1ನೇ ಫೆಬ್ರವರಿ, 1992

1976ರ ಇಸವಿಯಿಂದ ದ. ಕ. ಜಿಲ್ಲಾ ವಿಚಾರವಾದಿ ಸಂಫದ ಪರವಾಗಿ ನಾನು, ಈ ಸಂಫದ ಕಾರ್ಯದರ್ಶಿಯಾದ ನರೇಂದ್ರ ನಾಯಕ್ ಪವಾಡ, ಅತೀಂದ್ರಿಯ ಶಕ್ತಿ ಮತ್ತು ಅತಿಮಾನುಷ ಶಕ್ತಿಗಳನ್ನು ಹುಡುಕಿಕೊಂಡಿದ್ದೇನೆ. 1989ರಲ್ಲಿ ಇಂತಹ ಶಕ್ತಿಗಳನ್ನು ತೋರಿಸುವವರಿಗೆ ರೂ. 25,000ದ ಬಹುಮಾನವನ್ನು ಘೋಷಿಸಿದ್ದೇನೆ. ಈ ಬಹುಮಾನದ ಮೊತ್ತಕ್ಕೆ ಯಾರೂ ಬಾರದ ಕಾರಣ, 1990ರಲ್ಲಿ ಇದನ್ನು ದ್ವಿಗುಣಗೊಳಿಸಿ, ರೂ. 50,000ವನ್ನು ನಿಗದಿ ಮಾಡಲಾಯಿತು. ಈಗಿನವರೆಗೂ ಈ ಪಣಕ್ಕೆ ಯಾರೂ ಮುಂದೆ ಬಾರದ ಕಾರಣ, 1992ರಲ್ಲಿ ನಮ್ಮ ಸಂಫವು ಈ ಹಣದ ಮೌಲ್ಯವನ್ನು ಹೆಚ್ಚಿಸಲು ಆಜ್ಞಾಪಿಸಿದೆ. ತತ್ಕಾರಣ, ಮುಂದೆ ಈ ಕೆಳಗಿನ ಸವಾಲುಗಳಲ್ಲಿ ಯಾವುದಾದರೂ ಒಂದು ಯಾ ಅಧಿಕವನ್ನು ನಮ್ಮ ಶಕ್ತಿಗಳಿಗನುಗುಣವಾಗಿ ಮಾಡಿತೋರಿಸಿದಲ್ಲಿ ನನ್ನ ಎಲ್ಲಾ ಲೌಕಿಕ ಸಂಪತ್ತನ್ನು ಪಣವಾಗಿ ಒಡ್ಡಿದ್ದೇನೆ. ಇದಲ್ಲದೆ, ಇದನ್ನು ಮಾಡಿ ತೋರಿಸಿದ ವ್ಯಕ್ತಿ ಹೇಳಿದ ಯಾವುದೇ ಕಾರ್ಯಕ್ಕೆ ನನ್ನ ಉಳಿದ ಜೀವನವನ್ನು ಮೀಸಲಾಗಿಡುತ್ತೇನೆ. ನಾನು ಮುಂದೆ ಸಂಪಾದಿಸಬಹುದಾದ ಯಾವುದೇ ಹಣ, ಆಸ್ತಿ – ಪಾಸ್ತಿಯ ಮೇಲೆ ನನ್ನ ಯಾವುದೇ ಹಕ್ಕಿರದೆ ಅವೆಲ್ಲವೂ ಸವಾಲು ಮಾಡಿ ತೋರಿಸಿದವರಿಗೆ ಮೀಸಲಾಗಿರುತ್ತದೆ (ನನ್ನ ಈಗಿನ ಲೌಕಿಕ ಸಂಪತ್ತಿನ ಧ್ರುಡೀಕರಿಸಿದ ಪ್ರಮಾಣ ಪತ್ರವನ್ನು ಆಡಿಟರ್‌ರಿಂದ ಪಡೆಯಬಹುದು. ಇದಕ್ಕೆ ರೂ. 250ರ ಶುಲ್ಕವನ್ನು ಮುಂಚಿತವಾಗಿ ಕೊಡತಕ್ಕದ್ದು).

ಮಾಡಿ ತೋರಿಸಬಹುದಾದ ಪವಾಡಗಳು ಯಾ ಅತೀಂದ್ರಿಯ ಶಕ್ತಿಯ ಪ್ರದರ್ಶನಗಳ ಸಾಮಾನ್ಯವಾದ ವಿವರಣೆಗಳು ಕೆಳಗಿವೆ (ವಿವರವಾದ ಶರ್ತಗಳನ್ನು ಇವುಗಳನ್ನು ಪ್ರದರ್ಶಿಸುವ ಮೊದಲು ಬರವಣಿಗೆ ಒಪ್ಪಂದದಲ್ಲಿ ವಿಧಿಸಲಾಗುವುದು).

1. ನೀರಿನ ಮೇಲೆ ಮೂರು ಹೆಜ್ಜೆ ನಡೆಯುವುದು.

2. ನೆಲದಿಂದ 2 ಅಡಿ 20 ಸೆಕೆಂಡುಗಳ ಕಾಲ ತೇಲುವುದು.

3. ಕೆಂಡಗಳ ಮೇಲೆ ಬರಿಗಾಲಿನಲ್ಲಿ 30 ಸೆಕೆಂಡುಗಳ ಕಾಲ ನಿಂತು ಕಾಲಿಗೆ ಯಾವುದೇ ಹಾನಿಯಾಗದಿರುವುದು.

4. ನೀರನ್ನು ಪೆಟ್ರೋಲ್, ದ್ರಾಕ್ಷಾ ರಸ ಯಾ ಇತರ ಯಾವುದೇ ದ್ರವವನ್ನಾಗಿ ಪರಿವರ್ತಿಸುವುದು.

5. ನಾನು ಕೇಳಿದ ವಸ್ತುವನ್ನು 10 ಸೆಕೆಂಡುಗಳೊಳಗೆ ಶೂನ್ಯದಿಂದ ಸೃಷ್ಟಿಸುವುದು.

6. ಪೋಟೋ ತೆಗೆದ ಬಳಿಕ ನೆಗೆಟಿವ್‌ನಿಂದ ಕಾಣೆಯಾಗುವುದು.

7. ಬೀಗ ಹಾಕಿದ ಕೋಣೆಯಿಂದ ಅದೃಶ್ಯನಾಗುವುದು.

8. ಯಾವುದೇ ಅತೀಂದ್ರಿಯ, ಅತಿಮಾನುಷ ಶಕ್ತಿಯಿಂದ ಲಕೋಟೆಯಲ್ಲಿ ಮೊಹರು ಮಾಡಲಾದ ನೋಟಿನ ನಂಬರನ್ನು ಓದುವುದು.

9. ಮುಂದೆ ನಡೆಯಬಹುದಾದ ನಾವು ತಿಳಿಸಿದ ವಿಷಯವನ್ನು, ನಾವು ತಿಳಿಸಿದ ನಿಖರತೆಗೆ ಅನುಗುಣವಾಗಿ ಮುನ್ಸೂಚಿಸುವುದು.

10. ನಾವು ತೋರಿಸಿದ ನೋಟಿನ ದ್ವಿಪ್ರತಿಯನ್ನು ಸೃಷ್ಟಿಸುವುದು. ಅದರ ಮೌಲ್ಯ ಕ್ರಮಾಂಕವೆಲ್ಲವೂ ಅದೇ ಇರಬೇಕು.

11. ನಾವು ತೋರಿಸಿದ, ನಾವೇ ನಿರ್ಧರಿಸಿದ ರೋಗವುಳ್ಳ 10 ರೋಗಿಗಳಲ್ಲಿ ಕನಿಷ್ಠ ಐದು ಮಂದಿಯನ್ನು ಯಾವುದೇ ಔಷಧ, ಪಥ್ಯಗಳ ನಿರ್ಬಂಧವಿಲ್ಲದೆ, ಬರೇ ಪ್ರಾರ್ಥನೆ ಯಾ ಇತರ ಅತಿಮಾನುಷ ಶಕ್ತಿಯಿಂದ ನಾವು ನಿಖರ ಪಡಿಸಿದ ಅವಧಿಯೊಳಗೆ ಗುಣಪಡಿಸುವುದು.

12. ಕೊಟ್ಟ ಹತ್ತು ಜನ್ಮ ದಿನಾಂಕ, ಸ್ಥಳ ಮತ್ತು ಸಮಯಗಳನ್ನು ಉಪಯೋಗಿಸಿ, ಜಾತಕವನ್ನು ರಚಿಸಿ, ಯಾರು ಗಂಡು, ಯಾರು ಹೆಣ್ಣು, ಯಾರು ಬದುಕಿದ್ದಾರೆ, ಯಾರು ಸತ್ತಿದ್ದಾರೆಂದು 95 % ನಿಖರತೆಯ ಮಿತಿಯಲ್ಲಿ ಫಲಜ್ಯೋತಿಷ್ಯದ ಸೂತ್ರಗಳಂತೆ ತಿಳಿಸುವುದು.

13. ಇವಲ್ಲದೆ, ಇವಕ್ಕೆ ಹೊರತಾದ ಅತಿಮಾನುಷ, ಅತೀಂದ್ರಿಯ ಯಾ ಇತರ ಯಾವುದೇ ಸವಾ ಸದೃಶ ಶಕ್ತಿಯನ್ನು ಹೊಂದಿರುವ ಯಾ ತೋರಿಸಿಕೊಳ್ಳುವವರು ಆ ಬಗ್ಗೆ ಮೊದಲೇ ನಿಷ್ಕರ್ಷ ಮಾಡಿಕೊಂಡು ಅವುಗಳನ್ನು ತೋರಿಸಲು ಮುಂದಾದಲ್ಲಿ ಅಂತಹವರಿಗೂ ಪಣಗಳನ್ನು ಒಡ್ಡಲಾಗುವುದು. ಪಣದ ಮೊತ್ತ ಇತ್ಯಾದಿಗಳು ಮಾಡಿ ತೋರಿಸಬಹುದಾದ ವಿಷಯಗಳನ್ನು ಹೊಂದಿಕೊಂಡಿರುತ್ತದೆ.

ಶರತ್ತುಗಳು

1. ಪಣವು ಬರೇ ಮೇಲ್ಕಾಣಿಸಲಾದ ಕ್ರಿಯೆಗಳನ್ನು ಮಾಡಿ ತೋರಿಸುವದಕ್ಕೆ ಸೀಮಿತವಾಗಿದೆ. ಈ ಬಗ್ಗೆ ಯಾವದೇ ಐತಿಹಾಸಿಕ ಪುರಾವೆಗಳು, ಮುದ್ರಿತ ದಾಖಲೆಗಳು, ಪ್ರಕಟಿತ ಯಾ ಅಪ್ರಕಟಿತ ಸಾಕ್ಷಿ ವೃತ್ತಾಂತಗಳನ್ನು ಸ್ವೀಕರಿಸಲಾಗುವುದಿಲ್ಲ.

2. ಮಾನಸಿಕ ರೋಗಗಳಿಂದ ಬಳಲುವವರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾ ಇತರರ ಪರವಾಗಿ ಪಣಗಳನ್ನು ಒಡ್ಡುವವರಿಂದ ಸವಾಲುಗಳನ್ನು ಸ್ವೀಕರಿಸಲಾಗುವುದಿಲ್ಲ.

3. ಸಂಬಂಧ ಪಟ್ಟ ಪ್ರಯೋಗವನ್ನು ಮಾಡಿ ತೋರಿಸುವ 24 ಗಂಟೆಗಳ ಮೊದಲು ಎಲ್ಲಾ ಶರತ್ತುಗಳನ್ನು ವಿವರವಾಗಿ ಅಗತ್ಯದ ಮೌಲ್ಯದ ಸ್ಟಾಂಪು ಕಾಗದದ ಮೇಲೆ ದಾಖಲಿಸಿ, ಈ ಬಗ್ಗೆ ಶರತ್ತನ್ನು ರಚಿಸಲಾಗುವುದು.

4. ಪಣವನ್ನೊಡ್ಡುವವರು ಭದ್ರತಾ ಠೇವಣಿಯಾಗಿ ರೂ. 1000ವನ್ನು ನನ್ನಲ್ಲಿ ಇರಿಸಬೇಕು. ಅವರು ಶರ್ತಗಳಿಗನ್ವಯ ಪ್ರಯೋಗವನ್ನು ಮಾಡಿ ತೋರಿಸಿ ಗೆದ್ದಲ್ಲಿ ಮಾತ್ರ ಈ ಹಣವನ್ನು ಹಿಂದಿರುಗಿಸಲಾಗುವುದು, ಇಲ್ಲವಾದಲ್ಲಿ ಈ ಮೊತ್ತವನ್ನು ಕಳಕೊಳ್ಳುತ್ತಾರೆ.

5. ಶರ್ತಗಳನ್ವಯ ಪ್ರಯೋಗಗಳನ್ನು ಮಂಗಳೂರಿನಲ್ಲಿಯೇ ಪೂರ್ವ ನಿರ್ಧರಿತ ದಿನಾಂಕ, ಸಮಯದಂದು ನಡೆಸಲಾಗುವುದು. ಈ ಬಗ್ಗೆ ನಡೆಯುವ ಖರ್ಚು – ವೆಚ್ಚಗಳನ್ನು ಪ್ರಯೋಗವನ್ನು ಮಾಡಿ ತೋರಿಸುವವರೇ ಭರಿಸತಕ್ಕದ್ದು. ಪ್ರಯೋಗ ನಡೆಸುವ ಸಮಯದಲ್ಲಿ ಯಾವುದೇ ಹಾನಿ, ಜೀವ ನಷ್ಟಕ್ಕೆ ಪಣವೊಡ್ಡಿದ ನಾನು ಜವಾಬ್ದಾರನಲ್ಲ. ಮಂಗಳೂರಿಗೆ ಪ್ರಯಾಣಿಸುವ ಖರ್ಚು, ತಿಂಡಿ, ಊಟ, ವಸತಿ ಯಾ ಇತರ ಯಾವುದೇ ಖರ್ಚಿಗೆ ನಾನು ಜವಾಬ್ದಾರನಲ್ಲ.

ಪವಾಡ ಪುರುಷರು, ಅತಿಮಾನುಷ ಶಕ್ತಿಯುಳ್ಳವರು, ಫಲಜ್ಯೋತಿಷ್ಯರು, ಅತೀಂದ್ರಿಯ ಶಕ್ತಿಯುಳ್ಳವರು ವಿಫುಲವಾಗಿ ಹಬ್ಬಿರುವ ನಮ್ಮ ಕರ್ನಾಟಕ ರಾಜ್ಯದ ಮೂಲೆ – ಮೂಲೆಗಳಿಂದಲೂ ಈ ಸವಾಲುಗಳನ್ನು ಸ್ವೀಕರಿಸುವವರು ಮುಂದೆ ಬಂದಾರೆಂದು ಹಾರೈಸುತ್ತೇನೆ.

(ನರೇಂದ್ರ ನಾಯಕ್)
ಕಾರ್ಯದರ್ಶಿ
ದ. ಕ. ಜಿಲ್ಲಾ ವಿಚಾರವಾದಿ ಸಂಘ, ೧೦೧, ನೋಯಲ್ ಪಾರ್ಕ್
ಮೈಕ್ರೋವೇವ್ ಸ್ಟೇಷನ್ ರಸ್ತೆ,
ಮಂಗಳೂರು – 575 006