ಹೃದಯ ಶ್ಮಶಾನದಲಿ
ವೈರಾಗ್ಯ ರಾತ್ರಿಯಲಿ
“ಮುತ್ತು ಬೇಕೇ ಮುತ್ತು?
ಕೆಂದುಟಿಯ ಸವಿ ತುತ್ತು!”
ಎಂದು ಪ್ರೇಮದ ಪ್ರೇತ
ಚೀರುತ್ತಿತ್ತು!
ಬಂಡೆಗಳ ಬಾಯ್ದೆರೆದು,
ತರುಗರ್ಭಗಳ ಬಿರಿದು,
ಶೂನ್ಯವನೆ ಕರೆಕರೆದು,
ಎದೆಯ ಸುಡುಗಾಡಿನಲಿ
ತ್ಯಾಗದ ತಮಿಸ್ರದಲಿ
“ಮುತ್ತು ಬೇಕೇ ಮುತ್ತು?
ಕೆಂದುಟಿಯ ಸವಿ ತುತ್ತು!”
ಎಂದು ಪ್ರೇಮದ ಪ್ರೇತ
ಚೀರುತಿತ್ತು!
ದೆಸೆಯು ದನಿಯನು ಮಸೆದು
ಬೀರುತಿತ್ತು!

ಅದನು ನಡುಗಿತು ಕೇಳಿ
ಜಗವು ಕಂಪನ ತಾಳಿ,
ರೋದನದ ಹೊನಲಲ್ಲಿ
ಮುಳುಗಿ ತೇಲಿ!
ಫಲವನುಣ್ಣದ ಒಲ್ಮೆ
ಕೈಗೂಡದಿಹ ನಲ್ಮೆ
ಚೀರುತಿರೆ ಬಾಯಾರಿ
ಪ್ರೀತಿರಸವನು ಕೋರಿ,
ಜೀವನವೆ ಕಂಪಿಸಿತು
ಮರುಕ ತೋರಿ!
ವೈಕುಂಠ, ಕೈಲಾಸ,
ನರಕ, ಇಂದ್ರನಿವಾಸ
ಎಲ್ಲ ಮೊಗಬಾಡಿದುವು;
ಎಲ್ಲ ಅಲುಗಾಡಿದುವು
ಬೆಚ್ಚಿಬಿದ್ದು!
ಪ್ರೇಮ ಪ್ರೇತದ ವಾಣಿ
ಪ್ರಲಯದುಲ್ಕೆಯ ವೇಣಿ;
ಸೃಷ್ಟಿಶಕ್ತಿಯ ಎದೆಯ
ಹಿರಿಯ ಬಯಕೆ
ಸಲ್ಲದಿರೆ, ಅದು ಚಿಹ್ನೆ
ಭುವನಲಯಕೆ!

ಪ್ರೇಮ ಪ್ರೇತದ ಸೊಲ್ಲ
ಕೇಳಿ ಬೆಚ್ಚುತ ಎಲ್ಲ
ಮೂಕವಾಯ್ತು!
ಮುಂದೆ ಗತಿ ಏನೆಂದು
ಶೋಕವಾಯ್ತು!

ಮಸಣದಾ ಮೂಲೆಯಲಿ
ವೈರಾಗ್ಯನಿಧಿ ಶಿವನ
ರುದ್ರ ಮೂರ್ತಿಯ ತಪಕೆ
ಭಂಗವಾಯ್ತು!
ವೈರಾಗ್ಯದಾ ಮಂಜು
ಗಡ್ಡೆಗಟ್ಟಿದ ನಂಜು
ಕರಗಿ ಹೋಯ್ತು!-
ಮಾಂಸ ಕರಗಿದ ದೇಹ,
ಅಸ್ಥಿಗೇಹ!
ಹೊಸೆದ ಜಡೆಜಡೆ ತಲೆಯು
ಕೊಳಕು ಬಲೆಯು!
ಕಣ್ಣು ಬತ್ತಿದ ಕೆನ್ನೆ
ಬರಿಯ ಸೊನ್ನೆ!
ವೈರಾಗ್ಯಕಿದೆ ಕೀರ್ತಿ,
ಪ್ರೇತ ಮೂರ್ತಿ?-
ಇಂತು ಧ್ಯಾನದಿ ಮಗ್ನ,
ಇಂತು ಶೂನ್ಯದಿ ಲಗ್ನ
ಆ ಶ್ಮಶಾನದ ನಗ್ನ
ತಪೋಮೂರ್ತಿ!
ಪ್ರೇಮ ಪ್ರೇತದ ಸೊಲ್ಲು
ಚುಚ್ಚುತಿತ್ತು!
ತ್ಯಾಗ ಮೂರ್ತಿಯು, ಕಲ್ಲು
ಬೆಚ್ಚಿಬಿತ್ತು!
ಅಶರೀರ ಚುಂಬನವು
“ಬೇಕು ಅವಲಂಬನವು!”
ಎಂದು ಕೂಗಿರೆ ಶಿವನು
ಕಂಪಿಸಿದನು!
ಒಡನೆ ಮದನನು ಒಲವ
ಸಿಂಪಿಸಿದನು!
ಹೃದಯ ಮರುಭೂಮಿಯಲಿ,
ವೈರಾಗ್ಯ ಸ್ವಾಮಿಯಲಿ,
ಪ್ರಚ್ಛನ್ನ ಕಾಮಿಯಲಿ
ವಿಶ್ವದಾಸೆಗಳೆಲ್ಲ
ಮೂಡಿದತ್ತು!
ಪ್ರೇಮ ಪ್ರೇತದ ಮುತ್ತು
ತುಟಿಗೆ ಬಿತ್ತು!
ತ್ಯಾಗ ಪ್ರೇತದ ಮುಂದು
ಪ್ರೇಮ ಪ್ರೇತವು ನಿಂದು
ತಬ್ಬಿದತ್ತು!

ಎರಡು ಎಲುಬಿನ ಗೂಡು
ಒಂದಾದೊಡನೆ ನೋಡು:
ಹಿಂದಿನಾ ಸುಡುಗಾಡು
ಬೃಂದೆಯಾಯ್ತು!
ಮೋಹ ತ್ಯಾಗದೊಳಾಗಿ,
ನನ್ನಿ ಸೊಬಗಿನೊಳಾಗಿ
ಒಂದೆಯಾಯ್ತು!
ಆ ಇರುಳು ಹಗಲಾಯ್ತು,
ಆ ಮಸಣ ಬನವಾಯ್ತು,
ಆ ದುಃಖ ಸುಖವಾಯ್ತು;
ಮಾಘಮಾಸವು ಹೋಗಿ
ಚೈತ್ರವಾಯ್ತು!
ಕೃಷ್ಣ ರಾಧೆಯರಾಗಿ
ನೃತ್ಯವಾಯ್ತು!
ಪ್ರೇಮ ಪ್ರೇತದ ಬಯಕೆ
ಸಫಲವಾಯ್ತು;
ತ್ಯಾಗ ಭೂತದ ತಪಕೆ
ಸಿದ್ಧಿಯಾಯ್ತು!

ಪ್ರೇಮ ಪ್ರೇತದ ಮುತ್ತು
ತ್ಯಾಗದಧರಕೆ ತುತ್ತು:
ಆದೊಡನೆ ಮೂಡಿತ್ತು
ಮನ್ಮಥ ರತಿ!
ಎರಡು ಎಲುಬಿನ ಗೂಡು
ಒಂದಾದೊಡನೆ ನೋಡು:
ರೂಪರಾಶಿಯ ಬೀಡು
ಶಿವಪಾರ್ವತಿ!

೧೧-೩-೧೯೩೩