ಉರುಳುರುಳು ಹಗಲಿರುಳು
ಸುಂದರ ವಸುಂಧರಾ!
ಕಾಲ ದೇಶಗಳೆಂಬ
ಎರಡು ದಡಗಳ ತುಂಬ
ಹರಿವ ಬಾಳಿನ ಹೊಳೆಯ
ಹೊನಲಿನಲಿ ಸಿಕ್ಕಿ
ಸೆಳವಿನಲಿ ಸುಕ್ಕಿ
ಉರುಳುರುಳು ಹಗಲಿರುಳು
ಎಲೆ ಧರಣಿ ನಿಷ್ಕರುಣಿ!
ನೀನಲ್ತೆ ತರುಣಿ?

ಆಕಾಶ ಜಲಧಿಯಲಿ
ಈಜೀಜು ಬಿರುಬಿನಲಿ;
ಸೂರ್ಯದೇವನ ಸುತ್ತ
ಸಂಚರಿಸದತ್ತಿತ್ತ
ಎಳೆದ ಗೆರೆಯೊಳೆ ತಿರುಗು.
ನೀನೆಮಗೆ ತಾಯಲ್ತೆ?
ತಾಯಾದರೇನಂತೆ
ಮೇಣಾರಿಗೋ ದಾಸಿ!
ಓ ದಾಸಿ, ನರ್ತಕಿಯೆ,
ಎಲೆ ಭೂಮಿರಾಣಿ,
ನೀನಳಲ ಹೊರೆಹೊರುವ
ಬರಿ ದೊಡ್ಡ ದೋಣಿ!
ತಾಯಂತೆ? ತಾಯಂತೆ!
ಮಂಕರಾ ಭಾವುಕರು
ಕನಸುಣಿಗಳಾದವರು
ನೀನೆಮಗೆ ತಾಯೆಂದು
ಚೀರುತಿಹರಲ್ಲ!
ನೀ ದಾಸಿ ಎಂಬುದನು
ಜಡವಾದಿ ಬಲ್ಲ.
ನೀನೆ ಕೈಯೆತ್ತೆಮಗೆ
ಕೊಟ್ಟುದೇನಿಹುದು?
ನೀನೆ ಕೃಪೆಮಾಡೆಮಗೆ
ಬಿಟ್ಟುದೇನಿಹುದು?
ನಾವು ಸುಲಿದರೆ ಉಂಟು
ನಿನ್ನ ಬಸಿರಿನ ಗಂಟು.
ನಾವು ಬೇಡಿದರೆಮಗೆ
ಬರಿ ಕಲ್ಲು, ಮಣ್ಣು,
ಹೆಚ್ಚು ಎಂದರೆ ಬನವು
ಉಗುಳುವಾ ಹಣ್ಣು!

ಉರುಳುರುಳು ಹಗಲಿರುಳು
ಎಲೆ ಧರಣಿ, ನಿಷ್ಕರುಣಿ,
ತೆರೆದ ಕಣ್ಣನು ಮುಚ್ಚಿ,
ಕಿವುಡುಗಿವಿಯನು ಬಿಚ್ಚಿ,
ಎಲ್ಲರೆದೆಗಳ ಚುಚ್ಚಿ,
ಉರುಳುರುಳು ಹಗಲಿರುಳು
ಓ ದಾಸಿ! ಓ ಹುಚ್ಚಿ!
ಬರಿ ಭ್ರಾಂತಿ ಆ ಶಾಂತಿ!
ಕರ್ಣನಿಗೆ ಆ ಕುಂತಿ
ತಾಯೆಂತೊ ಅಂತೆ,
ಓ ಭೂಮಿ, ನೀನೆಮಗೆ
ತಾಯಲ್ತೆ ಅಂತೆ?
ಮನುಜರೆಂಬುವ ಕುರಿಯ
ಮಂದೆಯನು ಕಾಯುವಾ
ಓ ಕುರುಬಗಿತ್ತಿ,
ಮೌಢ್ಯಮಧ್ಯವ ನೀಡಿ
ಕುರಿಗಳೆಲ್ಲವ ಕೂಡಿ
ಕೊಬ್ಬುವಂದದಿ ಮಾಡಿ
ಕಡೆಗೆಲ್ಲಿಯೋ ನಡುವೆ
ಕುತ್ತಿಗೆಗೆ ಕತ್ತಿ!
ಹಗಲಿನಾಸರ ಕಳೆಯೆ
ಇರುಳ ತರುವೆ;
ಇರುಳಿನಾಸರ ಕಳೆಯೆ
ಹಗಲ ತರುವೆ!
ನಿನ್ನ ಮಕ್ಕಳೆ ನಿನಗೆ
ಹಾದಿಯಲಿ ಬುತ್ತಿ!
ನೀನೊ ಬರಿ ಸೆರೆಯಾಳು;
ನಾವ್ ನಿನಗೆ ಬರಿಕೂಳು!

ಉರುಳುರುಳು ಹಗಲಿರುಳು
ಸುಂದರ ವಸುಂಧರಾ!
ಬನದ ವೇಷವನುಟ್ಟು
ಬೆಟ್ಟ ಹೊಳೆಗಳ ತೊಟ್ಟು
ಹೊಟ್ಟೆಯೊಳಗಿರೆ ಗುಟ್ಟು,
ಕಿಚ್ಚೊಡಲ ಗುಟ್ಟು,
ಮೇಲೆ ನಗೆಮೊಗ ತೋರಿ
ಒಳಗಿರುವ ರೌದ್ರವನು
ಲಾಲಿತ್ಯದಲಿ ಮುಚ್ಚಿ,
ಕೋರೆದಾಡೆಯ ದನಿಯ
ಖಗಗಳೆಂಬುವ ಹೊಗಳು-
ಭಟ್ಟರಾ ಗಾನದಲಿ
ಮುಳುಗುವಂದದಿ ಮಾಡಿ,
ಉರುಳುರುಳು ಹಗಲಿರುಳು,
ಸುಂದರ ವಸುಂಧರಾ!
ಏನಾದರೇನಂತೆ?
ನಿನಗದೇನಂತೆ!
ಯಾರು ಹುಟ್ಟಿದರೇನು?
ಯಾರು ಸತ್ತರೆ ಏನು?
ನಿನ್ನ ಕಂಬಿಯ ಮೇಲೆ
ನೀನುರುಳು ದಾಸ್ಯದಲಿ;
ನಾ ಕುಳಿತುಕೊಂಡಿಲ್ಲಿ
ಕರತಾಳ ಹಾಕುವೆನು
ಬಲ್ಲ ಹಾಸ್ಯದಲಿ!
ತಿಳಿಯದಿಹ ಮಂಕರಿಹ
ಈ ವಿಶ್ವದಲ್ಲಿ,
ಬರಿಯ ಬಯಲಿಗೆ ಕೈಯ
ಮುಗಿಯುವವರಲ್ಲಿ
ನಾವಿಬ್ಬರಿಹೆವೈಸೆ
ತಿಳಿದ ಕಪಟಿಗಳು:
ಗುಟ್ಟನಡಗಿಸಿ ನಡೆವ
ನೀನೊಬ್ಬ ಕಪಟಿ;
ಗುಟ್ಟ ತಿಳಿದುಸಿಕನಿಹ
ನಾನೊಬ್ಬ ಕಪಟಿ!

ತಾಯಿ ಚೊಚ್ಚಲ ಮಗುವ
ನಲ್ಮೆಯಲಿ ಹೆತ್ತು,
ತುಂಬು ಮೊಲೆಯನು ಕೊಟ್ಟು,
ಕೆನ್ನೆಯಲಿ ಮುತ್ತಿಟ್ಟು
ನಲಿಯುವಾ ವೇಳೆಯಲಿ
ಎಲ್ಲಿಂದಲೋ ಮಿತ್ತು
ಓಡೋಡುತೈತಂದು
ಹೊತ್ತ ಶಿಶುವನು ಕಿತ್ತು
ಹಿಸಿದು ತಿಂಬುದ ಕಂಡು
ತಾಯಿ ಗೋಳಿಡಲು,
ಬೀಳುತಿರೆ ನಿನ್ನಡಿಗೆ
ಕಣ್ಣೀರ ಕಡಲು;
ನಿನ್ನ ಕಂಬಿಯ ಮೇಲೆ
ನೀನುರುಳು ಧರಣಿ:
ನಿನ್ನ ವಿಟನದೊ ಅಲ್ಲಿ
ಹೊಳೆಯುವನು ತರಣಿ!

ಬಂದು ರಾಜ್ಯವ ಗೆದ್ದು,
ಸಿರಿಯನೆಲ್ಲವ ಕದ್ದು,
ಬಲವಂತರಾದವರು
ಬಲವಿಲ್ಲದವರುಗಳ
ತುಳಿಯುತಿರಲು
ಜನರ ಮೊರೆ ಬಾನೆಡೆಗೆ
ಮುಟ್ಟುತಿರಲು,
ಉರುಳುರುಳು ಹಗಲಿರುಳು
ಎಲೆ ಧರಣಿ! ನಿಷ್ಕರುಣಿ!
ಕುರಿ ಕುರಿಯ ತಿಂದರದು
ಕುರುಬನಿಗೆ ಕೇಡಲ್ತು!
ತಿಂದ ಕುರಿ ತಿಂಬ ಕುರಿ
ಕುರುಬಗೆರಡುಣಿಸಲ್ತೆ?
ಎಲೆ ಧರಣಿ, ನಿಷ್ಕರುಣಿ,
ನೀನೆಂಥ ಮಾರಿ!
ಓ ಮಂಕು ನರಗುರಿಯೆ,
ಭೂಮಿ ಬರಿ ದೋಣಿ ಕಣೊ!
ತಾಯ ಮಡಿಲೆಂದೇಕೆ
ಬರಿದೆ ಬೆಮೆಗೊಂಡಿರುವೆ?
ಜಡವು ಜಡವನು ಹೊತ್ತು
ಜಡವು ಜಡವನು ಹೆತ್ತು
ಜಡವು ಜಡದಲಿ ಮುಳುಗಿ
ಹೋಗುವುದೆ ಮಿತ್ತು!
ಹುಸಿ ಜಡವ ನಂಬುವರೆ
ಚೇತನಂಗೆತ್ತು?
ಕಡೆಗೆ ಭೂಮಿಯೆ ನಮಗೆ
ಕಡೆಯ ಸುಡುಗಾಡು.
ತಾಯ ಮಡಿಲೇ ನಮಗೆ
ಮಸಣದಾ ಸೂಡು!
ತಿರೆಯ ಬಸಿರದು ಬರಿಯ
ಬಲ್ಮಸಣವಲ್ತೆ?
ಯುಗಯುಗಗಳಡಗಿರುವ
ಹಿರಿ ಗೋರಿಯಲ್ತೆ?
ಚಕ್ರಾಧಿಪತ್ಯಗಳು,
ಚಕ್ರವರ್ತಿಗಳು,
ನಾಗರಿಕ ದೇಶಗಳು,
ನಾಗರಿಕತೆಗಳು,
ಕ್ರಿಸ್ತ ಬುದ್ಧರು, ರಾಮ
ಕೃಷ್ಣಾವತಾರಗಳು,
ವಾಲ್ಮೀಕಿ ವ್ಯಾಸಾದಿ
ಕವಿವರರು ಯೋಗಿಗಳು,
ಚಿರಜೀವಿಗಳು ಎಂದು
ಪ್ರಖ್ಯಾತರಾಗಿರುವ
ಹನುಮ ಅಶ್ವತ್ಥಾಮ-
ಎಲ್ಲ ಮಣ್ಣಾಗಿಹರು
ಭೂಮಾತೆಯೊಡಲೊಳಿಹ
ಬಸಿರ ಮಸಣದಲಿ!

ಸವಿಗನಸುಗಳು ಸಿಡಿದು
ಹಾಳಾಗುತಿರಲಿ!
ಉರುಳುರುಳು ಹಗಲಿರುಳು
ಓ ಭೂಮಿ ರಾಕ್ಷಸಿಯೆ!
ನರರ ಗೋಳನು ಕೇಳಿ
ಮರುಗದೆಯೆ ಉರುಳು;
ನಾಗರಿಕತೆಗಳಳಿಯೆ
ಲಕ್ಷಿಸದೆ ಹೊರಳು;
ಬೇಲೂರು ಹಳೆಬೀಡು
ಹಾಳಾದರೇನಂತೆ?
ನೀನುರುಳು ಉರುಳು;
ಶ್ರೀ ಗೋಮಟೇಶ್ವರನು
ಗಾಳಿ ಮಳೆಯಲಿ ಕರಗಿ
ಹೋದರೇನುರುಳು;
ವೇದ ಸಂಸ್ಕೃತಿಯಳಿದು
ಹೋದರೇನುರುಳು;
ಭರತಖಂಡವು ಬೂದಿ
ಆದರೇನುರುಳು!

ತುಂಗೆ ಹರಿಯಲಿ, ಉರುಳು!
ಗಂಗೆ ನಿಲ್ಲಲಿ, ಉರುಳು!
ಉರುಳುರುಳು ಹಗಲಿರುಳು
ಸುಂದರ ವಸುಂಧರಾ!

೨೮-೧೧-೧೯೩೦