ಕೇಳಿದ್ದೀರಲ್ಲ ಈ ಶಿಶುಗೀತೆ? ಪಾತರಗಿತ್ತಿ ಪಕ್ಕ, ನೋಡಿದ್ಯೇನೆ ಅಕ್ಕ?. ಕಾಮನಬಿಲ್ಲಿನಂತಹ ಮೋಹಕ ಬಣ್ಣಗಳ ಚಿಟ್ಟೆಯ ರೆಕ್ಕೆಯನ್ನ ಯಾರು ನೋಡಿಲ್ಲ ಹೇಳಿ! ಚಿಟ್ಟೆಯ ರೆಕ್ಕೆಗೇಕೆ ಅಷ್ಟೊಂದು ಬಣ್ಣ ಎನ್ನುವ ಮಕ್ಕಳ ಈ ಕುತೂಹಲವನ್ನೇ ತೋರುವ ಪ್ರೌಢ ವಿಜ್ಞಾನ ಪ್ರಬಂಧವೊಂದು ಕಳೆದ ತಿಂಗಳು ಇಂಟಿಗ್ರೇಟಿವ್ ಬಯಾಲಜಿ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಚಿಟ್ಟೆ ರೆಕ್ಕೆಗಳಿಗೆ ಬಣ್ಣ ಹೇಗೆ ಬಂತು ಅನ್ನುವುದಕ್ಕಿಂತಲೂ, ಚಿಟ್ಟೆಯ ರೆಕ್ಕೆಗೆ ಬಣ್ಣ ಏಕಿಲ್ಲ ಅನ್ನುವ ಪ್ರಶ್ನೆಗೆ ಈ ಪ್ರಬಂಧ ಉತ್ತರ ಹುಡುಕಲು ಹೊರಟಿದೆ. ಅಮೆರಿಕೆಯ ಡ್ರೆಕ್ಸೆಲ್ ವಿಶ್ವವಿದ್ಯಾನಿಲಯದ ವಸ್ತು ವಿಜ್ಞಾನಿ ಕೆರೋಲಿನ್ ಶಾಯರ್ ಮತ್ತು ಸಂಗಡಿಗರು ಅಮೆರಿಕೆಯ ಅಪರೂಪದ ಚಿಟ್ಟೆಯೊಂದರ ರೆಕ್ಕೆ ಗಾಜಿನಂತೆ ಪಾರದರ್ಶಕವೇಕೆ ಎಂದು ಕುತೂಹಲಿಸಿ ನಡೆಸಿದ ಪ್ರಯೋಗಗಳು ಈ ಪ್ರಬಂಧದಲ್ಲಿ ಪ್ರಕಟವಾಗಿವೆ.

ಚಿಟ್ಟೆ ರೆಕ್ಕೆಗಳ ಬಣ್ಣದ ಬಗ್ಗೆ ಕುತೂಹಲ ಇಂದು ನಿನ್ನಿನದಲ್ಲ. ನೂರು ವರ್ಷಗಳ ಹಿಂದೆ ನಮ್ಮವರೇ ಆದ ಸರ್ ಸಿ. ವಿ. ರಾಮನ್ರವರೂ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದರು. ಮುಟ್ಟಿದರೆ ಪುಡಿ, ಪುಡಿಯಾಗುವ ಚಿಟ್ಟೆಯ ರೆಕ್ಕೆಗಳ ವಿಸ್ಮಯ ಇನ್ನೂ ನಿಗೂಢವಾಗಿಯೇ ಇದೆ ಎನ್ನುವುದಕ್ಕೆ ಕೆರೋಲಿನ್ ಶಾಯರ್ರವರ ಸಂಶೋಧನೆಯೇ ಉದಾಹರಣೆ. ಏಕೆಂದರೆ ಚಿಟ್ಟೆಯ ಬಣ್ಣಗಳು ಹೂವಿನ ಬಣ್ಣಗಳಂತಲ್ಲ. ಹೂವುಗಳಲ್ಲಿರುವ ಬಣ್ಣಗಳು ಅವುಗಳಲ್ಲಿರುವ ರಾಸಾಯನಿಕ ವರ್ಣಕಗಳಿಂದ ಹೊಮ್ಮಿದಂತಹವು. ಆದರೆ ಚಿಟ್ಟೆಗಳ ರೆಕ್ಕೆಗಳಲ್ಲಿ ಇಂತಹ ರಾಸಾಯನಿಕಗಳಿಲ್ಲ. ಹಾಗಿದ್ದರೆ ಚಿಟ್ಟೆರೆಕ್ಕೆಗೆ ಮನಮೋಹಕ ಬಣ್ಣ ಬಂದುದು ಹೇಗೆ ಎನ್ನುವ ಪ್ರಶ್ನೆಗೆ ಭೌತಶಾಸ್ತ್ರಜ್ಞರು ಅದು ಫಿಸಿಕ್ಸ್ ಎನ್ನುತ್ತಾರೆ. ಧರೆಗೆ ಸುರಿಯುತ್ತಿರುವ ನೀರಿನ ಹನಿಗಳ ಮೂಲಕ ಹಾದು ಬರುವ ಬೆಳಕು ಚದುರಿ ಕಾಮನಬಿಲ್ಲು ಮೂಡಿಸುವಂತೆ, ಚಿಟ್ಟೆರೆಕ್ಕೆಗಳ ಮೇಲಿರುವ ಅತ್ಯಂತ ಸೂಕ್ಷ್ಮ ಹಾಗೂ ತೆಳುವಾದ ಹುರುಪೆಗಳ ಮೂಲಕ ಹಾಯುವ ಬೆಳಕು ಚದುರಿ ಬಣ್ಣಗಳು ಮೂಡುತ್ತವಂತೆ.

ಬಣ್ಣಗಳು ಮೂಡುವ ಬಗ್ಗೆಯೇನೋ ಅರ್ಥವಾಯಿತು. ಆದರೆ ಬಣ್ಣಗಳೇ ಮೂಡದ ಪಾರದರ್ಶಕವಾದ ಚಿಟ್ಟೆಗಳೂ ಇವೆಯಲ್ಲ. ಅವುಗಳ ರೆಕ್ಕೆಯಲ್ಲೇನು ಮ್ಯಾಜಿಕ್ ಇದೆ ಎನ್ನುವ ಪ್ರಶ್ನೆ ಶಾಯರ್ ತಂಡದ ತಲೆ ಕೆಡಿಸಿತ್ತು. ಇದರ ಉತ್ತರಕ್ಕಾಗಿ ಅವರು ಗಾಜಿನರೆಕ್ಕೆಯ ಚಿಟ್ಟೆ ಎಂದೇ ಹೆಸರಾದ ಗ್ರೀಟ ಓಟೋ ಎನ್ನುವ ಚಿಟ್ಟೆಯ ಮೇಲಿರುವ ಹುರುಪೆಗಳ ಜೋಡಣೆಯನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಲಕ್ಷಾಂತರ ಪಟ್ಟು ದೊಡ್ಡದಾಗಿಸಿ ಗಮನಿಸಿದ್ದಾರೆ. ತಾವು ಕಂಡದ್ದು ಸರಿಯೋ ತಪ್ಪೋ ಅನ್ನುವ ಪರಾಮರ್ಶೆಗೆ ಇದೇ ಚಿಟ್ಟೆಯ ಕುಟುಂಬಕ್ಕೆ ಸೇರಿದ ಬಣ್ಣದ ಚಿಟ್ಟೆಗಳ ಪಕ್ಕಗಳ ಜೊತೆಗೆ ತಾಳೆ ಹಾಕಿದ್ದಾರೆ. ಕಣ್ಣಿಗೆ ಕಂಡದ್ದು ಭ್ರಮೆ ಇರಬಹುದೋ ಎನ್ನುವ ಆತಂಕದಿಂದ ಪೀಜೋಇಲೆಕ್ಟ್ರಿಕ್ ವಿಧಾನದಿಂದಲೂ ಚಿಟ್ಟೆಗಳ ಹುರುಪೆಗಳನ್ನು ಪರೀಕ್ಷಿಸಿದ್ದಾರೆ.

ಚಿಟ್ಟೆ, ಪತಂಗಗಳ ರೆಕ್ಕೆಗಳ ಮೇಲಿರುವ ಹುರುಪೆಗಳಲ್ಲಿ ಎರಡು ವಿಧ : ರೋಮದಂತೆ ಇರುವ ಹುರುಪೆಗಳು ಹಾಗೂ ಚಪ್ಪಟೆ ಹುರುಪೆಗಳು. ಚಪ್ಪಟೆ ಹುರುಪೆಗಳ ಹಾಸಿನ ಮೇಲೆ ಅಲ್ಲಲ್ಲಿ ರೋಮದ ಹುರುಪೆಗಳು ಎದ್ದು ನಿಂತಂತೆ ಕಾಣುತ್ತವೆ. ಉಳಿದ ಚಿಟ್ಟೆಗಳ ರೆಕ್ಕೆಗಳಿಗೆ ಹೋಲಿಸಿದಲ್ಲಿ ಗ್ರೀಟಾ ಓಟೋದ ರೆಕ್ಕೆಯ ಪಾರದರ್ಶಕ ಭಾಗದಲ್ಲಿ ಈ ರೋಮದ ಹುರುಪೆಗಳು ಬಹಳ ವಿರಳವಾಗಿ ಹರಡಿವೆ. ಅಲ್ಲದೆ ಇಲ್ಲಿರುವ ರೋಮದ ಹುರುಪೆಗಳಿಗೂ,  ರೆಕ್ಕೆಯ ಅಂಚಿನಲ್ಲಿ, ಬಣ್ಣವಿರುವೆಡೆ ಇರುವ ರೋಮದ ಹುರುಪೆಗಳಿಗೂ ವ್ಯತ್ಯಾಸವಿದೆ. ಬಣ್ಣವಿರುವೆಡೆ ಇರುವ ರೋಮದ ಹುರುಪೆಗಳ ರಚನೆ ಬಹಳ ಸಂಕೀರ್ಣ. ಆದರೆ ಪಾರದರ್ಶಕವಾಗಿರುವಲ್ಲಿರುವ ಹುರುಪೆಗಳು ರಚನೆಯಲ್ಲಿ ಅಷ್ಟೇನೂ ವಿಶೇಷವಿಲ್ಲ. ಇಲ್ಲಿರುವ ಚಪ್ಪಟೆ ಹುರುಪೆಗಳೂ ಅಷ್ಟೆ. ಬಣ್ಣವಿರುವೆಡೆ ಇರುವವುಗಳಿಂದ ಭಿನ್ನ ಹಾಗೂ ಗರಗಸದ ಹಲ್ಲಿನಂತೆ ಜೋಡಣೆಯಾಗಿವೆ.  ಈ ಹುರುಪೆಗಳ ಹಾಸಿನ ನಡುವೆ ಅಲ್ಲಲ್ಲಿ ರೋಮದ ಹುರುಪೆಗಳು ಎದ್ದು ನಿಂತಿರುತ್ತವೆ. ಚಪ್ಪಟೆ ಹಾಗೂ ರೋಮದ ಹುರುಪೆಗಳ ನಡುವೆ ಉಳಿದ ಚಿಟ್ಟೆಗಳ ರೆಕ್ಕೆಗಳಲ್ಲಿ ಕಾಣದ ಮತ್ತೊಂದು ವಿಶೇಷವೂ ಇದೆಯಂತೆ. ಇವೆರಡರ ನಡುವೆ ತುಸು ಉಬ್ಬಿನ ಆಕಾರದ ರಚನೆಗಳೂ ಕಾಣಿಸುತ್ತವೆಯಂತೆ. ಈ ರಚನೆ ಎಷ್ಟು ವಿಶೇಷವೆಂದರೆ, ಗ್ರೀಟಾದ ರೆಕ್ಕೆಯ ಮೇಲೆ ಬಿದ್ದ ಬೆಳಕು ಒಂದಿಷ್ಟೂ ನಷ್ಟವಾಗದೆ ಮತ್ತೊಂದು ಬದಿಯನ್ನು ತಲುಪುತ್ತದೆ. ಅರ್ಥಾತ್, ರೆಕ್ಕೆ ಪಾರದರ್ಶಕವಾಗಿ ತೋರುತ್ತದೆ.

ಹೀಗೇಕೆ? ಶಾಯರ್ರವರ ಅಂದಾಜಿನಂತೆ ಇದು ರೆಕ್ಕೆಗಳ ಮೇಲಿನ ಹುರುಪೆಗಳ ವಿಶೇಷ ಜೋಡಣೆಯ ಮ್ಯಾಜಿಕ್. ಸಾಮಾನ್ಯವಾಗಿ ಯಾವುದೇ ಜೈವಿಕ ಅಂಗದ ಮೂಲಕ ಬೆಳಕನ್ನು ಹಾಯಿಸಿದಾಗ, ಅಲ್ಲಿರುವ ವಿವಿಧ ವಸ್ತುಗಳ ಪ್ರಭಾವದಿಂದಾಗಿ ಒಂದಿಷ್ಟು ಬೆಳಕು ನಷ್ಟವಾಗುತ್ತದೆ. ಇದನ್ನು ಬೆಳಕಿನ ಚದುರುವಿಕೆ ಎಂದು ಭೌತವಿಜ್ಞಾನಿಗಳು ಕರೆದಿದ್ದಾರೆ. ಸಾಗರದ ನೀರು ನೀಲಿ ಬಣ್ಣಕ್ಕೆ ಕಾಣುವುದೂ, ಆಕಾಶ ನೀಲಿಯಾಗಿರುವುದೂ ಇದೇ ಕಾರಣಕ್ಕೇ ಎಂದು ಸರ್ ಸಿ. ವಿ. ರಾಮನ್ ಹೇಳಿದ್ದು ನೆನಪಿದೆಯಷ್ಟೆ! ಸಾಗರದಲ್ಲಿ ನೀರಷ್ಟೆ ಇದ್ದಿದ್ದರೆ ಬಹುಶಃ ಅದು ನೀಲಿಯಾಗಿರುತ್ತಿದ್ದಿಲ್ಲ. ಹಾಗೆಯೇ ನೆಲದ ಮೇಲೆ ವಾಯುಮಂಡಲವಿರುತ್ತಿದ್ದಿಲ್ಲವಾದರೆ, ಆಕಾಶ ನೀಲಿಯಾಗಿ ಕಾಣುತ್ತಲೇ ಇರಲಿಲ್ಲ. ನೀರು ಹಾಗೂ ವಾಯುವಿನಲ್ಲಿರುವ ಅಣುಗಳಿಂದ ಬೆಳಕು ಚದುರಿದ ಫಲವಾಗಿ ಇವೆರಡೂ ನೀಲಿಯಾಗಿ ಕಾಣುತ್ತವೆ. ಅಂದರೆ, ಬೆಳಕು ಚದುರದಂತೆ ಮಾಡಿದರೆ ಬಣ್ಣ ಬಾರದಂತೆ ನೋಡಿಕೊಳ್ಳಬಹುದಲ್ಲವೇ?

ಇದೇ ತಂತ್ರವನ್ನು ಗ್ರೀಟಾ ಓಟೋವಿನ ರೆಕ್ಕೆಗಳಲ್ಲಿ ನಿಸರ್ಗ ಹೂಡಿರಬೇಕು ಎಂದು ಶಾಯರ್ ತಂಡ ಅನುಮಾನಿಸಿದೆ. ಈ ಚಿಟ್ಟೆಯ ಪಾರದರ್ಶಕ ಭಾಗಗಳಲ್ಲಿ ಇರುವ ಹುರುಪೆಗಳು ಬೆಳಕನ್ನು ಚದುರಿಸುವುದಿಲ್ಲವಂತೆ. ಗಾಜಿನೊಳಗೆ ಬೆಳಕು ಹೊಕ್ಕಾಗ ಅದು ಚದುರುವುದಿಲ್ಲ, ಬದಲಿಗೆ ಅದರ ಹಾದಿ ತುಸು ಬದಲಾಗುತ್ತದೆ ಅಷ್ಟೆ. ಇದನ್ನು ವಕ್ರೀಭವನ ಎನ್ನುತ್ತಾರೆ. ಮರಳಿ ಗಾಜಿನಿಂದ ಹೊರಗೆ ಬರುವಾಗ ಅಷ್ಟೇ ಪ್ರಮಾಣದಲ್ಲಿ ಅದು ಮತ್ತೊಂದು ಬದಿಗೆ ಬಾಗುತ್ತದೆ. ಹೀಗಾಗಿ ಬೆಳಕು ನೇರವಾಗಿ ಸಾಗಿ ಬಂದಂತೆ ತೋರಿ ಗಾಜು ಪಾರದರ್ಶಕವೆನ್ನಿಸುತ್ತದೆ. ಗ್ರೀಟಾ ಓಟೋದ ರೆಕ್ಕೆಗಳಲ್ಲಿ ವಿವಿಧ ವಸ್ತುಗಳಿದ್ದಾಗ್ಯೂ ಇಂತಹುದೇ ಪರಿಣಾಮ ತುಸು ಭಿನ್ನವಾಗಿ ಆಗುತ್ತದಂತೆ. ರೆಕ್ಕೆಗಳೊಳಗೆ ನುಸುಳುವ ಮುನ್ನವೇ ಉಬ್ಬುಗಳ ಜೊತೆಗಿರುವ ರೋಮದ ಹುರುಪೆಗಳ ಬಳಿ ಸಾಗುವಾಗ ಬೆಳಕು ವಕ್ರೀಭವನಗೊಳ್ಳುತ್ತದಂತೆ. ಬೆಳಕಿನ ಹಾದಿ ಎಷ್ಟು ಬಾಗುತ್ತದೆ ಅಂದರೆ ಅನಂತರ ಅದು ರೆಕ್ಕೆಯೊಳಗೆ ಸಾಗಿ ಬಾಗಿದಾಗಲೂ ನೇರವಾಗಿಯೇ ಹೊರಗೆ ಬಂದಂತೆ ಅನಿಸುತ್ತದೆ. ಅರ್ಥಾತ್, ರೆಕ್ಕೆ ಪಾರದರ್ಶಕವಾಗಿ ಕಾಣುತ್ತದೆ.

ಪಾರವಾದ ಪಕ್ಕ ಇರುವುದರಿಂದ ಈ ಪಾತರಗಿತ್ತಿಗೇನು ಲಾಭ ಎಂದಿರಾ? ಬಹುಶಃ ಅದು ತನ್ನ ಭಕ್ಷಕರಿಂದ ಮರೆಯಾಗಲು ಇದು ನೆರವಾಗಬಹುದೇ ಎನ್ನುವ ಅನುಮಾನವನ್ನು ಶಾಯರ್ ತಂಡ ವ್ಯಕ್ತಪಡಿಸಿದೆ.

1 Valerie R. Binetti et. al., The Natural transparency and piezoelectric response of Greta oto butterfly wing, Integrative Biology, Vol 1, Pp 324-329, 2009 DOI:10.1039/b820205b