ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

ಬೆಚ್ಚ ಬಿಡು, ನೆಚ್ಚ ನೆಡು
ಕೆಚ್ಚೆದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಗಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚೆದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?

ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!

ನೋಡದೋ ನೋಡಲ್ಲಿ:
ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ
ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ!
ನುಗ್ಗು, ನಡೆ, ಕಟ್ಟ ಹರಿ!
ತಡೆಯೆ ಬಂದವರ ಇರಿ!
ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ?
ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ?
ಸಾವೆ ಸಿರಿ ಕಲಿಗೆ!

ನಿಂತೇನು ನೋಡುತಿಹೆ?
ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು
ರಣರಂಗದಲ್ಲಿ!
ನೆತ್ತರನು ನೋಡುವೆಯ?
ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ?
ಮರಳುಗಳ ನೆಲೆಬೀಡೆ?
ಕಾಳಿಯಳುಕುವಳೇನು
ರಕ್ಕಸರ ಬಲಿಗೆ?
ಸಮರ ರಂಗದ ನಡುವೆ
ಬೆದರಿಕೆಯೆ ಕಲಿಗೆ?

ಹಾ ನೋವು! ಹಾ ನೋವು!
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಿಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು;
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಆತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯು ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

೨೦-೯-೧೯೨೯