ವಸಂತವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ;
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ.
ವನದೇಕಾಂತದಿ ಪೆಣ್‌ನವಿಲೆಡೆಯಲಿ
ಮಯೂರನೃತ್ತೋನ್ಮತ್ತ ವಿಲಾಸಕೆ
ರಾಜನ ಕತ್ತಿಯ ಗಣನೆಯೆ ಇಲ್ಲ;
ನಿದಾಘವ್ಯೋಮದಿ ಮೆಲ್ಲಗೆ ಮೆಲ್ಲಗೆ
ತನ್ನೊಂದಿಚ್ಛೆಗೆ ತೇಲುವ ಮೇಘದ
ಆಲಸ್ಯಕೆ ಅರಸನ ಅಳುಕಿಲ್ಲ.
ಗಾಳಿಯ ಮುತ್ತಿಗೆ ಮೈ ಜುಮ್ಮೆನ್ನಲು
ತೆರೆತೆರೆತೆರೆಯಹ ತಿಳಿಗೊಳದೆದೆಯಲಿ
ಮಿನುಮಿನು ಮಿಂಚುವ ನುಣ್‌ಬೆಳುದಿಂಗಳ
ಲೀಲೆಗೆ ದೊರೆಮೆಚ್ಚುಗೆ ಬೇಕಿಲ್ಲ;
ಸಿಡಿಲನು ಸಿಡಿಯುತೆ ಮೊಳಗುತೆ ನುಗ್ಗುವ
ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ
ಕೆಂಗಿಡಿ ಬಣ್ಣದ ಹೊಂಗೆರೆ ಮಿಂಚಿಗೆ
ಆಸ್ಥಾನದ ದಾಸ್ಯದ ಹುರುಪಿಲ್ಲ.
ಕತ್ತಲೆ ಮುತ್ತಿದ ಬಾನಲಿ ಮಿಣುಕುವ
ತಾರೆಗೆ ದೊರೆಯಾಣತಿ ತೃಣವಿಲ್ಲ.
ವಿಪ್ಲವ ಮೂರ್ತಿಯ ಸಖನಾಗಿಹನೈ:
ಕವಿಗರಸುಗಿರಸುಗಳ ಋಣವಿಲ್ಲ!
ಅವನಗ್ನಿಮುಖಿ!
ಪ್ರಲಯಶಿಖಿ!

೯-೧-೧೯೩೧