ಧುಮುಕಿದೆ!-ಘನತಿಮಿರದ ಪಾತಾಳದ
ಗರ್ಭಕೆ ಧುಮುಕಿದೆ!-ಅನಂತ ಕಾಲದ
ಸುಪ್ತಿಯ ಜಠರಕೆ ಧುಮುಕಿದೆ!-ಧುಮುಕಿದೆ
ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ
ಜ್ವಾಲಾಮಯ ಲಾಂಗೂಲದ ಭರದಲಿ
ಮೃತ್ಯುಕಾತರ ವೇಗದಲಿ!
ಮಧುರ ಮೋಹನ ಮಾಯೆ ಮುಂಗಡೆ
ಮಳೆಬಿಲ್ಲಿನ ಬಣ್ಣದ ಹಾಸದಲಿ
ಕಟ್ಟಿ ಚುಂಬಿಸಿ ಸೆಳೆದಿತ್ತು!
ಮುಕ್ತಿರಾಹುವ ಛಾಯೆ ಹಿಂಗಡೆ
ಬರಸಿಡಿಲಿನ ಭೀಷಣ ರೋಷದಲಿ
ಅಟ್ಟಿ ತುಡುಕಲು ಬೆಳೆದಿತ್ತು!
ನುಗ್ಗುತಲೊದರಿದೆ “ಬೇಡ! ಒಲ್ಲೆ!
ಬಿಡುಗಡೆ ಸಾಕು! ಸೆರೆ ಹೊರೆ ಬೇಕು!
ಕೈಮುಗಿದೆನು ಬಿಡು, ಓ ಮುಕ್ತಿ!”
ಹಿಂಗಡೆ ಗದರಿತು “ಬಲ್ಲೆ! ಬಲ್ಲೇ!
ನಾ ಬಿಡೆನೆಂದೂ! ನುಂಗಲೆ ಬೇಕು!
ಯುಗ ಯುಗ ಬಿಡದೋ ಯಮಶಕ್ತಿ!”
ಹಿಂದಕೆ ತಿರುಗದೆ ನೋಡದೆ ಓಡಿದೆ;
ಧಾವಿಸುವುದನೇ ಸಾಧನೆ ಮಾಡಿದೆ.
ಮಧುರ ಮೋಹನ ಮಾಯೆ ಮುಂಗಡೆ;
ಮುಕ್ತಿರಾಹುವ ಛಾಯೆ ಹಿಂಗಡೆ;
ನಡು ನುಗ್ಗಿದೆನಾವೇಗದಲಿ,
ಮೃತ್ಯುಕಾತರ ವೇಗದಲಿ!
ಇಂತು
ಶತಶತಮಾನಗಳಿಂತು-
ಧುಮುಕಿದೆ!- ಘನತಿಮಿರದ ಪಾತಾಳದ
ಗರ್ಭಕೆ ಧುಮುಕಿದೆ!-ಅನಂತ ಕಾಲದ
ಸುಪ್ತಿಯ ಜಠರಕೆ ಧುಮುಕಿದೆ! ಧುಮುಕಿದೆ
ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ,
ಜ್ವಾಲಾಮಯ ಲಾಂಗೂಲದ ಭರದಲಿ
ಮೃತ್ಯುಕಾತರ ವೇಗದಲಿ!
ವೇಗ ವೇಗದಲಿ!

ಎನಿತು ಓಡಿದರೇನು ತಡೆವುದೆ?
ಎನಿತು ಬೇಡಿದರೇನು ಬಿಡುವುದೆ?
ಮುಕ್ತಿರಾಹುವು ನಿಷ್ಕರುಣಿ!
ಕರಾಳ ಬಲದಲಿ, ಕಠೋರ ಛಲದಲಿ,
ಕಲ್ಪಾಂತರಗಳು ಹೊರಳಿರೆ ಕೆಲದಲಿ,
ಬೆಂಬತ್ತಿತು ಅವಿರಾಮದಲಿ!
ಪ್ರಲಯದ ಕಾಮದಲಿ!
ಅಯ್ಯೋ ಎಲ್ಲಿ?
ಆಶ್ರಯವಿನ್ನೆಲ್ಲಿ?
ಅಟ್ಟಿ ಬಂದಿತು, ಬಂದಿತು ಛಾಯೆ,
ಮುಕ್ತಿರಾಹುವಿನನಂತ ಛಾಯೆ!
ತಪ್ಪಿಸಿಕೊಳ್ಳಲು ಜೀವವು ಮುದುಗಿತು-
ಕಟ್ಟಕಡೆಯಲಿ, ಕಡೆಯಲಿ ಹುದುಗಿತು-
ಜಡತೆಯ ಚಿರನಿದ್ರೆಯೊಳದ್ದಿ!
ಇಲ್ಲ!
ಇಲ್ಲಿಯು ಸುಖವಿಲ್ಲ!-
ಕ್ಷಣ ಕ್ಷಣದಲಿ ಕಣಕಣವನೆ ಹಿಡಿದು
ಕಿತ್ತೆಳೆಯಿತು ಜಡಮೃತ್ತನೆ ಕಡೆದು:
ಮುಕ್ತಿರಾಹುವು ಚೇತನಕಾಮಿ,
ಸುದೂರು ವಿಶ್ವದ ಚಿರನವಗಾಮಿ.
ಕರುಣೆಯೆ ಇಲ್ಲವೆ ರಾಹುವೆ ನಿನಗೆ?
ಎನಿತುಂಡರು ಹೊಡೆ ತುಂಬದೆ ನಿನಗೆ?
ಬಿಡು; ಬಿಡು ನನ್ನನು ನಿದ್ದೆಯ ಸುಖಕೆ;
ಸರ್ಪಚುಂಬನ ಕೊಡದಿರು ಮುಖಕೆ.-
ಮುಕ್ತಿರಾಹುಪ್ರೇಮಜ್ವಾಲೆ
ವ್ಯಷ್ಟಿಯ ಸೃಷ್ಟಿಗೆ ಬೇಳುವ ಲೀಲೆ!-
ಪೀಡಿಸೆ, ಕೋಟಲೆಗಾರದೆ ಮಣ್ಣು
ತುತ್ತತುದಿಯಲಿ ತೆರೆಯಿತು ಮಣ್ಣು
ತುತ್ತತುದಿಯಲಿ ತೆರೆಯಿತು ಕಣ್ಣು!
ಮೃಣ್ಮಯ ನಿದ್ರೆಯ ಇಂಬನು ಬಿಟ್ಟು
ಸಸ್ಯ ಸ್ವಪ್ನಕೆ ಬಾಳನು ಕೊಟ್ಟು
ಹೂವೆಲೆಗಳ ಸೌಂದರ್ಯದಲಿ
ಮೈಮರೆತೆನು ಮಾಧುರ್ಯದಲಿ;
ವಸಂತ ಋತುಗಳ ಕನಸನು ಕಂಡೆ;
ಸೂರ್ಯೋದಯಗಳ ಮಧುವನು ಉಂಡೆ;
ಮದಿಸಿದ ತುಂಬಿರು ಗಾನದಲಿ
ಕಿವಿ ತುಂಬಿತು ಸ್ವರಪಾನದಲಿ:
ದಿನ ಬೆಳಗಾದರೆ ಹಸುರಿನ ಮೇಲೆ
ಮಿಸುನಿಯ ರನ್ನದ ಹಿಮಮಣಿ ಲೀಲೆ;
ಕೊಂಬೆಯ ತೂಗುಯ್ಯಲೆಯಲಿ ಹಕ್ಕಿ
ಸುರಗಾನದ ಹೊಳೆ ಹರಿಸಿತು ಸೊಕ್ಕಿ;
ಮಲಯಾದ್ರಿಯ ಮಂದಾನಿಲ ಬಂದು
ನವೀನ ಆಶಾಪಾಶವ ತಂದು
ಬಿಗಿದನು ತನುಮನಗಳನೆಲ್ಲ!
ಆಹಾ! ಬಂಧನವದು ಬೆಲ್ಲ!-
ಹೂವಿನ ತುಟಿಯಲಿ ತುಂಬಿಯ ಕೆನ್ನೆಗೆ
ಮುತ್ತಿಡುತಿರೆ, ಚೆಲುವಿನ ಬನಕನ್ನೆಗೆ
ಬಣ್ಣ ಬಣ್ಣದ ಸಿಂಗರ ಮಾಡಿ
ಆಮೋದಿಸುತಿರೆ,-ಹಿಂದಕೆ ನೋಡಿ!-
ಅಯ್ಯೋ, ಮುಕ್ತಿಯ ರಾಹುವು ಮತ್ತೆ!
ಅಯ್ಯೋ, ಅಮೃತದ ವಿಷದಿಂ ಸತ್ತೆ!

ಓಡಲು ಎಳಸಿದೆ, ಎಳಸಿದೆ, ಎಳಸಿದೆ;
ಆಸೆಯ ಬಲದೊಳೆ ರೆಕ್ಕೆಯ ಬೆಳೆಸಿದೆ!
ವಿಹಂಗವಾಗುತೆ ಮುಂದಕೆ ಹಾರಿದೆ,
ದೇಶದೇಶಗಳ ಮೂಲೆಯ ಸೇರಿದೆ;
ಹಣ್ಣನು ತಿಂದು, ಕೊಳದಲಿ ಮಿಂದು,
ಹಾಡಿನ ಮದಿರೆಗೆ ಮನವನು ಮಾರಿದೆ,
-ಮರೆಯಾಯಿತು ಮುಕ್ತಿಯ ರಾಹು!
ಸ್ಥಾವರ ಹೋಗಿ ಜಂಗಮವಾಗಿ
ನಲಿದುಲಿದಾಡಿತು ಪ್ರಾಣದ ಭೋಗಿ.-
ಒಮ್ಮೆ ಪ್ರಭಾತದ ತರು ಶಿಖರದಲಿ
ಸ್ವರ್ಣೋಜ್ವಲ ಸೂರ್ಯನ ಶಿಶುಕರದಲಿ
ಸಂಗೀತದ ಸಾಗರದಲಿ ತೇಲಿ
ಇರಲೈತಂದುದು ಬಾಣವ ಹೋಲಿ
ಅನಿಷ್ಟ ಮುಕ್ತಿಯ ಶನಿರಾಹು:
ಮತ್ತೆ ಓಡಿದೆ! ಸಾಹಸ ಮಾಡಿದೆ!
ಆರಾರೆದೆಯನೊ ಆಶ್ರಯ ಬೇಡಿದೆ!
ನಿಂತೆಡೆಯಲ್ಲಿ ಕುಳಿತೆಡೆಯಲ್ಲಿ
ಎಲ್ಲಿಯು ಸುಖವಿಲ್ಲ;
ಎಲ್ಲಿಯು ಬಿಡಲಿಲ್ಲ.
ಕಡೆಗೆ
ಕಟ್ಟ ಕಡೆಗೆ-
ಮಾನವನೆದೆಯಲಿ ಎಚ್ಚತ್ತೆ!
ಪಾರಾದೆನು ಮತ್ತೆ!

ಮಾನವನೆದೆ!-ಹಾ! ಆ ನಾಮವೆ ಸುಧೆ!
ಇಲ್ಲಾದರು ಗೆದ್ದೆನು ಎಂದೆಳಸಿದೆ:
ಚಿಂತೆಗಳಿವೆ, ಭಾವಗಳಿವೆ, ಕಲೆಯಿದೆ;
ಪ್ರೇಮದ ಮೋಹದ ಪ್ರಣಯದ ಬಲೆಯಿದೆ.
ಮುಕ್ತಿರಾಹುವ ತೊಲಗಿಸಿಕೊಳ್ಳಲು,
ಮುಕ್ತಿ ಚಿಂತೆಯನಾಚೆಗೆ ತಳ್ಳಲು,
ಮತ ಪೂಜೆಗಳಿವೆ, ಮಂತ್ರವಿದೆ:
ಶಾಸ್ತ್ರದ ಕಪಟ ಕುತಂತ್ರವಿದೆ.
ವೇದಾಂತಗಳಿವೆ, ಭಕ್ತಿಯಿದೆ;
ವಾದಜಾಲವಿದೆ, ಯುಕ್ತಿಯಿದೆ!
ಮಾನವನೆದೆ!-ಹಾ! ಆ ನಾಮವೆ ಸುಧೆ!
ಇಲ್ಲಾದರು ಗೆದ್ದೆನು ಎಂದೆಳಸಿದೆ!
ಶಿಶು ಲೀಲೆಗೆ ಕೈಹಾಕಿದೆ ಮೊದಲು:
ಮುಗ್ಧತೆಯನು ಹೊರಸೂಸುವ ತೊದಲು,
ಮೊಲೆವಾಲನು ಕುಡಿಕುಡಿಯುವ ಹಿಗ್ಗು,
ಅಲ್ಲದ ಸಲ್ಲದ ಬಯಕೆಯ ಸಿಗ್ಗು.
ನವನವ ಪರಿಚಯಗಳ ಸಂತೋಷ,
ಹೊಸಬಾಳಿನ ಹೊಸಹೊಸ ಆವೇಶ.
ನಾನಿಂತಿರುತಿರೆ, ಬಾಲ್ಯದ ಬಾಹು
ಮೆಲ್ಲಗೆ ತಬ್ಬಿತು; ಮುಕ್ತಿಯ ರಾಹು
ಕಾಲವ ಕೆಣಕುತ ತಳ್ಳಿತು ಮುಂದೆ.
ಅರಿಯದವೊಲೆ ಬೆಂಬತ್ತಿತು ಹಿಂದೆ!-
ಅಡವಿಯ ತೊಡೆಯಲಿ, ತೃಣಶಯ್ಯೆಯಲಿ,
ಪುಷ್ಪಿತ ಲತೆಗಳ ತೂಗುಯ್ಯಲೆಯಲಿ,
ನದಿಗಿರಿನಿರ್ಝರ ಜಲಕಲತಾನದಿ,
ವಿಹಂಗ ಕೂಜನ ಮಧುಮಯಗಾನದಿ,
ಗೆಳೆಯರ ಕ್ರೀಡೆಯ ಹಾಸವಿಲಾಸದಿ
ಮನ ಮೈಮರೆತಿರೆ, ಯೌವನ ಪಾಶದಿ
ಕಟ್ಟಿತು ನನ್ನನು ಮುಕ್ತಿಯ ರಾಹು.
ಬಾಳಿನ ಬೆನ್ನೊಳೆ ಸಾವನ ಬೇಹು!-

ಎದೆಯೊಲುಮೆಯ ಚಿಲುಮೆಯ ಹೆಣ್ಣು!
ಮುಕ್ತಿಯ ಕಣ್ಣಿಗೆ ಹಿಡಿಮಣ್ಣು!
ಪ್ರೇಮದ ಮರೆಯಲಿ, ಬೇಟದ ಸೆರೆಯಲಿ,
ಸೌಂದರ್ಯದ ಹೂದೂಳಿಯ ತೆರೆಯಲಿ,
ಬಿಂಬಾಧರದಾಮೋದದ ಕರೆಯಲಿ
ಮುಕ್ತಿಯ ಕಣ್ಣಿಗೆ ಮಣ್ಣೆಸೆದೆ:
ಮಾಯೆಯ ಎದೆಗೆದೆಯನು ಮಸೆದೆ;
ಮಂಥನದೊಳೆ ಮೂಡಿತು ಕಾವು;
ಸುಟ್ಟುರಿಸಿತು ಚೆಲುವನು ಸಾವು!
ಒಡನೆಯೆ ತೋರಿತು ಮುಕ್ತಿಯ ರಾಹು,
ತಬ್ಬಿತು ವೈರಾಗ್ಯದ ಯಮಬಾಹು!
ಮುಕ್ತಿಯ ವಂಚಿಸೆ ಮುಕ್ತಿಯ ಹುಡುಕಿದೆ;
ತತ್ತ್ವ ವಿಚಾರದ ಗಲಭೆಗೆ ದುಡುಕಿದೆ;
ಜಪತಪ ಪ್ರಾರ್ಥನೆ ಧ್ಯಾನದ ತುಡುಕಿದೆ;
ಮುಕ್ತಿಯ ಹಾದಿಗೆ ಎಡರನು ಅಡಕಿದೆ!
ಅಯ್ಯೋ, ತತ್ತ್ವದ ಮೋಸವು ಕೂಡ,
ಅಯ್ಯೋ, ಧರ್ಮದ ವೇಷವು ಕೂಡ
ವಂಚಿಸಲಾರದೆ ಹೋದುವೆ ನಿನ್ನನು?
ಮುಕ್ತಿರಾಹುವೆ ಬಿಡೆಯಾ ನನ್ನನು?
ಇದೊ! ಶರಣಾದೆನು! ನಾ ಸೋತೆ!
ನುಂಗೆನ್ನನು! ತಪ್ಪಲಿ ರೋತೆ!

ನಕ್ಷತ್ರಗಳೊಡೆದುರುಳಲಿ! ವಾರಿಧಿ
ಮೇರೆಯ ತಪ್ಪಲಿ! ಆಕಾಶದ ನದಿ
ಅಪ್ಪಳಿಸಲಿ, ಭೂವಲಯವ ಕೊಚ್ಚಲಿ!
ಪ್ರಲಯಕೆ ತ್ರಿಭುವನ ಕಂಪಿಸಿ ಬೆಚ್ಚಲಿ!-
ಧುಮುಕುವೆ!-ಘನತಿಮಿರದ ಪಾತಾಳದ
ಗರ್ಭಕೆ ಧುಮುಕುವೆ! ಅನಂತ ಕಾಲದ
ಸುಪ್ತಿಯ ಜಠರಕೆ ಧುಮುಕುವೆ!-ಧುಮುಕುವೆ
ಪ್ರಜ್ವಲಿಸುವ ಮಹದುಲ್ಕೆಯ ತೆರದಲಿ,
ಜ್ವಾಲಾಮಯ ಲಾಂಗೂಲದ ಭರದಲಿ,
ಮೃತ್ಯುಕಾತರ ವೇಗದಲಿ!
ಶೂನ್ಯದ ತೃಷೆಯಾವೇಗದಲಿ!

೨೧-೧೦-೧೯೩೨