಾವಡ ೧೯೯೯, ೫೫). “ಹೊಸ ಮೌಲ್ಯಗಳ ಸ್ಥಾಪನೆಗೆ ರೂಢಿಗತ ನಿಯತಿಯನ್ನು ಬಂಜಿಸುವುದು ಸಿರಿಯ ಬದುಕಿನ ಹೋರಾಟದ ಉದ್ದೇಶವಾಗಿತ್ತು” ಎನ್ನುವ ನಾವಡ ಅವರು ತನ್ನ ಮಗ ಕುಮಾರನ ಪ್ರತಿರೋಧವನ್ನು ಎದುರಿಸಿಯೇ ಕೊಡ್ಸರಾಳ್ವನನ್ನು ಮದುವೆಯಾದ ಘಟನೆಯನ್ನು ಬರೆದಿದ್ದಾರೆ. ಈ ರೀತಿಯಲ್ಲಿ ಚಾಲ್ತಿಯಲ್ಲಿನ ತಾಯ್ತನದ ನಿರೀಕ್ಷೆಗಳನ್ನು ಹುಸಿಗೊಳ್ಳುತ್ತಾಳೆ ಎನ್ನುತ್ತಾರೆ ಗಾಯಿತ್ರಿ ನಾವಡ ಅವರು. (ಗಾಯತ್ರಿ ನಾವಡ ೧೯೯೯, ೧೪೧-೧೪೨; ನಾವಡ ೧೯೯೯, ೫೨೨) ಪುರುಷಕೇಂದ್ರಿತ ನೆಲೆಯಲ್ಲಿ ಈ ಕಾವ್ಯವು ಸುತ್ತುತ್ತದೆ ಎನ್ನುವ ಗಾಯತ್ರಿ ನಾವಡ ಅವರು “ಹೆಣ್ಣಿನ ಶಕ್ತಿ ಮತ್ತು ಸೃಜನಶೀಲತೆಯ ಮೇಲೆ ಕೇಂದ್ರೀಕೃತವಾಗಿದ್ದು ಅವಳ ತುಮುಲ, ಪಲ್ಲಟ, ಹೋರಾಟ, ಅಂತಸ್ಸತ್ವಗಳನ್ನು ಬಿಚ್ಚಿಡುತ್ತದೆ.” ಗಾಯತ್ರಿ ನಾವಡ ಅವರು ಹೇಳುವಂತೆ ಸಿರಿಯು

ಪಿತೃಪ್ರಧಾನ ಸಂಸ್ಕೃತಿಯ ಚಿಂತನೆಗಳಾದ ಹೆಣ್ಣಿನ ಪಾತಿವ್ರತ್ಯ, ಮಾತೃತ್ವ, ಪುರುಷ ಪರಿಕಲ್ಪನೆಯನ್ನು ಒಡೆಯುತ್ತಲೆ ಮಾತೃವಂಶೀಯ ಮೌಲ್ಯವನ್ನು ನೆಲೆಗೊಳಿಸುತ್ತಾಳೆ… ಸಿರಿಯ ಹೋರಾಟವನ್ನು ಪುರುಷಾಧಿಕಾರಕ್ಕೆ ಒಡ್ಡುವ ಪ್ರತಿರೋಧ ಅಥವಾ ನಿರಾಕರಣೆಗಿಂತ ಹೆಚ್ಚಾಗಿ ಸ್ತ್ರೀತ್ವದ ಸ್ವಾಯುತ್ತ ಶಕ್ತಿಯ ಸಂಕೇತವಾಗಿ ಗ್ರಹಿಸಬೇಕಾಗಿದೆ (ಗಾಯತ್ರಿ ನಾವಡ ೧೯೯೯, ೧೪೨-೧೪೩).

ಸಿ.ಎನ್. ರಾಮಚಂದ್ರನ್ ಅವರು,

ಪರಂಪರಾಗತ ಆಚಾರ-ವಿಚಾರ ಬದಲಾವಣೆಯ ತೀವ್ರ ತುಡಿತವನ್ನು ಸಿರಿ ಪ್ರತಿನಿಧಿಸುತ್ತಾಳೆ. ಸಿರಿ ಸ್ತ್ರೀ ಸ್ವಾತಂತ್ರ್ಯದ, ಸ್ವಾಭಿಮಾನದ, ಸ್ಥೈರ್ಯದ ಅದ್ಭುತ ರೂಪಕ, ತನ್ನ ಬದುಕಿನುದ್ದಕ್ಕೂ ಪುರುಷನಿರ್ಮಿತ ಹಾಗೂ ಪುರುಷ ಕೇಂದ್ರಿತ ವ್ಯವಸ್ಥೆಯನ್ನು ಮತ್ತು ಮೌಲ್ಯವನ್ನು ಸಿರಿ ಪ್ರತಿಭಟಿಸುತ್ತಾಳೆ…. “ಸತ್ಯಮಾಲೇಕದ ಸಿರಿ” ಎಂಬ ಹೆಸರಿಗೆ ತಕ್ಕಂತೆ ನಡೆದು ಸ್ತ್ರೀಯ ಸ್ವಾಭಿಮಾನಕ್ಕೆ ಸಂಕೇತವಾಗುತ್ತಾಳೆ. ಇಂತಹ ಬದಲಾವಣೆಯ ತುಡಿತಕ್ಕೆ ಸಮರ್ಥನೆಯಾಗಿ, ಅಸಮಾನ ಅಧಿಕಾರಾಧರಿತ ಸ್ತ್ರೀ-ಪುರುಷ ಸಂಬಂಧದ ಕ್ರೌರ್ಯವನ್ನು ಮತ್ತು ದುರಂತವನ್ನು ಈ ಕಾವ್ಯದಲ್ಲಿ ಬರುವ ಮಕ್ಕಳು ಬೆಳೆಯುವ ಸಂದರ್ಭಗಳು ಎತ್ತಿ ತೋರಿಸುತ್ತವೆ (ರಾಮಚಂದ್ರನ್, ಪ್ರಜಾವಾಣಿ ವಿಶೇಷಾಂಕ, ದಿನಾಂಕ ೨೪.೦೨.೨೦೦೨,೮)

ಎಂದು ವಿಶ್ಲೇಷಿಸಿರುವುದು ಗಮನಾರ್ಹವಾಗಿದೆ.

ನಾವಡ, ಗಾಯತ್ರಿ ನಾವಡ ಹಾಗೂ ಸಿ.ಎನ್.ರಾಮಚಂದ್ರನ್ ಸಿರಿಯ ಬಗೆಗಿನ ಪಾಸಿಟಿವ್ ನೆಲೆಗಳನ್ನು ಹುಡುಕುವಲ್ಲಿ ಸಫಲವಾಗಿದ್ಧಾರೆ. ಸಿರಿಯನ್ನು “ಅತಿಮಾನುಷ ಶಕ್ತಿ” ಎಂದು ನೋಡುವುದು ಅಥವಾ ಅವಳನ್ನು ಆ ಮೂಲಕ ಅರ್ಥ ಮಾಡಿಕೊಳ್ಳುವುದರಿಂದ ಆ ಕಾಲದ ಸಾಮಾಜಿಕ ಬದುಕಿನ ರೀತಿ-ನೀತಿಗಳನ್ನು ದಾಖಲಿಸಬಹುದು ಅಥವಾ ವಿಶ್ಲೇಷಿಸಬಹುದು. ಆಶ್ಚರ್ಯವೆಂದರೆ, ಸಿರಿಯನ್ನು ಅತಿಮಾನುಷಶಕ್ತಿಗೆ ಆರೋಪಿಸಿದರೂ, ಅವಳು ಅನೇಕ ಬಾರಿ ಅವಳ ಮೇಲೆ ಆರೋಪಿಸಿರುವ “ನೈತಿಕ-ಮೌಲ್ಯಧಾರಿತ” ಜೀವನ ಮೌಲ್ಯಗಳನ್ನು ಅಲ್ಲಗೆಳೆಯುವ ಸಂದರ್ಭಗಳನ್ನು ಕಾವ್ಯಗಳಲ್ಲಿ ಕಾಣಬಹುದು. “ಹೊಸ ಮೌಲ್ಯಗಳ ಸ್ಥಾಪನೆಗೆ ರೂಢಿಗತ ನಿಯತಿಯನ್ನು ಭಂಜಿಸುವುದೇ” ಮುಖ್ಯವಾಗಿದ್ದರೆ ಸಿರಿಯು ಕಾಂತಪೂಂಜನು ವೇಶ್ಯೆಯ ಜೊತೆಗಿಟ್ಟುಕೊಂಡ ಸಂಬಂಧವನ್ನು ಗೌರವಿಸಬೇಕಾಗಿತ್ತು. ಒಂದು ವೇಳೆ ಅವಳು ಅದನ್ನೇ ಗೌರವಿಸಿದ್ದರೆ, ಕುಮಾರನು ಅವಳ ಇನ್ನೊಂದು ಮದುವೆಗೆ ಆಕ್ಷೇಪಣೆಯನ್ನು ಒಡ್ಡಿದಾಗ, ಅದನ್ನು ಮೀರಿ “ಚಾಲ್ತಿಯಲ್ಲಿದ್ದ ತಾಯ್ತನದ ನಿರೀಕ್ಷೆಗಳನ್ನು ಹುಸಿಗೊಳಿಸಿದಷ್ಟೇ” ಅವಳ ಆಶಯವು ಮುಖ್ಯವಾಗುತ್ತಿತ್ತು. ಸಾಮು ಆಳ್ವೆದಿಯ ಜೊತೆಗಿನ ಸಿರಿಯ ಸಂಬಂಧಗಳು ಇಲ್ಲಿ ಬಹಳ ಮುಖ್ಯವೆಂದು ನನಗನ್ನಿಸುತ್ತದೆ. ಸಿರಿಯು ಸಾಮು ಆಳ್ವೆದಿಯ “ಮುಟ್ಟಿನ ಸೂತಕ ಮೀಯಲು ಹೋದಾಗ” ಕರೆಯಲ್ಲಿ ಒಂದು ತೊಟ್ಟು ನೀರಿರಬಾರದೆಂದು ಬಯಸಿದಂತಹ ಘಟನೆಗಳು, ಸಿರಿಯ ಮೇಲೆ ಆರೋಪಿಸಲಾದ “ನೈತಿಕ” ಅಥವಾ “ಸ್ತ್ರೀಪರ ಮೌಲ್ಯ”ಗಳಿಗೆ ಒಳ್ಳೆಯ ಉದಾಹರಣೆಗಳಾಗಿ ಉಳಿಯುವುದಿಲ್ಲ. ಇದಕ್ಕೆ ಪೂರಕವಾಗುವಂತೆ ಕೆರೆಯಲ್ಲಿ ಒಂದು ತೊಟ್ಟು ನೀರಿಲ್ಲದ ಸಂದರ್ಭದಲ್ಲಿ, ಸಾಮುವು ತನ್ನ ಗೆಜ್ಜೆಕತ್ತಿ ತೆಗೆದು ನೆಲವನ್ನು ಗೀರಿದಾಗ ನೀರು ಚಿಮ್ಮಿದ ಮತ್ತು ಆ ಮೂಲಕ ಕೆರೆಗೆ ನೀರು ತುಂಬಿದ ಮತ್ತು ಆ ಕೆರೆ ನೀರಿನಲ್ಲಿ ಸಾಮುವು ಸ್ನಾನ ಮಾಡಿ ಬಂದ ಘಟನೆಗಳಿಗೆ “ಅತಿಮಾನುಷ ಶಕ್ತಿಗಳು” ಸಹಾಯ ಮಾಡುತ್ತವೆ. ಸಿರಿಯು “ಸತ್ಯದ ಮಗಳು” ಆಗಿದ್ದರೂ, ಸಾಮುವಿನ ಶಾಪದಿಮದ ಬರಡಾದ ಕೆರೆಗೆ ನೀರನ್ನು ತರಲಾರದೆ ತನ್ನ ಗಂಡ ಕೊಡ್ಸರಾಳ್ವನ ಬಳಿ ಹೋಗಿ, ಸಾಮುವಿನ ನೆರವಿನಿಂದ ಕೆರೆಗೆ ನೀರು ಬರುವಂತೆ ಮಾಡಿದ ಉದಾಹರಣೆಯು ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಜನರ ಭಾವುಕತಗೆ / ಮೌಢ್ಯಗಳು ಸಿರಿಯನ್ನು ಅತಿಮಾನುಷ ಶಕ್ತಿಯೆಂದು ನಂಬಿದ್ದರೂ, ಪಾಡ್ದಾನಗಳೇ ಹೇಳುವ ರೀತಿಯಲ್ಲಿ ಸಿರಿಗೆ ಅತ್ಯಂತ “ಸಾಮಾನ್ಯ” ಮಹಿಳೆಗೆ ಇರಬಹುದೆಂದು ಭಾವಿಸಲಾಗುವ ದ್ವೇಷ, ಅಸಹನೆ, ಈರ್ಷೆ… ಮೊದಲಾದ ಗುಣಗಳು ಅವಳ ವ್ಯಕ್ತಿತ್ವದ ಭಾಗವೇ ಆಗಿದ್ದವು. ಬಹುಶಃ ಜನರಿಗೆ ಕೆಲವೊಮ್ಮೆ ತಮ್ಮಂತೆ ಇರುವ, ತಮ್ಮದೇ ರೀತಿಯ ಗುಣಗಳು “ಅತಿಮಾನುಷ ಶಕ್ತಿ”ಗಳಿಗೂ ಇರುವ ಕಾರಣಗಳಿಂದ ಅವು ಜನಪ್ರಿಯವಾಗಿರಬಹುದು. ಎಲ್ಲೋ ಮಧ್ಯದಲ್ಲಿ ಬಂದು ಹೋಗುವ ಸಾಮು ಆಳ್ವೆದಿ ರೀತಿಯ ಪಾತ್ರಗಳು ಸಿರಿಯ ಮೇಲೆ ಹೇರಲಾದ ಕೆಲವು ಗುಣಗಳನ್ನು, ಮೌಲ್ಯಗಳನ್ನು ಅಪಹಾಸ್ಯ ಕೂಡ ಮಾಡುತ್ತವೆ ಎಂದು ವಿಶ್ಲೇಷಿಸಬಹುದು. ಸಿರಿಯು ಕೇಂದ್ರವಾಗುಳ್ಳ ಪಾಡ್ದಾನಗಳೇ ಸಾಮು ಆಳ್ವೆದಿ ಬಗ್ಗೆ ವಿವರಗಳನ್ನು ನೀಡುವ ವಿಚಾರವು ನಮ್ಮ ಗಮನವನ್ನು ಸೆಳೆಯುತ್ತದೆ.

ಕೋಟಿ ಚೆನ್ನಯ್ಯ

ಕಾಲ, ದೇಶ, ಜನಾಂಗ ಎಂಬ ಈ ಮೂರು ಆಯಾಮಗಳ ಸೇರ್ಪಡೆಯೊಂದಿಗೆ ತುಳುನಾಡಿನ ಜನರ ಮಾನಸಿಕ ಆಯಾಮವೂ ಕೋಟಿ ಚೆನ್ನಯರ ದೃಷ್ಟಿಯಿಂದ ಮುಖ್ಯವಾಗಿದೆ. ಪಾಡ್ದಾನ, ಭಯಕಳ ನೇಮ (ಆರಾಧನೆ) ಗರಡಿ ಆರಾಧನ ಕೇಂದ್ರಗಳ ಮೂಲಕ ಕೋಟಿ ಚೆನ್ನಯರ ಪರಿಕಲ್ಪನೆ ತುಳು ಜನಪದ ಮನಸ್ಸುಗಳಲ್ಲಿ ಗಾಢವಾಗಿ ನೆಲೆನಿಂತಿರುವ ಸಾಂಸ್ಕೃತಿಕ ಅಂಶವಾಗಿದೆ ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. (ನಂದಾವರ ೨೦೦೧, ೫-೬). ಕೋಟಿಚೆನ್ನಯರ ಮೇಲೆ ಸಮಗ್ರ ಅಧ್ಯಯನವನ್ನು ನಡೆಸಿದ ವಾಮನ ನಂದಾವರ ಅವರು ಅಭಿಪ್ರಾಯಪಟ್ಟ ಹಾಗೆ, ಕಾಲ, ಸ್ಥಳ, ಜನಾಂಗಗಳ ಸಂಬಂಧದ ದೃಷ್ಟಿಯಿಂದ ಕೋಟಿ ಚೆನ್ನಯರು ಸಂಪ್ರದಾಯವನ್ನು ಬದಲಿಸುತ್ತ ಬಂದವರು. ತುಳುಸಂಸ್ಕೃತಿಯ ಚಲನಶೀಲತೆಗೆ ನೆರವಾದವರು. ಪರಂಪರಾಗತವಾಗಿ ಮೂರ್ತೆಯ ಕೆಲಸ ಮಾಡುವ ಬಿಲ್ಲವ ಜನಾಂಗಕ್ಕೆ ಸೇರಿದ ಕೋಟಿ ಚೆನ್ನಯರು ತುಳುನಾಡಿನ ಭೂ ಒಡೆತನದ ಜೈನ, ಬಂಟ ಸಮಾಜದವರು ನಡೆಸುತ್ತಿದ್ದ ಕೃಷಿ ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿದವರು. ಮೂರ್ತೆಯಿಂದ ಕೃಷಿಗೆ ನಡೆದ ಅವರ “ವೃತ್ತಿ ಪಲ್ಲಟವು” ಅವರಿಗೆ ಸಾಮಾಜಿಕ ಸ್ಥಾನಮಾನ ಗೌರವಗಳನ್ನು ತಂದುಕೊಟ್ಟಿತು. ಇದು ಮುಂದೆ ಇಡೀ ಬಿಲ್ಲವ ಜನಾಂಗಕ್ಕೆ ಸಾಮಾಜಿಕ ಘನತೆಯನ್ನು ಗೌರವವನ್ನು ದೊರಕಿಸಿಕೊಟ್ಟಿತು ಎನ್ನುವ ವಾಮನ ನಂದಾವರ ಅವರು, ಕೃಷಿ ಸಂಸ್ಕೃತಿಗೆ ಪಲ್ಲಟಗೊಂಡ ಕೋಟಿ ಚೆನ್ನಯರು ಕೃಷಿ ಸಂಸ್ಕೃತಿಯ ಇನ್ನೊಂದು ಮುಖವಾದ “ಯೋಧ ಸಂಸ್ಕೃತಿ”ಯನ್ನು ತಮ್ಮದಾಗಿಸುವ ಪ್ರಯತ್ನವನ್ನು ಮಾಡಿದರು. ಕೊಟಿ ಚೆನ್ನಯ್ಯ ಒಂದು ಪುರಾಣವೂ ಹೌದು. ಹುಟ್ಟಿಗೆ ಸಂಬಂಧಿಸಿದ ಕತೆಗಳು, ಬೆಳವಣಿಗೆಗೆ ಸಂಬಂಧಿಸಿದ ಕತೆಗಳು, ರೂಪಾಂತರಗಳು, ಕನಸುಗಳು, ಪವಾಡಗಳು, ಮಾಂತ್ರಿಕತೆ ಹೀಗೆ ಒಂದು ಜನಪದ ಪುರಾಣದ ಎಲ್ಲ ಆಶಯಗಳು ಕೋಟಿ ಚೆನ್ನಯದಲ್ಲಿವೆ.

ಕೋಟಿ ಚೆನ್ನಯ ಕಥೆಯನ್ನು ಮೊತ್ತಮೊದಲು ಪ್ರಕಟಿಸಿ ಜನಪ್ರಿಯಗೊಳಿಸಿದ ಪಂಜೆಮಂಗೇಶರಾಯರು ಮೋಗ್ಲಿಂಗ್ ಸಂಗ್ರಹಿಸಿದ್ದ ಕೋಟಿ ಚೆನ್ನಯರ ಪಾಡ್ದಾನವನ್ನು ಬಳಸಿಕೊಂಡದ್ದನ್ನು ಕೃತಿಯ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಪಂಜೆಮಂಗೇಶರಾಯರ ಕೃತಿಯೇ ಕಳೆದ ಶತಮಾನದಲ್ಲಿ ಬಂದ ಹಲವಾರು ಲಿಖಿತ ಸಾಹಿತ್ಯ, ಕಾವ್ಯ, ನಾಟಕ, ಸಿನಿಮಾ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಂದ “ಕೋಟಿ ಚೆನ್ನಯ್ಯ” ಅವಳಿಗಳ ಕಥೆಗಳಿಗೆ ಮೂಲಧಾರವಾಯಿತೆಂದರೆ ಉತ್ಪ್ರೇಕ್ಷೆಯೇನಲ್ಲ.

ಕೋಟಿ ಚೆನ್ನಯರನ್ನು “ಲೌಕಿಕ-ಅಲೌಕಿಕ ಜಗತ್ತಿನ” ಪ್ರತಿನಿಧಿಗಳೆಂದು ಕರೆಯುವ ವಾಮನ ನಂದಾವರ ಅವರು ಹೇಳುವಂತೆ, ಪುರೋಹಿತ ಹಾಗೂ ಅರಸ (ಬಲ್ಲಾಳ)ನ ಅಧೀನರಲ್ಲಿ ಊಳಿಗವನ್ನು ಮುಗೇರ, ಬಾರುಡ ಮತ್ತು ಕೊರಗ ಜನಾಂಗಗಳ ಸಹಾಯದಿಂದ ಕೋಟಿಚೆನ್ನಯರು ನಿರ್ವಹಿಸುತ್ತಿದ್ದರು. ಜಾತಿ ಭೇದದ ಪರಿಕಲ್ಪನೆಗಳು ಸ್ಪಷ್ಟವಾಗಿಯೇ ಕಾಣುವ ಈ ಸಂದರ್ಭದಲ್ಲಿ,

ಲೌಕಿಕ ಅಲೌಕಿಕ ಜಗತ್ತಿನ ಮೇಲೆ ಶಕ್ತಿ ಪ್ರಭಾವ ಬೀರುವ ಬೆರ್ಮರ್ (ಬ್ರಾಹ್ಮಣರು) ಪ್ರಜಾವರ್ಗಗಳನ್ನು ನಿಯಂತ್ರಿಸುವ ಆಳುವ ಬಲ್ಲಾಳ ಹಾಗೂ ದುಡಿಯುವ ಬಂಟ ವರ್ಗಗಳ ವ್ಯವಸ್ಥೆ, ಈ ವ್ಯವಸ್ಥೆಯೊಳಗೆ ನಡೆದ ವರ್ಗ ಸಂಘರ್ಷ, ಅನ್ಯಾಯ, ಶೋಷಣೆಗಳ ವಿರುದ್ಧ ನಡೆಸಿದ ಪ್ರತಿಭಟನೆ-ಹೋರಾಟ – ಇವನ್ನೇ ಒಂದು ಕೋಟಿ ಚೆನ್ನಯ ಪ್ರತಿಬಿಂಬಿಸುತ್ತದೆ… ಒಂದು ಮೌಲ್ಯಕ್ಕಾಗಿ ಸಮೂಹ ಪ್ರತಿನಿಧಿಗಳಾಗಿ ಹೋರಾಡಿ ದುರಂತ ಕಂಡ ವೀರರು ಕೋಟಿ ಚೆನ್ನಯರು… ಕೋಟಿ ಚೆನ್ನಯರ ದುರಂತವಾದರೋ ಶೂದ್ರ ಶಕ್ತಿಯನ್ನು ಜಾಗೃತಗೊಳಿಸುವ ಪ್ರಜ್ಞೆಗೆ ಒಂದು ಮಾದರಿ ಪ್ರೇರಣೆಯಾಯಿತು. ಪರಿಶಿಷ್ಟ ಕಾಯಕ ಅನುಭವಿಸಿದ ಅವಮಾನ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬದುಕಿನ ಸಾಧ್ಯತೆಗಳನ್ನು ಕಂಡುಕೊಳ್ಳಲು ಕಾರಣವಾಯಿತು (ನಂದಾವರ ೨೦೦೧, ೩೨೮)

ಎಂದು ನಂದಾವರ ಅವರು ಅಭಿಪ್ರಾಯಪಡುತ್ತಾರೆ. ಕಾಲಘಟ್ಟವೊಂದರಲ್ಲಿ ವರ್ಣಾಶ್ರಮ ಧರ್ಮವನ್ನಾಶ್ರಯಿಸಿದ ನಾಗರಿಕವೆನಿಸಿಕೊಂಡ ಸಮಾಜವೊಂದು ಈ ನಾಡು ವಸ್ತು ಕಾಡುಗಳ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿತು. ಕೃಷಿ ವ್ಯವಸಾಯವನ್ನಾಶ್ರಯಿಸಿದ ಸಮಾಜ ನಾಗರಿಕವೆನಿಸಿಕೊಂಡ ಪ್ರಭಾವೀ ಸಮಾಜ, ಇವುಗಳೊಳಗೆ ನಡೆದ ಸಂಘರ್ಷ ಕೋಟಿ ಚೆನ್ನಯರಲ್ಲಿ ಪ್ರಧಾನವಾಗಿ ಗೋಚರಿಸುತ್ತದೆ. ನಾಡಿನ ಸಂರಕ್ಷಣೆಗಾಗಿ ಕಾಡಿನ ಪ್ರಾಣಿಗಳನ್ನು ಬೇಟೆಯಾಡುವುದು, ಬೇಟೆಯ ಕಾರಣವಾಗಿ ಗಡಿ ಅತಿಕ್ರಮಣ, ಸಂಘರ್ಷಗಳು, ಈ ಸಂಘರ್ಷದಲ್ಲಿ ಕ್ರಿಯಾತ್ಮಕ ಸಂಬಂಧ ಪಡೆದ ವೀರರ ಹೋರಾಟ, ಅವರ ಸಾಮರ್ಥ್ಯ, ಸಮುದಾಯದ ಅನುಕಂಪ, ಮೂಲಕವಾಗಿ ಹುಟ್ಟಿಕೊಂಡ ಆರಾಧನೆ ಕೋಟಿ ಚೆನ್ನಯ “ಮೌಖಿಕ ಮಹಾಕಾವ್ಯ”ದ ಶಿಲ್ಪವಿನ್ಯಾಸವಾಗಿದೆ. ಪಡುಮಲೆಯಲ್ಲಿ ಜನಿಸಿ, ಅಲ್ಲಿಂದಲೇ ತಮ್ಮ ಸಾಹಸಕಾರ್ಯಗಳನ್ನು ಪ್ರಾರಂಭಿಸಿದ ಕೋಟಿ-ಚೆನ್ನಯರು ಮುಂದೆ ಪಂಜ, ಎಣ್ಮೂರುಗಳಲ್ಲಿ ತಮ್ಮ ಸಾಹಸದ ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತಾರೆ. ಆದರೆ ಅಲ್ಲೇ ಹಿಂದೆ ತಮ್ಮ ರಕ್ಷಕನಾಗಿದ್ದ ಪರಮಲೆ ಬೀಡುವಿನ ಬಲ್ಲಾಳನ ಕುತಂತ್ರದ ಕೃತ್ಯಕ್ಕೆ ಅವರು ಬಲಿಯಾಗಬೇಕಾದ ದುರಂತವೊದಗುತ್ತದೆ (ನಂದಾವರ ೨೦೦೧, ೩೨೯) (ಸುಬ್ಬಣ್ಣರೈ ೧೯೯೪, ೭೦).

ಕೋಟಿ ಚೆನ್ನಯರು ಅನ್ಯಾಯ-ಅನಾಚಾರ, ದಬ್ಬಾಳಿಕೆ, ಸಾಮಾಜಿಕ ಭೇದ – ಭಾವ ಇತ್ಯಾದಿಗಳ ವಿರುದ್ಧ ಸಿಡಿದೆದ್ದ ವೀರರಾಗಿ ಚಿತ್ರಿತರಾಗಿದ್ದಾರೆ. ಪರಮಲೆ, ಪಂಜ, ಎಣ್ಮೂರುಗಳಲ್ಲಿ ದೊರೆಯುವ ಮೌಖಿಕ ಆಕರಗಳ ಪ್ರಕಾರ ಈ ಪ್ರದೇಶದಲ್ಲಿ ಇವರಿಬ್ಬರ ಗರಡಿಯೊಂದಿದೆ. ಇವರೀರ್ವರ ಸಮಾಧಿಯೂ ಇದೆ. ಅದರ ಪಕ್ಕದಲ್ಲಿಯೇ ಇವರ ಆಯುಧಗಳನ್ನು ಬಿಸಾಕಲಾಗಿದ್ದೆನ್ನಲಾದ ಬಾವಿಯು ಈಗ ಮುಚ್ಚಿಹೋಗಿ ಅದರ ಮೇಲೆ ಸುತ್ತ ಹುತ್ತ ಬೆಳೆದಿದೆ ಎಂದು ಭಾವಿಸಲಾಗಿದೆ. ಇದನ್ನು “ಐತಿಹಾಸಿಕ ಸತ್ಯವೆಂದು” ತಿಳಿಯಲಾಗುವುದಾದರೂ ಇದರ ಬಗ್ಗೆ ವಿದ್ವಾಂಸರಲ್ಲಿ, ಸಂಶೋಧನಾಸಕ್ತರಲ್ಲಿ ಇನ್ನೂ ಗೊಂದಲವಿದೆ ಎನ್ನುವ ಪೀಟರ್ ಜೆ.ಕ್ಲಾಸ್ ಅವರು, ಸದ್ಯ ದೊರಯುವ ಪಾಡ್ದಾನಾವೃತ್ತಿಯ ಆಧಾರದಿಂದ ಅದರ ಕಾಲವನ್ನು ಹದಿನೈದು-ಹದಿನಾರು ಶತಮಾನಗಳಿರಬಹುದು ಎಂದಿದ್ದಾರೆ (ಕ್ಲಾಸ್ ೧೯೮೭, ೧೨೭). ಕೋಟಿ ಚೆನ್ನಯರ ಪಾಡ್ದಾನದ ಕಾಲಾವಧಿ ಸುಮಾರು ಹದಿನೇಳನೇ ಶತಮಾನವೆಂದು ಡಾ.ವಿವೇಕ ರೈಯವರು ಊಹಿಸಿದ್ದಾರೆ. (ಕೋಟಿ ಚೆನ್ನಯ್ಯರ ಪಾಡ್ದಾನದಲ್ಲಿ ವಿಜಯನಗರದಿಂದ ಕ್ಷೌರಿಕನೊಬ್ಬನು ತುಳುನಾಡಿಗ ಬರುವ ವಿಚಾರವಿದೆ) (ಅಮೀನ್ ಮತ್ತು ಕೋಟ್ಲಾನ್ ೧೯೯೦, ೧೪-೧೫).

* * *

ಪೆರ್ಮಾಲೆ ಬಲ್ಲಾಳನೆಂಬ ಅರಸನು ಬೇಟೆಯಾಡಲು ಬೋಂಟೆಮಾರಿಗೆ ಹೋದಾಗ ನಂಜಿ ಮುಳ್ಳು ಚುಚ್ಚಿ, ಕಾಲಿನ ಬಾವು ತೀವ್ರವಾಗತೊಡಗಿತು. ಯಾವಾಗಲೂ ಆತನಿಗೆ ಔಷದಿ ನೀಡುವ ಸಾಯನ ಬೈದ್ಯನು ತನಗೆ ವಯಸ್ಸಾಗಿ ಕಣ್ಣು ಕಾಣಿಸುವುದಿಲ್ಲವೆಂದಾಗ, ಅವನ ತಂಗಿ ದೇಯಿ ಬೈದ್ಯೆತಿಗೆ ರಾಜನಿಗೆ ಔಷದಿ ನೀಡುವುದು ಅನಿವಾರ್ಯವಾಯಿತು. ತುಳುನಾಡಿನಲ್ಲಿ ಸಾಂಪ್ರದಾಯಿಕ ವೈದ್ಯರನ್ನು “ಬೈದ್ಯ”ರೆಂದು ಕರೆಯುತ್ತಾರೆ. ಇವರೆಲ್ಲರೂ ಅಲ್ಲಿನ “ಬಿಲ್ಲವ” ಸಮುದಾಯಕ್ಕೆ ಸೇರಿದವರು ಎಂಬುದನ್ನು ಇಲ್ಲಿ ಗಮನಿಸಬೇಕು. ಸೇಂದಿ ಇಳಿಸುವ ಕಸುಬಿನೊಂದಿಗೆ ಇವರು ವೈದ್ಯರು ಆಗಿರುವುದು ವಿಶೇಷವಾಗಿದೆ. ಸಾಮಾನ್ಯರಿಗೂ ಹಾಗೂ ರಾಜರಿಗೂ ಇವರು ವೈದ್ಯರಾಗಿರುವುದು ಇನ್ನೂ ವಿಶೇಷವಾಗಿದೆ.

ದೇಯಿ ಬೈದ್ಯೆತಿಯು ತುಂಬು ಗರ್ಭಿಣಿಯಾದ್ದರಿಂದ ರಾಜನು ಅವಳನ್ನು ಪಲ್ಲಕ್ಕಿಯಲ್ಲಿ ಕಾಡಿನಿಂದ ಗಿಡಮೂಲಿಕೆಗಳನ್ನು ತರಲು ಕಳುಹಿಸುವನು. ಅವಳ ಅರೈಕೆಯಿಂದ ಆತ ಗುಣಮುಖನಾಗುವನು. ಪ್ರತಿಯಾಗಿ ಅವಳಿಗೆ ವಸ್ತ್ರಾಭರಣಗಳನ್ನು ಬಲ್ಲಾಳನು ನೀಡುವನು. ಮನೆಗೆ ಹಿಂದಿರುವಾಗ ಹೆರಿಗೆ ನೋವು ಕಾಣಿಸಿಕೊಂಡಾಗ ದೇಯಿಯು ತೆಂಗಿನ ಮರವೊಂದನ್ನು ಅಪ್ಪಿ ಹಿಡಿದು ವೇದನೆಯನ್ನು ಅನುಭವಿಸುತ್ತಿದ್ದಳು. ಆಗ ಬುದ್ಯಂತನು (ಇವನನ್ನು “ಬುದ್ದಿವಂತ” ಎಂದು ಕರೆಯುತ್ತಾರೆ. ಇವನು ಬಲ್ಲಾಳನ ಮಂತ್ರಿ ಹಾಗೂ ತುಳುನಾಡಿನ ಬಲಾಢ್ಯ ಸಮುದಾಯಗಳ ‘ಬಂಟ’ ಜಾತಿಗೆ ಸೇರಿದವನಾಗಿದ್ದನು). “ಇದೇನು ಗರ್ವ ಹೆಚ್ಚಾಗಿ ಇಲ್ಲಿ ನಿಂತಿದ್ದೀಯಾ” ಎಂದು ಕೇಳಿದನು.”ಅಹಂಕಾರದಿಂದ ತಾನು ಹಾಗೆ ನಿಂತಿದ್ದರೆ ನರಳಬೇಕು” ಎಂದುತ್ತರಿಸಿದ ಅವಳು, “ಇಲ್ಲವಾದರೆ ನನಗೆ ಹುಟ್ಟುವ ಮಕ್ಕಳು [ನಿನ್ನನ್ನು] ನೋಡಿಕೊಳ್ಳುತ್ತಾರೆ ಎನ್ನುವಳು. (ವಿವೇಕ ರೈ ೧೯೮೫, ೫೫) ನಂತರ ಬಲ್ಲಾಳನು ಅವಳನ್ನು ಕರೆದುಕೊಂಡು ಬಂದು ಹೆರಿಗೆಯ ಏರ್ಪಾಡು ಮಾಡಿದನು. ಅವಳಿಗೆ ಜನಿಸಿದ ಗಂಡುಮಕ್ಕಳೇ ಕೋಟಿ-ಚೆನ್ನಯರು. ವಸಾಹತು ಹಾಗೂ ವಸಾಹತು ಪೂರ್ವಕಾಲದಲ್ಲಿ ತುಳುನಾಡಿನ ಬಲಾಢ್ಯರಾದ ಬಂಟರ ಮತ್ತು ಬಲಾಢ್ಯರಿಂದ ವಿಶೇಷವಾಗಿ ಶೋಷಣೆಗೆ ಒಳಗಾದ ಬಿಲ್ಲವರ ನಡುವಿವ ಸಂಬಂಧಗಳನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದು. ಬಲಾಢ್ಯ ಶಕ್ತಿಗಳನ್ನು ಎದುರಿಸಿ, ಅವರ ವ್ಯಂಗ್ಯ ಕುಹಕಗಳನ್ನು ಪ್ರತಿಭಟಿಸಿ, ತಮ್ಮ ಸ್ವಂತಿಕೆ ಗೌರವಗಳನ್ನು ಉಳಿಸಿಕೊಳ್ಳಲು ಯತ್ನಿಸಿದ ಬಿಲ್ಲವರ ಅಸಹಾಯಕ ಮಹಿಳೆಯ ಚಿತ್ರಣವು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ.

ದೇಯಿಯು ಬಹಳ ಕಾಲ ಉಳಿಯಲಿಲ್ಲ. ಈ ಕಾರಣದಿಂದ ಅವಳ ಅಣ್ಣ ಸಾಯನಬೈದ್ಯ ಮಕ್ಕಳನ್ನು ಬೆಳೆಸಿದನು. ಬೆಳೆಯುತ್ತಿರುವ ಮಕ್ಕಳಿಗೆ ಸಣ್ಣಸಣ್ಣ ಕಾರಣಗಳಿಗಾಗಿ ಬುದ್ಯಂತನು ಹಿಂಸಿಸುತ್ತಿದ್ದನು. ಕಷ್ಟಪಟ್ಟು ದುಡಿದು, ಫಸಲಿಗೆ ಬಂದಿದ್ದ ಕೋಟಿ ಚೆನ್ನಯರ ಭೂಮಿಗೆ ನೀರು ಬಿಟ್ಟು, ಗದ್ದೆಯನ್ನು ಬುದ್ಯಂತನು ಹಾಳು ಮಾಡಿದನು. ಸಿಡಿದೆದ್ದ ಚೆನ್ನಯನು ಬುದ್ಯಂತನನ್ನು ಕೊಂದುಬಿಡುವನು. ನಂತರದ ದಿನಗಳಲ್ಲಿ ಬಲ್ಲಾಳನನ್ನು ಇವರು ಎದುರು ಹಾಕಿಕೊಳ್ಳುವರು. ಇವರನ್ನು ಕೊಲ್ಲಲು ಛೂ ಬಿಟ್ಟ ಪಟ್ಟದ ಆನೆ ಕೋಟಿ ಚೆನ್ನಯರ “ನ್ಯಾಯನಿಷ್ಠುರತೆಗೆ ತಲೆಬಾಗಿ,” ವಾಪಸ್ಸು ಹೋಯಿತು ಎನ್ನುವ ವಿವೇಕ ರೈ ಅವರು, ಜಾತಿವ್ಯವಸ್ಥೆಯಿಂದಾಗಿ ಇವರೀರ್ವರು ನಲುಗಿ ಹೋಗುತ್ತಾರೆ ಎಂದು ವರ್ಣಿಸಿದ್ದಾರೆ. ಈ ಕಾರಣಕ್ಕಾಗಿ ಅವರು ಅನೇಕ ಬಾರಿ ಬಂಡೇಳುತ್ತಾರೆ. “ಶೂದ್ರರಿಗೆಂದು ಪ್ರತ್ಯೇಕವಾಗಿ ಇಟ್ಟಿದ್ದ ನೀರಿನ ಪಾತ್ರೆಯಲ್ಲಿ ನೀರು ಕುಡಿಯಲು ಅವರು (ಕೋಟಿ ಚೆನ್ನಯರು) ಒಪ್ಪದೆ, ತಮ್ಮ ಕತ್ತಿಗಳ ಮೇಲೆ ನೀರು ಸುರಿಯಲು ಹೇಳಿ, ನೀರು ಕುಡಿಯುತ್ತಾರೆ” ಎಂಬು ಉದಾಹರಣೆಯೊಂದನ್ನು ವಿವೇಕ ರೈ ಅವರು ಕೊಟ್ಟಿದ್ದಾರೆ. ಇನ್ನೊಂದು ಕಡೆ ಕೋಟಿ ಚೆನ್ನಯರಿಗೆ “ಬಾಕುಡರು, ಕೊರಗರು, ಮುಗೇರರು” ಆಳುಗಳಾಗಿದ್ದ ವಿಷಯ ಕೂಡ ನಮ್ಮ ಕುತೂಹಲವನ್ನು ಕೆರಳಿಸುತ್ತದೆ (ವಿವೇಕ ರೈ ೧೯೮೫, ೫೬) ಜೈನರು, ಬಂಟರು ಅಥವಾ ಬ್ರಾಹ್ಮಣರಿಗೆ ಎದುರಾಗಿ ನಿಲ್ಲುವ ಈ ಅವಳಿ ಸಹೋದರರು ತಮಗಿಂತಲೂ ಕೆಲಸ್ತರದವರನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಬಗೆಯ ಸಾಮಾಜಿ ರಚನೆಯನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು.

ಬುದ್ಯಂತನನ್ನು ಕೊಂದದ್ದಕ್ಕೆ ಬಲ್ಲಾಳನು ಕೋಟಿ ಚೆನ್ನಯರಿಗೆ ಉಪ್ಪರಿಗೆ ತೋರಿಸುತ್ತೇನೆಂದು ಅವರನ್ನು ಬಂಧಿಸಿಬಿಟ್ಟನು. ಸರಪಳಿಯಿಂದ ಬಿಗಿಯಲ್ಪಟ್ಟ ಕೋಟಿ ಚೆನ್ನಯರು “ಬಿರ್ಮೆರ್ ಭೂತ”ವನ್ನು ಪ್ರಾರ್ಥಿಸಿ ತಮ್ಮನ್ನು ರಕ್ಷಿಸಬೇಕೆಂದು ಮೊರೆಯಿಟ್ಟರು. ಪರಿಣಾಮವಾಗಿ ಅವರಿಗೆ ಅತಿಮಾನುಷ ಶಕ್ತಿ ಬಂತು. ಸರಪಳಿಗಳು ತುಂಡಾದವು. ಉಪ್ಪರಿಗೆಯ ಕೋಟೆ ಕಲ್ಲುಗಳು ಕುಸಿದು ಬಿದ್ದವು. ಹೀಗೆ ಅವರ ಪರಾಕ್ರಮಗಳು, ಅತಿಮಾನುಷ ಶಕ್ತಿಗಳು ಬೇರೆ ಬೇರೆ ಸಂದರ್ಬಗಳಲ್ಲಿ ಕಾಣಸಿಗುತ್ತವೆ. ಕೊನೆಗೆ ಇವರಿಗೆ ಎಣಂಬೂರಿನ ಬಲ್ಲಾಳನು ಆಶ್ರಯ ನೀಡುವನು. ಇದರಿಂದಾಗಿ ಕ್ರೋಧ್ರಗೊಂಡ ಪಂಜದ ಬಲ್ಲಾಳನು (ಅವಳಿ ಸಹೋದರರ ಹಳೆಯ ಯಜಮಾನ) ಎಣಂಬೂರು (ಎಣ್ಮೂರು) ಬಲ್ಲಾಳನನ್ನು ಅವಮಾನಿಸುವ ಪತ್ರವೊಂದನ್ನು ಬರೆದು, ಕೋಟಿ ಚೆನ್ನೆಯರನ್ನು ಹಳಿಯುವನು ಹಾಗೂ ಎಣಂಬೂರು ಬಲ್ಲಾಳನು “ಸ್ತ್ರೀ ವೇಷ” ಧರಿಸಬೇಕೆಂದು ಗೇಲಿ ಮಾಡುವನು. ಅಂತಿಮವಾಗಿ ಪಂಜಸೀಮೆ ಮತ್ತು ಎಣಂಬೂರು ಸೀಮೆಯವರ ನಡುವೆ ಯುದ್ಧ ಆರಂಭವಾಗುತ್ತದೆ. ಯುದ್ಧದಲ್ಲಿ ಎಣಂಬೂರು ಬಲ್ಲಾಳನಿಗೆ ಕೋಟಿ ಚೆನ್ನಯರ ಪರಾಕ್ರಮದ ಹೋರಾಟದಿಂದಾಗಿ ಜಯವಾಗುತ್ತದೆ. ಆದರೆ ಕೋಟಿಯು ಯುದ್ಧದಲ್ಲಿ ಸಾಯುತ್ತಾನೆ. ಶವದಹನದ ಬಳಿಕ ಕೋಟಿಯ ಆತ್ಮವು ಬ್ರಹ್ಮನ ಬಳಿಗೆ ಹೋದಾಗ, “ತಮ್ಮನಿಲ್ಲದ ಒಂಟಿಯಾಗಿ ತನ್ನ ಆಸ್ಥಾನಕ್ಕೆ ಬರಬಾರದೆಂದು” ಬ್ರಹ್ಮನು ಕೋಟಿಗೆ ಹೇಳಿದ. ಕಾಕತಾಳೀಯ ಎನ್ನುವಂತೆ “ಅಣ್ಣನಿಲ್ಲದೆ ಬದುಕು ಬರಡೆಂದುಕೊಂಡ” ಚೆನ್ನಯನು ಬಂಡೆಕಲ್ಲಿಗೆ ತನ್ನ ತಲೆಯನ್ನು ಅಪ್ಪಳಿಸಿ ಆತ್ಮಹತ್ಯೆ ಮಾಡಿಕೊಂಡನು. ನಂತರ ಬ್ರಹ್ಮನ ಬಳಿಗೆ ಹೋದ ಅವಳಿ ಸಹೋದರರನ್ನು, ಬ್ರಹ್ಮನು ಗೌರವಿಸಿ, ಸಭೆಯಲ್ಲಿ ಅವರನ್ನು ಪ್ರಮುಖರನ್ನಾಗಿ ನೇಮಿಸುತ್ತಾನೆ (ವಿವೇಕ ರೈ ೧೯೮೫, ೫೮).

* * *