ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು;
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು!
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು;
ದಾಸರನು ಪೂಜಿಸಿಯೆ ದಾಸ್ಯವಾಯ್ತು!

ಗುಡಿಯೊಳಗೆ ಕಣ್‌ಮುಚ್ಚಿ ಬೆಚ್ಚಗಿರುವರನೆಲ್ಲ,
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ,
ಗಂಟೆ ಜಾಗಟೆಗಳಿಂ ಬಡಿದು, ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು!

ನಿದ್ದೆಮಾಡುತ್ತಿಹರು ಹಲವು ದೇವತೆಗಳೆಲ್ಲ;
ಬಿದ್ದವರು ಕಲ್ಲಾಗಿ ಕೆಲವರಿಹರು;
ಕ್ಲೀಬತನದಲಿ ಮರೆತು ತಮ್ಮ ಪೌರುಷವನೆಲ್ಲ
ಸತ್ತೆಹೋದಂತಿಹರು ಮತ್ತುಳಿದಮರರು.

ಅವರ ಗುಡಿ ಹಾಳಾಯ್ತು; ಅವರ ನುಡಿ ಮಡಿದುಹೋಯ್ತು;
ಅವರ ನೆಮ್ಮಿದ ನಮಗೆ ಬೀಳುಗತಿಯಾಯ್ತು!
ಮುಂದಿವಳನಾರಾಧಿಸುವ, ಶಕ್ತಿಯಾರ್ಜಿಸುವ;
ಒಂದು ಶತಮಾನವನು ಒಂದೆ ದಿನ ಜೈಸುವ!

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು!
ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು!

ಭಾರತಿಯೆ ನಮಗಿಂದು ಜೀವನದ ದೇವತೆಯು,
ವಿಶ್ವರೂಪಿಣಿಯವಳು, ವಿಶ್ವಮುಖಿಯೈ!
ನಮ್ಮೆಲ್ಲರಂಗಗಳೆ ನಮ್ಮಂಬೆಯಂಗವೈ,
ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ!

ಇಂದೊ ನಾಳೆಯೊ ದಾಸನೀಶನಾಗಲೆ ಬೇಕು,
ಎಂದಿಂದೆ ಎದ್ದೇಳಿ; ನಾಳೆಯೆನೆ ಹೋಕು!
ನಾವೆ ದೇವತೆಗಳೈ! ಭಾರತವೆ ಸ್ವರ್ಗವೈ!
ಭಾರತಾಂಬೆಯೆ ನಮಗೆ ದೇವಿಯೈ, ಜನನಿ!

೨-೭-೧೯೩೧