ಡಾ. ಗದ್ದಗಿಮಠ ಅವರು ಪಾವಾಡ ಪುರುಷರು ಆಗಿದ್ದರು ಎಂಬುದಕ್ಕೆ ನಿದರ್ಶನವೆಂದರೆ ಆಕಾಶದಲ್ಲಿನ ನಕ್ಷತ್ರಗಳಲ್ಲಿ ಒಂದಾಗಿರುವ ‘ಮೆಲ್‌ತರಂಗ’ ನಕ್ಷತ್ರದ ಆಧಾರದಿಂದ ಅವರು ತಮ್ಮ ಸಾವಿನ ಬಗ್ಗೆ ಪತ್ನಿ ಅನಸೂಯಾದೇವಿ ಅವರಿಗೆ ಮೊದಲೆ ಹಲವು ಬಾರಿ ಹೇಳಿದ್ದರಂತೆ. ಅಲ್ಪ ವಯಸ್ಸಿನಲ್ಲಿಯೆ ಅಸಾಮಾನ್ಯ ಜೀವನ ನಡೆಸಿ ‘ಲೇಸಿನದಲ್ಲದ ಸಾವಿರ ವರುಷದ ಬದುಕಿಗಿಂತ ಲೇಸಿನ ಚಣದ ಸಾರ್ಥಕ ಬದುಕು ಬದುಕಿದ’ ಡಾ. ಗದ್ದಗಿಮಠ ಅವರ ಜೀವನ ಅಜರಾಜಮರವಾದುದು.

ಡಾ. ಗದ್ದಗಿಮಠ ಅವರದು ತೊಕಬದ್ದವ್ಯಕ್ತಿತ್ವ. ವಿನಯ ಶಾಲಿಗಳು, ಅತ್ಯಂತ ಶಿಸ್ತುಪ್ರಿಯರು. ಪಾರದರ್ಶಕದಂತಹ ಪ್ರಾಮಾಣಿಕ ಜೀವಿಗಳು, ಸರಕಾರದ ಒಂದು ಗುಂಡುಸೂಜಿಯನ್ನು ತಮಗಾಗಿ ಬಳಸಿದವರಲ್ಲ. ಉದಾರ ಹೃದಯವುಳ್ಳವರು. ದಾನ ಮಾಡುವುದರಲ್ಲಿ ಎತ್ತಿದ ಕೈ. ಯಾರಿಗೂ ತಮ್ಮಿಂದ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದರು. ಸುಳ್ಳು ಆಡಿದವರಿಗೆ ತಕ್ಷಣಃ ಶಿಕ್ಷೆ ಕೊಡುತ್ತಿದ್ದರು.

ಒಂದು ದಿನ ಮಕ್ಕಳೊಂದಿಗೆ ಗದ್ದಗಿಮಠ ಅವರು ಚೋರಿ ಚೋರಿ ಸಿನಿಮಾಕ್ಕೆ ಹೋಗಿದ್ದರು.  ಸಿನೇಮಾ ಮುಗಿದ ನಂತರ ಅದರಲ್ಲಿರುವ ನೀತಿಯನ್ನು ಮಕ್ಕಳಿಗೆ ತಿಳಿಸಿ ಹೇಳುತ್ತಾ ನಾಲ್ಕು ಜನರಲ್ಲಿ ಎದ್ದುಕಾಣುವಂತಹ ವ್ಯಕ್ತಿತ್ವ ನಿಮ್ಮದಾಗಬೇಕು ಎಂದು ಹೇಳಿ ಪ್ರಜ್ಞೆ ಮೂಡಿಸಿದರು. ಅಚ್ಚುಕಟ್ಟಾದ, ಕ್ರಮಬದ್ಧವಾದ ಜೀವನ ಡಾ. ಗದ್ದಗಿಮಠ ಅವರದಾಗಿತ್ತು. ಅವರ ಮನೆಯು ಶಾಂತಿನಿಕೇತನದಂತಿತ್ತು.