ಗಾಜು ತುಂಡುಗಳ ಮೇಲೆ ನಿಂತಿರುವ, ಬಲ್ಬ್ ಒಡೆದು ತಿನ್ನುವ, ಮುಳ್ಳಿನ ಹಾಸಿಗೆಯ ಮೇಲೆ ನಿಲ್ಲುವ, ನಾಲಿಗೆಗೆ ತ್ರಿಶೂಲ ಇತ್ಯಾದಿ ವಿವಿಧ ಬಿಪವಾಡ’ಗಳನ್ನು ಮಾಡುವ ವ್ಯಕ್ತಿಗಳನ್ನು ನಾವು ಕಂಡಿರಬಹುದು. ಇವರನ್ನು ನೋಡುವವರಿಗೆ ಇವರಿಗೆ ಯಾವುದೋ ದೈವಿಕ ಶಕ್ತಿಯಿರುವ ಕಾರಣ ಯಾವುದೇ ಅಪಾಯವಾಗುವುದಿಲ್ಲವೆಂಬ ಭ್ರಮೆಯಾಗುವುದು ಸಹಜ. ಆದರೆ, ವಾಸ್ತವವಾಗಿ ಇವರು ನಡೆಸುವ ಪವಾಡಗಳಿಗೆ ಯಾವುದೇ ಅತಿಮಾನುಷ ಶಕ್ತಿಯ ಅಗತ್ಯ ಯಾ ನೋವನ್ನು ತಡೆದುಕೊಳ್ಲುವ ಸಾಮರ್ಥ್ಯವು ಬೇಡ.  

ಚಲಿಸದ ಕತ್ತಿ ಕತ್ತರಿಸುವುದಿಲ್ಲ

ಸುಮಾರು 2 ೧/೨ ಅಡಿ ಉದ್ದದ ಒಂದೇ ರೀತಿಯ ಕತ್ತಿಗಳನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ. ಈ ಕತ್ತಿಗಳು ಹರಿತವಾಗಿವೆಯೆಂದು ತೋರಿಸಲು ಸೌತೆಕಾಯಿ, ಮುಲ್ಲಂಗಿ ಯಾ ಕ್ಯಾರೆಟ್ ಕತ್ತರಿಸಲಾಗುವುದು. ಬಳಿಕ, ಇವುಗಳನ್ನು ಭದ್ರವಾಗಿ ಇಬ್ಬರು ಹಿಡಿದುಕೊಳ್ಳುತ್ತಾರೆ. ವೀಕ್ಷಕರ ಮಧ್ಯೆಯಿಂದ ಆರಿಸಲಾದ ಚಿಕ್ಕ ಹುಡುಗ ಈ ಕತ್ತಿಗಳ ಮೇಲೆ ನಿಲ್ಲುತ್ತಾನೆ. ಕಾಲಿಗೆ ಗಾಯ ಯಾ ನೋವು ಆಗುವುದಿಲ್ಲ. ನೋಡುವವರಿಗಿದೊಂದು ಆಶ್ಚರ್ಯ.

ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ಮೈಯಲ್ಲಿ ಭೂತ ಸಂಚಾರವಾದಾಗ ಕತ್ತಿ ಮೇಲೆ ನಿಂತು, ಭೂತದ ಶಕ್ತಿಯಿಂದಾಗಿ ಇವುಗಳಿಂದ ಗಾಯವಾಗುವುದಿಲ್ಲವೆಂದು ಪ್ರಚಾರ ಮಾಡಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯಗಳೇನೆಂದರೆ :

1. ಕತ್ತಿಗಳು ಬಾಗದ ಲೋಹದವಾಗಿರಬೇಕು.

2. ಅವು ಅಡ್ಡ ತಿರುಗದಂತೆ ಭದ್ರವಾಗಿ ಹಿಡಿದಿರಬೇಕು.

3. ನಿಲ್ಲುವಾಗ ಭಾರವು ಸಮನಾಗಿ ಹಂಚಿಹೋಗಬೇಕು.

4. ಕತ್ತಿಗಳನ್ನು ಹಿಡಿದವರು ಅವೆರಡು ಒಂದೇ ಮಟ್ಟದಲ್ಲಿರುವಂತೆ ಜಾಗ್ರತೆವಹಿಸಬೇಕು.

ಈ ವಿಷಯಗಳನ್ನೆಲ್ಲಾ ಗಮನದಲ್ಲಿರಿಸಿಕೊಂಡರೆ, ಹರಿತವಾದ ಕತ್ತಿಗಳ ಮೇಲೆ ನಿಲ್ಲುವುದು ಪವಾಡವಲ್ಲ. ಇದನ್ನು ಮಾಡಿತೋರಿಸಲು ಯಾವುದೇ ದೈವಿಕ ಶಕ್ತಿಯ ಅಗತ್ಯವಿಲ್ಲ.

ಮೊಳೆಗಳ ಹಲಗೆ

ಹಲವು ನೂರು ಹರಿತವಾದ ಮೊಳೆಗಳಿರುವ ಹಲಗೆಯಿರುತ್ತದೆ. ಈ ಚೂಪಾದ ಮೊಳೆಗಳ ಮೇಲೆ ‘ಹಠಯೋಗಿ’ ನಿಲ್ಲುತ್ತಾನೆ. ಮೊಳೆಗಳು ಚುಚ್ಚಿಕೊಳ್ಳದಿರಲು, ದೈವಿಕ ಶಕ್ತಿಯೇ ಕಾರಣವೆನ್ನಲಾಗುತ್ತದೆ.

ಎರಡಡಿ ಉದ್ದ ಮತ್ತಗಲದ ಒಂದು ಹಲಗೆಗೆ ಒಂದಿಂಚು ಅಂತರದಲ್ಲಿ ಹರಿತವಾದ ಮೊಳೆಗಳನ್ನು ಬಡಿಯಲಾಗುತ್ತದೆ. ಈ ಮೊಳೆಗಳೆಲ್ಲವೂ ಒಂದೇ ರೀತಿಯದ್ದಾಗಿರಬೇಕು ಮಾತ್ರವಲ್ಲದೆ, ಇವುಗಳ ಎತ್ತರವು ಒಂದೇ ಇರಬೇಕು. ಈ ಮೊಳೆಗಳ ಹಲಿಗೆಯ ಮೇಲೆ ಯಾರೂ ನಿಲ್ಲಬಹುದು. ಕಾಲನ್ನು ಜಾಗರೂಕತೆಯಿಂದ ಅವುಗಳ ಮೇಲಿರಿಸಿ, ತೂಕವನ್ನು ಸಮನಾಗಿ ಹಂಚಿ ನಿಂತರಾಯಿತು. ಇವು ಚುಚ್ಚಿಕೊಳ್ಳುವುದಿಲ್ಲ.

ಈ ಪ್ರಯೋಗದ ಒಳಗುಟ್ಟೇನೆಂದರೆ, ಹರಿತವಾದ ಮೊಳೆಗಳ ಮೇಲೆ ನಿಂತರೂ ತೂಕವು ಸಮನಾಗಿ ಹಲವಾರು ಬಿಂದುಗಳ ಮೇಲೆ ಹಂಚಿ ಬೀಳುವ ಕಾರಣ, ಇವು ಚುಚ್ಚಿಕೊಳ್ಳುವುದಿಲ್ಲ. ಈ ಮೊಳೆಗಳ ಮೇಲೆ ನಿಂತಾಗ ನೆನಪಿಡಬೇಕಾದ ವಿಷಯವೇನೆಂದರೆ ಭದ್ರವಾಗಿ ನಿಂತುಕೊಂಡಿದ್ದು ಆತುರದ ಚಲನೆಗಳನ್ನು ಮಾಡಬಾರದು. ಅಕಸ್ಮಾತ್ತಾಗಿ ಇಂತಹ ಚಲನೆಗಳನ್ನು ಮಾಡಿ, ತೂಕವು ಅತೀ ಚಿಕ್ಕ ಬಿಂದುವಿನ ಮೇಲೆ ಕೇಂದ್ರಿಕೃತವಾದರೆ ಮೊಳೆಗಳು ಚುಚ್ಚಿಕೊಳ್ಳುವ ಸಾಧ್ಯತೆ ಇದೆ. ಮುಳ್ಳಿನ ಹಾಸಿಗೆಗಳ ಮೇಲೆ ಮಲಗುವವರು, ಮುಳ್ಳಿನ ರಾಶಿಯ ಮೇಲೆ ಬಿದ್ದುಕೊಳ್ಳುವವರೂ ಇದೇ ತತ್ವದ ಉಪಯೋಗವನ್ನು ಮಾಡಿಕೊಳ್ಳುತ್ತಾರೆ.

ನಾಲಿಗೆಗೆ ಚುಚ್ಚುವ ತ್ರಿಶೂಲ

ಚೂಪಾದ ಮೊನೆಯಿರುವ ತ್ರಿಶೂಲವನ್ನು ವೀಕ್ಷಕರ ಕೈಗೆ ಕೊಡಲಾಗುತ್ತದೆ. ಅವರು ಅದನ್ನು ಪರೀಕ್ಷಿಸಿದ ಬಳಿಕ ಇದನ್ನು ನಾಲಿಗೆಗೆ ಚುಚ್ಚಿಸಿಕೊಳ್ಳಲು ಉತ್ಸಾಹವಿರುವವರನ್ನು ವೇದಿಕೆಗೆ ಕರೆಯಲಾಗುತ್ತದೆ. ಆದರೆ, ಇವರು ಈ ತ್ರಿಶೂಲದ ಚೂಪಾದ ಮೊನೆಯನ್ನು ಕಂಡು ಭಯ ಪಡುತ್ತಾರೆ. ಆಗ, ಆ ತ್ರಿಶೂಲವನ್ನು ಕಾರ್ಯಕ್ರಮ ನಡೆಸುವವರೇ ತಮ್ಮನಾಲಿಗೆಗೆ ಚುಚ್ಚಿಕೊಳ್ಳುತ್ತಾರೆ. ತ್ರಿಶೂಲ ಚುಚ್ಚಿಕೊಂಡಿರುವ ನಾಲಿಗೆಯನ್ನು ಎಲ್ಲರಿಗೂ ತೋರಿಸಲಾಗುತ್ತದೆ.

ಈ ‘ಪವಾಡ’ ನಡೆಯುವುದು ಹೇಗೆ? ಮುಖ್ಯವಾಗಿ ಇಲ್ಲಿ ಎರಡು ಒಂದೆ ರೀತಿಯ ತ್ರಿಶೂಲಗಳಿರುತ್ತವೆ. ಆದರೆ ಒಂದರ ಮಧ್ಯದಲ್ಲಿ ಆಕಾರದ ತಿರುವಿರುತ್ತದೆ. ಪ್ರೇಕ್ಷಕರನ್ನು ಮಾತಿನಲ್ಲಿ ಮರೆಸಿ, ಮೊದಲ ತ್ರಿಶೂಲವನ್ನು ಬದಲಿಸಿ, ಈ ತಿರುವಿರುವ ತ್ರಿಶೂಲದಿಂದ ನಾಲಿಗೆಯನ್ನು ‘ಚುಚ್ಚಿ’ ಕೊಳ್ಳಲಾಗುತ್ತದೆ – ಅರ್ಥಾತ್, ನಾಲಿಗೆಯನ್ನು ಈ ತಿರುವಿನ ಮೂಲಕ ನೂಕಿ, ನೋಡುವವರಿಗೆ ನಾಲಿಗೆಗೆ ತ್ರಿಶೂಲ ಚುಚ್ಚಲಾಗಿದೆಯೆಂಬ ಭ್ರಮೆಯನ್ನುಂಟು ಮಾಡಲಾಗುತ್ತದೆ.

ಆದರೆ, ಇಲ್ಲಿ ನೆನಪಿಡಬೇಕಾದ ಒಂದು ವಿಷಯವೇನೆಂದರೆ ನಾಲಿಗೆಗೆ ನಿಜವಾದ ತ್ರಿಶೂಲವನ್ನು ಚುಚ್ಚಿಕೊಳ್ಳುವವರೂ ಇದ್ದಾರೆ. ಇವರು ನೋವನ್ನು ತಡೆದುಕೊಂಡು ಈ ‘ಪವಾಡ’ ಮಾಡುತ್ತಾರೆ.

ಕೈಗೆ ನಿಂಬೆಹಣ್ಣು ಹೊಲಿದುಕೊಳ್ಳುವುದು

ಕೆಲವು ಜಾತ್ರೆಗಳಲ್ಲಿ ‘ಅಮ್ಮ’ನ ಭಕ್ತರು ಮೈ – ಕೈಗಳಿಗೆ ನಿಂಬೆ ಹಣ್ಣುಗಳನ್ನು ಹೊಲಿದುಕೊಂಡಿರುವುದನ್ನು ನಾವು ಗಮನಿಸಿರಬಹುದು. ಈ ಹಣ್ಣುಗಳನ್ನು ಹೊಲಿದಾಗ ಶಕ್ತಿಯ ಪ್ರಭಾವದಿಂಜ್ ಅವರಿಗೆ ಯಾವುದೇ ನೋವಾಗುವುದಿಲ್ಲವೆಂದು ಪ್ರಚಾರ ಮಾಡುತ್ತಾರೆ.

ಇದನ್ನು ಮಾಡಲು ನಿಂಬೆ ಹಣ್ಣುಗಳು, ಹೊಸ ಸೂಜಿ ಮತ್ತು ದಾರ ಬೇಕು. ಯಾರ ಕೈಗೆ ನಿಂಬೆ ಹಣ್ಣು ಹೊಲಿಯಬೇಕೊ ಆತನನ್ನು / ಅವಳನ್ನು ವೇದಿಕೆಗೆ ಆಹ್ವಾನಿಸಿ, ಪ್ರೇಕ್ಷಕರತ್ತ ನೋಡಲು ಸೂಚಿಸಬೇಕು. ನೋಡುತ್ತಿರುವಾಗ ಅಂಗೈಯ ಹಿಂದಿನ ಭಾಗದ ಚರ್ಮದ ಒಂದು ಪದರವನ್ನು ಎತ್ತಿ, ಸೂಜಿ ಚುಚ್ಚಿ ನಿಂಬೆ ಹಣ್ಣನ್ನು ಹೊಲಿದುಬಿಡಬೇಕು. ಪ್ರೇಕ್ಷಕರು ಆ ಹಣ್ಣು ನಿಜವಾಗಿ ಹೊಲಿದಿದೆ ಎಂದು ಪರೀಕ್ಷಿಸಿದ ಬಳಿಕ, ದಾರ ಕತ್ತರಿಸಿ ಅದನ್ನು ತೆಗೆಯಬೇಕು.

ಸೂಜಿ, ದಾರದಿಂದ ನಿಂಬೆ ಹಣ್ಣನ್ನು ಚರ್ಮಕ್ಕೆ ಹೊಲಿದರೆ ನೋವಾಗುವುದುದಿಲ್ಲವೇ ಎಂದು ಪ್ರಶ್ನೆ. ಇದಕ್ಕೆ ವಿವರಣೆಗಳು ಹೀಗಿವೆ.

1.  ಉಪಯೋಗಿಸುವುದು ಹೊಸ, ಹರಿತವಾದ, ತೆಳ್ಳಗಿನ ಸೂಜಿ.

2.  ಹೊಲಿಯುವ ಮೊದಲು ಚರ್ಮವನ್ನು ಎತ್ತಿ, ಚಿವುಟಿ ಹಿಡಿಯಲಾಗುತ್ತದೆ.

3.  ಹೊಲಿಸಿಕೊಳ್ಳುವ ವ್ಯಕ್ತಿ ಪ್ರೇಕ್ಷಕರತ್ತ ಗಮನ ಹರಿಸುವ ಕಾರಣ, ಚುಚ್ಚಿದ ನೋವು ಗೊತ್ತಾಗುವುದಿಲ್ಲ.

4. ಚರ್ಮದಲ್ಲಿನ ಗ್ರಾಹಕಗಳು ಚೋದನೆಗೆ ಪ್ರತಿಕ್ರಿಯಿಸಿದರೂ, ಮತ್ತೆ ಮತ್ತೆ ಅದೇ ಚೋದನೆಯೇ ಮುಂದುವರಿದಲ್ಲಿ ಅವು ಇದಕ್ಕೆ ಒಗ್ಗಿಕೊಳ್ಳುತ್ತವೆ.

ಈ ಪ್ರಯೋಗದಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಯಾವಾಗಲೂ ಹೊಸ, ಹರಿತವಾದ ಸೂಜಿಯನ್ನೇ ಉಪಯೋಗಿಸಬೇಕು. ಒಮ್ಮೆ ಉಪಯೋಗಿಸಲಾದ ಸೂಜಿಯನ್ನು ಮತ್ತೆ ಉಪಯೋಗಿಸಬಾರದು. ಉಪಯೋಗ ಮಾಡಿದ ಸೂಜಿಯನ್ನು ನಿಂಬೆ ಹಣ್ಣನ್ನು ಅವುಗಳನ್ನು ಚುಚ್ಚಿಸಿಕೊಂಡವರಿಗೆ ಕೊಡುವುದು ಉತ್ತಮ!.

ಇದೇ ರೀತಿಯಲ್ಲಿ ಬೆನ್ನು ಹುರಿಗೆ ಕೊಕ್ಕೆ ಸಿಕ್ಕಿಸಿ ಹೊಡೆಯುವುದು. ಹೊಕ್ಕುಳಿಗೆ ‘ದಾರ’ ಎಳೆಯುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಜೋರಾಗಿ ಶಬ್ಧ ಮಾಡಿ, ತಮಟೆ ಹೊಡೆದು ಡೋಲು ಬಾರಿಸಿ, ಇವುಗಳನ್ನು ನಡೆಸುವವರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತದೆ. ಇವುಗಳನ್ನು ಮಾಡುವಾಗ ಪ್ರತಿರೋಧಕ (ontiseptic) ಗಳಾದ ಅರಿಸಿನ ಮುಂತಾದವುಗಳನ್ನೂ ಉಪಯೋಗಿಸಲಾಗುತ್ತದೆ. ಕೆಲವರಂತೂ ಹೊಟ್ಟೆ ಪಾಡಿಗಾಗಿ ಈ ನೋವನ್ನು ಸಹಿಸಿಕೊಳ್ಳುತ್ತಾರೆ.

ನಮ್ಮ ಮೇಲಿನ ಉದಾಹರಣೆಗಳ ಮೂಲಕ ನೋವಾಗದಿದ್ದರೂ ನೋಡುಗರಿಗೆ ನೋವಾಗಿದೆಯೆಂಬ ಭ್ರಮೆ ಬರುವಂತಹ ಕೆಲವು ಪ್ರಯೋಗಗಳು ಮತ್ತು ಸ್ವಲ್ಪ ಮಟ್ಟಿಗೆ ನೋವನ್ನು ತಡೆದುಕೊಂಡು ಮಾಡುವ ಪ್ರಯೋಗಗಳನ್ನು ತೋರಿಸಬಹುದು.