ಮನಸ್ಸಿಗೆ ಭ್ರಮೆಯನ್ನುಂಟು ಮಾಡುವ ಮೂಲಕ ಮಾಟ, ಮಂತ್ರ, ಯಂತ್ರ, ತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. ಮಾಟ, ಮಂತ್ರಗಳಿಗೊಳಗಾಗಿದ್ದೇನೆಂಬ ಭಯದಿಂದಲೇ ದೈಹಿಕ ಪರಿಣಾಮಗಳುಂಟಾಗುತ್ತವೆ. ಇಂತಹ ಪರಿಣಾಮಗಳು ನಡೆಯುವುದನ್ನು ತೋರಿಸಲು ಕೆಲವು ಪ್ರಯೋಗಗಳಿವೆ. ಈ ಪ್ರಯೋಗಗಳಿಂದ ಬರೇ ಇಂದ್ರಿಯಾನುಭವಗಳ ಮೂಲಕ, ಮಾನಸಿಕ ಸಲಹೆಗಳ ಮೂಲಕ ಯಾವ ರೀತಿಯಿಂದ ಮನುಷ್ಯನಲ್ಲಿ ಭ್ರಮೆಯನ್ನುಂಟು ಮಾಡಬಹುದೆಂದು ತೋರಿಸಬಹುದು.  

ಬ್ರಶ್ ಪ್ರಯೋಗ

ಬಟ್ಟೆಯುಜ್ಜುವ ಬ್ರಶ್ಶನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ. ಬಳಿಕ, ಒಬ್ಬರನ್ನು ವೇದಿಕೆಗೆ ಆಹ್ವಾನಿಸಿ ಅವರ ಮೈಗೆ ಬ್ರಶ್ ಹೊಡೆಯಲಾಗುವುದು. ಎಷ್ಟು ಬಾರಿ ಬ್ರಶ್ ಮಾಡಲಾಗಿದೆಯೆಂಬ ಲೆಕ್ಕವಿಟ್ಟುಕೊಳ್ಳಬೇಕೆಂದು ತಿಳಿಸಲಾಗುತ್ತದೆ. ಬ್ರಶ್ ಹೊಡೆಸಿಕೊಳ್ಳುವಾತ, ಬ್ರಶ್ ಮಾಡುವಾತನಿಗೆ ಬೆನ್ನು ಮಾಡಿ ನಿಲ್ಲಬೇಕು. ಆ ಬಳಿಕ ಎಷ್ಟು ಬಾರಿ ಬ್ರಶ್ ಮಾಡಿದೆಯೆಂಬ ಲೆಕ್ಕವಿರಿಸಲು ಪ್ರಯತ್ನಿಸಿದರೂ ತಪ್ಪಾಗುತ್ತದೆ.

ಬ್ರಶ್ ಹೊಡೆಯುವಾತ, ಬ್ರಶ್ ಮಾಡಿಸಿಕೊಳ್ಳುವವನ ಬೆನ್ನಿನ ಮೇಲೆ ಕೈ ಮಾತ್ರ ಆಡಿಸುವುದು. ಅದೇ ಸಮಯದಲ್ಲಿ ಬ್ರಶ್ಶನ್ನು ತನ್ನ ಮೈಗೆ ಉಜ್ಜುತ್ತಾನೆ. ಆದರೆ, ಬ್ರಶ್ ಹೊಡೆಸಿಕೊಳ್ಳುವಾತ, ಈ ಶಬ್ಧಕ್ಕೂ ಮೈಮೇಲಿನ ಒತ್ತಡಕ್ಕೂ ಸಂಬಂಧ ಕಲ್ಪಿಸಿ, ತನ್ನ ಬಟ್ಟೆಗೆ ಬ್ರಶ್ ಮಾಡಲಾಗಿದೆಯೆಂದು ಕಲ್ಪಿಸಿಕೊಳ್ಳುತ್ತಾನೆ. ತತ್ಕಾರಣ, ಆತನ ಲೆಕ್ಕವು ಪ್ರತಿಯೊಮ್ಮೆಯೂ ತಪ್ಪಾಗಿರುತ್ತದೆ.

ಈ ಪ್ರಯೋಗದ ಮೂಲಕ ವೀಕ್ಷಕರಿಗೆ ಮಾಟ ಮಂತ್ರ ಮಾಡುವವರು ಯಾವ ರೀತಿಯಲ್ಲಿ ನಮ್ಮ ಮನಸ್ಸಿನ ಭ್ರಮೆಗಳನ್ನು ಉಪಯೋಗಿಸಿಕೊಳ್ಳುತ್ತಾರೆಂದು ವಿವರಿಸಬಹುದು. ತಲೆ ಶೂಲೆ ಮಾಟ ಮಾಡಿದೆಯೆಂದು ತಿಳಿಸಿದಲ್ಲಿ ಇತರ ಯಾವುದೋ ಕಾರಣದಿಂದ ಬಂದಿರಬಹುದಾದ ತಲೆಶೂಲೆಯನ್ನು ಮಾಟದಿಂದ ಬಂದದ್ದೆಂದು ಭ್ರಮೆಯಾಗಬಹುದು. ಇದೇ ರೀತಿಯಲ್ಲಿ ಹೊಟ್ಟೆನೋವಾಗಲಿ, ಜ್ವರವಾಗಲೀ, ಇತರ ಯಾವುದೇ ದೈಹಿಕ ತೊಂದರೆಯಾಗಲಿ ಮಾಟ ಮಂತ್ರಗಳಿಂದ ಬರುವುದು ಸಾಧ್ಯವಿದೆ. ಮಾಟ ಮಂತ್ರ ಮಾಡುವವರೂ, ಅದನ್ನು ತೆಗೆಯುವವರೂ ಬರೇ ಈ ಮಾನಸಿಕ ಭ್ರಮೆಯ ಉಪಯೋಗವನ್ನು ಮಾಡಿಕೊಂಡು ಮೂಢ ನಂಬಿಕೆಗಳಿಂದ ಮೋಸಮಾಡುವುದು.

ಜಾಮೂನ್ ಸಿಹಿ

ಕಾರ್ಯಕ್ರಮ ವೀಕ್ಷಿಸುವ ಚಿಕ್ಕ ಮಕ್ಕಳಲ್ಲಿ ಸುಮಾರು 4 6 ವರ್ಷದ ಮಕ್ಕಳನ್ನು ವೇದಿಕೆಗೆ ಆಹ್ವಾನಿಸಲಾಗುವುದು. ಬಳಿಕ, ಇವರಿಗೆ ಯಾವುದಾದರೂ ಪತ್ರಿಕೆಯಿಂದ ಕತ್ತರಿಸಲಾದ ಸಿಹಿ ತಿಂಡಿಯ ಚಿತ್ರಸಾಮಾನ್ಯವಾಗಿ ಜಾಮೂನುತೋರಿಸಲಾಗುವುದು. ಸಿಹಿಯಾದ ಜಾಮೂನು ತಿನ್ನಿಸಲಾಗುವುದೆಂಬ ಆಸೆ ಹುಟ್ಟಿಸಿ, ಬೆರಳನ್ನು ಆ ಚಿತ್ರದ ಮೇಲಿರಿಸಿ, ಅದನ್ನೇ ನೋಡುತ್ತಾ ಹತ್ತು ಬಾರಿ ಜಾಮೂನಿನ ಶಬ್ಧ ಉದ್ಧಾರ ಮಾಡಲು ತಿಳಿಸಲಾಗುತ್ತದೆ. ಬಳಿಕ, ಆ ಬೆರಳಿಗೆ ಸಿಹಿಯಾದ ರುಚಿಯಿದೆಯೆಂದು ಹೇಳಿ ಅದನ್ನು ಚೀಪಬೇಕೆಂದು ಹೇಳುವುದು. ಆಗ ಮಕ್ಕಳು ಸಿಹಿಯಾಗಿದೆಯೆಂದು ಒಪ್ಪುತ್ತಾರೆ! ಅದೇ ಚಿತ್ರದ ಮೇಲೆ ಬೇರೆ ಯಾರಾದರೂ ದೊಡ್ಡವರಿಗೆ ಬೆರಳಿರಿಸಿ, ಆ ಬಳಿಕ ರಿಚಿನೋಡಲು ತಿಳಿಸಿದಾಗ, ಅವರು ಈ ಚಿತ್ರಕ್ಕೆ ಏನೂ ರುಚಿಯಿಲ್ಲವೆಂದು ಪ್ರಮಾಣಿಸುತಾರೆ.

ಈ ಪ್ರಯೋಗದ ಮೂಲಕ ಮುಗ್ಧ ಮನಸ್ಸಿಗೆ ಮಾನಸಿಕ ಸಲಹೆ ಕೊಟ್ಟು ದೈಹಿಕ ಅನುಭವಗಳನ್ನು ಉಂಟುಮಾಡಲು ಸಾಧ್ಯವಿದೆಯೆಂದು ತೋರಿಸಬಹುದು.

ಬರೆದಲ್ಲಿ ಪರಿಮಳ

ಪ್ರಯೋಗಕ್ಕೊಳಗಾಗಲು ಬಂದ ವ್ಯಕ್ತಿಗೆ ಒಂದು ಕಾಗದವನ್ನು ತೋರಿಸಲಾಗುತ್ತದೆ. ಆ ಕಾಗದವನ್ನು ಮೂಸಿ ನೋಡಿದಾಗ ಅದಕ್ಕೆ ಯಾವುದೇ ಪರಿಮಳವಿರುವುದಿಲ್ಲ. ತನ್ನ ಕೈಬೆರಳನ್ನು ಮೂಸಿ ನೋಡಲು ಆತನಿಗೆ ತಿಳಿಸಿದಾಗ ಅದಕ್ಕೂ ಯಾವುದೇ ಪರಿಮಳವಿಲ್ಲವೆಂದು ಒಪ್ಪುತ್ತಾನೆ.

ಬಳಿಕ, ಆ ಕಾಗದದ ಮೇಲೆ ಆತ ತನಗೆ ಬೇಕಾದ ಸುವಾಸನಾಯುಕ್ತ ಹೂ ಯಾ ಪರಿಮಳದ ಹೆಸರು ಬರೆಯುತ್ತಾನೆ. ಅದರ ಮೇಲೆ ಬೆರಳಿರಿಸಿ, ಹತ್ತು ಬಾರಿ ಅದೇ ಹೆಸರನ್ನು ಪುನರುಚ್ಚರಿಸಲಾಗುತ್ತದೆ. ಬಳಿಕ ಬೆರಳನ್ನು ಮೂಸಿ ನೋಡಿದಾಗ ಬರೆದ ಹೂವಿನ ಯಾ ಪರಿಮಳದ ಸುವಾಸನೆ. ಪೇಪರ್‌ಗೂ ಅದೇ ಪರಿಮಳ! ಬರೆದ ಪೆನ್ನಿನಲ್ಲಿ ಯಾವುದಾದರೂ ಪರಿಮಳ ದ್ರವ್ಯವನ್ನು ತುಂಬಿದೆಯೆಂದು ಸಂಶಯ ವ್ಯಕ್ತಪಡಿಸಿದಾಗ ಆ ಪೆನ್ನನ್ನು ಆತನ ಕೈಗೆ ಕೊಡಲಾಗುವುದು ಅದಕ್ಕೆ ಯಾವುದೇ ಪರಿಮಳವಿರುವುದಿಲ್ಲ. ಕಂಡವರು ಆಶ್ಚರ್ಯ ಚಕಿತರಾಗುತ್ತಾರೆ!.

ಇದಕ್ಕೆ ಹೆಸರು ಪಡೆದ ಸ್ವಾಮಿಯೋರ್ವ ಮಹಾರಾಷ್ಟ್ರದಲ್ಲಿದ್ದ. ಭಕ್ತರು ಸೂಚಿಸಿದ ಪರಿಮಳವನ್ನು ಅವರದ್ದೇ ಕರವಸ್ತ್ರದಿಂದ ಹೊರಹೊಮ್ಮುವಂತೆ ಪವಾಡ ನಡೆಸುತ್ತಿದ್ದನವನು. ವಾಸ್ತವವಾಗಿ, ಈತ ಯಾವಾಗಲೂ ಒಂದು ಮಣೆಯ ಮೇಲೆ ಕೂತಿರುತ್ತಿದ್ದ. ಈ ಮಣೆಯ ಬೇರೆ – ಬೇರೆ ಭಾಗಗಳಿಗೆ ವಿವಿಧ ರೀತಿಯ ಪರಿಮಳಗಳನ್ನು ತಾಗಿಸಿಡಲಾಗಿತ್ತು! ಒಂದೊಂದಕ್ಕೆ ಒಂದು ಬೆರಳನ್ನು ಉಪಯೋಗಿಸುತ್ತಿದ್ದ ಈತ, ಈ ಪರಿಮಳಗಳು ಮಿಶ್ರಣವಾಗದಂತೆ ಜಾಗ್ರತೆ ವಹಿಸುತ್ತಿದ್ದ!

ಪೇಪರ್‌ನಲ್ಲಿ ಬರೆದ ಹೆಸರಿನಿಂದ ಪರಿಮಳ ತರಿಸುವುದು ಅತಿ ಸುಲಭ. ಸಾಮಾನ್ಯವಾದ ಕೆಲವು ಪರಿಮಳಗಳನ್ನು ಶಾಯಿಗೆ ಸೇರಿಸಿ, ಅದನ್ನು ಒಂದು ಪೆನ್ನಿಗೆ ತುಂಬಿಸಲಾಗುತ್ತದೆ. ಪ್ರಯೋಗ ನಡೆಸಿದ ಬಳಿಕ, ಈ ಪೆನ್ನನ್ನು ಒಳ ಜೇಬಿಗೆ ಸೇರಿಸಬೇಕು. ಅದೇ ರೀತಿಯ ಇನ್ನೊಂದು ಪೆನ್ನು ಹೊರ ಜೇಬಿನಲ್ಲಿರಿಸಬೇಕು. ಅದರಲ್ಲಿ ಸಾಮಾನ್ಯ ಶಾಯಿಯಿರಬೇಕು. ಪರೀಕ್ಷೆ ಮಾಡಲಿಚ್ಛಿಸುವವರಿಗೆ ಇದನ್ನು ಕೊಟ್ಟರಾಯಿತು!

ಮಾನಸಿಕ ಸಲಹೆ ಮೂಲಕ ದೈಹಿಕ ಅನುಭವವನ್ನುಂಟು ಮಾಡುವ ಪ್ರಯೋಗಗಳಲ್ಲಿ ಇದೂ ಒಂದು.

ಕಲ್ಲು ದೇಹ

ಕೆಲವು ಮನೋರೋಗಿಗಳು ದೇಹವನ್ನು ಕಲ್ಲಿನಂತೆ ಮಾಡಿಕೊಂಡು ನಿಂತಿರುತ್ತಾರೆ. ಇದಕ್ಕೆ ಕೆಟಲೆಪ್ಸಿ ಎನ್ನುತ್ತಾರೆ. ಇದನ್ನು ಸಾಮಾನ್ಯರಲ್ಲಿ ಮಾಡಿತೋರಿಸಬಹುದು. ಕೆಲವು ಸಮ್ಮೋಹಿನಿಕಾರರು (hypnotist) ಇದನ್ನು ತಮ್ಮ ಸಮ್ಮೋಹಿನಿಯ ಪ್ರಯೋಗವೆಂದು ತೋರಿಸುತ್ತಾರೆ.

ಸುಮಾರು 18 – 25 ವರ್ಷದ ತೆಳ್ಳಗಿನ ಆದರೆ ಬಲಶಾಲಿ ಮೈಕಟ್ಟಿನ ಯುವಕನನ್ನು ವೇದಿಕೆಗೆ ಆಹ್ವಾನಿಸಲಾಗುವುದು. ಬಳಿಕ, ಆತನಿಗೆ ಸಮ್ಮೋಹಿನಿಕಾರರು ಕೊಡುವಂತೆ ಆಜ್ಞೆಗಳನ್ನು ಕೊಡಬೇಕು. ಕಣ್ಣು ಮುಚ್ಚಿ, ದೇಹದ ಅಂಗಗಳನ್ನೆಲ್ಲಾ ಬಿಗಿಯಾಗಿ ಸೆಟೆದುಕೊಳ್ಳಲು ತಿಳಿಸಬೇಕು. ಆತನ ದೇಹದ ಒಂದೊಂದೇ ಅಂಗವನ್ನು ಮುಟ್ಟಿ, ಅವುಗಳನ್ನು ಗಟ್ಟಿಯಾಗಿ ಮಾಡಿಕೊಂಡಿದ್ದಾನೊ ಎಂದು ಪರೀಕ್ಷಿಸಿದ ಬಳಿಕ ಆತನ ತಲೆ ಮತ್ತು ಹೆಗಲು ಒಂದು ಕುರ್ಚಿಯ ಮೇಲೆ, ಮೊಣಕಾಲು ಕೆಳಗಿನ ಭಾಗ ಇನ್ನೊಂದು ಕುರ್ಚಿಯ ಮೇಲಿರಿಸಬೇಕು. ಹೊಟ್ಟೆಯನ್ನು ಒತ್ತಿದಾಗ ದೇಹ ಬಾಗಬಾರದು. ಬಳಿಕ, ಹೊಟ್ಟೆಯ ಮೇಲೆ ಸುಮಾರು 30 – 40 ಕಿ. ಗ್ರಾಂ ತೂಕದವರನ್ನು ನಿಲ್ಲಿಸಬಹುದು. ಪ್ರಯೋಗದ ಬಳಿಕ ಆತನನ್ನು ಎಬ್ಬಿಸಿ, ಕಣ್ಣು ತೆರೆಯಲು ಆಜ್ಞಾಪಿಸಿ, ದೇಹದ ಒಂದೊಂದೇ ಅಂಗವನ್ನು ಸಡಲಿಸಲು ತಿಳಿಸಬೇಕು.

ಇದರಿಂದ ಬರೇ ಮಾನಸಿಕ ಸಲಹೆಯಿಂದ ದೇಹವನ್ನು ಕಲ್ಲಿನಂತೆ ಮಾಡಬಹುದೆಂದು ತೋರಿಸಬಹುದು. ಮನೋರೋಗಗಳನ್ನು ಮಾಟ–ಮಂತ್ರಗಳ ಮೂಲಕ ಉಂಟುಮಾಡುವವರು ಇದೇ ತಂತ್ರವನ್ನು ಉಪಯೋಗಿಸುತ್ತಾರೆ. ತತ್ಕಾರಣ, ಮಾಟ ಮಾಡಿದೆಯೆಂದು ತಿಳಿದೊಡನೆ ಅದರ ಗುರಿಯಾದ ವ್ಯಕ್ತಿ ಮಾಟ ಮಾಡಿದಾತನ ಅಪೇಕ್ಷೆಯ ರೋಗ ಲಕ್ಷಣಗಳನ್ನು ತೋರಿಸಲು ಆರಂಭಿಸುತ್ತಾನೆ. ಮಾಟವನ್ನು ತೆಗೆಯುವಾತನೂ ಇದೇ ತತ್ವದ ಉಪಯೋಗ ಮಾಡುವುದು!

ಸಾಮೂಹಿಕ ಉನ್ಮಾದದಲ್ಲಿ ದೇಹ ವಾಲುವುದು

6 – 10 ವಯಸ್ಸಿನ ಮಗುವನ್ನು ವೇದಿಕೆಗೆ ಕರೆಸಿ, ಕಣ್ಣು ಮುಚ್ಚಿ ಕೈಗಳನ್ನು ಮೇಲೆತ್ತಿ ನಿಲ್ಲಲು ತಿಳಿಸುವುದು. ಬಳಿಕ, ಈ ಮಗುವಿಗೆ ದೇಹವನ್ನು ಮುಂದೆ ವಾಲಿಸುತ್ತಿ ಎಂದು ತಿಳಿಸುತ್ತಾ ಹೋಗುವುದು. ಆಗ, ಮಗು ದೇಹವನ್ನು ಮುಂದೆ – ಹಿಂದೆ ವಾಲಿಸಲು ಆರಂಭಿಸುತ್ತದೆ. ಕೊನೆಗೊಂದು ಹಂತದಲ್ಲಿ ನಿಲ್ಲಲಾಗದೆ ಬೀಳುತ್ತಿ ಎಂದು ತಿಳಿಸಿದಾಗ ಮಗು ಬಿದ್ದೇ ಬಿಡುವುದು. ಆಗ ಅದು ಬೀಳದಂತೆ ಕೈಯ ಆಸರೆ ಕೊಡಬೇಕು.

ಈ ಪ್ರಯೋಗವನ್ನು ಸಾಮೂಹಿಕ ಉನ್ಮಾದದಲ್ಲಿ ದೇಹ ವಾಲುವುದನ್ನು ತೋರಿಸಲು ಉಪಯೋಗಿಸಬಹುದು. ಕೆಲವು ಸ್ಥಳಗಳಲ್ಲಿ ನಿರ್ದಿಷ್ಟ ಮಹೂರ್ತಗಳಲ್ಲಿ ಭಕ್ತರೆಲ್ಲರಿಗೂ ದೈವ ಸಂಚಾರವಾಗಿ ಅವರು ವಾಲುವುದಕ್ಕೆ ಆರಂಭಿಸುತ್ತಾರೆ. ಇದಕ್ಕೆ ಮಾನಸಿಕ ಸಲಹೆಯೇ ಕಾರಣ.

ಈ ಪ್ರಯೋಗದಲ್ಲಿ ಗಮನಿಸಬಹುದಾದ ಇನ್ನೊಂದು ವಿಶೇಷವೇನೆಂದರೆ ಕೆಲವರು ಮುಂದೆ ವಾಲುವ ಸೂಚನೆಯಿತ್ತಾಗ, ತಾವು ಬೀಳುತ್ತೇವೆ ಎಂದು ಹೆದರಿ ಹಿಂದೆ ವಾಲ ತೊಡಗುತ್ತಾರೆ! ಸಮತುಲಿತ ಪ್ರತಿಕ್ರಿಯೆಯು (Compensatory mechanism) ಇದಕ್ಕೆ ಕಾರಣ! ಕೆಲವೊಮ್ಮೆ ಮುಂದೆ ಬೀಳುತ್ತಿ ಎಂದು ತಿಳಿಸಿದಾಗ, ಇಂತಹವರು ಹಿಂದಕ್ಕೆ ಬಿದ್ದು ಬಿಡುತ್ತಾರೆ! ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಈ ಮಾನಸಿಕ ಸಲಹೆ ಪ್ರಯೋಗಗಳನ್ನು ನಡೆಸಿದಾಗ ವೀಕ್ಷಕರು ನಿಶ್ಶಬ್ಧರಾಗಿದ್ದು ಯಾವುದೇ ರೀತಿಯ ತೊಂದರೆಯನ್ನು ಮಾಡಬಾರದು.

ಮಾಟ – ಮಂತ್ರ – ಸಾಮೂಹಿಕ ಉನ್ಮಾದಗಳು ಮನಸ್ಸಿಗೆ ಕೊಟ್ಟ ಸಲಹೆಗಳ ದೈಹಿಕ ಲಕ್ಷಣಗಳು. ಇವುಗಳನ್ನು ಮಾಡುವವರು ಹೆಚ್ಚಿನ ಸಮಯಗಳಲ್ಲಿ ತಮ್ಮ ಬಲಗಳ ಮಾನಸಿಕ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಈ ಬಲಿಪಶುಗಳಿಗೆ ತಿಳಿಯದಂತೆ ಮಾನಸಿಕ ಯಾ ದೈಹಿಕ ವಿಕಾರಗಳುಂಟಾಗುವ ಸಸ್ಯಜನ್ಯ ರಾಸಾಯನಿಕಗಳನ್ನು ಉಪಯೋಗಿಸುವುದೂ ಇದೆ.

ವೀಕ್ಷಕರಿಗೆ ಇಂತಹ ಪ್ರಯತ್ನಗಳನ್ನು ನಿಷ್ಕ್ರಿಯಗೊಳಿಸಲು ಮನೋಸ್ಥೈರ್ಯ ಹಾಗೂ ಇವು ನಡೆಯುವ ತತ್ವಗಳ ತಿಳಿವಳಿಕೆಯ ಅಗತ್ಯಗಳನ್ನು ಒತ್ತಿ – ಒತ್ತಿ ಹೇಳಬೇಕು. ಅಗತ್ಯವಿದ್ದಲ್ಲಿ, ಈ ಮಾಟ – ಮಂತ್ರಗಳನ್ನು ಪ್ರಯೋಗಗಳ ಮೂಲಕ ತೋರಿಸಬೇಕೆಂಬ ಪಂಥಾಹ್ವಾನವನ್ನೂ ಒಡ್ಡಬಹುದು.