ಕುಣಿಯುವಳಾರೀ ಭೈರವನಾರಿ
ರಣರಂಗದಲಿ ರೌದ್ರವ ತೋರಿ?

ಕಣ್ಣುಗಳಿಂದಂ ಕಿಡಿಗಳ ಕಾರಿ
ದೆಸೆದೆಸೆದೆಸೆಗೆ ಜಡೆಯನು ಬೀರಿ
ಕೆನ್ನಾಲಗೆಯಿಂ ರಕ್ತವ ಸೋರಿ
ಹುಚ್ಚಳವೋಲುನ್ಮತ್ತತೆ ಮೀರಿ!

ಕಂಠದೊಳಂಜಿಪ ನರಶಿರಮಾಲೆ!
ಕರದಲಿ ರಂಜಿಪ ರೂಕ್ಷಜ್ವಾಲೆ!
ಏನಿದು ಕಾಳಿಯ ತಾಂಡವ ಲೀಲೆ?
ತೂಗುತಲಿದೆ ವಿಶ್ವದ ಉಯ್ಯಾಲೆ!

ಭ್ರೂಭಂಗದಲಿ ಕೋಟ್ಯನುಕೋಟಿ
ರಾಕ್ಷಸವೃಂದದ ಮರಿಮುರಿದೊಟ್ಟಿ
ಶ್ಯಾಮೆಯು ನಗ್ನಭಯಂಕರಿಯಾಗಿ
ತಾಂಡವಗೈವಳು ಶಂಕರಿ ಕೂಗಿ!

ನರ್ತನದಿಂ ನವಶಕ್ತಿಯು ಹೊಮ್ಮಿ
ಸೃಷ್ಟಿ ಸ್ಥಿತಿ ಲಯ ಚಕ್ರಂ ಚಿಮ್ಮಿ
ಜಡ ಚೇತನ ರೂಪುಗಳಾಗೊಡೆದು
ತೋರ್ಪುದು ಸುಖದುಃಖಗಳನು ಹಡೆದು!

೧೫-೧೦-೧೯೨೯