ಭಾಮಿನಿ

ನೀರೆ ಕಂಡಳು ಮುಂದೆ ರಾಜಿಪ |
ಭೂರಿನೇತ್ರನ ವಿಭವಗಳಿಗಾ |
ಧಾರವೆನಿಸುವ ಕಲ್ಪಪಾದಪ ಪಾರಿಜಾತವನು ||
ತೋರಿದಳು ತಾ ವೃಕ್ಷವನು ಮಿಗೆ |
ವಾರಿಜಾಕ್ಷನೆ ಮರವಿದಾವುದು |
ಮಾರುಗೊಳುತಿದೆ ಮನವನೆಂದಳುಕಾಂತೆ ಕಳವಳಿಸಿ ||೨೭೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇನೆಯ ನೋಡೀ ಮರನ ಬೇರ್ಗಳು |
ಕನಕಮಯ ತನ್ಮಧ್ಯವೀ ದ್ರುಮ |
ಕೊನೆಗಳುರು ಮರಕತದ ಮಯವೆಲೆ | ವನಜನಾಭ ||೨೭೬||

ಚಲಿಸುವೆಲೆಗಳು ನೀಲಮಯ ಪ್ರ |
ಜ್ವಲಿಪ ಸುಮಮಾಣಿಕ್ಯಮಯ ಸ |
ಲ್ಲಲಿತ ಕೆಂಜದೆಯೆಸಳು ವಜ್ರೋ | ಪಲವು ನೋಡೈ ||೨೭೭||

ಸ್ಥೂಲಮುಕ್ತಾವಳಿಯ ಮಯಸುಫ |
ಲಾಳಿಗಳು ವೈಢೂರ್ಯಮಯವು ವಿ |
ಶಾಲವಹುದಾಶ್ಚರ್ಯಮಯವಿದು | ಲೋಲನೇತ್ರ ||೨೭೮||

ಇಂತೆಸೆವ ವೃಕ್ಷವನರಿಯೆನಿ |
ನ್ನೆಂತು ಧನ್ಯರೊನಾಕಿಗಳ ಸೀ |
ಮಂತನಿಯರೆನಗಿದರ ಪೆಸರನು | ಕಾಂತ ಪೇಳೈ ||೨೭೯||

ಆವ ಜನ್ಮಾಂತರದ ಸುಕೃತವೊ |
ದೇವತರುವನು ಕಂಡೆನೆನ್ನಯ |
ಜೀವವಿದರಲಿ ನೆಲಸಿತೆಂದಳು | ಭಾವೆಯಂದು ||೨೮೦||

ರಾಗ ಸಾರಂಗ ಅಷ್ಟತಾಳ

ಭಾವಕಿ ಭ್ರಮರಾಳಕಿ | ಪೊಂಚೇಲಕಿ | ಭಾವಕಿ ಭ್ರಮರಾಳಕಿ || ಪಲ್ಲವಿ ||

ಕ್ಷೀರಾಬ್ಧಿಮಥನದಲಿ | ಸಂಭವಿಸಿತೀ | ಭೂರುಹ ಪೂರ್ವದಲ್ಲಿ ||
ನಾರಿ ನಾ ನಿನಗಂದು | ತೋರುವೆನೆಂದೆಂದ | ಚಾರುಪುಷ್ಟಗಳುಳ್ಳ |
ಪಾರಿಜಾತವು ಕಾಣೆ || ಭಾವಕಿ ||೨೮೧||

ಮುನಿಯೊಂದು ಕುಸುಮವನು | ತಂದೀಯೆ ರು | ಗ್ಮಿಣಿಗಾದ ಭಾಗ್ಯವೇನು ||
ಘನವಾದ ವೃಕ್ಷದ | ರ್ಶನವಾದುದೆಲೆ ನಾರಿ |
ನಿನಗಿನ್ನು ಸರಿ ಯಾರೆ | ವನಧಿಗಂಭೀರೆ || ಭಾವಕಿ ||೨೮೨||

ತಡವನು ಮಾಡದೀಗ | ಸುಮಗಳನ್ನು | ಮುಡಿ ನೀರೆ ಪೋಪ ಬೇಗ ||
ಪೊಡವಿಯೊಳಿದೆ ಕಾರ್ಯ | ನಡಿವವಸರವೆನ್ನ |
ಮಡದಿ ರನ್ನಳೆ ಬಾರೆ | ಕಡೆಗೆ ನಾನದ ಪೇಳ್ವೆ || ಭಾವಕಿ ||೨೮೩||

ರಾಗ ಸಾಂಗತ್ಯ ರೂಪಕತಾಳ

ಸುರವೃಂದನುತ ನಿನ್ನ ಕರುಣದಿ ಕಂಡೆನು |
ಸುರಲೋಕವನದ ಈ ದ್ರುಮವ ||
ಕರುಣವುಳ್ಳಡೆ ಲಾಲಿಸಿನ್ನೊಂದು ಬಿನ್ನಹ |
ಕರುಣಾಸಾಗರನೆ ಪ್ರೇಮದಲಿ ||೨೮೪||

ಕಂಡೆನ್ನ ಮನವಿಲ್ಲಿ ನೆಲಸಿಕೊಂಡಿದೆ ದೇವ |
ಪುಂಡರೀಕಾಕ್ಷನೆ ಸತತ ||
ಕಂಡು ಜೀವಿಸುವಂತೆ ಕರುಣಿಸೀ ವೃಕ್ಷವ |
ಕೊಂಡು ಪೋಗುವ ನಮ್ಮ ಪುರಕೆ ||೨೮೫||

ರಾಗ ಶಂಕರಾಭರಣ ಅಷ್ಟತಾಳ

ಬೇಡವೆ | ವೃಕ್ಷದ ತಳ್ಳಿ | ಬೇಡವೆ || ಪಲ್ಲವಿ ||

ಬೇಡವೆ ನೀನೆನ್ನ | ಕೂಡೆ ಸಲ್ಲದ ಮಾತ |
ನಾಡುವದೊಳ್ಳಿತೆ | ಪ್ರೌಢೆ ಕೇಳಿ ಬುದ್ಧಿ || ಬೇಡವೆ || ಅ ||
ಪರರ ವಸ್ತುವಿನಲ್ಲಿ ಮನವ | ಮಾಡೆ |
ತರವಲ್ಲ ಮುಡಿ ಪುಷ್ಪಚಯವ | ಕಲ್ಪ |
ತರುವ ಕದ್ದೊಯ್ದು ಜೀವಿಸುವ | ದಾವ |
ಪರಿಯೊ ನಾನರಿಯೆ ನಿ | ರ್ಜರರು ಕಂಡರೆ ಸುಮ್ಮ |
ನಿರರೀಗಲೆನಗೆ ತ | ಸ್ಕರವನ್ನು ಬೋಧಿಸ || ಬೇಡವೆ ||೨೮೬||

ಕಾವಲ ಚರರು ಸೈರಿಸರು | ನಮ್ಮ |
ಜೀವಿಸಿ ಪೋಗಲು ಬಿಡರು | ಬಂದು |
ದೇವರ್ಕಳೆಲ್ಲ ಮುತ್ತುವರು | ಮುಂದೆ |
ಕಾವವರುಂಟೆ ಇ | ದಾವ ನೀತಿಯೆ ಸತ್ಯ |
ಭಾವೆ ನಿನ್ನಿಂದ ಸಂ | ಭಾವಿಪುದಪ ಕೀರ್ತಿ || ಬೇಡವೆ ||೨೮೭||

ಕಂದ

ಆಳ್ದನ ಕಪಟದ ನುಡಿಯಂ |
ಕೇಳ್ದಾಗಲೆ ಸತ್ಯಭಾಮೆ ಘನಚಿಂತೆಯುಮಂ ||
ತಾಳ್ದುರುತರ ದುಃಖದೊಳಂ |
ಪೇಳ್ದಳ್ ಕುಜಕಾಂಕ್ಷೆಯಿಂದ ನಿಜಪತಿಯೊಡನಂ ||೨೮೮||

ರಾಗ ಕಾಂಭೋಜಿ ಝಂಪೆತಾಳ

ವಾರಿಜದಳಾಕ್ಷ ನೀನಾರೊಡನೆ ಭೀತಿಯನು |
ತೋರಿ ನುಡಿದಪೆ ದೇವ ನಿನ್ನ |
ಚಾರುತರ ಮಹಿಮೆಗಳ ನಾನರಿಯೆನೆಲೆ ಜಗ |
ತ್ಕಾರಣನೆ ಕೇಳು ಬಿನ್ನಪವ ||೨೮೯||

ಸುರಪನಾಲಯಕೆ ಪೋಗಿರಲಾತನರಸಿಯುಪ |
ಚರಿಸದೆನ್ನನು ನುಡಿಸದಿಂದು ||
ಮರೆತಳವಳೀ ಕಲ್ಪತರುವಿನಾಶ್ರಯದಿಂದ |
ನರರೆಂದು ನೆರೆ ಗರ್ವತನದಿ ||೨೯೦||

ಈ ತರುವ ಕೊಂಡೊಯ್ದರಾ ತರುಣಿಯೈಶ್ವರ್ಯ |
ಬೀತುಪೋಪುದು ಸಿದ್ಧವೈಸೆ ||
ಭೂತಳದೊಳನುಮಪಖ್ಯಾತ ನಾನಹೆಯೆನ್ನ |
ಮಾತ ಮನ್ನಿಪುದೆಂದಳಾಗ ||೨೯೧||

ರಾಗ ಭೈರವಿ ಝಂಪೆತಾಳ

ಇಂತೆನಲು ಕೇಳಿ ದನು | ಜಾಂತಕನು ನಸುನಗುತ |
ಕಾಂತೆಯನು ಮನ್ನಿಸಿದ | ಸಂತಸದೊಳಾಗ ||೨೯೨||

ಮುಂಜೆರಗನಳವಡಿಸಿ | ರಂಜಿಸುವ ತರುವ ಕರ |
ಕಂಜದಲಿ ಕಿತ್ತನು ಧ | ನಂಜಯನ ಸಖನು ||೨೯೩||

ಗರುಡ ನುರುಕಂಧರದೊ | ಳಿರಿಸಿ ಸತಿಸಹಿತೇರಿ |
ಪೊರಟನುಪವನದಿಂದ | ಸರಿಸಿ ಜಾಂಬಕನು ||೩೯೪||

ವನಪಾಲಕರು ಕಂಡು | ಕನಲಿ ತಡೆದರು ಕಳ್ಳ |
ತನವೆ ನಮ್ಮೊಡನೆ ನಿ | ಲ್ಲೆನುತ ಗರ್ಜಿಸುತ ||೨೯೫||

ಮತ್ತೆ ಕೆಲಬರು ಭೀತಿ | ವೆತ್ತುಬಂದಾಳ್ದನಿಗೆ |
ಬಿತ್ತರಿಸಿದರು ನಡೆದ | ವೃತ್ತಾಂತಗಳನು ||೨೯೬||

ರಾಗ ಮುಖಾರಿ ಏಕತಾಳ

ಸುರನಾಥ ಕೇಳಯ್ಯ ಬಿನ್ನಪವ | ಸರಸಿಜಾಕ್ಷನು ಬಂದು
ತರುವ ಕೊಂಡೊಯ್ವನೀಗ ದೇವ || ಸುರ || ಪಲ್ಲವಿ ||

ನಾರಿಸಹಿತ ಬಂದು ವನವ | ನೋಡುವೆನೆಂದು | ಪಾರಿಜಾತದ ಭೂರುಹವ ||
ನಾರಿ ಸುದತಿಗಿದ | ತೋರಿ ತವಕದೊಳು |
ಬೇರುವೆರಸಿ ಕಿ | ತ್ತೇರಿಸಿ ಗರುಡನ |
ದ್ವಾರದಿ ತಡೆಯೆ ನಿ | ವಾರಿಸುತೆಮ್ಮನು |
ಮೀರಿ ನಡೆದನು ವಿ | ಚಾರಿಸು ಬೇಗ || ಸುರ ||೨೯೭||

ಕಂದ

ಚರರೆಂದುದನಾಲಿಸಿ ನಿ |
ರ್ಜರನಾಥಂ ಬೆರಗುವಟ್ಟು ಕಾಂತೆಯ ಮೊಗಮಂ ||
ಪರಿಕಿಸಲಾ ಕ್ಷಣ ತಿಳಿದದ |
ರಿರಮಂ ಶಚಿ ಕಾಂತನೊಡನೆ ದುಗುಡದೊಳೆಂದಳ್ ||೨೯೮||

ರಾಗ ಪೂರ್ವಿ ಅಷ್ಟತಾಳ
ಪರರು ಬಂದು ವನವ ಪೊಕ್ಕು ತರುವನೊಯ್ವದು | ಕೇಳು |
ತರುವೆ ಪ್ರಾಣಕಾಂತ ಸುಮ್ಮನಿರಲು ಸಲ್ಲದು ||
ಸುರರ ಸರ್ವಭಿಷ್ಟವಾದ ಚೆಲ್ವತರುವಿದು | ನಾವು |
ಬರಿದೆ ಜೀವಿಸುವುದು ಹ್ಯಾಗೆ ನೀತಿಯಲ್ಲಿದು ||೨೯೯||

ಕುಂಡಲಗಳ ತಾನೆ ಕೊಡುವೆನೆಂಬ ನೆವದೊಳು | ಬಂದು |
ಕಂಡು ನಮ್ಮ ಸತ್ಕರವ ವಹಿಸಿ ಭರದೊಳು ||
ಪುಂಡರಂತೆ ಕಳ್ಳತನದಿ ದಿವ್ಯವಸ್ತುವ | ಈಗ |
ಕೊಂಡುಪೋಗಬಹುದೆ ವಿಶ್ವಪಾಲನಾದವ ||೩೦೦||

ನಾಕಿಗಳಿಗೆ ಯೋಗ್ಯವಾದ ವಸ್ತುವ ನಾರಿ | ತಾನು |
ಬೇಕೆಂದರೆ ಬುದ್ಧಿಯನ್ನು ಪೇಳದೆ ಶೌರಿ ||
ಈ ಕಲ್ಪತರುವನಿಂದು ನಿಮ್ಮ ಕೇಳದೆ | ಮರ್ತ್ಯ |
ಲೋಕದವರಿಗೀಯಬಹುದೆ ನೀತಿಯಲ್ಲದೆ ||೩೦೧||

ತರಿಸದುಳಿಯದಪಕೀರ್ತಿಯು ಬಾರದಿರ್ಪುದೆ | ಕಾಲ |
ಹರಣ ಮಾಡಲೆಮಗೆ ವಸ್ತು ಸಾಧ್ಯವಾಹುದೆ ||
ಅರಸ ನೀನು ತಿಳಿಯದವನೆ ಪೇಳ್ವುದೇನದೆ | ಎಂದು |
ಸರಸಿಜಾಕ್ಷಿ ನುಡಿದಳಾಗ ಮೇಲನರಿಯದೆ ||೩೦೨||

ಭಾಮಿನಿ

ಕೇಳುತಲೆ ಸುರನಾಥನೆದ್ದನು |
ಕಾಲಭೈರವನಂತೆ ನಿರ್ಜರ |
ಜಾಲ ಬೆದರಲು ಬಿಂಕದಲಿ ಗದ್ದುಗೆಯನೊಡಹೊಯ್ದು ||
ನೀಲಕಾಯನ ಸಂಗರಕೆ ದಿ |
ಕ್ಪಾಲಕರ ಬರಹೇಳು ಹೇಳೆನು |
ತಾಲಯವ ಹೊರವಂಟನಧಿಕ ಕ್ರೋಧಮುಖನಾಗಿ ||೩೦೩||

ರಾಗ ಭೈರವಿ ಏಕತಾಳ

ಬಂದರೆಲ್ಲರು | ರೋಷದಿ ನಡೆ | ತಂದರೆಲ್ಲರು || ಪಲ್ಲವಿ ||

ವಾರಣೇಂದ್ರನ ಭರದೊಳಿಂದ್ರ | ನೇರಿ ಕೃಷ್ಣನ ||
ತೋರೆನುತ್ತ ಬರಲು ಕೂಡೆ | ಶೂರರೆಲ್ಲ ನಡೆದರು ||
ನೈಋತಾಗ್ನಿ ವಾಯು ಯಮ ಕು | ಬೇರ ಶೂಲಿ ವರುಣರು ||
ಭೂರಿ ಸೈನ್ಯವಾರಿಧಿಯು | ಭೋರನಿದಿರು ನಿಂದರು |
ಪಾರಿಜಾತಾಪಹಾರನ | ಸಾರಿ ಮುತ್ತಿಕೊಂಡರು || ಬಂದರೆಲ್ಲರು ||೩೦೪||

ಕಂದ

ಸುತ್ತಲು ಮುತ್ತಿದ ದಿವಿಜರ |
ಮೊತ್ತಗಳಂ ಕಂಡು ಮಾರನಯ್ಯನು ನಗುತಂ ||
ಚಿತ್ತದ ಬಗೆಯನು ತಿಳಿವೆನೆ |
ನುತ್ತಂ ಮಿಗೆ ಸತ್ಯಭಾಮೆಯೊಡನಿಂತೆಂದಂ ||೩೦೫||

ರಾಗ ಕಾಪಿ ಏಕತಾಳ

ನಾರಿಮುಂದೇನು ದಾರಿ | ಕೆಟ್ಟಿತು ಕಾರ್ಯ |
ನಾರಿ ಮುಂದೇನು ದಾರಿ ||ಪ||

ಮೊದಲೆ ನಾ ಪೇಳಲಿಲ್ಲವೆ | ಬಂದಿದೆ ನೋಡು |
ತ್ರಿದಶದ ಸೇನೆ ಭಾವೆ ||
ಕದನವೆನ್ನಲಿ ತೀರ | ದಿದಕೇನ ಕಂಡೆ ನೀ |
ಹದನವನಂಬುಜ | ವದನೆ ಕುಂದರದನೆ ನಾರಿ ||೩೦೬||

ರಾಗ ಪಂಚಾಗತಿ ಮಟ್ಟೆತಾಳ

ತರುಣಿಗಿಂತು ಹರಿಯು ಪೇಳು | ತಿರಲು ಮುತ್ತಿಕೊಂಡರಾಗ |
ಸುರರುರೋಷವೆತ್ತು ಸಪ್ತ | ಶರಧಿಯಂದದಿ ||
ಕರೆದರೆಲವೊ ಕೃಷ್ಣ ನಿನಗೆ | ತರವೆ ಚೋರವೃತ್ತಿ ಕಲ್ಪ |
ತರುವನಿರಿಸಿ ನಿಲ್ಲೆನುತ್ತ | ಜರೆದು ನುಡಿದರು ||೩೦೭||

ಘನ ತುರಂಗನಾಳ್ಗಳೆಂದ | ಬಿನುಗು ನುಡಿಯ ಕೇಳುತಬಲೆ |
ಮನದಿ ಬೆದರದಸುರಹರಗೆ | ಮಣಿದು ಪೇಳ್ದಳು ||
ವನಜನಾಭ ನೋಡು ನಿನ್ನ | ವನಿತೆಯ ಸಹಸಗಳನು |
ಎನುತಲೆದ್ದು ದಿವ್ಯಶಾರ್ಙ್ಗ | ಧನುವ ಗೊಂಡಳು ||೩೦೮||

ಬಿಸರುಹಾಕ್ಷಿ ನಗುತಲೊಂದು | ವಿಶಿಖದಿಂದಲೆಸೆಯಲಮರ |
ವಿಸರ ಬೆದರೆ ಕಂಡು ಭರದಿ | ತಿಸುಳಿಗೆಳೆಯನು ||
ಮಿಸುನಿ ರಥವನೇರಿ ರೌದ್ರ | ರಸದಿ ಭುಜವನೊದಿರುಸುತ್ತ |
ಮುಸುಡೊಳುರಿಯ ಕೆದರಿ ಮೂದ | ಲಿಸಿದ ನಾ ಕ್ಷಣ ||೩೦೯||

ಬಾಲೆ ನಿನಗೆ ಯುದ್ಧವೇಕೆ | ಕೋಲ ಬಿಸುಡು ಬಿಸುಡು ನಿನ್ನ |
ಆಳಿದವಗೆ ಕೊಡು ಕೊಡೆಂದು | ಖೂಳತನದಲಿ ||
ಆಳು ಮಾತ್ರವೆನಿಪ ಧನುವ | ಮೇಳವಿಸಿ ಮಹಾಸ್ತ್ರದಿಂದ |
ಬೀಳೆನುತ್ತಲೆಸೆಯಲಸ್ತ್ರ | ಜಾಲ ಕವಿದುದು ||೩೧೦||

ಆ ಧನೇಶನಸ್ತ್ರಗಳನು | ಛೇದಗೆಯ್ದು ನುಡಿದಳಾಗ |
ವಾದಗುಟ್ಟಲೇಕೆ ಬರಿದೆ | ಕಾದು ಸಮರದಿ ||
ಪಾದಪವನು ಕೊಡೆನು ಬಾಲೆ | ಯಾದಡೇನು ನೋಡೆನುತ್ತ |
ಕ್ರೋಧದಿಂದ ಧನುವ ಕೆಡೆದ | ಳೈದು ಶರದಲಿ ||೩೧೧||

ಕರದ ಬಿಲ್ಲು ಮುರಿಯೆ ಧನದ | ಕೆರಳಿ ಮುದ್ಗರವನು ಪಿಡಿದು |
ತರುಣಿ ಕೇಳು ನಿನ್ನ ಹಣೆಯ | ಬರಹವಿದಿರಲಿ ||
ಸರಿವೆನೆನುತಲಿಡಲು ಕಂಡು | ಸರಸಿಜಾಕ್ಷಿ ನಗುತ ವಾಮ |
ಕರದಿ ಪಿಡಿಯಲದನು ತನ್ನ | ಪುರಕೆ ಗಮಿಸಿದ ||೩೧೨||

ಭಾಮಿನಿ

ಧನದ ನಿಜಪುರಿಗಯ್ದಲಿತ್ತಲು |
ವನಜದಳಲೋಚನನು ಭಾಮಾ |
ವನಿತೆಯನು ಬಿಗಿದಪ್ಪಿ ಪೊಗಳುತ್ತಿರಲು ಜಲಧಿಪನು ||
ಘನಮದೋದ್ರೇಕದಲಿ ನರವಾ |
ಹನನ ವಾಸಿಯು ತನ್ನದೆನುತಲಿ |
ದನುಜಹರನಭಿಮುಖಕೆ ನಡೆದನು ಬಹಳ ಬಲಸಹಿತ ||೩೧೩||

ರಾಗ ದೇಶಿ ಮಟ್ಟೆತಾಳ

ಬಂದು ವರುಣನು | ನಿಂದು ಹರಿಯನು ||
ನಂದತನಯ ಪೋಗಬೇಡ | ವೆಂದು ತಡೆದನು ||೩೧೪||

ಕೇಳಿ ಗರುಡನು | ತಾಳಿ ಖತಿಯನು ||
ಖೂಳ ನಿಲ್ಲೆನುತ್ತಲವನ | ಮೇಲೆ ಬಿದ್ದನು ||೩೧೫||

ರೋಷದಿಂದಲಿ | ಪಾಶಿ ಭರದಲ್ಲಿ ||
ಪಾಶವನ್ನು ಬೀಸೆ ಸೆಳೆದ | ನಾ ಸುಪರ್ಣನು ||೩೧೬||

ಜಡಧಿನಾಥನು | ಕಡುಗಿ ಹರಿಯನು ||
ಹೊಡೆದು ಭುಜವ ತಡೆದು ನಿಲಲು | ಬಿಡದೆ ಗರುಡನು ||೩೧೭||

ಕೆರಳಿ ನಖದೊಳು | ಉರವ ತಿವಿಯಲು ||
ಕರುಳು ಸುರಿವು ತಿರಲು ಮರಳಿ | ಸರಿದ ಶರಧಿಗೆ ||೩೧೮||

ರಾಗ ನಾದನಾಮಕ್ರಿಯೆ ಅಷ್ಟತಾಳ

ವರುಣ ತನ್ನಾಲಯಕಯ್ದಲು | ಮತ್ತೆ |
ಮರುತ ಪಾವಕರೊಂದು ಮತದೊಳು ||
ತರುಬಿ ದಿವ್ಯಾಸ್ತ್ರಗಳೆಸೆಯಲು | ಕಂ |
ಡುರಗಾರಿವಾಹನ ಕ್ಷಣದೊಳು ||೩೧೯||

ಕಂಗಾಣದ್ಯಾತಕೆ ಬಂದಿರಿ | ಸಮ |
ರಾಂಗಣದಲಿ ನೀವು ನೊಂದಿರಿ ||
ಹಿಂಗದೆಮ್ಮೊಳು ನಿಲ್ಲೆನುತ್ತಲಿ | ದಿವ್ಯ |
ಶಾರ್ಙ್ಗವ ಪಿಡಿದನು ನಗುತಲಿ ||೩೨೦||

ಕೋಲೊಂದರಿಂದ ಪಾವಕನನು | ಮ |
ತ್ತೇಳು ಬಾಣದಲಿ ಮಾರುತನನು ||
ಕೀಲಿಸೆ ಭೀತಿಯಿಂದವರಾಗ | ತಮ್ಮ |
ಪಾಳೆಯ ಸಹಿತ ಸಾಗಿದರಾಗ ||೩೨೧||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ಬಂದನಂದು ಮಂದಮತಿಯಲಿ | ಸಮರದೆಡೆಗೆ |
ಬಂದನಂದು ಮಂದಮತಿಯಲಿ || ||ಪ||

ಚಂಡ ಮಹಿಷವೇರಿ ಮಾ | ರ್ತಂಡಸುತನು ಕಂಗಳಲ್ಲಿ |
ಕೆಂಡಗೆದರಿ ಗೆದರಿ ಮಕಲ | ಜಾಂಡ ನಡುಗಲೊಡನೆ ತನ್ನ |
ದಂಡು ಸಹಿತಲಿದರು ಬಂದನು | ನಿಲ್ಲು ನಿಲ್ಲು |
ಗಂಡುಸಾದಡನ್ನೊಳೆಂದನು | ಭುಜವ ಹೊಯ್ದು
ದಂಡದಿಂದಲಿಟ್ಟು ಕೋಪ |
ಗೊಂಡು ನಡೆದು ನಡೆದು ತಾನು || ಬಂದ ||೩೨೨||

ಎಲವೊ ದಂಡಧರನೆ ಬರಿದೆ | ಬಳಲತೇಕೆಮ್ಮ ಕೊಡೆ |
ಕಲಹಬೇಡ ಪೋಗು ನಿನ್ನ | ನಿಳಯಕೆನುತಲಸುರಹರನು |
ತಳೆದು ಗದೆಯ ಭಾರಿದಂಡವ | ಹೊಡೆಯೆ ಭೀತಿ |
ತಳೆದು ಸೇರ್ದ ತನ್ನ ನಗರವ | ಕಂಡು ನಿಋತಿ |
ನಿಲಲಸಾಧ್ಯವೆಂದು ತನ್ನ |
ನೆಲೆಯ ಸಾರ್ದ ಭಯದೊಳಂದು || ಬಂದ ||೩೨೩||