ಅಯ್ಯೊ ನಾನೆ ತಿಳಿಯದಂತೆ
ನನಗೆ ಮುಕ್ತಿ ದೊರಕಿತಂತೆ!
ಎಂಥ ಮುಕ್ತಿಯೋ?-ಅದು
ಎಂಥ ಮುಕ್ತಿಯೋ!
ಮೈಯಲುಗಿಸ ಬಾರದಂತೆ;
ಕೈಯಲುಗಿಸ ಕೂಡದಂತೆ;
ಪಕ್ಕದೊಳಿರುವಕ್ಕನೊಡನೆ
ನುಡಿಯೆ ಹಕ್ಕೆ ಇಲ್ಲವಂತೆ!
ಅಂತು ನನಗೆ ಮುಕ್ತಿಯಂತೆ!
ಎಂಥ ಮುಕ್ತಿಯೋ?-ಅದು
ಎಂಥ ಮುಕ್ತಿಯೋ!

ಸರಪಣಿಗಳು ಎಂದಿನಂತೆ
ಮೈಯ ಸುತ್ತಿವೆ!
ಕಬ್ಬಿಣವದು ಕಾಣದಂತೆ
ಹೂವು ಮುತ್ತಿವೆ!
ಹೊಟ್ಟೆ ಬರಿದು; ಹಿಟ್ಟೆಯಿಲ್ಲ.
ಮೈ ಬತ್ತಲೆ; ಬಟ್ಟೆಯಿಲ್ಲ.
ನನ್ನ ನಾನೆ ಪೊರೆಯುವಂತೆ
ನನಗೆ ಶಕ್ತಿ ದೊರಕಿತಂತೆ!
ಎಂಥ ಶಕ್ತಿಯೋ?-ಅದು
ಎಂಥ ಶಕ್ತಿಯೋ!

ಮೊಗದೊಳೆಸಕ ಮಿಂಚಲಿಲ್ಲ;
ಕಣ್ಗೆ ಹೊಳಪು ಬಾರಲಿಲ್ಲ;
ಬಾಳಿಗೋ ಬೆಳಕೆ ಇಲ್ಲ;
ಏನೆಂತೊ ಕೇಳ್ವರಿಲ್ಲ!
ನನಗೆ ಸಿರಿಯು ಬಂದಿತಂತೆ,
ನಾನೆ ಅದನು ಅರಿಯೆನಂತೆ!
ಎಂಥ ಸಿರಿಯದೋ?-ಅದು
ಎಂಥ ಸಿರಿಯದೋ!

ತಲೆಯ ಹೊರೆಯು ಇಳಿಯಲಿಲ್ಲ;
ಎದೆಯ ಬೇನೆ ಅಳಿಯಲಿಲ್ಲ;
ಅಡಿಯ ಬೇಡಿ ಒಡೆಯಲಿಲ್ಲ;
ದುಡಿವ ದಾಸ್ಯ ಬಿಡಲೆ ಇಲ್ಲ!
ನನ್ನ ಸುತ್ತಮುತ್ತ ಮುತ್ತಿ
ನಿಂತಿರುವರು ಕತ್ತಿಯೆತ್ತಿ!
ಅಂತು, ನಾನೆ ತಿಳಿಯೆನಂತೆ!
ನನಗೆ ಮುಕ್ತಿ ದೊರಕಿತಂತೆ!
ಎಂಥ ಮುಕ್ತಿಯೋ?-ಇದು
ಎಂಥ ಮುಕ್ತಿಯೋ!
ನನ್ನನಾಳ್ವನೊಡ್ಡಿದ ಬಲೆ!-ಇದು
ಬರಿ ಕುಯುಕ್ತಿಯೋ!

೭-೩-೧೯೩೧