ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಮನುಜ ಕೇಳು ನಿನ್ನ ತೆರದಿ ಧುರದೊಳು |
ಲಲನೆಯಿಂದ ಜೀವಿಸುವರ ಕಾಣೆ ಜಗದೊಳು ||
ಸಲೆ ಸಮರ್ಥನಹುದು ನಿಲ್ಲು ನಿಲ್ಲು ಸಮರದಿ |
ಬಲಿಯ ಕೊಡುವೆ ಭೂತಗಣಕೆ ನಿಮಿಷಮಾತ್ರದಿ ||೨೧೬||

ಬರಿದೆ ಬಿಡೆನೆನುತ್ತ ಖಳನು ತಿರುಹಿ ಗದೆಯನು |
ಭರದೊಳಿಡಲು ಶರದೊಳದನು ಕಡಿದ ಕೃಷ್ಣನು ||
ಸುರಮಹಾದ್ರಿಯಂತೆ ಬರುವ ಸ್ಥೂಲಗಜವನು |
ಶಿರದೊಳೆಚ್ಚ ನೋಯಿಸಲ್ಕೆ ಕಂಡು ನರಕನು ||೨೧೭||

ಫಡ ಫಡೆನುತ ಪರಶು ಶೂಲ ಭಿಂಡಿವಾಳದಿ |
ಹೊಡೆವುರಲು ಸವರುತಿರ್ದ ಹರಿಯು ಖಡುಗದಿ ||
ತಡವಿದೇತಕೆನುವ ಸುರರು ನುತಿಸೆ ನಗುತಲಿ |
ಕಡಿದ ಚಕ್ರದಿಂದ ಖಳನ ಶಿರವ ಭರದಲಿ ||೨೧೮||

ದುರುಳ ಖಳನ ಶಿರವು ಧರೆಗೆ ಭೀಳಮರರು |
ಹರುಷದಿಂದ ಹರಿಯ ಮೇಲೆ ಸುಮವ ಸುರಿದರು ||
ಸೆರೆಯು ಬಿಟ್ಟೆತೆನುತ ಸುರಪ ಮುಖ್ಯದಿವಿಜರು |
ಭರದಿ ಬಂದು ನುತಿಸಿ ಶ್ರೀವರಗೆ ಮಣಿದರು ||೨೧೯||

ಭಾಮಿನಿ

ಜನಪ ಕೇಳಮರೇಂದ್ರ ಮೊದಲಾ |
ದನಿಮಿಷರು ಸಹಿತಬುಜನೇತ್ರನು |
ದನುಜನಗರವ ಪೊಕ್ಕು ತತ್ಪುರಜನರ ಸಂತವಿಸಿ ||
ವಿನಯದಲಿ ಮಂದಿರಕೆ ನಡೆತರ |
ಲನಿತರೊಳು ನಿಜಪೌತ್ರನನು ಭೂ |
ವನಿತೆ ತಂದಡಗೆಡಹಿ ಮಣಿದಳು ಹರಿಪದಾಂಬುಜಕೆ ||೨೨೦||

ಕಂದ

ವಿಲಸಿತದ ಕುಂಡಲಂಗಳಂ |
ಬಲು ಶೋಭಿಪ ವೈಜಯಂತಿಮಾಲೆಯನಾಗಂ ||
ಜಲರುಹನೇತ್ರಂಗೀವುತೆ |
ಸಲಹೆನುತಲಿ ಬೇಡಿಕೊಂಡಳತಿಭಕ್ತಿಯೊಳಂ ||೨೨೧||

ರಾಗ ಘಂಟಾರವ ಆದಿತಾಳ

ಲಾಲಿಸು ಬಿನ್ನಪವ | ಈ ಸೂನುವ | ಪಾಲಿಪುದೆಲೊ ದೇವ ||
ಪೇಳಲಿನ್ನೇನಬಲನ ತಪ್ಪೊಪ್ಪ | ತಾಳಿಕೊಳ್ಳದೆ ಕೊಂದೆಯ || ಸುಪ್ರೀಯ ||೨೨೨||

ನಿನ್ನ ಪುತ್ರನನು ನೀನೆ | ಕೊಂದರೆ ಕಾವ | ರಿನ್ನುಂಟೆ ಮಾಧವನೆ ||
ತನ್ನ ಬುದ್ಧಿಗಳಿಂದ ತಾನೆ ಪೋದನು ಸುಪ್ರ | ಸನ್ನ ನೀ ದಯವ ತೋರಿ | ಹೇ ಶೌರಿ ||೨೨೩||

ಧ್ರುವನನು ಸಲಹಿದಂತೆ | ಪ್ರಹ್ಲಾದನ | ಜವದಿಂದ ಕಾಯಿದಂತೆ ||
ತವ ಪ್ರೀತಿಯಿಂದಲೀ ಕುವರನ ಸಲಹೀಗ | ದಿವಿಜಸನ್ನುತಶೀಲ | ಶ್ರೀಲೋಲ ||೨೨೪||

ಕಂದ

ಇಂತೆಂದಾ ಧರೆಯಂ ಶ್ರೀ |
ಕಾಂತನು ಸಂತವಿಡುತಾಗ ಭಗದತ್ತನನುಂ ||
ಚಿಂತಿಸದಿರು ನೀನೆನುತಂ |
ಕಾಂತೆಯ ನೆಗಹಿ ಮನ್ನಿಸಿನತಿಯದಿಂದಂ ||೨೨೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆಯತಾಂಬಕಿ ಕೇಳು ಮನದಲಿ |
ನೋಯದಿರು ನಿಜಪೌತ್ರನಿವನು ಮ |
ದೀಯ ಭಕ್ತನೆನುತ್ತಲೆಂದನು | ತೋಯಜಾಕ್ಷ ||೨೨೬||

ದೇವರಿಪುವಿನ ರಾಜ್ಯವನು ಮಿಗೆ |
ಭೂವಧೂಸುತಸುತನಿಗಿತ್ತನು |
ತೀವಿದಧಿಕಾನಂದದಿಂದಲಿ | ದೇವನಂದು ||೨೨೭||

ಬಳಿಕ ಸುರಪನ ಕರೆದು ಕೊಟ್ಟನು |
ಲಲಿತ ಮಣಿಶೈಲವನು ವಿನಯದಿ |
ಜಲಧಿರಾಜಂಗಿತ್ತು ಚಕ್ರವ | ನೊಲವಿನಿಂದ ||೨೨೮||

ಸೆರೆಯೊಳಿರುತಿಹ | ದೇವವಧುಗಳ |
ಕರೆಸಿ ಕಳುಹಿಸಿಕೊಟ್ಟನಾಸುರ |
ಪುರಕೆ ವೇಗದಿ ಸರಸಿಜಾಕ್ಷನು | ಸುರಪನೊಡನೆ ||೨೨೯||

ಅಸುರ ನಿಳೆಯೊಳಗಿರ್ದ ನಾನಾ |
ವಸುಮತೀಶರ ವಿಮಲ ಕನ್ಯಾ |
ವಿಸರವನು ದ್ವಾರಕೆಗೆ ಕಳುಹಿದ | ಬಿಸಜನಯನ ||೨೩೦||

ಕ್ಷೀರವಾರ್ಧಿಯೊಳೊಗೆದ ಕರಿಗಳ |
ಚಾರು ಹಯಗಳ ರತ್ನನಿಕರವ |
ಭೂರಿ ಧನವನು ಕಳುಹಿಸಿದನಾ | ಶೌರಿ ಭರದಿ ||೨೩೧||

ಭಾಮಿನಿ

ವಸುಮತೀಪಾಲಕನೆ ನೀ ಕೇ |
ಳಸುರರಿಪು ಭೌಮಜನಿಗತಿ ಸಂ |
ತಸದಿ ದಿಗ್ಗಜ ಸುಪ್ರತೀಕವನಿತ್ತು ವಿನಯದಲಿ ||
ವಸುಧೆಯನು ಸಂತಯಿಸಿ ವಹಿಲದಿ |
ಶಶಿವದನೆ ಸಹಿತಿಂದ್ರನಗರಕೆ |
ಅಸಮ ಬಲಂಸiತ ಪನ್ನಗಾರಿಯನೇರಿ ನಡೆತಂದ ||೨೩೨||

ದ್ವಿಪದಿ

ಕುಂಡಲವನದಿತಿದೇವಿಗೆ ಕೊಡುವೆನೆಂದು |
ಪುಂಡರೀಕಾಕ್ಷಿಯೊಳು ಪೇಳಿ ಮನದಂದು ||೨೩೩||

ಬಂದು ತತ್ಪುರದ ಹೊರಬಾಗಿಲೊಳು ನಿಂದು |
ನಂದಸುತ ಶಂಖವನು ನಾದಿಸಿದನಂದು ||೨೩೪||

ಕೇಳುತಲೆ ಸುರನಾಥ ಕಡುತೋಷದಿಂದ |
ಶ್ರೀಲೋಲನಿದ್ದೆಡೆಗೆ ಸಂಭ್ರಮದಿ ಬಂದ ||೨೩೫||

ಕಲಶಗನ್ನಡಿವಿಡಿದ ಕಾಮಿನಿಯರುಗಳ |
ಲಲಿತ ಶೋಭಾನಂಗಳಲಿ ಸುವಾದ್ಯಗಳ ||೨೩೬||

ರಭಸರಮ್ಯದಲಿ ದುಂದುಭಿಯ ನಾದದಲಿ |
ಅಭಿನಯವ ತೋರುವಪ್ಸರರ ನಾಟ್ಯದಲಿ ||೨೩೭||

ಉಚ್ಚೈಶ್ರವಾಶ್ವದಲಿ ಉರುಶುಭ್ರ ಗಜದಿ |
ಸ್ವಚ್ಛ ಚಾಮರಗಳಲಿ ಸಿತಛತ್ರಯದಿ ||೨೩೮||

ದಿಗಧಿಪರನೊಡಗೊಂಡು ದಿವಿಜೇಂದ್ರ ಮುದದಿ |
ಖಗಗನಮನನಂಘ್ರಿಗಳ ಕಂಡನುತ್ಸಹದಿ ||೨೩೯||

ಕಂದ

ಶ್ರುತಿಗಳ್ ಕಾಣದ ಪಾದವ |
ನತಿಶಯದಲಿ ಕಂಡೆನೆಂದು ವಾಸವ ಮುದದಿಂ ||
ರತಿಪತಿಪಿತಗರ್ಪಿಸುತ ತು |
ಲಿತವಹ ಕಾಣಿಕೆಯ ಮತ್ತಡಿಗೆ ವಂದಿಸಿದಂ ||೨೪೦||

ರಾಗ ಕೇದಾರಗೌಳ ಅಷ್ಟತಾಳ

ಚರಣಕ್ಕೆ ಮಣಿದ ಸುತ್ರಾಮನ ಪಿಡಿದೆತ್ತಿ |
ಕರುಣದಿಂದಲಿ ಕೃಷ್ಣನು ||
ಭರದಿ ಮಾತಲಿ ತಂದ ರಥವನೇರುತ ಭಾಮಾ |
ತರುಣಿ ಸಹಿತ ಬಂದನು ||೨೪೧||

ಪಾಕಶಾಸನ ಮುಖ್ಯ ದಿವಿಜಸಮ್ಮೇಳದಿ |
ಲೋಕೇಶನಯ್ತರಲು ||
ನಾಕನಾರಿಯರಾರತಿಗಳನೆತ್ತಿದರಂದ |
ನೇಕ ಸಂಭ್ರಮದಿಂದಲಿ ||೨೪೨||

ಆನಂದದಿಂದ ತುಂಬುರ ನಾರದಾದ್ಯರು |
ಗಾನವ ಪಾಡುತಲಿ ||
ಶ್ರೀನಾರಿಯರಸನಿಂದ್ರನ ದಿವ್ಯ ಭವನಕ್ಕೆ |
ಸಾನುರಾಗದಿ ಬಂದನು ||೨೪೩||

ಭಾಮಿನಿ

ಭೂರಮಣ ಕೇಳಮರನಾಥನು |
ಭೂರಿಸಂತೋಷದಲಿ ಕೈಗೊಡ |
ಲಾ ರಥವನಿಳಿದಂಬುಜಾಕ್ಷನು ಕಾಮಿನಿಯು ಸಹಿತ ||
ಚಾರುತರ ನವರತ್ನ ಪೀಠವ |
ನೇರಿ ಕುಳ್ಳಿರಲಂದು ತತ್ಪದ |
ಸಾರಸವನರ್ಚಿಸಿದನಿಂದ್ರನು ಭಾವ ಭಕ್ತಿಯಲಿ ||೨೪೪||

ರಾಗ ಶಂಕರಾಭರಣ ಏಕತಾಳ

ಸೋಮಸೂರ್ಯಕೋಟಿಭಾಸ | ಕೋಮಲಾಂಗ ನಿನ್ನ ಪಾದ |
ತಾಮರಸಕೃಪೆಯಿಂ ಸು | ಕ್ಷೇಮವಾದುದು ||
ಸ್ವಾಮಿದ್ರೋಹಿಯಾದ ದುಷ್ಟ | ಭೌಮ ಮುಂತಾದಸುರರು ನಿ |
ರ್ನಾಮರಾದರೆಂದನು ಸು | ತ್ರಾಮತೋಷದಿ ||೨೪೫||

ಕಂದ

ಶಕ್ರಂ ಪೇಳ್ದುದ ಲಾಲಿಸಿ |
ಚಕ್ರಿಯುಮತಿ ನೀತಿವಾಕ್ಯಮಂ ತಾನು ಸಿರ್ದಂ ||
ಅಕ್ರಮದೊಳೆ ನಡೆದುದರಿಂ |
ವಿಕ್ರಮವಳಿದಿಂತು ಕೆಟ್ಟರವರೆನುತಿರ್ದಂ ||೨೪೬||

ರಾಗ ಭೈರವಿ ಝಂಪೆತಾಳ

ಜನಪ ಕೇಳಸುರಾಂತ | ಕನು ಮಹಿಳೆಯೊಡಗೊಂಡು |
ವಿನಯದಿಂ ದದಿತಿಯರ | ಮನೆಗೆ ನಡೆತಂದ ||೨೪೭||

ಬರವ ಕಾಣುತಲೆದ್ದು | ಸುರಜನನಿ ಹರುಷದಿಂ |
ದಿರಲು ಮಣಿದನು ನಗುತ | ಸರಸಿಜಾಂಬಕನು ||೨೪೮||

ಚರಣಕ್ಕೆ ಮಣಿದ ಸಿರಿ | ಯರಸನನು ಪಿಡಿದೆತ್ತಿ |
ನೆರೆ ಪರಸಿ ಪೊಗಳಿದಳು | ಗರುಡವಾಹನನ ||೨೪೯||

ವಚನ

ಆ ಸಮಯದಲ್ಲಿ ಮುರಾಂತಕನು ಸತ್ಯಭಾಮೆಯೊಡನೇನೆಂದನು ಎಂದರೆ –

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮತ್ತಗಜಗಾಮಿನಿಯೆ ಕೇಳ್ ನಿ |
ನ್ನತ್ತೆಯರಿಗೀ ಕುಂಡಲಂಗಳ |
ನಿತ್ತು ಪಾದಕ್ಕೆರಗೆನಲು ಕೇ | ಳುತ್ತಲಾಗ ||೨೫೦||

ತರುಣಿ ಭಾಮಾದೇವಿಯದಿತಿಯ |
ಚರಣದಲಿ ಕುಂಡಲಗಳನು ತಂ |
ದಿರಿಸಿ ನಮಿಸಲು ದಿವಿಜ ಜನನಿಯು | ಹರುಷದಿಂದ ||೨೫೧||

ತಾಯೆ ಬಾರೆನ್ನವ್ವ ಕಮಲದ |
ಳಾಯತಾಕ್ಷನ ಪಟ್ಟದರಸಿಯೆ |
ಬಾಯೆನುತ್ತಪ್ಪಿದಳು ಕಾಶ್ಯಪ | ಜಾಯೆಯಂದು || ||೨೫೨||

ಬಳಿಕ ಮಣಿಕುಂಡಲಗಳನು ಕಿವಿ |
ಗಳಿಗೆ ತೊಡಿಸಲು ಸತ್ಯಭಾಮೆಯ |
ನಲವಿನಿಂ ಪರಸುತ್ತಲೆಂದಳು | ಗೆಲುವಿನಿಂದ ||೨೫೩||

ಜಲಜಮುಖಿ ವೈರೂಪ್ಯ ನಿಜಕಾ |
ದಲನಲಪ್ರಿಯ ಜಾಡ್ಯ ಜರೆ ನರೆ |
ಗಳು ನಿನಗೆ ಸಂಭವಿಸದೆಂದಳು | ಸುಲಲಿತಾಂಗಿ ||೨೫೪||

ವಚನ

ಇಂತು ಉಪಚರಿಸಿ ಮತ್ತೂ ಉಪಚರಿಸಿದಳದೆಂತೆನೆ –

ರಾಗ ಶಂಕರಾಭರಣ ಝಂಪೆತಾಳ

ಅದಿತಿ ಅಯಧಿಕ ಸ್ನೇಹಭಾವದಿಂದ |
ಪದುಮನಾಭನ ಸತಿಯ ಮನ್ನಿಸಿದಳಂದು || ಅದಿತಿ ||ಪ||

ಚಾರುತರ ದಿವ್ಯ ಪುಷ್ಪಗಳ ಮುಡಿಸಿದಳೊಲಿದ |
ನಾರತವು ಕಂದದಿರಲೆಂದೆನುತಲಿ ||
ಕಾರುಣ್ಯದಿಂದ ಗಂಧಾನುಲೇಪಂಗಳಲಿ |
ಸೌರಭ್ಯವಡಗದಿರಲೆನುತ ಪೂಸಿದಳು || ಅದಿತಿ ||೨೫೫||

ಮಾಸದಿರಲೆನುತ ದಿವ್ಯಾಂಬರವನುಡಿಸಿದಳು |
ಭೂಷಣಗಳನಧಿಕ ತರಿಸಿ ತೊಡಿಸಿ ||
ಸೇಸೆಯನು ತಳಿದು ಮಿಗೆ ಪರಸಿದಳು ಪರಮಸಂ |
ತೋಷದಿಂದಲಿ ಜಗದಿ ಬಾಳು ನೀನೆಂದು || ಅದಿತಿ ||೨೫೬||

ಕಂದ

ಅದಿತಿಯು ಸತ್ಯಾಂಗನೆಗಂ |
ಮುದದಿಂದೊಲಿದಿತ್ತು ನಿಖಿಳಸದ್ವಸ್ತುಗಳಂ ||
ಮಧುಸೂದನನಂ ನೋಡುತ |
ಮಧಿಕ ಪ್ರೇಮಾಶ್ರುನೇತ್ರದಿಂದೊಲಿದೆಂದಳ್ ||೨೫೭||

ಭಾಮಿನಿ

ಪನ್ನಗಾಧಿಶಯನ ಸುರನರ |
ಸನ್ನುತನೆ ಕರುಣದಲಿ ಸಲಹಿದೆ |
ಮುನ್ನೆನಗೆ ಮಗನಾಗಿ ಮತ್ತೆಯು ಜಗಕೆ ನೀನೊಲಿದು ||
ಬನ್ನ ಬಡಿಸಿದ ಖಳನ ಮಡುಹಿದೆ |
ನಿನ್ನ ಕೃಪೆಯಿಂದಾದುದೈ ಸಲೆ |
ಜನ್ನ ಗೂಳರ್ಕಳಿಗೆ ನಿರ್ಭಯವೆಂದಳಬುಜಾಕ್ಷಿ ||೨೫೮||

ರಾಗ ಮೋಹನ ಅಷ್ಟತಾಳ

ಇಂತೆಂದ ಜನನಿಯನು | ಬೀಳ್ಕೊಂಡಾಗ |
ಸಂತಯ್ಸಿ ದಿವಿಜರನು |
ಕಾಂತೆ ಭಾಮೆಯು ಸಹಿತ | ಶ್ರೀಕಾಂತನು |
ಸಂತೋಷದಲಿ ನಗುತ || ||೨೫೯||

ಗರುಡನ ಹೆಗಲನೇರಿ | ವಯ್ಯಾರದಿ |
ಹೊರವಂಟ ಪುರವ ಶೌರಿ ||
ಬರಲು ನಂದನವನವ | ಕಾಣುತ ಭಾಮಾ |
ತರುಣಿ ತತ್ಸಂಭ್ರಮವ ||೨೬೦||

ಬೆಳದಿಂಗಳೆಸುವುತಿರೆ | ರಾಜಿಪ ಮಂದಾ |
ನಿಲ ತಾನು ಸುಳಿವುತಿರೆ ||
ಅಳಿವಿಂಡು ಝೇಂಕರಿಸೆ | ಪುಷ್ಪಗಳ ಸಂ |
ಕುಲ ಗಂಧವಾವರಿಸೆ ||೨೬೧||

ಋತುವಾರು ಸಂಭ್ರಮಿಸಿ | ಕೋಗಿಲೆವಿಂಡ |
ನತಿಶಯದೊಳು ಕೂಗಿಸಿ ||
ಸಿತ ಕಂಠಗಳ ನರ್ತಿಸಿ | ಸೋಕಿನ ಕೀರ |
ತತಿಗಳ ಮಾತಾಡಿಸಿ ||೨೬೨||

ಸ್ಫುರಿತ ಪುಷ್ಪಂಗಳಿಂದ | ರಾಜಿಪ ದಿವ್ಯ |
ತರು ಗುಲ್ಮ ಲತೆಗಳಿಂದ ||
ಮೆರವುತಲಿರೆ ಕಂಡಳು | ವಿಸ್ಮಿತಳಾಗಿ |
ಹರಿಗೆ ಬಿನ್ನೈಸಿದಳು ||೨೬೩||

ಕಂದ

ಪಗಲ್ ಬೆಳದಿಂಗಳಂದದಿ |
ಸೊಗಯಿಸಿ ಷಡೃತುಗಳೇಕಕಾಲದೊಳಿಹುದಂ ||
ಜಗದೊಳ್ ಕೆಳಿದುದಿಲ್ಲೆಲೆ |
ನಗಧರ ನೀನೆನಗೆ ಪೇಳು ವನದಾ ಹ್ವಯಮಂ ||೨೬೪||

ರಾಗ ಬೇಗಡೆ ಮಿಶ್ರ ಆದಿತಾಳ

ಭಾವಕಿ ರನ್ನೆ ಕೇಳೀ ದಿವ್ಯವನವು | ದೇವೇಂದ್ರನುದ್ಯಾನವೆಂಬ ನಂದನವು || ಪಲ್ಲವಿ ||
ಸಂತತಮೀ ರೀತಿಯಲಿ ತೋರುತ್ತಿಹುದು |
ಸಂತೋಷಕರಮಾಗಿ ಸಲೆ ರಂಜಿಸುವುದು ||
ಚಿಂತಿತಾರ್ಥಂಗಳನೀವುತ್ತಲಿಹುದು |
ದಂತೀಂದ್ರಯಾನಗೆ ಯೋಗ್ಯವಾಗಿಹುದು || ಭಾವಕಿ ||೨೬೫||

ರಾಗ ಜಂಗಲ್ ಏಕತಾಳ

ಮಂದರಧರ ಸುರವೃಂದವಿನುತ ಗೋ |
ವಿಂದನೆ ಮಾಧವನೆ ||
ಇಂದೆನ ಗತಿ ದಯದಿಂದಲಿ ತೋರಿಸು
ನಂದನವೆನಿಪುದನು ||೨೬೬||

ಪುರುಹೂತನ ಪುರವರವನು ಕಂಡೆನು |
ಕರುಣಿಯೆ ನಿನ್ನಿಂದ ||
ಎರಡು ಘಳಿಗೆ ದೇವರು ಕೃಪೆ ಮಾಳ್ಪುದು |
ಸುರವನಕ್ರೀಡೆಯಲಿ ||೨೬೭||

ಪಕ್ಷಿಯನಿಳಿ ವನಜಾಕ್ಷನೆ ಚಿತ್ತದ |
ಪೇಕ್ಷೆಯ ಸಲಿಸುವಡೆ ||
ಈ ಕ್ಷಣದಲ್ಲಿ ನಿರೀಕ್ಷಿಸಿ ಪೋಗುವ |
ಋಕ್ಷಾತ್ಮಜೆಯರಸ ||೨೬೮||

ಕಂದ

ಲಲನೆಯ ನುಡಿಯಂ ಕೇಳ್ದಾ |
ಜಲಜಾಕ್ಷಂ ತೋಷದಿಂದ ತದ್ವನದೆಡೆ ಗಂ ||
ಘಳಿಲನೆ ಬಂದಹಿವೈರಿಯ |
ನಿಳಿದಾಗಳೆ ಸತ್ಯಭಾಮೆಸಹಿತೊಳ ಪೊಕ್ಕಂ ||೨೬೯||

ರಾಗ ಬಿಲಹರಿ ಏಕತಾಳ

ಕರುಣದಿ ಕಾಹಿನ ಚರರ ನಂಬಿಸಿ ಕೃಷ್ಣ |
ಹರುಷದಿಂದಲಿ ಪೊಕ್ಕನಿಂದ್ರನ ವನವ ||
ತರುಣಿಯ ಕೋಮಲ ಕರವ ಪಿಡಿದು ನಾನಾ |
ತರುಗುಲ್ಮಲತೆಗಳ ತೋರಿದನಾಗ ||೨೭೦||

ನಳಿನಲೋಚನೆ ನೋಡು ನಿಬಿಡವಾಗಿಹ ಚೆಲ್ವ |
ತಳಿರೆಲೆಗಳ ಚಾರುಲತೆಗಳ ಸೊಂಪ ||
ಸುಲಲಿತಸುಮಗಳ ಸೌರಭ್ಯವನು ಬೀರು |
ತೆಲರು ಬೀಸುತಲಿದೆ ತಂಪಿನಿಂದಬಲೆ ||೨೭೧||

ಹಸನಾದ ಪಚ್ಚೆಯಂತೆಸೆವ ಕಾಯಿಗಳನ್ನು |
ನಸುಮಿಡಿಗೊಂಚಲನೀಕ್ಷಿಸು ನೀರೆ ||
ಮಿಸುನಿಯಂದದಿ ಪಣ್ಗಳಿಂದ ಮಹಾಮೃತ |
ರಸವು ಸೂಸುತಲಿದೆ ಬಿಸರುಹಗಂಧಿ ||೨೭೨||

ಪ್ರೌಢಿಯಂದದಿ ಮಾತನಾಡುವ ಗಿಣಿಗಳ |
ಪಾಡುತಲಿಹ ಮರಿ ಕೋಗಿಲೆ ಹಿಂಡ ||
ಜೋಡಾಗಿ ನಟಿಸುವ ನವಿಲ ಲಾವಣ್ಯವ |
ನೋಡೆ ಪನ್ನಗವೇಣಿ ಪಲ್ಲವಪಾಣಿ ||೨೭೩||

ಅರಳಿರ್ದ ಕೈರವ ಕಮಲಗಳಿಂ ವಾರಿ |
ಚರಗಳಿಂದಲಿ ಸ್ವಚ್ಛಜಲದಿಂದಲೆಸೆವ ||
ಸರಸಿಯ ಸಂಭ್ರಮ ನೋಡೆಂದು ತೋರುತ |
ಬರಲು ಕಂಡಲು ಭಾಮೆ ಪಾರಿಜಾತವನು ||೨೭೪||