ಪಾಪನಾಶಂ ಶಿವನ್ಈ ಶತಮಾನದ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರು. ಸ್ವತಃ ಸುಂದರವಾದ ಹಾಡುಗಳನ್ನು ರಚಿಸಿದರು. ಬಹು ಬಡತನದಲ್ಲಿ ಬಾಲ್ಯವನ್ನೂ ಯೌವ್ವನದ ಪ್ರಾರಂಭದ ವರ್ಷಗಳನ್ನೂ ಕಳೆದರು. ಗಾಢವಾದ ದೈವಭಕ್ತಿ ಅವರ ಹಾಡುಗಳಲ್ಲಿ ಶಬ್ದಗಳ ರೂಪದಲ್ಲಿ ಮೈತಾಳಿದೆ.

 ಪಾಪನಾಶಂ ಶಿವನ್

ರಸ್ತೆಯಲ್ಲಿ ನಾವು ನಡೆಯುವಾಗ ನಮಗೆ ಗೊತ್ತಿಲ್ಲದೆ ಕಲ್ಲೊಂದನ್ನು ಎಡುವುತ್ತೇವೆ. ನೋವನ್ನು ತಡೆಯಲಾರದೆ ‘ಅಮ್ಮಾ’ ಎನ್ನುತ್ತೇವೆ. ನಮಗರಿಯದೇ ನಮ್ಮ ಬಾಯಿಂದ ಮೊದಲು ಹೊರಬರುವ ಉದ್ಗಾರವೇ ‘ಅಮ್ಮಾ’ ಎಂಬುದು. ಏತಕ್ಕೆ ಗೊತ್ತೆ? ಲೋಕದಲ್ಲಿ ತಾಯಿಗೆ ಇರುವ ಸ್ಥಾನ ಮಹತ್ವದಿಂದ.

ಕರ್ಣಾಟಕ ಸಂಗೀತದ ‘ಸುವರ್ಣಯುಗ’ ವೆಂದು ಪರಿಗಣಿಸಲ್ಪಟ್ಟ ೧೭೫೦ ರಿಂದ ೧೮೫೦ ರವರೆಗಿನ ಒಂದು ನೂರು ವರ್ಷಗಳಲ್ಲಿ ಜೀವಿಸಿದ್ದ ಸಂಗೀತ ತ್ರಿಮೂರ್ತಿಗಳಲ್ಲಿ ಅತ್ಯಂತ ಹಿರಿಯರು ಶ್ಯಾಮಾಶಾಸ್ತ್ರಿಗಳು; ಅವರು ಭಗವತೀ ಕಾಮಾಕ್ಷಿದೇವಿಯ ಉಪಾಸಕರಾಗಿ ‘‘ತಾಯೇ,’’ ‘‘ಜನನೀ’’ ಎಂದೆಲ್ಲ ಕರೆದು, ಮಗುವು ತಾಯಿಗಾಗಿ ಹಂಬಲಿಸುವುದನ್ನು ಹೃದಯ ಸ್ಪರ್ಶಿಯಾಗುವ ರೀತಿಯಲ್ಲಿ ನಿರೂಪಿಸಿದ್ದಾರೆ. ಇಷ್ಟೇ ಉನ್ನತಮಟ್ಟದ ಕಲ್ಪನೆಯನ್ನು ಇತ್ತೀಚಿನ ತಮಿಳುನಾಡಿನ ಮಹಾನ್ ವಾಗ್ಗೇಯಕಾರರೊಬ್ಬರು ಜಗನ್ಮಾತೆಯನ್ನು ಕುರಿತು ರಚಿಸಿದ ಕೃತಿಗಳಲ್ಲಿ ಕಾಣಬಹುದು. ‘‘ಪ್ರಪಂಚಕ್ಕೆ ತಾಯಿಯಾದವಳೇ, ನಾನು ನಿನಗೆ ಒಂದು ಆಟದ ಬೊಂಬೆಯಾಗಿರುವೆನೆ? ಭೂಮಿಯಲ್ಲಿ ಅನೇಕ ಜನ್ಮಗಳನ್ನು ಕಳೆದು, ಅವುಗಳ ಸಂಕಟವನ್ನನುಭವಿಸಿದುದು ಸಾಲದೇ? ರಕ್ಷಣೆ ಎಂಬ ಅಮೃತವನ್ನು ಕುಡಿಯುವುದಕ್ಕಾಗಿ ‘ಅಮ್ಮಾ, ಅಮ್ಮಾ’ ಎಂದು ನಾನು ಹಲುಬುವುದನ್ನು ಕೇಳುವುದು ನಿನಗೆ ಸಂತೋಷವನ್ನುಂಟು ಮಾಡುತ್ತದೆಯೇ? ಯಾರೊಬ್ಬರ ಆಶ್ರಯವೂ ದೊರೆಯದೆ ನಿನ್ನ ಚರಣವನ್ನೇ ನಂಬಿದ್ದೇನೆ. ನಿನ್ನ ಮನಸ್ಸು ಇನ್ನೂ ಕರಗುವುದಿಲ್ಲವೇ, ತಾಯೆ?’’ ಎಂದು ‘‘ನಾನೊರು ವಿಳೈಯಾಟ್ ಬೊಮ್ಮೆಯಾ’’ ಎಂಬ ನವರಸ ಕನ್ನಡ ರಾಗ ಕೃತಿಯಲ್ಲಿ ತಮ್ಮ ಭಕ್ತಿಯ ಹೊನಲನ್ನು ಹರಿಸಿ ಜಗನ್ಮಾತೆಯ ಕೃಪಾಭಿಕ್ಷೆ ಬೇಡಿದ ಪಾಪನಾಶಂ ಶಿವನ್‌ರವರೇ ಆ ಮಹಾನ್ ವಾಗ್ಗೇಯಕಾರರು. ‘‘ತಾಯೈ ಏಳೈಪಾಲ್ ದಯೈ ಶೈವಯೇ’’ ‘‘ಶಿವಕಾಮಸುಂದರಿ’’ ‘‘ನೀಯಿರಂಗಾ ಎನಿಲ್’’ ‘‘ಕರ್ಪಕಾಂಬಿಕೆ’’  ‘‘ತತ್ಸಮಸ್ಯಾದಿ ಮಹಾವಾಕ್ಯ ತತ್ಪರ ವಸ್ತುವುಂ ನೀ’’  ‘‘ಕರ್ಪಕಮೇ’’  ಇಂತಹ ಅನೇಕ ದೇವೀಸ್ತುತಿ ಕೃತಿಗಳಲ್ಲಿ ಶಿವನ್‌ರವರು ‘‘ತಾಯಿಗಿಂತ ದೇವರಿಲ್ಲ’’ ಎಂಬ ಮಹಾ ಸಂದೇಶವನ್ನು ಪ್ರಪಂಚಕ್ಕೆ ಸಾರಿದ್ದಾರೆ. ನಮ್ಮಲ್ಲಿ ಹುದುಗಿರುವ ಮಾನವೀಯತೆಯು, ಆಗಾಗ ಹೆಡೆಯೆತ್ತುವ ಪಾಶವೀಶಕ್ತಿಯನ್ನು ತುಳಿಯುವ ಶಕ್ತಿಯನ್ನು ನಮಗೆ ಕೊಟ್ಟು ಪೋಷಿಸುವ ಮಹಾಶಕ್ತಿ ‘‘ತಾಯಿ’’ ಎಂಬ ಎರಡು ಅಕ್ಷರಗಳಲ್ಲಿದೆ ಎಂಬುದನ್ನು ಶಿವನ್‌ರವರು ತೋರಿಸಿದ್ದಾರೆ.

‘‘ತಮಿಳುನಾಡಿನ ತ್ಯಾಗಯ್ಯ’’

ತ್ಯಾಗರಾಜರು ಕರ್ನಾಟಕ ಸಂಗೀತದಲ್ಲಿ ಬಹಳ ಪೂಜ್ಯಸ್ಥಾನ ಪಡೆದ ರಾಮಭಕ್ತರು. ಶ್ರೀರಾಮಚಂದ್ರನನ್ನು ಕುರಿತು ತೆಲುಗಿನಲ್ಲಿ ನೂರಾರು ಹಾಡುಗಳನ್ನು ರಚಿಸಿದ್ದಾರೆ. ಬಹು ವೈರಾಗ್ಯದ ಜೀವನ ನಡೆಸಿ, ರಾಮನಲ್ಲೆ ಮನಸ್ಸನ್ನು ನಿಲ್ಲಿಸಿ, ನೂರಾರು ಮಂದಿಗೆ ತಮ್ಮ ಹಾಡುಗಳಿಂದ ಮನಸ್ಸಿಗೆ ಸಂತೋಷವನ್ನೂ ಬೆಳಕನ್ನೂ ತಂದು ಕೊಟ್ಟವರು. ತಿರುವಯ್ಯಾರಿನಲ್ಲಿ ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಭಜನೆಯಲ್ಲಿ ಅವರ ಹಾಡುಗಳನ್ನು ಭಕ್ತರಾದ ಸಂಗೀತ ವಿದ್ವಾಂಸರು ಹಾಡಿದುದನ್ನು ಕೇಳಿ ಸಂತೋಷಪಟ್ಟಿದ್ದ ಒಬ್ಬ ಹಿರಿಯರು ಶಿಮಿಯಿ ಸುಂದರಂ ಅಯ್ಯರ್ ಎಂಬವವರು. ಅವರು ಶಿವನ್ ಅವರು ಶ್ರೀರಾಮನನ್ನು ಕುರಿತು ಭಕ್ತಿಯಿಂದ ಮೈಮರೆತು ಇಂಪಾಗಿ ಹಾಡಿಕೊಂಡು ಬರುತ್ತಿದ್ದುದನ್ನು ಕೇಳಿದರು, ಸುತ್ತ ಮುತ್ತಲಿನವರಿಗೆ ಶಿವನ್ ಅವರ ಭಕ್ತಿ ಮತ್ತು ಸಂಗೀತದಿಂದ ಆನಂದದ ಸಮಾರಾಧನೆಯೂ ಆದುದನ್ನು ನೋಡಿದರು. ಸುಂದರಂ ಅಯ್ಯರ್ ಅವರು ಶಿವನ್ ಅವರನ್ನು ಸಂತೋಷದಿಂದ ತಬ್ಬಿಕೊಂಡು, ‘‘ನೀನು ನಿಜವಾಗಿಯೂ ತಮಿಳುನಾಡಿನ ತ್ಯಾಗಯ್ಯ’’  ಎಂದು ಹೇಳಿದರು.

ತಂದೆ ತಾಯಿ

ತಮಿಳುನಾಡಿನ ತಂಜಾವೂರು ಜಿಲ್ಲೆಯ ನನ್ನಿಲಂ ತಾಲ್ಲೂಕಿನ ಪೊಲಹಂ ಗ್ರಾಮದಲ್ಲಿ ರಾಮಾಮೃತ ಅಯ್ಯರ್ ಎಂಬವರು ಯೋಗಾಂಬಾಳ್ ಎಂಬ ತಮ್ಮ ಪತ್ನಿಯೊಡನೆ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದರು. ಅವರ ಹಿರಿಯ ಮಗ ರಾಜಗೋಪಾಲ ಅಯ್ಯರ್. ಅವನು ಹುಟ್ಟಿದ ನಾಲ್ಕು ವರ್ಷಗಳ ಮೇಲೆ ೧೮೯೦ ರ ಸೆಪ್ಟಂಬರ್ ೨೬ ರಂದು ಮತ್ತೊಬ್ಬ ಮಗ ಹುಟ್ಟಿದ. ಅವನ ಹೆಸರು ರಾಮಶರ್ಮ. ಮುದ್ದಿಗಾಗಿ ತಂದೆ ತಾಯಿಗಳು ‘ರಾಮಯ್ಯ’ ಎಂದು ಕರೆಯುತ್ತಿದ್ದರು. ಅವನಿಗೆ ಆರು ವರ್ಷಗಳು ತುಂಬುವುದ ರೊಳಗೆ ತಂದೆ ರಾಮಾಮೃತ ಅಯ್ಯರ್ ಕಾಲವಶರಾದರು.

ಕಷ್ಟ ಜೀವನ

ಅಲ್ಲಿಂದ ಅವರ ಮನೆಯವರ ಕಷ್ಟಗಳು ಹೆಚ್ಚಿದವು. ಕೋರ್ಟು ವ್ಯವಹಾರದಲ್ಲಿ ಇದ್ದ ಅಲ್ಪ ಸಲ್ಪ ವಸ್ತುಗಳೂ ಹೋದವು. ನಿಲ್ಲುವುದಕ್ಕೂ ಸ್ಥಳವಿಲ್ಲದೆ ಹೋಯಿತು. ರಾಮಯ್ಯನಿಗೆ ಎಂಟು ವರ್ಷ. ೧೮೯೮ ರಲ್ಲಿ ಹುಡುಗ ತಾಯಿ ಮತ್ತು ಅಣ್ಣನೊಡನೆ ಕೇರಳದ ತಿರುವನಂತಪುರಕ್ಕೆ ಹೋದ, ಅಲ್ಲಿನ ಅನಂತಪದ್ಮನಾಭ ಸ್ವಾಮಿಯ ದೇವಸ್ಥಾನಕ್ಕೆ ಸೇರಿದ ರಾಮಾಯಣಶಾಸ್ತ್ರಿ ಎಂಬ ತಮ್ಮ ಚಿಕ್ಕಪ್ಪನವರ ಆಶ್ರಯದಲ್ಲಿ ನಿಂತ. ದೇವಾಲಯದಲ್ಲಿ ದೊರೆಯುತ್ತಿದ್ದ ಪ್ರಸಾದವನ್ನೂ ಮತ್ತು ಭಿಕ್ಷೆ ಬೇಡಿ ತಂದುದನ್ನೂ ತಾಯಿ, ಅಣ್ಣ ಮತ್ತು ತಮ್ಮ ಹಂಚಿಕೊಂಡು ಕಾಲಯಾಪನೆ ಮಾಡುತ್ತಿದ್ದರು. ಹನ್ನೆರಡು ವರ್ಷಗಳವರೆಗೆ ವಿದ್ಯಾಭ್ಯಾಸವು ಕುಂಟುತ್ತ ಸಾಗಿತು. ತಿರುವನಂತಪುರದ ಮಹಾರಾಜರ ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೦೮ ರಲ್ಲಿ ‘ಶಾಸ್ತ್ರಿ’ ಮತ್ತು ‘ಉಪಾಧ್ಯಾಯ’’ ಪಟ್ಟ ಗಳಿಸಿದ ರಾಮಯ್ಯ. ಮಲಯಾಳಿ ಭಾಷೆಯನ್ನೂ ರಾಮಯ್ಯ ಕಲಿತುಕೊಂಡು ಅದರಲ್ಲಿ ಸಾಕಷ್ಟು ಪರಿಶ್ರಮ ಹೊಂದಿದ.

ಸಂಗೀತದತ್ತ

ಮಗನ ಕಷ್ಟದ ಜೀವನವನ್ನು ನೋಡಿ ರಾಮಯ್ಯನ ತಾಯಿಗೆ ತುಂಬಾ ನೋವು. ಅವನು ಸಂಗೀತ ಕಲಿತುಕೊಂಡರೆ ಸ್ವಲ್ಪ ಪ್ರಯೋಜನವಾದೀತು ಎಂದು ಅವರ ಆಸೆ. ತನಗೆ ಗೊತ್ತಿದ್ದ ಸಂಗೀತ ವಿದ್ಯೆಯನ್ನು ರಾಮಯ್ಯನಿಗೂ ಹೇಳಿಕೊಡಲು ಪ್ರಯತ್ನಿಸಿ ವಿಫಲರಾದರು. ಆದರೂ ನಿರಾಸೆಗೊಳ್ಳದೆ ಪಾಲ್‌ಘಾಟ್ ಪರಮೇಶ್ವರ ಭಾಗವತರ ಮಗ ನೂರಣಿ ಮಹಾದೇವ ಭಾಗವತರನ್ನು ಕೇಳಿಕೊಂಡು, ಅವರಿಂದ ಸಂಗೀತ ಶಿಕ್ಷಣ ಕೊಡಿಸಿದರು. ತಪ್ಪಿಸಿಕೊಳ್ಳುವ ದಾರಿ ಇಲ್ಲದೆ ಆ ಬಲವಂತ ಮಾಘಸ್ನಾನಕ್ಕೆ ಕಟ್ಟು ಬಿದ್ದು, ರಾಮಯ್ಯ ಅವರಿಂದ ಸರಳೆವರಸೆ, ಜಂಟಿವರಸೆ ಮತ್ತು ಅಲಂಕಾರಗಳನ್ನು ಹೇಳಿಸಿಕೊಂಡರು. ಗುರುಗಳ ಶಿವ ಪೂಜೆಯ ಸಮಯಕ್ಕೆ ಅವರಿಗೆ ಬೇಕಾಗುತ್ತಿದ್ದ ಬಿಲ್ವ ಪತ್ರೆಯನ್ನು ಪ್ರತಿದಿನವೂ ತಂದು ಕೊಟ್ಟು ಗುರು ಸೇವೆ ಮಾಡಿದುದಲ್ಲದೆ ಗುರುವಿನ ಶಿವಪೂಜೆಯ ಪುಣ್ಯದಲ್ಲಿಯೂ ಭಾಗಿಯಾದರು. ಸಾಂಬ ಭಾಗವತರೆಂಬ ದೊಡ್ಡ ವಿದ್ವಾಂಸರು ರಾಮಯ್ಯನಿಗೆ ಹಂಸಧ್ವನಿರಾಗದ ‘‘ಜಲಜಾಕ್ಷ’’ , ಕಲ್ಯಾಣಿರಾಗದ ‘‘ವನಜಾಕ್ಷಿ’’  ಮತ್ತು ಭೈರವಿರಾಗದ ‘ವೀರಿಬೋಣಿ’ (ಆಟತಾಳ) ವರ್ಣಗಳನ್ನು ಹೇಳಿಕೊಟ್ಟರು. ರಾಮಯ್ಯನಿಗೆ ಕ್ರಮವಾಗಿ ದೊರೆತ ಸಂಗೀತ ಶಿಕ್ಷಣವಿಷ್ಟೆ. ಆದರೂ ಒಳ್ಳೆಯ ಸಂಗೀತವನ್ನು ಹೆಚ್ಚಾಗಿ ಕೇಳಿ ತಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಂಡರು. ಅವರಲ್ಲಿ ಹುದುಗಿದ್ದ ಕವಿತಾಶಕ್ತಿಗೆ ಅದು ಪೂರಕವಾಯಿತು. ಆಗ ತಿರುವನಂತ ಪುರದಲ್ಲಿ ಪ್ರಸಿದ್ಧರಾಗಿದ್ದ ನೀಲಕಂಠದಾಸರ (ನೀಲಕಂಠಶಿವನ್) ಕೃತಿಗಳನ್ನು ಕಲಿತು, ಅವರ ಶಿಷ್ಯರೊಂದಿಗೆ ಕಲೆತು ಭಜನೆಗಳಲ್ಲಿ ಹಾಡುವುದಕ್ಕಾರಂಭಿ ಸಿದರು. ಭಜನೆಯ ಉತ್ಸಾಹ ರಾಮಯ್ಯನ ಜೀವನದ ಗುರಿಯನ್ನು ಬದಲಾಯಿಸಿತು.

ಶಾಂತಿಗಾಗಿ ಅಲೆತ, ಭಜನೆ

೧೯೧೦ ರಲ್ಲಿ ರಾಮಯ್ಯನವರ ತಾಯಿ ಯೋಗಾಂ ಬಾಳ್ ಹಠಾತ್ತಾಗಿ ನಿಧನರಾದರು. ಅಣ್ಣ ರಾಜ ಗೋಪಾಲಯ್ಯರ್ ಪಾಪನಾಶಂಗೆ ಹೋಗಿ ಅಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾದರು. ರಾಮಯ್ಯನೂ ಅಲ್ಲಿಗೇ ಹೋದರು. ತಾಯಿಯ ಮರಣದಿಂದ ಮನಸ್ಸಿನ ಶಾಂತಿಯನ್ನು ಕಳೆದುಕೊಂಡು ಊರೂರು ಅಲೆಯಲಾರಂಭಿಸಿದರು. ಸುತ್ತುಮುತ್ತಲಿನ ಕ್ಷೇತ್ರಗಳಿಗೆಲ್ಲ ಹೋಗಿ, ಅವುಗಳಲ್ಲಿ ನಡೆಯುವ ಉತ್ಸವಗಳಲ್ಲಿ ಭಾಗಿಯಾಗಿ, ಭಜನೆ ಮಾಡುತ್ತ ತಮ್ಮನ್ನು ತಾವೇ ಮರೆಯುತ್ತಿದ್ದರು. ಪ್ರತಿವರ್ಷವೂ ತಪ್ಪದೆ ಅವರು ಹಾಗೆ ಭಾಗವಹಿಸುತ್ತಿದ್ದ ಉತ್ಸವಗಳೆಂದರೆ ತಿರುವಾರೂರಿನಲ್ಲಿ ನಡೆಯುತ್ತಿದ್ದ ಉತ್ತರ ಫಾಲ್ಗುಣ ಉತ್ಸವ, ನಾಗಪಟ್ಟಣದ ಅಡಿಪ್ಪೂರಂ ಉತ್ಸವ ಮತ್ತು ತಿರುವಯ್ಯಾರಿನ ಸಪ್ತಸ್ಥಾನಂ ಉತ್ಸವ.

ಪಾಪನಾಶಂ ಶಿವನ್’ ಆದದ್ದು

ಸ್ನಾನ ಮಾಡಿ ಮೈಗೆ ವಸ್ತ್ರದ ತುಂಡೊಂದನ್ನು ಸುತ್ತಿ ಕೊಂಡು, ವಿಭೂತಿಧರಿಸಿ, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು ಬಂದರೆ, ಸಾಕ್ಷಾತ್ ಪರಮೇಶ್ವರನಂತೆ ಕಾಣುತ್ತಿದ್ದ ರಾಮಯ್ಯನನ್ನು ತಂಜಾವೂರಿನ ಗಣಪತಿ ಅಗ್ರಹಾರದ ಜನರು ‘ಶಿವನ್’  ಎಂದು ಕರೆಯಲಾರಂಭಿಸಿದರು. ಪಾಪನಾಶಂನಲ್ಲಿ ಕೆಲಕಾಲವಿದ್ದುದರಿಂದ ‘ಪಾಪನಾಶಂ ಶಿವನ್’  ಎಂಬ ಹೆಸರು ಬಂದು ಅದೇ ಶಾಶ್ವತವಾಗಿ ನಿಂತಿತು. ಪೊಲಹಂ ರಾ. ರಾಮಯ್ಯ ಪಾಪನಾಶಂ ರಾ. ಶಿವನ್ ಆದದ್ದು ಹೀಗೆ. ಕೊನೆಗೆ ‘‘ರಾ’’  ಎಂಬ ಅಕ್ಷರವೂ ಮಾಯವಾಗಿ ‘‘ಪಾಪನಾಶಂ ಶಿವನ್’’ ಎಂದು ಪ್ರಸಿದ್ಧರಾದರು.

ಇಂತಹ ದೈವಸದೃಶ ಸಂಗೀತ

ಪಾಪನಾಶಂ ಶಿವನ್‌ರವರ ಭಜನೆಗಳಿಗೆ ಭಾರಿ ಪ್ರಮಾಣದಲ್ಲಿ ಜನರು ಸೇರುತ್ತಿದ್ದರು. ಅವರ ಸುಮಧುರ, ಸುಂದರ, ಸರಳ ಮತ್ತು ಭಕ್ತಿಪೂರಿತವಾದ ಗಾಯನಕ್ಕೆ ತಲೆತೂಗದವರಿಲ್ಲ. ಎಲ್ಲಿ ಎಂದರೆ ಅಲ್ಲೇ ಜನರು ತಮ್ಮ ಕೆಲಸವನ್ನೂ ಮರೆತು, ನಿಂತು ಶಿವನ್‌ರವರ ಗಾನಾಮೃತದ ಸವಿಯನ್ನು ಮನದಣಿಯೆ ಉಂಡು ತೃಪ್ತರಾಗಿ ಮುಂದುವರೆಯುತ್ತಿದ್ದರು. ಅಂತಹ ದಿವ್ಯ ಸನ್ನಿವೇಶಗಳಲ್ಲಿ ಕೆಲವನ್ನು ಇಲ್ಲಿ ನೆನಪಿಗೆ ತಂದುಕೊಳ್ಳುವುದು ಸೂಕ್ತವಾಗಿದೆ.

೧೯೧೨ ನೆಯ ಸಂವತ್ಸರವಿರಬಹುದು. ತಮಿಳು ನಾಡಿನ ಮನ್ನಾರ್‌ಗುಡಿಯಲ್ಲಿ ಶ್ರೀರಾಜಗೋಪಾಲ ಸ್ವಾಮಿ ದೇವರ ಬ್ರಹ್ಮೋತ್ಸವ ನಡೆಯುತ್ತಿದೆ. ಅಸಂಖ್ಯಾತ ಜನರು ಉತ್ಸವವನ್ನು ನೋಡುತ್ತ, ದೇವರ ಉತ್ಸವ ಮೂರ್ತಿಯ ಮುಂದೆ ಹೆಸರಾಂತ ನಾದಸ್ವರ ವಿದ್ವಾನ್ ಚಿನ್ನಪಕ್ಕಿರಿಯವರ ನಾದಮಯವಾದ ವಾದನವನ್ನು ಕೇಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಒಬ್ಬ ತರುಣ ಆ ಅಸಾಧ್ಯ ಜನಸಂದಣಿಯಲ್ಲಿ ತೂರಿ ಹೇಗೋ ಜಾಗ ಬಿಡಿಸಿಕೊಂಡು ಪಕ್ಕಿರಿಯವರನ್ನು ಸಮೀಪಿಸಿ ಅವರ ಕಿವಿಯಲ್ಲಿ ‘‘ಅವರು ಬಂದಿದ್ದಾರೆ’’ ಎಂದು ಉಸುರಿದನು. ಒಡನೆಯೇ ಪಕ್ಕಿರಿಯು ತನ್ನ ಕೈಲಿದ್ದ ವಾದ್ಯವನ್ನು ಶಿಷ್ಯನ ಕೈಯ್ಯಲ್ಲಿ ಕೊಟ್ಟು ಅವಸರ ಅವಸರವಾಗಿ ಉತ್ಸವಮೂರ್ತಿಯನ್ನು ಹೊತ್ತ ಪಲ್ಲಕ್ಕಿಯ ಹಿಂಬದಿಗೆ ಹೋದರು. ಅಂದಿನ ಉತ್ಸವದಲ್ಲಿ ಅನೇಕ ಭಜನೆ ಗೋಷ್ಠಿಗಳು ಸೇರಿದ್ದವು. ಅವುಗಳನ್ನೆಲ್ಲ ಬಿಟ್ಟು ಕೊನೆಯಲ್ಲಿ ಬರುತ್ತಿದ್ದ ಭಜನೆ ಗೋಷ್ಠಿಯ ಬಳಿ ಬಂದು ನಿಂತರು. ‘‘ಪತಿತಪಾವನ ರಾಮ, ಪಶುಪತಿವಿನುತನಾಮ’’ ಎಂದು ತೋಡಿರಾಗದಲ್ಲಿ ಹಾಡಲ್ಪಡುತ್ತಿದ್ದ ದಿವ್ಯನಾಮಾವಳಿಯು ಪಕ್ಕಿರಿಯ ಕಿವಿಗಳಿಗೆ ಅಮೃತಸದೃಶವಾಗಿತ್ತು. ಅದನ್ನೇ ತನ್ಮಯತೆಯಿಂದ ಕೇಳುತ್ತ, ಆನಂದ ಬಾಷ್ಪವನ್ನು ಸುರಿಸುತ್ತ ಪಕ್ಕಿರಿಯು ಭಜನೆಕಾರರ ಹಿಂದೆಯೇ ಹೋಗುತ್ತಿದ್ದಾರೆ. ದೇವಸ್ಥಾನದ ಧರ್ಮದರ್ಶಿಗಳು ಬಂದು ಪಕ್ಕಿರಿಯನ್ನು ಕರೆದಾಗಲೇ ಅವರಿಗೆ ತಾನೆಲ್ಲಿರುವೆನೆಂಬುದು ಗೊತ್ತಾದುದು. ನಾದ ಸ್ವರವಾದನವನ್ನು ಮುಂದುವರೆಸುವಂತೆ ಧರ್ಮದರ್ಶಿ ಗಳು ಪಕ್ಕಿರಿಗೆ ಸೂಚನೆ ಕೊಟ್ಟಾಗ ಪಕ್ಕಿರಿಯವರು ‘‘ಇಂತಹ ದೈವ ಸದೃಶವಾದ ಸಂಗೀತವನ್ನು ಕೇಳಿ ನಾನು ನುಡಿಸುವುದಾದರೂ ಏನನ್ನು?’’ ಎಂದು ಹೇಳಿ ಮನಸ್ಸಿಲ್ಲದ ಮನಸ್ಸಿನಿಂದ ಉತ್ಸವ ಮೂರ್ತಿಯ ಮುಂದಕ್ಕೆ ಬಂದು ನಿಂತು, ಶಿಷ್ಯನ ಕೈಯಿಂದ ತಮ್ಮ ವಾದ್ಯವನ್ನು ತೆಗೆದುಕೊಂಡು ನುಡಿಸಲಾರಂಭಿಸಿದರು. ಪಕ್ಕಿರಿಯನ್ನು ಪರವಶರನ್ನಾಗಿ ಮಾಡಿದ ಭಜನಕಾರರು ಪಾಪನಾಶಂ ಶಿವನ್.

ಮೈಮರೆಸಿದ ಹರಿಕಥೆ

ಚಿದಂಬರಂ ಶ್ರೀ ರಂಗಾಚಾರ್ಯರ್ ಎಂಬ ಪ್ರಸಿದ್ಧ ಕಥಾ ಕಾಲಕ್ಷೇಪಕಾರರು ಮನ್ನಾರ್ ಗುಡಿಯ ಬೀದಿ ಒಂದರಲ್ಲಿ ಜಟಕಾ ಬಂಡಿಯಲ್ಲಿ ಕುಳಿತು ನದಿಯ ಆಚೆಯ ದಡದಲ್ಲಿರುವ ಗ್ರಾಮವೊಂದಕ್ಕೆ ಹರಿಕಥೆ ಮಾಡಲು ಹೋಗುತ್ತಿದ್ದಾರೆ. ಅದೇ ಬೀದಿಯ ಕೊನೆಯಲ್ಲಿ ಹರಿಕಥೆಯೊಂದು ನಡೆಯುತ್ತಿದೆ. ಸಹಸ್ರಾರು ಜನರು ಕುಳಿತು ಏಕಾಗ್ರತೆಯಿಂದ ಹರಿಕಥೆಯನ್ನು ಕೇಳುತ್ತಿದ್ದಾರೆ. ಹರಿಕಥಾಕಾರರು ಬೇರಾರೂ ಅಲ್ಲ. ಸ್ವಯಂ ಪಾಪನಾಶಂ ಶಿವನ್‌ರವರೇ. ಕಥಾವಸ್ತು ‘‘ತಿರುತೊಂಡ ನಯನಾರ್ ಚರಿತ್ರಮ್’’. ಶ್ರೀರಂಗಾಚಾರ್ಯರು ಜಟಕಾದಿಂದ ಕೆಳಗೆ ಧುಮುಕಿ, ತಾವೂ ಕಥೆಯನ್ನು ಕೇಳುತ್ತಾ ನಿಂತು ಬಿಡುತ್ತಾರೆ. ಅವರು ನಡೆಸಿಕೊಡಬೇಕಾದ ಕಾರ್ಯಕ್ರಮದ ವೇಳೆ ಸಮೀಪಿಸುತ್ತಿದೆ ಎಂಬುದರ ಪರಿವೆ ಸಹ ಇಲ್ಲ. ಪಕ್ಕ ವಾದ್ಯಗಾರರಿಗೆ ಭಯ. ವೇಳೆಯಾಯಿತೆಂದು ಹೆದರಿಕೊಂಡೇ ಶ್ರೀರಂಗಾಚಾರ್ಯರನ್ನು ಎಚ್ಚರಿಸುತ್ತಾರೆ. ಆಚಾರ್ಯರು ಅಷ್ಟು ಸೊಗಸಾದ ಹರಿಕಥೆಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ, ಕರ್ತವ್ಯ ದೃಷ್ಟಿಯಿಂದ ಅಲ್ಲಿಂದ ತೆರಳಿ, ತಾವು ಹೋಗಬೇಕಾಗಿದ್ದ ಜಾಗವನ್ನು ತಲುಪುತ್ತಾರೆ. ಅವರ ಕಥೆಯನ್ನು ಏರ್ಪಡಿಸಿದ್ದ ಅವರ ಆಶ್ರಯದಾತರು ಕೋಪದಿಂದ ಕುದಿಯುತ್ತಿದ್ದಾರೆ. ಅದನ್ನು ಕಂಡರೂ ಕಾಣದ ಹಾಗೆ ಸಭಾಂಗಣವನ್ನು ಪ್ರವೇಶಿಸಿ ಅತ್ಯುತ್ತಮ ರೀತಿಯಲ್ಲಿ ಕಥಾಕಾಲಕ್ಷೇಪ ಮಾಡುತ್ತಾರೆ. ಆಶ್ರಯದಾತರ ಕೋಪವು ಮಾಯವಾಗಿ ಸಂತೋಷ ತುಂಬಿತುಳುಕುತ್ತದೆ. ಮುಂದೆ ಬಂದು ಭಾರಿ ವಜ್ರದುಂಗುರವೊಂದನ್ನು ಶ್ರೀರಂಗಾಚಾರ್ಯರ ಬೆರಳಿಗೆ ತೊಡಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಅದನ್ನು ಸ್ವೀಕರಿಸಿದ ಆಚಾರ್ಯರು ‘‘ಶಿವಭಕ್ತಾಗ್ರಣಿ ಪಾಪನಾಶಂ ಶಿವನ್‌ರವರ ಭಕ್ತಿ ಪೂರ್ಣವಾದ ಹರಿಕಥೆಯನ್ನು ಕೇಳಿದುದರ ಫಲವಿದು’’ ಎಂದು ನುಡಿದು, ತಾವು ತಡವಾಗಿ ಬಂದಿದ್ದರ ಕಾರಣವನ್ನು ಆ ಆಶ್ರಯದಾತರಿಗೆ ತಿಳಿಸುತ್ತಾರೆ.

ಹೀಗೆ ಶಿವನ್‌ರವರ ಭಜನೆಗಳೂ, ಹರಿಕಥಾ ಕಾಲಕ್ಷೇಪಗಳೂ ಸರ್ವಜನಪ್ರಿಯವಾಗಿದ್ದವು. ಇಂತಹವು ಎಷ್ಟೋ! ಶಿವನ್‌ರವರು ತಿರುವಯ್ಯಾರಿನ ಸಪ್ತಸ್ಥಾನ ಉತ್ಸವಕ್ಕೆ ೧೯೧೨ ರಿಂದ ೧೯೫೯ ರವರೆವಿಗೂ ಒಂದು ವರ್ಷವೂ ತಪ್ಪದೆ ಹೋಗಿ ಭಜನೆ, ಗಾಯನಗಳನ್ನು ಮಾಡಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಿದ್ದರು.

ಈ ದಿನವೇ ಸುದಿನ

ಪಂಚಾಪಕೇಶ ಭಾಗವತರು ಎಂಬವರು ತಿರುವಯ್ಯಾರಿ ನಲ್ಲಿ ಹರಿಕಥಾ ಕಾಲಕ್ಷೇಪಕ್ಕೆ ಹೆಸರಾದವರು, ಉತ್ತಮ ಪಂಡಿತರು. ಶಿವನ್ ಅವರು ಭಜನೆ ಮಾಡುವ ದಿನ ಅವರು ಬೆಳಗಿನಿಂದ ಒಂದು ತೊಟ್ಟು ನೀರನ್ನೂ ಕುಡಿಯದೆ ಕಾದಿದ್ದರು. ಕಾತರದಿಂದ ಮನೆಯೊಳಗಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ ಓಡಾಟ. ಮಧ್ಯಾಹ್ನ ನಾಲ್ಕು ಗಂಟೆಯಾದರೂ ಉಪವಾಸ ಮಾಡುತ್ತ ಕಾತರದಿಂದ ಕಾಯುತ್ತಿದ್ದರು. ಶಿವನ್ ಅವರ ಭಜನಗೋಷ್ಠಿ ಬರುತ್ತಲೇ ಸರಸರನೇ ಮೆಟ್ಟಿಲಿಲಿದು ಹೋಗಿ ಗೋಷ್ಠಿಯ ಬಳಿ ನಿಂತು ಭಜನೆಯನ್ನು ಕೇಳಿದರು. ಕೇಳುತ್ತ ಕೇಳುತ್ತ ಮೈಮರೆತರು. ಹಾಡು ಮುಗಿದಾಗಲೇ ಎಚ್ಚರ. ಶಿವನ್‌ರವರಿಗೆ ನಮಸ್ಕರಿಸಿ, ಕಾಲುಗಳನ್ನು ತೊಳೆದು, ಪಾನಕ ಮಜ್ಜಿಗೆಗಳನ್ನು ಕೊಟ್ಟರು. ‘‘ಶಿವನ್ ಅವರೆ, ಇವತ್ತು ನಾನು ಧನ್ಯನಾದೆ, ಈ ದಿನವೇ ಸುದಿನ’’ ಎಂದು ಹೇಳಿ ನಮಸ್ಕರಿಸಿ ಬೀಳ್ಕೊಟ್ಟರು.

ನೀಲಕಂಠ ಶಿವನ್‌ರವರ ಕೃತಿಗಳ ಪ್ರಚಾರ

ಶಿವನ್‌ರವರ ಜೀವನದಲ್ಲಿ ಅವರು ತಿರುವನಂತಪುರದಲ್ಲಿ ಕಳೆದ ದಿನಗಳು ಅವರಿಗೆ ಮಿಶ್ರಫಲವನ್ನು ನೀಡಿದವು. ಒಂದು ಕಡೆ ಕೆಲಸವಿಲ್ಲದೆ ಆಲಸಿಕೆಯ ಜೀವನದಿಂದ ದೇಹವು ಜಡವಾಗುತ್ತಿತ್ತು. ಮತ್ತೊಂದುಕಡೆ ಸತ್ಸಂಗ, ಸತ್ಸಹವಾಸ, ಸದ್ಗುರುವಿನ ಕಟಾಕ್ಷ ಇವುಗಳಿಂದ ಅವರ ಮನಸ್ಸು ಮುದಗೊಂಡಿತು. ಅವರು ಸಂಗೀತಗಾರರಾಗಿಯೂ ಮತ್ತು ವಾಗ್ಗೇಯಕಾರರಾಗಿಯೂ ಮಾರ್ಪಟ್ಟಿದ್ದು ಆ ದಿನಗಳಲ್ಲೆ. ಅವರು ಭಕ್ತಿಯ ಪರಾಕಾಷ್ಠತೆಯನ್ನು ಮುಟ್ಟಿದ್ದು ಆಗಲೇ. ಕರಮನೆ ನೀಲಕಂಠಶಿವನ್ ರವರ ‘‘ನೀಲಕಂಠಬೋಧಂ’’ ಎಂಬ ವೃತ್ತಗಳನ್ನೂ ಮತ್ತು ಅವರ ಅತ್ಯುತ್ತಮ ಸುಂದರ ರಚನೆಗಳನ್ನೂ ಅಭ್ಯಾಸ ಮಾಡಿ, ಆ ರಚನೆಗಳಲ್ಲಿ ಅಡಗಿದ್ದ ಭಕ್ತಿಯ ತಿರುಳಿನ ಸವಿಯನ್ನು ಕಂಡು, ಅದನ್ನು ಉಂಡು, ಪರವಶರಾಗಿ ಪಾರಮಾರ್ಥಿಕ ಜೀವನದ ಕಡೆಗೆ ಗಮನವನ್ನು ಹರಿಸಿದರು. ನೀಲಕಂಠಶಿವನ್‌ರವರ ಅತ್ಯುತ್ತಮ ರಚನೆಗಳೆನಿಸಿದ ಮುಖಾರಿ ರಾಗದ ‘‘ಎನೃಕ್ ಶಿವಕೃಪೈ ವರುವೇ’’, ಮತ್ತು ಖರಹರಪ್ರಿಯ ರಾಗದ ‘‘ನವಸಿದ್ದಿಪೆಟ್ರಾಲುಂ’’ ಇವು ಶಿವನ್‌ರವರ ಮೂಲಕ ಬೆಳಕಿಗೆ ಬಂದು, ಎಂದೆಂದಿಗೂ ಉಳಿಯುವಂತಾಯಿತು.

ಶಿವನ್‌ರವರು ಆ ಕಾಲದ ಮಹಾಗಾಯಕರೆನಿಸಿದ ಕೊನೇರಿ ರಾಜಪುರಂ ವೈದ್ಯನಾಥ ಅಯ್ಯರ್‌ರವರ ಗಾಯನವನ್ನು ಕೇಳಿ ಪುಳಕಿತರಾದರು. ಅವರ ಪರಿಚಯವನ್ನು ಮಾಡಿಕೊಂಡು ಅವರ ಹತ್ತಿರ ಇದ್ದು ಅವರ ಪ್ರೀತಿ, ವಿಶ್ವಾಸವನ್ನು ಗಳಿಸಿದರು. ಅವರ ಜೊತೆಯಲ್ಲಿ ಏಳು ವರ್ಷಗಳು ಊರೂರು ಸುತ್ತಿ ಅವರ ಗಾಯನದ ಜಾಡನ್ನನುಸರಿಸಿ ತಮ್ಮ ಗಾಯನದ ಸ್ವರೂಪವನ್ನು ಬದಲಾಯಿಸಿಕೊಂಡರು. ತಾವೇ ಕೃತಿಗಳನ್ನೂ ಪದಗಳನ್ನೂ ಮತ್ತು ವರ್ಣಗಳನ್ನೂ ರಚಿಸಲಾರಂಭಿಸಿದರು.

ವಿವಾಹ

ಮದರಾಸ್ ಮ್ಯೂಸಿಕ್ ಅಕಾಡೆಮಿಯ ಕಾರ್ಯದರ್ಶಿಗಳೂ ಹಾಗೂ ಸಂಸ್ಕೃತ ಭಾಷೆಯಲ್ಲಿ ಉದ್ದಾಮ ಪಂಡಿತರೆನಿಸಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಡಾಕ್ಟರ್ ರಾಘವನ್‌ರವರು ತಿರುವಾಂಕೂರಿನಲ್ಲಿದ್ದಾಗ ಶಿವನ್‌ರವರು  ಅಲ್ಲಿಗೆ ಹೋಗಿ ರಾಘವನ್‌ರವರ ಮನೆಯಲ್ಲಿ ನೆಲಸಿ ಅವರ ಸಂಸಾರದಲ್ಲಿ ಬೆರೆತುಹೋದರು. ರಾಘವನ್ ರವರ ತಾಯಿಯ ಚಿಕ್ಕಪ್ಪಂದಿರಾದ ಎನ್.ಮಹಾದೇವ ಅಯ್ಯರ್‌ರವರು ಮತ್ತು ಪಯವಲಂ ಸುಬ್ರಹ್ಮಣ್ಯ ಅಯ್ಯರ್ (ಸುಬ್ಬಯ್ಯರ್) ಇವರುಗಳು ಶಿವನ್‌ರವರ ಪರಮಮಿತ್ರರಾದರು. ಒಂದು ಕಡೆ ನೆಲೆಯಾಗಿ ನಿಲ್ಲುವಂತೆ ಮಾಡಲು ಶ್ರಮಿಸಿದವರೇ ಸುಬ್ಬಯ್ಯರ್‌ರವರು. ೧೯೧೨ ರಲ್ಲಿ ಶಿವನ್‌ರವರಿಗೆ ಲಕ್ಷ್ಮಿ ಎಂಬ ಸತ್ಕುಲ ಪ್ರಸೂತೆಯನ್ನು ತಂದು ಸುಬ್ಬಯ್ಯರ್ ಅವರು ಮದುವೆ ಮಾಡಿಸಿದರು.

ತಿರುವಾರೂರಿನಲ್ಲಿ ಶಿವನ್

ತಿರುವಾರೂರಿನ ‘‘ಉತ್ತರ ಫಾಲ್ಗುಣ ಉತ್ಸವ’’ ದಲ್ಲಿ ಶಿವನ್‌ರವರು ತಪ್ಪದೇ ಭಾಗವಹಿಸುತ್ತಿದ್ದರು. ಅಂತಹ ಒಂದು  ಸಂದರ್ಭದಲ್ಲಿ ಸಂಗೀತಕಲಾನಿಧಿ, ಗಾಯಕ ಶಿಖಾಮಣಿ ಡಾಕ್ಟರ್ ಹರಿಕೇಶನಲ್ಲೂರು ಮುತ್ತಯ್ಯ ಭಾಗವತರೂ ಮತ್ತು ಪ್ರಸಿದ್ಧ ವೈಣಿಕರಾಗಿದ್ದ ಸಂಗಮೇಶ್ವರ ಶಾಸ್ತ್ರಿಗಳೂ ತಿರುವಾರೂರಿಗೆ ಬಂದಿದ್ದರು. ಶಿವನ್‌ರವರ ‘‘ಕಾರ್ತಿಕೇಯ ಗಾಂಗೇಯ’’ ಎಂಬ ತೋಡಿರಚನೆ ರೂಪುಗೊಂಡಿದ್ದು ಅಲ್ಲೇ. ಮುತ್ತಯ್ಯ ಭಾಗವತರು ತಿರುವಾರೂರಿನ ತ್ಯಾಗ ರಾಜಸ್ವಾಮಿಯನ್ನು ಕುರಿತು ‘‘ತಾಂಡವ ದರ್ಶನಮಂ ದೇಹಿ ತ್ಯಾಗೇಶ’’ ಎಂಬ ಕೃತಿಯನ್ನು ರಚಿಸಿ ಹಾಡಿದರು. ತ್ಯಾಗರಾಜಸ್ವಾಮಿಯ ಮೂರ್ತಿಯನ್ನು ನೋಡಿದ ಶಿವನ್ ರವರಿಗೆ ಸಂತೋಷ ಉಕ್ಕಿ ಹರಿಯಿತು. ‘‘ಉನ್ನೆ  ತುದಿಕ್ಕ ಅರುಳ್‌ತಾ’’ ಎಂಬ ಪದಗಳಿಂದ ಆರಂಭವಾಗುವ ಕುಂತಲವರಾಳಿ ರಾಗದ ಕೃತಿಯು ಅವರ ಬಾಯಿಂದ ಹೊರಹೊಮ್ಮಿತು. ಅಲ್ಲಿ ನೆರೆದಿದ್ದವರೆಲ್ಲರೂ ಕೇಳಿ ಮೈಮರೆತರು. ಮುತ್ತಯ್ಯ ಭಾಗವತರು ಆನಂದ ಬಾಷ್ಪಗಳನ್ನು ಸುರಿಸುತ್ತ ‘‘ಅಪ್ಪಾ ಶಿವನ್, ನಿಜವಾದ ಭಕ್ತನೆಂದರೆ ನೀನೇ. ಆಹಾ! ಎಂತಹ ಸುಂದರವಾದ ರಚನೆಯನ್ನು ನನ್ನ ಕಿವಿಗೆ ಹಾಕಿದೆ? ನೀನೇ ಪರಮಧನ್ಯ. ನಿನ್ನ ಕೃತಿಯ ಮುಂದೆ ನನ್ನ ರಚನೆ ತೀರಾಸಾಮಾನ್ಯ’’ ವೆಂದು ತುಂಬುಹೃದಯದಿಂದ ಶಿವನ್‌ರವರನ್ನು ಕೊಂಡಾಡಿದರು.ಸಂಗಮೇಶ್ವರ ಶಾಸ್ತ್ರಿಗಳ ಬಾಯಿಂದ ಮಾತೇ ಹೊರಡಲಿಲ್ಲ. ಶಿವನ್‌ರವರ ಈ ಕುಂತಲವರಾಳಿ ಕೃತಿಯು ಅವರ ಮಹಾರಚನೆಗಳಲ್ಲಿ ಒಂದು   ಎಂದು ಪರಿಗಣಿಸಲ್ಪಟ್ಟಿದೆ.

ಕಾಪಾಲೇಶ್ವರನಭಕ್ತರು

ಶಿವನ್‌ರವರಿಗೆ ಮದುವೆಯೇನೋ ಆಯಿತು. ಆದರೂ ಮುಂದೆ ಹದಿಮೂರು ವರ್ಷಗಳ ವರೆಗೆ ಶಿವನ್‌ರವರ ಊರೂರು ಅಲೆದಾಟ ನಿಲ್ಲಲಿಲ್ಲ. ಅಲ್ಲಿ ಇಲ್ಲಿ ಸುತ್ತಿ ಕೊನೆಗೆ ೧೯೨೦ ರಲ್ಲಿ ಮದರಾಸಿಗೆ ಬಂದು ನೆಲಸಿದರು. ೧೯೨೧ ರ ಮಾರ್ಗಶಿರ ಮಾಸದಲ್ಲಿ ಪ್ರತಿದಿನವೂ ಬೆಳಗಿನ ಝಾವ ಮೈಲಾಪುರದ ಕಾಪಾಲೇಶ್ವರ ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲೂ ಇರುವ ನಾಲ್ಕು ಮಾಡಾ ಬೀದಿಗಳಲ್ಲಿ ಭಜನೆ ಮಾಡಿಕೊಂಡು ಬಂದು ದೇವಸ್ಥಾನದ ಒಳಹೊಕ್ಕು ಕಾಪಾಲೇಶ್ವರ ದರ್ಶನ ಮಾಡಿದ ನಂತರವೇ ತಮ್ಮ ದೈನಂದಿನ ಕೆಲಸಗಳಿಗೆ ಗಮನ ಕೊಡುವ ಪದ್ಧತಿಯನ್ನು ಆರಂಭಿಸಿದರು. ಗರ್ಭಗುಡಿಯ ಮುಂದೆ ಇತರ ಭಕ್ತರಿಂದ ಸ್ವಲ್ಪ ದೂರವಾಗಿ ಒಬ್ಬರೇ ಕಣ್ಣುಮುಚ್ಚಿ ನಿಲ್ಲುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಅವರು ಮೈಮರೆಯುತ್ತಿದ್ದರು. ಇಂಪಾದ ಹಾಡು ತಾನೇ ತಾನಾಗಿ ಅವರ ತುಟಿಗಳಿಂದ ಹೊರಹೊಮ್ಮುತ್ತಿತ್ತು. ಅವರ ಅನೇಕ ಹಾಡುಗಳು ರಚಿತವಾದದ್ದೇ ಹೀಗೆ. ಕಾಪಾಲೇಶ್ವರನ ದೇವಾಲಯಕ್ಕೆ ಬೆಳಗ್ಗೆ ಹೋಗುವ ಪದ್ಧತಿಯನ್ನು ಹೆಚ್ಚು ಕಡಿಮೆ ತನ್ನ ಕೊನೆಯ ಉಸಿರು ಎಳೆಯುವವರೆಗೂ ಅಂದರೆ ಐವತ್ತೆರಡು ವರ್ಷಗಳ ವರೆಗೆ ತಪ್ಪದೆ ಅನುಸರಿಸಿದರು. ದೇಹವು ತೀರ ಹಣ್ಣಾಗಿ, ನಡೆಯಲು ಶಕ್ತಿ ಇಲ್ಲದಿರುವಾಗ ಅವರ ಅಭಿಮಾನಿಗಳು ಅವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ ಅದನ್ನು ಹೊತ್ತುಕೊಂಡು ಭಜನೆಗೆ ಕರೆತರುತ್ತಿದ್ದರು. ಮುಪ್ಪಿನಲ್ಲಿ ಸುಕ್ಕಾದ ಅವರ ಮುಖದಲ್ಲಿ ತಾರುಣ್ಯದಲ್ಲಿದ್ದ ಅದೇ ಸಾತ್ವಿಕ ಕಳೆ, ತೇಜಸ್ಸು.

ಕಷ್ಟಗಳು

ಶಿವನ್‌ರವರ ಮದರಾಸಿನ ಜೇವನವು ಕೆಲವು ಕಾಲ ಕಷ್ಟಕಾರ್ಪಣ್ಯದಿಂದ ಕೂಡಿತ್ತು. ಸಂಸಾರ ಬೆಳೆದಿತ್ತು. ಕೃತಿವಾಸನ್ ಮತ್ತು ರಾಮದಾಸ್ ಎಂಬ ಇಬ್ಬರು ಗಂಡುಮಕ್ಕಳೂ, ನೀಲಾ ಮತ್ತು ರುಕ್ಮಿಣಿ ಎಂಬ ಇಬ್ಬರು ಹೆಣ್ಣುಮಕ್ಕಳು. ಅನೇಕ ಕಷ್ಟಗಳನ್ನು ಅವರು ಎದುರಿಸಬೇಕಾಯಿತು. ದೊಡ್ಡಮಗನಿಗೆ ಸರಿಯಾದ ಯಾವ ಉದ್ಯೋಗವೂ ಸಿಕ್ಕಲಿಲ್ಲ. ಎರಡನೆಯ ಮಗನಿಗೆ ಬುದ್ಧಿ ಸರಿಯಿಲ್ಲದೆ ಇಪ್ಪತ್ತೆ ದು ವರ್ಷಗಳಿಂದಲೂ ಆಸ್ಪತ್ರೆಯಲ್ಲೇ ಇದ್ದ.

ಕುಚೇಲ ಶಿವನ್

ಶಿವನ್‌ರವರು ಮದರಾಸಿಗೆ ಬಂದಮೇಲೆ ಕೆಲವು ಕಾಲ ಬಡತನದ ಬೇಗೆಯನ್ನು ಅನುಭವಿಸಿದರು. ಅವರಿಗೆ ಮದರಾಸ್ ಬಾನುಲಿಯಲ್ಲಿ ಹಾಡಬೇಕೆಂಬ ಅಭಿಲಾಷೆಯುಂಟಾಯಿತು. ಕಾರ್ಪೊರೇಷನ್ ರೇಡಿಯೋ ಕಾರ್ಯಕ್ರಮಗಳಿಗೆ ಕಲಾವಿದರನ್ನು ಹುಡುಕಿ, ಅವರಲ್ಲಿ ತಮಗೆ ಅರ್ಹರೆಂದು ಕಂಡು ಬಂದವರನ್ನು ಆರಿಸಿ, ಅವರುಗಳಿಗೆ ಕಾರ್ಯಕ್ರಮಗಳನ್ನು ಕೊಡಿಸುವುದಕ್ಕೆಂದೇ ಪ್ರತಿಷ್ಠಿತ ವ್ಯಕ್ತಿಯೊಬ್ಬರು ನೇಮಕರಾಗಿದ್ದರು. ಶಿವನ್‌ರವರು ಆ ವ್ಯಕ್ತಿಯನ್ನು ಕಂಡು ತಮ್ಮ ಇಚ್ಛೆಯನ್ನು ಅವರಲ್ಲಿ ಅರಿಕೆ ಮಾಡಿಕೊಂಡರು. ಆದರೆ ಅಧಿಕಾರದ ಮದದಿಂದ ಅವರು ಶಿವನ್‌ರವರಿಗೆ ಸಹಾಯ ಮಾಡುವುದಿರಲಿ, ‘‘ಭಜನೆಯಲ್ಲಿ ಹಾಡುವವರಿಗೆಲ್ಲ ರೇಡಿಯೋವಿನಲ್ಲಿ ಪ್ರವೇಶವಿಲ್ಲ. ಅದು ಪ್ರಸಿದ್ಧ ಗಾಯಕ-ವಾದಕರಿಗೇ ಮೀಸಲು. ಹೇಳಿಕೇಳಿ ನೀವು ಭಜನೆಯವರು. ನಿಮಗೆ ಅರ್ಹತೆಯಿಲ್ಲ. ನನಗೆ ಸುಮ್ಮನೇ ತೊಂದರೆ ಮಾಡಬೇಡಿ’’ ಎಂದು ಒರಟಾಗಿ ಹೇಳಿ ಮುಖ ಮುರಿದು ಕಳುಹಿಸಿಕೊಟ್ಟರು. ಅಧಿಕಾರದ ಮದದಿಂದ ಕುರುಡನಾಗಿದ್ದ ಆ ವ್ಯಕ್ತಿಗೆ ಭಜನೆಯ ಮಹತ್ವ ಮತ್ತು ದೈವಿಕತೆ ಹೇಗೆ ಗೊತ್ತಾಗಬೇಕು?

ಪಾಪನಾಶಂ ಶಿವನ್‌ರವರ ಮೊಟ್ಟಮೊದಲನೆಯ ವೇದಿಕೆಯ ಕಚೇರಿ ನಡೆದುದು ೧೯೧೮ ರಲ್ಲಿ. ತಿರುವಯ್ಯಾರ್‌ನಲ್ಲಿ ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ. ಪಾಪಾ ಕೆ.ಎಸ್. ವೆಂಕಟರಾಮಯ್ಯ ಮತ್ತು ಅಳಗು ನಂಬಿಯಪಿಳ್ಳೆ ಇವರುಗಳ ಪಿಟೀಲು ಮತ್ತು ಮೃದಂಗ ಪಕ್ಕವಾದ್ಯಗಳೊಂದಿಗೆ ಹಾಡಿದರು.

ಅದೃಷ್ಟ ಒಲಿಯಿತು

ಶಿವನ್‌ರವರ ಶುಕ್ರದಶೆ ಪ್ರಾರಂಭವಾದದ್ದು ತಮಿಳು ಚಲನಚಿತ್ರ ತಯಾರಿಕೆಯ ಆರಂಭದೊಡನೆ, ಅಂದರೆ ೧೯೩೬ ರಲ್ಲಿ. ಕೆಲವು ಚಿತ್ರ ನಿರ್ಮಾಪಕರು ‘‘ಸೀತಾ ಕಲ್ಯಾಣಂ’’ ಎಂಬ ತಮಿಳು ಚಿತ್ರವನ್ನು ತೆಗೆಯುವ ಯೋಚನೆಯನ್ನು ಮಾಡಿ, ಚಿತ್ರಕ್ಕೆ ಬೇಕಾಗಿದ್ದ ಪಾತ್ರಧಾರಿಗಳನ್ನು ಗೊತ್ತು ಮಾಡಿದರು. ಇಂದಿನ ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧ ವೈಣಿಕರೆನಿಸಿದ ಎಸ್.ಬಾಲಚಂದರ್ ರವರ ಸಹೋದರಿ ಜಯಾ ಸೀತೆಯಾಗಿಯೂ ಸಹೋದರ ಎಸ್.ರಾಜಂರವರು ರಾಮನಾಗಿಯೂ ಮತ್ತು ಅವರ ತಂದೆ ಸುಂದರಂ ಅಯ್ಯರ್‌ರವರು ಜನಕನಾಗಿಯೂ ಪಾತ್ರವಹಿಸ ತಕ್ಕದ್ದೆಂದು ತೀರ್ಮಾನವಾಯಿತು. ಚಿಕ್ಕ ಹುಡುಗ ಬಾಲಚಂದರ್ ಖಂಜಿರ ನುಡಿಸಲು ನಿಯುಕ್ತರಾದರು. ಸಂಗೀತವನ್ನು ಒದಗಿಸುವುದು ಯಾರು? ಎಂಬ ವಿಷಯದಲ್ಲಿ ಜಿಜ್ಞಾಸೆಯುಂಟಾಯಿತು. ಕಡೆಗೆ ಪಾಪನಾಶಂ ಶಿವನ್ ಅವರಿಗೇ ಈ ಹೊಣೆಯನ್ನು ಕೊಡಬೇಕು ಎಂದು ತೀರ್ಮಾನ ವಾಯಿತು. ನಿರ್ಮಾಪಕರು ಶಿವನ್‌ರವರನ್ನು ಕಂಡು ಒಪ್ಪಿಸಿದರು.

ಚಲನಚಿತ್ರ ಪ್ರಪಂಚ

ಶಿವನ್‌ರವರು ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ, ಭಜನಾ ಪ್ರಪಂಚದಿಂದ ಹೊರಬಂದು ಪ್ರಪ್ರಥಮವಾಗಿ ಚಲನಚಿತ್ರ ಪ್ರಪಂಚಕ್ಕೆ ಕಾಲಿರಿಸಿದರು. ಚಿತ್ರಕ್ಕೆ ಸೂಕ್ತವಾಗಿರುವ ಹಾಗೂ ಜನಪ್ರಿಯ ಗೀತೆಗಳ ರಚನೆಯ ಕೆಲಸ ಅವರ ಪಾಲಿಗೆ ಬಂದಿತು. ಆ ಕೆಲಸವನ್ನೂ ಅವರು ಅತ್ಯಂತ ಸಮರ್ಪಕವಾಗಿ ಮಾಡಿ ತಮ್ಮ ಬಹುಮುಖ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದರು. ‘‘ಸೀತಾ ಕಲ್ಯಾಣಂ’’ ಚಿತ್ರದಲ್ಲಿ ರಾಮಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಅವರ ತಪೋವನವನ್ನು ಪ್ರವೇಶಿಸುವುದಕ್ಕೆ ಮೊದಲು ದೂರದಿಂದ ಕಂಗೊಳಿಸುತ್ತಿದ್ದ ಹಾಗೂ ಕಾಡನ್ನು ಹೋಲುತ್ತಿದ್ದ ತಪೋವನವನ್ನು ನೋಡಿ, ಅದರ ಕಡೆಗೆ ಬೆರಳು ತೋರಿಸುತ್ತ ‘‘ಕಾನಗಂ ಎದ್‌ಸ್ವಾಮಿ, ಎದಿರಿಲ್ ಕಾಣುಂ’’ ಎಂದು ಬಿಲಹರಿ ರಾಗದಲ್ಲಿ ಹಾಡಿದುದನ್ನು ಕೇಳಿದವರು ಮರೆಯುವಂತಿರಲಿಲ್ಲ. ಶಿವನ್‌ರವರಿಗೆ ಆ ಚಿತ್ರಕ್ಕೆ ಸಂಗೀತ ಒದಗಿಸಿದ್ದಕ್ಕೆ ದೊರೆತ ಸಂಭಾವನೆ ತೀರ ಸ್ವಲ್ಪವೇ.

ಕುಬೇರ ಶಿವನ್

‘‘ಸೀತಾಕಲ್ಯಾಣಂ’’ ಚಿತ್ರದ ಗೀತೆಗಳು ತಮಿಳು ಚಲನ ಚಿತ್ರ ನಿರ್ಮಾಪಕರನ್ನು ಜಾಗೃತಗೊಳಿಸಿದವು. ಅನೇಕ ಚಿತ್ರಗಳಿಗೆ ಸಂಗೀತವನ್ನು ಅಳವಡಿಸುವ ಜವಾಬ್ದಾರಿ ಶಿವನ್ ಅವರದಾಯಿತು. ಹಾಗೆ ಚಿತ್ರಗಳಿಗಾಗಿ ರಚಿಸಿದ ಗೀತೆಗಳ ಸಂಖ್ಯೆ ಸುಮಾರು ಐನೂರಿರಬಹುದು.

ಚಲನಚಿತ್ರಗಳಿಗೆ ಸಂಗೀತವನ್ನು ಒದಗಿಸುವುದರ ಜೊತೆಗೆ ಶಿವನ್‌ರವರು ತಾವೇ ‘‘ಕುಚೇಲ’’,‘‘ಭಕ್ತ ಚೇತ’’ ‘‘ತ್ಯಾಗಭೂಮಿ’’ ಮತ್ತು ‘‘ಕುಬೇರ ಕುಚೇಲ’’ ಈ ನಾಲ್ಕು ಚಿತ್ರಗಳಲ್ಲಿ ನಟಿಸಿದರು. ಅಪಾರವಾದ ದ್ರವ್ಯಸಂಪಾದನೆಯಾಯಿತು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ‘ಕುಚೇಲ’ ಶಿವನ್, ನಿಜವಾಗಿಯೂ ‘‘ಕುಬೇರ ಶಿವನ್’’ ಆದರು.

ಅವರು ರಚಿಸಿದ ಚಿತ್ರಗೀತೆಗಳನೇಕವು ಭಕ್ತಿರಸ ಪ್ರಧಾನವಾಗಿದ್ದವು, ನಿಜ. ಆದರೆ ಬಡವರಾಗಿದ್ದಾಗ ಶಿವನ್‌ರವರ ಹೃದಯದಲ್ಲಿ ಭಕ್ತಿ ತುಂಬಿ ತುಳುಕಾಡುತ್ತಿತ್ತು. ಈಗ ಆ ನೈಜಭಕ್ತಿಯು ಮಸುಕು ಮಸುಕಾಯಿತು.ಅವರೇ ‘‘ದ್ರವ್ಯಸಂಪಾದನೆಗಾಗಿ ಯಾವಾಗ ಕೃತಿಗಳನ್ನು ರಚಿಸಲಾರಂಭಿಸಿದೆನೋ ಆಗಲೇ ಭಗವಂತನಲ್ಲಿ ನಿಶ್ಚಲ ಭಕ್ತಿ ಮತ್ತು ತನ್ಮಯತೆ ಇವುಗಳು ಹಿಂದೆ ಸರಿದವು. ಇದು ನನ್ನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನುಂಟು  ಮಾಡಿತು. ಲಕ್ಷಗಟ್ಟಲೆ ಹಣ ಸಂಪಾದಿಸಿದುದೇನೋ ಸರಿ. ಆದರೆ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ನನ್ನಿಂದ ಆಗದ ಮಾತಾಯಿತು’’ ಎಂದು ಎಷ್ಟೋ ಸಲ ನೊಂದು ನುಡಿಯುತ್ತಿದ್ದರು.

ಮತ್ತೆ ಕುಚೇಲನೆ

ಏನಾದರೇನು? ಅಷ್ಟು ಸಂಪಾದಿಸಿದರೂ, ಅಷ್ಟೇ ಬೇಗ ಖರ್ಚಾಗಿ ಹೋಗಿ ಮತ್ತೆ ಕಚೇಲರಾದರು.

ಹದಿನೈದು ವರ್ಷಗಳಲ್ಲಿ ಶಿವನ್ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದರು. ಆದರೆ ಮಗಳ ಮದುವೆ, ಮಗನ ಔಷಧೋಪಚಾರ, ಆದಾಯ ತೆರಿಗೆ ಹೀಗೆ ಹಲವು ಕಾರಣಗಳಿಂದ ಹಣ ಖರ್ಚಾಯಿತು. ಎಲ್ಲ ಖರ್ಚಾಗಿ ಸುಮಾರು ಅರ್ಧ ಲಕ್ಷ ಕೈಯಲ್ಲಿ ಉಳಿಯಿತು. ಅವರು ಹುಟ್ಟಿದ ಹಳ್ಳಿ ಪೊಲಗಂನಲ್ಲಿ ಶಿವದೇವಾಲಯ ಬೀಳುವ ಸ್ಥಿತಿಯಲ್ಲಿತ್ತು. ತಮ್ಮಲ್ಲಿದ್ದ ಹಣವನ್ನೆಲ್ಲ ಆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೊಟ್ಟು ‘ಶಿವನು ನನಗೆ ಕೊಟ್ಟಿದ್ದನ್ನು ಹಿಂದಕ್ಕೆ ಕೊಟ್ಟಿದ್ದೇನೆ’ ಎಂದು ಕೈಮುಗಿದುಬಿಟ್ಟರು.

ಒಟ್ಟಿನಲ್ಲಿ ಕಾರಣವೇನೇ ಇರಲಿ, ಶಿವನ್‌ರವರ ಹದಿನಾರು ವರ್ಷದ ಸೌಖ್ಯ ಜೀವನವು ಒಂದು ಕನಸಿನಂತೆ ಎಂಬುದು ನಿಜ.

ಆ ಸಮಯದಲ್ಲಿ ಕಲಾಕ್ಷೇತ್ರದ ಶ್ರೀಮತಿ ರುಕ್ಮಿಣಿ ದೇವಿಯು ಅವರನ್ನು ತಮ್ಮ ನೃತ್ಯನಾಟಕಗಳಿಗೆ ಸಂಗೀತ ಅಳವಡಿಸಲು ತೆಗೆದುಕೊಂಡರು. ರುಕ್ಮಿಣೀದೇವಿಯವರ ಪ್ರಸಿದ್ಧ  ನೃತ್ಯನಾಟಕಗಳೆನಿಸಿದ ‘‘ಗೀತ ಗೋವಿಂದಂ’’ ಮತ್ತು ‘‘ಕೃಷ್ಣನೂರಿಕೊರವಂಜಿ’’ ಯಲ್ಲಿನ ಸಂಗೀತದ ಹೊಣೆಗಾರಿಕೆ ಶಿವನ್‌ರವರದ್ದೇ.

ಕೀರ್ತಿ

ಶಿವನ್‌ರವರ ಬಾಳಿನ ರಥವು ಏರುಪೇರುಗಳನ್ನು ಹತ್ತಿ ಇಳಿಯಬೇಕಾಯಿತು. ಆದರೂ ಅವರು ರಚಿಸಿದ ಐನೂರು ಅಥವಾ ಅದಕ್ಕೂ ಮೇಲ್ಪಟ್ಟ ಹಾಡುಗಳು ಎಂದೆಂದೂ ಉಳಿಯುವಂತಹವು. ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ, ಸಂಗೀತದಲ್ಲಿ ಸಾಕಷ್ಟು ಅನುಭವ ಮತ್ತು ಹುಟ್ಟಿನಿಂದಲೇ ಬಂದ ಕವಿತಾ ರಚನಾ ಸಾಮರ್ಥ್ಯ ಇವುಗಳ ಫಲವೇ ಅವರ ಅಮೂಲ್ಯ ಕೃತಿ ರತ್ನಗಳು. ಭಕ್ತಿ, ವೈರಾಗ್ಯ ಮತ್ತು ವೇದಾಂತ- ಇವುಗಳೇ ಆ ಕೃತಿಗಳ ಜೀವನಾಡಿ. ಒಬ್ಬ ಮಹಾ ವ್ಯಕ್ತಿಯ ಚಿರಸ್ಮರಣೆಯ ಕೆಲಸವು ಆ ವ್ಯಕ್ತಿಯು ಜೀವಂತ ನಾಗಿರುವಾಗಲೇ ಪ್ರಸಿದ್ಧಿಗೆ ಬರುವುದು ಅಪರೂಪ. ಆ ಮಹಾಭಾಗ್ಯ ಇಬ್ಬರು ಇಪ್ಪತ್ತನೆಯ ಶತಮಾನದ ಖ್ಯಾತ ವಾಗ್ಗೇಯಕಾರರ ಪಾಲಿಗೆ ಬಂದಿತೆಂದರೆ ಆಶ್ಚರ್ಯವೇನಲ್ಲ. ಆ ಪ್ರಸಿದ್ಧ ವಾಗ್ಗೇಯಕಾರರು ವಾಸುದೇವಾಚಾರ‍್ಯರು ಮತ್ತು ಪಾಪನಾಶಂ ಶಿವನ್‌ರವರು. ಭಕ್ತಿ ಮತ್ತು ಕರುಣಾರಸ ಪೂರ್ಣವಾದ ಶಿವನ್‌ರವರ ರಚನೆಗಳು ಅವರನ್ನು ಅರುಣಾಚಲ ಕವಿರಾಯರ್, ಅರುಣಗಿರಿನಾಥರ್, ಗೋಪಾಲಕೃಷ್ಣ ಭಾರತಿ, ಕವಿಕುಂಜರ ಭಾರತಿ ಮತ್ತು ವೇದನಾಯಕಾ ಪಿಳ್ಳೆ ಮುಂತಾದ ಸುಪ್ರಸಿದ್ಧ ತಮಿಳು ವಾಗ್ಗೇಯಕಾರರ ಪರಂಪರೆಗೆ ಕೊಂಡೊಯ್ದಿವೆ ಎನ್ನುವುದು ಉತ್ಪ್ರೇಕ್ಷೆಯಲ್ಲ.

ಕೀರ್ತನಮಾಲ

ಶಿವನ್‌ರವರ ರಚನೆಗಳು ‘‘ಕೀರ್ತನಮಾಲ’’ ಎಂದು ಬೆಳಕಿಗೆ ಬಂದ ನಾಲ್ಕು ಭಾಗಗಳ ಪುಸ್ತಕದಲ್ಲಿವೆ. ೧೯೨೦ ರ ನಂತರ ಗ್ರಾಮಾಫೋನ್ ಕಂಪನಿಯವರು ಶಿವನ್‌ರವರ ಕೆಲವು ಕೃತಿಗಳನ್ನು ಧ್ವನಿಮುದ್ರಿಕೆ ಮಾಡಿ ಬೇಕಾದಷ್ಟು ದುಡ್ಡು ಮಾಡಿಕೊಂಡರು. ಶಿವನ್‌ರವರಿಗೆ ಅದರಲ್ಲಿ ಸಂದಾಯವಾದ ಭಾಗವು ಅಲ್ಪವೆಂದೇ ಹೇಳಬೇಕು. ಕೃತಿಗಳನ್ನು ರಚಿಸಿದ್ದಾಗಿದೆ. ಆದರೆ ಅವುಗಳನ್ನು ಅಚ್ಚು ಹಾಕಿಸಲು ತಮ್ಮಲ್ಲಿ ಹಣವಿಲ್ಲ.ಏನು ಮಾಡಲೂ ತಿಳಿಯದೆ ಕಾಲವನ್ನು ತಳ್ಳುತ್ತಿದ್ದರು. ಆದರೆ ಅವರಿಗೆ ಸಹಾಯ ಒದಗಿ ಬಂತು. ರಂಗರಾಮಾನುಜ ಅಯ್ಯಂಗಾರರು ಶಿವನ್‌ರವರ ಕೃತಿಗಳನ್ನು ಅಚ್ಚು ಹಾಕಿಸುವ ಹೊಣೆಹೊತ್ತರು. ಇಬ್ಬರೂ ಕುಳಿತು ಒಂದು ನೂರು ಕೃತಿಗಳಿಗೆ ಸ್ವರ ಸಂಯೋಜನೆಯನ್ನು ಮಾಡಿ, ಪರಿಷ್ಕರಿಸಿ ಮುದ್ರಣಕ್ಕೆ ಸಿದ್ಧಪಡಿಸಿದರು. ‘‘ಕಲ್ಕಿ’’ ತಮಿಳು ವಾರಪತ್ರಿಕೆಯ ಸಂಪಾದಕ ರಾ.ಕೃಷ್ಣಮೂರ್ತಿಯವರು ಒಂದು ವರ್ಷಕಾಲ ಅವರ ವಾರಪತ್ರಿಕೆಯಲ್ಲಿ ಎಡಬಿಡದೆ ಶಿವನ್‌ರವರ ಕೃತಿಗಳಿಗೆ ಒಳ್ಳೆಯ ಪ್ರಚಾರವನ್ನು ಕೊಟ್ಟರು. ‘‘ಆನಂದವಿಕಟನ್’’ ಸಂಪಾದಕರಾದ ಎಸ್.ಎಸ್.ವಾಸನ್ ಅವರೂ ಮತ್ತು ರಂಗ ರಾಮಾನುಜ ಐಯ್ಯಂಗಾರ‍್ಯರೂ ಮುದ್ರಣದ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಶೇಖರಿಸಿದರು. ಅಚ್ಚು ಹಾಕುವ ಕಾರ್ಯವೂ ಆರಂಭವಾಯಿತು. ರಂಗ ರಾಮಾನುಜ ಐಯ್ಯಂಗಾರ್ಯರು ತಾವೇ ಕರಡು ಪ್ರತಿಗಳನ್ನು ತಿದ್ದಿದರು. ಪುಸ್ತಕವು ‘‘ಬ್ರಹ್ಮಶ್ರೀ ಪಾಪನಾಶಂ ಶಿವನ್‌ರವರ ಕೀರ್ತನ ಮಾಲೈ’’ ಎಂಬ ಹೆಸರನ್ನು ಹೊತ್ತು ಸಿದ್ಧವಾಯಿತು. ೧೯೩೪ ರ ನವೆಂಬರ್ ಒಂದರಂದು ಮದರಾಸಿನಲ್ಲಿ ವೈಭವದ ಸಮಾರಂಭ ವೊಂದರಲ್ಲಿ ಆ ಪುಸ್ತಕದ ಬಿಡುಗಡೆ ಆಯಿತು.

‘‘ಕೀರ್ತನಮಾಲ’’ ದ ಮೊದಲನೆಯ ಶತಕವು ಬಹುಬೇಗ ಜನಾದರಣೀಯವಾಯಿತು. ಪ್ರತಿಗಳೆಲ್ಲವೂ ಖರ್ಚಾಗಿ ಪುನರ್ಮುದ್ರಣಗೊಳ್ಳಬೇಕಾಯಿತು. ಅದಾದ ನಂತರ ಮತ್ತೆ ಮೂರು ಭಾಗಗಳು (ಒಂದೊಂದರಲ್ಲೂ ೧೦೧ ಹಾಡುಗಳಿವೆ) ಹೊರ ಬಂದವು. ನಾಲ್ಕನೆಯ ಶತಕದ ‘‘ಕೀರ್ತನಮಾಲ’’ ಪುಸ್ತಕವನ್ನು ೧೯೭೩ ರ ಸೆಪ್ಟೆಂಬರ್ ಒಂದರಂದು ಪ್ರಕಟಿಸಲಾಯಿತು.

ಕೆಲವು ಮೇರು ರಚನೆಗಳು

ಶಿವನ್‌ರವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಯ ಪರಾಕಾಷ್ಠತೆ ಮತ್ತು ಸುಲಲಿತವಾದ ಶೈಲಿ ಇವುಗಳನ್ನು ವರ್ಣಿಸುವುದು ಸಾಧ್ಯವಿಲ್ಲ. ಕೃತಿಗಳನ್ನು ಕೇಳಿದರೆ ಮನಸ್ಸಿಗೆ ತಿಳಿಯುತ್ತದೆ.

ಶಿವನ್‌ರವರ ಅನೇಕ ರಚನೆಗಳು ಎಷ್ಟು ಸುಂದರವಾಗಿವೆ ಎಂದರೆ ಬಹು ದೊಡ್ಡ ಸಂಗೀತಗಾರರು ಹಾಡಲು ಅವನ್ನು ಆರಿಸಿಕೊಂಡಿದ್ದಾರೆ. ಇದರಿಂದ ಅವು ಜನಪ್ರಿಯವಾಗಿವೆ. ಅವರು ತೋಡಿರಾಗದಲ್ಲಿ ರಚಿಸಿರುವ ಹತ್ತು ಕೃತಿಗಳು ಆ ರಾಗದ ಕರುಣಾರಸವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ತೋರಿಸುತ್ತವೆ. ‘ಕಾರ್ತಿಕೇಯ ಗಾಂಗೇಯ ಗೌರೀತನಯ’, ಚಿದಂಬರಂ ಎನ್ ಮನಂ’  ‘ಕಾವಾವಾ’, ‘ಶರವಣಭವ’ ‘ರಾಧಾಮುಖ ಕಮಲ’, ‘ಕಾಣಕ್ಕನ್ ಕೋಟಿವೇಂಡುಂ ಕಾಪಾಲಿಯಿಂ ಬವನಿ’, ‘ಕಾಪಾಲಿ’ ‘ಶಿವಕಾಮ ಸುಂದರಿ’ ‘ಶಿವಗಂಗಾನಗರ ನಿವಾಸಿನಿ’, ‘ಪರಾತ್ಪರ ಪರಮೇಶ್ವರ’, ‘ನಾನೊರು ವಿಳೈಯಾಟ್ ಬೊಮ್ಮಯಾ’,‘ಆಂಡವನೇ ಉನ್ನೆ ನಂಬಿನೇನೆ’ ‘ಪಾಮಾಲೈ’,‘ತಾಮಸಮೇನ್’, ‘ಶ್ರೀವಲ್ಲೀ ದೇವಸೇನಾಪತೇ’,‘ನೀ ಇರಂಗಾ ಎನಿಲ್’,‘ಗುಹಶರವಣ ಭವ’ ಮತ್ತು ‘ಕಂದಾ’ ಈ ಹಾಡುಗಳು ಬಹು ಪ್ರಸಿದ್ಧವಾದವು, ಜನಪ್ರಿಯವಾದವು. ದಕ್ಷಿಣ ಭಾರತದಲ್ಲೆಲ್ಲ ಸಂಗೀತ ಕಛೇರಿಗಳಲ್ಲಿ ಮತ್ತೆ ಮತ್ತೆ ನಾವು ಕೇಳುವ ಹಾಡುಗಳು. ಶಿವನ್‌ರವರು ತಮ್ಮ ರಚನೆಗಳಿಗೆ ‘ರಾಮದಾಸ’  ಎಂಬ ಅಂಕಿತವನ್ನು ಬಳಸಿದರು. ಇದು ಅವರ ಹಳೆಯ ‘ರಾಮಯ್ಯ’ ಎಂಬ ಹೆಸರನ್ನು ಮರೆಯಲಿಲ್ಲವೆಂಬುದಕ್ಕೆ ಗುರುತು.

ಶಿವನ್‌ರವರ ಕೆಲವು ಸಂಸ್ಕೃತ ರಚನೆಗಳು ಅಮೋಘ ವಾಗಿವೆ. ‘ಶ್ರೀನಿವಾಸತವಚರಣಂ’, ‘ಶಿವಗಾಂಗಾನಗರ ‘ನಿವಾಸಿನಿ’ ,‘ಶ್ರೀ ವಲ್ಲೀ ದೇವಸೇನಾ ಪತೇ’,‘ರಾಧಾ ಮುಖ ಕಮಲ’,‘ಧರಾತ್ಮಜಾ’, ‘ದಶರಥಾತ್ಮಜಾ’ ಕೃತಿಗಳು ಹೆಸರುವಾಸಿಯಾಗಿವೆ.

ಅಲ್ಲದೆ ಶಿವನ್‌ರವರು ಕೆಲವು ಪ್ರಸಿದ್ಧ ವಾಗ್ಗೇಯಕಾರರ ಕೃತಿಗಳ ವರ್ಣಮಟ್ಟನ್ನು (ಧಾತು) ಅನುಕರಿಸಿ ಕೆಲವು ರಚನೆಗಳನ್ನು ಮಾಡಿದ್ದಾರೆ ಸಾಹಿತ್ಯ (ಮಾತು) ಮಾತ್ರ ವ್ಯತ್ಯಾಸ.ತ್ಯಾಗರಾಜರ ‘‘ನಿನ್ನೇ ನೆರನಮ್ಮಿ ನಾನುರಾ’’ ಕೃತಿಯ ಮಾದರಿಯ ‘‘ನಿನ್ನರುಳ್ ಇಯಂಬರ್ ಆಗುಮಾ’’,‘‘ರಘುನಾಯಕ ನೀ ಪಾದಯುಗ’’,‘ಕೃತಿಯ ಮಾದರಿಯಲ್ಲಿ ‘‘ಕರುಣೈ ಶೈವಾಯೆಗಜರಾಜ’’, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್‌ರವರ ‘‘ಪರಿದಾನಮಿಚ್ಚಿತೆ’’ ಮಾದರಿಯಲ್ಲಿ ‘‘ನಿದಮುನ್ನೆ ನಂಬಿನೇನ್ ನೀಲಾಯತಾಕ್ಷಿ’ ಮತ್ತು ಪ್ರಸಿದ್ಧ ಜಾವಳಿ ‘‘ಎಂಕಟಿಕುಲಕೆ’’ ಮಾದರಿಯಲ್ಲಿ ‘‘ತೇರಿಲ್ ಏರಿನಾನ್ ವಸುದೇವಬಾಲನ್ ಶ್ರೀ ಗೋಪಾಲನ್’’ ಈ ರಚನೆಗಳನ್ನು ಉದಾಹರಿಸಬಹುದು. ಶಿವನ್‌ರವರು ಉತ್ತಮ ವಾಗ್ಗೇಯಕಾರರು ಮಾತ್ರವೇ ಅಲ್ಲ. ಭಾವಪೂರ್ಣಗಾಯನದಲ್ಲಿ ಅದ್ವಿತೀಯರೆನಿಸಿದ್ದರು.

ಪಾಪನಾಶಂ ಶಿವನ್‌ರವರು ಬಹಳ ಹಿಂದೆ ತಿರುವಾರೂರಿನ ಶ್ರೀವಿಲಾಸ ಸಭೆಯ ‘‘ಯಯಾತಿ’’ ನಾಟಕಕ್ಕೆಸಂಗೀತವನ್ನು ಅಳವಡಿಸಿದ್ದರು. ಹಾಗೆಯೇ ‘‘ಮಾರ್ಕಂಡೇಯ’’  ನಾಟಕವನ್ನು ರಚಿಸಿ, ಸಂಗೀತವನ್ನು ಅದಕ್ಕೂ ಕೊಟ್ಟರು. ಅಲ್ಲದೆ ತಿರುತ್ತರೈ ಪೊಂಡಿಯ ಶ್ರೀಕೃಷ್ಣ ವಿಲಾಸ ಸಭೆಗೆ ‘‘ಉಷಾ’’ ಮತ್ತು ‘‘ಮನೋಹರನ್’’ ಎಂಬ ನಾಟಕಗಳನ್ನು ನಿರ್ದೇಶಿಸಿದರು. ‘‘ಮಾರ್ಕಂಡೇಯ’’  ನಾಟಕದಲ್ಲಿ ಶಿವನ್‌ರವರು ಪಾತ್ರ ವಹಿಸಿದ್ದರು.

ಇತರ ಸಾಧನೆಗಳು

ಹತ್ತು ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದು, ಸಂಶೋಧನೆ ನಡೆಸಿ ಸಂಸ್ಕೃತ ಭಾಷೆಯಲ್ಲಿ ಛಂದೋ ಬದ್ಧವಾದ ನಿಘಂಟನ್ನು ಸಿದ್ಧಮಾಡಿ, ಅದಕ್ಕೆ ‘‘ಸಂಸ್ಕೃತ ಭಾಷಾ ಶಬ್ದ ಸಮುದ್ರ’’ ಎಂದು ಹೆಸರಿಟ್ಟರು. ತಮಿಳು ಮಾಸ ಪತ್ರಿಕೆ ‘‘ವಿವೇಕ ಬೋಧಿನಿ’’ ಗೆ ಅನೇಕ ಲೇಖನಗಳನ್ನು ಬರೆದರು. ಜಯದೇವ ಕವಿಯ ‘‘ಗೀತ ಗೋವಿಂದ’’ ದ ಅಷ್ಟಪದಿಗಳನ್ನು ತಮಿಳಿಗೆ ಭಾಷಾಂತರಿಸಿ, ಅವುಗಳನ್ನು ಕ್ರಮವಾಗಿ ‘‘ವಿವೇಕ ಬೋಧಿನಿ’’ಯಲ್ಲಿ ಪ್ರಕಟಿಸಿದರು. ಇಪ್ಪತ್ನಾಲ್ಕು ಪದ್ಯಗಳನ್ನುಳ್ಳ ‘‘ಶ್ರೀರಾಮ ಚರಿತ್ರಗೀತಂ’’ ಎಂಬ ಕವನ ಸಂಕಲನವು ಶಿವನ್‌ರವರ ಕೊನೆಯ ಅಮೂಲ್ಯವಾದ ರಚನೆ.

ಪ್ರಶಸ್ತಿಗಳ ಸುರಿಮಳೆ

ಪಾಪನಾಶಂ ಶಿವನ್‌ರವರಿಗೆ ಅನೇಕ ಗೌರವಗಳು ಲಭ್ಯವಾದವು. ಅವರ ೬೦ ನೆಯ ವರ್ಷದ ಹುಟ್ಟು ಹಬ್ಬವು ಬಹಳ ವೈಭವದಿಂದ ೧೯೫೧ರ ಜನವರಿ ೨೦ ರಂದು ಮದರಾಸಿನ ತಿರುವಲ್ಲಿಕ್ಕೇಣಿ ದೇಶೀಯ ಬಾಲಿಕಾ ಪಾಠಶಾಲೆಯ ಬಹಿರಂಗ ಸಭಾಂಗಣದಲ್ಲಿ ಆಚರಿಸಲ್ಪಟ್ಟಿತು. ಕಂಚಿ ಕಾಮಕೋಟಿ ಪೀಠದ ಜಗದ್ಗುರುಗಳಾದ ಶ್ರೀ ಶಂಕರಾಚಾರ್ಯರು ‘‘ಶಿವಪುಣ್ಯಗಾನಮಣಿ’’  ಎಂಬ ಬಿರುದನ್ನು ತಮ್ಮ ಆಶೀರ್ವಾದದೊಡನೆ ಕಳುಹಿಸಿದ್ದರು. ನಿಧಿಯೊಂದು ಸಮರ್ಪಿಸಲ್ಪಟ್ಟಿತು. ೧೯೫೦ರಲ್ಲಿ ಮದರಾಸಿನ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯವರು ಶಿವನ್‌ರವರಿಗೆ ‘‘ಸಂಗೀತ ಸಾಹಿತ್ಯ ಶಿಖಾಮಣಿ’’  ಎಂಬ ಬಿರುದನ್ನೂ, ತಮಿಳು ಇಶೈ ಸಂಘದವರು ‘‘ಇಶೈ ಪೇರರಿಗ್ನರ್’’ ಎಂಬ ಬಿರುದನ್ನೂ ಕೊಟ್ಟರು. ೧೯೭೧ ರಲ್ಲಿ ಶಿವನ್ ಅವರು ಮ್ಯೂಸಿಕ್ ಅಕಾಡೆಮಿಯ ಸಂಗೀತೋತ್ಸವದ ಹಾಗೂ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆಗ ಅವರಿಗೆ ‘‘ಸಂಗೀತಕಳಾನಿಧಿ’’  ಎಂಬ ಪ್ರಶಸ್ತಿಯನ್ನು ಕೊಡಲಾಯಿತು. ದೆಹಲಿಯ ಕೇಂದ್ರ ಸಂಗೀತನಾಟಕ ಅಕಾಡೆಮಿಯ ‘‘ಫೆಲೋಷಿಪ್’’ ದೊರೆಯಿತು. ೧೯೭೨ ರಲ್ಲಿ ಭಾರತ ಸರ್ಕಾರವು ಗಣರಾಜ್ಯೋತ್ಸವ ಸಂದರ್ಭದಲ್ಲಿ ‘‘ಪದ್ಮಭೂಷಣ’’  ಪ್ರಶಸ್ತಿಯನ್ನಿತ್ತು ಗೌರವಿಸಿದರು.

ಸಾರ್ಥಕವಾಯಿತು

ಶಿವನ್ ಅವರ ಹಾಡುಗಳನ್ನೂ ಸ್ವಭಾವವನ್ನೂ ಭಾರತದ ಹಿರಿಯ ಸಂಗೀತ ವಿದ್ವಾಂಸರು ಮೆಚ್ಚಿಕೊಂಡಿದ್ದಾರೆ. ಬೆಸೆಂಟ್ ದಿವ್ಯಜ್ಞಾನ ಶಾಲೆಯನ್ನು ಪ್ರಾರಂಭಿಸಿದಾಗ ಅಲ್ಲಿ ಸಂಗೀತ ಶಿಕ್ಷಣ ಕೊಡಲು ಯಾರನ್ನಾದರೂ ಆರಿಸಬೇಕಾಗಿತ್ತು. ಶಾಲೆಯನ್ನು ಆರಂಭಿಸಿದ ರುಕ್ಮಿಣಿದೇವಿ ಮತ್ತು ಇತರರಿಗೆ ಸಂಗೀತವನ್ನು ಕಲಿಯುವವರಿಗೆ ಅದರ ಜೀವಂತಶಕ್ತಿಯ ಅನುಭವ ಆಗಬೇಕು, ಹಾಗೆ ಹೇಳಿಕೊಡುವ ಗುರುಗಳು ಬೇಕೆನ್ನಿಸಿತು. ಅವರು ಪಾಪನಾಶಂ ಶಿವನ್ ಅವರನ್ನು ಪ್ರಾರ್ಥಿಸಿದರು. ಶಿವನ್ ಒಪ್ಪಿಕೊಂಡರು. ಶುದ್ಧವಾದ ಮನಸ್ಸಿನಿಂದ ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡು ಪಾಠ ಹೇಳಿಕೊಟ್ಟರು. ಶಾಲೆ ಪ್ರಾರಂಭಿಸಿದವರಿಗೆ, ‘ನಾವು ಸಂಗೀತ ಪಾಠ ಹೇಳಿಸಿದ್ದು ಸಾರ್ಥಕವಾಯಿತು’ ಎನ್ನಿಸಿತು.

ಕೊನೆಯ ಘಟ್ಟ

ಇನ್ನು ಉಳಿದಿರುವುದು ಪಾಪನಾಶಂ ಶಿವನ್‌ರವರ ಜೀವನ ಸಂಧ್ಯೆಯ ವಿಷಯ. ಶಿವನ್‌ರವರ ಷಷ್ಟ್ಯಬ್ದ ಪೂರ್ತಿ ಸಮಾರಂಭವು ಅಪೂರ್ವ ಸಂಭ್ರಮದಿಂದ ನಡೆಯಿತು. ಅವರು ನಡೆಸಿದ ಬಾಳುವೆಯ ಉನ್ನತ ಧ್ಯೇಯಗಳನ್ನು ಸಾರಿದ ಒಂದು ಭವ್ಯ ಸನ್ನಿವೇಶ. ಶಿವನ್‌ರವರಿಗೆ ೮೦ ವರ್ಷಗಳು ತುಂಬಿದವು. ಅವರ ಎಂಬತ್ತಮೂರನೆಯ ಹುಟ್ಟು ಹಬ್ಬವನ್ನು, ಸಹಸ್ರ ಚಂದ್ರನನ್ನು ನೋಡಿದ ಹಬ್ಬ ಎಂದು ತುಂಬ ವೈಭವದಿಂದ ನಡೆಸಬೇಕು ಎಂದು ಅವರ ಮಗಳು ಮತ್ತು ಅಳಿಯನ ಆಸೆ. ಆದರೆ ಶಿವನ್ ಅವರಿಗೆ ತಾವು ಎಂಬತ್ತಮೂರನೆಯ ಹುಟ್ಟು ಹಬ್ಬದವರೆಗೆ ಬದುಕಿರುವುದಿಲ್ಲ ಎಂದು ಎನ್ನಿಸುತ್ತಿತ್ತು ಎಂದು ಕಾಣುತ್ತದೆ. ದೇಹ ಕುಗ್ಗಿತ್ತು. ಉಬ್ಬಸದ ರೋಗ ಬೇರೆ. ಸಹಸ್ರ ಚಂದ್ರ ದರ್ಶನದ ಹಬ್ಬ ಇಟ್ಟುಕೊಳ್ಳಬೇಡಿ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು. ಇದರಿಂದ ಅವರ ಎಂಬತ್ತೊಂದನೆಯ ಹುಟ್ಟು ಹಬ್ಬವನ್ನೆ ಸಂಭ್ರಮದಿಂದ ನಡೆಸಿದರು. ಹಿರಿಯ ಸಂಗೀತಗಾರರು, ಜನನಾಯಕರು ಅವರ ಸಂಗೀತ ಸೇವೆಯನ್ನು ಕೊಂಡಾಡಿದರು.

೧೯೭೩ರ ಅಕ್ಟೋಬರ್ ಒಂದರಂದು ಪಾಪನಾಶಂ ಶಿವನ್ ತೀರಿಕೊಂಡರು. ಅವರಿಗೆ ಎಂಬತ್ತಮೂರು ವರ್ಷ ಮುಗಿದು ಐದು ದಿನಗಳಾಗಿದ್ದವು.

ಸಾರ್ಥಕ ಬದುಕು

ಬಡತನದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು, ಜೀವನದ ಬಹು ಕಾಲವನ್ನು ಕಳೆದ ರಾಮಯ್ಯ ತೀರಿಕೊಳ್ಳುವ ಹೊತ್ತಿಗೆ ಹಣದ ದೃಷ್ಟಿಯಿಂದ ಸಾಹಾಕಾರರೇನೂ ಆಗಿರಲಿಲ್ಲ, ಆದರೆ ಕೀರ್ತಿಯ ದೃಷ್ಟಿಯಿಂದ, ಜನರ ಅಭಿಮಾನದ ದೃಷ್ಟಿಯಿಂದ ಭಾಗ್ಯವಂತರೇ ಆಗಿದ್ದರು. ‘ರಾಮಯ್ಯ’ ಎನ್ನುವ ಹೆಸರು ಜನಕ್ಕೆ ಮರೆತೇ ಹೋಗಿ ‘ಪಾಪನಾಶಂ ಶಿವನ್’ ಎಂದು ನಾಡಿನಲ್ಲೆಲ್ಲ ಪ್ರಸಿದ್ಧರಾದರು. ಅವರಲ್ಲಿ ಹಣವಿರಲಿಲ್ಲ, ಅಧಿಕಾರ ಇರಲಿಲ್ಲ. ಆದರೆ ಮಂತ್ರಿಗಳು, ಕಲಾವಿದರು, ಸಾಮಾನ್ಯ ಜನ ಎಲ್ಲ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು.

ಇದು ಹೇಗಾಯಿತು?

ದೊಡ್ಡ ಆದರ್ಶಕ್ಕೆ ಮುಡಿಪು

ನಾಲ್ಕೇ ಮಾತುಗಳಲ್ಲಿ ಹೇಳುವುದಾದರೆ ರಾಮಯ್ಯ ಶಿವನ್ ಆದುದರಿಂದ ಆಯಿತು ಎನ್ನಬಹುದು. ಅವರು ಶಿವನಿಗೆ ತಮ್ಮನ್ನು ಅರ್ಪಿಸಿಕೊಂಡರು. ಇನ್ನೂ ಪ್ರಸಿದ್ಧಿಗೆ ಬಾರದ ರಾಮಯ್ಯನ ಭಜನೆ ಕೇಳಲು ನೂರಾರು ಜನ ರಸ್ತೆಯಲ್ಲಿ ನಿಲ್ಲುತ್ತಿದ್ದರು, ಸುಪ್ರಸಿದ್ಧ ಸಂಗೀತ ವಿದ್ವಾಂಸರು ತಮ್ಮ ಕೆಲಸಗಳನ್ನು, ಕಚೇರಿಗಳನ್ನು ಮರೆತು ಕಾಯುತ್ತಿದ್ದರು. ಇದಕ್ಕೆ ಕಾರಣ? ಅವರ ಸಂಗೀತದ ಸೊಗಸು. ಸಂಗೀತದ ಶಾಸ್ತ್ರದ ನಿಯಮಗಳಿಗೆ ಚಾಚೂ ತಪ್ಪದೆ ಹಾಡುವವರು ನೂರಾರು ಜನ ಸಿಕ್ಕುತ್ತಾರೆ. ರಾಮಯ್ಯನ ಸಂಗೀತಕ್ಕೆ ಈ ಶಕ್ತಿ ಬಂದದ್ದು, ಅದು ಜೀವಂತವಾದದ್ದು ಅವರು ಸಂಗೀತ ಶಾಸ್ತ್ರದ ನಿಯಮಗಳನ್ನು ತಪ್ಪದೇ ಹಾಡುತ್ತಿದ್ದರು ಎಂದಲ್ಲ,  ಅದರಲ್ಲಿ ಅವರ ಅಂತಃಕರಣವೇ ನಾದವಾಗಿ ಹೊರ ಹೊಮ್ಮುತ್ತಿತ್ತು ಎಂದು. ‘ನಾನೊರು ವಿಳೈಯಾಟ್ ಬೊಮ್ಮೆಯಾ’ ‘ಶಿವಕಾಮ ಸುಂದರಿ’ ಇಂತಹ ಹಾಡುಗಳನ್ನು ಹಾಡುವಾಗ ಅವರು ಮಗು ತಾಯಿಯನ್ನು ಕಾಣದೆ ಹಂಬಲಿಸುವಂತೆ ಜಗನ್ಮಾತೆಯ ಕೃಪೆಗಾಗಿ ಹಂಬಲಿಸಿದರು; ‘ಆಂಡವನೇ ಉನ್ನೆ ನಂಬಿನೇನೆ’,‘ಶ್ರೀನಿವಾಸ ತವಚರಣಂ’ ಮುಂತಾದ ಹಾಡುಗಳನ್ನು ಹಾಡುವಾಗ ಅವರಿಗೆ ದೇವರು ತಂದೆಯಂತೆ ಕಂಡಿರಬೇಕು. ಮನುಷ್ಯನ ಜನ್ಮ ಸಾರ್ಥಕವಾಗುವುದು ಅವನು ಸುಖ, ಅಧಿಕಾರ, ಹಣ ಇವುಗಳಿಗಾಗಿ ಹಂಬಲಿಸದೆ ದೊಡ್ಡದೊಂದು ಶಕ್ತಿಗೆ ಅಥವಾ ಆದರ್ಶಕ್ಕೆ ತನ್ನನ್ನು ಅರ್ಪಿಸಿಕೊಂಡಾಗ. ಆಗ ಅವನಿಗೂ ತನ್ನ ಬಾಳು ಸಾರ್ಥಕ ಎನ್ನಿಸುತ್ತದೆ. ಅವನ ಬಾಳಿನ ರೀತಿಯಿಂದ ಅವನ ಹತ್ತಿರ ಬಂದವರಿಗೂ ಮನಸ್ಸು ಬೆಳಕಾಗುತ್ತದೆ, ಶಾಂತಿಮಯ ವಾಗುತ್ತದೆ. ಪಾಪನಾಶಂ ಶಿವನ್ ಅವರ ಬಾಳು ಇದಕ್ಕೆ ಉಜ್ವಲ ನಿದರ್ಶನ.