ಸ್ವಾತಂತ್ರ್ಯ ಸಂಗ್ರಾಮದಲಿ ತನ್ನ ಜೀವವನು
ಲೆಕ್ಕಿಸದೆ ಹೋರುವನು ವೀರ ಸತ್ಯಾಗ್ರಹಿ;
ನೊಂದರೂ ಬೆಂದರೂ ಸತ್ಯವನು ಕೈಬಿಡದೆ
ಜವನ ದಾಡೆಯ ನುಗ್ಗುವವನು ಸತ್ಯಾಗ್ರಹಿ!
ಆತ್ಮಶಕ್ತಿಯ ಬಲದಿ ಮಿಂಚುಗಳ ಸಂತೈಸಿ
ಸಿಡಿಲುಗಳ ಬೋಳೈಸುವವನು ಸತ್ಯಾಗ್ರಹಿ;
ಹೊಡೆಯದೆಯೆ ತಡೆಯುವನು ವೀರ ಸತ್ಯಾಗ್ರಹಿ!
ಗೆಲ್ಲದೆಯೆ ಗೆಲ್ಲುವನು ವೀರ ಸತ್ಯಾಗ್ರಹಿ!
ಸಿಡಿಗುಂಡಿನೆದುರಿನಲಿ, ಕೂರಸಿಗಳೆದುರಿನಲಿ,
ಕಬ್ಬಿಣದ ಸಂಕೋಲೆಗಳ ಕರಿಯ ತೆಕ್ಕೆಯಲಿ,
ಜೈಲಿನಲಿ, ಅಧಿಕಾರಿಗಳ ಕ್ರೂರ ದರ್ಪದಲಿ,
ಹರಿವೆದೆಯ ನೆತ್ತರಿನ ಹೊಳೆಯಲ್ಲಿ, ಮುಂದಿಟ್ಟ
ಹಜ್ಜೆ ಹಿಂದೆಗೆಯದಳಿವವನು ಸತ್ಯಾಗ್ರಹಿ!
ದೇಶಮಾತೆಯ ಸುಖಕೆ ತನ್ನ ಸುಖವನು ಬೇಳ್ವ,
ದೇಶದ ಬದುಕಿಗಾಗಿ ತನ್ನ ಬದುಕನು ಸೀಳ್ವ,
ಹಿಂಸೆಯನಹಿಂಸೆಯಿಂ ಹಿಂಸಿಸದೆ ಕೊಲ್ವ,
ಸಮರ ಲೋಲನೆ ನಮ್ಮ ವೀರ ಸತ್ಯಾಗ್ರಹಿ!
ಪ್ರೇಮಾಗ್ನಿಯಿಂ ದ್ವೇಷದಗ್ನಿಯನು ಸುಟ್ಟು,
ದೇಹಶಕ್ತಿಯನಾತ್ಮಶಕ್ತಿಯಿಂ ಗೆದ್ದು,
ಬಗೆಯಲ್ಲಿ, ಬಾಯಲ್ಲಿ, ಕೈಯಲ್ಲಿ ಹಿಂಸೆಯನು
ಬಿಟ್ಟು ಹೋರುವ ಭಟನು ವೀರ ಸತ್ಯಾಗ್ರಹಿ!
ಹೇಳದೆಯೆ ಕೇಳದೆಯೆ ದಳಪತಿಯು ನುಡಿದಂತೆ
ಮಾಡುವವನಾವನೋ ಅವನೆ ಸತ್ಯಾಗ್ರಹಿ;
ಕೋಪಿಸದೆ ಶತ್ರುವಿನ ರಭಸವಹ ಕೋಪವನು
ಸಹನೆಯಿಂ ಗೆಲ್ಲುವ ಪರಾಕ್ರಮಿಯು; ಬಲವಿರಲು
ಬಲುಮೆಯನು ತೋರದನು ದಿವ್ಯ ಸತ್ಯಾಗ್ರಹಿ!
ತನ್ನ ತಾಯಿಯ ಉಪ್ಪು ತನ್ನ ವಶದಲ್ಲಿರಲು
ಇತರರನು ನೋಯಿಸದೆ ತನ್ನ ಜೀವವ ತೆತ್ತು
ಕಾಯುವವನಾವನೋ ಅವನೆ ಸತ್ಯಾಗ್ರಹಿ!
ಎಂದಿಗೂ ಆಣೆಯಿಡದವನು ಸತ್ಯಾಗ್ರಹಿ!
ಎಂದಿಗೂ ಶಾಪಕೊಡದವನು ಸತ್ಯಾಗ್ರಹಿ!
ರಾಕ್ಷಸೀ ಬಲದಿಂದ ನಮ್ಮನಾಳುವ ಜನರ
ಹಳವಿಗೆಗೆ ಬಾಗದವನವನೆ ಸತ್ಯಾಗ್ರಹಿ!
ತನ್ನ ಗೌರವ ಕೆಡದ ರೀತಿಯಲಿ ನಡೆವವನು,
ತನ್ನ ಜಾಗಕೆ ತಾನೆ ಬಲು ಹೆಮ್ಮೆ ಪಡದವನು,
ಮರೆಯದೆಯೆ ಹಡೆದ ಮಾತೆಯ ಸೇವೆಯನು ಮಾಡಿ
ಮೌನದಿಂ ಮಡಿವವನು ಧನ್ಯ ಸತ್ಯಾಗ್ರಹಿ!
ಕಲಿಯುಗದ ಪ್ರಚ್ಛನ್ನ ಕಲ್ಕಿ ಸತ್ಯಾಗ್ರಹಿ!

೨೯-೪-೧೯೩೦