ಒಳ್ಳಿತಾಗುವುದೆಲ್ಲ!
ಬೇವು ತುದಿಯಲಿ ಬೆಲ್ಲ!
ಮುಂದೆ ನಡೆ, ತೀರ್ಥವಿಹುದೆಲ್ಲ ಹಾದಿಗಳು ಕೂಡುವೆಡೆಯಲ್ಲಿ!
ಬೆಳ್ಳಗಿರೆ ಹಾಲಲ್ಲ;
ಬಲ್ಲವನೆ ತಾ ಬಲ್ಲ;
ಕೇಳಯ್ಯ ನಾನೊಬ್ಬ ಮಲ್ಲನೀ ಜೀವನದ ಗರಡಿಯಲ್ಲಿ!

ಕಾವಿಯೋ ಖಾದಿಯೋ?
ಅಂತವೋ ಆದಿಯೋ?
ಯಾವುದೋ ಹಾದಿಯೊಂದನು ಹಿಡಿದು ನಡೆಯಲಿದ್ದೆಡೆಯೆ ಸಿದ್ಧಿ!
ಎಲ್ಲ ನದಿಗಳು ತುದಿಗೆ
ಜಾರುವುವು ಜಲನಿಧಿಗೆ
ಎಂಬ ತತ್ವವ ತಿಳಿದು ಸಮತೆಯಲಿ ಸಾಗುವುದೆ ಯೋಗಬುದ್ಧಿ!

ಸೋದರನೆ ಬಿಸಿಲಿಹುದೆ?
ಹಾದಿಯಲಿ ಕೆಸರಿಹುದೆ?
ಹೊರೆ ಭಾರವಾಗಿದೆಯೆ? ನೆರೆಯ ಕರೆದವನ ಕೈಗದನು ನೀಡು.
ನಿದ್ದೆಗಳೆದಾ ವೇಳೆ
ಮತ್ತೆ ಬೆನ್ನಿನ ಮೇಲೆ
ಹೊತ್ತು ನಡೆ ಕರ್ತವ್ಯವನು; ಮರಳಿ ಬಳಲಿದರೆ ನಿದ್ದೆ ಮಾಡು!

ನೆರೆಮೀವ ಮಿತ್ರನೈ.
ಜೊತೆ ದುಡಿವ ಪುತ್ರನೈ.
ಯಜಮಾನನಿಗೆ ನೀನು ಹೊರೆಹೊರುವ ಕತ್ತೆಯೊಲು ದಾಸನಲ್ಲ!
ನಿನ್ನ ಸಾಹಸವೆಲ್ಲ
ಅವನದಲ್ಲದೆ ಇಲ್ಲ;
ಗುಡಿಯ ಕಟ್ಟುವರೂ ಕಡೆಗೆ ದೇವರಹರಿದಕೆ ಮೋಸವಿಲ್ಲ!

ನಾಕ ನರಕಗಳೆಲ್ಲ
ಪಾಪ ಪುಣ್ಯಗಳೆಲ್ಲ
ನಮ್ಮಾಶೆ ಭಯಗಳಲಿ ನಿಂತಿಹವು ತಮಗಿರದ ಕಾಲನೂರಿ!
ಒಂದು ಕಲ್ಲನು ಕಡೆದೆ;
ಏನೊ ತಪ್ಪಿದೆ; ಒಡೆದೆ!
ಬಿಸುಡದನು, ಓ ಶಿಲ್ಪಿ; ಮತ್ತೊಮ್ಮೆ ಯತ್ನಗೈ; ಅದುವೆ ದಾರಿ!

ತಪ್ಪಿದರೆ ಏನೊರ್ಮೆ?
ಅನುಭವಕೆ ಅದೆ ಪೆರ್ಮೆ!
ತಪ್ಪಿದರೆ ತಪ್ಪಿಲ್ಲ; ತಪ್ಪಿನೊಳಳುಕಿ ನಿಲ್ಲಲದುವೆ ಪಾಪ!
ಬೀಳುವುದು ಹರಿವ ಹೊಳೆ;
ಅದಕಿಹುದೆ ಕೊಳದ ಕೊಳೆ?
ನೀರು ನಿಲ್ಲದೆ ಹರಿಯೆ ನಿರ್ಮಲದ ಗಂಗೆ: ನಿಲೆ ಮಲದ ಕೂಪ!

ಕಡಲ ಕಡೆಯಲು ಬೆದರೆ
ನಿನಗೆ ಮರಣವೆ ಮದಿರೆ!
ಕಡಲ ಕಡೆ, ಸುಧೆಯ ಕುಡಿ; ಹರಿಹರರ ಮೀರಿ ಚಿರಜೀವಿಯಾಗು!
“ನಂಜುದಿಸಲೇನು ಗತಿ?”
ಅಂಜುವರೆ ಹ್ರಸ್ವಮತಿ?
ಅವನಿರುವುದದೆ ಕೆಲಸಕಾಗಿ; ನಂಜುಂಡನನು ಕರೆದು ಕೂಗು!

ಮುನ್ನೇಕೆ ಬಂದೆಯೋ?
ಇನ್ನಾವ ಮುಂದೆಯೋ?
ಆ ಮೂಲಚೂಲದಲಿ ಕಾಲಹರಣವ ಮಾಡಲಿಹುದೆ ಹೊತ್ತು?
ಯಾತ್ರೆಗೈತಂದಿರುವೆ;
ಹೊರೆ ಹೊತ್ತು ನೊಂದಿರುವೆ;
ನೋಡಿದರೆ ಹಾದಿಯನು ಗುರಿ ದೂರವೆಂಬುದೂ ನಿನಗೆ ಗೊತ್ತು.

ಇಂತಿರಲು ವಾದದಲಿ,
ತಾರ್ಕಿಕರ ಮೋದದಲಿ,
ನನ್ನಿಯನು ಮುಟ್ಟಿನೋಡದೆ ಮಾತಿನೊಳೆ ಕಟ್ಟುವವರ ಕೂಡೆ
ಹೊತ್ತು ಕಳೆಯುವುದೇಕೆ?
ಸಾಧಕನೆ, ಬಲು ಜೋಕೆ!
ಮಾಯೆಗಿಮ್ಮಡಿಮಾಯೆ ವಾದವೆಂಬುವ ಮಾಯೆ, ತಿಳಿದುನೋಡೆ!

ಬರಿಯ ನಂಬುಗೆ ಬೇಡ,
ಬರಿಯ ಸಂಶಯ ಬೇಡ,
ಹಿಂದನೂ ತೊರೆಯದೆಯೆ, ಇಂದನೂ ಮರೆಯದೆಯೆ ತೆರಳು ಮುಂದೆ.
“ಅವರಿವರ ಮತವಿರಲಿ,
ನನ್ನ ಪಥ ನನಗಿರಲಿ.”
ಎಂದದನು ಕಂಡುಕೊಳ್ವನೆ ಜಾಣನುಳಿದವರು ಕುರಿಯ ಮಂದೆ!

ಕಣ್ ಮುಚ್ಚಿ ನಡೆಯದಿರು;
ಹೃದಯವನು ಕಡಿಯದಿರು;
ಕಾಶಿಯಲಿ ನೀನರಿವೆ ಯಾತ್ರೆಯೇ ತೀರ್ಥಕಿಂ ಶ್ರೇಷ್ಠವೆಂದು.
ಯಾತ್ರೆಗಾಗಿಯೆ ಕ್ಷೇತ್ರ,
ಇದು ಸತ್ಯತಮ ಸೂತ್ರ.
ಸಾಧಕಗೆ ತಿಳಿಯುವುದು ತುದಿಯಲ್ಲಿ ಸಾಧನೆಯೆ ಸಿದ್ಧಿ ಎಂದು!

ಅದರಿಂದೆ ದಾರಿಯೆಡೆ
ಚೆಲುವಿರಲು ನೋಡಿ ನಡೆ;
ಗಾನವಿರೆ ಆಲೈಸು, ಕಲೆಯಿರಲು ಓಲೈಸು ಸಡ್ಡೆಯಿಂದೆ.
ಮೂಡೆ ನೇಸರು ನೋಡು,
ನಾಡ ಬಣ್ಣಿಸಿ ಹಾಡು,
ಹಾಡಿ ಮುದವನು ಹೀರಿ, ಜನಕೆ ಹರುಷವ ಬೀರಿ ತೇಲು ಮುಂದೆ.

ಹಾಡು ಗೆಳೆಯನೆ, ಹಾಡು.
ಹಾಡಿನಿಂದಲೆ ನಾಡು
ಕಣ್ದೆರೆದು ನೆಚ್ಚುದಿಸಿ ಕೆಚ್ಚಿನಿಂ ನಿನ್ನ ಹಿಂಬಾಲಿಪಂತೆ!
ಹಾಡೆ ಬಾಳಿಗೆ ಭಕ್ತಿ,
ಹಾಡೆ ಜೀವಕೆ ಶಕ್ತಿ;
ಹಾಡು, ಜನ್ಮದ ಭಾರವಳಿದು ಕರ್ಮದ ಹೊರೆಯು ಕರಗುವಂತೆ!

ದಾರಿಯಲಿ ಕೊಳದ ಬಳಿ
ತೆರೆಗಳಲಿ ಮಿಂದು ನಲಿ;
ತಿಳಿನೀರನೀಂಟಿ ತಂಗಾಳಿಯಲಿ ಮೈಯೊಡ್ಡಿ ಕಳೆ ದಣಿವನು.
ಹೊಂದಾವರೆಯ ಕೊಯ್ದು
ಚಂದದಿಂದಲಿ ನೆಯ್ದು
ನಿನ್ನೊಲ್ಮೆಗಣ್ಗದನು ಮುಡಿಸಿ ಮುದ್ದಿಸಿ ನಲಿಸಿ ಪಡೆ ತಣಿವನು.

ಹಾದಿಯಲಿ ಹಳ್ಳವಿದೆ,
ಮುಳ್ಳಿಡಿದ ಕೊಳ್ಳವಿದೆ,
ಎಂದಳುಕಿ ಹಿಂದೆಗೆಯದಿರು; ಮುಂದೆ ತೋರುವುದು ಹೂದೋಟವು!
ಯಾತ್ರಿಕರು ನಿನ್ನಂತೆ
ಹೋದಹರಿಹರು ಮುಂತೆ;
ಹುಡುಕವರ ಹಜ್ಜೆಯನು; ಕಾಣುವುದು ನೆಚ್ಚಿನಾ ಸವಿನೋಟವು!

ಕತ್ತಲೆಯು ಕವಿದು ಬರೆ
ಬಿತ್ತರಿಸಿ ಕಣ್ಣುತೆರೆ;
ರಂಜಿಪುದು ಮುಂದೆ ತೆರಳಿದ ಮಲ್ಲರಾಂತಿರುವ ದಿವ್ಯಜ್ಯೋತಿ!
ಮೇಣವರ ಕೂಗಿ ಕರೆ:
ಕೇಳಿಸಲು ನಿನ್ನ ಮೊರೆ
ನಿಲ್ಲುವರು; ಹಿಂದಿರುವ ಸೋದರರ ಕರೆದೊಯ್ವುದವರ ನೀತಿ!

ನೆಚ್ಚಿರಲಿ! ಕೆಚ್ಚಿರಲಿ!
ಮುಂಬರಿವ ಹುಚ್ಚಿರಲಿ!
ಮುಂದುವರಿವುದೆ ಬಾಳು; ಹಿಂದೆ ಸರಿವುದೆ ಸಾವು, ಆತ್ಮಹತ್ಯ!
ಹೋರುವುದೆ ಚೈತನ್ಯ,
ಸುಮ್ಮನಿರೆ ಜಡಶೂನ್ಯ!
ತುದಿಯ ಗುರಿ ಶಾಂತಿ ಎನೆ ಬರಿನಿದ್ದೆಯಲ್ಲವದು ಸತ್ಯ ಸತ್ಯ!

ಎದೆಯ ಕೊರೆಯುವ ಕೀಟ
ಸಂದೇಹದೊಡನಾಟ;
ಸಕ್ಕರೆಯು ಸಿಹಿಯೊ ಕಹಿಯೋ ತಿಂದು ನೋಡದೆಯೆ ತಿಳಿವುದೆಂತು?
ಹಿರಿಯರನುಭವ ಸಿಹಿಯೆ!
ನಿನಗೊಬ್ಬನಿಗೆ ಕಹಿಯೆ?
ಒಲಿಯದುಳಿವುದಕಿಂತಲೂ ಒಲಿದಳಿವುದೆ ಮೇಲಲ್ತೆ, ಜಂತೂ?

“ಮುಂದೆ ಬರಿ ಸೊನ್ನೆಯಿರೆ?”
ಮರುಳೆ, ಹಾಗೆನ್ನುವರೆ?
ಹಿಂದೆ ಬರಿಸೊನ್ನೆ, ಮುಂದೆಯು ಸೊನ್ನೆ, ನೀಂ ಮಾತ್ರ ಸೊನ್ನೆಯಲ್ಲ?
ಹೇಡಿಗಳ ವಾದವಿದು,
ಕುಮತಿಗಳ ಬೋಧವಿದು!
ಸೊನ್ನೆಯಿದ್ದರು ಇರಲಿ! ನುಗ್ಗಿ ಮುಂದಕೆ ನೋಡು! ನೀನು ಮಲ್ಲ!

“ಮುಂದೆ ತಾನಹೆ ಸೊನ್ನೆ”
ಎಂಬನಿಂದೂ ಸೊನ್ನೆ!
ಯಾವ ಸಂಖ್ಯೆಯನೇನು ಸೊನ್ನೆಯಿಂ ಗುಣಿಸಿದರೆ ಲಭ್ಯ ಸೊನ್ನೆ:
ಹಿಂದಿಲ್ಲದಾವಿಂದು?
ಇಂದಿಲ್ಲದೇಂ ಮುಂದು?
ಇಂದೆಂಬುದೆಂತಿರುವುದಿಲ್ಲವಾದರೆ ದಿಟದಿ ನಾಳೆ ನಿನ್ನೆ?

ಗುರಿಗೆಂದೆ ಮುಂಗಂಡು
ಹುಡುಗನೊದೆದಾ ಚೆಂಡು
ಹರಿದಾಡಲಾಡುಂಬೊಲದೊಳದಕೆ ಗುರಿಯಿಲ್ಲವೆಂಬೆಯೇನು?
ಇರುವಂತೆ ಬಿದಿಯ ಬಗೆ
ತಿರುತಿರುಗಿ ತಿರೆಯೊಳಗೆ
ಇಂದೊ ನಾಳೆಯೊ ಎಂದೊ ಒಂದು ದಿನ ಗುರಿಮುಟ್ಟಿ ಗೆಲುವೆ ನೀನು.

ಕರ್ಮ ನಿನ್ನನು ಕಟ್ಟಿ
ಕೆಡಹಲದನೇ ಮೆಟ್ಟಿ
ಮುಂದೆ ಮೆಟ್ಟಲನೇರು! ಮರಳಿ ಯತ್ನವ ಮಾಡು ಸತ್ತು ಹುಟ್ಟಿ!
ಹಚ್ಚು, ಬೆಂಕಿಯ ಹಚ್ಚು!
ಸುಡಲೆಲ್ಲವನು ಕಿಚ್ಚು!
ಹುಲ್ಲು ಸುಟ್ಟರೆ ಸುಡಲಿ! ಲೇಸಾಯ್ತು ಟೊಳ್ಳಳಿಯುತುಳಿಯೆ ಗಟ್ಟಿ!

ಬಾಳು ಸಂದೊಡಮೇನು?
ಸಾವು ಬಂದೊಡಮೇನು?
ಸಾವು ಬಾಳಿನ ಕುಂದನೊಂದರಿಯದಿಹ ಶಾಶ್ವತಾತ್ಮ ನೀನು!
ರವಿ ಮುಳುಗಲೇನಂತೆ?
ಇರುಳಿಳಿದರೇನಂತೆ?
ಬಂದಿರುಳಿನುದರದಲಿ ಮಲಗಿಹುದು ಮುಂದೆ ಬಹ ಹಗಲು ತಾನು!

ಹಗಲು ಹೊಣೆ ಹತ್ತಿರಕೆ;
ಹೊಣೆಯಿರುಳು ಬಿತ್ತರಕೆ;
ಹಗಲೆಮಗೆ ತೋರದಿಹ ಹಿರಿಯ ವಿಶ್ವವನಿರುಳು ತೋರುತಿಹುದು!
ಬಾಳು ಮುಚ್ಚುವ ಮಣ್ಣು;
ಸಾವು ಬಿಚ್ಚುವ ಕಣ್ಣು;
ಇಲ್ಲಿ ಕಂಡರಿಯದಿಹ ಮಹಿಮೆಯನು ನಾವಲ್ಲಿ ಕಾಣಲಹುದು!

ಸೂರ್ಯ ಚಂದ್ರರ ಗತಿಗೆ
ಕಣ್ಣಹ ಜಗನ್ಮತಿಗೆ
ನಿನ್ನ ಗತಿ, ನಿನ್ನ ಮತಿ, ನಿನ್ನ ಸಾಹಸಕೆ ಕಣ್ಣಾಗಲರಿದೇ?
ಭಯವ ಬಿಡು; ನಲವಿಂದೆ
ಹಾಡುತ್ತೆ ನಡೆ ಮುಂದೆ.
ಸಂದೆಯದ ಪುಸಿತೊಟ್ಟಿಲನು ಕಟ್ಟಿ, ಮಲಗಿ ಜೋಲದಿರು ಬರಿದೆ!

ಬೈಗುಗೆಂಪುರಿಯಲ್ಲಿ
ಸುಡಲಿ ಸಂಶಯವಲ್ಲಿ!
ಹುಣ್ಣಿಮೆಯ ರಾತ್ರಿಯಲಿ ಹೊರಗೆ ಬಾ ನೋಡು! ಸಂದೆಯದ ಮಚ್ಚು
ಎಲ್ಲಾದರಿಹುದೇನು?
ಎಳ್ಳಾದರಿಹುದೇನು?
ಜಗದ ನಗೆವೊನಲಿನಲಿ ಕೊಚ್ಚಿಹೋಗುವುದು ಸಂದೆಗದ ಹುಚ್ಚು!

ಏಳು, ಮಲ್ಲನೆ, ಏಳು!
ಮನವ ಮುದದಲಿ ತೇಲು!
ಕೋಗಿಲೆಗಳುಲಿಯುತಿವೆ ಪಲ್ಲವಿತ ಚೈತ್ರಕಾನನದಿ ಕೇಳು:
ಸಾಹಸವೆ ಸವಿ ಬಾಳು!
ಸಂದೆಹವೆ ಕಹಿ ಕೂಳು!
ನಂಬುಗೆಯ ಸುಗ್ಗಿಯನು ನೆಟ್ಟು ಸಂದೆಯದ ಮಾಗಿಯನು ಕೀಳು!

ನೋಡು ಎಂತಿದೆ ಸುಸಿಲು!
ಹಸುರ ಮೇಲೆಳಬಿಸಿಲು
ಮಲಗಿಹುದು ಲೀಲೆಯಲಿ ಮೈಮರೆತ ಮೋಹನದ ಶಿಶುವಿನಂತೆ!
ಅಲ್ಲಿ ಬನಬನದಲ್ಲಿ,
ಮಾನವರ ಮನದಲ್ಲಿ
ನೆಚ್ಚುದಿಸಿ ಚಿಮ್ಮುತಿದೆ! ಕರ್ಮಮಯ ಚೇತನಕೆ ಹೊರತು ಚಿಂತೆ!

ನಂಬು ಗುರಿಯಿಹುದೆಂದು!
ನಂಬು ಗುರುವಿಹನೆಂದು!
ನಂಬು ದಾರಿಯಲಿ ಕೃಪೆ ಕೈಹಿಡಿದು ಹಿಂದೆ ಪಾಲಿಸುವುದೆಂದು!
ಗುರುಭಕ್ತ ನಾನೆಂದು,
ಗುರುಶಕ್ತಿ ನನಗೆಂದು
ನಂಬು! ನಿನ್ನನೆ ನಂಬು! ಮಂತ್ರದೀಕ್ಷಿತಗೆ ಗುರಿತಪ್ಪದೆಂದೂ!

೨೬-೮-೧೯೩೧