ಬೆಂಕಿಯೆಂದರೆ ಮನುಷ್ಯನು ಆದಿಕಾಲದಿಂದಲೂ ಈ ಬೆಂಕಿಯೊಂದಿಗೆ ಆಟವಾಡುವುದು ಯಾ ಅದು ಸುಡುವುದಿಲ್ಲವೆಂದು ತೋರಿಸಿದೊಡನೆ ಇದನ್ನು ಮಾಡಿದ. ವ್ಯಕ್ತಿಗೆ ವಿಶೇಷವಾದ ಶಕ್ತಿಯೊಂದು ನಂಬುಗೆಯನ್ನುಂಟು ಮಾಡುವುದು ಸುಲಭ. ಬೆಂಕಿಯೊಂದಿಗೆ ನಡೆಸಲಾಗುವ ಕೆಲವು ‘ಪವಾಡ’ಗಳನ್ನು ಇಲ್ಲಿ ವಿವರಿಸುತ್ತೇವೆ.  

ಕರ್ಪೂರಾರತಿ

ಕರ್ಪೂರಾರತಿಯೆಂದರೆ ಸಾಮಾನ್ಯವಾಗಿ ಪೂಜಾ ಸ್ಥಳಗಳಲ್ಲಿ ನಡೆಯುವ ಕ್ರಿಯೆ. ಹೆಚ್ಚಿನ ಸ್ಥಳಗಳಲ್ಲಿ ಕರ್ಪೂರವನ್ನು ತಟ್ಟೆಗಳಲ್ಲಿಟ್ಟು ಆರತಿ ಮಾಡಲಾಗುತ್ತದೆ. ಆದರೆ, ಕೆಲವರು ತಮ್ಮ ವಿಶೇಷ ಶಕ್ತಿಯನ್ನು ತೋರಿಸಲು ಕರ್ಪೂರವನ್ನು ಅಂಗೈಯಲ್ಲಿರಿಸಿ ಬೆಂಕಿ ಹಚ್ಚಿ ಅದರಿಂದ ಆರತಿ ಮಾಡುತ್ತಾರೆ. ನೋಡುವವರಿಗೆ ಇದು ಅತ್ಯದ್ಭುತವಾಗಿ ತೋರುವುದು. ಆರತಿ ಮಾಡಿದ ಬಳಿಕ, ಆ ಉರಿಯುತ್ತಿರುವ ಕರ್ಪೂರವನ್ನು ಬಾಯಿಗೆ ಹಾಕಿಕೊಂಡು ಇನ್ನೂ ಹೆಚ್ಚಿನ ಆಶ್ಚರ್ಯವನ್ನುಂಟುಮಾಡುತ್ತಾರೆ. ಇಂತಹ ಹಲವಾರು ಪವಾಡ ಪುರುಷರುಗಳು ನಮ್ಮ ರಾಜ್ಯದ ಮೂಲೆ – ಮೂಲೆಗಳಲ್ಲೂ ಇದ್ದಾರೆ.

ಈ ಕರ್ಪೂರಾರತಿಯನ್ನು ನಡೆಸುವುದು ಹೇಗೆ? ಮುಖ್ಯವಾಗಿ, ಇದನ್ನು ಮಾಡಲು ಸ್ವಲ್ಪ ದಪ್ಪಗಿರುವ ಕರ್ಪೂರ ತುಂಡುಗಳು ಬೇಕು. ಇವುಗಳನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿ ಆರತಿ ಮಾಡುತ್ತಾ ಕೈಯಿಂದ ಕೈಗೆ ವರ್ಗಾವಣೆ ಮಾಡುತ್ತಲಿರಬೇಕು. ತುಂಡು ಬಿಸಿಯೇರಿದಾಗ ಅದನ್ನು ಬಾಯಿಗೆ ಹಾಕಿಕೊಂಡು ಬಾಯಿ ಮುಚ್ಚಿದರಾಯಿತು.

ಕರ್ಪೂರವು ಒಂದು ವಿಶೇಷವಾದ ರಸಾಯನಿಕ. ಇದು ನೇರವಾಗಿ ಫನರೂಪದಿಂದ ಆವಿಯಾಗುವ ವಸ್ತು. ಇದಕ್ಕೆ ಉತ್ಪತನ (Sublimation) ಎನ್ನಲಾಗುತ್ತದೆ. ತತ್ಕಾರಣ, ಉರಿಯುವ ಕರ್ಪೂರ ಕೈಯಲ್ಲಿ ಕೆಲವೇ ಸೆಕೆಂಡುಗಳ ಕಾಲ ಇದ್ದರೆ ಕೈಸುಡುವುದಿಲ್ಲ. ಇದನ್ನು ಬಾಯಿಗೆ ಹಾಕಿಕೊಂಡಾಗ ಬಾಯಲ್ಲಿ ಸಹಜವಾಗಿರುವ ಜೊಲ್ಲು ಈ ಶಾಖದಿಂದ ರಕ್ಷಿಸುವ ತೇವ ಪದರವಾಗಿ ಕಾರ್ಯವಹಿಸುತ್ತದೆ. ಬಾಯಿ ಮುಚ್ಚಿದಾಗ ಆಮ್ಲಜನಕದ ಕೊರತೆಯಿಂದ ಉರಿಯುವಿಕೆಯು ನಿಂತು, ಅದು ಆರಿಹೋಗುತ್ತದೆ.

ಈ ತತ್ವವನ್ನು ಉಪಯೋಗಿಸುವ ಕೆಲವು ಮಂದಿ ತಮ್ಮಲ್ಲಿ ವಿಶೇಷ ಶಕ್ತಿಯಿದೆ ಎಂದುಕೊಂಡು ಜನರನ್ನು ಮೋಸಮಾಡುತ್ತಾರೆ. ಇದನ್ನು ನಾವು ಯಾರೂ ಅತಿ ಸುಲಭವಾಗಿ ಮಾಡಬಹುದು. ಆದರೆ, ಒಂದು ವಿಷಯ ನೆನಪಿರಲಿ ಕೃತಕ ನೂಲು ಬಟ್ಟೆಗಳನ್ನು ಧರಿಸಬೇಡಿ. ಈ ಪ್ರಯೋಗಕ್ಕೆ ಕರ್ಪೂರ ಮಾತ್ರ ಸೂಕ್ತ. ಮೇಣ (Candle) ಹಿಡಿದು ಈ ಪ್ರಯೋಗ ಮಾಡಿದಲ್ಲಿ ಆಸ್ಪತ್ರೆ ಸೇರಬೇಕಾದೀತು!

ಕೊಳ್ಳಿ ಹಚ್ಚಿಕೊಳ್ಳುವುದು

ಕೆಲವರು ತಮ್ಮಲ್ಲಿ ಬೆಂಕಿಯ ಶಾಕವನ್ನು ತಡೆಯುವ ಶಕ್ತಿಯಿದೆಯೆಂದುಕೊಂಡು ಸೀಮೆಎಣ್ಣೆಯೊ ಹರಳೆಣ್ಣೆಯ ಉರಿಯುವ ಕೊಳ್ಳಿಯನ್ನು ಮೈಕೈಗಳಿಗೆ ಸವರಿಕೊಳ್ಳುತ್ತಾರೆ. ಬೆಂಕಿ ಇವರನ್ನು ಸುಡದಿರಲು ತಮ್ಮಲ್ಲಿರುವ ದೈಹಿಕ ಶಕ್ತಿ ಕಾರಣವೆನ್ನುತ್ತಾರೆ.

ಈ ಕೊಳ್ಳಿ ತಾಗಿಸಿಕೊಳ್ಳುವ ರಹಸ್ಯವೇನು? ಮುಖ್ಯವಾಗಿ ಈ ಕೊಳ್ಳಿಯನ್ನು ರಚಿಸಲು ಹತ್ತಿ ಬಟ್ಟೆಯನ್ನು ಉಪಯೋಗಿಸಲಾಗುತ್ತದೆ. ಮರದ ತುಂಡಿಗೆ ಯಾ ಒಂದು ಕೊಡೆಯ ಕಡ್ಡಿಗೆ ಹತ್ತಿ ಬಟ್ಟೆ ಚಿಂದಿಗಳನ್ನು ಸುತ್ತಿ, ಅವುಗಳನ್ನು ಎಣ್ಣೆಯೊಳಗೆ ಮುಳುಗಿಸಿ ಬೆಂಕಿ ಹಚ್ಚಿ. ಅದನ್ನು ಮೈಮೇಲೆ ಆಡಿಸಲಾಗುತ್ತದೆ. ಮೈ, ಕೈಗೆ ರೋಮಗಳಿದ್ದಲ್ಲಿ ಅವು ಸುಟ್ಟು ಹೋಗಬಹುದು. ಆದರೆ, ಇತರ ಯಾವುದೇ ಅಪಾಯವಾಗುವುದಿಲ್ಲ.

ಚಲಿಸುವ ಬೆಂಕಿ ಸುಡುವುದಿಲ್ಲ – ಈ ತತ್ವವನ್ನು ನಾವು ನೆನಪಿಡಬೇಕು. ಕೊಳ್ಳಿಯನ್ನು ಮೈಕೈಗಳಿಗೆ ಹಚ್ಚಿಸಿಕೊಳ್ಳುವವರು ಈ ಕೊಳ್ಳಿಯನ್ನು ಚಲಿಸುತ್ತಿರುತ್ತಾರೆ. ಹೆಚ್ಚಾಗಿ ಈ ಕೊಳ್ಳಿಯನ್ನು ಮರ ಇತ್ಯಾದಿ ಶಾಖ ನಿರೋಧಕ ವಸ್ತುವಿನಿಂದಲೂ ರಚಿಸಿರುತ್ತಾರೆ. ತತ್ತಕ್ಷಣ ಇದು ಸುಡುವುದಿಲ್ಲ.

ಆದರೆ, ಇಲ್ಲಿ ನೆನಪಿಡಬೇಕಾದ ಕೆಲವು ವಿಷಯಗಳಿವೆ. ಹತ್ತಿ ಬಟ್ಟೆಯನ್ನು ಮಾತ್ರ ಕೊಳ್ಳಿ ಮಾಡಲು ಉಪಯೋಗಿಸಬೇಕು. ಉರಿಸಲು ಸೀಮೆ ಎಣ್ಣೆ ಯಾ ಇತರ ಸುಲಭವಾಗಿ ಆವಿಯಾಗದಂತಹ ಎಣ್ಣೆ ಉಪಯೋಗಿಸಬೇಕು. ಕೊಳ್ಳಿಯನ್ನು ಚಲಿಸುತ್ತಲಿರಬೇಕು. ಪ್ರಯೋಗ ನಡೆಸುವವರು ಹತ್ತಿ ಬಟ್ಟೆಗಳನ್ನೇ ಧರಿಸಬೇಕು.

ಕೆಂಡದ ಮೇಲೆ ನಡೆಯುವುದು

ಕೆಂಡಗಳ ಮೇಲೆ ನಡೆಯುವುದು ಯಾ ಕೊಂಡ ಹಾಯುವುದು, ಅನೇಕ ಮತಾನುಯಾಯಿಗಳು ತಮ್ಮ ಧರ್ಮ ಶ್ರದ್ಧೆಯನ್ನು ತೋರಿಸಿಕೊಳ್ಳಲು ಉಪಯೋಗ ಮಾಡುವ ವಿಧಾನ.

ತಗ್ಗು ತೋಡಿ ಅದರಲ್ಲಿ ಸೌದೆ ರಾಶಿ ಹಾಕಿ ಬೆಂಕಿ ಉರಿಸಲಾಗುತ್ತದೆ. ಆ ಬಳಿಕ ಕೆಂಡಗಳನ್ನು ಸೇರಿಸಿ, ತಟ್ಟಿ ಅವುಗಳಲ್ಲಿರುವ ದೊಡ್ಡವನ್ನು ಹೊರತೆಗೆದು ಸಮತಟ್ಟಾಗಿ ಮಾಡಲಾಗುತ್ತದೆ. ಆ ಬಳಿಕ ಗಾಳಿ ಹಾಕಿ, ಈ ಕೆಂಡಗಳು ನಿಗಿ – ನಿಗಿ ಉರಿಯುವಾಗ ಅದರ ಮೇಲೆ ‘ಶುದ್ಧ’ದಲ್ಲಿರುವ ಭಕ್ತರನ್ನು ನಡೆಸಲಾಗುತ್ತದೆ. ಅವರ ಕಾಲುಗಳು ಸುಡದಿರುವುದಕ್ಕೆ ದೈವೀಕ ಶಕ್ತಿಯೇ ಕಾರಣವೆಂದು ತಿಳಿಸಲಾಗುತ್ತದೆ. ಯಾರಿಗಾದರೂ, ಅಪ್ಪಿ-ತಪ್ಪಿ ಗುಳ್ಳೆಗಳೆದ್ದಲ್ಲಿ ಯಾ ಕಾಲು ಸುಟ್ಟು ಹೋದಲ್ಲಿ ಅವರು ‘ಶುದ್ಧವಲ್ಲ’ ಇರಲಿಲ್ಲವೆಂಬ ವಿವರಣೆ ಕೊಡಲಾಗುತ್ತದೆ!

ಆದರೆ ನೆನಪಿಡಬೇಕಾದ ವಿಷಯಗಳು ಕೆಲವಿದೆ. ನಡೆಯುವ ಮೊದಲು ಗಾಳಿ ಬೀಸಿ, ಬೂದಿಯನ್ನು ಹಾರಿಸಬೇಕು. ಹೆಚ್ಚಿನ ಬೂದಿಯಿದ್ದಲ್ಲಿ ಉಪ್ಪನ್ನು ಹಾಕಿ, ಗಾಳಿ ಬೀಸಿ, ಆ ಉಪ್ಪಿನ ಕಣಗಳು ಸಿಡಿಯುವುದು ನಿಂತ ಬಳಿಕವೇ ನಡೆಯಬೇಕು. ಮುಖ್ಯವಾಗಿ ಅಡೆ ತಡೆಯಿಲ್ಲದೆ ನೇರವಾಗಿ ನಡೆಯಬೇಕು. ಕೆಂಡದ ಮೇಲೆ ನಡೆಯುವ ದೊಡ್ಡ ಗುಂಪಿದ್ದರೆ ಅವರನ್ನು ಸಾಲಾಗಿ ನಿಲ್ಲಿಸಿ ಒಬ್ಬರ ಹೊಂದೊಬ್ಬರನ್ನು ಒಂದೇ ದಿಕ್ಕಿನಲ್ಲಿ ನಡೆಸಬೇಕು. ಕೆಂಡಗಳೊಂದಿಗೆ ಲೋಹದ ಚೂರುಗಳು, ಕಲ್ಲುಗಳು, ಗಾಜಿನ ತುಂಡುಗಳು ಬಾರದಂತೆ ಜಾಗ್ರತೆ ವಹಿಸಬೇಕು. ಯಾಕೆಂದರೆ ಕೆಲವೊಮ್ಮೆ ನಮ್ಮ ಕಾರ್ಯಕ್ರಮವನ್ನು ಹಾಳು ಮಾಡಬಯಸುವವರು ನಾವು ಮಾಡಿದ ಬೆಂಕಿಗೆ ಇಂತಹವುಗಳನ್ನು ಹಾಕುತ್ತಾರೆ! ಸೀರೆ ಉಟ್ಟವರು ಅದನ್ನು ಮೊಣಕಾಲವರೆಗೆ ಎತ್ತಿ ನಡೆಯುವುದು ಉತ್ತಮ. ಪ್ಯಾಂಟು – ಪೈಜಾಮ – ಧೋತಿ ಧರಿಸಿರುವವರು ಅವನ್ನು ಮೊಣ ಕಾಲವರೆಗೆ ಮಡಿಸಬೇಕು. ಬೂಟ್ಸು, ಕಾಲು ಚೀಲ ಧರಿಸಿರುವವರು ಕಾಲಿಗೆ ಬಿಸಿ ತಾಗಿದಲ್ಲಿ ಕೆಂಡ ಹಾದ ಮೇಲೆ ಅವುಗಳನ್ನು ಧರಿಸದೆ ಕಾಲನ್ನು ಗಾಳಿಗೆ ಬಿಡುವುದು ಉತ್ತಮ. ಬರಿಗಾಲಲ್ಲಿ ಓಡುವ ಅಭ್ಯಾಸವಿಲ್ಲದವರು ಕೆಂಡ ಹಾಯುವುದಾದರೆ ಕೆಂಡಗಳನ್ನು ಮಾಡುವ ತಗ್ಗು ಅಡಿಗಿಂತ ಉದ್ದವಿಲ್ಲವಿರುವುದು ಸೂಕ್ತ.

ತಲೆಯ ಮೇಲೆ ನೀರು ಕುದಿಸುವುದು!

ಕೆಲವರು ತಮ್ಮ ‘ಭಕ್ತಿ’ಯನ್ನು ತೋರಿಸಲು ತಲೆಯ ಮೇಲೆ ಬಟ್ಟೆ ಹಾಕಿ, ಅದರ ಮೇಲೆ ಬೆಂಕಿಯಿಟ್ಟು, ನೀರು ಕುದಿಸುವುದು ಯಾ ಚಹಾ ತಯಾರಿ ಮಾಡುವುದನ್ನು ಮಾಡುತ್ತಾರೆ. ಇವರಿಗೆ ಯಾವುದೇ ಅಪಾಯವಾಗದಿರಲು ತಮ್ಮ ‘ಭಕ್ತಿ’ ಯಾ ‘ದೈವಿಕ ಶಕ್ತಿ’ ಕಾರಣವೆಂಬುದು ಸಾಮಾನ್ಯವಾದ ನಂಬಿಕೆ.

ತಲೆಯ ಮೇಲೆ ನೀರು ಬಿಸಿ ಮಾಡುವುದು ಹೇಗೆ? ಮೊದಲನೆಯದಾಗಿ, ಈ ಪ್ರಯೋಗ ನಡೆಸಲು ತಲೆಯ ಮೇಲೆ ಸ್ವಲ್ಪ ಹೆಚ್ಚಿನ ಕೂದಲಿರುವವರನ್ನೇ ಆರಿಸಲಾಗುತ್ತದೆ. ದಪ್ಪವಾದ ಟವೆಲನ್ನು ನೀರಿನಲ್ಲಿ ಒದ್ದೆ ಮಾಡಿ, ಅದನ್ನು ತಲೆ ಮೇಲಿರಿಸಲಾಗುತ್ತದೆ. ಆ ಬಳಿಕ, ಸೀಮೆ ಎಣ್ಣೆಯಲ್ಲಿ ಮುಳುಗಿಸಿದ, ಬಟ್ಟೆ ಸುತ್ತಿದ, ಲೋಹದ ಉಂಗುರಾಕೃತಿಯ ಒಂದು ಪರಿಕರವನ್ನು ತಲೆ ಮೇಲಿರಿಸಿ, ಅದಕ್ಕೆ ಬೆಂಕಿ ಕೊಡಲಾಗುತ್ತದೆ. ಈ ಬೆಂಕಿಯ ಶಾಖದಿಂದ ಅಲ್ಯುಮಿನಿಯಂನ ಪಾತ್ರೆಯಲ್ಲಿರುವ ನೀರನ್ನು ಕುದಿಯುವವರೆಗೆ ಬಿಸಿ ಮಾಡಲಾಗುತ್ತದೆ.

ಈ ನೀರು ಕುದಿಸುವಾಗ ತಲೆಗೆ ಯಾವುದೇ ಅಪಾಯವಾಗದಿರಲು ಕಾರಣವೇನು? ಇಲ್ಲಿ ನೆನಪಿಡಬೇಕಾದ ಮುಖ್ಯಾಂಶವೇನೆಂದರೆ, ತಲೆ ಮೇಲಿಡುವ ದಪ್ಪವಾದ ಟವೆಲನ್ನು ನೀರಿನಲ್ಲಿ ಒದ್ದೆ ಮಾಡಲಾಗುತ್ತದೆ. ಎಲ್ಲಿಯವರೆಗೆ ಟವೆಲ್ ಒದ್ದೆಯಿರುವುದೋ ಅಲ್ಲಿಯವರೆಗೆ ಉಷ್ಣತೆ 100o ಸೆಂಟಿಗ್ರೇಡ್‌ಗಿಂತ ಹೆಚ್ಚಾಗದು! ಇದಲ್ಲದೆ, ದಪ್ಪವಾದ ತಲೆ ಕೂದಲಿರುವವರನ್ನು ಪ್ರಯೋಗಕ್ಕಾಗಿ ಉಪಯೋಗಿಸಿಕೊಂಡಲ್ಲಿ, ಇವರ ತಲೆ ಕೂದಲುಗಳ ಮಧ್ಯವಿರುವ ಗಾಳಿಯು ಶಾಖ ನಿರೋಧಕವಾಗಿ ಕಾರ್ಯ ವಹಿಸುವುದು. ಆದರೆ, ಇಲ್ಲಿಯೂ ನೆನಪಿಡಬೇಕಾದ ಕೆಲವು ವಿಷಯಗಳಿವೆ. ಪ್ರಯೋಗಕ್ಕೆ ಆರಿಸಿಕೊಂಡವರು ಮನೋಸ್ಥೈರ್ಯವುಳ್ಳವರಾಗಿರಬೇಕು. ಉಪಯೋಗಿಸುವ ಟವಲು ದಪ್ಪ ವಾಗಿರಬೇಕು. ನೀರನ್ನು ಕುದಿಸಲು ಅಲ್ಯುಮಿನಿಯಂನ ಪಾತ್ರೆಯನ್ನೇ ಉಪಯೋಗಿಸುವುದು ಅಗತ್ಯ.

ಶಾಖವಿಲ್ಲದ ಬೆಂಕಿ

ಬಟ್ಟೆಯನ್ನು ಒಂದು ದ್ರಾವಣದಲ್ಲಿ ಅದ್ದಿ ತೆಗೆಯಲಾಗುತ್ತದೆ. ಆ ಬಳಿಕ ಇದಕ್ಕೆ ಬೆಂಕಿ ಹಚ್ಚಲಾಗುವುದು. ಬೆಂಕಿ ಉರಿಯುವುದು. ಆದರೂ, ಬಟ್ಟೆಗೆ ಏನೂ ಆಗುವುದಿಲ್ಲ. ಇದಕ್ಕೆ ಕಾರಣ ತಮ್ಮ ‘ದೈವಿಕ ಶಕ್ತಿ’’ ಎಂಬ ವಿವರಣೆ.

ಇಲ್ಲಿ ಈ ಪ್ರಯೋಗದ ತತ್ವವೇನು? ಇಥೈಲ್ ಆಲ್ಕೋಹಾಲು ಮತ್ತು ನೀರಿನ ಮಿಶ್ರಣದಲ್ಲಿ ಈ ಬಟ್ಟೆಯನ್ನು ಮುಳುಗಿಸುತ್ತಾರೆ. ಆ ಬಳಿಕ ಬೆಂಕಿ ಕೊಟ್ಟಾಗ ಆಲ್ಕೋಹಾಲು ಉರಿದು, ನೀರು ಆವಿಯಾಗಿ ಉಷ್ಣತೆಯು 100o ಸೆಂಟಿಗ್ರೇಡ್‌ಗಿಂತ ಕಡಿಮೆಯೇ ಇರುವುದು. ಈ ‘ಪವಾಡ’ವು ತಲೆಯ ಮೇಲೆ ಬೆಂಕಿ ಹಾಕುವ ಪವಾಡದಂತೆ ನೀರಿನ ಗುಣವನ್ನು ಅವಲಂಬಿಸಿಕೊಂಡಿದೆ.

ಇಲ್ಲಿಯೂ ಗಮನಿಸಬೇಕಾದ ವಿಷಯವೇನೆಂದರೆ ಈ ದ್ರಾವಣವನ್ನು ಮುಳುಗಿಸುವ ಬಟ್ಟೆಯು ಹತ್ತಿಯದಾದರೆ ಉತ್ತಮ.

ಲೈಡನ್ ಫ್ರಾಸ್‌ನ ಪರಿಣಾಮ

ಬೆಂಕಿಯ ಹಿಂದಿನ ‘ಪವಾಡ’ಗಳು ಈ ಪರಿಣಾಮದ ಪ್ರಯೋಜನವನ್ನು ಪಡೆಯುತ್ತವೆ. ಭೌತ ಶಾಸ್ತ್ರದ ಈ ಪರಿಣಾಮವನ್ನು ಗಮನಿಸುವುದು ಅಗತ್ಯ.

ತೇವಾಂಶವಿರುವ ಅಂಗವು ಶಾಖದ ಮೇಲ್ಮೈಯನ್ನು ಸ್ಪರ್ಷಿಸಿದಾಗ ಅಂಗದಲ್ಲಿರುವ ನೀರು ಆವಿಯಾಗಿ ಈ ಎರಡು ಮೇಲ್ಮೈಗಳ ಮಧ್ಯ ಶಾಖ ನಿರೋಧಕ ಪದರವಾಗಿ ಕಾರ್ಯವಹಿಸುತ್ತದೆ. ಇದೇ ಪರಿಣಾಮವನ್ನು ಉಪಯೋಗಿಸಿ ಕೆಂಡದ ಮೇಲೆ ನಡೆಯುವುದು, ‘ಕುದಿಯುವ’ ಎಣ್ಣೆಯಿಂದ ವಡೆಗಳನ್ನು ತೆಗೆಯುವುದು, ಇತ್ಯಾದಿ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೇನೆಂದರೆ ಈ ಲೈಡನ್ ಫ್ರಾಸ್ಟ್‌ನ ಪರಿಣಾಮದ ಶಾಖ ನಿರೋಧಕ ಪದರವು ಕೆಲವು ಸೆಕೆಂಡುಗಳ ಕಾಲ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಆ ಬಳಿಕ, ಬೆಂಕಿ ಸುಡಲು ಆರಂಭವಾಗುವುದು. ಇದಕ್ಕಾಗಿಯೇ ಕೊಳ್ಳಿ ಹಚ್ಚಿಸಿಕೊಳ್ಳುವವರು ಕೊಳ್ಳಿಯನ್ನು ಚಲಿಸುತ್ತಿರುವುದು, ಕೆಂಡಗಳ ಮೇಲೆ ನಡೆಯುವವರು ವೇಗವಾಗಿ ನಡೆಯುವುದು, ಕರ್ಪೂರಾರತಿ ಮಾಡುವವರು ಉರಿಯುವ ಕರ್ಪೂರವನ್ನು ಕೈಯಿಂದ ಕೈಗೆ ವರ್ಗಾಯಿಸುವುದು.