ರಾಗ ಶಂಕರಾಭರಣ ರೂಪಕತಾಳ
ತರುಣಿಯೆಂದ ನುಡಿಯ ಕೇಳ್ದ | ಹರಿಯು ಮನದಲಿ |
ಮರುಗತಾಗ ಪೇಳ್ದನೊಂದು | ಕರುಣದಿಂದಲಿ ||
ತರಳೆ ಕೇಳೆ ಶೀಘ್ರದಲ್ಲಿ ಬರುವೆನಲ್ಲಿಗೆ |
ಭರದಿ ಪೇಳು ಬಂದೆನೆನುತ | ಲರಸಿ ಭಾಮೆಗೆ ||೭೯||
ನಡೆಯೆ ನಿಲ್ಲಬೇಡ ಮುದ್ದು | ನಡೆಯೆ ಭಾಮಿನಿ |
ತಡೆಯದೀಗ ಬಹೆನು ನಿನ್ನ | ವಡನೆ ಕಾಮಿನಿ ||
ಮಡದಿರನ್ನೆಯನ್ನು ಸಂತ | ವಿಡಿದು ವಿನಯದಿ |
ಬಿಡದೆ ಬೇಡಿದಿಷ್ಟಗಳನು | ಕೊಡುವೆ ನಿಮಿಷದಿ ||೮೦||
ಎಂದು ಸಖಿಯನಾಗ ಕಳುಹಿ | ನಂದ ತನಯನು |
ಬಂದು ಮಹಿಳೆ ಇರ್ಪ ಮನೆಯ | ಮುಂದೆ ನಿಂದನು ||
ಎಂದಿನಂತೆ ಕಾಣದಿರಲು | ನೊಂದು ಮನದೊಳು |
ಮಂದಿರವನು ಪೊಕ್ಕ ದುಗುಡ | ದಿಂದ ಭರದೊಳು ||೮೧||
ಕಂದ
ಮುರಹರನಂತಃಪುರಮಂ |
ಭರದೊಳ್ ಪೊಕ್ಕಲ್ಲಿ ಸತಿಯ ಕಾಣದೆ ಬಳಿಕಂ ||
ತರಹರಿಸುತ್ತಿರಲದ ಕಂ |
ಡರುಹಿದಳೋರ್ವ ಪರಿಚಾರಿಣಿಯು ಹರಿಯೊಡನಂ ||೮೨||
ರಾಗ ಸಾವೇರಿ ಅಷ್ಟತಾಳ
ದೇವ ಲಾಲಿಸಯ್ಯ | ಬಿನ್ನಪವನ್ನು | ದೇವ ಲಾಲಿಸಯ್ಯ || ಪಲ್ಲವಿ ||
ಆಳಿಯ ಮುಖದಿಂದಲೀ | ಸುದ್ದಿಯನೊಂದು |
ಕೇಳಿ ಸಂತಾಪದಲಿ ||
ಬಾಲೆ ತಾನಿಂತಾದ ಮೇಲಿನ್ನು ಜೀವಿಸಿ |
ಬಾಳುವದೆಂತೆಂದಳು | ನಿನ್ನವಳು || ದೇವ ||೮೩||
ಉಸಿರಲೇನದನು ನಾನು | ದುಃಖದೊಳಿಂದು |
ಬಿಸಜ ಲೋಚನೆಯು ತಾನು ||
ಅಸುವ ನೀಗುವೆನೆಂದು | ಬಿಸುಸುಯ್ದು ಬಹಳ ಚಿಂ |
ತಿಸುತೀಗ ಮಲಗಿರ್ಪಳು | ಮೂರ್ಛೆಯೊಳು || ದೇವ ||೮೪||
ಕಂದ
ದೂತಿಯ ವಚನವನಾಲಿಸಿ |
ಭೀತಿಯನುಂ ತಳೆದು ಜವದಿ ಚಿಂತಾಗೃಹಕಂ ||
ಮಾತುಳ ಮರ್ದನನತಿ ಸಂ |
ಪ್ರೀತಿಯೊಳಾ ಸತ್ಯಭಾಮೆಯೊಡನಿಂತೆಂದಂ ||೮೫||
ಚೂರ್ಣಿಕೆ
ಹೇ ಬಾಲೆ ಸರಸಗುಣಶೀಲೆ ಸಂಗೀತಲೋಲೆ |
ರೋಲಂಬನಿಕುರಂಬಡಂಬರವಿಡಂಬಕನೀಲಕುಂತಲೆ
ನಿರ್ಮಲೆ ಅರ್ಧೇಂದುಸನ್ನಿಭಫಾಲೆ ಸಕಲ ಗುಣಾಲವಾಲೆ |
ಶಂಬರಾಂತಕಶರಾಸನಭ್ರೂಲತೆಸನ್ಮತಿಯುತೆ |
ಕುವಲಯ ಪತ್ರನೇತ್ರೆ ಕಮನೀಯಗಾತ್ರೆ |
ವಿಲಸತ್ ಚಂಪಕಸುಮನಾಸಿಕೆ ಸೀಮಂತಿನೀಜನಶಿಖಾಮೌಕ್ತಿಕೆ |
ಪದ್ಮರಾಗರಾಗಪ್ರಭಾಪ್ರಚಯಪ್ರಕಾಶಿತ ಶಾತಕುಂಭತಾಟಂಕಾಲಂ |
ಕೃತಕರ್ಣಯುಗಳೆ ನಿತ್ಯಮಂಗಲೆ ಮುಕುರಕಪೋಲೆ ವಿಭ್ರಮಜಾಲೆ |
ರಾಕೇಂದುನಿಭವದನೆ ಕಮನೀಯಕುಂದರದನೆ |
ಚಾರು ತರಬಿಂಬಾಧರೆ ಕಂಬುಕಂಧರೆ |
ಅತಿಮೃದುಳಬಾಹುಲತೆ ಆನಂದಭರಿತೆ ಲಲಿತಾರುಣಪದ್ಮರೇಖಾನ್ವಿತೆ |
ಪಲ್ಲವಪಾಣಿ ಶುಕವಾಣಿ | ಜಂಭಾರಿ ಕುಂಭೇದ್ರಕುಂಭಸನ್ನಿಭ ಕುಚಯುಗೆ ಮನೋನುರಾಗೆ |
ಕಾಂಚೀದಾಮ ವಿರಾಜಿತಹರಿಮಧ್ಯೆ ಕಾಮಾಗಮವೇದ್ಯೆ |
ಪೃಥುಳ ಶೈತ್ಯನಿತಂಬೆ ಭೂರಂಭೆ | ರಂಭಾಸ್ತಂಭೋರುಯುಗಳೆ ಕೋಮಲೆ |
ಕಲಧೌತಕೇತಕಿಕುಟ್ಮಳಜಂಘಾದ್ವಯೆ ಸದಯಹೃದಯೆ |
ಝಣಝಣತ್ಕಾರಮಂಜೀರರಂಜಿತಚರಣಸರಸಿಜೆ ಪರಿಜನಸುಕುಜೆ |
ಕಲಹಂಸನಿಭಯಾನೆ ಮಂದಕೋಕಿಲಗಾನೆ |
ಶಾರದಾಂಬುಜರುಚಿರಚೇಲೆ ಮಯೂರನೃತ್ಯಲೀಲೆ |
ಸರ್ವಾಲಂಕಾರಭೂಷಣಭೂಷಿತೇ ಚೌಷಷ್ಟಿಕಲಾಶೋಭಿತೆ |
ಸತ್ಯಭಾಮೆ ನಿನಗೆನ್ನೊಡನೆ ಮುನಿಸೇನೆ ಪ್ರಾಣಕಾಂತೆ ಮಾತನಾಡೆ ||೮೬||
ರಾಗ ಸೌರಾಷ್ಟ್ರ ಏಕತಾಳ
ವಾರಿಜಗಂಧಿನಿ ಕೀರಭಾಷಿಣಿ ಮುದ್ದು |
ನೀರೆ ನೀ ಬಾಗಿಲ ತೆರೆಯೆ ||
ದ್ವಾರದಿ ಧ್ವನಿಯನ್ನು ತೋರುವಾತನು ನೀನು |
ಯಾರು ಪೇಳೈ ನಿನ್ನ ಪೆಸರು ||೮೭||
ಪ್ರಾಣನಾಯಕಿ ನಾಗವೇಣಿ ಕೇಳೆಲೆ ನಾನು |
ವೇಣುಗೋಪಾಲನು ಕಾಣೆ ||
ವೇಣುಗೋಪಾಲ ನೀನಾದರೊಳ್ಳಿತು ನಿನ್ನ |
ಠಾಣದಿ ಪಶುವ ಕಾಯಯ್ಯ ||೮೮||
ಕ್ರೂರ ಕಾಳಿಂಗನ ಪೆಡೆಯ ತುಳಿದು ಬಂದ |
ಧೀರ ಕಾಣೆಲೆ ಚಾರುಗಾತ್ರೆ ||
ಧೀರ ನೀನಾದರೆ ಪಾವನಾಡಿಸಿಕೊಂಡು |
ಗಾರುಡಿಗಾರ ಹೋಗಯ್ಯ ||೮೯||
ಬಲ್ಲಿದರೊಳು ಬಲು ಬಲವಂತರೆನಿಸುವ |
ಮಲ್ಲರ ಗೆಲಿದವ ಕಾಣೆ ||
ಮಲ್ಲರ ಗೆದಿದವನಾದರೆ ಗರಡಿಗೆ |
ನಿಲ್ಲದೆ ಪೋಗು ಪೋಗಯ್ಯ ||೯೦||
ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿ |
ನೋದದಿ ತಂದವ ಕಾಣೆ ||
ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ |
ವ್ಯಾಧರ ಕೂಡಿ ಬಾಳಯ್ಯ ||೯೧||
ಕಾಂತೆ ಕೇಳಾರೊಂದು ವೃಷಭವ ಕಟ್ಟಿ ನೀಲಾ |
ಕಾಂತೆಯ ತಂದವ ಕಾಣೆ ||
ಅಂತಾದರೊಳ್ಳಿತು ಹೋರಾಟವನು ಮಾಡಿ |
ಸಂತುಷ್ಟನಾಗು ಹೋಗಯ್ಯ ||೯೨||
ಕಮಲಕೋರಕಸನ್ನಿಭ ಕುಚಯುಗೆ ನಿನ್ನ |
ರಮಣ ಕಾಣೆಲೆ ಮಂದಯಾನೆ ||
ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ |
ರಮಣಿಯು ಮಲಗಿರ್ದಳಾಗ ||೯೩||
ಭಾಮಿನಿ
ಲಲನೆ ಭಾಮಾದೇವಿ ಕಾಂತನ |
ಲಲಿತ ವಾಕ್ಯವ ಕೇಳ್ದು ಮೌನವ |
ತಳೆದು ಬಾಗಿಲ ತೆಗೆದು ಮೊಗವೀಕ್ಷಿಸದೆ ಮಂಚದಲಿ ||
ಮಲಗಿರಲು ಕಾಣುತ್ತ ಕರುಣಾ |
ಜಲಧಿ ಕೃಷ್ಣನು ಕಮಲನೇತ್ರೆಯ |
ಬಳಿಗೆ ನಡೆ ತಂದಾಗ ನುಡಿದನು ಮಧುರವಚನದಲಿ ||೯೪||
ರಾಗ ಸೌರಾಷ್ಟ್ರ ಅಷ್ಟತಾಳ
ಯಾತಕೆನ್ನಲಿ ಮುನಿಸೀಗ ಮಾನಿನಿರನ್ನೆ | ಸತ್ಯಭಾವೆ || ಸಂ |
ಪ್ರೀತಿಯಿಂದಲಿ ಮಾತನಾಡೆನ್ನ ಮನದನ್ನೆ | ಸತ್ಯಭಾವೆ ||೯೫||
ಸೀತಾಂಶುವಕ್ತ್ರೆ ನಿನ್ನಯ ಮುದ್ದು ಮೊಗದೋರೆ | ಸತ್ಯಭಾವೆ || ಪಂಕ |
ಜಾತಾಕ್ಷಿ ಕರುಣ ಕಟಾಕ್ಷದಿಂದೀಕ್ಷಿಸು | ಸತ್ಯಭಾವೆ ||೯೬||
ಎಂದಿನಂತಿದಿರೆದ್ದು ಬರಲಿಲ್ಲ ವೇತಕೆ | ಸತ್ಯಭಾವೆ || ಕಣ್ಣ |
ಮುಂದೆ ನಿಂದರು ನೊಡದಿರ್ಪುದೊಳ್ಳಿತೆ ನೀರೆ | ಸತ್ಯಭಾವೆ ||೯೭||
ಇಂದೆನ್ನ ಮೇಲಿಷ್ಟು ಕೋಪವೇತಕೆ ಪೇಳೆ | ಸತ್ಯಭಾವೆ || ಈಗ
ಎನ್ನಿಂದ ತಪ್ಪೇನೆ ನಿಧಾನಿಸು ಗುಣಶೀಲೆ | ಸತ್ಯಭಾವೆ ||೯೮||
ಮಲಿನವಸ್ತ್ರವನುಟ್ಟು ಭೂಷಣಂಗಳ ಬಿಟ್ಟು | ಸತ್ಯಭಾವೆ || ನೀನು |
ಮಲಗಿರ್ಪೆ ಮೌನದೊಳೇನಿದೇನಿದು ಗುಟ್ಟು | ಸತ್ಯಭಾವೆ ||೯೯||
ತಿಳಿವಂತೆ ಪೇಳೆನ್ನ ಕೂಡೆ ಮಾಜದೆ ಬೇಗ | ಸತ್ಯಭಾವೆ || ನಾನು |
ತಳುವದೆ ನೀ ಬೇಡಿದಿಷ್ಟವನೀವೆನು | ಸತ್ಯಭಾವೆ ||೧೦೦||
ಕಂದ
ಇನಿಯನ ನುಡಿಯಂ ಕೇಳ್ದಾ |
ವನಿತಾಮಣಿ ಸತ್ಯಭಾವೆ ನೋಡದೆ ಮುಖಮಂ ||
ಮುನಿಸಂದಾಳುತ ಪ್ರಿಯಕಾ |
ಮಿನಿಯಂ ಕರೆದೆಂದಳೆಲ್ಲಮಂ ಭರದಿಂದಂ ||೧೦೧||
ರಾಗ ಸಾರಂಗ ಅಷ್ಟತಾಳ
ಯಾಕಿಲ್ಲಿಗಯ್ತಂದನಿವನು | ನೀರೆ |
ನೀ ಕೇಳೆ ಬಂದ ಕಾರ್ಯವನು ||
ಆ ಕನ್ನೆಗೆಣೆಯು ನಾನಲ್ಲವೆಂಬುದ ಕಂಡು |
ಬೇಕಾದ ವಸ್ತುವನವಳಿಗೀಯದೆ ತಾನೆ || ಯಾಕಿಲ್ಲಿ ||೧೦೨||
ಕಳವಿನಿಂದೋಡಿಬಂದವಳ | ಬಂಧು |
ಗಳ ಮಾನವನು ತೆಗೆದವಳ ||
ಇಳೆಯೊಳು ಖ್ಯಾತಿಯ ಪಡೆದ ಸಂಪನ್ನೆಯ |
ಚೆಲುವೆಯ ಚಪಲೆಯ ನಿಲಯ ಬಿಟ್ಟಿಲ್ಲಿಗೆ || ಯಾಕಿಲ್ಲಿ ||೧೦೩||
ಜಗಳವ ಗಂಟಿಕ್ಕುವವನು | ಬಂದು |
ಮೊಗದಿಚ್ಛೆಯಾಡಿ ತಾನದನು ||
ಮಿಗೆ ಕೇಳಿ ತನ್ನ ಕಾಂತೆಗೆ ಬೇಡಿದುದನಿತ್ತು |
ಸೊಗಸಿನಿಂದಲಿರ್ದು ದುಗುಡವ ತೋರುತ್ತ || ಯಾಕಿಲ್ಲಿ ||೧೦೪||
ವನರುಹನಯನೆ ಕೇಳಿದೆಯ | ಈತ |
ನೆನುವ ಮಾತುಗಳ ಬನ್ನಣೆಯ ||
ವನಿತೆಯರೊಳಗಾ ವನಿತೆಯುತ್ತಮವೆಂದು |
ಮನವನಾಕೆಯಲಿಟ್ಟು ಮನೆಗೆ ತಾನಿಂದು || ಯಾಕಿಲ್ಲಿ ||೧೦೫||
ಕಂದ
ಸತ್ರಾಜಿತರಾಯನ ವರ |
ಪುತ್ರಿಯಳೆಂದ ಬಿರುನುಡಿಯನೆಲ್ಲವ ಕೇಳ್ದು ||
ಪತ್ರೀಂದ್ರಧ್ವಜನಾಗಳ್ |
ಚಿತ್ರದ ಪ್ರತಿಮೆಯೋಲ್ ನಿಂದು ಮೆಲ್ಲಗೆ ನುಡಿದಂ ||೧೦೬||
ರಾಗ ಯರಕಲಕಾಂಭೋಜಿ ಅಷ್ಟತಾಳ
ಸಿಟ್ಟುಮಾಡಲು ಬೇಡ ಸುಗುಣಸಂಪನ್ನೆ |
ಪಟ್ಟದ ರಾಣಿ ಕೇಳ್ ಪರಮ ಕಲ್ಯಾಣಿ || ಸಿಟ್ಟು || ಪಲ್ಲವಿ ||
ವನಜದಳಾಂಬಕಿ ನಿನ್ನ ಮಾತುಗಳೀಗ |
ಮನಕೆ ಸಂಶಯವಾಗಿ ತೋರುತಲಿರುತಿದೆ |
ವಿನಯದಿ ನೆಲೆಯ ಪೇಳು | ನೀನಲ್ಲದಿ | ನ್ನೆನಗಾರು ಪ್ರಿಯದವಳು |
ಅನ್ಯಳಿಗಿತ್ತ | ಘವನಸ್ತುವೇನು ವಿಸ್ತರಿಸು ಶೀಘ್ರದೊಳು || ಸಿಟ್ಟು ||೧೦೭||
ಆರ ಮಾತನು ಕೇಳಿ ನಡೆವಾತ ನಾನಲ್ಲ |
ನೀರೆ ನೀನಾಡಿದ ಮಾತ ಮೀರುವನಲ್ಲ |
ನಾರಿ ನಿನ್ನಿಷ್ಟವನು | ಪೇಳಲು ನಾನು | ಭೋರನೆ ನಿನಗೀವೆನು |
ಕಾರುಣ್ಯವ | ತೋರಿ ಮಾತಾಡಿ ಮನ್ನಿಸೆ ಮತ್ತಗಜಯಾನೆ ||೧೦೮||
ರಾಗ ಮಾರವಿ ಏಕತಾಳ
ಬಿಡು ಬಿಡು ಬನ್ನಣೆ | ನುಡಿಗಳನೆನ್ನೊಳು | ನುಡಿವುದು ತರವಲ್ಲ ||
ಕೊಡಲಿಲ್ಲವೆ ಕಿ | ತ್ತಡಿ ತಂದಲರನು | ಮಡದಿಗೆ ನಲಿನಲಿದು ||೧೦೯||
ಕಳವಿಲಿ ಬಂದಳ | ಕುಲವಧುವೆನುತಲಿ | ಕಲಹಾಳಿಗನು ನುಡಿಯೆ ||
ಒಲಿದಾಕೆಗೆ ಮುನಿ | ಸುಲಲಿತ ವಾಕ್ಯಕೆ | ಸಲೆ ಮರುಳಾದೆಯಲ ||೧೧೦||
ನೀ ಕೇಳ್ದೆಯ ಸುರ | ಲೋಕದ ಕುಸುಮವ | ನಾಕೆಗೆ ಕೊಡುವಾಗ ||
ಯಾಕಿನಿ ತೆಂಬೆ ವಿವೇಕದಿ ನಡೆ ನಡೆ | ಸಾಕುಪಚರ್ಯಗಳು ||೧೧೧||
ಮಾಲಿನಿವೃತ್ತ
ನಿನಗೆ ಸುಮನೊಂದಾನೀವುದದಾವ ಚಂದ |
ಎನುತಮವಳಿಗಿತ್ತೆ ಕಮಲನೇತ್ರೆ ನೀ ಮತ್ತೆ ||
ಮುನಿಯದಿರು ಸುವರ್ಣ ವೃಕ್ಷವ ತೋರ್ಪೆ ಪೂರ್ಣ |
ಮನಕೆ ಹರುಷವದೋರಿ ಮನ್ನಿಸೆನ್ನನು ನಾರಿ ||೧೧೨||
ರಾಗ ಶೃಂಗಾರಿ ಅಷ್ಟತಾಳ
ಮನ್ನಿಸೆ ನಾರಿ ನೀನೊಲಿದೆನ್ನ | ಮನ್ನಿಸೆ ನಾರಿ || ಪಲ್ಲವಿ ||
ಮನ್ನಿಸೆ ನಾರಿ ವ | ಯ್ಯಾರಿ ಶೃಂಗಾರಿಣಿ |
ಪನ್ನಗನಿಭವೇಣಿ | ಪಲ್ಲವಾರುಣಪಾಣಿ || ಮನ್ನಿಸೆ ||೧೧೩||
ಜಲಜಲೋಚನೆ ಕೋ | ಕಿಲಗಾನೆ ಗಜಯಾನೆ |
ಸಲೆ ಸುಪ್ರವೀಣೆ ನೀ | ಗೆಲವಿಂದಲೆನ್ನನು || ಮನ್ನಿಸೆ ||೧೧೪||
ಇನಿತುಕಾರ್ಯಕೆ ನೀನು | ಮುನಿದೊಳ್ಳಿತೆ ವೃಕ್ಷ |
ವನು ತೋರಿಸುವೆ ನಾನೆ | ಮನದಿ ಸಂತಸಗೊಂಡು ||೧೧೫||
ಮುನ್ನ ನಾನಲ್ಲಿರ್ದು | ದನ್ನು ನೀ ಕ್ಷಮಿಸು ಸಂ |
ಪನ್ನೆ ಕೇಳ್ ನಿನ್ನ ಬಿ | ಟ್ಟಿನ್ನು ಪೋಗುವುದಿಲ್ಲ || ಮನ್ನಿಸೆ ||೧೧೬||
ರಾಗ ಸಾವೇರಿ ಏಕತಾಳ
ಯೋಗಿ ತಂದ ಪೂವನೊಂದ | ತೋರದಿರುವಾ | ದಿವ್ಯಾ |
ಮೋಘವಾದ ವೃಕ್ಷವೆಂದು | ತೋರುವೆನೀ ಕಾಂತ ||೧೧೭||
ಹೋಗದ ಊರಿಗೆ ದಾರಿ | ತೋರಿಸೆಯಲ್ಲ | ಕೈಯ |
ಸಾಗದಂಥ ಕಾರ್ಯಮಾಳ್ಪೆ | ನೆಂದಾಡಿದೆಯಲ್ಲ ||೧೧೮||
ಆರಿಗೂ ಸಾಧ್ಯವಲ್ಲದ | ವಸ್ತುವನು ನೀನು | ಈಗ |
ತೋರುವೆನೆಂದಾಡಿದುದ ನಿಜವೆಂದು ನಾನು ||೧೧೯||
ನೀರ ಕೇಳೊ ನಂಬಲಾರೆ | ಪುಸಿಯಾಡಬೇಡ | ನಿನ್ನ |
ಚೋರವೃತ್ತಿಗಳ ಬಲ್ಲೆ | ಸಾಕು ನಡಿ ಗಾಢ ||೧೨೦||
ರಾಗ ಭೈರವಿ ಅಷ್ಟತಾಳ
ಮಾನಿನಿಮಣಿಯೆ ಬಾರೆ | ಈ ಕಾರ್ಯವಿ | ನ್ನೇನು ದೊಡ್ಡಿತು ವಯ್ಯಾರೆ ||
ಏಣಾಕ್ಷಿ ನಿನಗನುಮಾನವೇತಕೆ ತೋರ್ಪೆ | ಸಾನುರಾಗದಿ ವೃಕ್ಷವ ||೧೨೧||
ಕುಟಿಲಕುಂತಳೆಯೆ ಕೇಳೆ | ನಾನೆಂದುದು | ಸಟಿಯಲ್ಲ ಸುಗುಣ ಶೀಲೆ ||
ದಿಟವೆಂದು ನಂಬು ಧೂರ್ಜಟಿಯಾಣೆ ತೋರುವೆ | ವಿಟ ಪ್ರಿಯೆ ಸದ್ಯದಲಿ ||೧೨೨||
ಕಾಂತೆ ಕೇಳ್ ಕೋಪವನು | ಮಾಡದೆ ದಯ | ವಾಂತು ಮತ್ಪ್ರಿಯೆ ನೀನು ||
ಸಂತೋಷದಿಂದೀಗ ಸಂತಯಿಸು | ಸೌಭಾಗ್ಯ | ವಂತೆ ಸಂತತವೆನ್ನನು ||೧೨೩||
ಕಂದ
ನಲ್ಲನ ವಚನನಾಲಿಸಿ |
ಮೆಲ್ಲನೆ ಪರಿಯಂಕದಿಂದಲಿಗಿಳಿದಾಗಳ್ ||
ಸೊಲ್ಲಿಸದುತ್ತರಮಂ ನಿಜ |
ನಲ್ಲನ ಮೃದುನುಡಿಗೆ ಸಿಲುಕಿ ಸಿಲುಕಿ ಲಜ್ಜಿಸಿ ನಿಂದಳ್ ||೧೨೪||
ರಾಗ ಭೈರವಿ ಝಂಪೆತಾಳ
ತಲೆವಾಗಿ ಲಜ್ಜೆಯೊಳು | ಲಲನೆಯಿರೆ ಕಾಣುತ್ತ |
ಜಲಜದಳಲೋಚನನು | ನಲವಿನಿಂದಾಗ ||೧೨೫||
ಬಾರೆಲೆಗೆ ಮತ್ಕಾಂತೆ | ಬಾರೆ ಸದ್ಗುಣವಂತೆ |
ಬಾರೆ ಬಾರೆಂದೆನುತ | ಭೂರಿ ಹರುಷದಲಿ ||೧೩೬||
ಮಡದಿರನ್ನೆಯ ತೋರ | ಮುಡಿಯ ನೇವರಿಸಿ ಮ |
ತ್ತೊಡನೆ ದಿವ್ಯಾಂಬರವ | ನುಡಿಸಿದನು ನಗುತ ||೧೨೭||
ವರ ಕಂಚುಕವ ತೊಡಿಸಿ | ಪರಿ ಪರಿಯ ಭೂಷಣವ |
ಕರುಣದಿಂ ತಾನೆ ಶೃಂ | ಗರಿಸಿದನು ಮುದದಿ ||೧೨೮||
ಮೃಗಮದವ ಪಣೆಗಿರಿಸಿ | ಬಗೆಬಗೆಯ ಲೇಪನವ |
ಸೊಗಸಿನಿಂ ಪೂಸಿದನು | ನಗಧರನು ಸತಿಗೆ ||೧೨೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತೆಸೆವ ಪೂಗೋಲಯ್ಯನು |
ಸಂತಸದಿ ಶೃಂಗರಿಸಿ ಮೋಹದ |
ಕಾಂತೆಯನು ಮನ್ನಿಸಿದನತಿ ಮುದ | ವಾಂತು ಬೇಗ ||೧೩೦||
ರಮಣನಡಿಗೊಂದಿಸಲು ಕಲ್ಪ |
ದ್ರುಮವ ತೋರ್ಪೆನೆನುತ್ತವಳ ಕರ |
ಕಮಲದಲಿ ನಿಜಕರವನಿರಿಸಿದ | ರಮಣಿಗೊಲಿದು ||೧೩೧||
ಮಂದಹಾಸದಿ ಕರವ ಪಿಡಿದರ |
ವಿಂದವದನೆಯ ಸಜ್ಜೆಯೆಡೆಗೈ |
ತಂದು ಸತಿಯೊಡನಿರ್ದ ಸುಖದಿ ಮು | ಕುಂದನಂದು ||೧೩೨||
ಭಾಮಿನಿ
ಧರಣಿಪತಿ ಕೇಳೊಂದು ದಿನ ಸಿರಿ |
ಯರಸನೊಡ್ಡೋಲಗದೊಳೊಪ್ಪಿರೆ |
ಸುರಪತಿಯು ನಡೆತಂದು ಕಂಡನು ತತ್ಪದಾಂಬುಜವ ||
ಮುರನರಕರಿಂದಾದ ತನ್ನಯ |
ಪರಿಭವವನೆಲ್ಲವನು ಪಾವನ |
ಚರಿತನಿಗೆ ಬಿನ್ನೈಸಿದನು ತಲೆವಾಗಿ ದುಗುಡದಲಿ ||೧೩೩||
ರಾಗ ಕಾಂಭೋಜಿ ಝಂಪೆತಾಳ
ಕರಣಾಳುಗಳ ದೇವ ಶರಣಸಂಜೀವ ಗುಣ |
ಭರಿತ ಚಿತ್ತಯಿಸು ಬಿನ್ನಪವ ||
ಧರಣಿಯಾತ್ಮಜನಾದ ದುರುಳ ನರಕಾಸುರನು |
ಸುರಲೋಕವನು ಸೂರೆಗೊಂಡ ||೧೩೪||
ಪೇಳಲಹಿಪತಿಗರಿದು ಖೂಳನುಪಟಳವ ಸುರ |
ಜಾಲವನು ಸೆರೆವಿಡಿದನಮರ ||
ಬಾಲೆಯರಿಗಾದುದವ ನಾಲಯದಿ ದಾಸಿಯರ |
ಮೇಳದೊಳು ತೊತ್ತುಗೆಲಸಗಳು ||೧೩೫||
ಲಲಿತ ಮಣಿಶೈಲವನು ಜಲಧಿಪನ ಚಕ್ರಪಿಂ |
ಗಲ ದೃಶಾನದಿಯ ಧಿಗಧಿಪರ ||
ಬಲು ಭಾಗ್ಯಗಳನೆಲ್ಲ ಸೆಳೆದು ಕೊಂಡೊಯ್ದು ನಿಜ |
ನಿಳಯದೆಡೆಗತಿ ಶೌರ್ಯದಿಂದ ||೧೩೬||
ನುಡಿಯಲಿನ್ನೇನು ಜಗದೊಡೆಯ ಚಿತ್ತವಿಸೆನ್ನ |
ಪಡೆದವಳ ಕುಂಡಲದ್ವಯವ ||
ಬಿಡದೊಯ್ದನಸುರ ಸದೆಬಡಿದು ದಿವಿಜರನೆಲ್ಲ |
ಕಡುಪರಾಕ್ರಮದಿಂದ ಪುರಕೆ ||೧೩೭||
ಅರಿದು ತನಗಾ ದನುಜಪುರವನದನೀಕ್ಷಿಪಡೆ |
ಮುರುಪಾಶದಿಂದ | ಜಲದಿಂದ ||
ಉರಿವ ಪಾವಕದಿಂದಲುರುಶಸ್ತ್ರದಿಂ ಭಯಂ |
ಕರವಾಗಿ ದುರ್ಗವೆಸದಿಹುದು ||೧೩೮||
ಪೊಗಲರಿದು ದಾನವನ ನಗರವನು ಮುರನೆಂಬ |
ವಿಗಡ ರಕ್ಕಸನ ಭಯದಿಂದ ||
ಜಗವೆಲ್ಲ ಖಲರೊಲಿಸಿ ಬಾಳು ವಂದದೊಳಾಯ್ತು |
ಮಿಗೆ ಪೇಳ್ವುದೇನು ಪರಿಭವವ ||೧೩೯||
ಈಕ್ಷಿಸೈ ಕರುಣದೊಳುಪೇಕ್ಷೆಯಂ ಮಾಡದೆ ತ |
ರಕ್ಷುಚರ್ಮಾಂಬರನ ಮಿತ್ರ ||
ಪಕ್ಷಿವಾಹನ ಪಂಕಜಾಕ್ಷ ನೀನೊಲಿದೆಮ್ಮ |
ರಕ್ಷಿಸೆಂದೆರಗಿದನು ಪದಕೆ ||೧೪೦||
ಕಂದ
ಚರಣಾಂಬುಜಯುಗಕೆರಗಿದ |
ಸುರಪನ ಪಿಡಿದೆತ್ತಿ ಪಂಚಬಾಣನ ಜನಕಂ ||
ಬರಸೆಳೆದಾಲಿಂಗಿಸಿ ಮಿಗೆ |
ಪರಮಪ್ರೀತಿಯೊಳು ಪೇಳ್ದನತಿ ದಯೆಯಿಂದಂ ||೧೪೧||
Leave A Comment