ರಾಗ ಕೇದಾರಗೌಳ ಝಂಪೆತಾಳ

ಕೇಳು ಸುರಪತಿಯೆ ನೀನು | ಚಿಂತೆಯನು |
ಬೀಳುಗೊಡು ದಾನವರನು ||
ಕಾಲನೂರಿಗೆ ಕಳುಹುವೆ | ನಾಳೆ ಸುರ |
ಜಾಲವನು ಸಂತೈಸುವೆ ||೧೪೨||

ಪುಂಡೆದ್ದ ದೈತ್ಯತತಿಯ | ತಲೆಗಳನು |
ಚೆಂಡಾಡಿ ನಿಜ ಮಾತೆಯ ||
ಕಂಡು ಕಿವಿಗಳಿಗೆ ಮುದದಿ | ತೊಡಿಸುವೆ |
ಕುಂಡಲಂಗಳನು ಜವದಿ ||೧೪೩||

ಅಂಜದಿರು ಮನದೊಳೆನುತಾ | ದನುಜಕುಲ |
ಭಂಜನನು ದಯದೋರುತ ||
ಕುಂಜರವರೂಥಗಾಗ | ಅಭಯಕರ |
ಕಂಜವನು ತೋರ್ದ ಬೇಗ ||೧೪೪||

ಕಂದ

ಇಂತಬುಜಾಂಬಕನೆನಲುರೆ |
ಸಂತಸದೊಳೆ ತತ್ಪದಾಬ್ಜದೊಳಿಂದ್ರಂ |
ಚಿಂತೆಯನುಳಿದತಿ ಧೈರ್ಯವ |
ನಾಂತಾಗಳೆ ನಾಕಲೋಕಮಂ ಮಿಗೆ ಸಾರ್ದಂ ||೧೪೫||

ಭಾಮಿನಿ

ಅರಸ ಕೇಳೈ ದಿವಿಜಪತಿ ನಿಜ |
ಪುರಕೆ ಬಿಜಯಂಗೆಯ್ಯುಲಿತ್ತಲು |
ಪರಮ ಕರುಣಾಳುಗಳ ದೇವನು ವಿನತೆಯಾತ್ಮಜನ ||
ಸ್ಮರಿಸಲಾತನು ಬಂದು ಹರಿಪದ |
ಸರಸಿಜಕೆ ತಲೆವಾಗಿ ನಿಂದಿರೆ |
ಹರುಷದಲಿ ಸತಿಯೊಡನೆ ನುಡಿದನು ದನುಜರಿಪು ನಗುತ ||೧೪೬||

ರಾಗ ಸಾಂಗತ್ಯ ರೂಪಕತಾಳ

ವಾರಿಜಾನನೆ ಕೇಳು ಘೋರ ದಾನವರೆಲ್ಲ |
ಸೂರೆಗೊಂಡರು ತಮ್ಮ ಸಿರಿಯ ||
ದಾರಿ ತೋರುವದೆಂದು ಭೂರಿನೇತ್ರನು ಬಂದು |
ದೂರಿಕೊಂಡುದ ಕೇಳ್ದೆಯಲ್ಲ ||೧೪೭||

ದುರುಳ ಕರ್ಬುರರ ಸಂಹರಿಸಿ ಮತ್ತಮರೇಂದ್ರ |
ಪುರಕೀಗ ಪೋಗಿ ಕುಂಡಲವ ||
ಸುರಮಾತೆಗಿತ್ತು ನಿರ್ಜರರ ಪಾಲನೆಗೆಯ್ದು |
ಬರುವೆ ನಾನತಿ ಬೇಗ ನೀರೆ ||೧೪೮||

ನೊಂದರೆಲ್ಲರು ದೈತ್ಯರಿಂದ ಸುಪರ್ವರು |
ಇಂದು ನಿಲ್ಲದೆ ದುಷ್ಟ ಖಳರ ||
ವೃಂದವ ಗೆಲಿದು ಸಾನಂದದಿ ಬಗೆನೆನೆ |
ಲೆಂದಳು ಸಿಂಧುರಗಮನೆ ||೧೪೯||

ರಾಗ ಕೇದಾರಗೌಳ ಅಷ್ಟತಾಳ

ಸುರಲೋಕವನು ಸೂರೆಗೊಂಡ ದಾನವರ ಸಂ | ಹರಿಸಿ ನಿರ್ಜರರನೆಲ್ಲ ||
ಪರಿಪಾಲನಯ ಮಾಳ್ಪುದೊಳ್ಳಿತು ಪಾವನ | ಚರಿತ ಕೇಳೆನ್ನ ಸೊಲ್ಲ ||೧೫೦||

ಅಮರೇಂದ್ರನುದ್ಯಾನವನದಿ ಶೋಭಿಸುವ ಕಲ್ಪ | ದ್ರುಮವ ತೋರುವೆನೆಂದುದಾ ||
ರಮಣ ಕೇಳಾ ಮಾತು ನಿಜವಾದಡೆನ್ನೊಳು | ಸಮಯವಿದೆಂದಳಾಗ ||೧೫೧||

ಭಾಮಿನಿ

ಭೂತಳಾಧಿಪ ಕೇಳಿ ಕಾಂತೆಯ |
ಮಾತನಾಲಿಸಿ ವನಜನಾಭನು |
ತಾ ತತುಕ್ಷಣ ಪನ್ನಗಾರಿಯನೇರಿ ಸತಿಸಹಿತ ||
ಪ್ರೀತಿಯಲಿ ಪೋಗುತ್ತಲಿರೆ ಪುರು |
ಹೂತವೈರಿಗಳಾಳ್ವ ವರಪ್ರಾ |
ಗ್ಜ್ಯೋತಿಷಾನ್ವಯ ನಗರವೆಸೆಯಲು ಕಂಡು ದೂರದಲಿ ||೧೫೨||

ರಾಗ ಕೇದಾರಗೌಳ ಅಷ್ಟತಾಳ

ಹಿಮಶೈಲದಗ್ರದೊಳ್ ಮೆರೆವ ಮಾರ್ಗವ ಕಂಡು |
ಕಮಲನಾಭನು ವೇಗದಿ ||
ರಮಣಿಯನೀಕ್ಷಿಸಿ ನೀನಂಜಬೇಡೆಂದು |
ಸಮರಕೆ ನಡೆದನಾಗ ||೧೫೩||

ಗಿರಿದುರ್ಗಗಳನೆಲ್ಲ ನಿಜಕೌಮೋದಕಿಯಿಂದ |
ಲೊರಸಿ ಪಟ್ಟಣವಪೊಕ್ಕು ||
ಉರುಶಸ್ತ್ರಚಯವ ಮಾರ್ಗಣದಿಂದ ತರಿದೊಟ್ಟಿ |
ಭರದಿ ಜೀವನ ದುರ್ಗವ ||೧೫೪||

ಛೇದಿಸಿದಾಗ್ನೇಯಬಾಣದಿ ಮುರಪಾಶ |
ಭೇದಿಸಿ ಚಕ್ರದಲಿ ||
ಕಾದಿಹ ವಹ್ನಿಯ ವಾರುಣಾಸ್ತ್ರದಿ ಗೆದ್ದು |
ಕ್ರೋಧದಿ ಕ್ಷುರಮಾಲೆಯ ||೧೫೫||

ಖಡುಗದಿ ಕಡಿದು ಮುಂದಡಿಯಿಟ್ಟು ಒಳಪೊಕ್ಕು |
ಕಡುರೋಷದಿಂ ಶಂಖವ ||
ಬಿಡದೆ ನಾದಿಸಲಾಗ ಕೇಳ್ದು ದಾನವರೆಲ್ಲ |
ನಡುಗಿ ಹಮ್ಮೈಸಿದರು ||೧೫೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮೊರೆವ ಶಂಖಧ್ವನಿಯನಾಲಿಸಿ |
ಮುರನು ಮೈಮುರಿದೆದ್ದು ತಮ್ಮಯ |
ಪುರಕೆ ಬಂದವನಾರು ಕಾಂಬೆನು | ಭರದೊಳವನ ||೧೫೭||

ಕಾಲನಾಗಲಿ ಮೃತ್ಯುವಾಗಲಿ |
ಕಾಲಭೈರವನಾದಡಾಗಲಿ |
ಶೂಲಿಯಾಗಲಿ ನಿಮಿಷಮಾತ್ರಕೆ | ಬೀಳಕಡಿವೆ ||೧೫೮||

ಎನುತ ಕೊನೆಮೀಸೆಗಳ ತಿರುಹುತ |
ಕನಲಿ ಮುಖವಯ್ದರಲಿ ಗರ್ಜಿಸಿ |
ದನುಜಸಂಕುಲವೆರಸಿ ಪೊರಟನು | ಮನೆಯನಾಗ ||೧೫೯||

ಘುಡುಘುಡಿತಡಿಯಿಡಲು ಮುಂದಕೆ |
ಪೊಡವಿ ಕುಸಿದುದು ಸಿಡಿದವದ್ರಿಗಳ್ |
ಕಡಲ್ ಕುದಿದುದು ಸಕಲ ಸುರತತಿ | ನಡುಗಿತಂದು ||೧೬೦||

ಖಂಡೆಯವ ಜಡಿವುತ್ತ ರೌದ್ರದಿ |
ಕೆಂಡಗಳ ಕಂಗಳಲಿ ಸೂಸುತ |
ಖಂಡಪರಶುವಿನಂತೆ ನಡೆದನು | ಕಂಡು ಹರಿಯ ||೧೬೧||

ಕಂದ

ಖತಿಯೊಳ್ ದನುಜಂ ಕಮಲಾ |
ಪತಿಯನು ಕಾಣುತ್ತಲಯ್ದು ಮುಖದೊಳ್ ಭರದಿಂ |
ಕ್ಷಿತಿಯೊಡೆವಂದದಿ ಗರ್ಜಿಸಿ |
ದಿತಿಜರ ಸಂಕುಲಮಧ್ಯದೊಳ್ ನಿಂದಿಂತೆಂದಂ ||೧೬೨||

ಭಾಮಿನಿ

ಆರೆಲವೊ ನೀ ನಮ್ಮ ನಗರಕೆ |
ವಾರಿಜಾನನೆ ಸಹಿತ ಹಕ್ಕಿಯ |
ನೇರಿ ಕೊಂಡಯ್ತಂದ ಕಾರಣವೇನು ಭಾಮಿನಿಯ ||
ಚೋರತನದಲಿ ಬಂದು ದುರ್ಗವ |
ಸೇರಿ ಬದುಕಲು ಬಂದೆಯೋ ಮಿಗೆ |
ವೈರಿಯೋ ನಿಜವಾಗಿ ನುಡಿ ನುಡಿ ಮಾಜಬೇಡೆಂದ ||೧೬೩||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಕೇಳ್ವ ಕಣಿಯ ಲೇಸು | ನಳಿನಜಾಂಡದೊಳಗೆ ದೈತ್ಯ |
ಕುಲ ವಿರೋಧಿಯೆಂಬರೆಲ್ಲ | ಖಳನೆ ನಿನ್ನಯ ||
ಬಲುಹ ಕೇಳಿ ಬಂದೆ ತೋಳ | ಬಲುಹ ತೋರಿಸೆಂದು ದನುಜ |
ಬಲವ ಸವರಿ ನಡೆದ ಮುಂದೆ | ಜಲಜನೇತ್ರನು ||೧೬೪||

ಕಡುಸಮರ್ಥನಹುದು ನಿಲ್ಲು | ನುಡಿಯ ಕೇಳಿ ಹರುಷವಾಯ್ತು |
ಮೃಡನ ಕೊಡೆ ಸೆಣಸಿ ಮದನ | ಮಡಿದ ತೆರದಲಿ ||
ಮಡದಿ ಸಹಿತ ಬಂದು ನಮ್ಮ | ಪಡೆಯ ಕೆಣಕಿ ಕೆಟ್ಟೆಯೆಲವೊ |
ಫಡ ಫಡೆನುತಲಾಗ ಶೂಲ | ವಿಡಿದು ಹಾಯಿದ ||೧೬೫||

ಉರಿಯನುಗುಳುತಾಗ ಬಂದು | ಗರುಡದೇವನೆದೆಗೆ ಶೂಲ |
ವೆರಗುತಿರಲು ಕಂಡು ದನುಜ | ಹರನು ನಗುತಲಿ ||
ಭರದಿ ಬಾಣವೆರಡರಿಂದ | ತರಿದು ಕೆಡಹಿ ಧುರಕೆ ನಿನ್ನ |
ದೂರೆಯ ಕರೆಸು ನೋಳ್ಪೆನೆಂದು | ಮುರಗೆ ಪೇಳ್ದನು ||೧೬೬||

ನೀಲವರ್ಣ ಕೇಳು ನಮ್ಮ | ತೋಳಬಲುಹನೇನ ಕಂಡೆ |
ಕಾಳುಗೆಡೆಯ ಬೇಡ ನಿನ್ನ | ಕಾಲನೂರಿಗೆ ||
ಬೀಳುಗೊಡೆವೆನೊಂದು ನಿಮಿಷ | ತಾಳೆನುತ್ತ ಖಳನು ಖತಿಯ |
ತಾಳಿ ಗದೆಯೊಳಿಟ್ಟನಮರ | ಜಾಲ ಬೆದರಲು ||೧೬೭||

ಭೋರನಿದಿರು ಬರುವ ಗದೆಯ | ಮಾರನಯ್ಯ ಕಂಡು ತನ್ನ |
ಭಾರಿ ಗದೆಯ ನೀಡಿ ಹೊಯ್ದ | ಘೋರ ದೈತ್ಯನ ||
ನೂರು ಶರದೊಳೆಚ್ಚು ಮತ್ತೆ | ತೇರು ಕುದುರೆಗಳನು ಕಡಿದು |
ಭೂರಿ ಬಲವನೆಲ್ಲ ಕಾಲ | ನೂರು ಪೊಗಿಸಿದ ||೧೬೮||

ಕಂದ

ಶರಹತಿಯೊಳಗಾ ನಕ್ತಂ |
ಚರನರೆನಿಮಿಷದಲಿ ಮೂರ್ಛೆಯಿಂದೊರಗುತ್ತಂ ||
ಮುರಿದೆದ್ದೊಯ್ಯನೆ ಲಕ್ಷ್ಮೀ |
ವರನಂ ನೋಡುತ್ತಲೆಂದನತಿ ರೋಷದೊಳಂ ||೧೬೯||

ರಾಗ ಭೈರವಿ ಏಕತಾಳ

ಮಸಿವರ್ಣನೆ ಕೇಳೆಲವೊ | ಸಾ | ಹಸಿಯಹುದೈ ಬಾರೆಲವೊ ||
ಪೆಸರಡಗಿಸುವೆನು ಧುರದಿ | ನಿ | ನನ್ನಸುವನು ಪೀರುವೆ ಕ್ಷಣದಿ ||೧೭೦||

ತರುಣಿಯ ಬಿಟ್ಟೇಗೆನ್ನ | ಪದ | ಕೆರಗಿದರೂ ಬಿಡೆ ನಿನ್ನ ||
ಶಿರವನು ಚೆಂಡಾಡುವೆನು | ನಿ | ರ್ಜರಲೋಕವನಾಳುವೆನು ||೧೭೧||

ಎನುತಲಿ ಭುಜಗಳ ಹೊಯ್ದು | ಮುರ | ಮನದಲಿ ಖತಿಯನು ತಳೆದು ||
ಧನುವಿಗೆ ಶರಗಳ ಪೂಡಿ | ಸ್ಮರ | ಜನಕನ ದೃಷ್ಟಿಸಿ ನೋಡಿ ||೧೭೨||

ಫಡ ಫಡ ತೊಲಗದಿರೆನುತ | ನೆಲ | ನೊಡೆಯಲು ಬಲು ಬೊಬ್ಬಿಡುತ ||
ಬಿಡದೆಚ್ಚನು ಬಾಣದಲಿ | ಜಗ | ದೊಡೆಯುಗೆ ಕಡುತವಕದಲಿ ||೧೭೩||

ಬೆಚ್ಚದೆ ಕೃಷ್ಣನು ಮನದಿ | ಮುರ | ನೆಚ್ಚಂಬುಗಳನು ಭರದಿ ||
ಕೊಚ್ಚಿದ ನಿಜಮಾರ್ಗಣದಿ | ಜಗ | ಕಚ್ಚರಿಯಾಗಲು ಮುದದಿ ||೧೭೪||

ಹಿಂಗದೆ ಶಸ್ತ್ರಾಸ್ತ್ರಗಳು | ಖಳ | ಪುಂಗವನತಿ ರೋಷದೊಳು ||
ನುಂಗುವೆ ನಿಮಿಷದೊಳೆಂದು | ವದ | ನಂಗಳ ತೆರವುತ ಬಂದು || ||೧೭೫||

ಆಕ್ರಮಿಸಲು ಭಯಗೊಂಡು | ವಿಧಿ | ಶಕ್ರಾದಿಗಳಿರೆ ಕಂಡು ||
ಚಕ್ರಿಯ ಖಳಶಿರಗಳನು | ನಿಜ | ಚಕ್ರದಿ ಧರೆಗಿಳುಹಿದನು ||೧೭೬||

ಭಾಮಿನಿ

ಮುರನ ತಲೆಗಳು ಬೀಳೆ ಧರಣಿಗೆ |
ಸುರರು ಸಂತಸವೆತ್ತು ಕರುಣಾ |
ಕರನ ಮುಕುಟದ ಮೇಲೆ ಸುರಿದರು ಪುಷ್ಪವೃಷ್ಟಿಗಳ ||
ಮರುಗಿದರು ಪಿತನಳಿದನೆಂಬುದ |
ನರಿತು ತತ್ಸೂನುಗಳು ಕೃಷ್ಣನ |
ತರುಬಿ ಶಸ್ತ್ರಾಸ್ತ್ರದಲಿ ಹೂಳಿದರಧಿಕ ರೋಷದಲಿ ||೧೭೭||

ರಾಗ ಶಂಕರಾಭರಣ ಮಟ್ಟೆತಾಳ

ಕರಿರಥಾಶ್ವಪತ್ತಿಸಹಿತ | ಧುರಕೆ ಬಂದರು |
ಹರಿಯ ಕಂಡು ಕರೆದರಾಗ | ದುರುಳ ದೈತ್ಯರು ||
ಧುರದೊಳೆಮ್ಮ ಪಿತನ ಗೆಲಿದ | ಗರುವತನವನು |
ಮುರಿವೆವೆಲವೊ ನುಡಿವರಲ್ಲ | ಬರಿಯ ಮಾತನು ||೧೭೮||

ಮಡಿದ ತಂದೆಯೊಡನೆ ನಿನ್ನ | ಕೆಡಹಿ ಕೊಲ್ವೆವು |
ಒಡಲ ಬಗಿದು ಕರುಳ ಮರುಳು | ಗಡಣಕೀವೆವು ||
ಪಿಡಿದು ಸತಿಯ ದೈತ್ಯಪತಿಗೆ | ಕೊಡುವೆವೀಗಲೆ |
ಕಡೆಯ ಕಾಲ ನಿನಗೆ ಬಂತು | ತುಡುಕಿದಾಗಲೆ ||೧೭೯||

ಎನುತ ಬೊಬ್ಬೆಗೆಯ್ದು ಮುರನ | ತನುಜರಾಕ್ಷಣ |
ಕನಲಿ ಸರಳಮಳೆಯ ಕರೆಯೆ | ವನರುಹೇಕ್ಷಣ ||
ದನುಜಬಲವನೆಲ್ಲ ಸವರಿ | ಘನತರೌಷದಿ |
ಬಿನುಗು ಖಳರಿಗೆಂದನಾಗ | ಘನ ವಿನೋದದಿ ||೧೮೦||

ಮರುಳುಗಳಿರ ಕೇಳಿರೆಲವೊ | ಮುರನು ರಣದಲಿ |
ಉರು ಸಮರ್ಥನವನು ಜವನ | ಪುರಕೆ ಭರದಲಿ ||
ಸರಿದುದರಿದು ಬಗುಳುತಿಹಿರಿ | ತರಳತನದಲಿ |
ಪಿರಿದು ಸತ್ತ್ವವಿರಲು ತೋರಿ | ಸರಳ ಮೊನೆಯಲಿ ||೧೮೧||

ಎಂದು ಮಂದಹಾಸದಿಂದ | ನಂದತನಯನು |
ಒಂದು ಶರದೊಳವರನೆಲ್ಲ | ಕೊಂದು ಕೆಡೆದನು ||
ಚಂದವಾದುದೆನುತ ದೇವ | ವೃಂದ ಗಗನದಿ |
ವಂದಿಸುತ್ತ ಸುಮವ ಸುರಿದ | ರಂದು ಹರುಷದಿ ||೧೮೨||

ಕಂದ

ಮುರನಳಿದುದನುಂ ತತ್ಪು |
ತ್ರರ ವಧೆಯನು ಕಂಡು ದೂತರತಿ ಭರದಿಂದಂ ||
ಪರಿತಂದಾಲಯದೆಡೆಗಂ |
ನರಕಾಸುರನೊಡನೆ ಪೇಳಿದರು ಭೀತಿಯೊಳಂ ||೧೮೩||

ರಾಗ ಸಾರಂಗ ಅಷ್ಟತಾಳ

ಕೇಳಯ್ಯ ದೊರೆಯೆ ನೀನು | ಸಂಗರಕೆ ಬೇ | ಗೇಳನುಮಾನವೇನು ||
ಕಾಲಾಗ್ನಿರುದ್ರನ | ವೋಲೊಬ್ಬ ಬಂದೊಂದು |
ಕೋಲಿನಿಂದಲೆ ದೈತ್ಯ | ಜಾಲವ ಕೆಡಹಿದ ||೧೮೪||

ನಾರಿಯ ಕೂಡಿಕೊಂಡು | ರಾಜಿಪ ಪನ್ನ | ಗಾರಿಯನೇರಿಕೊಂಡು ||
ವಾರಿ ಪಾವಕ ಪಾಶ | ಘೋರ ಶಸ್ತ್ರಂಗಳ |
ನೋರಂತೆ ಛೇದಿಸಿ | ಮಾರಾಂತರನು ಗೆಲ್ದ ||೧೮೫||

ಮುರನ ಚಕ್ರದಿ ಕೊಂದನು | ತತ್ಪುತ್ರರ | ಸರಳಿಂದ ಸವರಿದನು ||
ಧುರಕೆ ಬನ್ನಿರೊ ನಿಮ್ಮ | ಧೊರೆಯ ತೋರಿರೊ ಎಂದು |
ಮೊರೆವ ಶಂಖವನೂದಿ | ಕರೆವುತ್ತಲಿಹ ನಮ್ಮ ||೧೮೬||

ರಾಗ ಭೈರವಿ ಝಂಪೆತಾಳ

ಚರರ ನುಡಿಯನು ಕೇಳ್ದು | ನರಕನತಿ ರೋಷದಲಿ |
ಉರಿಯುನುಗುಳುತ ಕರೆದ | ನೆರೆದ ಪಟುಭಟರ ||೧೮೭||

ಬನ್ನಿರೋ ಬಂದವನ | ತನ್ನಿರೋ ಹಿಡಿದು ನೀ |
ವೆನ್ನಡೆಗೆ ಭರದೊಳಾ | ಕನ್ನೆ ಸಹಿತೀಗ ||೧೮೮||

ಶಿವ ತಾನೆ ಬಂದಿರಲಿ | ರವಿತನಯನಾಗಿರಲಿ |
ಜವದಿಂದ ಕೆಡಹುವೆನು | ಭುವಿಗವನ ತಲೆಯ ||೧೮೯||

ಪೊಗಲರಿದು ನಾವಿಪ್ಪ | ನಗರವನು ಮೃತ್ಯುವಿಗೆ |
ಖಗವೇರಿ ಬಂದವನ | ಮೊಗವ ನೋಡುವೆನು ||೧೯೦||

ಎಂದು ವರ ದಿಗ್ಗಜದ | ಕಂಧರವನಡರಿ ನಡೆ |
ತಂದ ಬಲಸಹಿತ ಗೋ | ವಿಂದನಿದ್ದೆಡೆಗೆ ||೧೯೧||

ರಾಗ ಭೈರವಿ ತ್ರಿವುಡೆತಾಳ

ಪೊರಟರಾಗ | ಯುದ್ಧಕ್ಕೆ | ಪೊರಟರಾಗ || ಪಲ್ಲವಿ ||
ತರುಣಿ ಭಾಮಾದೇವಿ ಸಹಿತಲೆ | ತರಣಿಕೋಟಿಪ್ರಕಾಶದಿಂದಲಿ |
ಗರುಡದೇವನ ಮೇಲೆ ರಂಜಿಪ | ಪರಮಪುರುಷನ ಕಂಡು ಬೇಗದಿ |
ನರಕದಾನವನುಗ್ರಕೋಪದೊ | ಳುರಿಯ ಸೂಸುತ ನೇತ್ರಯುಗ್ಮದಿ |
ಮುರನ ಗೆಲಿದಿಹ ಗರ್ವತನವನು | ಮುರಿವೆನೆಂದಡಿಯಿಡುತ ತವಕದಿ || ಪೊರಟಾಗ ||೧೯೨||

ಮುತ್ತಿರೋ ಮುರವೈರಿಯನು ಬೆಂ | ಬತ್ತಿ ಹಿಡಿಯಿರೊ ಬಿಗಿದು ಕಟ್ಟಿರೊ |
ಮತ್ತಗಜಗಳ ಕಾಲ್ಗಳಿಂದಲಿ | ನೆತ್ತಿಯಜಿಗಿಜಿಯಾಗಿ ತುಳಿಸಿರೊ |
ಕತ್ತಿಯವರೊಗ್ಗಾಗಿ ಹಕ್ಕಿಯ | ಬಿತ್ತರದ ಪಕ್ಕಗಳ ಕಡಿಯಿರೊ |
ವೃತ್ತಕುಚೆಯನು ಭರದಿ ತನ್ನಿರೆ | ನುತ್ತ ಖಳಪತಿ ಬೆಸಸೆ ದನುಜರು || ಪೊರಟರಾಗ ||೧೯೩||

ವಾರಣಂಗಳನಡರಿ ಜೋಧರು | ಚಾರುತರ ಹಯಗಳಲಿ ವೀರರು ||
ತೇರುಗಳ ತಿಂಥಿಣಿಯಲುರು ಮದ | ವೇರಿ ಧನುಶರವಿಡಿದು ರಥಿಕರು |
ಮೂರು ಲೋಕವ ತುತ್ತುಗೊಂಬತಿ | ಭೂರಿಬಲಯುತ ನಿಖಿಳ ಸುಭಟರು |
ವೈರಿಯಾವೆಡೆ ತೋರು ತೋರೆಂ | ದಾರುಭಟಿಸುತಲಂದು ಖತಿಯಲಿ || ಪೊರಟಾಗ ||೧೯೪||

ರಾಗ ಮಾರವಿ ಏಕತಾಳ

ಊರ್ಬಿಯ ತನುಜನ | ಪೇರ್ಬಲ ಕೋಪದಿ |
ಪರ್ಬತವನು ಕಿ | ತ್ತಾರ್ಭಟಿಸುತ ವೈ |
ದರ್ಭಿಯ ರಮಣನ | ಪರ್ಬಲು ಗರುಡನು |
ನಿರ್ಭರದಿಂದಲಿ | ಕರ್ಬುರನಿಕರವ | ಕೊಂದನಾಗ ||೧೯೫||

ಕರಿಗಳ ಸುಂಡಿಲ | ತುರಗದ ಕಾಲ್ಗಳ |
ನುರುತರ ಸುಭಟರ | ಶಿರಗಳ ತೇರ್ಗಳ | ವರಚಕ್ರಂಗಳ |
ನರೆನಿಮಿಷದಿ ಮಿಗೆ | ಧರೆಗುರುಳಿಸಿ ಮುಂ |
ಬರಿವುತಲಸುರರ | ಕೆಡೆದನಾಗ ||೧೯೬||

ಹಿಡಿ ಹಿಡಿ ತಿವಿ ತಿವಿ | ಬಡಿ ಬಿಡಬೇಡೆನು |
ತಡಿಯಿಡುತಸುರರ | ಪಡೆಯೆಡಬಲದೊಳು | ಘುಡುಘುಡಿಸುತ ಬೊ |
ಬ್ಬಿಡುತಯ್ತರುತಿರೆ | ಕಡಿಕಡಿದೊಟ್ಟಿದ |
ಪೊಡವಿಯಗಲದಲಿ | ಕೋಪದಿಂದ ||೧೯೭||

ಕಂದ

ತುಂಡದಿ ನಖದಿಂ ದನುಜರ |
ತಂಡಗಳಂ ವಿಹಗನಾಥನರೆನಿಮಿಷದೊಳಂ ||
ಖಂಡಿಸಿ ಕೆಡಹಲ್ಕಸುರಂ |
ಕಂಡುರುತರ ಶಕ್ತಿ ತೆಗೆದು ಕೋಪದೊಳಿಟ್ಟಂ ||೧೯೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕಡುಗಿ ನರಕಾಸುರನು ಗರುಡನ |
ಕಡುಹ ನಿಲಿಸುವೆನೆನುತ ಶಕ್ತಿಯೊ |
ಳಿಡಲು ಬಿದ್ದುದು ಸಿಡಿಲ ರವದಲಿ | ಪೊಡವಿಗಾಗ ||೧೯೯||

ಕಂಡು ದೈತ್ಯನು ಕೆದರಿ ನಿಜಕೋ |
ದಂಡವನು ನೇವರಿಸಿ ಶಕ್ತಿಯ |
ಕೊಂಡು ಬೊಬ್ಬಿಡುತೆಂದ ಲಕ್ಷ್ಮೀ | ಗಂಡನೊಡನೆ ||೨೦೦||

ಬಿನುಗು ಮಾನವ ಕೇಳು ನಮ್ಮೊಳು |
ಸೆಣಸಿ ನೀ ಬದುಕುವೆಯೊ ನಿನ್ನಯ |
ಹಣೆಯ ಬರಹವ ತೊಡೆವೆ ನಿಮಿಷದೊ | ಳೆನುತ ಖಳನು ||೨೦೧||

ಸರಳ ಸುರಿಮಳೆಗರೆಯಲದ ನಿಜ |
ಶರದಿ ಖಂಡಿಸಿ ಕೃಷ್ಣದೇವನು |
ಕಿರಿನಗೆಯ ಸೂಸುತ್ತಲೆಂದನು | ನರಕನೊಡನೆ ||೨೦೨||

ಘನಪರಾಕ್ರಮಿಯಹುದು ನಿನ್ನೊಳು |
ಸೆಣಸಿ ಜೀವಿಸಬಲ್ಲನೇ ಹುಲು |
ಮನುಜರೈ ನಾವೆನುತ ವಿಶಿಖದಿ | ಧನುವ ಕಡಿದ ||೨೦೩||

ಮತ್ತೆ ಗಜವನು ನಡೆಸಿ ದೈತ್ಯನು |
ಚಿತ್ತದಲಿ ಚಿಂತಿಸುತ ವಿಧಿ ತನ |
ಗಿತ್ತ ದಿವ್ಯ ಶತಘ್ನಿಯನು ತಿರು | ಹುತ್ತಲೆಂದ ||೨೦೪||

ಸಂದ ಮುರನಂತೆನ್ನ ನೋಡದಿ |
ರಿಂದು ನಿನಗೆ ಸಮಾಪ್ತಿಕಾಲವು |
ಬಂದುದೆನುತಿದೆ ತಾಗಿದುದು ಗೋ | ವಿಂದನುರದಿ ||೨೦೫||

ಭಾಮಿನಿ

ವರಶತಘ್ನಿಯ ಗಾಯದಲಿ ಸಿರಿ |
ಯರಸ ಮೂರ್ಛಿತನಾಗೆ ಕಾಣುತ |
ಸುರರು ಕೆಟ್ಟೆವೆನುತ್ತ ಚಿಂತಿಸುತಿರಲು ಬೇಗದಲಿ ||
ತರುಣಿ ಭಾಮಾದೇವಿ ಕಾಂತನ |
ಕರದ ಶಾರ್ಙ್ಗವ ಕೊಂಡು ಘನತರ |
ಶರವ ಕಿವಿವರೆಗೆಳೆದು ನುಡಿದಳು ಬಯ್ದು ದಾನವನ ||೨೦೬||

ರಾಗ ದೇಶಿ ಮಟ್ಟೆತಾಳ

ಕುನ್ನಿ ಕೇಳೆಲಾ | ಖೂಳ ನೀನೆಲಾ |
ನಿನ್ನ ಕಡುಹನು | ನಿಲಿಸದುಳಿಯೆನು ||೨೦೭||

ಎನುತಲಸ್ತ್ರದಿ | ಎಚ್ಚು ಗರ್ವದಿ |
ಧನುಜಗೊಪ್ಪುವ | ದಿವ್ಯ ಮುಕುಟವ ||೨೦೮||

ಸುಪ್ರತೀಕವ | ಸುಭಟವರ್ಗವ |
ಕ್ಷಿಪ್ರದಿಂದಲಿ | ಕೆಡಹಿ ಖತಿಯಲಿ ||೨೦೯||

ನೋಡಿ ನರಕನು | ನಗುತಲೆಂದನು |
ಖೋಡಿಯಿಲ್ಲದೆ | ಕಡುಹ ತೋರಿದೆ ||೨೧೦||

ಅಮಿತ ಬಲದೊಳು | ಅಬಲೆ ನಿನ್ನೊಳು |
ಸಮರ ಸಲ್ಲದು | ಸಹಜ ಮಾತಿದು ||೨೧೧||

ಬರಿದೆ ಕಾದಲು | ಬೇಡವೆನುತಲೆ |
ಸೆರಗ ಹಿಡಿಯಲು | ಸತಿಯು ಭರದೊಳು ||೨೧೨||

ಕೊಡಹಿ ಸೆರಗನು | ಖಳನ ಶಿರವನು |
ದೃಢದಿ ಗದೆಯೊಳು | ಹೊಡೆದು ನಿಂದಳು ||೨೧೩||

ಭಾಮಿನಿ

ಗದೆಯ ಗಾಯದಿ ನೊಂದು ಭರದಲಿ |
ತ್ರಿದಶರಿಪು ಮೂರ್ಛೆಯಲಿ ಬಿದ್ದಿರೆ |
ಪದುಮದಳಲೋಚನನು ಮೈಮುರಿದೆದ್ದು ಭಾಮಿನಿಯ ||
ವದನ ಕಮಲವ ನೋಡಿ ಕರುಣದಿ |
ಸುದತಿ ನಿನಗೆಣೆಗಾಣೆನೆನುತತಿ |
ಮುದದಿ ಮುದ್ದಿಸೆ ಕರೆದರಭ್ರದಿ ಸರರು ಪೂಮಳೆಯ ||೨೧೪||

ಕಂದ

ದನುಜಂ ಮೈಮುರಿದೆದ್ದಾ |
ವನರುಸಂಜಾತನಯ್ಯನಂ ನೋಡುತ್ತಂ ||
ಘನಮದಕರಿಯಂ ನಡೆಸುತ |
ಲನುವಾದಂ ರೋಷದಿಂದ ಧುರಕಾ ಕ್ಷಣದೊಳ್ ||೨೧೫||