ಪಾಂಡುರಂಗರಾವ್ ದೇಸಾಯಿ —ಕನ್ನಡಿಗರಿಗೆ ಮತ್ತು ಭಾರತೀಯರಿಗೆ ತಮ್ಮ ಚರಿತ್ರೆಯನ್ನು ತೆರೆದು ತೋರಿಸಲು ಬಾಳನ್ನು ಧಾರೆ ಎರೆದ ವಿದ್ವಾಂಸರು. ಸಂಶೋಧನೆ ಅವರಿಗೊಂದು ತಪಸ್ಸು, ಅವರ ಪ್ರತಿಭೆ, ವಿದ್ವತ್ತು, ತಾಳ್ಮೆ, ಶ್ರದ್ಧೆಗಳಿಂದ ನಾಡಿನ ಚರಿತ್ರೆಯ ಪುಟಗಳು ತೆರೆದುಕೊಂಡವು.

ಪಾಂಡುರಂಗರಾವ್ ದೇಸಾಯಿ

ಸಂಸ್ಕೃತ  ಭಾಷೆಯಲ್ಲಿ ಒಂದು ನಾಣ್ನುಡಿ ಇದೆ:  ‘ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ’ ಎಂದು. ಅಂದರೆ ಮಹತ್ವದ ಕಾರ್ಯ ಸಾಧನೆಗೆ ಮನುಷ್ಯನಲ್ಲಿಯ ಅಂತಃಶಕ್ತಿಯು, ದೃಢನಿರ್ಧಾರವು ಮುಖ್ಯವೇ ಹೊರತು ಹೊರಗಿನ ಸಾಧನ-ಸಲಕರಣೆಗಳಲ್ಲ. ಈ ಮಾತಿಗೆ ಡಾಕ್ಟರ್ ಪಾಂಡುರಂಗರಾವ್ ದೇಸಾಯಿಯವರು ಉತ್ತಮ ಉದಾಹರಣೆ. ಇಲ್ಲವಾದರೆ ಹಳ್ಳಿಗಾಡಿನಲ್ಲಿ ಹುಟ್ಟಿದರೂ, ಯಾವ ಅನುಕೂಲತೆಗಳೂ ಇಲ್ಲದೆ ಹೋದರೂ ಎಲ್ಲ ಅಡಚಣೆಗಳನ್ನು ಎದುರಿಸಿ ನಾಡಿನ ಖ್ಯಾತ ಸಂಶೋಧಕರು, ವಿದ್ವಾಂಸರು ಆಗುವುದು ಅವರಿಗೆ ಹೇಗೆ ಸಾಧ್ಯವಾಗುತ್ತಿತ್ತು?

ಚರಿತ್ರೆಯನ್ನು ನಮಗೆ ತಿಳಿಸಿಕೊಡುವ ಹಿರಿಯರು

ನಮ್ಮ ದೇಶದ ಚರಿತ್ರೆಯನ್ನು ನಾವು ತಿಳಿದು ಕೊಳ್ಳಬೇಕು ಅಲ್ಲವೆ? ಚರಿತ್ರಕಾರರು ಚರಿತ್ರೆಯನ್ನು ಬರೆದರೆ ದೇಶದ ಎಲ್ಲ ಜನರೂ ಓದಿ ತಿಳುವಳಿಕೆಯನ್ನು ಪಡೆಯಬಹುದು. ಚರಿತ್ರೆಕಾರರಿಗೆ ಹಿಂದೆ ಏನಾಯಿತೆಂದು ತಿಳಿಯುವುದು ಹೇಗೆ? ಸ್ವಲ್ಪ ಹಿಂದಿನ ಕಾಲದ ವಿಷಯವಾದರೆ ಆ ಕಾಲದ ಜನರು ಕೆಲವರು ಬದುಕಿರಬಹುದು, ಅಥವಾ ಪುಸ್ತಕಗಳಲ್ಲಿ ಸರ್ಕಾರದ ದಾಖಲೆಗಳಲ್ಲಿ ವಿಷಯ ತಿಳಿಯಬಹುದು. ಕೆಲವೇ ನೂರು ವರ್ಷಗಳ ಹಿಂದಿನ ಸಂಗತಿಗಳು ಖಚಿತವಾಗಿ ತಿಳಿಯುವುದು ಕಷ್ಟ. ಬಹು ಹಿಂದಿನ ಕಾಲದ ಚರಿತ್ರೆಯನ್ನು ಬರೆಯಬೇಕಾದರಂತೂ ತೀರ ಕಷ್ಟ. ನಮ್ಮ ದೇಶದಲ್ಲಿ ಹಿಂದಿನ ಕಾಲದ ಶಾಸನಗಳು ಸಿಕ್ಕುತ್ತವೆ. ಇವು ಕಲ್ಲಿನ ಮೇಲೆ ಕೆತ್ತಿರುವ ಮಾತುಗಳಾಗಬಹುದು, ತಾಮ್ರದ ಮೇಲೆ ಕೆತ್ತಿರುವ ಮಾತುಗಳಾಗಬಹುದು(ಚಿನ್ನ, ಬೆಳ್ಳಿ, ಕಂಚುಗಳ ಮೇಲೆ ಅಕ್ಷರಗಳನ್ನು ಕೊರೆಯಿಸಿರುವುದೂ ಉಂಟಂತೆ) ಅವನ್ನು ಓದುವುದು ಸುಲಭವಲ್ಲ. ಅಶೋಕನ ಶಾಸನಗಳು ಬ್ರಾಹ್ಮೀಲಿಪಿಯಲ್ಲಿವೆ. ಪ್ರಾರಂಭದ ಕನ್ನಡದ ಶಾಸನಗಳನ್ನು ಓದುವುದು ಸಹ ಸುಲಭವಲ್ಲ. ಏಕೆಂದರೆ ಈಗಿನ ಕನ್ನಡಲಿಪಿಗೂ ಆಗಿನ ಕನ್ನಡಲಿಪಿಗೂ ತುಂಬಾ ವ್ಯತ್ಯಾಸ, ಭಾಷೆಯಲ್ಲಿ ತುಂಬಾ ವ್ಯತ್ಯಾಸ. ಆಗ ಬಳಸುತ್ತಿದ್ದ ಎಷ್ಟೋ ಪದಗಳು ಈಗ ಬಳಕೆಯಲ್ಲಿ ಇಲ್ಲ. ಈ ಶಾಸನಗಳಿಂದ ಬೇರೆ ಬೇರೆ ಕಾಲದ ರಾಜರು, ರಾಜ್ಯಗಳು, ಯುದ್ಧಗಳು, ರಾಜ್ಯದ ಆಡಳಿತ ರೀತಿ, ಜನ ಯಾವುದನ್ನು  ಒಳ್ಳೆಯದು  ಎಂದು ತಿಳಿಯುತ್ತಿದ್ದರು. ಯಾವುದನ್ನು ಪಾಪ ಎಂದು ಭಾವಿಸುತ್ತಿದ್ದರು, ಏನನ್ನು ಬಯಸುತ್ತಿದ್ದರು ಇವೆಲ್ಲ ತಿಳಿದುಬರುತ್ತವೆ. ಆದರೆ ಇವನ್ನು ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಹಲವು ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಬೇಕು. ಭಾಷೆ, ಸಾಹಿತ್ಯ, ಚರಿತ್ರೆ, ಧರ್ಮಶಾಸ್ತ್ರ ಎಲ್ಲ ತಿಳಿದಿರಬೇಕು. ಹಾಗೆಯೇ ಓಲೆಯ ಗರಿಗಳಲ್ಲಿ ಬರೆದಿಟ್ಟಿರುವ ಹಿಂದಿನ ಕಾಲದ ಪುಸ್ತಕಗಳನ್ನು ಓದಲೂ ಶಿಕ್ಷಣ-ಅಭ್ಯಾಸ ಎರಡೂ ಬೇಕು. ಶಾಸನಗಳನ್ನೂ ಓಲೆಗರಿ ಗ್ರಂಥಗಳನ್ನೂ ಹುಡುಕಿಕೊಂಡು ಅಲೆಯಬೇಕಾಗುತ್ತದೆ. ಹತ್ತು ಜನರನ್ನು ಕಾಣಬೇಕು, ಅವರ ನೆರವನ್ನು ಪಡೆಯಬೇಕು. ಇದಕ್ಕೆ ಅಪಾರ ಶ್ರದ್ಧೆ, ತಾಳ್ಮೆ ಬೇಕು. ಹಿಂದಿನ ಕಾಲದ ಅವಶೇಷಗಳು ನೆಲದಲ್ಲಿ ಹೂತು ಹೋಗಿರಬಹುದು. ಅವು ಎಲ್ಲಿ  ಹೂತಿವೆ ಎಂದೂ ಖಚಿತವಾಗಿ ತಿಳಿಯದಿರಬಹುದು. ಕಷ್ಟದಿಂದ ಅವನ್ನು ಕಂಡುಹಿಡಿದು ಎಚ್ಚರಿಕೆಯಿಂದ ಅಗೆಸಿ, ಅವಶೇಷಗಳ ಅಭ್ಯಾಸ ಮಾಡಬೇಕಾಗುತ್ತದೆ. ಹೀಗೆ ಭೂಮಿಯನ್ನು ಅಗೆದು ಹೊರ ತೆಗೆಯುವುದಕ್ಕೆ ‘ಉತ್ಖನನ’ ಎನ್ನುತ್ತಾರೆ. ಉದಾಹರಣೆಗೆ, ಚಿತ್ರದುರ್ಗದ ಪಶ್ಚಿಮಕ್ಕೆ ಬೆಟ್ಟದ ಬುಡದ ಚಂದ್ರವಳ್ಳಿಯಲ್ಲಿ ಬಹು ಹಿಂದಿನ ಕಾಲದಲ್ಲಿನ ಎರಡು ಸಂಸ್ಕೃತಿಗಳ ಸಾಕ್ಷ್ಯ ಸಿಕ್ಕಿದೆ. ಕ್ರಿ.ಪೂ. ಮೂರನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದವರೆಗಿನ ನಾಣ್ಯಗಳು ಒಡವೆಗಳು ಮಣ್ಣಿನ ಪಾತ್ರೆಗಳು ಎಲ್ಲ ಸಿಕ್ಕಿವೆ. ರೋಮ್ ಚಕ್ರವರ್ತಿಗಳ ನಾಣ್ಯ ಇಲ್ಲಿ ದೊರೆತಿವೆ. ೧೨೦ ವರ್ಷಗಳ ಹಿಂದೆ ಇಲ್ಲಿ ಉತ್ಖನನ ಮಾಡಲಾಯಿತು. ಮತ್ತೆ ೧೯೦೯ರಲ್ಲಿ, ೧೯೨೯ರಲ್ಲಿ, ೧೯೪೭ರಲ್ಲಿ ಉತ್ಖನನಗಳು ನಡೆದಿವೆ.

ಇಷ್ಟು ಕಷ್ಟವಾದ ಕೆಲಸವನ್ನು ಕೈಗೊಂಡು ಬಹು ಹಿಂದಿನ ಚರಿತ್ರೆಯನ್ನು ಬೆಳಕಿಗೆ ತರುವ ಹಿರಿಯರಿಗೆ ನಾವು ಋಣಿಗಳಾಗಿರಬೇಕು. ಅವರ ವಿದ್ವತ್ತು, ತಾಳ್ಮೆ, ಶ್ರದ್ಧೆ, ಪ್ರತಿಭೆ ಇವೇ ನಮ್ಮ ಚರಿತ್ರೆಯ ತಿಳುವಳಿಕೆಗೆ ಅಸ್ತಿಭಾರ. ಪಾಂಡುರಂಗರಾವ್ ದೇಸಾಯಿಯವರು ಇಂತಹ ಒಬ್ಬ ಹಿರಿಯರು.

ಜನನ, ಬಾಲ್ಯ

ದೇಸಾಯಿ ಎಂಬುದು ಅಧಿಕಾರ ಸೂಚಕ ಪದ. ಯಾವುದೊಂದು ಗ್ರಾಮದ ಅಥವಾ ನಿರ್ದಿಷ್ಟ ಪ್ರದೇಶದ ಕಂದಾಯ ವಸೂಲಿ ಮತ್ತು ಆಡಳಿತದ ಅಧಿಕಾರ ಇಂಥವು ದೇಸಾಯರಿಗೆ ಇರುತ್ತಿದ್ದಿತು. ಕ್ರಮೇಣ ಇದು ಮನೆತನದ ಹೆಸರಾಗಿ ಉಳಿದು ದೇಶದ ವಿವಿಧ ಭಾಗಗಳಲ್ಲಿ ಇಂದಿಗೂ ಪ್ರಚಲಿತವಿದೆ.

ಪಾಂಡುರಂಗರಾಯರ ಮನೆತನ ಮೂಲತಃ ರಾಯಚೂರು ಜಿಲ್ಲೆಯ ಕೊಪ್ಪಳದ ಬಳಿ ಇರುವ ಕಿನ್ನಾಳದಲ್ಲಿತ್ತು. ಮುಂದೆ ಇವರ ಪೂರ್ವಜರು ಅದೇ ತಾಲೂಕಿನ ಬೆಣಕಲ್ಲಿನಲ್ಲಿ ನೆಲೆಸಿದರು. ಇದರಿಂದ ಬೆಣಕಲ್ಲ ದೇಸಾಯರು ಎಂದು ಹೆಸರಾದರು. ಪಾಂಡುರಂಗ ರಾಯರ ಹುಟ್ಟೂರು ಇದೇ. ಅವರು ೧೯೧೦ರ ಡಿಸೆಂಬರ್ ೨೪ ರಂದು ಜನಿಸಿದರು. ಇವರ ತಂದೆ ಭೀಮರಾಯರು, ತಾಯಿ ಭಾಗೀರಥಿ ಬಾಯಿ. ಈ ದಂಪತಿಗಳಿಗೆ ಐವರು ಮಕ್ಕಳು. ಐದನೆಯವರೆ ಪಾಂಡುರಂಗರಾಯರು.

ಪಾಂಡುರಂಗರಾಯರ ಜೀವನ ಪ್ರತಿಕೂಲ ಪರಿಸ್ಥಿತಿಯಲ್ಲಿಯೇ ಪ್ರಾರಂಭವಾಯಿತು. ಕೇವಲ ಆರು ವರ್ಷದವರಿರುವಾಗ ತಂದೆ ನಿಧನರಾದರು. ಮಮತೆಯ ತಾಯಿ, ಅಣ್ಣಂದಿರ ಪೋಷಣೆಯಲ್ಲಿ ಹಾಗೂ-ಹೀಗೂ ಸೇಡಮ್ಮಿನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಕಲಬುರ್ಗಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ಆಗಿನ ಕಾಲದಲ್ಲಿ ಈ ಪ್ರದೇಶ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಸೇರಿದ್ದಿತು. ಅಲ್ಲಿ ಮರಾಠಿಯ ಪ್ರಭಾವವೇ ಹೆಚ್ಚಾಗಿದ್ದಿತು. ಕನ್ನಡದ ಪ್ರಭಾವ ತೀರ ಕಡಿಮೆ. ಪಾಂಡುರಂಗರಾಯರು ಮರಾಠಿ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆಯಬೇಕಾಯಿತು. ಇಂತಹ ವಾತಾವರಣದಲ್ಲಿಯೇ ಕಲಿತು ಮುಂಬಯಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ (ಇಂದಿನ ಎಸ್.ಎಸ್.ಎಲ್.ಸಿ) ಯನ್ನು ಪೂರೈಸಿದರು.

ಆತಂಕ ವರದಾನವಾಯಿತು

ಈ ಹೊತ್ತಿಗೆ ಪಾಂಡುರಂಗರಾಯರು ಇನ್ನೊಂದು ಆತಂಕವನ್ನು ಎದುರಿಸಬೇಕಾಯಿತು. ಹದಿನೇಳು ವರ್ಷದವರಿದ್ದಾಗ ತೀವ್ರ ಕಾಯಿಲೆಗೆ ತುತ್ತಾದರು. ಮುಂದಿನ ಆರು ವರ್ಷಗಳ ಕಾಲ ಶಿಕ್ಷಣವನ್ನು ನಿಲ್ಲಿಸದೆ ಗತ್ಯಂತರವಿಲ್ಲದಾಯಿತು. ಹೆಚ್ಚು ಕಲಿಯಬೇಕೆಂಬ ಅದಮ್ಯ ಉತ್ಸಾಹವಿದ್ದ ಇವರಿಗೆ ಇದರಿಂದ ತೀವ್ರ ನಿರಾಶೆ ಯಾಯಿತು. ಆದರೂ ಎದೆಗುಂದಲಿಲ್ಲ. ಈ ಅವಧಿಯನ್ನು ವ್ಯರ್ಥಹೋಗಗೊಡಲಿಲ್ಲ. ಹೆಚ್ಚಿನ ಜ್ಞಾನವನ್ನು ಗಳಿಸುವ ದೃಢನಿರ್ಧಾರ ಮಾಡಿದರು.

ತಾಯಿನುಡಿ ಕನ್ನಡವಾದರೂ ಆ ಭಾಷೆಯನ್ನು ವ್ಯವಸ್ಥಿತವಾಗಿ ಗುರುಗಳಿಂದ ಕಲಿಯುವ ಅವಕಾಶವೇ ಇವರಿಗೆ ದೊರೆತಿರಲಿಲ್ಲ. ಅನಾರೋಗ್ಯದ ದಿನಗಳನ್ನು ಈ ಅಭ್ಯಾಸಕ್ಕಾಗಿ ಬಳಸಿಕೊಂಡರು. ಈ ಅವಧಿಯಲ್ಲಿ ಅವರು ತಾಯಿನುಡಿ ಕನ್ನಡದ ಅಭ್ಯಾಸಕ್ಕೆ ತೊಡಗಿದರು. ಸ್ವಲ್ಪ ದಿನಗಳಲ್ಲೇ ಅವರು ಚೆನ್ನಾಗಿ ಪ್ರಗತಿ ಸಾಧಿಸಿದರು. ಸಂಸ್ಕೃತ ಇವರ ಅಚ್ಚುಮೆಚ್ಚಿನ ಭಾಷೆ. ಇದೇ ಕಾಲದಲ್ಲಿ ಇದರಲ್ಲಿಯೂ ಪ್ರೌಢಿಮೆಯನ್ನು ಸಾಧಿಸಿದರು. ಇದೇ ಅವಧಿಯಲ್ಲಿ ಇನ್ನೂ ಒಂದು ಅನಿರೀಕ್ಷಿತ ಲಾಭ ಇವರಿಗುಂಟಾಯಿತು. ಇದೇ ಅವರ ಮುಂದಿನ ಕಾರ್ಯಕ್ಷೇತ್ರದ, ವಿದ್ವತ್ತಿನ ಸಾಧನೆಯಾಯಿತು. ಅದೆಂದರೆ ಶಾಸನ ವಿಜ್ಞಾನದ ಅಭ್ಯಾಸ. ಈ ಬಳಲಿಕೆಯ ದಿನಗಳಲ್ಲಿ ಇವರು ತಮ್ಮ ಅಣ್ಣ ರಾಘವೇಂದ್ರರಾಯರ ಜೊತೆಗೆ ಕುಕ್ಕನೂರಿನಲ್ಲಿ ಇರುತ್ತಿದ್ದರು. ಕುಕ್ಕನೂರು ಪ್ರಾಚೀನ ಇತಿಹಾಸವುಳ್ಳ ಊರು. ೧೦-೧೨ನೆಯ ಶತಮಾನಗಳಲ್ಲಿ ಇದೊಂದು ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಹಲವಾರು ಗುಡಿಗೋಪುರಗಳು, ಶಿಲಾಶಾಸನಗಳು ಈ ಊರಿನ ಪ್ರಾಚೀನತೆಯನ್ನು ಸಾರುತ್ತಾ ಈಗಲೂ ನಿಂತಿವೆ. ಪಾಂಡುರಂಗರಾಯರು ಈ ಅವಶೇಷಗಳಿಂದ ಆಕರ್ಷಿತರಾದರು. ಅವುಗಳ ಹಿನ್ನೆಲೆಯಲ್ಲಿ ಕನ್ನಡನಾಡಿನ ಭವ್ಯ ಪರಂಪರೆಯನ್ನು ಕಲ್ಪಿಸಿಕೊಂಡರು. ಇದು ಅವರಿಗರಿವಿಲ್ಲದಂತೆಯೇ ಅವರ ಸಂಶೋಧನಾ ಜೀವನಕ್ಕೆ ನಾಂದಿಯಾಯಿತು. ದಿನವೂ ಕಣ್ಣಿಗೆ ಕಾಣಿಸುತ್ತಿದ್ದ ಶಿಲಾಶಾಸನಗಳಲ್ಲಿ ಏನಿದೆ ಎಂಬುದನ್ನು ತಿಳಿಯುವ ಕುತೂಹಲ. ಒಂದು ದಿನ ಹೀಗೆಯೇ ಶಿಲಾಶಾಸನ ಒಂದನ್ನು ನೋಡುತ್ತಿದ್ದಾಗ, ಅಕಸ್ಮಾತ್ತಾಗಿ ಅಲ್ಲಿಗೆ ಬಂದ ತರುಣನೊಬ್ಬ ಶಿಲಾಶಾಸನದ ಸಾಲೊಂದನ್ನು ಓದುತ್ತಿದ್ದುದನ್ನು ಕಂಡರು. ತಾವೂ ಹಾಗೆ ಓದುವುದನ್ನು ಕಲಿಯಬೇಕೆಂದು ನಿರ್ಧರಿಸಿದರು. ಸ್ವಪ್ರಯತ್ನದಿಂದ, ಛಲದಿಂದ ಕೆಲವು ದಿನಗಳಲ್ಲಿಯೇ ಇಡೀ ಶಾಸನವನ್ನು ಓದುವ ಪ್ರಯತ್ನದಲ್ಲಿ ಸಫಲರಾದರು. ಅಂದೇ ಶಾಸನ ಭಂಡಾರದ ಬೀಗಮುದ್ರೆಯನ್ನು ಒಡೆದರು. ಮುಂದೆ ಜೀವನದುದ್ದಕ್ಕೂ ಜನರ ತಿಳಿವಿಗಾಗಿ ಈ ಭಂಡಾರವನ್ನು ಲಭ್ಯ ಮಾಡಿಕೊಟ್ಟರು.

ಶಿಕ್ಷಣ, ವಿದ್ಯಾರ್ಜನೆ

ಆರು ವರ್ಷಗಳ ನಂತರ ಪಾಂಡುರಂಗರಾಯರು ಕಾಯಿಲೆಯಿಂದ ಚೇತರಿಸಿಕೊಂಡರು. ಅನಂತರ ಅವರು ಕನ್ನಡ, ಸಂಸ್ಕೃತ ಮತ್ತು ಹೊಸವಿಷಯವಾದ ಶಾಸನವಿಜ್ಞಾನದ ಅಭ್ಯಾಸದಿಂದ ಸನ್ನದ್ಧರಾಗಿ ಹೆಚ್ಚಿನ ಅಭ್ಯಾಸಕ್ಕೆ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿದರು. ೧೯೩೫ರಲ್ಲಿ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. ಸಂಸ್ಕೃತ ವಿಷಯದಲ್ಲಿನ ಪ್ರೌಢಿಮೆಗಾಗಿ ಚಿನ್ನದ ಪದಕವನ್ನು ಗಳಿಸಿದರು.

ಆಗ ಸ್ನಾತಕೋತ್ತರ ಅಭ್ಯಾಸಕ್ಕೆ ಈಗಿನಂತೆ ಧಾರವಾಡದಲ್ಲಿ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಖಾಸಗಿಯಾಗಿ ಎಂ.ಎ. ಪದವಿ ಪಡೆಯಲು ಪ್ರಯತ್ನಿಸಿದರು. ಅವರು ತಮಗೆ ಪ್ರಿಯವಾದ ಸಂಸ್ಕೃತ ಮತ್ತು ಲಿಪಿಶಾಸ್ತ್ರ ವಿಷಯಗಳನ್ನು ಆರಿಸಿಕೊಂಡು ಗುರುಗಳನ್ನು ಅರಸುತ್ತ ಹೋದರು.

[ಲಿಪಿಶಾಸ್ತ್ರ ಎಂದರೆ ವಿವಿಧ ಪ್ರಾಚೀನ ಲಿಪಿಗಳ ಉಗಮ ಮತ್ತು ಬೆಳವಣಿಗೆಯನ್ನು ಕುರಿತಾದ ಅಭ್ಯಾಸ.] ಆಗ ಈ ವಿಷಯದಲ್ಲಿ ಅಧಿಕೃತ ಮಾರ್ಗದರ್ಶಕರೆಂದು ಪುಣೆಯ ಭಂಡಾರಕರ ಪ್ರಾಚ್ಯ ಸಂಸ್ಥೆಯ ವಿದ್ವಾಂಸರಾಗಿದ್ದ ವಿ.ಎಸ್.ಸುಖ್ತಣಕರರು ಪ್ರಸಿದ್ಧರಾಗಿದ್ದರು. ಅವರಿಗೆ ಆಗಲೇ ಪಾಂಡುರಂಗರಾಯರ ಅಭಿರುಚಿ ಮತ್ತು ಲೇಖನಗಳ ಪರಿಚಯವಾಗಿದ್ದಿತು. ರಾಯರು ಅವರನ್ನು ಕಂಡಾಗ ಸುಖ್ತಣಕಾರರು : ‘ನಿನಗಾಗಲೇ ವಿಷಯದ ಪರಿಚಯ ಚೆನ್ನಾಗಿ ಆಗಿದೆ. ನಿನಗೇನು ಕಲಿಸುವುದಿದೆ? ನೀನೇ ಅಭ್ಯಾಸ ಮಾಡಿಕೋ’ ಎಂದರು. ಪಾಂಡುರಂಗರಾಯರು ಇದನ್ನು ಗುರುಕರುಣೆ ಎಂದೇ ಭಾವಿಸಿದರು. ಅಲ್ಲಿಯೇ ಕೆಲದಿನಗಳವರೆಗಿದ್ದು ಅಭ್ಯಾಸ ಮಾಡಿ ಮರಳಿದರು. ೧೯೩೭ರಲ್ಲಿ ಸಂಸ್ಕೃತ, ಕನ್ನಡ ಮತ್ತು ಲಿಪಿಶಾಸ್ತ್ರಗಳನ್ನು ತೆಗೆದುಕೊಂಡು ಉಚ್ಚವರ್ಗದ ಎಂ.ಎ ಪದವಿಯನ್ನು ಪಡೆದರು.

ಈ ಹೊತ್ತಿಗೆ ಪಾಂಡುರಂಗರಾಯರು ಇನ್ನೊಂದು ದಿಶೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದರು. ಶಾಸನಗಳು ಅವರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು. ಕುಕ್ಕನೂರಿನಲ್ಲಿ ಆರಂಭವಾದ ಶಾಸನ ವ್ಯಾಸಂಗ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿತು. ರಾಯಚೂರು, ಕಲಬುರ್ಗಿ ಜಿಲ್ಲೆಗಳ ಹಳ್ಳಿಗಳಲ್ಲಿ ಅಲೆದಾಡಿ ಶಾಸನಗಳನ್ನು ಓದಿದರು, ಪ್ರತಿಗಳನ್ನು ಸಂಗ್ರಹಿಸಿದರು. ಪ್ರವಾಸದ ಅನುಭವಗಳನ್ನು ಲೇಖನ ರೂಪದಲ್ಲಿ ನಿರೂಪಿಸಿದರು. ಕನ್ನಡ, ಮರಾಠಿ, ಇಂಗ್ಲಿಷ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸಿ ಸಂಶೋಧಕರಾಗಿ, ಬರಹಗಾರರಾಗಿ ಹೆಸರಾದರು. ಇದೇ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆರನೆಯ ಶತಕದ ಉತ್ಸವದ ಅಂಗವಾಗಿ ಧಾರವಾಡದ ‘ಕರ್ನಾಟಕ ಇತಿಹಾಸ ಸಂಶೋಧನ ಮಂಡಲ’ದ ಪರವಾಗಿ ‘ವಿಜಯನಗರ ಸಾಮ್ರಾಜ್ಯ’ ಎಂಬ ಸಂಶೋಧನ ಗ್ರಂಥವನ್ನು ಪ್ರಕಟಿಸಿದರು. ಈ ವಿಷಯದಲ್ಲಿ ಇಂದಿಗೂ ಇದೊಂದೇ ಅಧಿಕೃತ ಗ್ರಂಥ ಎಂಬುದನ್ನು ಗಮನಿಸಿದರೆ ಈ ಗ್ರಂಥದ ಮಹತ್ವದ ಅರಿವುಂಟಾಗುತ್ತದೆ.

ವೃತ್ತಿ ಜೀವನ

ಎಂ.ಎ ಮುಗಿಸಿದ ನಂತರ ಪಾಂಡುರಂಗ ರಾಯರು  ತಮ್ಮ ಸಂಶೋಧನೆಯ ಹವ್ಯಾಸವನ್ನು ಮುಂದುವರಿಸಿದರು. ಇದೇ ವೇಳೆಗೆ ಕನ್ನಡದಲ್ಲಿ ‘ಮಿಂಚಿದ ಮಹಿಳೆಯರು’ ಮತ್ತು ಮರಾಠಿಯಲ್ಲಿ ‘ಶಿವಚರಿತ್ರ ವೃತ್ತ ಸಂಗ್ರಹ’ ಹೊರಬಂದವು. ಇವರು ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದರು. ಜೊತೆಗೆ ಶಿಕ್ಷಕ ವೃತ್ತಿಯನ್ನು ಕೈಗೊಂಡರು.

೧೯೩೯ರಲ್ಲಿ ಪಾಂಡುರಂಗರಾಯರ ಶಾಸನ ವ್ಯಾಸಂಗದ ಹವ್ಯಾಸಕ್ಕೊಂದು ನೆಲೆಸಿಕ್ಕಿತು. ಅದೇ ವರ್ಷ ಅವರು ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಮದರಾಸಿನ ಶಾಸನ ವಿಜ್ಞಾನ ವಿಭಾಗದಲ್ಲಿ ಸೇರಿದರು. ಇವರಿಗೆ ಈ ಉದ್ಯೋಗ ದೊರೆತುದು ಇವರು ಈವರೆಗೆ ಪಟ್ಟ ಪರಿಶ್ರಮದ ಫಲ. ಆಗ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಕೆ.ಎನ್. ದೀಕ್ಷಿತರವರು ಶಾಸನ ವಿಜ್ಞಾನದಲ್ಲಿ ಇವರು ಸಾಧಿಸಿದ ಪ್ರಗತಿಯನ್ನು ಮೆಚ್ಚಿ ಈ ಉದ್ಯೋಗವನ್ನು ಕೊಡಮಾಡಿದರು. ಇಲ್ಲಿಯವರೆಗೆ ಸ್ವಸಂತೋಷಕ್ಕಾಗಿ ಹವ್ಯಾಸವೆಂಬಂತೆ ಮಾಡುತ್ತಿದ್ದ ಶಾಸನಗಳ ಅಭ್ಯಾಸಕ್ಕೆ ಒಂದು ನಿಶ್ಚಿತವಾದ ಗುರಿ ದೊರೆತಂತಾಯಿತು. ದೇಶದ ತುಂಬ ಹರಡಿರುವ ವಿವಿಧ ಭಾಷೆಗಳಲ್ಲಿರುವ ಅಸಂಖ್ಯ ಶಾಸನಗಳನ್ನು ಅಭ್ಯಸಿಸುವ, ಪ್ರಕಟಿಸುವ ಅವಕಾಶ ದೊರೆಯಿತು. ಪಾಂಡುರಂಗ ರಾಯರು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅವರ ಅಭ್ಯಾಸದ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಯಿತು. ಭಾಷೆ, ಶಬ್ದಶಾಸ್ತ್ರ, ಸಾಹಿತ್ಯ, ಚರಿತ್ರೆ, ಸಂಸ್ಕೃತಿ ಹೀಗೆ ಹಲವು ಮುಖಗಳಲ್ಲಿ ಅವರ ಶಾಸನಗಳ ಅಭ್ಯಾಸ ಕವಲೊಡೆಯಿತು. ಮುಂದಿನ ವರ್ಷವೇ ಮದರಾಸಿನಲ್ಲಿಯ ಶಾಸನವಿಜ್ಞಾನ ವಿಭಾಗವು ಎರಡನೆ ಮಹಾಯುದ್ಧದ ಕಾರಣದಿಂದಾಗಿ ಉದಕಮಂಡಲಕ್ಕೆ ಸ್ಥಳಾಂತರಿಸಲ್ಪಟ್ಟಿತು. ಊಟಿಯ ತಂಪು ಹವೆ, ಅಲ್ಲಿಯ ರಮ್ಯ, ಶಾಂತ ವಾತಾವರಣ ಇವರ ಅಭ್ಯಾಸಕ್ಕೆ ಇನ್ನಷ್ಟು ಪುಟಕೊಟ್ಟವು.

ಪಾಂಡುರಂಗರಾಯರು ಊಟಿಯಲ್ಲಿ ಹದಿನೇಳು ವರ್ಷಗಳ ಕಾಲವಿದ್ದರು. ಇದು ಅವರ ಜೀವನದ ಅತ್ಯಂತ ಮಹತ್ವದ, ಕಾರ್ಯಶೀಲ ಮತ್ತು ಫಲಪ್ರದವಾದ ಕಾಲ ಎನ್ನಬಹುದು. ಇಲ್ಲಿ ಅವರಿಗೆ ದೊರೆತ ವಿಶಿಷ್ಟ ಅನುಕೂಲತೆಗಳು ಎರಡು: ದೇಶದಲ್ಲಿಯ ಶ್ರೇಷ್ಠ ಸಜ್ಜನ ವಿದ್ವಾಂಸರ ಸಹವಾಸ ಮತ್ತು ವಿವಿಧ ಭಾಷೆಗಳ ಅಪಾರ ಶಾಸನ ಸಂಗ್ರಹ. ಊಟಿಯ ಕಾರ್ಯಾಲಯವೆಂದರೆ ಒಂದು ಶಾಸನ ಸಾಗರ. (ಈ ಕಾರ್ಯಾಲಯವು ೧೯೬೬ರಿಂದ ಮೈಸೂರಿನಲ್ಲಿ ಕೆಲಸ ಮಾಡುತ್ತಿದೆ.) ಪಾಂಡುರಂಗರಾಯರು ಹಿರಿಯರ ಮಾರ್ಗದರ್ಶನದಲ್ಲಿ ದಣಿವಿಲ್ಲದೆ ದುಡಿದರು. ಅನೇಕ ಆಣಿಮುತ್ತುಗಳನ್ನು ಹೆಕ್ಕಿ ತೆಗೆದು ಲೇಖನ, ಗ್ರಂಥಗಳ ರೂಪದಲ್ಲಿ ಸರಸ್ವತಿಯ ಕೊರಳ ಹಾರವಾಗಿ ಪೋಣಿಸಿದರು. ಹುಮ್ಮಸ್ಸಿನ ತರುಣ ಸಂಶೋಧಕರಾಗಿ ಸೇರಿದ ಇವರು ಪರಿಪಕ್ವ ವಿದ್ವಾಂಸರಾಗಿ, ನುರಿತ ಬರಹಗಾರರಾಗಿ ಹೊರಬಂದರು.

ಊಟಿಯ ಕಾರ್ಯಾಲಯ ಒಂದು ಚಿಕ್ಕ ಭಾರತ ವಿದ್ದಂತಿದ್ದಿತು. ಅಲ್ಲಿ ಕೆಲಸ ಮಾಡುವವರಲ್ಲಿ ಬಂಗಾಲಿ, ಪಂಜಾಬಿ, ಕನ್ನಡ, ತೆಲುಗು, ತಮಿಳು, ಮಲೆಯಾಳಿ ಜನರಿದ್ದರು. ವಿವಿಧ ಭಾಷೆಗಳನ್ನಾಡುವ, ವಿವಿಧ ರೀತಿ ನೀತಿಗಳ ಜನರೊಡನೆ ವಾಸಿಸುವ, ವ್ಯವಹರಿಸುವ ಅವಕಾಶ, ಇವರ ಜೀವನ ದೃಷ್ಟಿಯು ವಿಶಾಲವಾಗುವುದಕ್ಕೆ ಸಹಾಯಕವಾಯಿತು. ಅಭ್ಯಾಸದಲ್ಲಿ ಸಹಾಯಕ ವಾಗುವುದರ ಜೊತೆಗೆ ನಿತ್ಯ ಜೀವನದಲ್ಲಿ ಸಹಾನುಭೂತಿ, ಔದಾರ್ಯ, ಸಹನೆ, ಸ್ನೇಹಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಯಿತು. ಪಾಂಡುರಂಗರಾಯರಲ್ಲಿ ಈ ಗುಣಗಳು ಪೂರ್ಣವಾಗಿ ರೂಢಿಗೊಂಡು, ಅವರ ಬರಹಗಳಲ್ಲಿಯೂ ಅವುಗಳ ಪ್ರಭಾವವನ್ನು ಕಾಣಬಹುದು.

ಊಟಿಯ ಕಾರ್ಯಾಲಯದಲ್ಲಿಯ ಕಾರ್ಯ ವಿಧಾನದ ಇನ್ನೊಂದು ಮಹತ್ವದ ಅಂಶವೆಂದರೆ ಅಲ್ಲಿ ಕೆಲಸ ಮಾಡುವವರು ಪ್ರತಿವರ್ಷ ನಿರ್ದಿಷ್ಟ ಅವಧಿ ಯವರೆಗೆ ಭಾರತದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುವುದು. ಶಾಸನಗಳ ಸಂಗ್ರಹಕ್ಕಾಗಿ ಇಂಥ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರೂ ಒಂದೊಂದು ಪ್ರವಾಸವೂ ಒಂದೊಂದು ಶಿಕ್ಷಣವೇ ಆಗುತ್ತಿತ್ತು. ಬೇರೆ ಬೇರೆ ಪ್ರದೇಶಗಳು, ವಿಧ ವಿಧವಾದ ಜನರ ಭಾಷೆಗಳು, ಆಚಾರ-ವಿಚಾರಗಳು ಎಲ್ಲ ಪರಿಚಯವಾಗುವುದರ ಜೊತೆಗೆ ಸಮಗ್ರ ದೇಶದ ಚರಿತ್ರೆ, ಅದರ ಸಂಸ್ಕೃತಿಯ ವೈವಿಧ್ಯ, ವೈಶಿಷ್ಟ್ಯ ಇವುಗಳ ಅಭ್ಯಾಸವನ್ನು ಮಾಡಲು ವಿಪುಲ ಸಾಮಗ್ರಿ ದೊರೆಯುತ್ತಿದ್ದವು. ಇವು ಆತ್ಮವಿಶ್ವಾಸಕ್ಕೆ, ಹೃದಯ ವೈಶಾಲ್ಯಕ್ಕೆ ಪೂರಕವಾದವು. ೧೯೪೭ರಲ್ಲಿ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆ ಉತ್ಖನನವನ್ನು ವ್ಯವಸ್ಥೆಮಾಡಿತು. ಭೂಮಿಯನ್ನು ಅಗೆದು ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿದ್ದ ಜನಜೀವನ ಮತ್ತು ರಾಜ್ಯಗಳ ಸಾಕ್ಷ್ಯಸಾಮಗ್ರಿಯನ್ನು ಹುಡುಕುವ ಕೆಲಸ ನಡೆಯಿತು. ಪಾಂಡುರಂಗರಾಯರು ಇದರಲ್ಲಿ ಭಾಗವಹಿಸಿದರು.

ಪಾಂಡುರಂಗರಾಯರು ಕಾರ್ಯ ನಿಮಿತ್ತವಾಗಿ ದೇಶದ ಅನೇಕ ಭಾಗಗಳಲ್ಲಿ ತಿರುಗಾಡಿದರಾದರೂ ಅಂದು ಮುಂಬಯಿ ಕರ್ನಾಟಕ ಎಂದು ಕರೆಯಲ್ಪಡುತ್ತಿದ್ದ ಉತ್ತರ ಕರ್ನಾಟಕವು ಅವರ ಕಾರ್ಯಕ್ಷೇತ್ರವಾಗಿದ್ದಿತು. ಈ ಭಾಗದಲ್ಲಿಯ ಶಾಸನಗಳನ್ನು ಸಂಗ್ರಹಿಸುವುದು ಅವರ ಕಾರ್ಯವಾಗಿದ್ದಿತು. ಈ ಭಾಗದಲ್ಲಿ  ಪ್ರತಿವರ್ಷ ಸಂಚರಿಸಿ ಸಹಸ್ರಾರು ಶಾಸನಗಳನ್ನು, ತಾಮ್ರಪತ್ರಗಳನ್ನು ಸಂಗ್ರಹಿಸಿದರು. ಅವುಗಳನ್ನು ಅಭ್ಯಾಸಮಾಡಿ, ವಾರ್ಷಿಕ ವರದಿಗಳಿಗಾಗಿ ಅಣಿಗೊಳಿಸಿದರು. ಹೆಚ್ಚು ಮಹತ್ವ ವಾದವುಗಳನ್ನು ಸಂಪಾದಿಸಿ ಲೇಖನ ರೂಪದಲ್ಲಿ ಪ್ರಕಟಿಸಿದರು. ಇವರ ದೃಷ್ಟಿಯಲ್ಲಿ ಒಂದೊಂದು ಶಾಸನವೂ ಒಂದೊಂದು ಬೆಳಕಿನ ಕಿರಣ, ಪ್ರಾಚೀನತೆಯ ಕತ್ತಲೆಯನ್ನು ಸೀಳಿಕೊಂಡು ಅಂದಿನ ಸ್ಥಿತಿಗತಿಗಳ ದಿಗ್ದರ್ಶನವನ್ನು ಮಾಡಿಕೊಡುವ ಕಿರಣ.

ಪಾಂಡುರಂಗರಾಯರಿಗೆ ಭಾಷೆಗಳ ಅಭ್ಯಾಸದಲ್ಲಿ ಉತ್ಸಾಹ ಹೆಚ್ಚು. ಈ ಅವಧಿಯಲ್ಲಿ ಅವರು ಸಂಸ್ಕೃತ ಕನ್ನಡಗಳ ಜೊತೆಗೆ, ತಮಿಳು, ತೆಲುಗುಗಳಲ್ಲಿ ಪ್ರಭುತ್ವವನ್ನು ಗಳಿಸಿ ಆ ಭಾಷೆಗಳಲ್ಲಿ ಶಾಸನಗಳನ್ನು ಸಂಪಾದಿಸಿ ಪ್ರಕಟಿಸಿದರು. ಊಟಿಯ ಕಾರ್ಯಾಲಯದ ಪ್ರಕಟಣೆ ಗಳಾದ ವಾರ್ಷಿಕ ವರದಿಗಳು, ‘ಎಪಿಗ್ರಾಫಿಯಾ ಇಂಡಿಯಾ’ ಎಂಬ ತ್ರೈಮಾಸಿಕ ಸಂಶೋಧನ ಸಂಚಿಕೆ. ‘ದಕ್ಷಿಣ ಭಾರತದ ಶಾಸನಗಳು’ ಎಂಬ ಶಾಸನ ಸಂಪುಟಗಳ ಮಾಲಿಕೆ ಇವೆಲ್ಲವುಗಳ ಪ್ರಕಟಣೆಯಲ್ಲಿ ಪಾಂಡುರಂಗ ರಾಯರು ಪರಿಶ್ರಮವಹಿಸಿದರು.

ಹೊಸ ಆಯಾಮ

೧೯೫೭ರಲ್ಲಿ ಪಾಂಡುರಂಗರಾಯರ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆ ಉಂಟಾಯಿತು. ಅವರನ್ನು ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಚೀನ ಭಾರತ ಇತಿಹಾಸ ಹಾಗೂ ಸಂಸ್ಕೃತಿ ಇಲಾಖೆಯಲ್ಲಿ “ರೀಡರ್” ಆಗಿ ನೇಮಿಸಲಾಯಿತು. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವುದು ಅವರಿಗೆ ಪ್ರಿಯವಾದ ವಿಷಯವಾಗಿತ್ತು. ಅವರು ಭಾರತ ಸರ್ಕಾರದ ಶಾಸನ ವಿಜ್ಞಾನ ವಿಭಾಗವನ್ನು ಬಿಟ್ಟು ಕರ್ನಾಟಕ ವಿಶ್ವವಿದ್ಯಾನಿಲ ಯಕ್ಕೆ ಬಂದರು. ಇದರಿಂದ ಅವರ ಸಂಶೋಧನಾ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆಯಿತು. ಇದುವರೆಗೆ ಶಾಸನ ವಿಜ್ಞಾನಕ್ಕೆ ಸೀಮಿತವಾಗಿದ್ದ ಇವರ ಕಾರ್ಯವಿಧಾನ ಈಗ ಇಡೀ ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಗೆ ವಿಸ್ತರಿಸಿತು. ಜೊತೆಗೆ ಅಧ್ಯಾಪನವನ್ನು ಕೈಕೊಂಡುದರಿಂದ ಅವರ ಅಭ್ಯಾಸ ಇನ್ನಷ್ಟು ಆಳವೂ ವ್ಯಾಪಕವೂ ಆಯಿತು. ೧೯೬೨ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಭಾರತ ಚರಿತ್ರೆ ಮತ್ತು ಸಂಸ್ಕೃತಿ ವಿಭಾಗದ ಮುಖ್ಯಸ್ಥರಾದರು ಮತ್ತು ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರಾದರು. ಈ ಅವಕಾಶವನ್ನು ಬಳಸಿಕೊಂಡು ಪಾಂಡುರಂಗರಾಯರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಭಾರತೀಯ ಚರಿತ್ರೆ, ಶಾಸನ ವಿಜ್ಞಾನ, ಕರ್ನಾಟಕದ ಚರಿತ್ರೆಗಳ ಅಭ್ಯಾಸಕ್ಕಾಗಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಟ್ಟರು. ಕನ್ನಡ ಸಂಶೋಧನ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಿದರು.

ಪಾಂಡುರಂಗರಾಯರು ಅಂದಿನ ಎಂ.ಎ. ಅಭ್ಯಾಸ ಪದ್ಧತಿಯಲ್ಲಿ ಪುರಾತತ್ವ, ಶಾಸನ ವಿಜ್ಞಾನ, ನಾಣ್ಯಶಾಸ್ತ್ರ ಈ ವಿಷಯಗಳನ್ನು ಅಳವಡಿಸಿ ಇತಿಹಾಸದ ಅಭ್ಯಾಸವು ಹೆಚ್ಚು ಅರ್ಥಪೂರ್ಣವೂ, ಉಪಯುಕ್ತವೂ ಆಗುವಂತೆ ಮಾಡಿದರು. ಕನ್ನಡ ನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನ ಚರಿತ್ರೆ ತಿಳಿಯಬೇಕಾದುದು ಅಗತ್ಯವಲ್ಲವೆ? ಪಾಂಡುರಂಗರಾಯರು ಬಿ.ಎ.ಅಭ್ಯಾಸ ವಿಷಯಗಳಲ್ಲಿ ಇದನ್ನು ಸೇರಿಸಿದರು. ಈ ಸಂಬಂಧದಲ್ಲಿ ಇವರು ಮಾಡಿದ ಇನ್ನೊಂದು ಮಹತ್ವದ ಕಾರ್ಯವೆಂದರೆ ಶಾಸನ ವಿಜ್ಞಾನ ವಿಶೇಷ ಅಧ್ಯಯನದ ಏರ್ಪಾಡು. ನಮ್ಮ ದೇಶದ ರಾಜಕೀಯ ಚರಿತ್ರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಅರಿಯಲು, ಈ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳಲು, ಶಾಸನಗಳ ಅಭ್ಯಾಸ ಅತ್ಯಗತ್ಯ. ಹೀಗಿದ್ದರೂ ಶಾಸನ ವಿಜ್ಞಾನದ ಅಭ್ಯಾಸದಲ್ಲಿ ನುರಿತವರ ಸಂಖ್ಯೆ ಬಹಳ ಕಡಿಮೆ. ಇದರಿಂದ ಶಾಸನಗಳ ಅಭ್ಯಾಸ, ಸಂಶೋಧನೆ ಕುಂಠಿತವಾಗಿರುವುದು ಸಹಜ. ಈ ಕೊರತೆಯನ್ನು ಹೋಗಲಾಡಿಸಲು ಯುವ ವಿದ್ಯಾರ್ಥಿ ಗಳಲ್ಲಿ ಶಾಸನಗಳಲ್ಲಿ ಆಸ್ಥೆಯನ್ನು ಹುಟ್ಟಿಸಿ ಅವರು ಈ ಅಭ್ಯಾಸವನ್ನು ಕೈಕೊಳ್ಳಬೇಕೆಂದು ಯೋಚಿಸಿದರು. ಕ್ರಿ.ಪೂ.ಮೂರನೆಯ ಶತಮಾನದಿಂದ ಈಚಿನ ಕಾಲದವರೆಗೆ ಲಿಪಿಗಳ ವಿಕಾಸ, ಭಾಷೆ, ಸಾಹಿತ್ಯ, ಚರಿತ್ರೆ, ಸಂಸ್ಕೃತಿಗಳಿಗೆ ಸಂಬಂಧಿಸಿದ ಶಾಸನಗಳ ಅಭ್ಯಾಸವನ್ನು ಅಳವಡಿಸಿ ಒಂದು ಪಠ್ಯಕ್ರಮವನ್ನು ತಯಾರಿಸಿ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭಿಸಿದರು. ಈ ವ್ಯಾಸಂಗ ಬೇಗನೆ ಜನಪ್ರಿಯವಾಯಿತು. ಕನ್ನಡ, ಸಂಸ್ಕೃತ, ಭಾರತೀಯ ಇತಿಹಾಸದ ವಿದ್ಯಾರ್ಥಿಗಳು ಈ ಹೊಸ ವಿಷಯವನ್ನು ಉತ್ಸಾಹದಿಂದ ಅಭ್ಯಾಸ ಮಾಡತೊಡಗಿದರು. ಈಗ ೧೪ ವರ್ಷಗಳಿಂದ ಈ ತರಗತಿಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ. ಅನೇಕ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿಯನ್ನು ಪಡೆದಿದ್ದುದಲ್ಲದೆ ಕೆಲವರು ಶಾಸನಗಳ ಹೆಚ್ಚಿನ ಅಭ್ಯಾಸವನ್ನು ಕೈಗೊಂಡಿದ್ದಾರೆ.

ಈ ಅಭ್ಯಾಸಕ್ರಮದ ಆರಂಭದಿಂದ ಇನ್ನೊಂದು ಫಲಪ್ರದ ಪರಿಣಾಮ ಉಂಟಾಯಿತು. ಕರ್ನಾಟಕದ ಚರಿತ್ರೆ, ಸಂಸ್ಕೃತಿಗಳಲ್ಲಿ ಸಂಶೋಧನೆಗೆ ಹೆಚ್ಚಿನ ಚೈತನ್ಯ ದೊರೆಯಿತು. ಅನೇಕ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆಯನ್ನು ಕೈಗೊಂಡರು. ಕರ್ನಾಟಕದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬೆಳವಣಿಗೆಗೆ ಇದು ಪಾಂಡುರಂಗರಾಯರ ವಿಶಿಷ್ಟ ಕೊಡುಗೆ ಎಂದು ಹೇಳಬಹುದು.

ಇದೇ ಅವಧಿಯಲ್ಲಿ ಪಾಂಡುರಂಗರಾಯರು ಕನ್ನಡ ಸಂಶೋಧನಾ ಸಂಸ್ಥೆ ಮತ್ತು ಅದರ ಪ್ರಾಚ್ಯ ಸಂಗ್ರಹಾಲಯದ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದರು. ಉತ್ಖನನ, ಶಾಸನ, ನಾಣ್ಯ, ಹಸ್ತಪ್ರತಿಗಳ ಸಂಗ್ರಹ, ಪ್ರಕಟಣೆ, ಸಂಶೋಧನಾ ಉಪನ್ಯಾಸಗಳು ಹೀಗೆ ಬಹುಮುಖವಾಗಿ ಕಾರ್ಯಕ್ರಮಗಳನ್ನು ರೂಪಿಸಿದರು. ಹಳ್ಳೂರು, ತೆಕ್ಕಲಕೋಟ ಎಂಬ ಪ್ರಾಗೈತಿಕಹಾಸಿಕ ನೆಲೆಗಳ ಉತ್ಖನನಗಳಲ್ಲಿ ಸಂಶೋಧನ ಸಂಸ್ಥೆ ಭಾಗವಹಿಸಿತು. ಶಾಸನಗಳ ಸಂಪುಟಗಳು ಹೊರಬಂದವು. ವಿದ್ವಾಂಸರನ್ನು ಕರೆಯಿಸಿ ಭಾರತೀಯ ಚರಿತ್ರೆ, ಪುರಾತತ್ವ ಕಲೆ ಮುಂತಾದ ವಿಷಯಗಳ ಬಗೆಗೆ ಪ್ರೌಢವಾದ ಉಪನ್ಯಾಸಗಳನ್ನೇರ್ಪಡಿಸಿ ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ಪ್ರಾಚ್ಯವಸ್ತು ಸಂಗ್ರಹಾಲಯದ ನವೀಕರಣ ಪಾಂಡುರಂಗರಾಯರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹತ್ವದ ಸೇವೆ ಎನ್ನಬಹುದು. ಪುರಾತತ್ವ, ಚರಿತ್ರೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಮಹತ್ವದ ವಸ್ತು ಸಂಗ್ರಹವನ್ನು ಹೆಚ್ಚಿಸಿದರು. ವಸ್ತು ಸಂಗ್ರಹಾಲಯದಲ್ಲಿ ಆಸಕ್ತಿಯನ್ನುಂಟುಮಾಡುವ, ಹೊಸ ಹೊಸ ಸಂಗತಿಗಳನ್ನು ತಿಳಿಸಿಕೊಡುವ ವಸ್ತುಗಳಿರಬೇಕು. ಆದರೆ ಇಷ್ಟೇ ಸಾಲದು, ಚರಿತ್ರೆ ಹೆಚ್ಚಾಗಿ ತಿಳಿಯದವರಿಗೂ ವಿಷಯಗಳು ತಿಳಿಯುವಂತೆ ವಸ್ತುಗಳನ್ನು ನೋಡಲು ಉತ್ಸಾಹ ಬರುವಂತೆ ಅದನ್ನು ಜೋಡಿಸಿಡಬೇಕು. ಅವುಗಳ ವಿಷಯವನ್ನು ವಿವರಿಸಿ ಹೇಳುವವರಿರಬೇಕು. ಪಾಂಡುರಂಗರಾಯರು ವಸ್ತು ಸಂಗ್ರಹಾಲಯದಲ್ಲಿ ಇಷ್ಟಕ್ಕೆಲ್ಲ ವ್ಯವಸ್ಥೆ ಮಾಡಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಚರಿತ್ರೆ, ಸಂಸ್ಕೃತಿಗಳ ಅಭ್ಯಾಸಕ್ಕೆ ವಿಶೇಷ ಅವಕಾಶವನ್ನು ಒದಗಿಸಿಕೊಡಬೇಕೆಂಬುದು ಅವರ ಮಹದಾಕಾಂಕ್ಷೆ ಯಾಗಿದ್ದಿತು. ಅದನ್ನು ಕಾರ್ಯಗತಗೊಳಿಸಲು ಅವರು ಹಲವು ವಿಧವಾಗಿ ಪ್ರಯತ್ನಿಸಿದರು. ಇಂಥ ಪ್ರಯತ್ನಗಳಲ್ಲಿ ಮಹತ್ವದ್ದೆಂದರೆ ಹಲವು ಸಂಪುಟಗಳಲ್ಲಿ ಕರ್ನಾಟಕ ಚರಿತ್ರೆಯ ರಚನೆ. ಇದಕ್ಕೆ ಪೂರ್ವಭಾವಿಯಾಗಿ ತಮ್ಮ ಸಹೋದ್ಯೋಗಿಗಳ ಜೊತೆಗೆ ಆರಂಭಕಾಲದಿಂದ ಈಚಿನವರೆಗಿನ ಚರಿತ್ರೆಯನ್ನೊಳಗೊಂಡ ಕರ್ನಾಟಕದ ಇತಿಹಾಸ ಎಂಬ ಗ್ರಂಥವನ್ನು ಪ್ರಕಟಿಸಿದರು. ಈ ಅವಧಿಯಲ್ಲಿ ಬಸವೇಶ್ವರರ ಜೀವನ, ಕಾಲ ಕಾರ್ಯಗಳಲ್ಲಿ ಸಂಶೋಧನೆಯನ್ನು ಕೈಗೊಂಡು ಪೂರೈಸಿದರು. ‘ಬಸವೇಶ್ವರ ಅಂಡ್ ಹಿಸ್ ಟೈಮ್ಸ್’ ಎಂಬ ಇಂಗ್ಲಿಷ್ ಗ್ರಂಥ ಈ ಸಂಶೋಧನೆಯ ಫಲ.

ನಿವೃತ್ತಿಯ ನಂತರವೂ ಅಧ್ಯಾಪಕರು

ಈ ಗ್ರಂಥ ಪ್ರಕಟವಾದ ಎರಡು ವರ್ಷಗಳ ನಂತರ ೧೯೭೦ರಲ್ಲಿ ಪಾಂಡುರಂಗರಾಯರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದರು. ಆದರೆ ಅಧ್ಯಾಪನ ಮತ್ತು ಸಂಶೋಧನೆಗಳಿಗೆ ವಿರಾಮ ಉಂಟಾಗಲಿಲ್ಲ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಇವರನ್ನು ಗೌರವ ಪ್ರಾಧ್ಯಾಪಕರನ್ನಾಗಿ ನೇಮಿಸಿತು. ಇದರಿಂದಾಗಿ ಇವರು ಎಂ.ಎ.ವಿದ್ಯಾರ್ಥಿಗಳಿಗೆ ಪಾಠ ಹೇಳುವುದು, ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದು ಮತ್ತು ತಮ್ಮ ಲೇಖನ ವೃತ್ತಿಯನ್ನು ಮುಂದುವರೆಸುವುದು ಸಾಧ್ಯವಾಯಿತು. ಮೂರು ವರ್ಷ ಗಳ ಕಾಲ ಈ ಹುದ್ದೆಯಲ್ಲಿದ್ದರು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು, ಇವರನ್ನು ಇನ್ನೂ ಒಂದು ಅವಧಿ ಯವರೆಗೆ ಈ ಹುದ್ದೆಯಲ್ಲಿ ಮುಂದುವರೆಸಿತು. ಆದರೆ ಪಾಂಡುರಂಗರಾಯರು ಅದನ್ನು ಸ್ವೀಕರಿಸುವ ಮೊದಲೆ ೧೯೭೪ರ ಮಾರ್ಚ್ ಐದರಂದು ತೀರ ಅನಿರೀಕ್ಷಿತವಾಗಿ ದೈವಾಧೀನರಾದರು.

ಪಾಂಡುರಂಗರಾಯರು ಭೌತಿಕವಾಗಿ ಇಲ್ಲ ವಾದರು. ಆದರೆ ಅವರ ನಿಕಟವರ್ತಿಗಳಿಗೆ, ವಿದ್ಯಾರ್ಥಿ ಗಳಿಗೆ, ಇವರು ಇಂದಿಗೂ ಸ್ಫೂರ್ತಿಯ ಸೆಲೆ. ಭಾರತೀಯ ಶಾಸನ ವಿಜ್ಞಾನ, ಚರಿತ್ರೆ, ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರಗಳಲ್ಲಿ ಇವರದು ಎಂದೂ ಮರೆಯಲಾಗದ ಹೆಸರು. ಇವರು ಸಂಶೋಧನೆಯನ್ನು ತಪಸ್ಸೆಂಬಂತೆ ಸಾಧಿಸಿಕೊಂಡು ಬಂದರು. ಅದರ ಫಲವನ್ನು ತಾವು ಉಂಡು ಇತರರಿಗೂ ಹಂಚಿದರು. ಸಂಶೋಧನೆಯ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದರು.

ಸಾಧನೆ

ಪಾಂಡುರಂಗರಾವ್ ದೇಸಾಯಿಯವರು ತಮ್ಮ ವೃತ್ತಿಯ ಅವಧಿಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು, ಸಂಶೋಧನ ಗ್ರಂಥಗಳನ್ನು, ಲೇಖನಗಳನ್ನು ಬರೆದರು. ಸಂಖ್ಯಾದೃಷ್ಟಿಯಿಂದ ಹೇಳಬೇಕಾದರೆ ಅವರು ರಚಿಸಿದುದು ೧೫ ಕನ್ನಡ ಕೃತಿಗಳು, ೧೦ ಇಂಗ್ಲಿಷ್ ಗ್ರಂಥಗಳು, ಒಂದು ಮರಾಠಿ ಗ್ರಂಥ. ಇಂಗ್ಲಿಷ್, ಕನ್ನಡ, ಮರಾಠಿಗಳಲ್ಲಿ ಅವರು ಸುಮಾರು ೪೦೦ರಷ್ಟು ಲೇಖನಗಳನ್ನು ಬರೆದರು. ಯಾವ ಮಾನದಂಡದಿಂದಾದರೂ ಇದೊಂದು ಅಪೂರ್ವ ಸಾಧನೆಯೇ ಸರಿ.

ಪಾಂಡುರಂಗರಾಯರ ಗ್ರಂಥಗಳಲ್ಲಿ ಶಾಸನ ಸಂಗ್ರಹ ಮತ್ತು ಸಂಪಾದನೆಗೆ ಅಗ್ರಪಟ್ಟ. ವಿದ್ಯಾರ್ಥಿ ದೆಸೆಯಿಂದಲೇ ಅವರು ಆರಂಭಿಸಿದ ಈ ಕಾರ್ಯ ಅವರ ವೃತ್ತಿಯಲ್ಲಿ ಪರಿಣತಿಯ ತುಟ್ಟತುದಿಯನ್ನು ಮುಟ್ಟಿತು. ಈ ಕ್ಷೇತ್ರದಲ್ಲಿ ಅವರ ಪ್ರಮುಖ ಪ್ರಕಟಣೆ ಎಂದರೆ ‘ದಕ್ಷಿಣ ಭಾರತದ ಶಾಸನಗಳು’ ಎಂಬ ಮಾಲಿಕೆಯಲ್ಲಿಯ ೧೫ನೆಯ ಸಂಪುಟ. ಕ್ರಿ.ಶ.೬ನೇ ಶತಮಾನದಿಂದ ೧೬ನೇ ಶತಮಾನದವರೆಗಿನ ೭೦೦ಕ್ಕೂ ಹೆಚ್ಚು ಶಾಸನಗಳನ್ನು ಅವರು ಇಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇದಕ್ಕೊಂದು ಅಭ್ಯಾಸಪೂರ್ಣವಾದ ಪ್ರಸ್ತಾವನೆಯನ್ನು ಜೋಡಿಸಿದ್ದಾರೆ. ಕರ್ನಾಟಕದ ಚರಿತ್ರೆ, ಸಾಹಿತ್ಯ, ಸಂಸ್ಕೃತಿಗಳನ್ನು ಅಭ್ಯಸಿಸುವವರಿಗೆ ಈ ಸಂಪುಟ ಒಂದು ರತ್ನಭಂಡಾರ.

ಕರ್ನಾಟಕದ ಹೊರಗಿನ ಪ್ರದೇಶಗಳಲ್ಲಿಯ ಕನ್ನಡ ಶಾಸನಗಳನ್ನು ಬೆಳಕಿಗೆ ತಂದದ್ದು ಇವರ ಶಾಸನ ಸಂಶೋಧನೆಯ ವೈಶಿಷ್ಟ್ಯ. ಒಂದು ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ವಿಷಯ ಎಲ್ಲರಿಗೂ ತಿಳಿದುದೇ. ಇಂದು ಈ ಕನ್ನಡನಾಡು ಪ್ರಾದೇಶಿಕವಾಗಿ ಸಂಕುಚಿತವಾಗಿದ್ದರೂ ಈ ವಿಶಾಲ ಪ್ರದೇಶದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಅನೇಕ ಶಾಸನಗಳನ್ನು ಇವರು ಮನಗಂಡಿದ್ದರು. ಇವುಗಳನ್ನು ಬೆಳಕಿಗೆ ತಂದರೆ ಕನ್ನಡ ನಾಡಿನ ಬಗೆಗೆ ಅಪೂರ್ವವಾದ ವಿಷಯಗಳು ತಿಳಿದುಬರುವುವು ಎಂದು ದೃಢವಾಗಿ ನಂಬಿದ್ದ ಅವರು ಈ ದಿಶೆಯಲ್ಲಿ ಕಾರ್ಯ ಪ್ರವೃತ್ತರಾದರು. ಅಂದಿನ ಹೈದರಾಬಾದ್ ಮತ್ತು ಈಗಿನ ಆಂಧ್ರಪ್ರದೇಶ ಸರಕಾರದ ಪುರಾತತ್ವ ವಿಭಾಗದ ಸಹಕಾರದಿಂದ ಮೂರು ಶಾಸನ ಗ್ರಂಥಗಳನ್ನು ಹೊರತಂದರು. ಕನ್ನಡನಾಡಿನ, ಕನ್ನಡ ಭಾಷೆಯ ವಿಸ್ತಾರವನ್ನು ತಿಳಿಸುವುದರ ಜೊತೆಗೆ ಚಾರಿತ್ರಿಕ ದೃಷ್ಟಿಯಿಂದ ಮಹತ್ವದ ಸಂಗತಿಗಳನ್ನು ಈ ಸಂಪುಟಗಳು ಹೊರತಂದಿವೆ ಎಂಬುದು ಅನುಭವದ ಮಾತಾಗಿದೆ. ಇವರ ‘ಶಾಸನ ಪರಿಚಯ’ ಇವರು ವಿದ್ಯಾರ್ಥಿ ದೆಸೆಯಲ್ಲಿ ಸಂಗ್ರಹಿಸಿದ ಶಾಸನಗಳ ಸಂಪುಟ. ರಾಯಚೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿಯ ಹಲವು ಮಹತ್ವದ ಶಾಸನಗಳನ್ನು ಈ ಗ್ರಂಥವು ಒಳಗೊಂಡಿದೆ.

ಪಾಂಡುರಂಗರಾಯರ ಮೊದಲ ಸಂಶೋಧನ ಗ್ರಂಥ ‘ಕರ್ನಾಟಕದ ಕಲಚೂರಿಗಳು’. ಕರ್ನಾಟಕದ ರಾಜಕೀಯ, ಧಾರ್ಮಿಕ ಚರಿತ್ರೆಯಲ್ಲಿ ಕಲಚೂರಿ ಮನೆತನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ಮನೆತನಕ್ಕೆ ಸಂಬಂಧಿಸಿದ ಎಲ್ಲ ಶಾಸನ, ಸಾಹಿತ್ಯ ಕೃತಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಕಲಚೂರಿ ಮನೆತನದ ಬಗೆಗೆ, ವಿಶೇಷವಾಗಿ ಬಸವೇಶ್ವರರ ಕಾಲದಲ್ಲಿ ರಾಜನಾಗಿದ್ದ ಬಿಜ್ಜಳನ ಚಟುವಟಿಕೆಗಳನ್ನು ಕುರಿತು ಅಧಿಕೃತ ಗ್ರಂಥವನ್ನು ಪ್ರಕಟಿಸಿದರು.

‘ಜೈನಿಸಂ ಇನ್ ಸೌತ್ ಇಂಡಿಯ’ ಇವರಿಗೆ ಡಿ.ಲಿಟ್.ಪದವಿಯನ್ನು ತಂದುಕೊಟ್ಟ ಗ್ರಂಥ. ಈ ಗ್ರಂಥಕ್ಕೂ ಶಾಸನಗಳನ್ನು ಅಭ್ಯಸಿಸಿ, ವಿಶ್ಲೇಷಿಸಿ ಈ ಪ್ರದೇಶದಲ್ಲಿ ಜೈನಧರ್ಮವು ಬೆಳೆದು ಬಂದ ಬಗೆಯನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ಶಾಸನಗಳು, ರಾಜಕೀಯ ಚರಿತ್ರೆಗಷ್ಟೇ ಅಲ್ಲ, ಧರ್ಮ, ಸಂಸ್ಕೃತಿಗಳ ಅಭ್ಯಾಸಕ್ಕೂ ಮಹತ್ವದ ಸಾಮಗ್ರಿಯನ್ನು ಒದಗಿಸುತ್ತವೆ ಎಂಬುದಕ್ಕೆ ಈ ಗ್ರಂಥ ಒಂದು ಉತ್ತಮ ಉದಾಹರಣೆಯಾಗಿದೆ.

‘ಬಸವೇಶ್ವರ ಆಂಡ್ ಹಿಸ್ ಟೈಮ್ಸ್’ ಪಾಂಡುರಂಗರಾಯರ ಕೃತಿಗಳಲ್ಲಿಯೇ ಶ್ರೇಷ್ಠವಾದುದೆಂದು ಹೇಳಬಹುದು. ಈ ಗ್ರಂಥವನ್ನು ಅವರು ಬಹಳ ಪರಿಶ್ರಮ ದಿಂದ ರಚಿಸಿದರು. ಬಸವೇಶ್ವರರ ಜೀವನ, ಅವರ ಕಾಲದ ಚಾರಿತ್ರಿಕ ಘಟನೆಗಳು, ರಾಜಕೀಯ ಇವನ್ನು ಕುರಿತು ಬೇಕಾದಷ್ಟು ಸಾಮಗ್ರಿಯುಂಟು. ಆದರೆ ಚರಿತ್ರಕಾರನ ಕಷ್ಟವೆಂದರೆ ಎಷ್ಟೋಬಾರಿ ಒಂದು ಸಾಕ್ಷ್ಯಕ್ಕೂ ಇನ್ನೊಂದು ಸಾಕ್ಷ್ಯಕ್ಕೂ ವಿರೋಧವಾಗಿರುವುದು, ಯಾವುದು ಸರಿ? ನಿಜವಾಗಿ ನಡೆದದ್ದೇನು? ಅದನ್ನು ಕುರಿತು ಆ ಕಾಲದ ಹೇಳಿಕೆಗಳಲ್ಲಿ, ಮುಂದಿನವರ ಹೇಳಿಕೆಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿದ್ದರೆ ಯಾವುದನ್ನು ಒಪ್ಪಬಹುದು? ಏಕೆ? ಇವಕ್ಕೆಲ್ಲ ಉತ್ತರಗಳನ್ನು ಕಂಡುಹಿಡಿಯಬೇಕು. ಇವೆಲ್ಲವುಗಳ ತುಲನಾತ್ಮಕ ಅಭ್ಯಾಸದಿಂದ ವಿವಿಧ ಅಭಿಪ್ರಾಯಗಳನ್ನು ಹೊಂದಾಣಿಕೆ ಮಾಡಿ, ಖಚಿತವಾದ ನಿರ್ಣಯಗಳನ್ನು ಮಂಡಿಸುವುದು ಅಸಾಮಾನ್ಯ ಕೆಲಸವೇ ಸರಿ. ಇವರಿಗೆ ಬಸವೇಶ್ವರರ ಬಗೆಗೆ ಅಪಾರ ಗೌರವ. ಅದನ್ನು ಈ ಗ್ರಂಥದ ಶೈಲಿಯಲ್ಲಿಯೇ ಕಾಣಬಹುದು. ಗಮನಾರ್ಹವಾದ ವಿಷಯವೆಂದರೆ ಈ ಬಗೆಯ ಗೌರವ ಭಾವನೆಯಿಂದ ಲೇಖಕರ ಐತಿಹಾಸಿಕ ಸತ್ಯನಿಷ್ಠೆಗೆ ಧಕ್ಕೆಯೊದಗಿಲ್ಲ.

‘ಕರ್ನಾಟಕ ಚರಿತ್ರೆ’ ಪಾಂಡುರಂಗರಾಯರ ಇನ್ನೊಂದು ಗಮನಾರ್ಹ ಸಾಧನೆ. ಮೂಲ ಶಾಸನಗಳ ಆಧಾರದ ಮೇಲಿಂದ ಕರ್ನಾಟಕದ ಚರಿತ್ರೆಯನ್ನು ಬರೆಯಬೇಕೆಂಬ ಹಂಬಲ ಅವರಿಗೆ ಬಹುಕಾಲದಿಂದಲೇ ಇದ್ದಿತು. ಉದಕಮಂಡಲದ ಶಾಸನ ವಿಜ್ಞಾನ ವಿಭಾಗದಲ್ಲಿದ್ದಾಗಲೇ ಈ ಕನಸನ್ನು ಅವರು ಕಂಡಿದ್ದರು. ಅದು ೧೯೬೮ರಲ್ಲಿ ನನಸಾಯಿತು. ತಮ್ಮ ಇಬ್ಬರು ಸಹೋದ್ಯೋಗಿಗಳ ಸಹಾಯದಿಂದ ಕರ್ನಾಟಕದ ಸಮಗ್ರ ಚರಿತ್ರೆಯನ್ನು ಹೊರತರಲು ಅವರು ಸಮರ್ಥರಾದರು. ಅನೇಕ ಸಂಪುಟಗಳಲ್ಲಿ ಕರ್ನಾಟಕದ ಚರಿತ್ರೆಯನ್ನು ಪ್ರಕಟಿಸಬೇಕೆಂದು ಅವರು ಆರಂಭಿಸಿದ ಕಾರ್ಯ ಈಗ ಮುಂದುವರೆದಿದೆ.

ಪಾಂಡುರಂಗರಾಯರ ಕನ್ನಡ ಗ್ರಂಥಗಳಲ್ಲಿ ‘ವಿಜಯ ನಗರ ಸಾಮ್ರಾಜ್ಯ ಪ್ರಮುಖವಾದುದು. ವಿದ್ಯಾರ್ಥಿದೆಸೆಯಲ್ಲಿಯೇ ಇದನ್ನು ಬರೆದಿದ್ದರೂ ಇಂದಿಗೂ ಅದು ಆಧಾರ ಗ್ರಂಥವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ‘ಕನ್ನಡ ನಾಡಿನ ಚರಿತ್ರೆ’(ಸಾಮಾಜಿಕ ಚರಿತ್ರೆ) ಎಂಬ ಚಿಕ್ಕ ಪುಸ್ತಕವನ್ನೂ ಬರೆದರು. ಇವರ ‘ಭವ್ಯ ಭಾರತ ಚರಿತ್ರೆ’ಯು ಎರಡು ಭಾಗಗಳಲ್ಲಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯಪುಸ್ತಕವನ್ನೊದಗಿಸಿದೆ. ‘ಹಬ್ಬ ಹುಣ್ಣಿಮೆಗಳು’ ಎಂಬ ಪುಸ್ತಕವನ್ನು ಬರೆದು ನಮ್ಮ ಹಬ್ಬ-ಹರಿದಿನಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಿದರು.

ಕಥೆ-ಕಾದಂಬರಿಗಳು

ಪಾಂಡುರಂಗರಾಯರ ಇನ್ನೊಂದು ವಿಧದ ಕೃತಿಗಳೆಂದರೆ ಕಥೆ, ಕಾದಂಬರಿಗಳು. ಇಲ್ಲಿಯೂ ಅವರಿಗೆ ಶಾಸನಗಳೇ ಹೆಚ್ಚಾಗಿ ಆಧಾರ. ಚಾರಿತ್ರಿಕ ಅಸ್ತಿಭಾರದ ಮೇಲೆ ಸುಂದರವಾದ ಕಥೆಗಳನ್ನು ಅವರು ಹೆಣೆದಿದ್ದಾರೆ. ಅವುಗಳ ಮೂಲಕ ಕನ್ನಡ ಸಾಹಿತ್ಯವಾಹಿನಿಗೆ ಹೊಸ ಬಗೆಯ ಹೊನಲನ್ನು ಸೇರಿಸಿದ್ದಾರೆ. ಇಂಥವುಗಳಲ್ಲಿ ‘ಮಿಂಚಿದ ಮಹಿಳೆಯರು’ ಸುಭಗ ಶೈಲಿಯ ಸುಂದರ ಕೃತಿ. ಕರ್ನಾಟಕದಲ್ಲಿ ಹಿಂದೆ ಆಗಿ ಹೋದ ಹಲವಾರು ನಾರಿಯರ ನುಡಿಚಿತ್ರಗಳಿವು. ಇವರಲ್ಲಿ ಹಲವರು ಕಲಾವಿದೆಯರು, ಕೆಲವರು ದಾನಿಗಳು, ಕೆಲವರು ಧರ್ಮ ಕಲೆಗಳ ಪೋಷಕರು, ಕೆಲವರು ಆಡಳಿತಗಾರರು – ಹೀಗೆ ಸಮಾಜ ಜೀವನದಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿದ ನಾರಿಯರ ಸುಂದರ ಚಿತ್ರಗಳನ್ನು ನಿರೂಪಿಸಿದ್ದಾರೆ. ಚಿಕ್ಕ ಚಿಕ್ಕ ವಾಕ್ಯಗಳು. ಸುಲಭವಾದ ಅಚ್ಚ ಕನ್ನಡ ಶಬ್ದಗಳ ಬಳಕೆ ಇವರ ಶೈಲಿಯ ವೈಶಿಷ್ಟ್ಯ. ‘ಕುಂತಲೇಶ್ವರ’ ಕಲ್ಯಾಣ ಚಾಲುಕ್ಯರ ಅರಸನಾದ ಆರನೆಯ ವಿಕ್ರಮನನ್ನು ಕುರಿತ ಕಾದಂಬರಿ. ಶಕ ಪುರುಷನೆನ್ನಿಸಿಕೊಂಡ ಈ ಅರಸನ ಆಳ್ವಿಕೆ ಕರ್ನಾಟಕದಲ್ಲಿ ಶಾಂತಿ-ಸಮೃದ್ಧಿಯ ಕಾಲ; ಕಲೆ, ಸಾಹಿತ್ಯ, ಧರ್ಮಗಳ ಉಚ್ಛ್ರಾಯದ ಕಾಲ. ಅಂದಿನ ರಾಜಕೀಯ ವ್ಯವಹಾರಗಳು, ಧಾರ್ಮಿಕ ಸ್ಥಿತಿಗಳು, ಕಲೆಯ ಪೋಷಣೆ, ಇವೆಲ್ಲವುಗಳನ್ನು ಕಥೆಯ ರೂಪದಲ್ಲಿ ಅವರು ಸುಂದರವಾಗಿ ನಿರೂಪಿಸಿದ್ದಾರೆ. ಚಾಲುಕ್ಯ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸಿದ ಎರಡನೆ ತೈಲಪನ ಉತ್ತರ ದಿಗ್ವಿಜಯ ‘ಜಯಗೋದಾವರಿ’ಯ ಕಥಾವಸ್ತು.

ಮಕ್ಕಳಿಗೆ ಇತಿಹಾಸ

ಪಾಂಡುರಂಗರಾಯರಿಗೆ ಮಕ್ಕಳ ಮೇಲೆ ಅಕ್ಕರೆ ಬಹಳ. ನಮ್ಮ ನಾಡವರ ಚರಿತ್ರೆಯನ್ನು ಅವರಿಗೆ ತಿಳಿ ಹೇಳಿ ಅವರ ಚಾರಿತ್ರ್ಯ ನಿರ್ಮಾಣಕ್ಕೆ ಸಹಾಯಕವಾಗ ಬೇಕೆಂಬುದು ಅವರ ನಿರಂತರ ಹಂಬಲ. ಇದಕ್ಕಾಗಿ ಇತಿಹಾಸದಲ್ಲಿಯ ಚಿಕ್ಕ, ದೊಡ್ಡ ಘಟನೆಗಳನ್ನು, ಪ್ರಮುಖ ವ್ಯಕ್ತಿಗಳನ್ನು ಆರಿಸಿಕೊಂಡು ಮಕ್ಕಳಿಗಾಗಿ ಚಿಕ್ಕ ಚಿಕ್ಕ ಕಥೆಗಳನ್ನು, ಚಿತ್ರಣಗಳನ್ನು ಹೆಣೆದರು. ೧೯೩೯ರಷ್ಟು ಹಿಂದೆಯೇ ‘ಕನ್ನಡ ಅರಸರು’ ಎಂಬ ಹತ್ತು ಅರಸರ ಚಿಕ್ಕ ಚಿಕ್ಕ ನುಡಿ ಚಿತ್ರಗಳುಳ್ಳ ಪುಸ್ತಕವನ್ನು ಪ್ರಕಟಿಸಿದರು. ತಮ್ಮ ಸಂಶೋಧನೆಯ ಕಾರ್ಯಭಾರದಲ್ಲಿಯೂ, ಆಗಾಗ ಇಂಥ ಕೃತಿಗಳನ್ನವರು ರಚಿಸುತ್ತಲೇ ಬಂದರು. ಈ ಬಗ್ಗೆ ಒಂದೆಡೆ ಅವರು ಹೀಗೆ ಹೇಳಿದ್ದಾರೆ : ‘ನಮ್ಮ ಒಬ್ಬೊಬ್ಬರ ಬಾಳೂ ಒಂದೊಂದು ಕಥೆ. ನಮ್ಮ ನಾಡಿನ ಬಾಳು ಹಿರಿದಾದ ಕಥೆ. ನಮ್ಮ ಬಾಳಿನ ಅರಿವು ನಮಗೆ ಇರಬೇಕಾದಂತೆ ನಮ್ಮ ನಾಡ ಬಾಳಿನ ಅರಿವು ನಮಗೆ ಇರುವುದು ಅಗತ್ಯ. ನಮ್ಮ ಅರಿವೇ ನಮಗೆ ಇರದಿದ್ದರೆ ಬೇರೆ ಅರಿವಿನಿಂದೇನು?’ ಅವರ ದೃಷ್ಟಿಯಲ್ಲಿ ‘ಇತಿಹಾಸವು ನಿರ್ಜೀವವಲ್ಲ, ಸಜೀವ ದೃಷ್ಟಿಯಿಂದ ನೋಡಿದರೆ ಅದು ಸಜೀವವೂ, ಸಚೇತನವೂ ಆಗಿದೆ. ಇಂಥ ದೃಷ್ಟಿ ಸ್ವತಂತ್ರ ಭಾರತದ ಭಾವೀ ನಾಗರಿಕರಲ್ಲಿ ಬಿಂಬಿಸಬೇಕು, ಬೆಳೆಸಬೇಕು. ಆಗ ಅವರ ಬಾಳು ಚೈತನ್ಯಮಯವಾಗುತ್ತದೆ. ಇಂಥ ಚೈತನ್ಯವು ಭಾವೀ ರಾಷ್ಟ್ರನಿರ್ಮಾಣ ಕಾರ್ಯಕ್ಕೆ ಪ್ರೇರಣೆ ನೀಡಬಲ್ಲದು. ರಚನಾತ್ಮಕ ಕರ್ತೃತ್ವದ ಸಾಮರ್ಥ್ಯವನ್ನು ತುಂಬಬಲ್ಲದು.’

‘ನಾಗರ ಮರಿ’ಮತ್ತು ‘ಮದಗಜ ಮಲ್ಲ’ ಎಂಬ ಪುಸ್ತಕಗಳಲ್ಲಿ ಕನ್ನಡ ನಾಡಿನ ವೀರರ ಕಥೆಗಳನ್ನು ಹೆಣೆದಿದ್ದಾರೆ. ಯುದ್ಧದಲ್ಲಿ ಹೋರಾಡಿ, ನಾಡಿಗಾಗಿ, ಮಾನಕ್ಕಾಗಿ ಪ್ರಾಣಗಳನ್ನು ತೆತ್ತವರ ನೆನಪಿಗಾಗಿ ನಿಲ್ಲಿಸಿದ ವೀರಗಲ್ಲುಗಳೇ ಈ ಕಥೆಗಳಿಗೆ ಆಧಾರ. ‘ಬನವಾಸಿಯ ಕದಂಬರು’, ‘ಕಲ್ಯಾಣ ಕೇಸರಿ ತ್ರಿಭುವನಮಲ್ಲ’, ‘ಹಂಪೆ’, ‘ವಿಜಯನಗರದ ಸಂಗಮರು’ -ಇವು ಮಕ್ಕಳಿಗಾಗಿ ಬರೆದ ಇತರ ಚಿಕ್ಕ ಪುಸ್ತಕಗಳು.

ಪುಸ್ತಕಗಳಲ್ಲದೆ ಸುಮಾರು ೪೦೦ರಷ್ಟು ಲೇಖನಗಳನ್ನು ಇವರು ಬರೆದಿದ್ದಾರೆ. ಈ ಮೂಲಕ ಶಾಸನಗಳ ಸಂಪಾದನೆಯಲ್ಲದೆ ಸಾಹಿತ್ಯ, ಸಾಂಸ್ಕೃತಿಕ ವಿಷಯಗಳ ಮೇಲೂ ಬಹಳಷ್ಟು ಹೊಸ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಕುಕ್ಕನೂರಿನ ಜ್ಯೇಷ್ಠಾದೇವಿ ಅಥವಾ ಮಹಾಮಾಯೆ, ಪಂಢರಾಪುರದ ಪಾಂಡುರಂಗ, ಮೈಲಾರಲಿಂಗ ಮುಂತಾದ ದೇವತೆಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕೊಪ್ಪಳ, ಕುಕ್ಕನೂರು, ಕಲಬುರ್ಗಿ, ರಾಯಚೂರು, ಧಾರವಾಡ, ಹುಬ್ಬಳ್ಳಿ ಮುಂತಾದ ಊರುಗಳ ಹೆಸರಿನ ಸಾಂಸ್ಕೃತಿಕ ಅಭ್ಯಾಸವನ್ನು ಮಾಡಿದ್ದಾರೆ. ಹೊರ ಪ್ರದೇಶಗಳಲ್ಲಿ ಕರ್ನಾಟಕದ ಪ್ರಭಾವವನ್ನು ಕುರಿತಾದ ಲೇಖನಗಳನ್ನು ಬರೆದಿದ್ದಾರೆ. ಗೋವೆ ಮತ್ತು ಕರ್ನಾಟಕಗಳ ಚಾರಿತ್ರಿಕ ಸಂಬಂಧವನ್ನು ಸಮರ್ಥವಾಗಿ ಎತ್ತಿ ತೋರಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕನ್ನಡಿಗರೇ ಕಾರಣರೆಂದು ಸ್ಪಷ್ಟ ಆಧಾರಗಳನ್ನು ಮಂಡಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲವೆಂಬ ಗಾದೆಯಂತೆ ಪಾಂಡುರಂಗರಾಯರು ಅಭ್ಯಸಿಸದ ವಿಷಯವೇ ಇಲ್ಲವೆಂದು ಹೇಳಬಹುದು.

ಈ ಸಾಧನೆ ಅವರಿಗೆ ವಿದ್ಯಾಕ್ಷೇತ್ರದಲ್ಲಿ ಗೌರವವನ್ನು ತಂದುಕೊಟ್ಟಿತು. ಅವರು ಅನೇಕ ಸಂಘ ಸಂಸ್ಥೆಗಳ ಸದಸ್ಯರಾದರು. ಭಾರತೀಯ ಇತಿಹಾಸ ಪರಿಷತ್ತಿನ ಚಂಡೀಗಢದ ಸಮ್ಮೇಳನಕ್ಕೆ ಶಾಸನ ವಿಜ್ಞಾನ ವಿಭಾಗದ ಅಧ್ಯಕ್ಷರಾಗಿ ಆರಿಸಲ್ಪಟ್ಟರು. ಆಗ ಅವರು ಮಾಡಿದ ಭಾಷಣ ಶಾಸನ ವಿಜ್ಞಾನ ಸಂಶೋಧನೆಗೆ ಪ್ರಚೋದನೆ ನೀಡುವಂತಹದಾಗಿದೆ.

ವ್ಯಕ್ತಿತ್ವ

ಪಾಂಡುರಂಗರಾವ್ ದೇಸಾಯಿ ಅವರ ವ್ಯಕ್ತಿತ್ವದ ಒಂದು ಮುಖ್ಯ ಅಂಶವೆಂದರೆ ಸರಳತೆ ಮತ್ತು ನಿಸ್ಪೃಹತೆ. ನಿರಾಡಂಬರ ಉಡುಪು, ಸರಳ ನಡೆ-ನುಡಿ ಇವು ಅವರ ವ್ಯಕ್ತಿತ್ವದ ಹೆಗ್ಗುರುತು. ಅವರಲ್ಲಿ ಕೃತ್ರಿಮತೆ ಕಾಣಸಿಗದು. ಅವರು ಎಂದಿಗೂ ಪ್ರಸಿದ್ಧಿಯನ್ನು ಬಯಸಲಿಲ್ಲ. ಹಾಗೆ ನೋಡಿದರೆ ಸಾರ್ವಜನಿಕ ಜೀವನದಿಂದ ಅವರು ದೂರವೇ ಉಳಿದರು.

ಸತತೋದ್ಯೋಗ, ಸ್ವಾವಲಂಬನ ಇವು ಅವರ ವ್ಯಕ್ತಿತ್ವದ ಇತರ ಕೆಲವು ಅಂಶಗಳು. ತಮ್ಮ ದಿನದ ವೇಳೆಯನ್ನೆಲ್ಲ ಅವರು ವ್ಯಾಸಂಗ ಮತ್ತು ಲೇಖನ ಕಾರ್ಯದಲ್ಲಿಯೇ ಕಳೆಯುತ್ತಿದ್ದರು. ಕೌಟುಂಬಿಕ ಕೆಲಸ ಕಾರ್ಯಗಳನ್ನು ಅವರು ಅಷ್ಟಾಗಿ ಹಚ್ಚಿಕೊಂಡವರಲ್ಲ. ಮನೆಯಲ್ಲಿ ಅನೇಕ ಜನ ಬಂದುಹೋಗುವುದು ನಡೆಯುತ್ತಿದ್ದರೂ ಅದರ ಗೋಡವೆ ಅವರಿಗೆ ಅಷ್ಟಾಗಿ ಇರಲಿಲ್ಲ. ನಾಡು, ನುಡಿಗಳ ಮೇಲಿನ ಅಭಿಮಾನ, ಚರಿತ್ರೆ, ಸಂಸ್ಕೃತಿಗಳಲ್ಲಿ ತೀವ್ರ ಆಸಕ್ತಿ, ವಿವಿಧ ಭಾಷೆಗಳಲ್ಲಿ ಪ್ರೌಢಿಮೆ ಇವು ಅವರನ್ನು ಸಂಶೋಧನೆಯಲ್ಲಿ ನಿರಂತರವಾಗಿ ತಲ್ಲೀನಗೊಳಿಸಿದವು. ಇತಿಹಾಸದ ವ್ಯಾಸಂಗ ಅವರ ಮೇಲೆ ಗಾಢವಾದ ಪರಿಣಾಮಗಳನ್ನುಂಟು ಮಾಡಿದ್ದಿತು. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅರಗಿಸಿಕೊಂಡ ಅವರ ಮನೋಭಾವ ವಿಶಾಲವಾಗಿದ್ದಿತು. ಜೈನ ಧರ್ಮವನ್ನು ಅಭ್ಯಾಸ ಮಾಡಿದರು. ಬಸವೇಶ್ವರರ ಜೀವನವನ್ನೆಲ್ಲ ಅಧ್ಯಯನ ಮಾಡಿದರು. ಶಂಕರಾಚಾರ‍್ಯ, ಮಧ್ವಾಚಾರ‍್ಯರ ತತ್ವಜ್ಞಾನವನ್ನು ಅಭ್ಯಾಸ ಮಾಡಿದರು. ಸಂಶೋಧನೆ ಅವರಿಗೆ ಕೇವಲ ವೃತ್ತಿಯಾಗಿ ಉಳಿಯಲಿಲ್ಲ. ಅದು ಅವರ ಜೀವನದ ಉಸಿರಾಯಿತು.

ಔದಾರ್ಯ ಅವರ ವ್ಯಕ್ತಿತ್ವದ ಇನ್ನೊಂದು ಮುಖ. ಪ್ರತಿವರ್ಷವೂ ಮೂರು ನಾಲ್ಕು ಜನ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡುತ್ತಿದ್ದರು. ತಾವು ಮಾತ್ರ ಮರೆಯಲ್ಲಿಯೇ ಉಳಿಯುತ್ತಿದ್ದರು.

ಪ್ರಭಾವಗಳು

ಯಾರೊಬ್ಬರ ವ್ಯಕ್ತಿತ್ವ ರೂಪಿತವಾಗುವುದಕ್ಕೆ ಸುತ್ತಲಿನ ಜನರ ಪ್ರಭಾವ ಕಾರಣವಾಗುತ್ತದೆ. ಪಾಂಡುರಂಗ ರಾಯರ ಮೇಲೆ ಪ್ರಭಾವ ಬೀರಿದವರಲ್ಲಿ ನಾಲ್ವರು ಪ್ರಮುಖರು. ಅವರ ಅಣ್ಣ ರಾಘವೇಂದ್ರರಾಯರು, ನಿಷ್ಠಾವಂತ ಗಾಂಧಿವಾದಿಗಳು. ರಾಷ್ಟ್ರೀಯ ಆಂದೋಲನದಲ್ಲಿ ಧುಮುಕಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅದಕ್ಕಾಗಿಯೇ ಪ್ರಾಣತೆತ್ತವರು. ಎಲ್ಲ ಎಡರುಗಳನ್ನು ಎದುರಿಸಿ ಗುರುಕುಲವೆಂಬ ರಾಷ್ಟ್ರೀಯ ವಿದ್ಯಾಲಯವನ್ನು ನಡೆಸಿಕೊಂಡು ಬಂದವರು. ಚಿಕ್ಕ ವಯಸ್ಸಿನಲ್ಲಿ ಅವರ ನೆರಳಿನಲ್ಲಿ ಬೆಳೆದ ಪಾಂಡುರಂಗರಾಯರ ಮೇಲೆ ಅವರ ಪ್ರಭಾವ ಬಹಳವಾಗಿದ್ದಿತು. ಕಷ್ಟ ಸಹಿಷ್ಣುತೆ, ಸ್ವಾಭಿಮಾನ, ನಿಸ್ಪೃಹತೆ ಇವು ಅವರಿಂದಲೇ ಬಂದ ಬಳುವಳಿಗಳು. ಇವರ ಮೇಲೆ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿ ಸಾಲಿ ರಾಮಚಂದ್ರರಾಯರು. ಸಜ್ಜನಿಕೆ, ಸರಳತೆ, ಸೌಜನ್ಯಗಳಿಗೆ ಹೆಸರಾದ ಸಾಲಿಯವರ ಮಗಳೇ ಇವರ ಪತ್ನಿ. ಇವರ ಸಾಹಿತ್ಯದ ಒಲವಿಗೆ, ಮಕ್ಕಳ ಸಾಹಿತ್ಯ ರಚನೆಗೆ, ಸಾಲಿಯವರ ಸಂಪರ್ಕವೇ ಪೇರಣೆಯಾಗಿರಬೇಕು. ಇವರ ಮೇಲೆ ಪ್ರಭಾವ ಬೀರಿದ ಇನ್ನಿಬ್ಬರು ಇವರ ವೃತ್ತಿಜೀವನಕ್ಕೆ ಸಂಬಂಧಿಸಿದವರು. ನೆಲಮಂಗಲ ಲಕ್ಷ್ಮೀನಾರಾಯಣ ರಾಯರು ಮತ್ತು ದಿನೇಶಚಂದ್ರ ಸರ್ಕಾರ್ ಅವರು. ಇಬ್ಬರೂ ಹಿರಿಯರು ಮತ್ತು ಭಾರತೀಯ ಶಾಸನ ವಿಜ್ಞಾನದಲ್ಲಿ ನಿಷ್ಣಾತರು. ಊಟಿಯ ಕಾರ್ಯಾಲಯದಲ್ಲಿ ಇವರ ವರಿಷ್ಠರು. ಇಬ್ಬರೂ ಇವರ ಸಂಶೋಧನಾ ಕಾರ್ಯದಲ್ಲಿ ಮಾರ್ಗದರ್ಶನ ಮಾಡಿದವರು.

ಧರ್ಮಶ್ರದ್ಧೆ, ದೈವಭಕ್ತಿ, ಇವರ ವ್ಯಕ್ತಿತ್ವದ ಇನ್ನೊಂದು ಮುಖ. ಹಳೆಯ ತಲೆಮಾರಿನವರಾದರೂ ಆಚಾರ, ಸಂಪ್ರದಾಯಕ್ಕೆ ಕಟ್ಟುಬಿದ್ದವರಲ್ಲ. ಸುಧಾರಣೆ, ಪ್ರಗತಿಗಳನ್ನವರು ಮೆಚ್ಚುತ್ತಿದ್ದರು.

ಕೌಟುಂಬಿಕ ಜೀವನ

ಕೌಟುಂಬಿಕ ಜೀವನದಲ್ಲೂ ಪಾಂಡುರಂಗ ರಾಯರು ಸುದೈವಿಗಳೆಂದೇ ಹೇಳಬೇಕು. ಅನುಕೂಲೆ ಯಾದ ಸತಿ, ಬುದ್ಧಿವಂತ ಮಕ್ಕಳು ಇವೆರಡನ್ನೂ ಹೊಂದಿದ ಸುದೈವ ಇವರದು. ಸಾಲಿ ರಾಮಚಂದ್ರ ರಾಯರ ಮಗಳು ಸುಭದ್ರೆ ಇವರ ಕೈ ಹಿಡಿದರು. ಉದಕ ಮಂಡಲದಲ್ಲಿಯ ಸುದೀರ್ಘವಾಸ ಪಾಂಡುರಂಗ ರಾಯರಿಗೆ ಅವರ ವೃತ್ತಿ, ಪ್ರವೃತ್ತಿಗಳೆರಡಕ್ಕೂ ವರದಾನವಾದರೆ ಅವರ ಹೆಂಡತಿಗೆ ಅದು ಕಾರಾಗೃಹವಾಸವೇ ಆಗಿರಬೇಕು. ಬಂಧುಬಳಗದವರು ಬಹುದೂರ. ಬಂದುಹೋಗುವವರು ಕಡಿಮೆ; ನಿರಂತರವಾದ ಚಳಿ; ಚಿಕ್ಕಪುಟ್ಟ ಮಕ್ಕಳ ಪೋಷಣೆ; ಎಲ್ಲವನ್ನೂ ಅವರು ಧೈರ್ಯದಿಂದಲೇ ಎದುರಿಸಿದರು ಎಂಬುದಕ್ಕೆ ಪತಿಯ ಮತ್ತು ಮಕ್ಕಳ ಸಫಲ ಜೀವನವೇ ಸಾಕ್ಷಿ. ಪಾಂಡುರಂಗ ರಾಯರಿಗೆ ಐವರು ಗಂಡು ಮಕ್ಕಳು. ಹೆಣ್ಣು ಮಕ್ಕಳಿಲ್ಲದ ಕೊರತೆಯನ್ನು ಅಣ್ಣನ ಮಗನ ಮಗಳನ್ನು ಸಾಕಿ ತುಂಬಿಕೊಂಡರು.

ಪಾಂಡುರಂಗರಾಯರ ಜೀವನ ಊದುಬತ್ತಿ ಯಂತೆ. ಕಣ್ಣು ಕೋರೈಸುವ ಪ್ರಖರತೆ ಇರದಿದ್ದರೂ ಸದ್ದು ಗದ್ದಲವಿಲ್ಲದೆ ತನ್ನನ್ನು ಸವೆಸಿಕೊಂಡು ಸುತ್ತಲಿನ ಪರಿಸರವನ್ನು ಸುಗಂಧಮಯವನ್ನಾಗಿ ಮಾಡುವಂತಹದು.