ಕಂದ

ಶ್ರೀವನಿತೆಯ ಮನದನ್ನಂ |
ಭಾವಜಪಿತನಮರವೃಂದವಂದಿತ ಚರಣಂ ||
ದೇವಕಿಯಣುಗಂ ಘನ ಶೋ |
ಭಾವಹ ನಮಗೀಗೆ ನಿತ್ಯಮಾನಂದಗಳಂ || ||೧||

ಬುಡಕಡೆಯಿಂದಂ ವಾಚಿಸಿ |
ದೊಡೆ ಸಮವೆನಿಪುದದು ವರ್ಣದೊಳೆ ಶೋಭಿಸುವಂ ||
ಕಡುಬೆಡಗಿನ ರೂಪಂ ಜಗ |
ದೊಡೆಯಂ ಕೊಡು ನಮಗೆ ನಿತ್ಯತಿಸಂಪದಮಂ ||೨||

ಇಂದಿರೆ ಸುರನರಪನ್ನಗ |
ವಂದಿತ ಪದ ವಿಶ್ವಮಾತೆ ಹರಿಯರಸಿಯೆ ನೀಂ ||
ಕುಂದದೆ ಸಂತಸವೆನ್ನಯ |
ಮಂದಿರದೊಳು ವಾಸವಾಗಿ ಪೊರೆ ಸಂತಸದಿಂ ||೩||

ರಾಗ ಮಧ್ಯಮಾವತಿ ತ್ರಿವುಡೆತಾಳ

ಗಜವದನ ಗಿರುವರಸುತಾತ್ಮಜ | ತ್ರಿಜಗಪಾಲ ಗುಹಾಗ್ರಜ ||
ಅಸುರಾರ್ಚಿತಚರಣಸರಸಿಜ |
ಭಜಕಸಂಕುಲಸುರಕುಜ || ಶರಣು ಶರಣು ||೪||

ಬಾಲಭಾಸ್ಕರಕೋಟಿಭಾಸುರ | ಸ್ಥೂಲಕಂದರ ಶುಭಕರ ||
ಕಾಲಕರ್ಮ ವಿದೂರ ಸುರುಚಿರ |
ಲೋಲ ವರ ಲಂಬೋದರ || ಶರಣು ಶರಣು ||೫||

ಪರಶು ಪಾಶಾಂಕುಶ ಸುಮೋದಕ| ಧರಮಹೇಶ್ವರ ಬಾಲಕ ||
ಉರಗ ಭೂಷಣ ಸಿದ್ಧಿವಿನಾಯಕ |
ವರದ ಶ್ರೀಗಣನಾಯಕ || ಶರಣು ಶರಣು ||೬||

ರಾಗ ಸೌರಾಷ್ಟ್ರ ಅಷ್ಟತಾಳ

ಉರಗಕುಂಡಲ ಚಂದ್ರಧರ ಸೂರ್ಯಸಂಕಾಶ | ಪಾಹಿ ಶಂಭೋ |
ಶರ ಜನ್ಮಜನಕ ಶಂಕರ ಸರ್ವಭೂತೇಶ | ಪಾಹಿ ಶಂಭೋ ||
ದುರಿತಸಂಕುಲನಾಶ ಗಿರಿಶ ಪಾವನವೇಷ | ಪಾಹಿ ಶಂಭೋ |
ಕರಿನಕ್ತಂಚರ ಸಂಹಾರಣ ಶಿವ ಗೌರೀಶ | ಪಾಹಿ ಶಂಭೋ ||೭||

ರಾಗ ಸಾಂಗತ್ಯ ರೂಪಕತಾಳ

ವರದೆ ಶಂಕರಿ ಪುಣ್ಯಚರಿತೆ ಕೋಮಲಗಾತ್ರೆ | ಹರಿಣಲೋಚನೆ ಚಂದ್ರ ವಕ್ತ್ರೆ ||
ತರುಣಾರ್ಕಕೋಟಿಭಾಸುರೆ ಲಂಬೋದರಮಾತೆ | ಗಿರಿಜಾತೆ ಲೋಕ ವಿಖ್ಯಾತೆ ||೮||

ನೀಲಕುಂತಳೆ ಗೀತಾಲೋಲೆ ಮಂಗಲೆ ಭಕ್ತ | ಪಾಲೆ ನಿರ್ಜರವಂದ್ಯಚರಣೆ ||
ಪಾಲಲೋಚನಪ್ರೀತೆ ಬಾಲೇಂದುಧರೆ ದೈತ್ಯ | ಜಾಲಸಂಹರೆ ರತ್ನಾಭರಣೆ ||೯||

ಸಾರಸೋಪಮಪಾಣಿ ಕ್ಷೀರಭಾಷಿಣಿಮೊಗ | ದೋರೆ ಪಾರ್ವತಿ ಜಗದಂಬೆ ||
ವಾರಿಜೋದ್ಭವವಂದ್ಯೆ ವಾರಿಧಿ ಗಂಭೀರೆ | ಗೌರಿ ನೀ ಸಲಹೆ ಮೂಕಾಂಬೆ ||೧೦||

ರಾಗ ಶಂಕರಾಭರಣ ರೂಪಕತಾಳ

ದಿನಪಭಾಸ ದೀನಪೋಷ | ವನರುಹಾಸನ |
ಸನಕಮುಖ್ಯ ಸಕಲ ಯೋಗಿ | ವಿನುತತೋಷಣ ||
ವನಧಿಶಯನತನಯ ವಿಶ್ವ | ಜನಸುರಕ್ಷಣ
ಎನಗಭೀಷ್ಟವೀಯೊ ದ್ರುಹಿಣ | ಕನಕಭೂಷಣ ||೧೧||

ಕಂದ

ಶಾರದೆ ನಾನಾ ಶಾಸ್ತ್ರ ವಿ |
ಶಾರದೆ ಪರಮೇಷ್ಠಿ ವನಿತೆ ವೀಣಾಪಾಣೀ ||
ಕಾರುಣ್ಯದೊಳೆನಗನಿಶಂ |
ಭೋರನೆ ಸನ್ಮತಿಯನಿತ್ತು ರಕ್ಷಿಸು ಮುದದಿಂ ||೧೨||

ಭಾಮಿನಿ

ಪರಮಪುರುಷನೆ ಪಾಪನಾಶನೆ |
ದುರಿತನಿಡಬಿಧ್ವಾಂತಸೂರ್ಯನೆ |
ಸುರನರೋರಗಲೋಕವಿನುತನೆ ಪರಮಪಾವನನೆ ||
ನಿರುಪಮಾಂಗನೆ ನಿಷ್ಕಳಂಕನೆ |
ಶರಣಜನಪರಿಪಾಲಶೀಲನೆ |
ಗುರುವರನೆ ನೀನೊಲಿದು ಪಾಲಿಪುದೆನಗೆ ಸನ್ಮತಿಯ ||೧೩||

ದ್ವಿಪದಿ

ಪರಮಋಷಿ ವ್ಯಾಸರಿಗೆ ನಮಿಸಿ ಶುಕಮುನಿಯ |
ಚರಣಾಬ್ಜ ಯುಗಕೆರಗಿ ಪಡೆವೆ ಸನ್ಮತಿಯ ||೧೪||

ಅನಿಮಿಷರ್ಗೆರಗಿ ಕವಿಗಳ ಪದಕೆ ಮಣಿದು ||
ಮುನಿಗಳಿಗೆ ಶೇಷಾಧಿಪತಿಗೆ ಕೈಮುಗಿದು ||೧೫||

ವರಮಹಾಭಾಗವತ ಪೌರಾಣದೊಳಗೆ |
ಸಿರಿಯರಸನಿಂದ್ರನುಪವನದಿಂದ ಧರೆಗೆ ||೧೬||

ಪಾರಿಜಾತವ ತಂದು ರಂಜಿಸಿದ ಕಥೆಯ |
ಸಾರವನು ಕುಟಜಾದ್ರಿಸದನವಾಸಿನಿಯ ||೧೭||

ಕೃಪೆಯಿಂದ ಪೇಳ್ವೆನಾ ಯಕ್ಷಗಾನದಲಿ |
ವಿಪುಳ ಮತಿಯುತರಿದನು ಕೇಳಿ ಲಾಲಿಸಲಿ ||೧೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶಶಿಕುಲೋದ್ಭವ ವರ ಪರೀಕ್ಷಿತ |
ವಸುಮತೀಶನು ಶುಕಮುನೀಂದ್ರನ |
ಬಿಸಜಚರಣಕೆ ನಮಿಸಿ ಕೇಳ್ದನು |
ಕುಶಲದಿಂದ ||೧೯||

ಅವಧರಿಸು ಮುನಿವರನೆ ಲಕ್ಷ್ಮೀ |
ಧವನು ತಂದನದೇನು ಕಾರಣ |
ದಿವಿಜಲೋಕದ ಪಾರಿಜಾತವ | ಭುವಿಗೆ ಮುದದಿ ||೨೦||

ಎನಗೆ ನೀವಿಂದರುಹಬೇಕೆನೆ |
ವನಜನಾಭನ ದಿವ್ಯಮಹಿಮೆಯ |
ವಿನಯದಿಂದಲೆ ಪೇಳತೊಡಗಿದ | ಮುನಿಪನಂದು ||೨೧||

ರಾಗ ಭೈರವಿ ಝಂಪೆತಾಳ

ಧಾರಿಣೀಪತಿ ಕೇಳು | ದ್ವಾರಕಾನಗರದಲಿ |
ಶ್ರೀರಮಣನಿರ್ದನತಿ | ಭೂರಿ ಭಾಗ್ಯದಲಿ ||೨೨||

ಭುವನಕತಿಶಯವೆನಿಪ | ನವರತ್ನ ಭವನದಲಿ |
ಯುವತಿ ರುಗ್ಮಿಣಿ ಸಹಿತ | ತವೆ ಹರುಷದಿಂದ ||೨೩||

ವರಸಿಂಹವಿಷ್ಟರದಿ | ಸ್ಮರಜನಕನೊಪ್ಪಿರಲು |
ಸುರನರೋರಗರು ಭೂ | ಸುರರು ಸಜ್ಜನರು ||೨೪||

ಋಷಿವರರು ಯೋಗಿಗಳು | ವಸುಮತೀಶರು ಭಕ್ತಿ |
ರಸದೊಳಿರ್ದರು ನೆರೆದು | ನೊಸಲ ಕೈಗಳಲಿ ||೨೫||

ನಾನಾ ಸುವಾದ್ಯರವ | ಗಾನ ನೃತ್ಯಗಳಿಂದ |
ಶ್ರೀನಾರಿಯರಸನಾ | ಸ್ಥಾನ ರಂಜಿಸಿತು ||೩೬||

ವಂದಿಘೋಷದಿ ಸಕಲ | ಬಂಧುವರ್ಗವು ಸಹಿತ |
ನಂದನಂದನನು ನಲ | ವಿಂದಲಿರುತಿರ್ದ ||೨೭||

ಕಂದ

ಇಂತತಿ ವಿಭವದಿ ಲಕ್ಷ್ಮೀ |
ಕಾಂತಂ ಮಿಗೆ ರಂಜಿಸುತ್ತಲಿರಲೊಂದು ದಿನಂ ||
ಸಂತಸದಿಂದಲಿ ಸದ್ಗುಣ |
ವಂತಂ ಮುನಿ ನಾರದಾಂಕ ತಾನಯ್ತಂದಂ ||೨೮||

ರಾಗ ಸಾಂಗತ್ಯ ರೂಪಕತಾಳ

ಸುರಪನಾನೆಯು ಬಹ ಪರಿಯಂತೆ ರವಿಯಂತೆ |
ಸುರಲೋಕದಿಂದ ನಾರದನು ||
ಹರಿಯ ನಾಮವ ಸಪ್ತಸ್ವರದಿಂದ ಮುದದಿಂದ |
ಸ್ಮರಿಸುತ ಬರೆ ಯೋಗೀಶ್ವರನು ||೨೯||

ರಾಗ ಕೇದಾರಗೌಳ ಅಷ್ಟತಾಳ

ನಾರದಮುನಿಪನ ಕಾಣುತ್ತ ಕರುಣಾಳು |
ಭೂರಿ ಸಂತೋಷದಲಿ ||
ಭೋರನಿದಿರ್ಗೊಂಡು ಕರೆತಂದು ಪೀಠವ |
ನೇರಿಸಿ ವಿನಯದಲಿ ||೩೦||

ಚರಣಾವಿಂದವ ತೊಳೆದು ತಜ್ಜಲವನ್ನು |
ಶಿರದೊಳು ಧರಿಸಿದನು ||
ಪರಿಪರಿ ವಿಧದಿಂದ ಪೂಜಿಸಿ ಭಕ್ತಿಯೊ |
ಳೆರಗಿದ ಮುರಹರನು ||೩೧||

ಎತ್ತಣಿಂದಿಲ್ಲಿಗೆ ಬಂದಿರಿ ಲೋಕದ |
ವೃತ್ತಾಂತವೇನದನು ||
ಬಿತ್ತರಿಸೆಂದತಿ ನಮ್ರತೆಯಿಂದ ಪುರು |
ಷೋತ್ತಮ ಕೇಳಿದನು ||೩೨||

ಭಾಮಿನಿ

ಧರೆಯ ಭಾರವ ಕಳೆಯಲೆನುತವ |
ತರಿಸಿ ನರನಾಟಕದಿ ರಂಜಿಪ |
ಪರಮಪುರುಷನೆ ಪದ್ಮನಾಭನೆ ವಿಶ್ವವಂದಿತನೆ ||
ಅರಿಯದವನಂತೆನ್ನ ಕೇಳುವೆ |
ಬರಿದೆ ನೀನ್ಯಾಕೆನುತ ಕೋಮಲ |
ತರದ ನಿರುಪಮ ಪಾರಿಜಾತವನಿತ್ತನಾ ಮುನಿಪ ||೩೩||

ರಾಗ ಕೇದಾರಗೌಳ ಅಷ್ಟತಾಳ

ನಾರದಮುನಿನಾಥ ಕೇಳಯ್ಯ ನೀನಿತ್ತ |
ಪಾರಿಜಾತದ ಪುಷ್ಪವು ||
ಆರಿಗೆ ಯೋಗ್ಯವಿದೆಲ್ಲಿಂದ ಬಂತೆಂದು |
ವಾರಿಜಾಕ್ಷನು ಕೇಳಿದ ||೩೪||

ಸರಸಿಜೋದ್ಬವಮುಖ್ಯ ದಿವಿಜವಂದಿತ ಕೇಳು |
ಸುರಲೋಕದಿಂದ ನಾನು ||
ಬರುತ ತಂದೆನು ಪುಷ್ಪವಿದು ಯೋಗ್ಯ ನಿ |
ನ್ನರಸಿ ರುಗ್ಮಿಣಿಗೆಂದನು ||೩೫||

ಮುನಿಕುಲೇಂದ್ರನೆ ಕೇಳೀ ಕುಸುಮವ ಮುಡಿವಂಥ |
ವನಿತೆಯರ್ಗೇನಹುದು ||
ವಿನಯದಿಂದೆನಗೀಗ ಪೇಳಬೇಕೆನುತಲಿ |
ದನುಜಾರಿ ಬೆಸಗೊಂಡನು ||೩೬||

ಬಿಡದನುದಿನದೊಳೀ ಕುಸುಮವ ಮುಡಿಯಲು |
ಪಡೆವರು ಪುತ್ರರನು ||
ಪೊಡವಿಯೊಳ್ ಸೌಭಾಗ್ಯದಿಂದ ಬಾಳುವರೆಂದು |
ನುಡಿದನು ಮುನಿನಾಥನು ||೩೭||

ರಾಗ ಮಧುಮಾಧವಿ ತ್ರಿವುಡೆತಾಳ

ಮುನಿಪನೆಂದುದ ಕೇಳಿ ಕುಸುಮವ |
ಮನದಿ ಸಂತಸಗೊಂಡು ತನ್ನಯ |
ವನಿತೆರನ್ನೆಯ ಮುಡಿಗೆ ಮುಡಿಸಿದ |
ವನಜನಾಭನು ನಗುತಲೆ | ಚಂದದಿಂದ ||೩೮||

ಭ್ರಮರಕುಂತಳೆ ಯುವತಿ ರುಗ್ಮಿಣಿ |
ವಿಮಲ ಕುಸುಮವ ಮುಡಿದು ತನ್ನಯ |
ರಮಣನಡಿಗೆರಗುತ್ತ ಮುನಿಪಗೆ |
ನಮಿಸಿ ಹರುಷದೊಳಿರ್ದಳು | ಸಾರಸಾಕ್ಷಿ ||೩೯||

ಅ ಸಮಯದೊಳು ನಾರದನು ಜಗ |
ದೀಶನಂಘ್ರಿದ್ವಯಕೆ ವಂದಿಸಿ |
ವಾಸವನ ಪುರಕಯ್ದಿದನು ಪರಿ |
ತೋಷದಿಂದಲಿ ನುತಿಸುತ | ಹರಿಸ್ಮರಣೆಯ ||೪೦||

ಕಂದ

ಸುರಮುನಿನಾಥಂ ಪೋಗಲ್ |
ಹರಿಯೋಲಗದಿಂದ ದೂತಿಯೋರ್ವಳ್ ಭರದಿಂ ||
ತೆರಳುತ ರಾಜಿಪ ಮಣಿಮಂ |
ದಿರವಂ ಪೊಕ್ಕೊಡನೆ ಸತ್ಯಭಾಮೆಯೊಳೊರೆದಳ್ ||೪೧||

ರಾಗ ಶಂಕರಾಭರಣ ಏಕತಾಳ

ನೀರೆ ಕೇಳೆ ಸತ್ಯಭಾಮೆ | ನಾರದನಿಲ್ಲಿಗೆ ಬಂದು |
ವಾರಿಜಾಕ್ಷಗಿತ್ತನೊಂದು | ಪಾರಿಜಾತವ ||೪೨||

ನಾರಿ ವೈದರ್ಭಿಗಲ್ಲದಿ | ನ್ಯಾರಿಗು ಯೋಗ್ಯವಲ್ಲೆಂದು |
ನಾರದನೆಂದ ಕೇಳಮ್ಮ | ಸಾರಸನೇತ್ರೆ ||೪೩||

ಮುನಿಪನೆಂದ ಮಾತ ಕೇಳಿ | ವನಿತೆ ರುಗ್ಮಿಣಿಗೆ ಬೇಗ |
ವಿನಯದಿಂದ ತಾನೆ ಮುಡಿಸಿ | ದನು ನಿನ್ನ ಕಾಂತ ||೪೪||

ರಾಗ ಮೋಹನ ಏಕತಾಳ
ಕಂಡು ಬಂದೆಯೊ ನೀನು | ಕಾಣದೆ ಪೇಳ್ವೆಯೊ |
ಪುಂಡರಿಕಾಂಬಕಿ ಪುಸಿಯಾಡಬೇಡ || ಕಂಡು ||೪೫||

ರಮಣಗೆನ್ನಯ ಮೇಲೆ | ಮಮತೆಯುಂಟೆಲೆ ಬಾಲೆ |
ಭ್ರಮರಕುಂತಳೆ ಬಾರೆ ನೀರೆ ಗಂಭೀರೆ || ಕಂಡು ||೪೬||

ಅಮರಲೋಕದ ಪೂವ | ರಮೆಗಿತ್ತುದಹುದೆ
ಸುಮವೆಂತು ರಂಜಿಪುದು | ಪೇಳೆ ನಿಜವಾಗಿ || ಕಂಡು ||೪೭||

ರಾಗ ಕೇದಾರಗೌಳ ಝಂಪೆತಾಳ

ಪೇಳಿದೆನು ನೋಡಿದುದನು | ಪುಸಿಯಲ್ಲ |
ಕೇಳದರ ಚೆಲ್ವಿಕೆಯನು ||
ಭೂಲೋಕದೊಳು ತೋರುವ | ಸುಮಗಳೊಳು |
ಹೋಲಿಕೆಯ ಕಾಣೆನವ್ವ ||೪೮||

ಬಿಳಿದಾಗಿ ಶೋಭಿಸುವುದು | ವಿದ್ರುಮವ |
ಪಳಿದು ತೊಟ್ಟೆಸೆವುತಿಹುದು ||
ಲಲಿತವಾಗಿಹುದು ಕೇಳೆ | ಬಹಳ ಪ್ರ |
ಜ್ವಲಿಸುತ್ತಲಿಹುದು ಬಾಲೆ ||೪೯||

ಪರಿಮಳವು ಕುಂದದಂತೆ | ನಿರತವಾ |
ಸುರಕುಸುಮ ಕುಂದದಂತೆ ||
ಧರಣಿಯೊಳಿಗಿರ್ಪ ಕಾಂತೆ | ಯರು ಮುಡಿಯೆ |
ವರಕಾಮ್ಯವಾಹುದಂತೆ ||೫೦||

ಇಂತೆಂದು ಸತಿ ನುಡಿಯಲು | ಕೇಳುತ್ತ |
ಕಾಂತೆ ತಾನತಿಭರದೊಳು ||
ಚಿಂತಿಸುತ ಲಲನೆಯರೊಳು | ನಡೆದ ವೃ |
ತ್ತಾಂತಮಂ ಮಿಗೆ ಪೇಳ್ದಳು ||೫೧||

ರಾಗ ಭೈರವಿ ಝಂಪೆತಾಳ

ವನಿತೆಯರು ಕೇಳಿದಿರಿ | ಮುನಿಯಿತ್ತ ಪೂವ ರು |
ಗ್ಮಿಣಿಗೆ ಕೊಡ ಬಹುದೆ ವಂ | ಚನೆಯೆಸಗುತೆಮಗೆ ||೫೨||

ನಾರದನ ನುಡಿ ಕೇಳಿ | ನೀರಜಾಂಬಕನೆನಗೆ |
ತೋರದಿರಬಹುದೆ ಸುರ | ಪಾರಿಜಾತವನು ||೫೩||

ಮಡದಿಯರುಗಳನೊಡಂಬಡಿಸದೇ ವ್ಯಾಜದಲಿ |
ಕೊಡಬಹುದೆ ರುಗ್ಮಿಣಿಗೆ | ಕಡು ಚೆಲ್ವ ಸುಮವ ||೫೪||

ಹೆಂಡಿರೆಲ್ಲರನು ಸಮ | ಕಂಡು ನಡೆಸದೆ ಹೀಗೆ |
ಪುಂಡುತನವೇಕೆ ಕರ | ದಂಡನಾಭನಿಗೆ ||೫೫||

ಅವಳು ಹೆಚ್ಚೇನು ಮಿ | ಕ್ಕವರಲ್ಲಿ ಕುಂದೇನು |
ಧವಗಿನಿತು ಬುದ್ಧಿ ಸಂ | ಭವಿಸಿತಿಂದಿನಲಿ ||೫೬||

ವಚನ

ಇಂತೆಂದು ಸತ್ಯಾಂಗನೆಯು ಮತ್ತೋರ್ವ ಸಖಿಯೊಡನೆ ಪೇಳ್ದಳದೆಂತೆನೆ –

ರಾಗ ಭೈರವಿ ರೂಪಕತಾಳ

ಏನ ಮಾಡಲಿ ಯುವತಿ | ಇನಿಯಗಿಲ್ಲವೆ ನೀತಿ |
ಆ ನಾರಿಯೊಳು ಪ್ರೀತಿ | ಅಧಿಕ ಕೇಳ್ ಸುದತಿ ||೫೭||

ಕಲಹಾಳಿಗನು ಬಂದು | ಕಪಟಕೃತ್ಯದೊಳಿಂದು |
ನಳಿನಾಕ್ಷನಿಗೆ ತಾನೇ | ನುಸಿರಿದನೊ ಕಾಣೆ ||೫೮||

ಲಲನೆ ರುಗ್ಮಿಣಿಯೆಂಬ | ಳವಳ ಮಾಯಕ ತುಂಬ |
ತಿಳಿಯಬಾರದು ನೀರೆ | ತರಳಾಕ್ಷಿ ಬಾರೆ ||೫೯||

ಎಂದು ಇಲ್ಲದ ನಡತೆ | ಯಾರಿದೇತಕೆ ಬಂತೆ |
ಒಂದೆ ವಾಸರವೆನ್ನ | ವಂಚಿಸ ಮುನ್ನ ||೬೦||

ಮುಂದುಗಾಣದೆ ನಾನೆ | ಮೋಸಹೋದೆನು ಜಾಣೆ |
ಸಿಂಧೂರಯಾನೆ ಎ | ನ್ನಿಂದ ತಪ್ಪೇನೆ ||೬೧||

ಕಾಂತಗೆನ್ನೊಳು ಬಾಲೆ | ಕರುಣವಿಲ್ಲದ ಮೇಲೆ |
ಎಂತು ಸೈರಿಸಲಿ ಮ | ತ್ತೆಂತು ಜೀವಿಸಲಿ ||೬೨||

ಕಂತುಯೆಂಬವ ತಾನು | ಕಾಲನಂದದೊಳಿಹನು |
ಇಂತಾದ ಬಳಿಕ ಕೇಳ್ | ಕಾಂತೆ ತಾನೇಕೆ ||೬೩||

ವಚನ

ಇಂತೆನುತ ಭಾಮಾದೇವಿ ನುಡಿಯಲಾ ಮಾತಿಗೆ ದೂತಿ ಸಂತವಿಟ್ಟಳದೆಂತೆನೆ –

ರಾಗ ಕಾಂಭೋಜಿ ಏಕತಾಳ

ಚಿಂತಿಸಬೇಡವೆ ಭಾಗ್ಯ | ವಂತೆ ಮಂದಯಾನೆ ||
ಕಾಂತ ತಾನೆ ಬಂದು ನಿನ್ನ | ಸಂತವಿಸುವ ಕಾಣೆ ||೬೪||

ಮುನಿಯ ಮಾತ ಮೀರಬಾರ | ದೆನುತ ಲಿಂದು ಬಾಲೆ ||
ವನಜಾಭನಿತ್ತರೇನೆ | ಪ್ರೀತಿ ನಿನ್ನ ಮೇಲೆ ||೬೫||

ಮುನಿವದುಂಟೆ ಮಾತಿದೇಕೆ | ಮಂಗಲಾಂಗಿ ಕೇಳೆ ||
ನಿನಗೆ ತಿಳಿಯದೇನೆ ನೀತಿ | ವಂತೆ ಗಾನಲೋಲೆ ||೬೬||

ರಾಗ ಆನಂದಭೈರವಿ ಏಕತಾಳ

ಇಂತಾಡಲೇಕೆನ್ನ ಮನೆಗೆ | ಕಾಂತ ಬಾರದಿರಲು ನಿನಗೆ |
ನೀತಿಯೆ | ಕೇಳು | ದೂತಿಯೆ ||೬೭||

ಹಿರಿಯ ಕಾಂತೆಯೆಂದು ತಾನೆ | ಹರುಷದಿಂದ ಲಿಹನು ಕಾಣೆ |
ಕೇಳಮ್ಮ | ತಿಳಿದು | ಹೇಳಮ್ಮ ||೬೮||

ಆತಗೆನ್ನ ಮೇಲೆ ಯಿಂತು | ಪ್ರೀತಿಯಿಲ್ಲದಿರಲಿನ್ನೆಂತು |
ತಾಳಲಿ | ಹೇಗೆ | ಬಾಳಲಿ ||೬೯||

ದ್ವಿಪದಿ

ಇಂತು ಭಾಮಾದೇವಿ ಕಾಂತೆಯೊಳು ಪೇಳ್ದು |
ಎಂತು ಜೀವಿಪೆನೆಂದು ಚಿಂತೆಯನು ತಾಳ್ದು ||೭೦||

ಕರಗಿದಳು ಕಣ್ಣೀರ ಸುರಿದು ಬಿಸುಸುಯ್ದು |
ಮರುಗಿದಳು ವಾಗ್ದೇವಿಯರಸನನು ಬಯ್ದು ||೭೧||

ಉಣ್ಣದಾದಳು ಉಡಳು ಬಣ್ಣ ಬಿಳಿದುಗಳ |
ಖಿನ್ನಳಾಗುತ ತೊಡಳು ರತ್ನ ಚಿನ್ನಗಳ ||೭೨||

ಹರಣವನು ತಾನಿಂದು ತೊರೆವೆನುತಾಗ |
ಭರದಿ ಚಿಂತಾಗೃಹಕೆ ಪರಿ ತಂದು ಬೇಗ ||೭೩||

ಬಲಿದು ಕದವನು ಮಂಚದಲಿ ಪವಡಿಸಿದಳು |
ಹಲುಬಿದಳು ಭಾಮಿನಿಯು ಹಲವು ರೀತಿಯೊಳು ||೭೪||

ಕಂದ

ಇಂತಾ ಭಾಮೆಯು ದುಃಖವ |
ನಾಂತಿರೆ ಕಂಡು ಸಖಿಯೋರ್ವಳತಿಚಚ್ಚರದಿಂ ||
ಕಂತುಪಿತನ ಸನ್ನಿಧಿಗಂ |
ಚಿಂತಿಸುತಲೆ ಬಂದು ಪೇಳ್ದಳೊಯ್ಯನೆ ಹದನಂ ||೭೫||

ರಾಗ ಮಧುಮಾಧವಿ ಏಕತಾಳ

ಸ್ವಾಮಿ ಕೇಳೆನ್ನ ಬಿನ್ನಪವ ಕರುಣದಲಿ |
ಭಾಮಾದೇವಿಗೆ ತಾಪ ಬಹಳವಿಂದಿನಲಿ ||
ಈ ಮಾತು ಪುಸಿಯಲ್ಲ ಸಹಜವಾಕೆಯಲಿ |
ಪ್ರೇಮವುಳ್ಳಡೆ ಬಂದು ನೋಡು ವೇಗದಲಿ ||೭೬||

ನೋಡಳಾವುದನು ಮಾತಾಡಳು ಉಣಳು |
ಬಾಡಿ ಬಸವಳಿದು ಬೆಂಡಾಗಿ ಮಲಗಿಹಳು ||
ಕೂಡೆ ಸುಯ್ವಳು ಕ್ಲೇಶವನು ಮಾಡುತಿಹಳು |
ಗಾಢ ಸಂತಾಪದಿ ಮೂರ್ಛೆಗಯ್ದಿಹಳು ||೭೭||

ಎಂತಾಗುವಳೊ ಕಾಣೆ ಪೇಳಲಳವಲ್ಲ |
ಕಂತುತಾತನೆ ನೀನೆ ಬಲ್ಲೆಯಿದನೆಲ್ಲ ||
ಕಾಂತೆ ಭಾಮೆಯ ಮೇಲೆ ದಯದೋರಿ ಬಂದು |
ಸಂತಯಿಸು ಕರುಣಸಾಗರನೆ ನೀನಿಂದು ||೭೮||