ಇಂತಹ ಫಟನೆಗಳನ್ನು ಶೋಧಿಸಲು ಹೊರಡುವವರು ಮೊದಲು ತಮ್ಮ ಬುದ್ದಿ ಶಕ್ತಿಯನ್ನು ತೀಕ್ಷ್ಣವಾಗಿ ಬೆಳೆಸಿಕೊಳ್ಳಬೇಕು. ಯಾಕೆಂದರೆ, ಸಾಮಾನ್ಯ ಜನರನ್ನು ಮೋಸ ಮಾಡಿ ಬಹಳ ಅಭ್ಯಾಸ, ಪರಿಣಿತಿಯುಳ್ಳ ವ್ಯಕ್ತಿಗಳು ತಮ್ಮ ಸುತ್ತಲೂ ಗೂಂಡಾ ಸಮಾಜಘಾತುಕ ಶಕ್ತಿಗಳ ಗುಂಪನ್ನೇ ಇರಿಸಿಕೊಂಡಿರುತ್ತಾರೆ. ಇದಲ್ಲದೆ, ಇವರು ಇರುವ ಸ್ಥಳಗಳಲ್ಲಿ ಇವರ ‘ಪವಾಡ’ಗಳ ಕಥೆಗಳು ಹಬ್ಬಿದಂತೆ ಜನ ಪ್ರವಾಹವು ಹೆಚ್ಚುತ್ತಿರುತ್ತದೆ. ತತ್ಕಾರಣ, ಇವರು ತಮ್ಮೂರುಗಳಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿರುತ್ತಾರೆ. ಇವರ ಠಕ್ಕುತನವನ್ನು ತೋರಿಸಿಕೊಟ್ಟರೆ ಇವರೆಲ್ಲರಿಗೂ ಧಕ್ಕೆ ಒದಗುತ್ತದೆ. ತತ್ಕಾರಣ, ಇಂತಹ ಪ್ರಯತ್ನಗಳನ್ನು ಅವರು ವಿರೋಧಿಸುವುದು ಸ್ವಾಭಾವಿಕ.

ಮೊದಲನೆಯದಾಗಿ, ಇವರ ಗುಟ್ಟುಗಳನ್ನು ಅರಿಯಲು ಹೋಗುವವರು ಭಕ್ತರ ಸೋಗಿನಲ್ಲಿ ಹೋಗುವುದು ಉತ್ತಮ. ಹೀಗೆ ಹೋದಲ್ಲಿ ಈ ಪವಾಡ ಪುರುಷರು ನಡೆಸುವ ಕುಯುಕ್ತಿಗಳನ್ನು ಕಂಡು ಹಿಡಿಯುವುದು ಸುಲಭವಾಗುತ್ತದೆ. ಇವುಗಳನ್ನು ಕಂಡು ಹುಡುಕಿದ ಬಳಿಕ ನಾವೂ ಇವುಗಳನ್ನು ಮಾಡಿ ತೋರಿಸಿ, ಇಂತಹವುಗಳನ್ನು ನಡೆಸಲು ಯಾವುದೇ ಅತಿಮಾನುಷ ಶಕ್ತಿ ಬೇಡವೆಂದು ತೋರಿಸಿಕೊಡಬಹುದು. ಇದಲ್ಲದೆ, ಇವುಗಳನ್ನು ಮಾಡುವ ವಿಧಾನಗಳನ್ನೂ ಸೂಕ್ಷ್ಮವಾಗಿ ಪ್ರದರ್ಶಿಸಬಹುದು.

ಎರಡನೆಯ ಹಂತವಾಗಿ, ಈ ಪವಾಡ ಪುರುಷರಿಗೆ ನಮ್ಮ ಸಮ್ಮುಖದಲ್ಲಿ ನಾವು ವಿಧಿಸಿದ ಶರತ್ತುಗಳಲ್ಲಿ ಅವುಗಳನ್ನು ಮಾಡಿ ತೋರಿಸುವ ಸವಾಲನ್ನು ಎಸೆಯಬಹುದು. (ಇಂತಹ ಸವಾಲುಗಳನ್ನು ನಾವು ಈಗಾಗಲೇ ಮಾಡಿದ್ದೇವೆ, ಅವುಗಳನ್ನು ಈ ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದೇವೆ ).

ಮೂರನೆಯ ಹಂತವಾಗಿ, ಈ ಪವಾಡಗಳನ್ನು ನಡೆಸುವಲ್ಲಿಗೆ ಹೋಗಿ, ನಾವೇ ಅವುಗಳನ್ನು ಮಾಡಿ ತೋರಿಸಿ, ಇವುಗಳಲ್ಲಿ ಹುರುಳಿಲ್ಲವೆಂಬುದನ್ನು ಸ್ಪಷ್ಟ ಪಡಿಸಬಹುದು. ಆದರೆ, ಈ ಕೊನೆಯದ್ದು ಮಾಡಲು ಸ್ವಲ್ಪ ಕಷ್ಟವಿದೆ ಯಾಕೆಂದರೆ, ಈ ಪವಾಡ ಪುರುಷರುಗಳು ತಮ್ಮದೇ ಆದ ಗೂಂಡಾಗಳನ್ನು ಪೋಷಿಸಿರುತ್ತಾರೆ. ಅವರು ನಮ್ಮ ಮೇಲೆ ದೈಹಿಕ ಆಕ್ರಮಣಗಳನ್ನು ಮಾಡಲು ಹೇಸದವರು. ಇದಲ್ಲದೆ, ಇಂತಹ ಪವಾಡ ಪುರುಷರ ಅಸ್ಥಿತ್ವರಿಂದ ಲಾಭ ಪಡೆಯುವ ಊರಿನ ಜನಗಳೂ ತಮ್ಮ ವ್ಯಾಪಾರಗಳಿಗೆ ಧಕ್ಕೆಯೊದಗುವ ಕಾರಣ, ಇವರನ್ನು ಬೆಂಬಲಿಸುತ್ತಿರುತ್ತಾರೆ. ಈ ಪವಾಡ ಪುರುಷರನ್ನು ಬಯಲಿಗೆಳೆಯುವ ಪ್ರಯತ್ನಗಳಿಗೆ ಅವರು ವಿರೋಧವೂ ಸ್ವಾಭಾವಿಕವಾಗಿ ಕಂಡು ಬರುತ್ತದೆ.

ಇವೆಲ್ಲರವುಗಳಿಗಿಂತಲೂ ಉತ್ತಮವಾದ ವಿಧಾನವೇನೆಂದರೆ ಜನ ಜಾಗ್ರತೆ ಹುಟ್ಟಿಸಿ, ಅವರಲ್ಲಿ ಪವಾಡಗಳ ರಹಸ್ಯಗಳನ್ನು ಬಯಲಿಗೆಳೆಯುವ ಮನೋಭಾವವನ್ನು ಬೆಳೆಸುವುದು. ಈ ನಿಟ್ಟಿನಲ್ಲಿ ಈ ಪುಸ್ತಕ, ಹಾಗೂ ನಾವು ರಾಜ್ಯಾದ್ಯಂತ ನಡೆಸಿರುವ ಮತ್ತು ನಡೆಸಲಿರುವ ಕಾರ್ಯಕ್ರಮಗಳು ಯಶಸ್ವಿಯಾದಾವೆಂದು ಆಶಿಸುತ್ತೇವೆ.