ಶ್ರಾವಣ ಸಂಧ್ಯಾಸಮಯ ಸಮೀರನು
ಅಮಂದಗಮನದಿ ಬರುತಿಹನು,
ಸುಯ್ಯನೆ ಬೀಸಿ ಬರುತಿಹನು!
ಪಡುಗಡಲಿನ ಪೆರ್ದೆರೆಗಳ ಗುಡಿಯಲಿ
ತುಂತುರುವನಿಗಳ ಕೂಡಾಡಿ,
ಬೆಳ್ನೊರೆಯುರುಳಿಯ ಚೆಲ್ಲಾಡಿ,
ಜಲನಿಧಿ ಘೋಷದಿ ಬರುತಿಹನು,
ಕಡಲಿನ ವಾರ್ತೆಯ ತರುತಿಹನು!
ಶ್ಯಾಮಲಪಲ್ಲವ ಸುಮ ಸಂಪೂಜಿತ
ಭೀಮನಿಬಿಡತರುರಾಜಿ ವಿರಾಜಿತ
ಮಲಯ ಸಹ್ಯವನ ಪರ್ವತ ಶಿಖರದಿ
ಯಾತ್ರೆಗೈದು ಪಾವನನಾಗಿ
ಪುಣ್ಯಪವನನು ಬರುತಿಹನು
ಧಾವಿಸಿ ಬರುತಿಹನು!

ಸುನೀಲ ಶ್ಯಾಮಲ ಜಲಧರ ಪಙ್ತೆಯ
ತೇಲಿಸಿ ಶ್ರಾವಣ ವ್ಯೋಮದಲಿ,
ತಂಪನು ಸೂಸುತ, ತಣ್ಣನೆ ಬೀಸುತ,
ಸೋನೆಯ ಚಿಮುಕಿಸಿ ಭೂಮಿಯಲಿ,
ಮಂಗಳ ಪವನನು ಬರುತಿಹನು,
ಬೀಸಿ ಬರುತಿಹನು!
ಹಸುರನೋಕರಿಪ ಜೋಳದ ಹೊಲದಲಿ
ತೊಳಲಿ ಚಿಮ್ಮಿ ಸರಸವನೆಸಗಿ,
ಸಾಲುಮರಗಳಿಂದುಣ್ಮಿಯೇರುತಿಹ
ಪಿಕರುತಿಗಂದಣವನು ಎಸಗಿ,
ಕೂದಲ ಕೆದರಿಹ ಈಚಲು ಮರಗಳ
ಮಿದುಳಿನಲಿ ಸುರಾಕ್ರೀಡೆಯನಾಡಿ,
ಅರಳಿ ಮರಗಳಲಿ, ಬಿದಿರು ಮೆಳೆಗಳಲಿ
ಮರ್ಮರ ಸಿಮಿಸಿಮಿ ಸದ್ದನು ಮಾಡಿ,
ಅಧ್ರುವವನು ತೂರಿ,
ಧ್ರುವದೆದೆಯನು ತೋರಿ
ನೂತನ ಚೇತನ ದಾಯಕನು,
ಶ್ರಾವಣ ತೋಯದ ನಾಯಕನು,
ಪುಣ್ಯ ಸಮೀರನು ಬರುತಿಹನು,
ಬೀಸಿ ಬರುತಿಹನು!

ಆಗಾಮಿಕ ಶ್ಯಾಮಲ ಆನಂದವ
ಭೂದೇವಿಯ ಅಂತಃಕರಣದಲಿ
ದೀಪನಗೈದೈತರುತಿಹನು,
ಸಮೀರ ಬರುತಿಹನು!

ಉತ್ಸಾಹದಿ ಅನುರಾಗದಿ ವೇಗದಿ
ಮುದಿಗನಸುಗಳನು ತೂರುತ್ತ,
ಹೊಸಗನಸನು ಮೊಳೆದೋರುತ್ತ,
ಪಾವನ ಪವನನು ಬರುತಿಹನು,
ಜೀವವ ತರುತಿಹನು!

ಅಸ್ತಾಚಲ ಶೃಂಗಸ್ಥ ದಿನೇಶನ
ತಪ್ತ ಸುವರ್ಣ ಜ್ಯೋತಿಯ ಹೊದೆದಿಹ
ನೀರಾಕರದಲಿ ವೀಚಿಯ ವಿರಚಿಸಿ,
ಹರ ಹರ ಹರ ಹರ ನಿನದವ ನಿರ್ಮಿಸಿ
ಶ್ರಾವಣ ಸಂಧ್ಯಾಸಮಯ ಸಮೀರನು
ಅಮಂದಗಮನದಿ ಬರುತಿಹನು,
ಸುಯ್ಯನೆ ಬೀಸಿ ಬರುತಿಹನು!

ಶ್ರಾವಣ ಸಂಧ್ಯಾಸಮಯ ಸಮೀರ,
ಸ್ವಾಗತ ನಿನಗೆ, ಪಯೋಧಿಯ ವೀರ!
ಸ್ವಾತಂತ್ರ್ಯದ ರುಚಿಯರಿತಿಹ ಧೀರ,
ಸ್ವಾತಂತ್ರ್ಯದ ಸಂದೇಶವ ತಾರ!
ಮುಕ್ತಸಮೀರ, ಬಾರಾ! ಬಾರಾ!
ಸತ್ಯಾಗ್ರಹವನು ನೀನೂ ಸೇರಾ!
ಸೆರೆಮನೆಗಾದರು ಬಲ್ಲವರೆಲ್ಲ,
ಸೇನೆಯ ನಡೆಸಲು ಬಲ್ಲಿದವರಿಲ್ಲ,
ದಳಪತಿಯಾಗೈ ನೀನೆಮಗೆಲ್ಲ;
ಬಾರ, ಸಮೀರ, ಮುಕ್ತಿಯ ಮಲ್ಲ!
ಹನುಮನ ಹೆತ್ತವ ನೀನಲ್ತೆ?
ಭೀಮನ ಹಡೆದವ ನೀನಲ್ತೆ?
ಕಡಲೊಡಲಿನ ಬಡಬಾಗ್ನಿಯ ರೌದ್ರವ
ನಮ್ಮೊಡಲಲಿ ಕೆರಳಿಸಿ ಬಾರ!
ಸುಳಿಗಾಳಿಗೆ ಭೋರ್ಗರೆವ ಸಮುದ್ರವ
ನಮ್ಮೆದೆಗಳಲುರುಳಿಸಿ ಬಾರ!
ಮುಂಗಾರ್ಮೊಳಗನು ಗುಡುಗನು ಮಿಂಚನು
ನಮ್ಮೆದೆಗೂಡುತ ನೀ ಬಾರ!
ವಿಪ್ಲವ ಮೂರ್ತಿಯ ಕಳ್ಳೊಳಸಂಚನು
ತುತ್ತುರಿಯೂದುತ ನೀ ಬಾರ!
ಶ್ರಾವಣ ಸಂಧ್ಯಾಸಮಯ ಸಮೀರ!
ಸ್ವಾಗತ, ಬಾರ, ಧೀರರ ಧೀರ!

೨೮-೭-೧೯೩೦