[ಹುಲಿದೊವಲನುಟ್ಟು ಮುಡಿಗೆದರಿದ ಉನ್ಮಾದಮೂರ್ತಿ ಅರೆಮಬ್ಬಿನಲ್ಲಿ ಮೂಡಿ ಅಭಿನಯಿಸುತ್ತಾನೆ. ಭಾವಕ್ಕೆ ತಕ್ಕಂತೆ ಪದ ಸ್ವರ ಅಂಗವಿನ್ಯಾಸಗಳಿಂದಲೂ ಸತ್ತ್ವ ರಜಸ್ಸು ತಮಸ್ಸುಗಳನ್ನು ಸೂಚಿಸುವ ಗಾಂಭೀರ್ಯ ವೇಗ ಮಾಂದ್ಯಗಳಿಂದಲೂ ವರ್ತಿಸುತ್ತಾನೆ. ನಡುನಡುವೆ ಮಾತಿಲ್ಲದೆ ನರ್ತಿಸುತ್ತಾನೆ.]

ವಿಲಯದ ವಿಪ್ಲವ ಮೂರ್ತಿಯು ನಾನು;
ಕಾಳಿಯು ನಾನು,
ರುದ್ರನು ನಾನು,
ತಾಂಡವಗೈಯುವ ಭೈರವ ನಾನು!
ಬೊಮ್ಮವನೊಡೆಯುವ ಬರಸಿಡಿಲಾನು,
ಕರ್ಮುಗಿಲೊಗೆಯುವ ಕಾರ್ಮಿಂಚಾನು;
ಹೆಣ್ಗೊರಲಿಂಚರ ನಾನು,
ಕಣ್ಮಿಂಚಾನು!

ಮಸಣದ ಸೂಡಿನ ಬೆಂಕಿಯು ನಾನು,
ಮೃತ್ಯುವು ನಾನು,
ಮೃತ್ಯುಂಜಯ ನಾನು!
ರುದ್ರನ ತಲೆಯಲಿ ಚಂದ್ರನು ನಾನು,
ಗಂಗೆಯು ನಾನು,
ಕೇಸುರಿಗಣ್ಣಾನು!
ಸಿಡಿಲಿನ ಶಕ್ತಿಯು ನಾನು!
ಮಿಂಚಿನ ದೀಪ್ತಿಯು ನಾನು!
ಹೆಣ್ಗಳ ಮೊಗದ ಮುಗುಳ್ನಗೆ ನಾನು,
ಕೆನ್ನೆಯ ಕೆಂಪಾನು,
ಕಣ್ಗಳ ಸೊಂಪಾನು,
ಅವರಿನಿಗೊರಲಿನ ಬೀಣೆಯು ನಾನು!
ಮಸಣದ ದೆವ್ವದ ಚೀರುಲಿ ನಾನು
ಸಿಡಿಮದ್ದಿನ ಪೇರುಂಡೆಯು ನಾನು;
ಸಿಡಿವ ಫಿರಂಗಿಯು ನಾನು,
ಸಿಡಿಲಿನ ಪುಡಿ ನಾನು,
ಮಿಂಚಿನ ಕಿಡಿ ನಾನು!-

ಹಾವಿನ ಬಾಯಲಿ ವಿಷ ನಾನು!
ತಾಯಿಯರೆದೆಯಲಿ ಹಾಲಾನು!
ಕೌರವ ನಾನು,
ಕೌರವನೆದೆಯಲಿ ಕೆಚ್ಚಾನು;
ಮೇಣವನೆತ್ತಿದ ಬಲ್ಗದೆ ನಾನು!……..
ರಾವಣ ನಾನು,
ರಾವಣನೊಲ್ಮೆಯ ಕಿಚ್ಚಾನು,
ಮೇಣವನುರದಲಿ ಶಕ್ತಿಯು ನಾನು!
ಉನ್ಮತ್ತನು ನಾನು,
ಸ್ಥಿರಚಿತ್ತನು ನಾನು!
ಬೆಂಗದಿರನ ಬಿಸಿ ನಾನು,
ತಣ್ಗದಿರನ ತಂಪಾನು!


ಈಶ್ವರ ಶಿರದಲಿ ಸೃಷ್ಟಿಯ ಕೆರಳಿಪ
ರಾಮರಸಾಯನ ನಾನು!
ಹುಡುಗಿಯರೆದೆಯಲಿ ತುಂಬಿ ತುಳುಕುತಿಹ
ಬೇಟದ ಕಿಚ್ಚಾನು!
ನಲ್ಮೆಯ ಹುಚ್ಚಾನು!
ಬನಗಿಳಿ ನಾನು,
ಕೋಗಿಲೆ ನಾನು,
ಬಣ್ಣದ ಮಳೆಬಿಲ್ಲಾನು,
ಚೆಲುವೆಯರುಡೆಗಳ ಚೆಲುವಂಚಾನು!……..
ಕೋವಿಯು ನಾನು,
ಸಿಡಿಗುಂಡಾನು,
ವೀರನ ಖಡ್ಗವು ನಾನು,
ಹರಿಯುವ ರಕ್ತದ ವಾಹಿನಿ ನಾನು!
ಲೋಹಿತ ವಿಪ್ಲವದುರಿ ನಾನು!
ಅವ್ಯಕ್ತ ಬ್ರಹ್ಮವು ನಾನು;
ವ್ಯಕ್ತ ಬ್ರಹ್ಮವು ನಾನು,
ಮಾಯೆಯು ನಾನು,
ಮಾಯಾತೀತನು ನಾನು,
ಕಾಲವು ನಾನು,
ದೇಶವು ನಾನು,
ನಿರ್ಗುಣಿ ನಾನು,
ಸೃಷ್ಟಿಸ್ಥಿತಿಲಯವೆಲ್ಲವು ನಾನು!….
ಪರಶಿವ ನಾನು,
ಶ್ರೀಹರಿ ನಾನು,
ಹ ಹ್ಹ ಹ್ಹ ಹ್ಹ
ಅನ್ನವು ನಾನು;
ನೀರೂ ನಾನು;
ಹುಚ್ಚಾನು!


ಅಂಬರ ಚುಂಬಿತ ಶುಭ್ರ ಹಿಮಾವೃತ
ದಿವ್ಯ ಹಿಮಾಲಯ ನಾನು!
ಮಿಂಚಿನ ಕಡಲನು ಕಡೆಯಲು ಮೂಡಿದ
ಸಿಡಿಲನ ಸಿಂಹವು ನಾನು!
ಕನ್ನಡ ನಾನು,
ಸಾಗರ ನಾನು,
ಕುಲ ಪರ್ವತ ನಾನು,
ಶ್ರೀ ಕೃಷ್ಣನ ಚಕ್ರವು ನಾನು!……..
ನಿದ್ದೆಯು ನಾನು;
ಹುಚ್ಚಿನ ಮುದ್ದೆಯು ನಾನು!
ಪಾಪವು ನಾನು,
ನರಕವು ನಾನು,
ವೈಕುಂಠವು ನಾನು,
ಸ್ವರ್ಗವು ನಾನು!
ತಾಂಡವಗೈಯುವ ಭೈರವ ನಾನು,
ಕಾಳಿಯು ನಾನು,
ರುದ್ರನು ನಾನು,
ವಿಲಯದ ವಿಪ್ಲವ ಮೂರ್ತಿಯು ನಾನು!

೧೦-೨-೧೯೩೦