ಪಾಂಡುರಂಗ ವಾಮನ ಕಾಣೆಯವರು ವಿದ್ವಾಂಸರಲ್ಲಿ ವಿದ್ವಾಂಸರು. ತುಂಬಾ ಪ್ರೌಢವಾದ ಗ್ರಂಥಗಳನ್ನು ಬರೆದರು. ಆದರೆ ಅಷ್ಟೇ ಅವರ ಸಾಧನೆಯಲ್ಲ. ಆಚಾರವಂತರಾಗಿದ್ದ ಇವರು  ಸ್ವತಃ ಹಿಂದೂ ಧರ್ಮ ಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಹಿಂದೂ ಸಮಾಜದಲ್ಲಿ ಸೇರಿ ಹೋಗಿದ್ದ ಹಲವು ತಪ್ಪು ಪದ್ಧತಿಗಳನ್ನು ತಿದ್ದಿದರು. ಈ ಪ್ರಯತ್ನದಲ್ಲಿ ಅವರಿಗೆ ಬಹಳ ವಿರೋಧ ಬಂದಿತು. ಆದರೆ ಧೈರ್ಯಗೆಡಲಿಲ್ಲ.

ಜ್ಞಾನಿಯಾದ ಸುಧಾರಕ

ಕಾಣೆಯವರು ಸಂಸ್ಕೃತ ಕ್ಷೇತ್ರದಲ್ಲಿ ಕರ್ಮಯೋಗಿಯಾಗಿ ದುಡಿದರು. ಹಿಂದೂ ಧರ್ಮದ ತಿರುಳನ್ನು ಪ್ರಪಂಚಕ್ಕೆಲ್ಲಾ ತಿಳಿಸಲೆಂದು ಇಂಗ್ಲಿಷ್ ಭಾಷೆಯಲ್ಲಿ ಬರೆದಿಟ್ಟರು. ಸಂಸ್ಕೃತ ಹಾಗೂ ಅವರ ಮಾತೃಭಾಷೆಯಾದ ಮರಾಠಿಯಲ್ಲಿಯೂ ಅನೇಕ ಪುಸ್ತಕಗಳನ್ನು ಬರೆದರು. ಅವರ ಜೀವನದ ಮಹತ್ಸಾಧನೆಯೆಂದರೆ ೬,೫೦೦ ಪುಟಗಳ ದೊಡ್ಡ ಗ್ರಂಥ ’ಹಿಂದೂ ಧರ್ಮ ಶಾಸ್ತ್ರದ ಇತಿಹಾಸ’ ಈ ಹಿರಿಯ ಸಾಧನೆ ಮತ್ತು ಆದರ್ಶ ಜೀವನದಿಂದಾಗಿ ’ಭಾರತರತ್ನ’, ’ಮಹಾಮಹೋಪಾಧ್ಯಾಯ’, ಡಾಕ್ಟರ್’ ಮುಂತಾದ ಪದವಿಗಳನ್ನು ಪಡೆದ ಈ ಮಹಾಜ್ಞಾನಿಯನ್ನು ನವಯುಗದ ಜ್ಞಾನರ್ಷಿ ಎಂದರೂ ತಪ್ಪಲ್ಲ. ಅಷ್ಟೇ ಅಲ್ಲ, ಸರಿ ಎನಿಸಿದ್ದನ್ನು ಕೃತಿಗಿಳಿಸುವ ಧೀರ. ವೇದಗಳ ಆಧಾರದಿಂದಲೇ ವಾದಿಸಿ ಗೊಡ್ಡು ಸಂಪ್ರದಾಯಗಳನ್ನು ಕಿತ್ತೊಗೆದ ಸಾಹಸಿ. ನಿತ್ಯದ ಆಹ್ನಿಕಗಳನ್ನು ತಪ್ಪದೆ ಪರಿಪಾಲಿಸುವವರು. ಆದರೂ ಸಾಮಾಜಿಕವಾಗಿ ನಡೆಯುವ ಗಣೇಶೋತ್ಸವ ಮುಂತಾದ ಧಾರ್ಮಿಕ ಸಂದರ್ಭಗಳಲ್ಲಿ ಹರಿಜನರೂ ಭಾಗವಹಿಸುವಂತೆ ಮಾಡಿದ ಸುಧಾರಣಾವಾದಿ. ಇವರದು ಸಾಮಾನ್ಯರಿಗೆ ವಿಚಿತ್ರವಾಗಿ ಕಾಣುವ ವಿಶಿಷ್ಟವಾದ ವಿಚಾರ ಪದ್ಧತಿ. ಆದರೆ ಎಲ್ಲೆಲ್ಲಿಯೂ ಇವರ ವಾದಕ್ಕೇ ಜಯ.

ಮನೆತನ

ಮಹಾರಾಷ್ಟ್ರದಲ್ಲಿ ರತ್ನಗಿರಿ ಎಂಬ ಜಿಲ್ಲೆಯೊಂದಿದೆ. ಈ ಜಿಲ್ಲೆಯ ಚಿಪಳೂಣ ಎಂಬ ಊರಿಗೆ ಹತ್ತಿರದಲ್ಲಿ ’ಪರಶುರಾಮ್ ಎಂಬ ಪುಣ್ಯಕ್ಷೇತ್ರವಿದೆ. ಅಲ್ಲಿ, ಶಕೆ ೧೮೦೨, ಚೈತ್ರ ಶುಕ್ಲ ತ್ರಯೋದಶಿ, ಎಂದರೆ ೧೮೮೦ ರ ಮೇ ೭ ರಂದು ಪಾಂಡುರಂಗರಾವ್ ಕಾಣೆಯವರು ಜನಿಸಿದರು. ’ಪರಶುರಾಮ್’ ಕ್ಷೇತ್ರ ಅವರ ತಾಯಿಯ ತವರೂರು. ಚಿತಳೆ ಎಂಬ ಮನೆತನಕ್ಕೆ ಸೇರಿದವರು. ಅತ್ತ ತಾಯಿಯ ತಂದೆಯಾದ ಅಜ್ಜ, ಇತ್ತ ತಂದೆಯ ತಂದೆ ಅಜ್ಜ – ಇಬ್ಬರ ಮನೆಯಲ್ಲಿಯೂ ವೇದಗಳ ನಿತ್ಯ ಪಾಠ. ಚಿತಳೆ ಮನೆಯವರಂತೂ ವೇದಗಳನ್ನು ಕಂಠಪಾಠ ಮಾಡಿಸುವ ಶಾಲೆ ನಡೆಸುವವರು, ಎಂದರೆ ಅಂದಿನ ’ಗುರುಕುಲ’ ಸಂಪ್ರದಾಯಕ್ಕೆ ಸೇರಿದವವರು. ಇತ್ತ ಪಾಂಡುರಂಗರಾಯರ ಅಜ್ಜ ಶಂಕರರಾಯರೂ ಅಷ್ಟೇ. ವೇದಶಾಸ್ತ್ರ ಪಾರಂಗತರು. ಅಲ್ಲದೆ ಸುತ್ತಣ ಹಳ್ಳಿಗಳಿಗೆಲ್ಲ ವಿಖ್ಯಾತ ವೈದ್ಯರು. ತಂದೆ ವಾಮನರಾಯರು ವೇದಗಳನ್ನು ಬಲ್ಲವರಾಗಿದ್ದು ಕೆಲಕಾಲ ಪೌರೋಹಿತ್ಯವನ್ನೂ ನಡೆಸಿದ್ದರು. ಮುಂದೆ ಅದನ್ನು ಬಿಟ್ಟು ತಮ್ಮ ಇಪ್ಪತ್ನಾಲ್ಕನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪಾಸು ಮಾಡಿದರು. ಬಳಿಕ ಕಾನೂನು ಪರೀಕ್ಷೆ ಮುಗಿಸಿ ವಕೀಲ ವೃತ್ತಿಗೆ ತೊಡಗಿದರು. ಇವರು ಓದುತ್ತಿದ್ದ ಶಾಲೆಯ ಅಧಿಕಾರೀ ವರ್ಗದಲ್ಲಿ ಇಬ್ಬರು ಹಿರಿಯರಿದ್ದರು; ಮೊತ್ತಮೊದಲನೆಯ ಮಹಿಳಾ ವಿಶ್ವವಿದ್ಯಾನಿಲಯದ ಜನಕರಾದ ಧೊಂಡೋ ಕೇಶವ ಕರ್ವೆ ಮತ್ತು ಜ್ಯೋತಿಷ್ಯಶಾಸ್ತ್ರದ ಪಂಡಿತ ಶಂಕರ ಬಾಲಕೃಷ್ಣ ದೀಕ್ಷಿತ್. ಇವರಿಬ್ಬರೂ ಶಂಕರರಾವ್ ಕಾಣೆಯವರ ಜೊತೆಗಾರರಾಗಿದ್ದರು. ಹೀಗೆ ಪಾಂಡುರಂಗರಾವ್ ಕಾಣೆಯವರಿಗೆ ಮನೆಗ ಪವಿತ್ರ ಸಂಸ್ಕಾರದೊಂದಿಗೆ ಇಂಥ ವಿದ್ವನ್ಮಣಿಗಳ ಸ್ನೇಹಸಮೂಹದ ಸಂಸ್ಕಾರವೂ ದೊರೆತಿತ್ತು. ಕಾಣೆ ಕುಟುಂಬದವರು ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾಪೋಲಿಗೇ ಬಂದು ನೆಲೆಸಿದರು. ಈ ಊರು ರತ್ನಗಿರಿಯಿಂದ ಕೇವಲ ಎಂಬತ್ತು ಮೈಲಿ ಸಮುದ್ರಮಾರ್ಗವಾದರೆ ಮಾತ್ರ. ಆದರೆ ರೈಲು, ಬಸ್ಸುಗಳು ಮೂಲಕವಾದರೆ ನೂರಾತೊಂಬತ್ತು ಮೈಲಿಗಳು. ಹಾಗೂ ಹೀಗೂ ವಕೀಲ ವೃತ್ತಿಯಲ್ಲಿಯೇ ಒಂಬತ್ತು ಮಕ್ಕಳ ದೊಡ್ಡ ಸಂಸಾರ ಸಾಗಿಸುತ್ತಿದ್ದರು ತಂದೆ ವಾಮನರಾಯರು. ಬಡತನದಲ್ಲಿಯೂ ಆರೋಗ್ಯ ಭಾಗ್ಯವನ್ನು ಆನಂದವಾಗಿ ಅನುಭವಿಸಿದ ಗಟ್ಟಿಮುಟ್ಟಾದ ವ್ಯಕ್ತಿ ಇವರು. ಎಪ್ಪತ್ತೈದು ವರ್ಷ ಬಾಳಿದರು. ಆದರೆ ಅವರ ಮಗನಾದ ಪಾಂಡುರಂಗರಾವ್ ಮಾತ್ರ ಎಂತಹ ಆರೋಗ್ಯಭಾಗ್ಯಕ್ಕೆ ಎರವಾದವರು. ಆದರೂ ತೊಂಬತ್ತೆರಡು ವರ್ಷ ಬಾಳಿದರು! ಇದರ ಗುಟ್ಟೇನು? ಶಿಸ್ತು, ಸಂಯಮ ಹಾಗೂ ಕರ್ತವ್ಯನಿಷ್ಠೆ. ಇದು ಜೀವದ ಉಸಿರಿನಂತೆ ಕೊನೆತನಕ ಸಾಗಿತು.

ವಿದ್ಯಾಭ್ಯಾಸ

ವಿನಯಶೀಲನಾದ ಈ ವಿದ್ಯಾರ್ಥಿ ಹೆತ್ತವರ ಚೊಚ್ಚಲ ಮಗ, ಬೆನ್ನ ಹಿಂದೆ ಎಂಟು ಜನ ಒಡಹುಟ್ಟಿದವರೊಂದಿಗೆ ಬದುಕು ಸಾಗಿತು. ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಪೂರ್ಣಗೊಂಡದ್ದು ದಾಪೋಲಿಯಲ್ಲಿಯೇ ದುರ್ಬಲ ದೇಹಸ್ಥಿತಿ. ದುರ್ಭರ ದುಡ್ಡಿನ ಸ್ಥಿತಿ. ಹೀಗೆ ಎರಡನ್ನೂ ಎದುರಿಸಿ ತಮ್ಮ ಹದಿನಾರನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದರು. ಫಲಿತಾಂಶ ಬಂದಿತು. ಮೊದಲನೇ ದರ್ಜೆಯಲ್ಲಿ ಪಾಸಾದ ಸುದ್ದಿ ಕೇಳಿದಾಗ ಮುಗಿಲು ಮೂರೇ ಗೇಣು. ಆದರೇನು? ಆಗಲೇ ಕರುಳಬೇನೆ ಕಾಣಿಸಿಕೊಳ್ಳತೊಡಗಿತು. ಮುಂದೇನು ಗತಿ? ಕಾಲೇಜುಕಟ್ಟೆ ಇನ್ನು ಹತ್ತುವಂತೆಯೇ ಇಲ್ಲವೆ? ಆದರೆ ಪಾಂಡುರಂಗರಾವ್ ಎಷ್ಟೇ ಕಷ್ಟಗಳಿದ್ದರೂ ವಿದ್ಯೆಯನ್ನು ಪಡೆಯಲೇಬೇಕೆಂಬ ಸಂಕಲ್ಪ ಮಾಡಿದವರು.

ಅನಾರೋಗ್ಯದಿಂದ ನರಳುತ್ತಿದ್ದರೂ ಯುವಕನ ಇಚ್ಛಾಶಕ್ತಿ ಅದಮ್ಯವಾದದ್ದು. ಅಲ್ಲದೆ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದವರಲ್ಲಿ ಇವರು ಇಪ್ಪತ್ತೈದನೆಯವರು. ಮುಂಬಯಿಯಲ್ಲಿ ವಿಲ್ಸನ್ ಕಾಲೇಜಿನಲ್ಲಿಯೇ ಓದು ಮುಂದುವರೆಸಬೇಕೆಂಬ ಹಂಬಲ ಬೇರೆ. ಅಲ್ಲಿ ನೋಡಿದರೆ ಪ್ಲೇಗಿನ ಪಿಡುಗು. ಮಗನ ನಿರ್ಧಾರ ಕಂಡು, ತಾಯಿ ಮನಮಿಡಿದು ಕೇಳಿದಳು : ’ ಮಗು, ಮುಂಬಯಿಗೆ ಹೋಗಲೇಬೇಕಾ? ಅಲ್ಲಿ ಪ್ಲೇಗ್ ಇದೆಯಲ್ಲಾ? ನಿನ್ನ ಆರೋಗ್ಯ ನೋಡು’ ಹುಡುಗನ ಉತ್ತರ : ’ಆರೋಗ್ಯದ ಮಾತೇಕಮ್ಮಾ? ಅಲ್ಲಿಯೂ ಜನ ಇಲ್ಲವ? ನನ್ನಂತಹ ದುರ್ಬಲರು, ರೋಗಿಗಳು ಇಲ್ಲಿಯೂ ಇದ್ದಾರು. ದೇವರು ಹೇಗಾದರೂ ಕಾಪಾಡುತ್ತಾನೆ. ಮುಂಬಯಿಗೆ ಹೋಗುತ್ತೇನಮ್ಮ’ ಆಗಲೇ ವಿಲ್ಸನ್ ಕಾಲೇಜಿನ ಪ್ರಿನ್ಸಿಪಾಲರಾದ ಮ್ಯಾಕಿಚನ್ ರವರಿಗೆ ಈ ಉತ್ಸಾಹೀ  ಯುವಕನ ಪತ್ರವೂ ಹೋಗೀ ಸೇರಿತ್ತು. ಮತ್ತು ಮೊದಲನೇ ದರ್ಜೆಯಲ್ಲಿ ಇಪ್ಪತ್ತೈದನೆಯವನಾಗಿ ಉತ್ತೀರ್ಣನಾದ ವಿದ್ಯಾರ್ಥಿ ತಾನೆಂದೂ ತಿಳಿಸಿದ್ದರಿಂದ ಕೂಡಲೇ ಉತ್ತರವೂ ಬಂದಿತು : ಪ್ಲೇಗ್ ಹಾವಳಿಯಿಂದಾಗಿ ನೀನು ಮುಂಬಯಿಗೆ ಬರಲು ಸಾಧ್ಯವಿಲ್ಲ. ಆದ್ದರಿಂದ ನಿನ್ನೂರಿನಿಂದಲೇ ಹೆಸರು ರಿಜಿಸ್ಟರ್ ಮಾಡಿಸಿಕೊಳ್ಳಬಹುದು. ಕಾಲೇಜ್ ಅವಧಿಯ ಕೊನೆಯ ಹಂತದಲ್ಲಿ ನಿಮಗೆಲ್ಲ ಹಾಜರಾತಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು. ಹೀಗೆ ದೊರೆತ ಅವಕಾಶ ಈ ಪ್ರಕಾಂಡ ಪ್ರತಿಭೆಗೊಂದು ಹೆದ್ದಾರಿಯೇ ಆಯಿತು.

’ದೇವರು ಹೇಗಾದರೂ ಕಾಪಾಡುತ್ತಾನೆ. ಮುಂಬಯಿಗೆ ಹೋಗುತ್ತೇನಮ್ಮ’

ಯಶಸ್ಸಿನ ದಾರಿಯಲ್ಲಿ

ಇಲ್ಲಿಂದ ವಿಜಯದುಂದುಭಿ ಮೊಳಗಿಸುತ್ತಲೇ ಮುನ್ನಡೆದರು ಕಾಣೆಯವರು. ಬಹುಮಾನಗಳೇನು!ವಿದ್ಯಾರ್ಥಿವೇತನಗಳೇನು! ಇಷ್ಟೊಂದು ಪ್ರತಿಭೆಯುಳ್ಳ ತಮ್ಮ ಮಗನಿಗಾಗಿ ಕಷ್ಟವಾದರೂ ಚಿಂತೆಯಿಲ್ಲ, ಹಣ ಕೊಟ್ಟು ಓದಿಸಲು ಹೆತ್ತವರು ಸಿದ್ಧರಾದರು. ಆದರೆ ತನ್ನ ಹಿಂದಿದ್ದ ಅಷ್ಟು ದೊಡ್ಡ ಸೋದರ ಸಮೂಹದ ಹೊಣೆ ಹೊತ್ತು ಅದರ ಮೇಲೆ ತನ್ನ ಶಿಕ್ಷಣದ ಹೊಣೆ ಹೇರಲು ಮನಸ್ಸಾದೀತೆ? ಆದುದರಿಂದ ಪಾಂಡುರಂಗ ವಿನಯದಿಂದಲೇ ನಿರಾಕರಿಸಿದರು. ಇತ್ತ ದೃಢನಿಶ್ಚಯ ಹಾಗೂ ಕಠಿಣ ಪರಿಶ್ರಮದೊಂದಿಗೆ ಮುಂದೆ ಸಾಗಿದರು.

ಕಾಲೇಜ್ ಜೀವನದಲ್ಲಿ ಪ್ರಾರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿ ಎಂದೇ ಮಿಂಚಿ ಮೆರೆದರು. ಅಲ್ಲಿ ಕಾಲಿಟ್ಟೊಡನೆಯೇ ಸಂಸ್ಕೃತದ ಅನೇಕ ಬಹುಮಾನಗಳನ್ನು ಗೆದ್ದುಕೊಂಡರು. ಹಾಗೆಯೇ ಕಾಲೇಜಿನ ಮೊದಲ ಎರಡು ವರ್ಷಗಳನ್ನು ಮುಗಿಸಿದರು. ೧೯೦೧ರಲ್ಲಿ ’ಭಾಊದಾಜಿ’ ಎಂಬ ಸಂಸ್ಕೃತದ ಬಹುಮಾನದೊಂದಿಗೆ ಬಿ.ಎ, ಮುಗಿಸಿದರು. ಕೂಡಲೇ ಅದೇ ಕಾಲೇಜಿನಲ್ಲಿ ’ದಕ್ಷಿಣ ಫೆಲೋ’ (ಸಂಭಾವನೆ ಸಹಿತ ಶಿಕ್ಷಕ ವೃಂದದ ಸದಸ್ಯರು) ಎಂದು ಎರಡು ವರ್ಷಗಳ ಕಾಲ ನೇಮಕಗೊಂಡರು. ಇದೇ ಅವಧಿಯಲ್ಲಿ ಎಲ್.ಎಲ್.ಬಿ., ಪರೀಕ್ಷೆಗೆ ಕುಳಿತು ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಬಳಿಕ ೧೯೦೩ರಲ್ಲಿ ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಎಂ.ಎ. ಗೆ ಕುಳಿತರು. ಇಲ್ಲಿಯೂ ಯಥಾಪ್ರಕಾರ ಮೊದಲ ದರ್ಜೆಯಲ್ಲಿ ಪಾಸಾದುದಲ್ಲದೆ ’ಝಾಲಾ ವೇದಾಂತ್’ ಎಂಬ ಬಹುಮಾನವೂ ದೊರೆಯಿತು. ಪರೀಕ್ಷೆಯಲ್ಲಿ ಮೊದಲಿನ ಸ್ಥಾನ, ಸ್ಪರ್ಧೆಯಲ್ಲಿ ಬಹುಮಾನ ಇವರಿಗೇ ಮೀಸಲು ಎನ್ನುವಂತಿತ್ತು ಎಲ್ಲರ ಪಾಲಿಗೆ!

ಸಾಧನೆಯಿಂದ ಸಾಧೆಗೆ

ಕಾಣೆಯವರು ಮನೆಯಿಂದ ಎಳ್ಳಷ್ಟೂ ನೆರವು ಬಯಸಲಿಲ್ಲ. ಕೇವಲ ತನ್ನ ಪ್ರತಿಭೆಗೆ ದೊರೆತ ಬಹುಮಾನಗಳ ಬಲದಿಂದ  ಎಂ.ಎ. ವರೆಗಿನ ವ್ಯಾಸಂಗ ಮುಗಿಸುವುದೇನೂ ಸಾಮಾನ್ಯ ಮಾತಲ್ಲ. ಇಷ್ಟೊಂದು ವೈಭವಪೂರ್ಣವಾಗಿ ಕಾಲೇಜ್ ಜೀವನದಲ್ಲಿ ಮೆರೆದರೂ ಜೀವನಕ್ಕಾಗಿ ಪರದಾಟ ತಪ್ಪಲಿಲ್ಲ. ಎಂ.ಎ. ತೇರ್ಗಡೆಯಾದರೆ ದೊರೆತ ನೌಕರಿ ಕೇವಲ ಅರವತ್ತು ರೂಪಾಯಿಗಳ ಮಾಸಿಕ ವೇತನದ್ದು. ರತ್ನಗಿರಿಯ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇರಬೇಕಾಯಿತು.ಆ ಕೆಲಸ ದೊರೆತದ್ದೂ ಒಂದು ಅದೃಷ್ಟವೇ.

ಸ್ವಾತಂತ್ರ‍್ಯ ಚಳವಳಿಯ ಗಾಳಿ ಆಗಲೇ ಬೀಸತೊಡಗಿತ್ತು. ಸ್ವಾತಂತ್ರ‍್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂಬ ಘೋಷಣೆ ಜನಜನಿತವಾಗಿತ್ತು. ಇದನ್ನು ಬಿತ್ತರಿಸಿದವರು ಲೋಕಮಾನ್ಯ ತಿಲಕರು. ಮಹಾರಾಷ್ಟ್ರದಲ್ಲಂತೂ ಆಗಿನ ಚಳವಳಿಯ ಮುಖಂಡರಲ್ಲಿ ಅನೇಕರು ಚಿತ್ ಪಾವನ ಬ್ರಾಹ್ಮಣರೇ, ಆದುದರಿಂದ ಅಧಿಕಾರಿಗಳಿಗೆ ಈ ಪಂಗಡ ಕಂಡರಾಗದು. ಕಾಣೆಯವರೂ ಈ ಚಿತ್ ಪಾವನ ಪಂಗಡಕ್ಕೇ ಸೇರಿದವರು. ಆದರೇನು? ತಾವು ಓದಿದ ವಿಲ್ಸನ್ ಕಾಲೇಜಿನ ಪ್ರಿನ್ಸಿಪಾಲರನ್ನೇ ನೌಕರಿಗಾಗಿ ಕೇಳಬೇಕಾಯಿತು. ಆತನ ಮೊದಲ ಪ್ರಶ್ನೆ : ’ನೀನು ಚಿತ್ ಪಾವನ ಬ್ರಾಹ್ಮಣನೇನು?’ ಹೌದು. ಎಂದು ನಿರ್ಭಯರಾಗಿ ಉತ್ತರಿಸಿದರು ಕಾಣೆ. ಆದರೆ ನನ್ನ ಕಾಲೇಜಿನ ಅತ್ಯಂತ ಪ್ರತಿಭಾಸಂಪನ್ನ ವಿದ್ಯಾರ್ಥಿ ಎನ್ನುವುದನ್ನು ಪ್ರಿನ್ಸಿಪಾಲ್ ಮರೆತಿರಲಿಲ್ಲ.  ವಿಲ್ಸನ್ ಕಾಲೇಜಿಗೆ ಹೆಸರು ತಂದ ವಿದ್ಯಾರ್ಥಿಗಾಗಿ ಪ್ರೌಢ ಶಾಲೆಯ ಶಿಕ್ಷಕನೆಂಬ ತಾಣ ತೆರವಾಯಿತು. ಅರವತ್ತು ರೂಪಾಯಿಗಳಿಗೆ ಹತ್ತಾರು ವಿಷಯಗಳನ್ನು ಬೋಧಿಸುವ ಪರಿಶ್ರಮದ ಜೀವನ ಪ್ರಾರಂಭವಾಯಿತು. ಜೊತೆಗೆ ವ್ಯಾಸಂಗವೂ ಮುಂದುವರಿಯಿತು.

ಜೊತೆಗೆ ಸಂಶೋಧನೆ

೧೯೦೫ ರಲ್ಲಿ ಕಾಣೆಯವರ ಎಸ್.ಟಿ.ಸಿ. ಎಂಬ ಪರೀಕ್ಷೆಗೆ ಕುಳಿತು ಇಡೀ ಮುಂಬಯಿ ಪ್ರಾಂತಕ್ಕೇ ಮೊದಲನೆಯವರಾಗಿ ಉತ್ತೀರ್ಣರಾದರು. ಮರುವರ್ಷವೇ ಶಿಕ್ಷಣ ಕಲಾ ನೈಪುಣ್ಯ ಎಂಬ ಶಿಕ್ಷಣ ಕ್ಷೇತ್ರದ ಆಗಿನ ವಿಭಾಗೀಯ ಪರೀಕ್ಷೆ. ಅವರ ಜೀವನದ ಮುಖ್ಯ ಗುರಿ ಸಂಸ್ಕೃತ ಸಾಹಿತ್ಯದಲ್ಲಿ ಸಂಶೋಧನೆ. ಆದುದರಿಂದ ಈ ಪರೀಕ್ಷೆಗಳೊಂದಿಗೇ ಸಂಶೋಧನೆಯ ಮುಖ್ಯ ಕಾರ್ಯವೂ ಪ್ರಾರಂಭವಾಗಿತ್ತು. ಪರಿಣಾಮವಾಗಿ ಅಲಂಕಾರ ಸಾಹಿತ್ಯ ಚರಿತ್ರೆ ಎಂಬ ಒಂದು ಪ್ರಬಂಧ ಸಿದ್ಧವಾಯಿತು. ಅದನ್ನು ಅದೇ ವರ್ಷ (೧೯೦೯) ಮುಂಬಯಿ ವಿಶ್ವವಿದ್ಯಾನಿಲಯದವರು ಏರ್ಪಡಿಸಿದ ಪ್ರಬಂಧ ಸ್ಪರ್ಧೆಗೆ ಕಳಿಸಿದರು. ಸ್ಪರ್ಧೆಗೆ ಬಹುಮಾನವಾಗಿಟ್ಟಿದ್ದ ವಿ.ಎನ್. ಮಾಂಡಲಿಕ್ ಸುವರ್ಣ ಪದಕವನ್ನು ಯಥಾಪ್ರಕಾರ ಇವರೇ ಗೆದ್ದುಕೊಂಡರು. ಈ ನಡುವೆ ಅವರಿಗೊಂದು ಅವಕಾಶ ಶಿಕ್ಷಣ ಕ್ಷೇತ್ರದ ಉನ್ನತ ಮಟ್ಟದ ಪರೀಕ್ಷೆಯನ್ನು ಅವರು ಮುಗಿಸಿದ್ದರಿಂದ ಸಹಾಯಕ ವಿದ್ಯಾಧಿಕಾರಿ ಎಂಬ ಹುದ್ದೆಗಾಗಿ ಕರೆ ಬಂದಿತು. ಆದರೆ ಸಾಹಿತ್ಯ ಮತ್ತು ಧರ್ಮಶಾಸ್ತ್ರದ ಸಂಶೋಧನೆಗೆ ತಮ್ಮ ಕಾಲ ಶಕ್ತಿಗಳನ್ನು ಮುಡಿಪಾಗಿಟ್ಟ ಕಾಣೆಯವರು ಇದನ್ನು ನಿರಾಕರಿಸಿದರು. ಮುಂದಿನ ವರ್ಷ ಅವರಿಗೆ ಸಂತೋಷವಾಗುವ ಸಂಗತಿ ನಡೆಯಿತು. ಮುಂಬಯಿಯ ಎಲ್ಫಿನ್ ಸ್ಟನ್ ಪ್ರೌಢಶಾಲೆಗೆ ಅವರನ್ನು ವರ್ಗಾಯಿಸಿದರು. ಇದರಿಂದ ಅವರ ಸಂಶೋಧ ಕಾರ್ಯಕ್ಕೆ ಬಲು ಪ್ರಶಸ್ತವಾದ ವಾತಾವರಣ ದೊರೆತಂತಾಯಿತು. ಕೂಡಲೇ ಕಾರ್ಯವೂ  ಪ್ರಾರಂಭವಾಯಿತು. ಸಂಸ್ಕೃತ ಮಹಾಕಾವ್ಯಗಳಲ್ಲಿ ನಿರೂಪಿತವಾಗಿರುವಂತೆ ಆರ್ಯರ ರೀತಿ ಪದ್ಧತಿಗಳು ಹಾಗೂ ನೀತಿ-ನಿಯಮಗಳು ಎಂಬ ವಿಷಯದ ಮೇಲೆ ಪ್ರಬಂಧ ಬರೆದರು. ಎಣಿಸಿದಂತೆ ಇದಕ್ಕೂ ವಿಶ್ವವಿದ್ಯಾನಿಲಯದ ವಿ.ಎನ್. ಮಾಂಡಲಿಕ್  ಸುವರ್ಣ ಪದಕ ದೊರೆಯಿತು. ಮುಂಬಯಿಗೆ ಬಂದದ್ದು ಮತ್ತು ಒಂದು ಅನುಕೂಲವಾಯಿತು. ಎಲ್.ಎಲ್.ಬಿ. ಪರೀಕ್ಷೆಗಳನ್ನೂ ಮುಗಿಸಿಕೊಂಡರು. ಹೀಗೆ ಪರೀಕ್ಷೆಗಳನ್ನು ಕಟ್ಟುವುದು ಮತ್ತು ಅವುಗಳಲ್ಲಿ ಉತ್ತೀರ್ಣರಾಗುವುದೆಂದರೆ ಅವರಿಗೆ ನೀರು ಕುಡಿದಷ್ಟು ಸರಾಗ.

ಸರ್ಕಾರದ ನೌಕರಿ ಬೇಡ

ಸಂಸ್ಕೃತದ ಪ್ರಬಂಧ ಸ್ಪರ್ಧೆಗಳನ್ನು ಗೆದ್ದ ಮೇಲಂತೂ ಅವರು ಸಂಸ್ಕೃತದ ವಿದ್ವಾಂಸರೆಂದೇ ಪರಿಚಿತರಾಗತೊಡಗಿದರು. ಕೇವಲ ಒಬ್ಬ ಸಾಮಾನ್ಯ ಶಿಕ್ಷಕನಾಗಿ ದುಡಿಯುತ್ತಿದ್ದ ಇವರತ್ತ ಇದೀಗ ಸರ್ಕಾರದ ದೃಷ್ಟಿ ಹರಿಯಿತು. ಅವರನ್ನು ಎಲ್ಫಿನ್ ಸ್ಟನ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡಿತು.

ಆದರೆ ಕಾಣೆಯವರಿಗೆ ಈ ಸ್ಥಾನದಲ್ಲಿ ಮನಸ್ಸಿಗೆ ಸಮಾಧಾನವಿರಲಿಲ್ಲ. ಈ ಬೇಸರ ಇನ್ನೂ ಹೆಚ್ಚಾಗುವಂತಹ ಒಂದು ಪ್ರಸಂಗವೂ ನಡೆಯಿತು. ಮುಂಬಯಿಯ ಡೆಕ್ಕನ್ ಕಾಲೇಜಿನಲ್ಲಿ ಸಂಸ್ಕೃತದ ಸಹಾಯಕ ಪ್ರಾಧ್ಯಾಪಕ ಹುದ್ದೆಯೊಂದು ಖಾಲಿಯಾಗಿತ್ತು. ವಿದ್ವತ್ತು, ಅನುಭವ ಎರಡು ದೃಷ್ಟಿಗಳಿಂದಲೂ ಕಾಣೆಯವರಿಗೇ ಆ ಸ್ಥಾನ ದೊರೆಯಬೇಕಾಗಿತ್ತು. ಆದರೆ ಸರ್ಕಾರ ವಂಚಿಸಿತು. ಇವರಷ್ಟು ಯೋಗ್ಯತೆ ಇಲ್ಲದ ಒಬ್ಬ ಸಾಧಾರಣ ವ್ಯಕ್ತಿಯನ್ನು ನೇಮಿಸಿಕೊಂಡಿರತು. ಇದು ಭಾರೀ ಪೆಟ್ಟು, ಸ್ವತಂತ್ರವಾಗಿ, ಸೆಟೆದು ನಡೆಯುವ ಅವರ ಸ್ವಾಭಿಮಾನಕ್ಕೆ ಪರಕೀಯರ ದುರಾಡಳಿತಕ್ಕೆ ಬಾಗಿ ಬಾಳುವುದು ಹೇಸಿಗೆ ಎನಿಸಿತು. ಅವರ ಈ ನೋವು ನೌಕರಿಯನ್ನೇ ತೊರೆದು ಹೊರಬರುವಂತೆ ಮಾಡಿತು. ಹಾಗೆ ನೋಡಿದರೆ ಅವರು ಅತ್ಯಂತ ವಿನಯಶೀಲ ವ್ಯಕ್ತಿಯೇ. ಆದರೆ  ಅವರ ಸ್ವಾಭಿಮಾನವನ್ನು ಕೆಣಕಿದವರು ಎದುರು ನಿಲ್ಲಲಾರರು. ಕಾಣೆಯವರು ಸರ್ಕಾರಿ ನೌಕರಿ ಬಿಟ್ಟು ಸ್ವತಂತ್ರವಾಗಿ ಜೀವನ ನಡೆಸಲು ನಿರ್ಧರಿಸಿದರು.

ಬದುಕು ನೆಲೆಗೊಂಡಿತು

ನಿರ್ಧಾರ ದೃಢವಾಯಿತು. ಹೇಗಿದ್ದರೂ ಅವರು ಆಗಲೇ ಎಲ್.ಎಲ್.ಬಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮುಂಬಯಿಯ ಉಚ್ಚ ನ್ಯಾಯಾಲಯದಲ್ಲಿ ಈ ಅವಕಾಶಕ್ಕಾಗಿ ಎಂದರೆ ಅಧಿಕೃತ ವಕೀಲನಾಗಲು ನಿಗದಿ ಪಡಿಸಿದ ಶುಲ್ಕವನ್ನು ಮೊದಲು ಕಟ್ಟಬೇಕು. ಆದರೆ ಅಷ್ಟೊಂದು ಹಣ ಅವರಲ್ಲಿ ಎಲ್ಲಿಂದ ಬರಬೇಕು? ಆದರೆ ಸೋಲರಿಯದ ಕಾಣೆಯವರು ಅದಕ್ಕಾಗಿ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳಿಗೆ ಕೈಪಿಡಿಗಳನ್ನು ಬರೆದು ಪ್ರಕಟಿಸಿ ಹಣ ಗಳಿಸಿದರು. ಅದೇ ಸಮಯಕ್ಕೆ ಸಂಸ್ಕೃತದಲ್ಲಿ ’ಅಲಂಕಾರ ಸಾಹಿತ್ಯದ ಇತಿಹಾಸ’ ಎಂಬ ಅವರ ಪುಸ್ತಕದ ಮೊದಲ ಮುದ್ರಣ ಹೊರ ಬಂದಿತು. ಅದರಿಂದ  ಐದುನೂರು ರೂಪಾಯಿಗಳು ದೊರೆತವು. ಹೀಗೆ ನಿರಾತಂಕವಾಗಿ ಅವರ ವಕೀಲ ವೃತ್ತಿ ಪ್ರಾರಂಭವಾಯಿತು. ಜೊತೆಗೇ ವ್ಯಾಸಂಗ, ಎಲ್.ಎಲ್.ಎಂ. ಎಂಬ ಕಾನೂನಿನ ಅತಿ ಉನ್ನತ ಪರೀಕ್ಷೆಯನ್ನು ಮುಗಿಸಿಕೊಂಡರು. ಈ ಪರೀಕ್ಷೆಗೆ ಹಿಂದೂ ಮತ್ತು ಮುಸ್ಲಿಮ್ ಕಾಯಿದೆಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದರು. ಈ ಎರಡು ಕಾಯಿದೆಗಳನ್ನು ಒಟ್ಟಿಗೇ ತೆಗೆದುಕೊಂಡು ಉತ್ತೀರ್ಣರಾದವರು ವಿರಳ. ಅವರ ಸಂಶೋಧಕ ಪ್ರವೃತ್ತಿಯಿಂದ ನ್ಯಾಯಾಲಯದಲ್ಲಿ ಅಷ್ಟೇ ಅಲ್ಲದೆ ಎಲ್ಲೆಡೆಯೂ ವಿಧಿವತ್ತಾಗಿ ವಾದಿಸಿ ಗೆಲ್ಲಲು ಅವರಿಗೆ ಬಹಳ ಅನುಕೂಲವಾಯಿತೆನ್ನಬಹುದು.

ಸಂಸ್ಕೃತ  – ಕಾನೂನು ಎರಡರ ಅಧ್ಯಾಪಕರು

ಇದೀಗ ಅವರು ಪ್ರತಿಭೆ ಮುಂಬಯಿ ವಿಶ್ವವಿದ್ಯಾನಿಲಯದ ಅಧಿಕಾರೀ ವರ್ಗದ ಗಮನ ಸೆಳೆಯಿತು. ವಿಲ್ಸನ್ ಕಾಲೇಜಿನಲ್ಲಿ ’ಭಾಷಾ ಶಾಸ್ತ್ರ ಭಾಷಣಮಾಲೆ’ಗೆ ಸಂಸ್ಕೃತ ಹಾಗೂ ತತ್ಸಂಬಂಧ ಭಾಷೆಗಳ ಉಪನ್ಯಾಸಕರಾಗಲು ೧೯೧೭ರಲ್ಲಿ ಪ್ರಾರ್ಥಿಸಿಕೊಂಡಿತು. ಅವರೂ ಅದನ್ನು ಒಪ್ಪಿಕೊಂಡರು. ಆಗ ಡಾಕ್ಟರ್ ಕಾಣೆಯವರಿಗೆ ಮೂವತ್ತಮೂರು ವರ್ಷ. ಇದು ಅವರ ಬದುಕಿನ ಮುಖ್ಯ ಗುರಿಗೆ ಮೂಲ ಪೀಠಿಕೆಯಾಗಿ ದೊರೆತ ಅವಕಾಶ ಎಂದು ಹೇಳಬಹುದು. ಮುಂದೆ ಅದೇ ಸಂಸ್ಥೆ ೧೯೧೫-೧೬ರ ಮೂಲ ಸಂಶೋಧನ ಶಿಷ್ಯವೃತ್ತಿಯಾಗಿ ತಿಂಗಳಿಗೆ ನೂರು ರೂಪಾಯಿಗಳನ್ನು ಕೊಡಲು ತೀರ್ಮಾನ ಮಾಡಿತು. ಸಂಶೋಧನೆಯ ವಿಷಯ ಮಹಾರಾಷ್ಟ್ರದ ಪ್ರಾಚೀನ ಭೂವಿವರಣೆ ಇದಲ್ಲದೆ ೧೯೧೬ರಲ್ಲಿ ವಿಲ್ಸನ್ ಕಾಲೇಜಿನಲ್ಲಿ ಆರು ತಿಂಗಳ ಕಾಲ ಸಂಸ್ಕೃತದ ಪ್ರಾಚಾರ್ಯರಾಗಿಯೂ ಕೆಲಸ ಮಾಡಿದರು.

ಮರು ವರ್ಷವೇ ಮುಂಬಯಿ ಸರ್ಕಾರಿ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕರಾಗಿ ನೇಮಕಗೊಂಡರು. ಈ ಹುದ್ದೆಯಲ್ಲಿ ಆರು ವರ್ಷಗಳ ಕಾಲ (೧೯೧೭-೨೩) ಕೆಲಸ ಮಾಡಿದರು. ನಲವತ್ತು ವರ್ಷಗಳ ದೀರ್ಘ ಕಾಲ ಅವರ ವಕೀಲ ವೃತ್ತಿ ಸಾಗಿತು.

ಅವರು ಶಿಕ್ಷಕರಾಗಿ ನೌಕರಿಗೆ ಸೇರಿದೊಡನೆಯೇ ಅವರಿಗೆ ಮದುವೆಯಾಯಿತೆಂದು ತೋರುತ್ತದೆ. ಎಂಟು ಜನ ತಮ್ಮಂದಿರಿದ್ದ ಸಂಸಾರದ ಹೊಣೆಯೂ ಸ್ವಲ್ಪ ಮಟ್ಟಿಗೆ ಅವರ ಮೇಲೆ ಬಿದ್ದಿತೆಂದು ಕಾಣುತ್ತದೆ.

ವೃತ್ತಿ ಹೊಣೆ, ವ್ಯಕ್ತಿ ಗೌರವ

ಡಾಕ್ಟರ್ ಕಾಣೆ ರಾಜಕೀಯ ವ್ಯಕ್ತಿ ಅಲ್ಲ. ಆದರೆ ನೈಜವಾದ ದೇಶಾಭಿಮಾನ ಇತ್ತು. ನಮ್ಮ ದೇಶದೊಂದಿಗೆ ಆಗಿನ ಬ್ರಿಟಿಷ್ ಆಡಳಿತ ಧೋರಣೆ ಹೇಗಿತ್ತೆಂದರೆ, ನೀವು ಹಿಂದುಳಿದವರು, ಅಜ್ಞಾನಿಗಳು ಅಲ್ಲದೆ ದುರ್ಬಲರು. ಸ್ವತಂತ್ರವಾಗಿ ಬಾಳುವ ಯೋಗ್ಯತೆ ನಿಮ್ಮಗಿಲ್ಲ, ಆದುದರಿಂದ ನಿಮಗೆ ಬೇಕಾದ ಎಲ್ಲ ಒಳ್ಳೆಯದನ್ನು ನಾವೇ ಮಾಡುತ್ತೇವೆ. ನೀವು ಮಾತ್ರ ಗಲಾಟೆ ಮಾಡದೆ ಗಂಭೀರವಾಗಿರಿ’ ಎನ್ನುವಂತೆ ಕಾಣೆಯವರು ಇದನ್ನು ಸಹಿಸುತ್ತಿರಲಿಲ್ಲ.

ಪರಕೀಯರ ಆಡಳಿತದಲ್ಲಿಯೂ ಕಾಣೆಯವರು ತಮ್ಮ ಅಪಾರ ಪ್ರತಿಭೆಯಿಂದಾಗಿ ಪ್ರಮುಖ ಸ್ಥಾನಕ್ಕೇರಿದರು. ದೊರೆತ ಅಧಿಕಾರವನ್ನು ಸಂಪೂರ್ಣ ದೇಶಹಿತಕ್ಕಾಗಿ ಬಳಸಿಕೊಂಡರು. ಆದರೆ ಯಾವ ಹುದ್ದೆಗಾಗಲಿ, ಹೆಸರಿಗಾಗಲಿ ಜೋತುಬಿದ್ದವರಲ್ಲ. ತಮ್ಮ ಅಧಿಕಾರಾವಧಿಯಲ್ಲಿ ವಿದೇಶಿಯರು ಅಹಂಕಾರದಿಂದ ಅನ್ಯಾಯವಾಗಿ ನಡೆದಾಗ ನಿರ್ದಾಕ್ಷಿಣ್ಯವಾಗಿ ಖಂಡಿಸಿದರು. ಆದರೂ ಅವರನ್ನು ದ್ವೇಷಿಸುತ್ತಿರಲಿಲ್ಲ. ಅಷ್ಟೊಂದು ನ್ಯಾಯ ಸಮ್ಮತವಾದ ಖಂಡನೆ ಅವರದು. ವಿರೋಧಿಗಳ ಕಣ್ಣು ತೆರೆಯಿಸುವಂತಹದು.

ಕಾಣೆಯವರು ಬರೆಯುತ್ತ ಕುಳಿತಿರುವುದು

ಮೊಕದ್ದಮೆಗಳ ಬಗೆಗೆ ವಾದಿಸಬೇಕಾದರೆ ಕಾಣೆಯವರು ಸಂಬಂಧಪಟ್ಟ ವಿಷಯಗಳನ್ನು ಕುರಿತು ಆಳವಾಗಿ ಅಭ್ಯಾಸ ಮಾಡುತ್ತಿದ್ದರು. ಜೊತೆಗೆ ಬೇರೆ ಬೇರೆ ನ್ಯಾಯಾಲಯಗಳು ಮತ್ತು ಪ್ರೀವಿ ಕೌನ್ಸಿಲ್ ನೀಡಿದ ತೀರ್ಪುಗಳು ಅವರಿಗೆ ತಿಳಿದಿರುತ್ತಿದ್ದವು. ಒಮ್ಮೆ ಮೊಕದ್ದಮೆಯೊಂದರಲ್ಲಿ ವಾದಿಸುತ್ತಿದ್ದಾಗ ಈ ಪ್ರಸಂಗ ನಡೆಯಿತು. ನ್ಯಾಯಾಧೀಶರು ಇವರ ವಾದವನ್ನು ಶುದ್ಧ ಮೂರ್ಖತನದ್ದೆಂದು ಖಂಡಿಸಿದರು. ಅದಕ್ಕೆ ಕಾಣೆ ನಗುತ್ತ ತಮ್ಮ ವಾದಕ್ಕೆ ಆಧಾರವನ್ನು ತೋರಿಸಿದರು. ಪ್ರೀವಿ ಕೌನ್ಸಿಲಿನ ಕಾಯಿದೆಯ ಸಮಿತಿಯ ತೀರ್ಮಾನವಿದು ಎಂದರು. ನ್ಯಾಯಾಧೀಶರು ತಬ್ಬಿಬ್ಬಾದರು.

ಎಷ್ಟು ದೊಡ್ಡ ನ್ಯಾಯಾಧೀಶರೇ ಆಗಿರಲಿ,  ಅವರ ಅಹಂಕಾರದ ವರ್ತನೆಯನ್ನು ಕಾಣೆಯವರು ಸಹಿಸುತ್ತಿರಲಿಲ್ಲ. ಒಮ್ಮೆ ನ್ಯಾಯಾಧೀಶರೊಬ್ಬರು ವಕೀಲರಿಗೆ ಅಪಮಾನವಾಗುವಂತಹ ಪ್ರಶ್ನೆಯನ್ನು ಕಾಣೆಯವರಿಗೆ ಹಾಕಿದರು.  ಡಾಕ್ಟರ್ ಕಾಣೆಯವರ ಸ್ವಾಭಿಮಾನ ಕೆರಳಿತು. ’ನಾನು ವಕೀಲ. ಸಾಕ್ಷಿಯಲ್ಲ’ ಎಂದವರೇ  ಅಲ್ಲಿಂದ ನೇರವಾಗಿ ಮುಖ್ಯ ನ್ಯಾಯಾಧೀಶರತ್ತ ನಡೆದರು. ’ಈ ನ್ಯಾಯಾಧೀಶರು ತಮ್ಮ ಮಿತಿ ತಪ್ಪಿ ನಡೆದಿದ್ದಾರೆ. ಅವರನ್ನು ವಿಚಾರಿಸಿ’ ಎಂದು ಹೇಳಿ, ಕಾನೂನು ರೀತಿಯಾಗಿ ತನ್ನ ಹೇಗೆಂಬುದನ್ನು ಮನಗಾಣಿಸಿದರು. ಕೊನೆಗೆ, ’ನ್ಯಾಯಮೂರ್ತಿಗಳಾದ ತಮ್ಮೆಲ್ಲರನ್ನೂ ನಾವು ಗೌರವದಿಂದ ಕಾಣುವಂತೆಯೇ ನಮ್ಮ ವಕೀಲ ವೃಂದದವರನ್ನು ನ್ಯಾಯಾಧೀಶರೂ ಕಾಣಬೇಕು’ ಎಂದರು. ಮುಖ್ಯ ನ್ಯಾಯಾಧೀಶರು ’ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡರು, ಅಲ್ಲದೆ ಮುಂದೆಂದೂ ಇಂಥ ಪ್ರಸಂಗ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟರು.

ಒಮ್ಮೆ ಒಬ್ಬ ಕಕ್ಷಿಗಾರ ಕಾಣೆಯವರನ್ನು ದೂಷಿಸಿ ನ್ಯಾಯಾಲಯಕ್ಕೆ ಪತ್ರ ಬರೆದ. ಅದನ್ನು ನ್ಯಾಯಮೂರ್ತಿಗಳು ಕಾಣೆಯವರಿಗೆ ತೋರಿಸಿ, ಏನು ಮಾಡಬೇಕೆಂದು ಕೇಳಿದರು. ಅದಕ್ಕೆ ಕೂಡಲೇ ಒಂದು ಸಲಹೆ ಕೊಟ್ಟರು ಕಾಣೆಯವರು. ’ಇದನ್ನು ಮುಖ್ಯ ನ್ಯಾಯಾಧೀಶರಿಗೆ ತೋರಿಸಿರಿ. ಅವರು ಹೇಗೆ ಬೇಕೋ ಹಾಗೆ ಕ್ರಮ ತೆಗೆದುಕೊಳ್ಳಲಿ.’

ನ್ಯಾಯಕ್ಕಾಗಿ

ವೃತ್ತಿ ವಕೀಲಿ, ಆದರೆ ಬದುಕಿನ ಮಹತ್ತರ ಗುರಿಯೇ ಬೇರೆ. ಆದುದರಿಂದ ವಿಷಯಗಳ ಗಹನ ಅಧ್ಯಯನ ಅವರ ಜೀವನದ ಉಸಿರೇ ಆಗಿತ್ತು ಎಂದ ಮೇಲೆ ಅವರ ಈ ಪ್ರವೃತ್ತಿ ಹಿಡಿದ ವೃತ್ತಿಗೂ ಪೂರಕ. ಹಿಂದೂ ಕಾಯಿದೆ ಮೊಕದ್ದಮೆಗಳಲ್ಲಿ ಅಂತೂ ಕಾಣೆಯವರ ಹೇಳಿಕೆಯೇ ಅಧಿಕೃತವಾದದ್ದು. ಎಂತಲೇ ಕಾಣೆಯವರು ಎಷ್ಟೋ ಸುಧಾರಿತ ಹಿಂದೂ ಕಾಯಿದೆಗಳು ಜಾರಿಗೆ ಬರುವಂತೆ ಮಾಡಿದರು. ಕೆಟ್ಟ ಸಂಪ್ರದಾಯಗಳನ್ನು ಕಾನೂನು ಬದ್ಧವಾಗಿ ರದ್ದುಗೊಳಿಸಿದರು.

ಪುಣೆಯ ಡೆಕ್ಕನ್ ಕಾಲೇಜನ್ನು ಮುಚ್ಚಿಬಿಡಬೇಕೆಂದು ಸರ್ಕಾರದ ತೀರ್ಮಾನ. ಆದರೆ ಲೋಕಮಾನ್ಯ ತಿಲಕ್,  ಡಾಕ್ಟರ್  ಅಗರ್ ಕರ್ ಮುಂತಾದ ಅನೇಕ ರತ್ನಗಳನ್ನು ದೇಶಕ್ಕೆ ನೀಡಿದ ಕಾಲೇಜ್ ಅದು. ಸುದ್ದಿ ತಿಳಿದ ಅನೇಕ ದೇಶಾಭಿಮಾನಿಗಳ ಮನ ನೊಂದಿತು. ಕಾಣೆ ಸಹಿತ ಬಹಳ ಬೇಸರಗೊಂಡರು. ಅವರ ಮನಸ್ಸು ಆಗಲೇ ಕಾನೂನನ್ನು ತಡಕಾಡಲು ಪ್ರಾರಂಭಿಸಿತು. ಕಾಲೇಜನ್ನು ಉಳಿಸಿಯೇ ತೀರಬೇಕೆಂದು ಅವರ ಸಂಕಲ್ಪ. ಕಾನೂನು ಬದ್ಧವಾಗಿ ವಾದಿಸಲು ಅವರಿಗೆ ದೊರೆತ ಒಂದೇ ಒಂದು ಆಧಾರವೆಂದರೆ, ಆ ಸಂಸ್ಥೆ ಪೂರ್ಣ ಸರ್ಕಾರದ್ದಲ್ಲ ಎಂಬುದು. ಕಾಣೆಯವರು ಡೆಕ್ಕನ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲರನ್ನೂ ಭೇಟಿ ಮಾಡಿದರು. ’ಹಳೆಯ ವಿದ್ಯಾರ್ಥಿಗಳ ಸಂಘ’ ಸ್ಥಾಪಿಸಿದರು. ಬಳಿಕ ಅದರ ಮೂಲಕ ಮೊಕದ್ದಮೆ ಹೂಡಿದರು. ಜಿಲ್ಲಾ ನ್ಯಾಯಾಲಯದಲ್ಲಿ ಗೆದ್ದರು. ಅದೇ ಸಮಯದಲ್ಲಿ ಮುಂಬಯಿಯ ಉಚ್ಚ ನ್ಯಾಯಾಲಯದಲ್ಲಿ ಸಲಹಾಗಾರರಾಗಿದ್ದ ಬಿ.ಜಿ.ಖೇರರೂ ನೆರವಿಗೆ ನಿಂತರು. ಡಾಕ್ಟರ್ ಎಂ.ಆರ್. ಜಯಕರ್ ಮುಂತಾದ ಗಣ್ಯವ್ಯಕ್ತಿಗಳ ಬೆಂಬಲವೂ ದೊರೆಯಿತು. ಕಾಣೆ ಮೊಕದ್ದಮೆಯನ್ನು ಗೆದ್ದರು. ಇಂದು ಡೆಕ್ಕನ್ ಕಾಲೇಜ್ ಹಿಂದೂ ತತ್ತ್ವಶಾಸ್ತ್ರ. ವಿವಿಧ ಭಾಷಾವಿಜ್ಞಾನ ಮುಂತಾದ ಅನೇಕ ಶಾಖೆಗಳಿಂದ ಕೂಡಿದ ಸಂಶೋಧನೆ ಕೇಂದ್ರವಾಗಿದೆ.

ಸುಧಾರಕ

ಆಗಿನ ಕಾಲದಲ್ಲಿ ಹಿಂದೂ ಸಂಪ್ರದಾಯದ ತೀರಾ ಅನಿಷ್ಟ ಪದ್ಧತಿಯೊಂದಿತ್ತು. ಗಂಡ ಸತ್ತ ಕೂಡಲೇ ಹೆಂಡತಿಯಾದವಳು ಎಷ್ಟೇ ಚಿಕ್ಕ ಹುಡುಗಿಯಾಗಿದ್ದರೂ ಅವಳ ತಲೆಯ ಕೂದಲನ್ನು ತೆಗೆದು ವಿರೂಪಗೊಳಿಸಿ ಬಿಡುವರು. ಇಂತಹ ಇನ್ನೂ ಅನೇಕ ಕೆಟ್ಟಪದ್ಧತಿಗಳು ಆಗ ರೂಢಿಯಲ್ಲಿದ್ದವು. ಸುಧಾರಣಾ ವಾದಿಗಳು ಇದನ್ನು ಸಹಿಸುತ್ತಿರಲಿಲ್ಲ. ಅಂತಹ ಪದ್ಧತಿಗಳ ವಿರುದ್ಧ ಒಂದು ಆಂದೋಳನ ಆಗ ಮಹಾರಾಷ್ಟ್ರದಲ್ಲಿ ನಡೆಯಿತು. ಹಿಂದಿನ ಸಂಪ್ರದಾಯಗಳಿಗೆ ಅಂಟಿಕೊಂಡ ಪಂಡಿತರೊಬ್ಬರು ಆಂದೋಳನಕ್ಕೆ ಎದುರಾಗಿ ನಿಂತರು. ಕ್ರಾಂತಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದರು. ಆತನಿಗೆ ವಿರುದ್ಧವಾಗಿ ಕಾಣೆಯವರು ’ವೈದಿಕ ಧರ್ಮವನ್ನು ವ್ಯಾಖ್ಯಾನ ಮಾಡುವುದು ತರ್ಕಶಾಸ್ತ್ರ. ಕಾಲಕ್ಕೆ ತಕ್ಕಂತೆ ತರ್ಕಶಾಸ್ತ್ರದಲ್ಲಿ ಬದಲಾವಣೆ ಆಗುತ್ತಲೇ ಬಂದಿದೆ. ಮುಂದೆಯೂ ಆಗುತ್ತದೆ. ಹಾಗೇ ಆಗಲೇ ಬೇಕು’ ಎಂದು ಉದಾಹರಣೆ ಸಮೇತ ಶಾಸ್ತ್ರಬದ್ಧವಾಗಿ ವಾದಿಸಿದರು. ಮೊಕದ್ದಮೆಯನ್ನು ಗೆದ್ದರು. ಶ್ರೀಕ್ಷೇತ್ರ ಪಂಢರಪುರದ ವಿಚಾರದಲ್ಲೂ ಅವರ ಸುಧಾರಕ ದೃಷ್ಟಿ ಕಾಣುತ್ತದೆ. ಪಾಂಡುರಂಗನ ಪಾದ ಮುಟ್ಟಿ ನಮಸ್ಕರಿಸಲು ವಿಧವೆಯರಿಗೆ ಅವಕಾಶವಿರಲಿಲ್ಲ. ಅಸ್ಪೃಶ್ಯರಿಗೂ ಇರಲಿಲ್ಲ. ಈಗ ಅಲ್ಲಿ ಇಂತಹ ಭೇದ ಅಳಿದುಹೋಗಿದೆ. ಇದಕ್ಕೆ ಕಾಣೆಯವರು ಕಾರಣ. ಇದೇ ರೀತಿ ಸುಧಾರಿತ ದತ್ತಕ ಪದ್ಧತಿ, ಬಾಲ್ಯವಿವಾಹ ನಿಷೇಧ, ವಿಧವೆಯರ ಪುನರ್ವಿವಾಹ ಮುಂತಾದ ಅನೇಕ ಸುಧಾರಣೆಗಳನ್ನು ಮಾಡಿ ಕಾನೂನು ಬದ್ಧಗೊಳಿಸಿದರು.

ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಲೇಬೇಕು

ಸಮಾಜಕ್ಕೆ ಹತ್ತು ಬಗೆಯ ಸೇವೆ

ಸಮಾಜ ಸೇವೆ ಮಾಡುವ ಮನಸ್ಸೊಂದಿದ್ದರೆ ಯಾವ ವೃತ್ತಿಯಾದರೇನು? ಕಾಣೆಯವರು ತಮ್ಮ ವೃತ್ತಿಯ ಮೂಲಕವೇ ಎಷ್ಟೊಂದು ಜನೋಪಕರಾದ ಕೆಲಸಗಳನ್ನು ಮಾಡಿದರು! ಪರಿಣಾಮವಾಗಿ ಮುಂಬಯಿ ಮತ್ತು ಮುಂಬಯಿಯ ಹೊರಗಿನ ಅನೇಕ ಸಂಸ್ಥೆಗಳೊಂದಿಗೆ ಅವರ ಸಂಪರ್ಕ ಬೆಳೆಯತೊಡಗಿತು. ೧೯೨೮ರಿಂದ ಸುಮಾರು ಹದಿನೈದು ವರ್ಷಗಳ ಕಾಲ ಮುಂಬಯಿ ವಿಶ್ವವಿದ್ಯಾನಿಲಯದ ಕಾನೂನು ಸಮಿತಿಯ ಸದಸ್ಯರಾಗಿದ್ದರು. ಆಗಲೇ ಅವರ ಕಾರ್ಯ ಕ್ಷಮತೆಯ ಪರಿಚಯ ಸಾಕಷ್ಟಾಗಿತ್ತು. ಮುಂದೆ ೧೯೪೭ರಲ್ಲಿ ಮುಂಬಯಿ ಪ್ರಾಂತದ ಮುಖ್ಯಮಂತ್ರಿ ಬಿ.ಜಿ. ಖೇರ್ ಅವರ ಒತ್ತಾಯದಿಂದ ಅಲ್ಲಿ ಉಪಕುಲಪತಿಯಾಗಿ ಕೆಲಸ ಮಾಡಿದರು. ತಮ್ಮ ಈ ಅಧಿಕಾರಾವಧಿಯಲ್ಲಿ ಅನೇಕ ಆಡಳಿತ ಸುಧಾರಣೆಗಳನ್ನು ಮಾಡಿದರು. ಅನಾವಶ್ಯಕ ನಿಯಮಗಳನ್ನು ತೆಗೆದು ಹಾಕಿ, ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದರು. ಇಲ್ಲಿಂದ ಅವರ ಸಾರ್ವಜನಿಕ ಜೀವನ ಪ್ರಾರಂಭ. ಅವರ ವ್ಯಕ್ತಿತ್ವದ ಪರಿಚಯ ಇದೀಗ ಎಲ್ಲರಿಗೂ! ಕಾಣೆಯವರು ಹೊಣೆ ಹೊತ್ತ ಕಾರ್ಯಗಳಲ್ಲಿ ಯಾವಾಗಲೂ ದಕ್ಷರು. ಕರ್ತವ್ಯನಿಷ್ಠರು. ಅಲ್ಲದೆ ನಿಷ್ಪಕ್ಷಪಾತಿ. ಸಂಸ್ಥೆಯಲ್ಲಿದ್ದುಕೊಂಡು ಅದನ್ನು ಹಾಳು ಮಾಡಲೆತ್ನಿಸುವವರನ್ನಂತೂ ನಿರ್ದಾಕ್ಷಿಣ್ಯವಾಗಿ ಹೊರಗೆಳೆದು ತರುತ್ತಿದ್ದರು.

ಹೊಗಳಿಗೆ – ತೆಗೆಳಿಕೆಗಳತ್ತ ಕಾಣೆಯವರದು ಯಾವಾಗಲೂ ಅಲಕ್ಷ್ಯಭಾವ. ಪ್ರಸಿದ್ಧಿಯ ಹಂಬಲವಿಲ್ಲದೆ ದುಡಿದರು. ಆದರೂ ಆ ಪ್ರಸಿದ್ಧ – ಪ್ರಶಸ್ತಿಗಳು ಅವರ ಬೆನ್ನಟ್ಟಿ ಬಂದವು! ೧೯೪೦ರಲ್ಲಿ ಕಾಣೆಯವರು ತಮ್ಮ ಅರವತ್ತರ ಗಡಿ ದಾಟಿದರು. ಆಗ ಮಹಾರಾಷ್ಟ್ರ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸಿತು. ಕಾಣೆಯವರ  ಮಿತ್ರರೂ ಅಭಿಮಾನಿಗಳೂ ಸೇರಿ ಅವರಿಗೆ ಒಂದು ಗೌರವ ಗ್ರಂಥವನ್ನು ಅರ್ಪಿಸಿ ಸನ್ಮಾನಿಸಿದರು. ೧೯೪೨ ರಲ್ಲಿ ಅಲಹಾಬಾದ್, ಪುಣೆ, ಮುಂಬಯಿ ವಿಶ್ವವಿದ್ಯಾನಿಲಯಗಳಿಂದ ’ಡಾಕ್ಟರೇಟ್’ ಪದವಿ. ಆಗಿನಿಂದ ಅವರು ಡಾಕ್ಟರ್ ಕಾಣೆ ಆದರು. ಅದೇ ಹೊತ್ತಿಗೆ ಮುಂಬಯಿಯ ಬ್ರಿಟಿಷ್ ಸರ್ಕಾರ ಅವರನ್ನು ಮಹಾಮಹೋಪಾಧ್ಯಾಯ ಎಂದು ಕರೆದು ಸನ್ಮಾನಿಸಿತು. ೧೯೪೬ರಲ್ಲಿ ಅಖಿಲ ಭಾರತ ಪುರಾತತ್ವ ಸಮ್ಮೇಳನದ ಅಧ್ಯಕ್ಷರಾದರು.

ನನ್ನ ಮೂಲ ಗುರಿ

೧೯೪೭ರಿಂದ ೪೯ರವರೆಗೆ ಮುಂಬಯಿ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕಾಣೆಯವರು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದುದನ್ನು ಕಂಡು ಮತ್ತೂ ಎರಡು ವರ್ಷ ಮುಂದುವರಿಯಲು ಸರ್ಕಾರ ಕೇಳಿಕೊಂಡಿತು. ಅಲ್ಲದೆ ಅವರು ಜೀವನಕ್ಕಾಗಿ ನಡೆಸುತ್ತಿದ್ದ ವಕೀಲ ವೃತ್ತಿಯನ್ನು ತ್ಯಜಿಸಿ ತಮ್ಮ ಸಂಪೂರ್ಣ ವೇಳೆಯನ್ನು ವಿಶ್ವವಿದ್ಯಾನಿಲಯಕ್ಕೇ ಮೀಸಲಿಡಬೇಕೆಂದು ಬಯಸಿತು. ಅದಕ್ಕಾಗಿ ಅವರಿಗೆ ಅನುಕೂಲವಾಗಲೆಂದು ಎರಡು ಸಾವಿರ ರೂಪಾಯಿ ಮಾಸಿಕವೇತನವನ್ನು ನಿಗದಿ ಮಾಡಿತು. ಆದರೆ ಕಾಣೆ ಅದನ್ನು ನಮ್ರವಾಗಿ ನಿರಾಕರಿಸಿದರು. ’ನಿಮ್ಮ ಅಪೇಕ್ಷೆಯಂತೆ ಎರಡು ವರ್ಷ ಕೆಲಸ ಮಾಡಿದ್ದೇನೆ. ಇನ್ನು ಸಾಕು. ದಯವಿಟ್ಟು ಕ್ಷಮಿಸಿ. ನನ್ನನ್ನು ಸ್ವತಂತ್ರವಾಗಿರಲು ಬಿಡಿ. ನನ್ನ ಉಳಿದ ಆಯುಷ್ಯವನ್ನೆಲ್ಲ ಇನ್ನು ನನ್ನ ಮೂಲ ಗುರಿಗೆ ಮೀಸಲಾಗಿಡಬೇಕು. ಧರ್ಮಶಾಸ್ತ್ರದ ಇತಿಹಾಸವನ್ನು ನಾನು ಬರೆದು ಮುಗಿಸಬೇಕು. ತಾವು ನೀಡಿದ ಅವಕಾಶಕ್ಕಾಗಿ ಧನ್ಯವಾದಗಳು’ ಎಂದು ಬರೆದರು.

ಮನಸ್ಸು ಮಾಡಿದ್ದರೆ ಅವರು ಹಣದ ಹೊಳೆಯನ್ನೇ ಹರಿಸಬಹುದಾಗಿತ್ತು. ತಮ್ಮ ವಕೀಲ ವೃತ್ತಿಯಲ್ಲಿ. ಆದರೆ ಗುರಿಯ ಸಾಧನೆಗಾಗಿಯೇ ಬದುಕಿದ ಆದರ್ಶವಾದಿಗಳು ಅವರು. ತಮ್ಮ ಅನಾರೋಗ್ಯವನ್ನೂ ಲಕ್ಷಿಸದೆ ಶ್ರಮಿಸಿದರು.

ಗೌರವಗಳ ಮಾಲೆ

ಮುಂಬಯಿಯ ರಾಯಲ್ ಏಷ್ಯಾಟಿಕ್ ಸಂಸ್ಥೆ ಅವರ ಬೃಹತ್ಕಾರ್ಯದ ಗರ್ಭಗುಡಿ, ಅವರು ತಮ್ಮ ಸಂಶೋಧನಾ ಕಾರ್ಯವನ್ನು ಕೊನೆಯವರೆಗೂ ಅಲ್ಲಿಯೇ ನಡೆಸಿದರು. ಸಂಜೆ ನ್ಯಾಯಾಲಯದ ಕೆಲಸ ಮುಗಿದೊಡನೆ ನೇರವಾಗಿ ಅಲ್ಲಿಗೇ ಬಂದು ರಾತ್ರಿ ಏಳು ಏಳೂವರೆಯವರೆಗೆ ಅಲ್ಲಿದ್ದ ತಮ್ಮ ಕೆಲಸದಲ್ಲಿ ಲೀನವಾಗಿ ಬಿಡುವರು. ಇದು ಅವರ ನಿತ್ಯ ಪರಿಪಾಠ. ವಕೀಲ ವೃತ್ತಿಯಿಂದ ನಿವೃತ್ತರಾಗಿ ತಮ್ಮ ಸಂಶೋಧನ – ಲೇಖನ ಕಾರ್ಯ ಮನೆಯಲ್ಲಿಯೇ ನಡೆಸುತ್ತಿದ್ದಾಗಲೂ ಅಷ್ಟೇ. ಈ ಸಂಸ್ಥೆಯಲ್ಲಿ ಮೊದಲು ಫೆಲೋ ಆಗಿದ್ದರು. ಮುಂದೆ ವ್ಯವಸ್ಥಾ ಸಮಿತಿಯ ಸದಸ್ಯರು. ಅನಂತರ ಉಪಾಧ್ಯಕ್ಷರಲ್ಲಿ ಒಬ್ಬರು. ಅಲ್ಲದೆ ಈ ಸಂಸ್ಥೆಯಿಂದ ಹೊರಡುವ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿಯೂ ಕೆಲಸ ಮಾಡಿದರು.  ಸಂಶೋಧನೆಗಾಗಿಯೇ ಮೀಸಲಾದ ಈ ಪತ್ರಿಕೆ ಆಗ ಇಡೀ ಪ್ರಪಂಚದಲ್ಲಿಯೇ ಪ್ರಸಿದ್ದವಾಗಿತ್ತು. ’ಡಾಕ್ಟರ್ ಕಾಣೆ ಸುವರ್ಣಪದಕ’ ವನ್ನು ಪ್ರತಿವರ್ಷ ಪ್ರತಿಭಾವಂತ ಸಂಶೋಧಕರೆಂದು ಆಯ್ಕೆಗೊಂಡವರಿಗೆ ಈ ಸಂಸ್ಥೆಯಿಂದ ಕೊಡಲಾಗುತ್ತಿತ್ತು. ೧೯೪೪ರಲ್ಲಿ ರಾಯಲ್ ಏಷ್ಯಾಟಿಕ್ ಸಂಸ್ಥೆಯು ಕಾಣೆಯವರಿಗೆ ’ ಕ್ಯಾಂಬೆಲ್ ಸುವರ್ಣಪದಕ’ ವನ್ನಿತ್ತು ಗೌರವಿಸಿತು. ವಿಶೇಷವೇನೆಂದರೆ, ಹಿಂದೂ ಪುರಾತತ್ತ್ವ ಹಾಗೂ ಪ್ರಬಂಧಗಳನ್ನು ಬರೆಯುವವರಿಗೇ ಇದನ್ನು ಕೊಡಲಾಗುತ್ತದೆ. ಕಾಣೆಯವರಿಗೆ ಇದನ್ನು ಕೊಡುವ ಮೊದಲು ಹನ್ನೆರಡು ಜನಕ್ಕೆ ಮಾತ್ರ ಈ ಪದಕವನ್ನು ಕೊಡಲಾಗಿತ್ತು.

೧೯೪೫ರಲ್ಲಿ ಕಾಣೆಯವರು ಹಿಂದೂ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೫೩ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷತೆ. ಮತ್ತು ಅದೇ ವರ್ಷ ರಾಜ್ಯಸಭೆಗೆ ನಾಮಕರಣ. ಆಗ ಸದಸ್ಯರಿಗೆ ಅವರಿಂದ ಹಿಂದೂ ಕಾಯಿದೆಗೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿನ ಗ್ರಂಥಗಳ ಪರಿಚಯ. ರಾಜ್ಯಸಭೆಯ ಸದಸ್ಯರಾಗಿ ಆರು ವರ್ಷಗಳ ಕಾಲ ಇದ್ದರು. ೧೯೫೬ರಲ್ಲಿ ಅವರಿಗೆ ’ಸಂಸ್ಕೃತ ಮಹಾ ವಿದ್ವಾಂಸ’ ರೆಂಬ ಪ್ರಶಸ್ತಿ ದೊರಕಿತು. ೧೯೫೯ರಲ್ಲಿ ಹಿಂದೂ ತತ್ತ್ವಶಾಸ್ತ್ರದ ರಾಷ್ಟ್ರೀಯ ಪ್ರಾಚಾರ್ಯ’ ರಾದರು. ೧೯೬೩ರಲ್ಲಿ ಭಾರತ ಸರ್ಕಾರದಿಂದ ’ಭಾರತರತ್ನ’ ಪ್ರಶಸ್ತಿ. ಹೀಗೆ ಅವರಿಗೆ ದೊರೆತ ಗೌರವಗಳು ಹಲವಾರು.

ಸಮಾಜಕಾರ್ಯ

ಪ್ರಶಸ್ತಿಗಳನ್ನಿತ್ತು ಗೌರವಿಸಿದ ಸಂಸ್ಥೆಗಳು ಕೆಲವಾದರೆ, ಕಾಣೆಯವರಿಂದ ಉದ್ಧಾರಗೊಂಡ ಸಂಸ್ಥೆಗಳು ಮತ್ತೆ ಕೆಲವು. ಅಂಥ ಸಂಸ್ಥೆಗಳೊಂದಿಗೆ ಅವರದು ಅತ್ಯಂತ ಆತ್ಮೀಯ ಸಂಬಂಧ. ಅವರು ಇಪ್ಪತ್ತೈದು ವರ್ಷಗಳ ಕಾಲ ಅದರ ವ್ಯವಸ್ಥಾ ಸಮಿತಿಯ ಸದಸ್ಯರು ಮತ್ತು ಸಲಹಾ ಸಮಿತಿಯ ಪಂಚ ಸದಸ್ಯರಲ್ಲಿ ಒಬ್ಬರು. ಮುಂದೆ ಹತ್ತು ವರ್ಷವ್ಯವಸ್ಥಾ ಸಮಿತಿಯ ಅಧ್ಯಕ್ಷರಾದರು. ಆಗ ಗಣೇಶೋತ್ಸವ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಹರಿಜನರೂ ಭಾಗವಹಿಸುವಂತೆ ಮಾಡಿದರು. ಇದು ನಡೆದದ್ದು ೧೯೨೭ರಲ್ಲಿ  ಅದೂ ನಿತ್ಯವೂ ತಪ್ಪದೆ ಸಂಧ್ಯಾವಂದನೆ ಮಾಡುವ ವ್ಯಕ್ತಿಯಿಂದ! ಡಾಕ್ಟರ್ ಕಾಣೆ ಧರ್ಮವನ್ನು ಚೆನ್ನಾಗಿ ಅರಿತಿದ್ದರು. ಧಾರ್ಮಿಕ ಆಡಂಬರ, ಅಜ್ಞಾನ, ಅಲ್ಲದೆ ಡಾಂಭಿಕತನ ಈ ಮೂರನ್ನೂ ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಅವರ ವ್ಯಕ್ತಿತ್ವ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹದಲ್ಲ. ಎಂತಲೇ ಅವರನ್ನೂ ಅವರ ಸಂಗಾತಿಗಳನ್ನೂ ಪ್ರಬಲವಾಗಿ ವಿರೋಧಿಸುವವರ ಬೆದರಿಕೆಯ ಪತ್ರಗಳು ಬರತೊಡಗಿದವು. ಆಗ ಪೊಲೀಸ್ ರಕ್ಷಣೆ ಪಡೆಯಲು ಅನೇಕರು ಸಲಹೆ ಕೊಟ್ಟರು. ’ನನ್ನಲ್ಲಿ ನ್ಯಾಯವಿದ್ದರೆ ದೇವರೇ ನನಗೆ ರಕ್ಷಣೆ ನೀಡಿಯಾರು?’ ಎಂದು ಹೇಳಿ ಸ್ನೇಹಿತರ ಸಲಹೆಯನ್ನು ನಿರಾಕರಿಸಿದರು.

ಬ್ರಾಹ್ಮಣ ಸಭಾದ ಸದಸ್ಯರಲ್ಲಿ ಒಡಕುಂಟಾಯಿತು. ಸಂಸ್ಥೆಯ ಒಬ್ಬ ಸದಸ್ಯರೇ ವ್ಯವಸ್ಥಾ ಸಮಿತಿಯ ವಿರುದ್ಧ ಮೊಕದ್ದಮೆ ಹೂಡಿದರು. ಅವರ ಪರವಾಗಿ ಮಹಮದಾಲಿ ಜಿನ್ನಾ ವಾದಿಸಿದರು. ಕಡೆಗೆ ಡಾ. ಕಾಣೆಯವರೇ ಗೆದ್ದರು. ಈ ಸಂಸ್ಥೆಗಾಗಿ ಅವರು ದುಡಿದದ್ದು ಅಷ್ಟಿಷ್ಟಲ್ಲ. ಅವರು ಸೇರಿದಾಗ ಸಂಸ್ಥೆಗೆ ಭಾರೀ ಬಡತನ. ಮನೆಮನೆಗೂ ತಿರುಗಿ ಹಣ ಸೇರಿಸಿದರು. ಅದಕ್ಕೊಂದು ವ್ಯವಸ್ಥಿತವಾದ ರೂಪ ಕೊಟ್ಟರು.

ಮರಾಠೀ ಗ್ರಂಥ ಸಂಗ್ರಹಾಲಯಕ್ಕೂ ಅವರ ಸೇವೆ ಅಷ್ಟಿಷ್ಟಲ್ಲ. ಈ ಸಂಸ್ಥೆಯ ನಿಯಾಮಕ ಮಂಡಳಿಯ ಉಪಾಧ್ಯಕ್ಷರಾದಾಗ, ಅದರ ಕಟ್ಟಡದ ಗೋಡೆಯೊಂದು ಕುಸಿದು ಬಿದ್ದಿತು. ಅದನ್ನು ಕಟ್ಟಿಸಬೇಕು. ಕಟ್ಟಿಸಿದ್ದಾಯಿತು. ಮಾಡಿಸಿದ ಕೆಲಸಕ್ಕೆ ಕೂಲಿ ಕೊಡಲು ಹಣವಿಲ್ಲ .ಕಾಣೆಯವರೇ ಊರೆಲ್ಲ ಅಲೆದು ಹಣ ಸೇರಿಸಿದರು. ಮುಂದೆ ಇದೇ ಸಂಗ್ರಹಾಲಯಕ್ಕಾಗಿ ಒಬ್ಬ ಸ್ವಯಂಸೇವಕ ಇನ್ನೂರು ರೂಪಾಯಿಗಳನ್ನು ಸೇರಿಸಿದ್ದ. ಆದರೆ ರೋಗಗ್ರಸ್ತನಾಗಿ ಸತ್ತೇ ಹೋದ. ವಿಚಾರಿಸಿದಾಗ ಕೂಡಿಸಿದ ಹಣ ಔಷಧೋಪಚಾರಕ್ಕಾಗಿ ಖರ್ಚಾಗಿ ಹೋಯಿತೆಂದು ತಿಳಿಯಿತು. ಕಾಣೆಯವರು ಆ ಹಣವನ್ನು ತಮ್ಮ ಜೇಬಿನಿಂದ ಸಂಸ್ಥೆಗೆ ಪಾವತಿ ಮಾಡಿದರು!

ಧರ್ಮದ ಆಚರಣೆಯಲ್ಲಿ ವಿವೇಚನೆ

ಕಾಣೆಯವರು ಧರ್ಮನಿರ್ಣಯ ಮಂಡಲದ ಸದಸ್ಯರಾಗಿ ಬಹಳ ಶ್ರದ್ದೆಯಿಂದ ಕೆಲಸ ಮಾಡಿದರು. ಇಂದಿನ ಯುಗಕ್ಕೆ ಹೊಂದದ ಅನೇಕ ಹಿಂದೂ ಪದ್ಧತಿಗಳಿಗೆ ಹೊಸ ರೂಪ ಕೊಟ್ಟರು. ಹಿಂದೂಗಳ ಕಾಯಿದೆಯಲ್ಲಿ ಅಗತ್ಯವಾಗಿದ್ದ ಬದಲಾವಣೆಗಳನ್ನು ತರಲು ಯೋಚಿಸಿ ಸರ್ಕಾರ ’ಹಿಂದೂ ಕಾಯಿದೆ’ ಮಸೂದೆಯನ್ನು ಸಿದ್ಧಪಡಿಸಿತು. ಇದು ರಾಜ್ಯಸಭೆಯಲ್ಲಿ ಒಪ್ಪಿಗೆಯಾಗಲು ಇದ್ದ ಅನೇಕ ತೊಂದರೆಗಳನ್ನು ನಿವಾರಿಸುವಲ್ಲಿ ಕಾಣೆಯವರದು ಹಿರಿಯ ಪಾತ್ರ. ಅದಕ್ಕಾಗಿ ಮಹಾರಾಷ್ಟ್ರ ಹಾಗೂ ಇತರೆಡೆಗಳಲ್ಲೆಲ್ಲ ಸುತ್ತಾಡಿದರು. ಸಭೆಗಳನ್ನು ಕರೆದು ಜನಮತ ಸಿದ್ಧಗೊಳಿಸಿದರು. ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು. ಧರ್ಮ ನಿರ್ಣಯ ಮಂಡಳಿಯ ವತಿಯಿಂದ ’ಏತಕ್ಕೆ ಹಿಂದೂ ಕಾಯಿದೆ?’ ಎಂಬ ವಿಷಯವನ್ನು ಕುರಿತು ಸಣ್ಣ ಪುಸ್ತಕವನ್ನೇ ಪ್ರಕಟಿಸಿದರು. ಕೊನೆಗೆ ಸುಧಾರಣೆಗೊಂಡ ಹಿಂದೂ ಕಾಯಿದೆ ಮಸೂದೆ ಸರ್ವಾನುಮತದಿಂದ ಒಪ್ಪಿಗೆಯಾಯಿತು. ಅಷ್ಟಕ್ಕೇ ಅವರ ಕೆಲಸ ಮುಗಿಯಲಿಲ್ಲ. ಈ ವಿಚಾರವಾಗಿ ಜನರು ಪೂರ್ಣ ಅರಿತಿರಬೇಕು. ಹಾಗಾಗಬೇಕಾದರೆ ದೊಡ್ಡ ದೊಡ್ಡ ವಿಚಾರವಂತರಲ್ಲಿನ ಭಿನ್ನಾಭಿಪ್ರಾಯ ಹೋಗಬೇಕು. ಅದಕ್ಕಾಗಿ ಧರ್ಮನಿರ್ಣಯ ಮಂಡಳಿ ಧರ್ಮದ ಚರ್ಚೆಗಾಗಿ ಅನೇಕ ಸಭೆಗಳನ್ನು ಸೇರಿಸಿತು. ಆಧುನಿಕ ವಿಚಾರ ಪದ್ಧತಿಗಳಿಗೆ ತಕ್ಕಂತೆ ಧಾರ್ಮಿಕ ಸಂಪ್ರದಾಯಗಳು ಬದಲಾಗಬೇಕೆಂದು ವಾದಿಸಿದರು ಕಾಣೆಯವರು. ಹಿಂದೂ ಧರ್ಮಕ್ಕೆ ಆಧಾರವಾದ ವೇದ ಎಂದೆಂದಿಗೂ ಶಾಶ್ವತ. ಆದರೆ ಬದಲಾದ ಕಾಲಕ್ಕೆ ಹೊಂದಿಕೊಳ್ಳದ ಸಂಪ್ರದಾಯಗಳನ್ನು ಮತ್ತೆ ಮತ್ತೆ ತಿದ್ದಬೇಕಾಗುತ್ತದೆ. ಒಂದು ಉದಾಹರಣೆ : ’ಹಿಂದಿನ ಕಾಲದಲ್ಲಿ ತಪ್ಪು ಮಾಡಿದ್ದಕ್ಕೆ ಸರ್ವರ ಸಮಕ್ಷಮದಲ್ಲಿ ಒಂದು ಸಾವಿರ ಏಟುಗಳು ಎಂಬ ಶಿಕ್ಷೆ ಇತ್ತು. ಆದರೆ ಈಗ ಅದು ನಡೆದಿತೇನು?’ ಎಂದು ಕೇಳಿದರು. ಇನ್ನೂ ಅನೇಕ ಉದಾಹರಣೆಗಳನ್ನು ಕೊಟ್ಟು ತಮ್ಮ ವಾದವನ್ನು ಸಿದ್ಧಪಡಿಸಿದರು. ಹಲವು ವಿರೋಧಿಗಳ ಮನಸ್ಸನ್ನು ಒಲಿಸಿದರು. ಕಾಣೆಯವರು ಆಡಿದಂತೆ ಆಚರಿಸಿದರು. ತಮ್ಮ ಮಗ ವಿಧವೆಯನ್ನು ಮದುವೆಯಾದಾಗ ಸಂತೋಷದಿಂದ ಆಶೀರ್ವಾದ ಮಾಡಿದರು.

ಧರ್ಮಶಾಸ್ತ್ರದ ಇತಿಹಾಸ

ಸಂಸ್ಕೃತದಲ್ಲಿ ಏನೂ ಇಲ್ಲ ಎಂಬ ಭಾವನೆ ಕೆಲವು ವಿದೇಶೀಯರದು. ಹಿಂದೂ ಧರ್ಮವನ್ನು ಕುರಿತು ಅವರಿಗೆ ತಿರಸ್ಕಾರ. ಈ ಭಾವನೆ ತಪ್ಪು ಎಂದು ಆಧಾರ ಸಹಿತವಾಗಿ ತೋರಿಸಿಕೊಡುವುದು ಕಾಣೆಯವರ ದೃಢ ಸಂಕಲ್ಪ. ನಮ್ಮಲ್ಲೇ ಹಲವರಿಗೆ ಈ ವಿಷಯಗಳಲ್ಲಿ ತಕ್ಕಷ್ಟು ತಿಳುವಳಿಕೆ ಇರಲಿಲ್ಲ. ಕಾಣೆಯವರು ಸಮಗ್ರ ಸಂಸ್ಕೃತ, ಸಾಹಿತ್ಯದ ಆಳವಾದ ಅಧ್ಯಯನ ಪ್ರಾರಂಭಿಸಿದರು. ಅವರಿಗೆ ಸಂಘ ಸಂಸ್ಥೆಗಳೊಂದಿಗೂ ಸಂಪರ್ಕವಿದ್ದುದರಿಂದ ಸಂಸ್ಕೃತ ಮರಾಠಿ, ಇಂಗ್ಲಿಷ್ ಹೀಗೆ ಮೂರು ಭಾಷೆಗಳಲ್ಲಿ ಅಸಂಖ್ಯಾತ ಲೇಖನಗಳನ್ನು ಬರೆಯಲು ಸಾಧ್ಯವಾಯಿತು. ಅವರ ಲೇಖನಗಳನ್ನೆಲ್ಲ ಸಂಗ್ರಹಿಸಿದರೆ ಸುಮಾರು ಇಪ್ಪತ್ತು ಸಾವಿರ ಪುಟಗಳಷ್ಟು ಆಗುತ್ತವೆ. ’ಮನುಷ್ಯ ತನ್ನ ಬದುಕಿನ ನಲವತ್ತು ವರ್ಷ ಮೀರುವವರೆಗೆ ನಾನಾ ವಿಧ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆ ಬಳಿಕ ಮಾತ್ರ ತನ್ನ ಆಯುಷ್ಯವನ್ನು ಯಾವುದಾದರೊಂದು ಗುರಿಗಾಗಿ ಮೀಸಲಿಡಬೇಕು’ ಎಂದು ಕಾಣೆ ಹೇಳುತ್ತಿದ್ದರು. ಅಂತೆಯೇ ತಾವು ತಮ್ಮನ್ನ” ಧರ್ಮಶಾಸ್ತ್ರದ ಇತಿಹಾಸ ’ ಬರೆಯುವ ಹಿರಿಯ ಗುರಿಗೆ ಸಮರ್ಪಿಸಿಕೊಂಡರು; ಇಂಗ್ಲಿಷ್ ನಲ್ಲಿ ಬರೆದ ಆ ಬೃಹತ್ ಗ್ರಂಥದ ಪುಟಗಳು ಒಟ್ಟು ಆರು ಸಾವಿರದ ಐನೂರು!

ಈ ಪುಸ್ತಕ ಐದು ಭಾಗಗಳಲ್ಲಿದೆ. ಮೊದಲನೆಯದರಲ್ಲಿ ಅನೇಕ ಋಷಿಗಳ ಧರ್ಮ – ಸೂತ್ರಗಳೊಂದಿಗೆ, ಧರ್ಮದ ಮೂಲವನ್ನು ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಮನು ಮುಂತಾದವರ ಸ್ಮೃತಿಗಳನ್ನು ವಿವರಿಸಿದ್ದಾರೆ. ಎರಡನೇ ಭಾಗದಲ್ಲಿ ಜಾತಿ, ಸಂಸ್ಕಾರ, ಅಹ್ನಿಕ, ಆಚಾರಗಳು, ದಾನ, ಹವಿರ್ಯಜ್ಞ, ಪಾಕಯಜ್ಞ, ಸೋಮಯಜ್ಞಗಳನ್ನು ವಿವರಿಸಿದ್ದಾರೆ. ಮೂರನೆಯದರಲ್ಲಿ ವ್ಯವಹಾರ, ಸದಾಚಾರ ಮೊದಲಾದುವನ್ನು ವಿವರಿಸಿದ್ದಾರೆ. ನಾಲ್ಕನೆಯ ಭಾಗದಲ್ಲಿ ಪಾತಕ, ಪ್ರಾಯಶ್ಚಿತ್ತ, ಕರ್ಮವಿಪಾಕ, ಅಶೌಚ, ಶುದ್ಧಿ, ಶ್ರಾದ್ಧ ಮತ್ತು ತೀರ್ಥಯಾತ್ರೆಗಳ ವಿಷಯಗಳು. ಕೊನೆಯ ಭಾಗದಲ್ಲಿ, ಹಿರಿಯ ಕಿರಿಯ ತೀರ್ಥಕ್ಷೇತ್ರಗಳ ಪ್ರಸಿದ್ಧಿಗೆ ಕಾರಣಗಳನ್ನು ತಿಳಿಸಿ, ಅವುಗಳ ಬಗೆಗೆ ಚಾರಿತ್ರಿಕ ಭೌಗೋಳಿಕವಾಗಿ ಪೂರ್ಣ ವಿವರಣೆ ಕೊಟ್ಟಿದ್ದಾರೆ. ಕ್ರಿಸ್ತಪೂರ್ವ ೬೦೦ ರಿಂದ ಕ್ರಿಸ್ತಶಕ ೧೮೦೦ ರವರೆಗೆ ಸುಮಾರು ೨೫೦೦ ವರ್ಷಗಳಲ್ಲಿ ಹಿಂದೂ ಧರ್ಮ ಬೆಳೆದ ಬಂದ ರೀತಿಯನ್ನು ಈ ಮಹಾಗ್ರಂಥ ಚಿತ್ರಿಸುತ್ತದೆ.

ಕಾಣೆಯವರು ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿ ಉಪನ್ಯಾಸಗಳು ’ಹಿಂದೂ ಪದ್ಧತಿಗಳು ಮತ್ತು ಆಧುನಿಕ ಕಾನೂನು (ಹಿಂದೂ ಕಸ್ಟಮ್ಸ್ ಅಂಡ್ ಮಾಡರ್ನ್ ಲಾ) ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿದೆ.

ಕಾಣೆಯವರಿಗೆ ಈ ಇತಿಹಾಸವನ್ನು ಸಂಸ್ಕೃತ ಹಾಗೂ ಮರಾಠಿಯಲ್ಲಿಯೂ ಬರೆಯುವ ಅಭಿಲಾಷೆ. ಆದರೆ ಈ ಕೆಲಸವನ್ನು ಪೂರೈಸುವುದೇ ಬಹಳ ಕಷ್ಟವಾಯಿತು. ಅವರ ಎಂದಿನ ಕರಳುಬೇನೆ ಭಾರೀ ಕಾಡಿತು. ಆದರೂ ಯಾರ ನೆರವೂ ಇಲ್ಲದೆ ಇದನ್ನು ಮಾಡಿ ಮುಗಿಸಿದರು.

ಇವರು ಡಾಕ್ಟರ್ ಕಾಣೆ

ಆಂಗ್ರೀವಾಡಿಯ ಅದೇ ಆ ಹಳೆಯ ವಠಾರ. ಮುಂಬಯಿಯ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿ ಮಹಡಿಯ ಮೇಲೆ ಡಾಕ್ಟರ್ ಕಾಣೆಯವರ ಕೋಣೆ. ಮರದ ಆ ಚಿಕ್ಕ ಗೇಟನ್ನು ತೆರೆದಾಗ ’ಕಿರ್’ ಎಂಬ ಸಣ್ಣ ಸದ್ದು. ತೆರೆದವರು ತಪ್ಪದೆ ಮುಚ್ಚಬೇಕು. ಬಳಿಕ ಮೇಲೆ ಹೋದಾಗ ನಗುಮುಖದ ಸ್ವಾಗತ. ಸುತ್ತಲೂ ದೊಡ್ಡ ದೊಡ್ಡ ಪುಸ್ತಕಗಳ ರಾಶಿ. ನಡುವೆ ರಾರಾಜಿಸುವ ಸರಸ್ವತಿ. ಅವಳ ಸಮ್ಮುಖದಲ್ಲಿ ಈ ಜ್ಞಾನಯೋಗಿಯ ತಪಸ್ಸು. ಮುಂದಿರುವ ಮರದ ಮೇಜೂ ಅಷ್ಟೇ. ಒಂದು ಸಂದೂ ಸಹ ಕಾಣಿಸದಷ್ಟು ಪುಸ್ತಕಗಳು, ಫೈಲುಗಳು ಅದರ ಮೇಲೆ.

ಕಾಣೆಯವರೊಂದಿಗೆ ಸ್ವಲ್ಪ ಕಾಲ ಕಳೆಯುವುದೇ ಒಂದು ಸಂತೋಷದ ಅನುಭವ. ಎಂಬತ್ತು ತೊಂಬತ್ತು ನಿಮಿಷಗಳಲ್ಲಿ ಪ್ರಪಂಚವನ್ನೆಲ್ಲ ತೋರಿಸಿಕೊಂಡು ಬರುವರು. ಅಂಥ ಅನುಭವ ಕೇಳುತ್ತ ಕುಳಿತವರಿಗೆ! ಮುಖ್ಯರಸ್ತೆ ಎಂದ ಮೇಲೆ ಬಸ್ಸುಗಳ ಓಡಾಟದ ಸದ್ದು, ಅವುಗಳ ರಭಸಕ್ಕೆ ಆ ಹಳೆಯ ಕಟ್ಟಡ ಅದರುತ್ತದೆ. ಆದರೂ ಅದರ ಪರಿವೆಯೇ ಇಲ್ಲ, ವಠಾರದ ಮಕ್ಕಳ ಓಡಾಟ – ಆಟ – ಕಿರುಚಾಟ. ಅತ್ತಲೂ ಲಕ್ಷ್ಯವಿಲ್ಲ. ಒಟ್ಟಿನಲ್ಲಿ ಇವಾವುದರ ಪರಿವೆಯೂ ಇಲ್ಲದೆ ಸಾಗಿತ್ತು ಅವರ ಸಾಧನೆ.

ಮುಂಬಯಿಯ ದಾದರ್ ಬಡಾವಣೆಯಲ್ಲಿ ಕಟ್ಟಿಸಿದ ಸ್ವಂತ ಮನೆಗೆ ಮೂವರು ಮಕ್ಕಳೊಂದಿಗೆ ಸಂಸಾರ ಸಾಗಿತು. ಆದರೆ ತಾವು ಮಾತ್ರ ಕೊನೆಯವರೆಗೂ ತಮ್ಮ ತಪೋನಿಲಯದಲ್ಲಿಯೇ. ಹದಿನಾರನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಕರುಳ ಬೇನೆಗೆ ಔಷಧಿ? ಇಲ್ಲ. ತಮ್ಮ ದೇಹಕ್ಕೆ ತಾವೇ ವೈದ್ಯರು. ಆಹಾರ – ವಿಹಾರ ವಿಶ್ರಾಂತಿಗಳೇ ಸಾಕು. ಪ್ರತಿನಿತ್ಯ ಬೆಳಿಗ್ಗೆ ಮಲಬಾರ್ ಹಿಲ್ ವರೆಗೆ ಹೋಗಿ ಬರುವ ನಾಲ್ಕು ಮೈಲಿಗಳ ನಿತ್ಯ ವಿಹಾರ ಕೊನೆಯವರೆಗೂ ತಪ್ಪಲಿಲ್ಲ. ಶಿಸ್ತು ಸಂಯಮದ ಸಾಕಾರಮೂರ್ತಿ!

ತೊಂಬತ್ತೆರಡು ವರ್ಷದ ತುಂಬು ಬಾಳಿನ ಈ ಭಾಗ್ಯವಂತರು ಮಕ್ಕಳಿಗೆ ಅಣ್ಣ, ಆತ್ಮೀಯರಿಗೆ ಅಣ್ಣಾಸಾಹೇಬ. ಪರಿಚಿತರಿಗೆ ಡಾಕ್ಟರ್ – ಪ್ರೊಫೆಸರ್. ಕೊನೆಗೆ ಭಾರತಾಂಬೆಯ ರತ್ನರೆಂದು ಪ್ರಪಂಚಕ್ಕೆ ಪರಿಚಿತರು! ೧೯೭೨ರ ಏಪ್ರಿಲ್ ೧೮ ರಂದು ಮಹಾರಾಷ್ಟ್ರದ ಈ ಮಹಾಮಹೋಪಾಧ್ಯಾಯ ಮಹಾ ಪ್ರಯಾಣಗೈದರು.