‘ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವುದು ಮನುಷ್ಯನನ್ನು ಬೆರಗುಗೊಳಿಸುವ ಕ್ರಿಯೆಗಳಲ್ಲೊಂದು. ಕೈ ಆಡಿಸಿ, ಗಾಳಿಯಿಂದ ವಿಭೂತಿ, ವಾಚು, ಉಂಗುರ, ಚೈನುಗಳನ್ನೋ, ಧೋತ್ತಕ್ಕೆ ಬೆಂಕಿ ಕೊಡು ‘ಶನಿ’ ದೇವರುಗಳು, ನಾಲಿಗೆಯಿಲ್ಲದ ಗಂಟೆಗಳಿಂದ ಸ್ವರ ಹೊರಡಿಸುವವರು ಎಲ್ಲರೂ ಉಪಯೋಗಿಸುವ ತತ್ವವೊಂದೇ ಕಣ್ಣೆಗೆ ಕಾಣದಂತೆ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದಕ್ಕೆ ವರ್ಗಾಯಿಸುವುದು !

ಶೂನ್ಯದಿಂದ ವಿಭೂತಿ ಸೃಷ್ಟಿ

ಬರಿಗೈಯನ್ನು ಕೆಳಮುಖವಾಗಿ ಹಿಡಿದುಕೊಂಡು, ಅದನ್ನು ಗಾಳಿಯಲ್ಲಾಡಿಸುತ್ತಾ ಕಡಿಮೆಯಾಗುತ್ತಿರುವ ತ್ರಿಜ್ಯದ ವೃತ್ತಗಳನ್ನು ರಚಿಸಲಾಗುವುದು. ಒಮ್ಮಿಂದೊಮ್ಮೆಲೇ ಕೈಯಲ್ಲಿ ಸುವಾಸನೆಯುಳ್ಳ ಬೂದಿಯ ರಾಶಿಯೇ ಸೃಷ್ಟಿಯಾಗುವುದು. ವೇದಿಕೆಯಲ್ಲಿ ಇಳಿದು ಬಂದು, ಇದ್ದವರೆಲ್ಲರಿಗೂ ಹಂಚಿದರೂ ಮುಗಿಯದಂತಹ ವಿಭೂತಿಯ ಪ್ರಮಾಣ! ಕೊನೆಗೆ, ಎಲ್ಲರಿಗೂ ವಿಭೂತಿ ಹಂಚಿದ ಬಳಿಕ ಮತ್ತೆ ವೇದಿಕೆಯನ್ನೇರಿ ಎರಡು ಕೈಗಳನ್ನು ಉಜ್ಜಿದಾಗ ಮತ್ತೂ ಸುರಿಯುವ ವಿಭೂತಿಯ ಮಳೆ! ಕೊನೆಗೆ ಕೈಗಳ ಕೆಳಗೆ ವಿಭೂತಿಯ ರಾಶಿಯೇ ನಿರ್ಮಿತವಾಗುವುದು!

ಶೂನ್ಯದಿಂದ ವಿಭೂತಿ ಸೃಷ್ಟಿ ಹೇಗೆ?. ಮುಖ್ಯವಾಗಿ ಈ ಪ್ರಯೋಗವು ವಸ್ತುವಿನ ಸಾಂದ್ರತೆ ಹಾಗೂ ಮನುಷ್ಯನ ತರ್ಕದ ಮೇಲೆ ಹೊಂದಿರುತ್ತದೆ. ಬೆರಳುಗಳ ಮಧ್ಯೆ ವಿಭೂತಿಯ ಚಿಕ್ಕ ಉಂಡೆಗಳನ್ನು ಹಿಡಿಯಲಾಗುತ್ತದೆ. ಗಾಳಿಯಲ್ಲಿ ಕೈಯಲ್ಲಾಡಿಸಿಕೊಂಡಿರುವಾಗ ಕಣ್ಣಿಗೆ ಕಾಣಿಸದ ಇವುಗಳನ್ನು ಪುಡಿ ಮಾಡಿದಾಗ, ಬೂದಿಯ ಕಣಗಳ ಮಧ್ಯೆ ಗಾಳಿ ಸೇರಿ, ವಸ್ತುವಿನ ಪ್ರಮಾಣವು ಹೆಚ್ಚಾದಂತೆ ತೋರುವುದು, ಪ್ರೇಕ್ಷಕರೆಲ್ಲರೂ ಕುತೂಹಲದಿಂದ ಗಾಳಿಯಲ್ಲಿ ಅಲ್ಲಾಡಿಸುತ್ತಿರುವ ಕೈಯನ್ನು ಗಮನಿಸುತ್ತಿರುವಾಗ ಜೇಬಿಗೆ ಇಳಿದ ಎಡಗೈ, ಅಲ್ಲಿಂದ ವಿಭೂತಿಯ ದೊಡ್ಡದಾದ ಉಂಡೆಯನ್ನು ತೆಗೆದಾಗ ಯಾರ ಗಮನಕ್ಕೂ ಬರುವುದಿಲ್ಲ. ಸ್ವಲ್ಪ ಸಮಯ ಎರಡೂ ಕೈಯಿಂದ ವಿಭೂತಿ ಹಂಚಿ, ಇರುವ ಉಂಡೆ ಮುಗಿದಾಗ ಮತ್ತೆ ಜೇಬಿಗೆ ಕೈ ಹಾಕಬಹುದು!

ಶೂನ್ಯದಿಂದ ವಿಭೂತಿ ಸೃಷ್ಟಿ ಮಾಡುವವರು ಇಂತಹ ಚಿಕ್ಕ ಪುಟ್ಟ ಉಂಡೆಗಳನ್ನು ಅಲ್ಲಲ್ಲಿರಿಸಿಕೊಂಡಿರುತ್ತಾರೆ. ಅವುಗಳನ್ನು ಕೈಗೆ ವರ್ಗಾಯಿಸಿಕೊಂಡು ಹಂಚುವಾಗ ಇವರ ಭಕ್ತರು ಇದನ್ನು ಪ್ರಸಾದವೆಂದು ತಿಳಿದು ಭಕ್ತಿಯಿಂದ ಸ್ವೀಕರಿಸುತ್ತಾರೆ.

ಈ ವಿಭೂತಿಯನ್ನು ಹಂಚಲು ಇನ್ನೂ ಹಲವಾರು ವಿಧಾನಗಳಿವೆ. ಕಂಕುಳಲ್ಲಿ ವಿಭೂತಿ ತುಂಬಿದ ಚೀಲವನ್ನಿರಿಸುವುದು, ವಿಭೂತಿ ತುಂಬಿದ ಪ್ಲಾಸ್ಟಿಕ್‌ನ ಬೆರಳನ್ನು ಉಪಯೋಗಿಸುವುದು, ಚೊಂಬಿನೊಳಗೆ ಒದ್ದೆಮಾಡಿ ಒಣಗಿರಿಸಿದ ಸಂಪೀಡೀತ (Compressed) ವಿಭೂತಿಯನ್ನು ಕೈಹಾಕಿ ಹೊರತೆಗೆಯುವುದು ಇತ್ಯಾದಿ.

ವಿಭೂತಿಯ ಉಂಡೆಗಳನ್ನು ತಯಾರಿಸಲು ಬೂದಿಗೆ ಗಂಜಿ ನೀರು ಬೆರೆಸಿ, ಸ್ವಲ್ಪ ಪರಿಮಳ ದ್ರವ್ಯವನ್ನು ಸೇರಿಸಿ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ವಿವಿಧ ಗಾತ್ರಗಳ ಈ ಉಂಡೆಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ವಿವಿಧ ಗಾತ್ರಗಳ ಈ ಉಂಡೆಗಳನ್ನು ಜೇಬಿನೊಳಗಿರಿಸಿಕೊಂಡಲ್ಲಿ, ಹಂಚಬೇಕಾಗಿದ್ದ ವ್ಯಕ್ತಿಗಳ ಸಂಖ್ಯೆಯನ್ನು ಆಧರಿಸಿ ಬೇಕಾದ ಗಾತ್ರವನ್ನು ತೆಗೆದು ಪುಡಿ ಮಾಡಿ ಹಂಚಬಹುದು.

ಶೂನ್ಯದಿಂದ ಪುಟ್ಟ ವಸ್ತುಗಳ ಸೃಷ್ಟಿ

ಗಾಳಿಯಲ್ಲಿ ಕೈಯಾಡಿಸುವಾಗ ಕೈಯಲ್ಲಿ ಚಿಕ್ಕ ಪುಟ್ಟ ವಸ್ತುಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಪ್ರೇಕ್ಷಕರಿಗೆ ಹಂಚುವುದು.

ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವುದು ಹೇಗೆ? ಇದನ್ನು ಮಾಡುವಾಗ ಗಮನಿಸಬೇಕಾದ ಮುಖ್ಯವಾದ ತತ್ವವೇನೆಂದರೆ ಕೈಯ ದೊಡ್ಡ ಚಲನೆ, ಬೆರಳುಗಳ ಚಿಕ್ಕ ಚಲನೆಯನ್ನು ಅಡಗಿಸುವುದು, ಕೈಚಳಕ ಇಲ್ಲವೆ ಪಾಮಿಂಗ್ (Palming) ಎಂಬುದು ಎಲ್ಲಾ ಜಾದೂಗಾರರಿಗೂ ತಿಳಿದ ತಂತ್ರ. ಇದೇ ತತ್ವದ ಉಪಯೋಗದಿಂದ ಜೇಬಿನೊಳಗೊ, ತೋಳಿನ ಒಳಗೊ ಯಾ ಗಡ್ಡದ ಹಿಂದೆ ಯಾ ಕರಡಿ ರೋಮಗಳಂತಿರುವ ಕೂದಲಿನ ಹಿಂದೆ ಅಡಗಿಸಿದ ವಾಚು, ಉಂಗುರ, ಚೈನು ಯಾ ಇಂತಹದೇ ಯಾವುದಾದರೂ ಚಿಕ್ಕ ವಸ್ತುವನ್ನು ತೆಗೆದು ಅದನ್ನು ಶೂನ್ಯದಿಂದ ಸೃಷ್ಟಿಸಿದ್ದೇವೆನ್ನುವುದೂ ಈ ‘ಪವಾಡ’ವನ್ನು ನಡೆಸಲು ಉದ್ದ ತೋಳಿನ ಅಂಗಿ ಇದ್ದರೆ ಉತ್ತಮ. ಅಂಗಿಯ ತೋಳಿನೊಳಗೆ ಕೈಗೆ ಸಿಗುವಂತಹ ಸ್ಥಳದಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಹೊಲಿದಿಡಬೇಕು. ಗಾಳಿಯಲ್ಲಿ ಕೈಯಾಡಿಸುತ್ತಾ ಇವುಗಳನ್ನು ಕೊಟ್ಟರೆ, ಶೂನ್ಯದಿಂದ ಇವುಗಳನ್ನು ಸೃಷ್ಟಿ ಮಾಡಿಸಿದ ಭ್ರಮೆಯುಂಟು ಮಾಡಬಹುದು.

ಸ್ವರ್ಗ ಲೋಕದಿಂದ ಬಂದ ವಿಶೇಷ ಗಂಟೆ

ಮದ್ರಾಸಿನ ಖ್ಯಾತ ಸ್ವಾಮಿಯೋರ್ವನ ಬಳಿ ಒಂದು ವಿಶೇಷವಾದ ಗಂಟೆ ಇತ್ತು. ಇದು ನೇರವಾಗಿ ಸ್ವರ್ಗ ಲೋಕದಿಂದಿಳಿದು ಬಂದ ವಿಶೇಷ ಗಂಟೆ. ಇದನ್ನು ಆತ ಆಡಿಸಿದಲ್ಲಿ ಮಾತ್ರ ಶಬ್ದ ಹೊರಡುತ್ತಿತ್ತು! ಭಕ್ತರು ಅಲ್ಲಾಡಿಸಿದಾಗ ಶಬ್ಧ ಬರುತ್ತಿರಲಿಲ್ಲ! ಯಾಕೆಂದರೆ, ಅದು ನಾಲಿಗೆಯಿಲ್ಲದ್ದು!

ಇದನ್ನು ನಡೆಸುವುದು ಹೇಗೆ? ಎಡಗೈ ತೋಳಿನೊಳಗೆ ಒಂದು ಚಿಕ್ಕ ಗಂಟೆಗೆ ಇಲಾಸ್ಟಿಕ್ ಕಟ್ಟಿ ತೂಗಿಸಿಡಲಾಗುತ್ತದೆ. ಇನ್ನೊಂದು ನಾಲಿಗೆಯಿಲ್ಲದ ಗಂಟೆಯನ್ನು ತೋರಿಸಲಾಗುವುದು. ಇದನ್ನು ಯಾರು ಆಡಿಸಿದರೂ ಶಬ್ಧ ಹೊರಡುವುದಿಲ್ಲ! ಆದರೆ, ಗಂಟೆ ಕಟ್ಟಿಸಿಕೊಂಡ ಕೈಯಿಂದ ಅದನ್ನು ಆಡಿಸಿದಾಗ ಶಬ್ಧ ಹೊರಡುವುದು! ನೋಡುವವರಿಗೆ ಉಂಟಾಗುವ ಭ್ರಮೆಯೇನೆಂದರೆ ಪವಾಡ ನಡೆಯುತ್ತಿದೆಯೆಂದು.

ಶನಿ ಮಹಾತ್ಮೆಯ ಪವಾಡ

ಮನೆಗೆ ಬಂದ ಸಾಧು, ಆಲೋಚನೆ ಮಾಡಿದ ಬಳಿಕ ಗೃಹಿಣಿಗೆ ತಿಳಿಸುತ್ತಾನೆ – ನಿಮ್ಮ ಮನೆಗೆ ಶನಿಕಾಟವಿದೆ. ಅದೇ ನಿಮಗೆ ಬಹಳ ತೊಂದರೆಗಳಿವೆ. ಇದನ್ನು ಪರೀಕ್ಷಿಸಲು ಬಿಳಿ ಪಂಚೆ ತರಲು ಹೇಳುತ್ತಾನೆ. ಬಿಳಿ ಪಂಚೆಯನ್ನು ಕೈಯಲ್ಲಿ ಹಿಡಿದು ಬೆಂಕಿ ಕೊಡಲಾಗುತ್ತದೆ. ಕೆಲವೇ ಸೆಕೆಂಡುಗಳ ಕಾಲ ಬೆಂಕಿ ಉರಿದ ಬಳಿಕ ಕೈ ತೆಗೆಯುತ್ತಾನೆ. ಪಂಚೆಯನ್ನು ಗಮನಿಸಿದರೆ ಯಾವುದೇ ಸುಟ್ಟ ಗುರುತಿಲ್ಲ! ಒಟ್ಟಿನಲ್ಲಿ ಮನೆಯವರಿಗೆ ಶನಿ ದೋಶವಿದೆ! ಅದೇ ಕಾರಣ ಬೆಂಕಿ ಸುಡುವುದಿಲ್ಲವೆಂಬ ವಿವರಣೆ! ಹಿಂದೆ ನಳ ಮಹಾರಾಜನಿಗೆ ಶನಿಕಾಟ ಹಿಡಿದಾಗ ಅವನಿಗೆ ಬೆಂಕಿ ತಗಲಿಲ್ಲವಂತೆ!

ಶನಿ ಕಾಟಕ್ಕೆ ಹೆದರಿದ ಮನೆಯಾಕೆಯಿಂದ ಹಣ ಕಿತ್ತು ಪೂಜೆ ಮಾಡಿದ ಬಳಿಕ ಶನಿಕಾಟದ ನಿವಾರಣೆ! ಈ ಶನಿ ಕಾಟದ ಪ್ರಯೋಗವು ಕೈ ಚಳಕದ ಮೇಲೆ ಅವಲಂಬಿತವಾಗಿದೆ. ಬೆಂಕಿ ಕೊಡುವ ಧೋತ್ರ ಯಾ ಪಂಚೆಯು ಬಿಳಿ ಬಣ್ಣದಾಗಿರುತ್ತದೆ. ಬೆಂಕಿ ಕೊಡುವಾತನು ತನ್ನ ಕೈಯಲ್ಲಿ ಚಿಕ್ಕ ಬಿಳಿ ಬಟ್ಟೆಯ ತುಂಡನ್ನು ಹಿಡಿದಿರುತ್ತಾನೆ! ಅದನ್ನು ಪಂಚೆಯ ಮೇಲಿರಿಸಿ, ಕೈಚಳಕದಿಂದ ಬೆಂಕಿ ಕೊಡುವುದು ಅದಕ್ಕೆ! ಬಳಿಕ, ಆ ತುಂಡನ್ನು ಅಡಗಿಸಿಡುತ್ತಾನೆ! ಈ ಮೂಲಕ ಮನೆಯಾಕೆಯನ್ನು ಶನಿಕಾಟದ ವಿಷಯ ನಂಬಿಸಿ, ಹಣ ಕೀಳುತ್ತಾನೆ.

ಇತರ ಕೈಚಳಕಗಳು

ಇದೇ ರೀತಿಯಲ್ಲಿ 5 ಪೈಸೆ ನಾಣ್ಯವನ್ನು 10 ಪೈಸೆ ನಾಣ್ಯವನ್ನಾಗಿ ಮಾಡುವುದು, ಚಿಕ್ಕ ಪುಟ್ಟ ವಸ್ತುಗಳನ್ನು ಮಾಯ ಮಾಡುವುದು ಇತ್ಯಾದಿ ‘ಪವಾಡ’ಗಳನ್ನು ಮಾಡಿ ತೋರಿಸಬಹುದು.

ಪಾಮಿಂಗ್ ಮಾಡುವವರನ್ನು ಗಮನಿಸಿದರೆ ಅವರು ಯಾವಾಗಲೂ ಕೈಯನ್ನು ಗಾಳಿಯಲ್ಲಿ ಅಲ್ಲಾಡಿಸಿಯೇ ವಸ್ತುಗಳನ್ನು ತೆಗೆಯುವುದು ಯಾ ಮಾಯ ಮಾಡುವುದನ್ನು ಗಮನಿಸಬಹುದು. ಇಂತಹ ವ್ಯಕ್ತಿಗಳ ಮೋಸವನ್ನು ಬಯಲಿಗೆಳೆಯುವುದು ಬಹಳ ಸುಲಭ. ಗಾಳಿಯಲ್ಲಿ ಆಡಿಸುವ ಕೈಗೆ ಒಂದು ಬಲವಾದ ಹೊಡೆತ ಕೊಟ್ಟರೆ, ಕೈಯ ಬೆರಳುಗಳ ಮಧ್ಯೆ ಇರುವ ವಸ್ತು ಕೆಳಗೆ ಬೀಳುತ್ತದೆ.

ಶೂನ್ಯದಿಂದ ವಸ್ತುಗಳನ್ನು ತೆಗೆಯುವ ಪವಾಡ ಪುರುಷರ ವೈಶಿಷ್ಟ್ಯಗಳನ್ನು ಈ ಕೆಳಗೆ ಪಟ್ಟಿಮಾಡಿದ್ದೇನೆ. ಶೂನ್ಯಕ್ಕೆ ವಸ್ತುಗಳನ್ನು ಮಾಯ ಮಾಡಿಸಿ ಬಿಡುವವರಿಗೂ ಇವೇ ತತ್ವಗಳನ್ನು ಅನ್ವಯಿಸಬಹುದು.

1. ಇವರು ಕೊಡುವ ವಸ್ತುಗಳು ಕೈ ಮುಷ್ಟಿಯೊಳಗೆ ಹಿಡಿಸುವಂತಹವು.

2. ವಸ್ತುಗಳನ್ನು ‘ಪ್ರತ್ಯಕ್ಷ’ ಮಾಡುವ ಮೊದಲು ಗಾಳಿಯಲ್ಲಿ ಕೈಯಾಡಿಸುತ್ತಿರುತ್ತಾರೆ.

3. ಕೊಡುವ ವಸ್ತುಗಳ ಮೌಲ್ಯ ಭಕ್ತರ ಆರ್ಥಿಕ ಮಟ್ಟ, ಸಾಮಾಜಿಕ ಸ್ಥಾನಮಾನಗಳನ್ನು ಹೊಂದಿರುತ್ತದೆ. ಉದಾ : ಶ್ರೀಮಂತ ಭಕ್ತವರ್ಗಕ್ಕೆ ವಾಚು, ಚೈನು, ಉಂಗುರ ಇತ್ಯಾದಿ. ಜನ ಸಾಮಾನ್ಯರಿಗೆ ಬರೇ ಬೂದಿ, ರುದ್ರಾಕ್ಷಿ ಮಣಿ ಇತ್ಯಾದಿ.

4. ಹೆಚ್ಚಿನವರು ಉದ್ದ ತೋಳಿನ ಶರ್ಟು ಯಾ ಇತರ ಮೇಲಂಗಿಯನ್ನು ಧರಿಸಿರುತ್ತಾರೆ ಯಾ ಶಾಲು ಹೊದ್ದುಕೊಂಡಿರುತ್ತಾರೆ.