ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ,
ರಕ್ತ ರುಂಡಮಾಲಿಯು!
ಡಮ ಡಮ ಡಮ ಡೋಲು ಬಡಿ!
ಭಂ ಭಂ ಭಂ ಕಾಕು ನುಡಿ!
ಧಿಮಿ ಧಿಮಿ ಧಿಮಿ ಎಂದು ಕುಣಿ!
ಜಯ ಜಯ ಜಯ ಎಂದು ಮಣಿ!
ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ,
ರಕ್ತ ರುಂಡಮಾಲಿಯು!

ವ್ಯೋಮವೊಂದು ಕೈಯ ತಾಳ
ಭೂಮಿಯೊಂದು ಕೈಯ ತಾಳ
ಬಡಿದು ಬಡಿದು ಬರುವಳು!
ಜನನ ಒಂದು ಅಡಿಯ ಹೆಜ್ಜೆ
ಮರಣ ಒಂದು ಅಡಿಯ ಹೆಜ್ಜೆ
ಕುಣಿದು ಕುಣಿದು ಬರುವಳು!
ಮಿಂಚನೊಂದು ಕೈಲಿ ಹಿಡಿದು
ಸಿಡಿಲನೊಂದು ಕೈಲಿ ಹಿಡಿದು
ಬಾನ ಡೋಳ ಬಡಿಯುತ
ಮನವನೊಮ್ಮೆ ಮೆಟ್ಟಿ ತುಳಿದು
ಎದೆಯನೊಮ್ಮೆ ಮೆಟ್ಟಿ ನಲಿದು
ಕಿವಿದೆರೆಯನು ಒಡೆಯುತ,
ನೋಡು, ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ
ರಕ್ತ ರುಂಡಮಾಲಿಯು!

ಒಂದು ಅಡಿಯನಿಟ್ಟು ತೆಗೆಯೆ
ಶ್ಮಶಾನ ಮೆರೆವುದು!
ಮತ್ತೊಂದು ಅಡಿಯನಿಟ್ಟು ತೆಗೆಯೆ
ಉದ್ಯಾನ ನಲಿವುದು!
ದೇಶವೊಂದು ಕೈಯ ಖಡ್ಗ
ಬಡಿಬಡಿದು ಬರುವಳು;
ಕಾಲವೊಂದು ಕೈಯ ಖಡ್ಗ
ಕಡಿಕಡಿದು ಬರುವಳು!
ಹೊಳೆಹೊಳೆಯುವ ಕಣ್ಗಳಿಂದ
ಕಾರ್ಮಿಂಚ ಕಾರುತ,
ಗುಡು ಗುಡುಗುವ ಕಂಠದಿಂದ
ಕಾರ್ಮೊಳಗ ಬೀರುತ,
ಜ್ವಾಲಾಮುಖಿಯ ರುದ್ರಶಿಖಿಯ
ಕೈಲಿ ಹಿಡಿದು ಬರುವಳು;
ಹಿರಿಯ ಇರುಳ ಕರಿಯ ತಿರುಳ
ಮೈಲಿ ಮುಡಿದು ಬರುವಳು;
ಕಡಲ ವಾಣಿಯವಳ ವಾಣಿ
ಕೂಗಿ ರೇಗಿ ಬರುವಳು;
ಕೃಷ್ಣ ಮೇಘ ಸದೃಶ ವೇಣಿ
ತೂರಿ ಬೀರಿ ಬರುವಳು!
ಪ್ರಳಯದಿಂ ಸೃಷ್ಟಿಯನು
ಮೇಲೆತ್ತಿ ಬರುವಳು;
ಪ್ರಳಯದಲಿ ಸೃಷ್ಟಿಯನು
ಕೆಳಗೊತ್ತಿ ಬರುವಳು!
ಅವ್ಯಕ್ತ ಬ್ರಹ್ಮದೆದೆಯ ಮೇಲೆ
ಕುಣಿದಾಡಿ ಬರುವಳು!
ವ್ಯಕ್ತ ಬ್ರಹ್ಮವೆನ್ನ ಲೀಲೆ
ಎನುತೋಡಿ ಬರುವಳು!
ವಿಜಯ ರಣೋನ್ಮತ್ತೆಯಾಗಿ
ಬರುವಳಾದಿ ಮಾಯೆಯು;
ಮಕ್ಕಳೆದೆಯ ಅಳಲ ನೀಗಿ
ಬರುವಳದೋ ತಾಯಿಯು!

ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು;
ದೇವಿ, ಚಂಡಿ, ಚಾಮುಂಡಿ,
ರಕ್ತರುಂಡಮಾಲಿಯು.

೧೩-೧೦-೧೯೨೯