ಸಾಮಾನ್ಯವಾಗಿ ನಮಗೆ ಮಾಡಲು ಅಸಾಧ್ಯವಾಗಿರುವ, ಅತೀಂದ್ರಿಯ, ಅತಿಮಾನುಷ ಶಕ್ತಿಯಿಂದ ನಡೆಯುತ್ತವೆಂದು ಹೇಳಿಕೊಳ್ಳುವ ಕೆಲವು ಘಟನೆಗಳನ್ನು ಪವಾಡಗಳೆನ್ನ- ಬಹುದು. ವಾಸ್ತವವಾಗಿ ಇವು ಇಂತಹ ಶಕ್ತಿಗಳಿಂದ ನಡೆಯುತ್ತವೆಯೇ? ಇಂತಹ ಶಕ್ತಿ ಯಾರಿಗಾದರೂ ಇದೆಯೇ ಎಂಬುದು ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ.

ನಮ್ಮ ಕಣ್ಣೆದುರಿನಲ್ಲಿಯೇ ಇಂತಹ ಫಟನೆಗಳು ನಡೆದಾಗ, ಇವುಗಳಿಗೆ ನಮ್ಮಿಂದ ವಿವರಣೆಗಳನ್ನು ಕಂಡು ಹುಡುಕಲು ಅಸಾಧ್ಯವಾದಾಗ ಯಾ ನಾವು ಉನ್ನತ ಸ್ಥಾನದಲ್ಲಿರಿಸಿರುವ ಇವುಗಳನ್ನು ವ್ಯಕ್ತಿಗಳೂ ನಂಬಿ ಅವುಗಳನ್ನು ಮಾಡುವವರ ಕಾಲಿಗೆ ಬಿದ್ದಾಗ ನಾವು ಸ್ಥಂಬಿಭೂತರಾಗಿ ಈ ಫಟನೆಗಳು ಪವಾಡಗಳೇ ಇರಬೇಕೆಂದು ನಂಬುವ ಸಾಧ್ಯತೆಗಳಿವೆ. ಈ ಫಟನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸದೇ, ಇವುಗಳನ್ನು ಸತ್ಯವೆಂದು ಸ್ವೀಕರಿಸಬಾರದು.

ವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸುವುದೆಂದೊಡನೆ, ನಾವು ವಿಜ್ಞಾನಿಗಳನ್ನು ಉದಾಹರಿಸುತ್ತೇನೆ. ಯಾಕೆಂದರೆ, ಕೆಲವು ಉನ್ನತ ವಿಜ್ಞಾನಿಗಳೂ ಇಂತಹ ಪವಾಡಗಳನ್ನು ನಂಬುವವರಿರುತ್ತಾರೆ. ಇವರು ಅಪ್ರಾಮಾಣಿಕರೆ? ಎಂಬ ಪ್ರಶ್ನೆ ಉದ್ಬವವಾಗುತ್ತದೆ. ವಾಸ್ತವವಾಗಿ ನಮ್ಮ ವಿಜ್ಞಾನಿಗಳು ತಮ್ಮ ಪ್ರಯೋಗ ಶಾಲೆಗಳಲ್ಲಿ ಮಾತ್ರ ವೈಜ್ಞಾನಿಕ ಮನೋಭಾವವುಳ್ಳವರಾಗಿರುತ್ತಾರೆ ಮಾತ್ರವಲ್ಲದೆ, ಪ್ರಯೋಗಗಳನ್ನು ನಡೆಸುವ, ಅರ್ಥಾತ್ ಪವಾಡಗಳನ್ನು ಮಾಡುವ ವ್ಯಕ್ತಿಗಳು ಪ್ರಾಮಾಣಿಕರೆಂದು ನಂಬಿರುತ್ತಾರೆ. ವಾಸ್ತವವಾಗಿ ಇಂತಹ ವ್ಯಕ್ತಿಗಳನ್ನು ಪರೀಕ್ಷಿಸಲು ಬೇರೆಯೇ ದೃಷ್ಟಿಕೋನಬೇಕು. ಇದು ನಮ್ಮ ಹೆಚ್ಚಿನ ವಿಜ್ಞಾನಿಗಳಲ್ಲಿಲ್ಲ. ಇಷ್ಟಲ್ಲದೆ, ಕೆಲವು ವಿಜ್ಞಾನಿಗಳು, ಬುದ್ದಿಜೀವಿಗಳು ತಮ್ಮ ಸ್ಥಾಪಿತ ಹಿತಾಶಕ್ತಿಗಳನ್ನು ಬೆಳೆಸಿಕೊಳ್ಳಲು ಇಂತಹ ಪವಾಡ ಪುರುಷರುಗಳ ಆಸ್ಥಾನಗಳಲ್ಲಿರುತ್ತಾರೆ! ಈ ಪವಾಡ ಪುರುಷರಿಗೆ ಇವರು ತಮ್ಮೊಂದಿಗಿರುವುದು ಒಂದು ಅರ್ಹತಾ ಪತ್ರದಂತೆ! ತತ್ಕಾರಣ, ಇಂತಹವರನ್ನು ಸ್ವಾಗತಿಸಲು ಬಹಳ ಆತುರದಿಂದ ಇರುತ್ತಾರೆ!

ನಮ್ಮ ಕಣ್ಣೆದುರಿನಲ್ಲಿಯೇ ಇಂತಹ ಫಟನೆಗಳು ನಡೆದಾಗ ಅವುಗಳನ್ನು ಪತ್ತೆಹಚ್ಚಲು ಬೇಕಾದ ಸೂಕ್ಷ್ಮದೃಷ್ಟಿ, ತರ್ಕ ಇತ್ಯಾದಿಗಳನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

‘ಪವಾಡ’ಗಳನ್ನು ಸಾಮಾನ್ಯವಾಗಿ ಭೌತಶಾಸ್ತ್ರದ ತತ್ವಗಳನ್ನು, ರಾಸಾಯನಿಕಗಳನ್ನು, ಮನಸ್ಸಿಗೆ ಭ್ರಾಂತಿ ಮಾಡುವವುಗಳನ್ನು ನೋವು ನಿಗ್ರಹಿಸುವಂತಹವುಗಳು, ಮತ್ತು ಇತರ ಕೆಲವು ತತ್ವಗಳನ್ನು ಉಪಯೋಗಿಸುವವುಗಳನ್ನಾಗಿ ವಿಂಗಡಿಸಬಹುದು.

ಮುಂದಿನ ಅಧ್ಯಾಯಗಳಲ್ಲಿ ಇವುಗಳನ್ನು ವಿಂಗಡಿಸಿ, ಆಯಾ ರೀತಿಯ ‘ಪವಾಡ’ಗಳನ್ನು ಯಾವೆಲ್ಲಾ ತತ್ವಗಳ ಮೇಲೆ ಆಧರಿಸಲಾಗಿದೆಯೆಂದು ವಿವರಿಸಲಾಗುವುದು. ಸಾಮಾನ್ಯವಾಗಿ ಇವುಗಳನ್ನು ಮಾಡಲು ಬಯಸುವವರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದಲ್ಲಿ ನಡೆಯಲಿರುವ ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಇಂತಹ ಕಾರ್ಯಕ್ರಮಗಳು ಭಾರತೀಯ ಜನ ವಿಜ್ಞಾನ ಜಾಥಾ – II ರ ಅಂಗವಾಗಿ ಕರ್ನಾಟಕ ರಾಜ್ಯದ ಕೆಲವು ಸಾವಿರ ಕಡೆಗಳಲ್ಲಿ 1992ರಲ್ಲಿ ನಡೆಯಲಿವೆ. ಈ ಕಾರ್ಯಕ್ರಮಗಳನ್ನು ನಡೆಸುವವರು ಇವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿದ್ದಾರೆ.