ನೀರಿನಿಂದ ಜೇನುತುಪ್ಪ

ನೀರನ್ನು ಪೆಟ್ರೋಲ್ ಮಾಡಿ ಪರಿವರ್ತಿಸಿದ ಖ್ಯಾತ ಪವಾಡ ಪುರುಷರೋರ್ವರು ನಮ್ಮಲ್ಲಿದ್ದಾರೆ. ಇದೇ ರೀತಿಯಲ್ಲಿ ನೀರನ್ನು ದ್ರಾಕ್ಷಾರಸವಾಗಿ ಪರಿವರ್ತಿಸಿದ ಪವಾಡದ ಉಲ್ಲೇಖ ಬೈಬಲ್‌ನಲ್ಲಿದೆ.

ವೀಕ್ಷಕರಿಗೆ ಒಂದು ಸ್ಟೀಲ್ ಲೋಟವನ್ನು ತೋರಿಸಲಾಗುತ್ತದೆ. ಬಳಿಕ, ಇದರೊಳಗೆ ನೀರು ಸುರಿದು, ಇನ್ನೊಂದು ಲೋಟವನ್ನು ಅದರ ಮೇಲೆ ಮುಚ್ಚಲಾಗುತ್ತದೆ. ಕೆಳಗಿನ ಲೋಟವನ್ನು ಹಿಡಿದು, ಮೇಲಿನದನ್ನು ಎತ್ತಿದಾಗ ಒಳಗೆ ಹಾಕಿದ ನೀರು ಮಾಯ? ಬದಲಿಗೆ ಜೇನು ತುಪ್ಪವಿರುತ್ತದೆ! ನೀರನ್ನು ಜೇನುತುಪ್ಪವನ್ನಾಗಿ ಪರಿವರ್ತಿಸುವ ಶಕ್ತಿ ನಮ್ಮಲ್ಲಿದೆಯೆಂದು ನಾವೇ ಹೇಳಿಕೊಳ್ಳಬಹುದು!

ನೀರನ್ನು ಜೇನುತುಪ್ಪವಾಗಿ ಪರಿವರ್ತಿಸುವುದು ಬಹಳ ಸುಲಭ. ಮೊದಲು ತೋರಿಸಿದ ಲೋಟವು ನಿಜವಾಗಿಯೂ ಎರಡು ಲೋಟಗಳು. ಒಂದು ಉದ್ದದ ಲೋಟದೊಳಗೆ ಚಿಕ್ಕದನ್ನು ಇರಿಸಲಾಗುವುದು. ಮೇಲಿನ ಚಿಕ್ಕ ಲೋಟಕ್ಕೆ ನೀರು ಸುರಿದು, ಅದರ ಮೇಲೆ ಮೂರನೆಯ ಲೋಟವನ್ನು ಮುಚ್ಚಿದಾಗ, ಒಳಗಿರುವ ಚಿಕ್ಕ ಲೋಟವು ಅದಕ್ಕೆ ಅಂಟಿಕೊಂಡು ಹೊರಗೆ ಬರುವುದು. ಹೊರಗಿನ ಮುಚ್ಚಿದ ಲೋಟವನ್ನು ಎತ್ತಿದಾಗ ಚಿಕ್ಕದು ಅದರ ಒಟ್ಟಿಗೆ ಬರುತ್ತದೆ. ಚಿಕ್ಕ ಲೋಟವು ಇಲ್ಲವಾದಾಗ ಅದರ ಕೆಳಗಿನ ಲೋಟದಲ್ಲಿರುವ ಜೇನು ತುಪ್ಪವು ಕಂಡು ಬರುವುದು!.

ಇದೇ ರೀತಿಯಲ್ಲಿ ನೀರನ್ನು ಪೆಟ್ರೋಲ್ ಆಗಿಯೋ, ದ್ರಾಕ್ಷಾರಸ ಆಗಿಯೋ ಪರಿವರ್ತಿಸಬಹುದೆಂಬ ವಿವರಣೆಯನ್ನು ಕೊಡಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೇನೆಂದರೆ ಜೇನು ತುಪ್ಪವಿಡುವ, ಅದರ ಮೇಲೆ ಹಾಕಿ ನೀರು ಸುರಿಯುವ ಲೋಟಗಳು ಸ್ಟೇನ್‌ಲೆಸ್ ಸ್ಟೀಲ್‌ನದಾಗಿರಬೇಕು. ಬಳಿಕ, ಅವುಗಳ ಮೇಲೆ ಮುಚ್ಚುವ ಲೋಟವು ಅಲ್ಲುಮಿನಿಯಂದಾಗಿರಬೇಕು. ಲೋಟಗಳನ್ನು ಒಂದರೊಳಗೊಂದು ಸರಿಯಾಗಿ ಹಿಡಿಸುವಂತೆ ಪರೀಕ್ಷೆ ಮಾಡಿದ ಬಳಿಕವೇ ಖರೀದಿಸಬೇಕು.

ಆಹಾರವನ್ನು ಬಹುಪಟ್ಟು ಮಾಡುವುದು

ಕಡಿಮೆ ಪ್ರಮಾಣದಲ್ಲಿದ್ದ ಆಹಾರವನ್ನು ಅನೇಕ ಪಟ್ಟು ವೃದ್ದಿಗೊಳಿಸಿದ ಪವಾಡಗಳ ಕಥೆ ನೀವು ಕೇಳಿರಬಹುದು. ಮಹಾಭಾರತದಲ್ಲಿ ದ್ರೌಪದಿಯು, ಬೈಬಲ್‌ನಲ್ಲಿ ಯೇಸುಕ್ರಿಸ್ತನೂ ಅತಿ ಕಡಿಮೆಯಿದ್ದ ಆಹಾರ ವಸ್ತುವನ್ನು ಬಹುಪಾಲು ಮಾಡಿದ್ದ ಉಲ್ಲೇಖವಿದೆ.

ವೀಕ್ಷಕರಿಗೆ ಎರಡು ಖಾಲಿ ಡಬ್ಬಗಳನ್ನು ಮುಖಕೆಳಗೆ ಮಾಡಿ ತೋರಿಸಲಾಗುತ್ತದೆ. ಎರಡೂ ನೋಡುವುದಕ್ಕೆ ಖಾಲಿ ಇದೆ. ಇವುಗಳಲ್ಲಿ ಒಂದಕ್ಕೆ ಎರಡು ಅಕ್ಕಿಯ ಕಣಗಳನ್ನು ಹಾಕಿ, ಇನ್ನೊಂದನ್ನು ಮುಚ್ಚಲಾಗುತ್ತದೆ. ಬಳಿಕ ಅವುಗಳನ್ನು ವಿಂಗಡಿಸಲಾಗುವುದು, ನೋಡಿದಾಗ ಒಂದಕ್ಕೆ ಹಾಕಿದ ಅಕ್ಕಿಯ ಎರಡು ಕಣಗಳು ಬಹಳಷ್ಟಾಗಿವೆ. ಒಂದೆರಡು ಕಣಗಳು ಒಂದು ಕಿಲೋಗಿಂತಲೂ ಹೆಚ್ಚಾಗಿವೆ.

ಈ ‘ಪವಾಡ’ಕ್ಕೆ ಎರಡು ವಿಶೇಷವಾದ ಪಾತ್ರೆಗಳು ಅಗತ್ಯ. ಯಾ ಇದಕ್ಕೂ ಹಿಂದಿನ ನೀರನ್ನು ಜೇನುತುಪ್ಪ ಮಾಡಿದ ಪ್ರಯೋಗದ ವಸ್ತುಗಳನ್ನೇ ಉಪಯೋಗಿಸಬಹುದು. ಅನ್ನದ ಒಂದೆರಡು ಕಣಗಳನ್ನು ಮೇಲಿನ ಪಾತ್ರೆಗೆ ಹಾಕಿ; ಕೆಳಗಿನದರಲ್ಲಿ ತುಂಬಾ ಅಕ್ಕಿಯನ್ನಿರಿಸಬಹುದು. ಮೇಲಿನ ಪಾತ್ರೆಯ ಮುಟ್ಟುವ ಪಾತ್ರೆಯೊಂದಿಗೆ ಎದ್ದು ಬರುವ ಕಾರಣ ಮುಟ್ಟಿ ತೆಗೆದಾಗ ಅಕ್ಕಿಯ ಪ್ರಮಾಣ ಹೆಚ್ಚುವ ‘ಪವಾಡ’ ನಡೆದಂತೆ ಕಾಣುವುದು.

ಕಮರ್ ಆಲಿ ದರವೇಶ್‌ನ ಪವಾಡ

ಪೂನಾದ ಬಳಿ ಕಮರ್ ಆಲಿ ದರವೇಶ್ ಎಂಬಾತನ ದರ್ಗಾ ಇದೆ. ಅಲ್ಲಿ ಒಂದು ಕಲ್ಲನ್ನು ಬರೇ ಬೆರಳಿಂದ ಎತ್ತುವ ‘ಪವಾಡ’ ನಡೆಯುತ್ತದೆ. ಈ ದರ್ಗಾದಲ್ಲಿ ಸುಮಾರು 80 ಕೆ. ಜಿ. ತೂಕದ ಕಲ್ಲಿಗೆ ನಾಲ್ಕು ಮಂದಿ ಬೆರಳು ಕೊಟ್ಟು ಕಲಂದರ್ ಬಾಬಾನ ಹೆಸರು ಹೇಳಿ ಅದನ್ನು ಅನಾಮತ್ತಾಗಿ ಎತ್ತಿಬಿಡುತ್ತಾರೆ. ಈತನ ಶಕ್ತಿಯಿಂದಾಗಿ ಕಲ್ಲಿನ ತೂಕವು ಲಘುವಾಗುತ್ತದೆಂಬುದು ಇದರ ವಿವರಣೆ.

ಪ್ರೇಕ್ಷಕರ ಮಧ್ಯೆ ಇರುವ ಹೆಚ್ಚು ತೂಕದ ವ್ಯಕ್ತಿಯೋರ್ವರನ್ನು ವೇದಿಕೆಗೆ ಆಹ್ವಾನಿಸಿ ಕೈಗಳಿಲ್ಲದ ಕುರ್ಚಿ ಯಾ ಸ್ಟೂಲಿನ ಮೇಲೆ ಕುಳ್ಳಿರಿಸಿದ ಬಳಿಕ ನಾಲ್ಕು ಮಂದಿ ಒಂದೇ ಗಾತ್ರದ ತೆಳ್ಳಗಿನ ವ್ಯಕ್ತಿಗಳನ್ನೂ ವೇದಿಕೆಗೆ ಕರೆಸಿ ಬಳಿಕ ತಮ್ಮ ತೋರುಬೆರಳುಗಳನ್ನು ಒಟ್ಟಾಗಿರಿಸಿ, ಅವುಗಳನ್ನು ಬಾಗದಂತಿರಿಸಲು ತಿಳಿಸಿ. ನಾಲ್ಕು ಮಂದಿಯೂ ತಮ್ಮ ಬೆರಳುಗಳನ್ನು ಮೊಣಕಾಲ ಹಿಂದಿನ ಸಂಧಿ, ಕಂಕುಳುಗಳಲ್ಲಿರಿಸಲು ತಿಳಿಸಿ. ಆ ಬಳಿಕ ವ್ಯಕ್ತಿಯನ್ನು ಎತ್ತುವ ಸೂಚನೆ ಕೊಡಿ. ಅವರಿಂದ ಎತ್ತಲಾಗುವುದಿಲ್ಲ. ಕಾರಣ ವಿಚಾರಿಸಿದರೆ, ಅದರ ಭಾರ ಬಹಳವಿದೆಯೆಂದು ತಿಳಿಸುತ್ತಾರೆ. ಆಗ, ಅವರ ಭಾರವನ್ನು ಕಡಿಮೆ ಮಾಡುವ ಮಂತ್ರವೊಂದು ನಮ್ಮಲ್ಲಿದೆಯೆಂದು ತಿಳಿಸಿ. ಇಂಗ್ಲೀಷಿನಲ್ಲಿ ‘one, two, three, up’ ಎಂದು ಹೇಳಿದಾಗ ಒಮ್ಮೆಲೇ ಎತ್ತಬೇಕೆಂದು ಸೂಚಿಸಿ. ಮುಂದಿನ ಬಾರಿ ಅವರು ಬೆರಳುಗಳನ್ನು ಯಥಾಸ್ಥಾನದಲ್ಲಿರಿಸಿದಾಗ ‘one, two, three, up’ ಎಂದು ಕೂಗಿ ‘up’ ಹೇಳುವಾಗ ಅವರು ಎಷ್ಟೇ ಭಾರದ ವ್ಯಕ್ತಿಯಾಗಿರಲಿ, ಅವರನ್ನು ಸುಲಭವಾಗಿ ಎತ್ತುತ್ತಾರೆ!

ಈ ಪವಾಡದ ವಿವರಣೆಯೇನು? ಮೊದಲನೆಯ ಬಾರಿ ಎತ್ತುವಾಗ ಪ್ರತಿಯೊಬ್ಬರು ಭಾರದ ವ್ಯಕ್ತಿಯ ಪೂರ್ತಿ ತೂಕವನ್ನು ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ‘ಮಂತ್ರ’ ಭೋಧಿಸಿದಾಗ ಎಲ್ಲರೂ ಒಮ್ಮೆಲೇ ಎತ್ತುವ ಕಾರಣ, ತೂಕವು ಸಮನಾಗಿ ಹಂಚಿಬಿದ್ದು, ಅವರು ಎಷ್ಟೇ ಭಾರದ ವ್ಯಕ್ತಿಯನ್ನೂ ಸುಲಭವಾಗಿ ಎತ್ತುತ್ತಾರೆ!.

ಎಲ್ಲರನ್ನೂ ಮೂರ್ಖ ಮಾಡುವುದು ಸುಲಭ

ಕೆಲವೊಮ್ಮೆ ಈ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನಡೆಸುವವರಿಗೆ ಪ್ರಶ್ನೆಗಳು ಬರುತ್ತವೆ. ಇದರಲ್ಲಿ ಒಂದು ಏನೆಂದರೆ, ಲಕ್ಷಾಂತರ ಮಂದಿ ಬಾಬಾ, ಪವಾಡ ಪುರುಷ, ದೇವರು, ದೆವ್ವಗಳನ್ನು ನಂಬುತ್ತಾರೆ. ಅವರೇನು ಮೂರ್ಖರೆ? ಎಂದು.

ಇದನ್ನು ತೋರಿಸಲು ಕೆಳಗೆ ತೋರಿಸಿರುವ ಪ್ರಯೋಗವನ್ನು ಉಪಯೋಗಿಸಿ. ಮೊದಲನೆಯದಾಗಿ, ‘ಎಲ್ಲರೂ ನಾನು ಹೇಳಿದಂತೆ ಮಾಡಬೇಕು ‘ ಎಂದು ತಿಳಿಸಿ. ‘ಯಾರಿಗೆಲ್ಲಾ ಕನ್ನಡ ಅರ್ಥವಾಗುವುದು ಕೈ ಎತ್ತಿ’ ಎನ್ನಿ. ‘ಎತ್ತಿದ ಕೈಗಳ ಬೆರಳುಗಳನ್ನು ಮಡಿಸಿ, ತೋರುಬೆರಳನ್ನು ಪ್ರತ್ಯೇಕವಾಗಿ ಹಿಡಿಯಿರಿ’ ಎಂದು ಹೇಳುತ್ತಾ, ಇದನ್ನು ಮಾಡಿತೋರಿಸಿ. ಬಳಿಕ, ‘ಈ ಬೆರಳನ್ನು ನಿಮ್ಮ ಕೆನ್ನೆಯ ಮೇಲಿರಿಸಿ’ ಎನ್ನುತ್ತಾ ನಿಮ್ಮ ಬೆರಳನ್ನು ನಿಮ್ಮ ಗದ್ದದ ಮೇಲೆ ಇರಿಸಿ. ಪ್ರೇಕ್ಷಕರಲ್ಲಿ 90%ಕ್ಕಿಂತಲೂ ಹೆಚ್ಚಿನವರು, ನೀವು ಮಾಡಿದನ್ನೇ ಮಾಡುತ್ತಾರೆ! ಬೆರಳನ್ನು ಇಟ್ಟ ಕಡೆಯಲ್ಲೇ ಇರಿಸಿಯೆಂದು ಹೇಳಿದ ಬಳಿಕ ಎಲ್ಲರಿಗೂ ನೀವು ಹೇಳಿದ ಮೊದಲನೆಯ ವಾಕ್ಯವನ್ನು ಪುನರುಚ್ಚರಿಸಿ. ಆಗ, ಎಲ್ಲರಿಗೂ ತಾವು ಸುಲಭವಾಗಿ ಮೂರ್ಖರಾದ ವಿಷಯ ನೆನಪಾಗುತ್ತದೆ!

ನಾವು ನಮ್ಮ ಬುದ್ದಿ ಶಕ್ತಿಯನ್ನು ಉಪಯೋಗಿಸಲು ಕಲಿಯದಿರುವುದೇ ನಾವು ಪವಾಡ ಪುರುಷರಿಂದ ಮೋಸ ಹೋಗಲು ಕಾರಣವೆಂಬ ವಿವರಣೆ ಇಲ್ಲೇ ಇದೆ!.

ಅತೀಂದ್ರಿಯ ಜ್ಞಾನದ ಪ್ರದರ್ಶನ

ಕೆಲವು ಪವಾಡ ಪುರುಷರು ತಮ್ಮಲ್ಲಿ ಇತರ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳುವ ಶಕ್ತಿಯಿದೆಯೆಂದು ಹೇಳಿಕೊಳ್ಳುತ್ತಾರೆ. ಇದನ್ನು ನಂಬುವ ಶಿಷ್ಯ ವರ್ಗದವರೂ ಇದ್ದಾರೆ! ಮನಸ್ಸಿನಲ್ಲಿರುವುದನ್ನು ಓದುವುದು ಹೇಗೆಂದು ತೋರಿಸಲು ಪ್ರೇಕ್ಷಕ ವರ್ಗದಿಂದ ಯಾರಾದರೂ ಮುಂದೆ ಬರಬೇಕೆಂದು ತಿಳಿಸಿ.

ಯಾರಾದರೂ ಒಬ್ಬರು ಖಂಡಿತವಾಗಿ ಬರುತ್ತಾರೆ. ಆಗ, ಅವರನ್ನು ನಿಮಗೆ ಬೆನ್ನು ಮಾಡಲು ಹೇಳಿ. ಬಳಿಕ ಒಂದು ಸಂಖ್ಯೆಯನ್ನು ಮನಸ್ಸಿನಲ್ಲೇ ಸ್ಮರಿಸಲು ಹೇಳಿ. ಆತ, ಇದನ್ನು ಆರಂಭಿಸುವುದರೊಳಗೆ ಪ್ರೇಕ್ಷಕ ವರ್ಗದಿಂದ ಒಬ್ಬರು ಬಂದು ನಿಮ್ಮನ್ನು ತೆಗಳುತ್ತಾರೆ. ಮೇಲೆ ಬಂದಾತ ನಿಮ್ಮದೇ ವ್ಯಕ್ತಿಯೆಂದೂ ತಾಕತ್ತಿದ್ದಲ್ಲಿ ತನ್ನ ಮನಸ್ಸನ್ನು ಓದಬೇಕೆಂದೂ ಸವಾಲೆಸೆಯುತ್ತಾನೆ. ಆಗ, ಮೊದಲು ಮುಂದೆ ಬಂದ ವ್ಯಕ್ತಿ ಇದನ್ನು ನಿರಾಕರಿಸಿದರೂ ಆತ ಪಟ್ಟು ಬಿಡುವುದಿಲ್ಲ. ಕೊನೆಗೆ, ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡು, ಮೊದಲನೆಯ ವ್ಯಕ್ತಿಯನ್ನು ಹಿಂದೆ ಕಳುಹಿಸಿ, ಎರಡನೆಯ ವ್ಯಕ್ತಿಯ ಮನಸ್ಸನ್ನು ಓದಲು ಮುಂದಾಗುವಿರಿ.

ಈ ವ್ಯಕ್ತಿ ಮೊದಲು ಒಂದು ಸಂಖ್ಯೆಯನ್ನು ನೆನಪಿಡುತ್ತಾನೆ. ನೀವು ಆ ಸಂಖ್ಯೆ ತಿಳಿಸುತ್ತೀರಿ. ಕೋಪದಿಂದ ಅದನ್ನು ಸರಿಯೆಂದು ಒಪ್ಪುತ್ತಾನೆ. ಮತ್ತೆ ಒಂದು ಹೂವಿನ ಹೆಸರು ಸ್ಮರಿಸಲು ತಿಳಿಸಿ. ಅದನ್ನೂ ನೀವು ಸರಿಯಾಗಿ ತಿಳಿಸುತ್ತೀರಿ. ಇದೇ ರೀತಿಯಲ್ಲಿ ಕೆಲವು ವಿಷಯಗಳನ್ನು ತಿಳಿಸಿದಾಗ ಆತ ನಿಮ್ಮ ಕಾಲಿಗೆ ಬಿದ್ದು, ನಿಮ್ಮ ಶಕ್ತಿಯ ಬಗ್ಗೆ ಸಂದೇಹ ಪಟ್ಟಿದ್ದಕ್ಕೆ ಕ್ಷಮೆ ಬೇಡುತ್ತಾನೆ. ಪ್ರೇಕ್ಷಕರು ಸ್ಥಂಬೀಭೂತರಾಗುತ್ತಾರೆ.

ವಾಸ್ತವವಾಗಿ ಇಲ್ಲಿ ನಡೆದದ್ದೇನು? ಮೊದಲು ಬಂದ ವ್ಯಕ್ತಿ ನಿಜವಾಗಿಯೂ ನಿರ್ಧೋಷಿ, ನಿಮ್ಮ ‘ಜನ’ ಅಲ್ಲ. ಆದರೆ, ಆತನು ಪ್ರಯೋಗಕ್ಕೆ ಸೇರುವುದನ್ನು ಅಕ್ಷೇಪಿಸಿದ ವ್ಯಕ್ತಿ ನೀವೆ ಮೊದಲು ಹೇಳಿಟ್ಟವರು! ಈ ಪ್ರಯೋಗಕ್ಕೆ ಈ ಎರಡನೆಯ ವ್ಯಕ್ತಿಯಾಗಿ ಒಳ್ಳೆಯ ನಟನಾ ಚಾತುರ್ಯ ಉಳ್ಳವರನ್ನು ಆರಿಸಬೇಕು. ಈ ಪ್ರಯೋಗದ ಮೂಲಕ ಪ್ರೇಕ್ಷಕರಲ್ಲಿ ಅತೀಂದ್ರಿಯ ಶಕ್ತಿಯಿದೆಯೆಂದು ನಂಬಿಸುವುದು ಎಷ್ಟು ಸುಲಭವೆಂದು ತೋರಿಸಿಕೊಡಬಹುದು!

ತೆಂಗಿನ ಕಾಯಿಯಿಂದ ಕೆಂಪು ಮತ್ತು ಹಸಿರು ನೀರು

ಭಕ್ತ ಪವಾಡ ಪುರುಷರಲ್ಲಿ ಪ್ರಶ್ನೆ ಕೇಳಲು ಹೋದಾಗ ಮಂತ್ರಿಸಿದ ತೆಂಗಿನ ಕಾಯಿ ಕೊಡಲಾಗುತ್ತದೆ. ಅದನ್ನು ಒಡೆದಾಗ ಒಳಗೆ ಕೆಂಪು ನೀರು! ಭಕ್ತನಿಗೆ ಗಾಬರಿಯಾಗುವುದು. ಬಳಿಕ, ವಿಫ್ನ ನಿವಾರಣೆಗೆ ಪೂಜೆ ಇತ್ಯಾದಿ ನಡೆದ ಬಳಿಕ, ಮತ್ತೊಂದು ತೆಂಗಿನ ಕಾಯಿ ಕೊಡಲಾಗುತ್ತದೆ. ಅದನ್ನು ಒಡೆದಾಗ ಒಳಗೆ ಹಸಿರು ನೀರು. ಭಕ್ತ ತನ್ನ ಕೆಲಸ ನಿರ್ವಿಫ್ನವಾಗಿ ನಡೆಯುವುದೆಂದು ಸಂತೋಷದಿಂದ ಹೋಗುತ್ತಾನೆ.

ತೆಂಗಿನ ಕಾಯಿಯಿಂದ ಬಣ್ಣದ ನೀರು ಬರಿಸುವುದು ಹೇಗೆ? ಸಿರಿಂಜ್ ಮತ್ತು ತೆಳ್ಳಗಿನ ಸೂಜಿಯ ಮೂಲಕ ತೆಂಗಿನ ಕಾಯಿಯ ಕಣ್ಣನ್ನು ಉಪಯೋಗಿಸಿ, ಒಳಗೆ ಬಣ್ಣದ ಶಾಯಿ ತುಂಬಿಸಲಾಗುತ್ತದೆ. ಬಳಿಕ ತೂತಾದ ಕಡೆ ಸ್ವಲ್ಪ ಕಪ್ಪಗಿನ ಮೇಣವನ್ನು ಸವರಿದರಾಯಿತು. ಸೂಜಿಯು ಚುಚ್ಚುವಾಗ ಉಂಟಾದ ಚಿಕ್ಕ ತೂತು ಮುಚ್ಚಿ ಹೋಗುತ್ತದೆ. ಪರೀಕ್ಷೆ ಮಾಡಿದವರಿಗೆ ತೆಂಗಿನ ಕಾಯಿ ಸರಿಯಾಗಿರುವಂತೆ ಕಾಣಿಸುವದು

ಈ ‘ಪವಾಡ’ದ ಮೂಲಕ ವೀಕ್ಷಕರಿಗೆ ತೆಂಗಿನ ಕಾಯಿ ಉಪಯೋಗಿಸಿ ಮಾಡುವ ಮೋಸವನ್ನು ತೋರಿಸಿಕೊಡಬಹುದು.