ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ,
ನೋಡು, ಹರಿದು ಬರುತಿದೆ!
ಬೇನೆವಸಿರಿನಿಂದ ಚಿಮ್ಮಿ,
ದಾಸ್ಯಶಿಲೆಯನೊಡೆದು ಹೊಮ್ಮಿ,
ಶ್ರೀಮಂತರ ಕೊಳಕ ಬಿಚ್ಚಿ,
ಹಳತನೆಲ್ಲ ಕೊಚ್ಚಿ ಕೊಚ್ಚಿ,
ನೋಡು, ನುಗ್ಗಿ ಬರುತಿದೆ!
ಮರಣದಂತೆ ಮೌನವಾಗಿ
ವಿಲಯದಂತೆ ರೌದ್ರವಾಗಿ
ಗುಡುಗನುಳಿದ ಸಿಡಿಲಿನಂತೆ
ಹೊಳೆವ ಮಿಂಚಿನುದಧಿಯಂತೆ
ಕಾಳಿ ತೆರೆದ ಜಿಹ್ವೆಯಂತೆ
ತರುಣರಕ್ತದರುಣನದಿ
ವಿಪ್ಲವದ ರಕ್ತಧುನಿ
ಬರುತಲಿದೆ! ಬರುತಲಿದೆ!
ನೋಡು! ನೋಡು! ಬರುತಿದೆ!
ತಡೆವ ಧೀರರಾರು? ಬನ್ನಿ!
ಕುಡಿವ ವೀರರಾರು? ಬನ್ನಿ!
ಬನ್ನಿ ಮುಂದಕೆ!
ಈಜಿ, ಈಜಿ ದಡವ ಸೇರಿ,
ಬಲುಮೆಯುಳ್ಳೊಡೆ;
ಬೆದರುವೊಡೆ, ಬೆಚ್ಚುವೊಡೆ,
ಮುಳುಗಿ ಸಾಯಿರಿ!
ಮುತ್ತ ಮರಗಳನೆಲ್ಲ
ಒತ್ತಿ ಮುರಿಮುರಿದು.
ಮುತ್ತ ಗುಡಿಗಳನೆಲ್ಲ
ಕಿತ್ತು ತೆಗೆದೊಗೆದು
ರುಂಡಗಳನು ಮುಂಡಗಳನು
ರಭಸದಲ್ಲಿ ತೇಲಿಸುತ್ತ,
ರಾಜ್ಯಗಳ ಗುಡಿಸುತ್ತ,
ರಾಜರನು ಬಡಿಯುತ್ತ,
ಮಕುಟಗಳನು ತುಳಿಯುತ್ತ
ಗದ್ದುಗೆಗಳನಳಿಸುತ್ತ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು, ಹರಿದು ಬರುತಿದೆ!

ಕೆಂಪುಗಗನವದರ ಬರವ,
ನೋಡು, ಅದೋ ತೋರುತಿದೆ!
ಬಿರುಸುಗಾಳಿಯದರ ಬರವ,
ಕೇಳು, ಅದೋ ಸಾರುತಿದೆ!
ಸಿಡಿವ ಮದ್ದಿನುಂಡೆಯಂತೆ,
ಹಾರಲಿಹ ಫಿರಂಗಿಯಂತೆ,
ಒಡೆಯಲಿರುವ ಬಾಂಬಿನಂತೆ,
ವಿಪ್ಲವದ ಕೇಸರಿಯು
ರಕ್ತಪಾನಕೆಳಸಿ, ಎಳಸಿ
ಹೊರಗೆ ನೆಗೆಯೆ, ನರಳಿ, ಕೆರಳಿ,
ಸಿದ್ಧವಾಗುತಿರುವುದು,
ಪ್ರಬುದ್ಧವಾಗುತಿರುವುದು!

ನೋಡದೋ! ಕಾಣೆಯಾ?
ಕಬ್ಬಿಗನ ಲೇಖನಿಯು
ಕಠಾರಿಯಾಗುತಿರುವುದು!
ಇಂಚರದ ಕೊಳಲು ಬಿರಿದು
ಕಠೋರ ಭೇರಿಯಾಗುತಿದೆ!
ಚೆಲುವೆಯರ ಮುಗುಳ್ನಗೆಯು
ಮರುಳ್ನಗೆಯದಾಗುತಿದೆ!
ದೇಶಭಕ್ತರೆದೆಗಳಿಂದ
ಸೋರ್ವ ನೆತ್ತರೆಲ್ಲ ಸೇರಿ,
ವೀರಸತಿಯರಕ್ಷಿಗಳ
ಶೋಣಿತಾಶ್ರು ನದಿಯು ಸೇರಿ,
ಕ್ರೋಧದಿಂದ, ವೇಗದಿಂದ,
ಸಿರಿಮನೆಗಳನುರುಳಿಸಿ
ಬಡಜನರನು ಕೆರಳಿಸಿ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು, ನೋಡು, ಅದೋ ನೋಡು
ಹರಿದು ಬರುತಿದೆ!

೨೩-೧೧-೧೯೨೯