ಮೇಲುಕೋಟೆ

ದೂರ
ತಾಲ್ಲೂಕು ಕೇಂದ್ರದಿಂದ – ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೫ ಕಿ.ಮೀ.

ಮೇಲುಕೋಟೆ ಪ್ರಸಿದ್ದ ಯಾತ್ರ ಸ್ಥಳ. ದ್ವಾಪರಯುಗದಲ್ಲಿ ಕೃಷ್ಣ ಮತ್ತು ಯಾದವರು ನಾರಾಯಣನನ್ನು ಪೂಜಿಸಿದ್ದರಿಂದ ಮುಂದೆ ಅಂದರೆ ೯೦೦ ವರ್ಷಗಳ ಹಿಂದೆ ಯತಿಗಳಾದ ರಾಮಾನುಜಚಾರ್ಯರು ಇಲ್ಲಿಗೆ ಆಗಮಿಸಿ ದೇವಾಲಯ, ಕಲ್ಯಾಣಿ, ಕೆರೆ ಕಟ್ಟೆಗಳನ್ನೊಳಗೊಂಡಂತೆ ಸಮಸ್ತ ಮೇಲುಕೋಟೆಯನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಯದು-ಶೈಲ ಎಂದು ಹೆಸರಾಯಿತು. ಇಲ್ಲಿನ ಆರಾಧ್ಯ ದೈವ ಚೆಲುವನಾರಾಯಣ ಮೇಲುಕೋಟೆ ಗ್ರಾಮದಲ್ಲಿದ್ದರೆ, ಯೋಗಾನರಸಿಂಹಸ್ವಾಮಿ ಬೆಟ್ಟದ ಮೇಲಿದೆ. ಪಂಚಕಲ್ಯಾಣಿ, ಧನುಷ್ಕೋಟಿ, ದಳವಾಯಿಕೆರೆ ಮುಂತಾದ ಪ್ರಾಚೀನ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಾಣಬಹುದಲ್ಲದೆ ವಿಜಯನಗರ ಕಾಲದ ಗೋಪಾಲರಾಯನ ಹೆಬ್ಬಾಗಿಲು ರಾಜ್ಯ ಸರ್ಕಾರದ ಸಂಸ್ಕೃತ ಪಾಠಶಾಲೆ, ಕೇಂದ್ರರಾಜ್ಯ ಸರ್ಕಾರಗಳ ಸಂಸ್ಕೃತ ಅಕಾಡೆಮಿಗಳಲ್ಲಿ ಪ್ರಾಚೀನ ತಾಳೆಗರಿಗಳ ಸಂಗ್ರಹವನ್ನು ಕಾಣಬಹುದು.

 

ವೈರಮುಡಿ

ದೂರ
ತಾಲ್ಲೂಕು ಕೇಂದ್ರದಿಂದ – ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೫ ಕಿ.ಮೀ.

 


ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿರುವ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರತಿವರ್ಷ ಮಾರ್ಚಿ ತಿಂಗಳಲ್ಲಿ ಪಡೆಯುವ ಉತ್ಸವವೇ ವೈರಮುಡಿ ರಾಜರ ಕಾಲದಲ್ಲಿ ನೀಡಲಾಗಿರುವ ವಜ್ರಖಚಿತವಾದ ಕಿರೀಟಧಾರಣೆ ಮಾಡಿ ಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ವೈರಮುಡಿ ಉತ್ಸವವನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸುವರು.

 

ಕೆರೆತೊಣ್ಣೊರು

ದೂರ
ತಾಲ್ಲೂಕು ಕೇಂದ್ರದಿಂದ – ೧೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೩೫ ಕಿ.ಮೀ.

 

ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಕೆರೆತೊಣ್ಣೊರು ಹೊಯ್ಸಳರ ಕಾಲದಲ್ಲಿ ಬೇಸಿಗೆಯ ತಂಗುದಾಣವಾಗಿತ್ತು. ಈಗ ಇದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಇಲ್ಲಿನ ನಂಬಿನಾರಾಯಣ, ಶ್ರೀವೇಣುಗೋಪಾಲ ದೇವಾಲಯಗಳು ಪ್ರಸಿದ್ದವಾಗಿದೆ. ಸಾವಿರ ಜೈನಯತಿಗಳನ್ನು ವಾದದಲ್ಲಿ ರಾಮಾನುಜರು ಸೋಲಿಸಿದ್ದು ಇದೇ ಜಾಗದಲ್ಲಿ ಎಂದು ಪುರಾವೆಗಳು ಹೇಳುತ್ತವೆ. ರಾಮಾನುಜರೇ ನಿರ್ಮಿಸಿದ ತಿರುಮಲಸಾಗರ ಎರಡು ಬೆಟ್ಟಗಳಿಗೆ ಹೊಂದಿಕೊಂಡಂತೆ ಇದೆ. ಕೆರೆತೊಣ್ಣೊರಿನ ಮದಗ ಎಂಬ ಜಲಪಾತದಲ್ಲಿ ಸ್ನಾನಮಾಡಿದರೆ ಚರ್ಮವ್ಯಾಧಿಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಸಮೀಪದ ಸುಂಕಾತೊಣ್ಣೂರಿನಲ್ಲಿ ಕರಿಭಂಟನ ಕಾಳಗಕ್ಕೆ ಸಂಬಂಧಪಟ್ಟಂತೆ ಹಲವಾರು ಐತಿಹ್ಯ ದೊರೆಯುತ್ತವೆ.

 

ಕುಂತಿಬೆಟ್ಟ

ದೂರ
ತಾಲ್ಲೂಕು ಕೇಂದ್ರದಿಂದ – ೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೨ ಕಿ.ಮೀ.

 


ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್‌ರಾಕ್ಸ್‌ಎಂದೂ ಹೆಸರಾಗಿತ್ತು.

 

“ವೇಣುಗೋಪಾಲ ಸ್ವಾಮಿ ದೇವಾಲಯ ಹೊಸಕನ್ನಂಬಾಡಿ”

ದೂರ
ತಾಲ್ಲೂಕು ಕೇಂದ್ರದಿಂದ – ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೪೦ ಕಿ.ಮೀ.

ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಮುಂಚೆ ಆ ಪ್ರದೇಶದಲ್ಲಿ “ಕಣ್ವಪುರಿ” ಎಂಬ ಪುರಾಣ ಪ್ರಸಿದ್ಧವಾದ ಗ್ರಾಮವಿತ್ತು. ಶ್ರೀವೇಣುಗೋಪಾಲ ದೇವಾಲಯ ಹಾಗೂ ಲಕ್ಷ್ಮಿದೇವಿಗುಡಿ ಹಾಗೂ ಕೆಲವು ಹಳ್ಳಿಗಳು ೧೯೧೧ರಲ್ಲಿ ಮುಳುಗಡೆಯಾಯಿತು. ಕೆಲವರು ಜಲಾಶಯದ ಪಕ್ಕದಲ್ಲೇ ಹೊಸಕನ್ನಂಬಾಡಿ ’ನಾರ್ಥ ಬ್ಯಾಂಕ್’ ಎಂಬ ಊರು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ೧೯೨೪ರಲ್ಲಿ ಮುಳುಗಡೆಯಾದ ವೇಣುಗೋಪಾಲ ದೇವಾಲಯವು ಕಟ್ಟೆಯಲ್ಲಿ ನೀರು ಖಾಲಿಯಾದಾಗ ದೇವಸ್ಥಾನವು ಕಾಣಿಸಿಕೊಂಡಿತು. ಬೆಂಗಳೂರಿನ ಖ್ಯಾತ ಉದ್ಯಮಿ ’ ಶ್ರೀ ಹರಿಖೋಡೆ’ ಕಾವೇರಿ ನದಿಯ ಪಕ್ಕದಲ್ಲಿ ಹೊಸಕನ್ನಂಬಾಡಿಯ ಬಳಿ ಈ ದೇವಾಲವನ್ನು ಪುನರ್ ನಿರ್ಮಾಣ ಮಾಡಿರುತ್ತಾರೆ.