ನಿದ್ದೆಯ ಲೋಕದಿ ಕನಸಿನ ಬೀದಿ.
ತಿರುಗಿದೆ, ತೊಳಲಿದೆ, ತಪ್ಪಿತು ಹಾದಿ!
ಮುಂದೆ ಕಾಣಿಸಿತೊಂದು ಅರಣ್ಯ,
ಅನಂತವಾದುದು ವನ ವಿಸ್ತೀರ್ಣ.
ಹೆಮ್ಮರಗಳು ಕಿಕ್ಕಿರಿದುವು ಅಲ್ಲಿ,
ಬಿಡುವಿಲ್ಲದೆ ಹೆಣೆದಿದ್ದುವು ಬಳ್ಳಿ;
ಮುಳ್ಳಿನ ಪೊದೆಗಳು, ಗರಗಸವಳ್ಳಿ,
ಪ್ರೇತದಂತೆ ಪಾಪಾಸಿನ ಕಳ್ಳಿ!
ನುಗ್ಗಿದೆ ನಾನಾ ಹಳುವಿನಲಿ;
ಆ ಕನಸಿನ ಹೆಗ್ಗಾಡಿನಲಿ.
ಅಲ್ಲಿದ್ದುದು ಬೆಳಕೆಂಬುವುದಲ್ಲ.
ಕತ್ತಲು ಅಲ್ಲ!
ಬೆಳಕೋ ಕತ್ತಲೊ ಶಿವನೇ ಬಲ್ಲ!
ಶಿವನೇ ಬಲ್ಲ!
ಪ್ರೇತಗಳಂದದಿ ಭೀತಿಯ ಛಾಯೆ
ಸುಳಿಸುಳಿದಾಡಿತು ಅಲ್ಲಿ,
ಆ ಘೋರ ಕಾನನದಲ್ಲಿ!
ನಡೆದೇ ನಡೆದೇ ನಡೆದೂ ನಡೆದೆ,
ಸಾಹಸ ಬಿಡದೆ, ಎದೆಗೆಡದೆ.
ಸುತ್ತಲು ಮೌನ!
ಶ್ಮಶಾನ ಮೌನ!
ಕಾಡನು ದಾಟಿದೆ: ಮುಂಗಡೆ ಬೆಟ್ಟ;
ಶಿಖರವೊ ನಿಂತಿದೆ ಮುಗಿಲಿನ ಮುಟ್ಟ!
ಹತ್ತೀ ಹತ್ತೀ ಹತ್ತೀ ಹತ್ತಿ
ಕಡೆಯಲಿ ಸಿಕ್ಕಿತು ನಡುನೆತ್ತಿ!
ನೋಡಿದೆನಲ್ಲಿ
ನಡುನೆತ್ತಿಯಲಿ!-
ಯಾವುದೊ ಊರು ಆ ಊರು?
ಬರಿ ಮಾಯದ ಊರು!
ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ.
ಜ್ಯೋತಿಯ ಮಣಿದೀಪಗಳಲ್ಲಿ;
ಕತ್ತಲು, ಕಗ್ಗತ್ತಲು ಇಲ್ಲಿ!
ಹಾಡಿನ ನುಣ್ದನಿಯತ್ತ,
ಗೋಳಿನ ನೀಳ್ದನಿಯಿತ್ತ.
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ,
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!
ಆ ಕಡೆ ಉದ್ಯಾನ,
ಈ ಕಡೆ ಶ್ಮಶಾನ!
ಪೀತಾಂಬರಗಳ ಹೊದೆಯುವರಲ್ಲಿ,
ಕೌಪೀನಕೆ ಚಿಂದಿಯು ಸಿಗದಿಲ್ಲಿ!
ನೋಡುತ ನೋಡುತ ನೋಡುತ್ತಿದ್ದೆ;
ನೋಡುತ್ತಿರೆಯಿರೆ ಬೆಚ್ಚಿ ಬಿದ್ದೆ:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಿಲುಗಳಿಗೇ ಬೆಂಕಿಯು ಬಿದ್ದು
ಧಗಧಗ ಧಗಧಗ ಹೊತ್ತಿದುದು,
ಭುಗಿಭುಗಿಲೆನ್ನುತ ಮುತ್ತಿದುದು!
ಮುಗಿಲಿನ ವರೆಗೂ ಬಾನಿನ ವರೆಗೂ
ದಿಕ್ಕು ದಿಕ್ಕುಗಳ ಜುಟ್ಟಿನ ವರೆಗೂ
ಬಡವರ ಬೆಂಕಿಯು ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!
ಬಡವರ ಸಿಟ್ಟದು ಏನು ಪಿಶಾಚಿ?
ಬಡಬಾಗ್ನಿಯೆ ತಲೆತಗ್ಗಿತು ನಾಚಿ!
ಶ್ರೀಮಂತರ ಸೌಧಂಗಳ ನೆತ್ತಿ
ಸೀದುದು ಬಡಹೊಟ್ಟೆಯ ಉರಿಹೊತ್ತಿ!
ದೂರದ ಆ ಗಿರಿಶಿಖರದ ಮೇಲೆ
ನನಗೂ ತಟ್ಟಿತು ಬೆಂಕಿಯ ಜ್ವಾಲೆ!
ಕೇಳಿಸಿತೊಡನೆಯೆ ಹಾಹಾಕಾರ!
ಮಕ್ಕಳುಮರಿಗಳ ಚೀತ್ಕಾರ!
ಗರ್ಭಿಣಿ ಸ್ತ್ರೀಯರು, ಬಾಣಂತಿಯರು,
ನವ ವಧುಗಳು ಮೇಣ್ ಶ್ರೀಮಂತೆಯರು;
ಹುಡುಗರು, ಮುದುಕರು, ಕುಂಟರು, ಕಿವುಡರು:
ಬಡವರ ಗೋಳನು ಕೇಳದ ಕಿವುಡರು:
ಹೊಟ್ಟೆಯ ಪಾಡಿಗೆ ಕಾವಿಯನುಟ್ಟು
ಬಡವರ ಹಸಿವೆಗೆ ಮೌಢ್ಯವ ಕೊಟ್ಟು
ಸುಖಸಂಪತ್ತನು ಕೊಂಡವರು,
ಮೃಷ್ಟಾನ್ನವನೇ ಉಂಡವರು;
ಗುರುಗಳು ಶಿಷ್ಯರು ಮನೆಗಳು ಮಠಗಳು
ಎಲ್ಲರು ಬೆಂದರು ಬಡಬಾಗ್ನಿಯಲಿ,
ಬಡವರ ಬಗ್ಗರ ಜಠರಾಗ್ನಿಯಲಿ!
ಬಡವನ ಜಠರಾಗ್ನಿಯೆ ಬಡಬಾಗ್ನಿ!
ಬಡವನೆ ಕಲಿಯುಗದಂತ್ಯದ ಕಲ್ಕಿ!

ನೋಡುತಲಿದ್ದೆ;
ನೋಡುತಲಿದ್ದೆ!
ಕಣ್ಮರೆಯಾಯಿತು ಆ ದೃಶ್ಯ!
ಏನಿದು ಈ ದೃಶ್ಯ?
ರಕ್ತದ ಜಲಪಾತ!
ನರಮಾಂಸದ ನಾತ!
ಧುಮುಧುಮುಕುತಲಿದೆ ರಕ್ತದ ರಣಧುನಿ!
ಹೊರ ಹೊಮ್ಮುತ್ತಿದೆ ನರರಾರ್ತಧ್ವನಿ!
ಗಗನವು ರಕ್ತ! ಭೂಮಿಯು ರಕ್ತ!
ನೋಡಿದರೆತ್ತಲು ರಕ್ತ! ರಕ್ತ!
ಅಯ್ಯೋ ರಕ್ತ!
ಧುಮುಕುವ ಶೋಣಿತ ಗಿರಿಝರಿಯಲ್ಲಿ
ನರ ರುಂಡಗಳು
ನರ ಮುಂಡಗಳು
ಮುಂಗಾರ್ಗಾಲದ ಬಲ್ಸರಿಯಲ್ಲಿ
ಆಲಿಯ ಕಲ್ಲುಗಳುರುಳುರುಳ್ವಂತೆ
ಧುಮುಕುತಲಿರುವುವು! ಬಂಡೆಗಳಂತೆ
ಧುಢುಂ ಧುಡುಂ ಧುಢುಮ್ಮನೆ ಬಿದ್ದು
ಹಾರುತಲಿವೆ ಬಿಸಿನೆತ್ತರು, ಸದ್ದು!
ಸುಂದರಿಯರ ತಲೆಮಂಡೆಗಳು,
ಶ್ರೀಮಂತರ ನೆಣದುಂಡೆಗಳು,
ಪಾಪದ ದೇಹ, ಪುಣ್ಯದ ದೇಹ,
ಗುಡಿಗೋಪುರಗಳು, ಧರ್ಮದ ಗೇಹ,
ತೇಲಿ, ತೇಲಿ, ತೇಲಿ, ತೇಲಿ
ನುಗ್ಗತಲಿವೆ ಕಸಕಡ್ಡಿಯ ಹೋಲಿ!

ಯಾರವನಲ್ಲಿ? ದೂರದಲಿ,
ಧಾವಿಸಿ ಬರುವನು ಕ್ರೌರ್ಯದಲಿ!
ಅಸ್ಥಿಪಂಜರದಶ್ವವನೇರಿ,
ಬೆಳ್ಳಗೆ ಚಿಲಿಯುವ ದಾಡೆಯ ತೋರಿ,
ಅಸ್ಥಿಪಂಜರದಾಳವನು!
ಪ್ರೇತಸ್ವರೂಪಿ ಅದಾರವನು?
ಬಲಗಡೆ ಕೈಯಲಿ ಮಿಂಚಿನ ಕತ್ತಿ!
ಎಡಗಡೆ ಕೈಯಲಿ ಸಿಡಿಲಿನ ಬುತ್ತಿ!
ಎಲುಬಿನ ಕುದುರೆ! ಎಲುಬಿನ ಆಳು!
ಇವನೆಯೆ ಕಲ್ಕಿ? ಬಡವರ ಬಾಳು?
ಮೂರ್ತಿವೆತ್ತಿಹ ಬಡವರ ಗೋಳು!
ನೋಡುತಲಿದ್ದೆ,
ಕೇಳುತಲಿದ್ದೆ!
“ಹಸಿವೇ! ದಾಹಾ!” ಎನ್ನುತ ಬಂದು,
“ರಕ್ತಾ! ರಕ್ತಾ! ರಕ್ತಾ!” ಎಂದು
ನೆತ್ತರು ಹೊಳೆಯಲಿ ಧುಮುಕಿದನು,
ಕುದುರೆಯೊಡನೆ ಧುಮ್ಮಿಕ್ಕಿದನು!
ಕುಡಿದನು ರಕ್ತವ ಮೊಗೆಮೊಗೆದು,
ತಿಂದನು ತಲೆಗಳ ತೆಗೆತೆಗೆದು!
ಎಲುಬಿನ ಕುದುರೆಯು ಕೆನೆಯುತ್ತಿತ್ತು;
ನಾದವು ಬೊಮ್ಮವ ಬಿರಿವಂತಿತ್ತು!
ಎಲುಬಿನ ಮೂರ್ತಿಯು ಗಹಗಹಿಸಿತ್ತು;
ಗುಡುಗಿನ ಮಾಲೆಯೆ ಪೊರಮಡುತಿತ್ತು!
ಕುದುರೆಯು ಕುಡಿದೂ, ಆಳೂ ಕುಡಿದೂ,
ತಿಂದರು ಶವಗಳ ಲರಿಲರಿ ಕಡಿದೂ!
ಬತ್ತಿತು ರಣಧುನಿ: ಇನ್ನೂ ದಾಹ!
ಮುಗಿದುವು ಹೆಣಗಳು: ಇನ್ನೂ ಹಸಿವೆ!
ಬಡವರ ಗಂಟಲ ಬೇಗೆಯ ದಾಹ!
ಬಡವರ ಹೊಟ್ಟೆಯ ಬೆಂಕಿಯ ಹಸಿವೆ!
ತುಂಬದು ಹೊಟ್ಟೆ;
ತುಂಬದೊ ಹೊಟ್ಟೆ!….
ಕೆಟ್ಟೇ! ಕೆಟ್ಟೇ!
ಅಯ್ಯೋ ಕೆಟ್ಟೇ!
ನೋಡಿದನೆನ್ನಂ ಬೆಟ್ಟದ ಮೇಲೆ!
ಬರುತಿಹನಯ್ಯೋ! ಒಲ್ಲೇ! ಒಲ್ಲೇ!
ನೋಡುತಲಿದ್ದೆ!
ಕಂಪಿಸಿ ಬಿದ್ದೆ!
“ಕಲ್ಕೀ! ಕಲ್ಕೀ!” ಎನ್ನುತ ಚೀರಿ
ಕನಸೊಡೆದೆದ್ದೆ!
ಇನ್ನೆಲ್ಲಿಯ ನಿದ್ದೆ?

೨೬-೧೦-೧೯೩೦