ಸಾಮಾನ್ಯವಾಗಿ ಲಭ್ಯವಿರುವಂತಹ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ‘ಪವಾಡ’ಗಳನ್ನು ನಡೆಸಿ ಜನ ಸಾಮಾನ್ಯರನ್ನು ಮೋಸಗೊಳಿಸುವವರಿದ್ದಾರೆ. ಇಂತಹ ಕೆಲವು ಪ್ರಯೋಗಗಳನ್ನು ನೋಡೋಣ.  

ತಪಶ್ಚಕ್ತಿಯಿಂದ ಯಜ್ಞಕುಂಡದಲ್ಲಿ ಬೆಂಕಿ

ಯಜ್ಞಕುಂಡವನ್ನು ರಚಿಸಲಾಗಿದೆ. ಕಟ್ಟಿಗೆಯ ರಾಶಿಯೂ ಇದೆ. ಗುಣು ಗುಣು ಮಂತ್ರ ಹೇಳುತ್ತಾ, ಕಟ್ಟಿಗೆಗೆ ತುಪ್ಪ ಸುರಿಯಲಾಗುತ್ತದೆ. ಈಗ ಬೆಂಕಿ ಬೇಕಲ್ಲವೆ? ಪವಾಡ ಪುರುಷ ತನ್ನ ದೃಷ್ಟಿಯನ್ನು ಕುಂಡದ ಮೇಲೆ ಹರಿಸಿ, ದುರುಗುಟ್ಟಿಕೊಂಡು ನೋಡುತ್ತಾನೆ. ಭಗ್ಗನೆ ಬೆಂಕಿ ಉರಿದು, ಯಜ್ಞಕುಂಡ ಬೆಳಗುತ್ತದೆ. ವೀಕ್ಷಕರು ಈತನ ಪಾದಕ್ಕೆರಗುತ್ತಾರೆ. ಬರೇ ದೃಷ್ಟಿಯಿಂದಲೇ ಬೆಂಕಿ ಉರಿಸಬಲ್ಲ ಮಹಾ ಪುರುಷನೊಡನೆ ಒಳ್ಳೆಯ ಸಂಬಂಧವನ್ನಿಟ್ಟುಕೊಳ್ಳುವುದು ಉತ್ತಮವೆಂದು ಆತನಿಗೆ ದಕ್ಷಿಣೆ ಸಲ್ಲಿಸಿ, ಪಾದಕ್ಕೆರಗಿದರು. ಈ ಫಟನೆಯು ನಡೆದದ್ದು ಮೂಲೆಯ ಹಳ್ಳಿಯಲಲ್ಲ ದಿಲ್ಲಿಯಲ್ಲಿ! ದಕ್ಷಿಣೆ ಕೊಟ್ಟು ಪಾದಕ್ಕೆರಗಿದವರಲ್ಲಿ ಮಂತ್ರಿಗಳು, ಉನ್ನತಾಧಿಕಾರಿಗಳು, ವಿಜ್ಞಾನಿಗಳಿದ್ದರು!.

ಇದೇ ಜ್ಯೋಗವನ್ನು ನಾವು ನಡೆಸೋಣ. ಚಿಕ್ಕ ತಟ್ಟೆಯೊಂದರಲ್ಲಿ ಪೇಪರ್ ಚೂರುಗಳು. ಅದಕ್ಕೆ ತುಪ್ಪ ಸುರಿಯುವ ಮೊದಲು ಅದರ ರುಚಿ ನೋಡಲು ಸಭಿಕರಿಗೆ ಆಹ್ವಾನ. ತಿಂದು ಬಾಯಿ ಚಪ್ಪರಿಸಿ, ಇದು ಜೇನು ತುಪ್ಪವೆಂದು ಪ್ರಮಾಣೀಕರಿಸಿದ ಬಳಿಕವೇ ಅದನ್ನು ಯಜ್ಞಕುಂಡಕ್ಕೆ ಸೇರಿಸುವುದು. ಬಳಿಕ ಮನಸ್ಸಿನ ಶಕ್ತಿಯನ್ನು ಕಣ್ಣುಗಳ ಮೂಲಕ ಹರಿಸಿದರಾಯಿತು! ಯಜ್ಞಕುಂಡದಲ್ಲಿ ಭಗ್ಗನೆ ಬೆಂಕಿ.

ವಾಸ್ತವವಾಗಿ ಇಲ್ಲಿ ನಡೆಯುವುದೇನು? ಯಜ್ಞಕುಂಡದ ಕಟ್ಟಿಗೆ ರಾಶಿಯಲ್ಲಿ ಪೊಟಾಸಿಯಂ ಪರಮ್ಯಾಂಗನೇಟನ್ನು ಇರಿಸಲಾಗುವುದು. ಸಿಹಿ ರುಚಿಯ ತುಪ್ಪವು ನಿಜವಾಗಿಯೂ ಗ್ಲಿಸರೀನ್. ಪರಮ್ಯಾಂಗನೇಟ್‌ಗೆ ಒಂದೆರಡು ತೊಟ್ಟು ಗ್ಲಿಸರೀನ್ ಸೇರಿಸಿದಾಗ ರಾಸಾಯನಿಕ ಕ್ರಿಯೆಯಿಂದ ಶಾಖೋತ್ಪನ್ನವಾಗಿ ಬೆಂಕಿ ಉರಿಯುವುದು. ಆಮ್ಲಜನಕದ ಆಕರವಾದ ಪರ್‌ಮ್ಯಾಂಗನೇಟ್ ಜಲನಕ್ರಿಯೆಗೆ ಮತ್ತೂ ಪ್ರೋಒಟ್ಟಿನಲ್ಲಿ ಎರಡು ನಿರಪಾಯಕಾರಿಯಾದ ರಾಸಾಯನಿಕಗಳ ಮಿಲನದಿಂದ ಸ್ಪೋಟಕ ಪರಿಸ್ಥಿತಿ, ಸುಲಭವಾಗಿ ಉರಿಯುವ ಬೆಂಕಿ.

ಬಣ್ಣ ಬದಲಾಯಿಸುವ ಅರಿಶಿನ

ಸ್ವಾಮಿಗೆ ಅಡ್ಡ ಬಿದ್ದ ಭಕ್ತನಿಗೆ ಕಾರ್ಯಸಿದ್ದಿಯಾಗುವುದೇ ಎಂದು ಪರಿಶೀಲಿಸಲು ಅರಿಶಿನದ ಚಿಟಿಕೆಯನ್ನು ನೀಡಲಾಗುತ್ತದೆ. ಅದನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡೆದು, ಧ್ಯಾನ ಮಾಡುವ ಸೂಚನೆ ಕೊಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಅರಿಶಿನ ಕೆಂಪು ಬಣ್ಣ ತಳೆಯುವುದು! ಅಪಾಯಕಾರಿಯಾದ ಪರಿಸ್ಥಿತಿ ಕಾರ್ಯಸಿದ್ದಿಯಾಗಲಿಕ್ಕಿಲ್ಲವೆಂಬ ಎಚ್ಚರಿಕೆ! ವಿಫ್ನ ಪರಿಹಾರಕ್ಕಾಗಿ ಮತ್ತೆ ಪೂಜೆ ಪುರಸ್ಕಾರಗಳನ್ನು ನಡೆಸಲಾಗುತ್ತದೆ. ಮತ್ತೊಮ್ಮೆ ಭಕ್ತನ ಕೈಗೆ ಅರಿಶಿನ ನೀಡಲಾಗುವುದು. ಭಕ್ತಿಯಿಂದ ಇದನ್ನು ಹಿಡಿದು ನಿಂತ ಭಕ್ತನಿಗೆ ಎದೆಯೆಲ್ಲಾ ಡಬ ಡಬ. ಆದರೆ, ಈ ಬಾರಿ ಅರಿಶಿನ ಬಣ್ಣ ಬದಲಾಯಿಸುವುದಿಲ್ಲ. ಭಕ್ತಾ, ಹೋಗು, ನಿನ್ನ ಕೆಲಸವಾಗುವುದೆಂಬ ಆಶ್ವಾಸನೆ.

ಕಾರ್ಯ ಸಿದ್ದಿಯಾಗುವುದೇ ಎಂಬ ಪರೀಕ್ಷೆ ನಡೆಸುವುದು ಹೇಗೆ? ಮೊದಲನೆಯ ಬಾರಿಗೆ ಕೊಟ್ಟ ಅರಿಶಿನದಲ್ಲಿ ಕ್ಷಾರದ ಮಿಶ್ರಣವಿದೆ. ಕೈಯ ತೇವಕ್ಕೆ ಇದು ಕರಗಿ, ಎರಡೂ ಮಿಶ್ರಣವಾಗುತ್ತದೆ. ಸೂಚಕವಾಗಿರುವ ಅರಿಶಿನ ಕ್ಷಾರದ ದ್ರಾವಣಗಳಲ್ಲಿ ಕೆಂಪು ಬಣ್ಣ ಹೊಂದುತ್ತದೆ. ಅದೇ, ಎರಡನೆಯ ಬಾರಿ ಕೊಟ್ಟ ಅರಿಶಿನ ಶುದ್ಧವಾದದ್ದು. ಇದು ಬಣ್ಣ ಬದಲಾಯಿಸುವುದಿಲ್ಲ.

ಕಡಿಮೆ ತಿಳುವಳಿಕೆಯಿರುವವರನ್ನು ಮೋಸಮಾಡುವುದು ಸುಲಭವಲ್ಲವೆ? ನಿಮ್ಮ ಬಿ. ಎ. , ಎಂ. ಎ. , ಎಂ. ಎಸ್ಸಿ. , ಕಲಿತವರೇನೂ ಇಂತಹ ಮೋಸಗಳಿಗೆ ಬಲಿ ಬೀಳುವುದೇನೂ ಕಡಿಮೆಯಿಲ್ಲ. ಈ ಪ್ರಯೋಗಕ್ಕೆ ಅರಿಶಿನಕ್ಕೆ ಕ್ಷಾರ ಹಾಕಲು ಧೋಬಿ ಖಾರ (washing soda), ಸಾಬೂನು, ಸುಣ್ಣದ ಪುಡಿಯನ್ನು ಉಪಯೋಗಿಸಬಹುದು. ಇದರಲ್ಲಿ ಧೋಬಿ ಖಾರವು ನೀರನ್ನು ಹೀರಿಕೊಳ್ಳುವುದಿಲ್ಲವಾದ ಕಾರಣ ಅದುವೇ ಉತ್ತಮ.

ಭಾನಾಮತಿಯ ಬೆಂಕಿ

ಭಾನಾಮತಿ ನಡೆದಾಗ ಬಟ್ಟೆಗಳಿಗೆ, ಮನೆಗೆ ಆಕಸ್ಮಾತ್ತಾಗಿ ಬೆಂಕಿ ತಗಲುವುದಂತೆ. ಹತ್ತಿರ ಯಾರೂ ಇಲ್ಲವಾದರೂ ತಗಲುವ ಈ ಬೆಂಕಿಗೆ ಯಾವುದೋ ಅತಿ ಮಾನುಷ ಶಕ್ತಿ ಕಾರಣವಿರಬೇಕೆಂದು ಭಯ! ಆ ಬೆಂಕಿ ಹತ್ತಿಕೊಳ್ಳುವುದು ಹೇಗೆ? ಬಿಳಿ ರಂಜಕವನ್ನು ಒದ್ದೆ ಸೆಗಣಿಯಲಿಟ್ಟು ಮರಕ್ಕೆ ಯಾ ಬೆಂಕಿ ಸುಲಭವಾಗಿ ಹತ್ತಿಕೊಳ್ಳುವಲ್ಲಿಗೆ ತಗಲಿಸಲಾಗುತ್ತದೆ. ನೋಡುವವರಿಗೆ ಈ ಬೆಂಕಿ ವ್ಯಕ್ತಿಯೂ ಹತ್ತಿರವಿಲ್ಲದಾಗ ಹತ್ತಿಕೊಂಡದ್ದನ್ನು ಕಂಡು ಗಾಬರಿ!

(ಎಚ್ಚರಿಕೆ : ಇದನ್ನು ಪ್ರಯೋಗ ಮೂಲಕ ತೋರಿಸಲು, ಬಿಳಿ ರಂಜಕ, ಇದು ವಿಷ ಮಾತ್ರವಲ್ಲದೆ ಅಪಾಯಕಾರಿ ರಾಸಾಯನಿಕ ಕೂಡಾ. ಇದನ್ನು ಸರಿಯಾದ ಅನುಭವವಿಲ್ಲದವರು ಉಪಯೋಗಿಸಕೂಡದು) ಕಾರ್ಬನ್ ಡೈ ಸಲ್ಫೈಡ್ ಅದರ ದ್ರಾವಣವನ್ನು ಸಿದ್ಧ ಮಾಡಲಾಗುತ್ತದೆ. ಇದನ್ನು ಬೆಂಕಿ ಹಿಡಿಯುವಂತಹ ವಸ್ತುವಿನ ಮೇಲೆ ಚೆಲ್ಲಿದಾಗ, ಕಾರ್ಬನ್ ಡೈಸಲ್ಫೈಡ್ ಆವಿಯಾಗಿ ರಂಜಕಕ್ಕೆ ಬೆಂಕಿ ಹಿಡಿಯುವುದು.

ಈ ಪ್ರಯೋಗದಿಂದ ಭಾನಾಮತಿ ಮಾಡುವವರು ಬೆಂಕಿ ಹೇಗೆ ಕೊಡುತ್ತಾರೆಂಬುದನ್ನು ತೋರಿಸಬಹುದು. ಜ್ವಲನೀಯ ವಸ್ತು ಯಾವುದೂ ಇಲ್ಲದೆ, ಬೆಂಕಿ ಹಿಡಿಯುವುದಿಲ್ಲವೆಂದು ತೋರಿಸಲು ಇದೊಂದು ವಿಧಾನ. ಆದರೆ, ಈಗಾಗಲೇ ತಿಳಿಸಿರುವಂತೆ ರಂಜಕವು ಅಪಾಯಕಾರಿಯಾದ ರಾಸಾಯನಿಕ. ಕಾರ್ಬನ್ ಡೈಸಲ್ಫೈಡ್ ಸುಲಭವಾಗಿ ಆವಿಯಾಗುವ ದ್ರವ. ಇವೆರಡನ್ನೂ ಸರಿಯಾದ ಅನುಭವವಿಲ್ಲದವರು ಉಪಯೋಗಿಸಬಾರದು. ಸಾರ್ವಜನಿಕ ಪ್ರಯಾಣದ ವಾಹನಗಳಲ್ಲಿ ಸಾಗಿಸಬಾರದು.

ನಾಣ್ಯ / ಪೋಟೋದಿಂದ ವಿಭೂತಿ

ಬಾಬಾ ಓರ್ವರು ತಾವು ವಿಭೂತಿ ಕೊಡುವುದು ಮಾತ್ರವಲ್ಲದೆ. ತಮ್ಮ ಚಿತ್ರಗಳಿಂದಲೋ ವಿಭೂತಿ ಸುರಿಸುತ್ತಾರೆಂಬ ಪ್ರತೀತಿಯಿದೆ. ಇವರ ಪೋಟೋದಿಂದ ವಿಭೂತಿ ಉದುರುವ ಮನೆಗಳಂತೂ ಮಂದಿರಗಳೇ ಆಗಿಬಿಟ್ಟಿವೆ. ಇವುಗಳನ್ನು ಸರಿಯಾಗಿ ಪರೀಕ್ಷಿಸಲು ಅವಕಾಶ ಸಿಗುವುದಿಲ್ಲವಾದ ಕಾರಣ ನಾವು ಇದನ್ನು ಮಾಡಿತೋರಿಸುವುದು ಸೂಕ್ತ.

ವೀಕ್ಷಕರಿಂದ ಪಡೆದ ಅಲ್ಯೂಮಿನಿಯಂ ನಾಣ್ಯಗಳಿಗೆ (5, 10 ಯಾ 20 ಪೈಸೆಯದ್ದು) ಒಂದು ದ್ರವವನ್ನು ಹಚ್ಚಲಾಗುತ್ತದೆ. ಬಳಿಕ ನಾಣ್ಯವನ್ನು ನೀರಿನಲ್ಲಿ ಮುಳುಗಿಸಿ, ಒಣಗಿಸಿ ಅವರವರ ನಾಣ್ಯವನ್ನು ಹಿಂದಿರುಗಿಸಲಾಗುತ್ತದೆ. ಅವುಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡಾಗ, ಬಿಸಿಯೇರುವ ಅನುಭವವಾಗುತ್ತದೆ. ಮುಷ್ಟಿ ತೆರೆದು ನೋಡಿದಾಗ ನಾಣ್ಯದಿಂದ ವಿಭೂತಿ ಹೊರಡುತ್ತಿರುತ್ತದೆ.

ನಾಣ್ಯದಿಂದ ವಿಭೂತಿ ಹೊರಡಿಸುವುದು ರಾಸಾಯನಿಕ ಉಪಯೋಗದಿಂದಾಗುವ ‘ಪವಾಡ’ ನಾಣ್ಯಕ್ಕೆ ಮರ್ಕುರಿಕ್ ಕ್ಲೋರೈಡ್‌ನ ದ್ರಾವಣ ಯಾ ಫನರೂಪದಲ್ಲೇ ಇರುವ ಯಾವುದಾದರೂ ಮರ್ಕುರಿಯ ಲವಣವನ್ನು ಹಚ್ಚಿದಾಗ, ಅಲ್ಯುಮಿನಿಯಂ ವಾತಾವರಣದ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ, ಅದರ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಆಕ್ಸೈಡ್‌ಗಳು ಲಘುವಾದ ಕಾರಣ ಚಿಕ್ಕ ನಾಣ್ಯವು ತನ್ನ ಗಾತ್ರದ ಹಲವಾರು ಪಟ್ಟು ಪ್ರಮಾಣದ ಆಕ್ಸೈಡನ್ನು ಉತ್ಪತ್ತಿ ಮಾಡಬಲ್ಲುದು.

ಪೋಟೋಗಳಿಂದ ವಿಭೂತಿ ಹೊರಡಿಸುವ ಇನ್ನೊಂದು ವಿಧಾನವಿದೆ. ಆದರೆ ಇದು ರಾಸಾಯನಿಕ ಕ್ರಿಯೆಯನ್ನು ಆಧರಿಸಿಲ್ಲ. ವಿಭೂತಿಯನ್ನು ನೀರಿನಲ್ಲಿ ಕಲಸಿ ಅದನ್ನು ಪೋಟೋದ ಗಾಜಿನ ಮೇಲೆ ಚಿಮುಕಿಸಿದರಾಯಿತು. ಆಬಳಿಕ ಅದರೆದುರು ಊದುಕಡ್ಡಿ ಯಾ ದೀಪ ಹಚ್ಚಿದರೆ, ಅದರ ಶಾಖಕ್ಕೆ ನೀರು ಆವಿಯಾಗಿ ಬೂದಿ ಉದುರುತ್ತಲಿರುತ್ತದೆ.

ಈ ಜಗತ್ತಿನಲ್ಲಿ ಶೂನ್ಯದಿಂದ ಯಾವುದನ್ನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ. ವಸ್ತುಗಳು ರೂಪಾಂತರ, ಸ್ಥಳಾಂತರ ಹೊಂದುತ್ತವೆಯೇ ಹೊರತು, ಶೂನ್ಯದಿಂದ ಏನನ್ನೂ, ಸೃಷ್ಟಿಸಲು ಸಾಧ್ಯವಿಲ್ಲ. ಶೂನ್ಯಕ್ಕೆ ಯಾವುದನ್ನೂ ಕಳುಹಿಸಲು ಸಾಧ್ಯವಿಲ್ಲ.

ನಾಣ್ಯದಿಂದ ವಿಭೂತಿ ಬರಿಸುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಮರ್ಕುರಿಯ ಲವಣಗಳು ವಿಷಕಾರಿ. ತತ್ಕಾರಣ, ಅವುಗಳನ್ನು ಉಪಯೋಗಿಸುವಾಗ ಜಾಗ್ರತೆಯಿಂದಿರಬೇಕು. ನಾಣ್ಯಗಳನ್ನು ವೀಕ್ಷಕರ ಕೈಗೆ ಕೊಡುವ ಮೊದಲು ಅವನ್ನು ಸರಿಯಾಗಿ ತೊಳೆದು ಒಣಗಿಸಿಯೇ ಕೊಡಬೇಕು.

ಬರೆದ ಸ್ಥಳದಲ್ಲಿ ಮಾತ್ರ ಸುಡುವ ಚಿಹ್ನೆ

ಸ್ವಾಮಿಯೋರ್ವರು ತಮ್ಮ ತಪಶ್ಚಕ್ತಿಯನ್ನು ತೋರಿಸಲು ಚಿಹ್ನೆಯನ್ನು ಒಂದು ಕಾಗದದ ಮೇಲೆ ಬರೆದು, ಧ್ಯಾನ ಮಾಡುತ್ತಿದ್ದರಂತೆ. ಬಳಿಕ, ಇದಕ್ಕೆ ಬೆಂಕಿ ಮುಟ್ಟಿಸಿದಾಗ ಇದನ್ನು ಬರೆದ ಸ್ಥಳಕ್ಕೆ ಬೆಂಕಿ ಹಚ್ಚಿದಾಗ, ಆ ಚಿಹ್ನೆ ಬರೆದ ಸ್ಥಳದಷ್ಟು ಸುಡುತ್ತಿತ್ತು! ಇದಕ್ಕೆ ತಮ್ಮ ತಪಶ್ಚಕ್ತಿ ಕಾರಣವೆಂಬ ವಿವರಣೆ.

ವೀಕ್ಷಕರೆದುರು ಒಂದು ದಪ್ಪ ಕಾಗದವನ್ನು ತೋರಿಸಲಾಗುತ್ತದೆ. ಆ ಕಾಗದ ಮೇಲೆ ದಪ್ಪಕ್ಷರದಲ್ಲಿ ಪೆನ್ಸಿಲ್‌ನಿಂದ ? ಚಿಹ್ನೆಯನ್ನು ಬರೆಯಲಾಗಿದೆ. ಸಿಗರೇಟು ಯಾ ಬೀಡಿ ಸೇದುವ ವೀಕ್ಷಕರಿಂದ ಅದಕ್ಕೆ ಬೆಂಕಿ ಮುಟ್ಟಿಸಲಾಗುತ್ತದೆ. ಆಗ, ಈ ಚಿಹ್ನೆಯಿರುವ ಸ್ಥಳ ಮಾತ್ರ ಚಟ ಚಟನೆ ಉರಿದು, ಕಾಗದದ ಇತರ ಭಾಗ ಹಾಗೆಯೇ ಇರುತ್ತದೆ. ನಾವು ವಿಚಾರವಾದಿಗಳಾದ ಕಾರಣ, ನಮ್ಮ ಪ್ರಿಯ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆ ಯಾಕೆಂದರೆ ನಾವು ಪ್ರಶ್ನಿಸದೆ ನಂಬುವುದಿಲ್ಲ ತಾನೆ?

ಈ ಶಕ್ತಿಯನ್ನು ತೋರಿಸುವುದು ಹೇಗೆ? ಒಂದು ದಪ್ಪದಾದ (ಲೆಡ್ಜರ್ ಪೇಪರ್) ಹಾಳೆಯ ಮೇಲೆ ಪೆನ್ಸಿಲ್‌ನಿಂದ? ಬರೆಯಬೇಕು. ಸುಮಾರು 1 ಸೆ. ಮಿ. ದಪ್ಪ ಅಕ್ಷರದಲ್ಲಿ ಇದನ್ನು ಬರೆಯಬೇಕು. ಆ ಬಳಿಕ ಒಂದು ಬ್ರಶ್‌ನಿಂದ ಈ ಚಿಹ್ನೆ ಬರೆದ ಸ್ಥಳಕ್ಕೆ ಪೊಟೆಸಿಯಂ ನೈಟ್ರೇಟ್ ಮತ್ತು ಸ್ಟ್ರಾರ್ಚ್ ದ್ರಾವಣವನ್ನು ಹಚ್ಚಬೇಕು. ಒಮ್ಮೆ ಹಚ್ಚಿದ್ದು ಒಣಗಿದ ಬಳಿಕವೇ ಮತ್ತಿನ ಪದರವನ್ನು ಹಚ್ಚಬೇಕು. ಸಾಮಾನ್ಯವಾಗಿ 4 ಬಾರಿ ಹಚ್ಚಬೇಕಾಗುತ್ತದೆ. ಆ ಬಳಿಕ ಈ ಕಾಗದವನ್ನು ಬಿಸಿಲಿನಲ್ಲಿ ಒಣಗಿಸಿಡಬೇಕು.

ಪೊಟ್ಯಾಸಿಯಂ ನೈಟ್ರೇಟ್ ಒಂದು ಉತ್ತಮ ಆಕ್ಸೀಡಿಕಾಂತವೆಂಬುದನ್ನು ನೆನಪಿಡಬೇಕು. ತತ್ಕಾರಣವೇ ಅದನ್ನು ಮುಟ್ಟಿಸಿದ ಸ್ಥಳದಲ್ಲಿ ಮಾತ್ರ ಕಾಗದ ಉರಿಯುವುದು! ವೀಕ್ಷಕರು ಇದು ಚಿಹ್ನೆಯ ಶಕ್ತಿಯಿಂದ ಎಂದು ನಂಬಿ, ಇದನ್ನು ನಡೆಸುವವ ಬಹಳ ಶಕ್ತಿಯುಳ್ಳವನೆಂದು ಭಾವಿಸುತ್ತಾರೆ!.