-ಮತ್ತೆ ಇದೇನು?
ಎಂದೆಂದಿಗು ನಿನಗಿದೆ ಗತಿಯೇನು?

ಶಿಲುಬೆಯ ಮೇಗಡೆ ನೇತಾಡುತ್ತಿಹೆ!
ಮುಳ್ಳಿನ ಮುಡಿಯನು ಇನ್ನೂ ಹೊತ್ತಿಹೆ!
ಕೈಕಾಲೆದೆಯಲಿ ಕಬ್ಬುನ ಕೂರ್ಮೊಳೆ!
ಹರಿಯುತ್ತಿದೆ ಕೆನ್ನೀರಿನ ಬಿಸಿಹೊಳೆ!
ನಿನಗಿನ್ನೂ ತಪ್ಪದೆ ಈ ಗೋಳು?
ನಿನಗೆಂದೆಂದೂ ಶಿಲುಬೆಯೆ ಬಾಳು?
ಓ ಕ್ರಿಸ್ತನೆ, ಕರುಣಿಸಿ ಹೇಳು!-

ನೋಡದೊ ಚಲಿಸುತ್ತಿದೆ ಕ್ರಿಸ್ತನ ಶವ!
ನುಡಿಯುತ್ತಿದೆ ಆಲಿಸು! ಶಿವಾ ಶಿವ!
ಸೂಸಿದೆ ಕನಿಕರದಲಿ ಕಣ್ಣೀರು,
ಕ್ರಿಸ್ತನು ಕ್ಷಮೆಯಾ ತವರೂರು:
“ದಿನದಿನ ದಿನವೂ ಶಿಲುಬೆಯನೇರಿ
ಕ್ಷಣಕ್ಷಣ ಕ್ಷಣವೂ ರಕ್ತವ ಸೋರಿ
ಲೋಕಕೆ ಪ್ರೇಮ ಅಹಿಂಸೆಯ ಸಾರಿ
ಮನುಜರ ಪಾಪವ ನಾ ತೊಳೆಯುತ್ತಿಹೆ;
ಸಾವಿರ ಸಲ ನಾ ಹುಟ್ಟಿಹೆ, ಸತ್ತಿಹೆ!
ದಿನವೂ ದಿನವೂ ನಿಂದಿಸಿ ನೋಯಿಸಿ
ದಿನದಿನ ದಿನವೂ ಹಂಗಿಸಿ ಸಾಯಿಸಿ
ಆರಾಧಿಸುವರು ಮೂದಲಿಸಿ!
ಅಂದು ಯಹೂದ್ಯರು ಮಾತ್ರವೆ ಅಲ್ಲ
ನನ್ನನು ಶಿಲುಬೆಗೆ ಹಾಕಿದರು;
ಇಂದು ಜಗತ್ತಿನ ಮಾನವರೆಲ್ಲ
ಈ ಗತಿಗೆನ್ನನು ನೂಕಿಹರು!
ಎಲ್ಲರ ಎದೆಯೊಳು ಶಿಲುಬೆಯ ಹೊತ್ತು,
ದಿನದಿನ ಹುಟ್ಟಿ, ದಿನದಿನ ಸತ್ತು,
ಕ್ಷಣಕ್ಷಣದಲಿ ಅವತರಿಸುವೆ ನಾನು!
ಮಿಥ್ಯಾಭೂತಕೆ ನಿತ್ಯವು ದೇವರು
ತೆತ್ತಿಹ ಸತ್ಯದ ಬಲಿ ನಾನು!

ಬಡಬಗ್ಗರ ಗುಡಿಸಲುಗಳ ಮುರಿದು
ಗುಡಿಗಳ ಕಟ್ಟುವರೆನಗಾಗಿ!
ನರಳುತ್ತಿರೆ ನಾ ನೆತ್ತರು ಹರಿದು
ಸಂಗೀತದಿ ನನ್ನನು ಕೂಗಿ
ಪ್ರಾರ್ಥನೆ ಮಾಡಿದೆವೆಂದೆನ್ನುವರು,
ರಕ್ತ ಮಾಂಸವನೆ ತಿನ್ನುವರು!
ನನ್ನ ಧರ್ಮದಾ ಹೆಸರನೆ ಹೇಳಿ
ನನ್ನನೆ ಶಿಲುಬೆಗೆ ಕುತ್ತುವರು;
ನನ್ನ ರಕ್ತದಾ ಹೊಳೆಯೊಳೆ ತೇಲಿ
ಹೊಸ ಹೊಸ ಶಿಲುಬೆಯ ಕೆತ್ತುವರು!
ಮಾನವರರಿಯರು ಕ್ಷಮಿಸೈ, ತಂದೆ:
ಅಂದೂ ಇಂದೂ ಎರಡೂ ಒಂದೇ!
ಕ್ರೈಸ್ತ ಯಹೂದ್ಯರು ಮುಸಲರು ಹಿಂದೂ
ಎಲ್ಲರು ನನ್ನವರೇ ಎದೆಂದೂ!”
ಆದರದೆಲ್ಲಿ?
ಕ್ರಿಸ್ತನ ಶಿಲುಬೆಯ ಕಣಸು ಅದೆಲ್ಲಿ?-
ಮತ್ತೆ ಇದೇನು?
ಯಾವಾಗಲು ನಿನಗಿದೆ ಗತಿಯೇನು?-

ಕಗ್ಗತ್ತಲು ಪಾತಾಳದ ಗವಿಯಲಿ,
ನಡುನಡುಗುತ್ತಿಹ ಕಿರಣಚ್ಛವಿಯಲಿ,
ಪ್ರವಹಿಪ ರಕ್ತದ ಧುನಿಯಲಿ ತೇಲಿ
ನುಗ್ಗುತ್ತಿದೆ ಅದೊ ಬೆಂಕಿಯ ದೋಣಿ!
ಅದರಲಿ ಮಾನವ ಮೂರ್ತಿಯ ಹೋಲಿ
ಕುಳಿತಿದೆ ಅದೊ ಅವತಾರಪ್ರಾಣಿ!
ಎದೆಯಲಿ ಅದೊ ಚುಚ್ಚಿದ ಬಾಣ!
ನೆತ್ತರು ಚಿಮ್ಮುತ್ತಿದೆ ಕಾಣ!
ತುಡಿಯುತ್ತಿದೆ ಪ್ರಾಣ!
ನೋವಿನ ಬೀಡು
ಮೊಗವದು, ನೋಡು!-

ಹರಿಯುತ್ತಿರೆ ಶೋಣಿತ ವೇಣಿ,
ತೇಲುತ್ತಿರೆ ಬೆಂಕಿಯ ದೋಣಿ,
ಅವತಾರವ ಎದೆಯನು ಕಣೆ ಚುಚ್ಚಿರೆ,
ರಕ್ತದ ಹೊಳೆಯೋ ಕ್ಷಣಕ್ಷಣ ಹೆಚ್ಚಿರೆ,
ಯುಗಯುಗ ಯುಗವೂ ಹಗಲೂ ಇರುಳೂ
ಬೇಯುತ್ತಿದೆ ಜಗದೀಶನ ಕರುಳು!

-ಅಯ್ಯೊ ಇದೇನು?-
ನಿನಗೆಂದೆಂದೂ ಇದೆ ಗತಿಯೇನು?-

೨೮-೬-೧೯೩೩