ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ನಡೆಸಿ, ಪವಾಡಗಳೆಂದು ಜನ ಸಾಮಾನ್ಯರು ನಂಬುವ ಹಲವಾರು ವಿಷಯಗಳಲ್ಲಿ ನಡೆಸಲಾದ ನಮ್ಮ ಕಾರ್ಯಕ್ರಮದ ಕೆಲವು ಪ್ರಯೋಗಗಳ ಬಗ್ಗೆ ವಿವರಣೆಗಳನ್ನು ಕೊಡುವ ಉದ್ದೇಶದಿಂದ ಈ ಕಿರು ಪುಸ್ತಕವನ್ನು ಬರೆಯಲಾಗಿದೆ. ಇವುಗಳಲ್ಲಿ ಕೊಟ್ಟಿರುವ ವಿವರಣೆಗಳು ಸಾಮಾನ್ಯವಾಗಿ ಪವಾಡಗಳೆಂದು ನಂಬುವ ವಿಷಯಗಳ ಬಗ್ಗೆ ತಿಳಿಯದವರಿಗೆ ವಿಚಾರಗಳನ್ನು ತಿಳಿಸಲು ಸಹಾಯಕವಾದಾವು.

ಈ ಪುಸ್ತಕವು `ಪವಾಡ’ಗಳನ್ನು ನಡೆಸಬಯಸುವವರಿಗೆ ಯಾ ತಿಳಿಯದವರನ್ನು ಶೋಷಿಸಲು ಇಂತಹವುಗಳನ್ನು ಉಪಯೋಗಿಸಬಯಸುವವರಿಗೆ ಸಹಾಯಕವಾಗದಂತೆ ಅವುಗಳನ್ನು ಮಾಡುವ ವಿಧಾನಗಳನ್ನೂ ಸೂಕ್ಷ್ಮವಾಗಿ ವಿವರಿಸಿಲ್ಲ. ಯಾಕೆಂದರೆ, ಸುಲಭವಾಗಿ ಲಭ್ಯವಿರುವ ಈ ಪುಸ್ತಕದಲ್ಲಿರುವ ವಿಧಾನಗಳನ್ನು ವಂಚಕರು ಉಪಯೋಗಿಸಿಕೊಂಡು, ಆ ಬಳಿಕ ಅವುಗಳ ಸಹಾಯದಿಂದ ಮೂಲೆ -ಮೂಲೆಯ ಹಳ್ಳಿಗಳಿಗೆ ಹೋಗಿ ಮುಗ್ಧರನ್ನು ಶೋಷಿಸುವ ಸಾಧ್ಯತೆಯುಂಟು. ಇದಲ್ಲದೆ, ಎಲ್ಲಾ `ಪವಾಡ’ಗಳನ್ನು ಯಾರೂ ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ ವಂಚಕರು ಹೊಸ-ಹೊಸತವುಗಳನ್ನು ಕಲಿತು ಅವುಗಳ ಉಪಯೋಗದಿಂದ ತಿಳಿಯದವರನ್ನು ಮೋಸಮಾಡುವ ಹೊಸ ವಿಧಾನಗಳನ್ನು ಉಪಯೋಗಿಸುತ್ತಾರೆ. ಪವಾಡಗಳ ರಹಸ್ಯಗಳನ್ನು ಬಯಲು ಮಾಡುವುದು ಒಂದು ನಿರಂತರವಾದ ಕ್ರಿಯೆ. ಹೊಸ ಪವಾಡಗಳು ಹುಟ್ಟಿದಂತೆ ಅವುಗಳನ್ನು ಬಯಲಿಗೆಳೆಯುತ್ತಾ ಸಾಗಬೇಕು. ಇಂತಹವುಗಳನ್ನು ಪತ್ತೆ ಹಚ್ಚುವ ತೀಕ್ಷ್ಣತೆಯನ್ನು ಮೈಗೂಡಿಸಿಕೊಳ್ಳಬೇಕು. ಮಾತ್ರವಲ್ಲದೆ, ಈ ಕಾರ್ಯದಲ್ಲಿ ದಕ್ಷತೆಯನ್ನು ಬೆಳೆಸಿಕೊಳ್ಳಬೇಕು.

ವಿಜ್ಞಾನವು ಬರೇ ಪುಸ್ತಕದ ಬದನೆಕಾಯಿಯಾಗದೆ ನಮ್ಮ ದಿನನಿತ್ಯದ ಜೀವನದಲ್ಲಿ ಉಪಯುಕ್ತವಾಗುವ ವಿಷಯ. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು, ನಮ್ಮ ಜನ್ಮಸಿದ್ಧ ಹಕ್ಕು, ಇತರರಲ್ಲಿ ಬೆಳೆಸುವುದೂ ನಮ್ಮ ಕರ್ತವ್ಯವೆಂದು ತಿಳಿದುಕೊಂಡ ವೈಜ್ಞಾನಿಕ ಮನೋಭಾವವನ್ನು ಹೊಂದಿಕೊಂಡಿರುವ ನನ್ನ ಎಲ್ಲಾ ಹಿರಿಯ – ಕಿರಿಯ ಮಿತ್ರರಿಗೆ ಈ ಪುಸ್ತಕವು ಉಪಯುಕ್ತವಾದೀತೆಂಬ ಭರವಸೆ ನನಗಿದೆ.

ಹಲವಾರು ದಶಕಗಳಿಂದಲೂ ವಿಚಾರವಾದಿ ಮನೋಭಾವವನ್ನು ಹೊಂದಿದ ನನಗೆ ಬಂಧು – ಮಿತ್ರರೊಡನೆ ಚರ್ಚೆ ನಡೆಸುವಾಗ, ಅವರು ಅತಿಮಾನುಷ ಶಕ್ತಿಯಿಂದ ನಡೆಯುತ್ತವೆಂದು ಕೆಲವು ವಿಷಯಗಳನ್ನು ನನ್ನ ಗಮನಕ್ಕೆ ತಂದಾಗ, ಆ ಬಗ್ಗೆ ನಾನು ಸಾಧ್ಯವಾದಷ್ಟು ಆಲೋಚಿಸಿ, ಅವುಗಳ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ವಿವರಿಸುತ್ತಿದ್ದೆ. ಆಗ ಎಲ್ಲಾ ವಿವರಗಳು ಮುಗಿದ ಮೇಲೆ ಬರುತ್ತಿದ್ದ ಪ್ರಶ್ನೆಯೊಂದೇ – `ಹಾಗಾದರೆ ನೀನು ಅವುಗಳನ್ನು ಮಾಡಿ ತೋರಿಸು’ ಎಂದು. ಇವುಗಳ ಸರಿಯಾದ ತಂತ್ರಗಳನ್ನು ತಿಳಿಯದೆ, ಅವುಗಳನ್ನು ಮಾಡುವುದು ಹೇಗೆಂದು ಆಲೋಚಿಸುತ್ತಿರುವಾಗ, 1976-77ರಲ್ಲಿ ಡಾ. ಕೋವೂರ್‌ರ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನೋಡುವ ಅವಕಾಶ ಸಿಕ್ಕಿತು. ಆಗ, ಕೆಲವು ಪವಾಡಗಳನ್ನು ಮಾಡುವ ಬಗ್ಗೆ ತಿಳಿದುಕೊಂಡೆ. ಮುಂದೆ, 1982, 1984, 1986ರಲ್ಲಿ ಪೊನೂರಿನ ಶ್ರೀ. ಬ. ಪ್ರೇಮಾನಂದರವರಿಂದ ಕೆಲವು ಕಾರ್ಯಕ್ರಮಗಳನ್ನು ನಡೆಸಲಾಯಿತು. ಇವರು ಮೂರನೇ ಬಾರಿ ನಮ್ಮ ಜಿಲ್ಲೆಗೆ ಬಂದಾಗ ಇನ್ನು ಮುಂದೆ ಈ ಜಿಲ್ಲೆಗೆ ಕಾರ್ಯಕ್ರಮಗಳನ್ನು ಕೊಡಲು ತಾನು ಬರುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿ, ಈ ಕಾರ್ಯಕ್ರಮವನ್ನು ನಾನು ಮುಂದುವರಿಸಬೇಕೆಂದು ತಾಕೀತು ಮಾಡಿದರು.

1987ರ ಭಾರತ ಜನ ವಿಜ್ಞಾನ ಜಾಥಾದ ಜಾಥಾ ಪೂರ್ವ ಕಾರ್ಯಕ್ರಮವಾಗಿ ಆರಂಭಮಾಡಿದ ಈ ಕಾರ್ಯಕ್ರಮವು ಈಗ 300ರಷ್ಟು ಪ್ರಯೋಗಗಳನ್ನು ರಾಜ್ಯಾದ್ಯಂತ ಕಂಡಿದೆ. ಇದಲ್ಲದೆ, ಮಾಡಿತೋರಿಸು ಎಂಬ ಸವಾಲು ಕೊಟ್ಟವರಿಗೆ ಸೂಕ್ತವಾದ ಉತ್ತರವನ್ನೂ ಕೊಟ್ಟಿದೆ. ಯಾಕೆಂದರೆ, ಮಾಡಿ ತೋರಿಸುವುದು ನಾನು ಮಾತ್ರವಲ್ಲ, ಹೆಚ್ಚಿನ `ಪವಾಡ’ಗಳನ್ನು ಯಾವುದೇ ತರಬೇತಿಯಿಲ್ಲದ ಜನ ಸಾಮಾನ್ಯರೂ ಮಾಡ ಬಹುದೆಂಬ ಸತ್ಯವನ್ನೂ ಮನದಟ್ಟು ಮಾಡಿದೆ.

ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಂತೆ, ಹೊಸಹೊಸ `ಪವಾಡ’ಗಳನ್ನು ಬಯಲಿಗೆಳೆದಿದ್ಧೇವೆ. ಇದೆಲ್ಲವೂ ನಮ್ಮ ವಿಚಾರವಾದಿ ಗೆಳೆಯರ ಸಹಕಾರದಿಂದ ಸಾಧ್ಯವಾಯಿತು. ಈ ಪುಸ್ತಕವನ್ನು ಪ್ರಕಟಿಸುವ ಹೊಣೆ ಹೊತ್ತ ಬಿ. ಜೆ. ವಿ. ಜೆ 92ರ ರಾಜ್ಯ ಸಂಫಟನಾ ಸಮಿತಿಗೆ ನನ್ನ ಕೃತಜ್ಞತೆಗಳು. ಕರಾವಿಪ ಈ ಪುಸ್ತಕದ ಮರುಮುದ್ರಣಗಳನ್ನು ಹೊರತರುತ್ತಿರುವುದು ಸಂತಸದ ಸಂಗತಿ.

ನರೇಂದ್ರ ನಾಯಕ್
ಮಂಗಳೂರು.