ಕಂದ

ಕೆಲಬರ್ ಕಾಣುತ ಭಯಮಂ |
ತಳೆದರ್ಜನ ಕಾಮಾತ್ತರವನಿಕೇತನದಾ ||
ಸ್ಥಳಮಂ ಸಾರಿರೆ ಶರ್ವಂ |
ಘಳಿಲನೆ ನಡೆತಂದು ಸಮರಾಂ ಗಣಕಂ ||೩೨೪||

ರಾಗ ಘಂಟಾರವ ಅಷ್ಟತಾಳ

ಬಂದನೀಶಾನ | ನಂದು ಸಗಾಢದಿ ||
ನಂದಗೋಪನ | ಕಂದನೊಳು ನಮ | ಗಿಂದು ಸಮರವೆನುತ್ತಲಿ ||ಪ||

ನಿಲ್ಲು ನಿಲ್ಲು ಕೃಷ್ಣ | ಎಲ್ಲಿಗೆ ಪೋಗುವೆ ||
ಬಿಲ್ಲ ಹಿಡಿ ಹಿಡಿ | ಬಲ್ಲೆ ನಿನ್ನನು | ಬಲ್ಲಿದನು ನೀ ಕಳವಿಲಿ ||
ಗೊಲ್ಲರಾಲಯ | ವಲ್ಲ ನಿರೀಕ್ಷಿಸು ||
ಕಳ್ಳತನಗಳ | ನಿಲ್ಲಿ ತೋರ್ಪುದು | ಸಲ್ಲದೆನುತಲಿ ಸಮರಕೆ ||೩೨೫||

ಭೂತನಾಥ ನೀ | ನೇತಕೆಮ್ಮೊಡನಿಂತು ||
ಮಾತನಾಡುವೆ | ನೀತಿಯಲ್ಲದೆ | ನೀ ತಿಳಿಯದಿರುವಾತನೆ ||
ಖಾತಿ ಬೇಡ ಸಂ | ಪ್ರೀತಿಯಿಂದೊಯ್ವೆ ನಾ |
ನೀ ತರುವ ಧರ | ಣೀತಳಕ್ಕೆನೆ | ಸಾತಿ ಶಯದಲಿ ಸಮರಕೆ ||೩೩೬||

ಹರಿಯೆ ಕೇಳ್ ನಿನ್ನ | ಪರಿಯನೆಲ್ಲವ ಬಲ್ಲೆ ||
ಸುರರಭೀಷ್ಟದ | ತರುವ ನೀನಪ | ಹರಿಸಬೇಡವೆನುತ್ತಲಿ ||
ಭರದಿ ಪೇಳಲು | ತೆರಳಿ ಬಂದೆನು ಮತ್ತೆ |
ಮರೆಯದಿಲ್ಲಿಗೆ ತಿರುಗಿ ಕಳುಹೆಂ | ದೊರೆದು ತನ್ನುರುಸದನಕೆ ||೩೨೭||

ಕಂದ

ದಿಗಧಿಪರೆಲ್ಲರು ತಮ್ಮಯ |
ನಗರಕ್ಕಂ ತೆರಳುತಿರಲು ಕಂಡಮರೇಂದ್ರಂ ||
ನಗಧರ ನಿಲು ನಿಲ್ಲೆನುತಲಿ |
ಮಿಗೆ ಕೋಪಾಟೋಪದಿಂದ ಹರಿಯೊಳ್ ನುಡಿದಂ ||೩೨೮||

ರಾಗ ಕಾಂಭೋಜಿ ಏಕತಾಳ

ನಿಲ್ಲು ನಿಲ್ಲು ವೃಕ್ಷವ ನೀ | ನೆಲ್ಲಿಗೊಯ್ವೆ ಪೇಳು ||
ಎಲ್ಲಿಗೊಯ್ದರೇನು ನಮ್ಮ | ತಳ್ಳಿ ಬೇಡ ಕೇಳು ||೩೨೯||

ಕಳ್ಳತನವೆ ನಮ್ಮ ಕೂಡೆ | ಸಲ್ಲದೆಲವೊ ನಿನಗೆ ||
ಸಲ್ಲದಂಥ ಕಾರ್ಯ ಮಾಳ್ಪ | ರಲ್ಲ ಕೇಳು ಬಿನುಗೆ ||೩೩೦||

ಒಡೆಯ ನಾನಾಗಿದ್ದು ನಮ್ಮ | ಒಡವೆಯೊಯ್ವುದೇನೊ ||
ಒಡವೆ ವಸ್ತುಗಳಿಗೆ ನಾನೆ | ಒಡೆಯರೆಂಬರು ಕಾಣೊ ||೩೩೧||

ಬಿಡು ವಿರೋಧ ಸಾಕಿದಿಂತು | ನುಡಿವುಚಿತವಲ್ಲ ||
ನುಡಿಯ ಕೇಳದಿರಲು ಕ್ಷಣದಿ | ಬಡಿವೆ ನಿಮ್ಮನ್ನೆಲ್ಲ ||೩೩೨||

ದಿಟ್ಟತನವೆ ಕಲ್ಪತರುವ | ಕೊಟ್ಟು ನಡೆಯೊ ನೀನು ||
ಕೊಟ್ಟು ನಡೆವನಲ್ಲ ನಿನಗೆ | ಪೆಟ್ಟ ಕೊಡುವೆ ನಾನು ||೩೩೩||

ಬಿಟ್ಟು ಹೋಗೆಂದೆನುತ ಖತಿಯೊ | ಳಿಟ್ಟ ವಜ್ರವಾಗ ||
ಇಟ್ಟ ವಜ್ರವನ್ನು ಪಿಡಿದ | ಕೃಷ್ಣ ನಗುತ ಬೇಗ ||೩೩೪||

ಕಂದ

ವರ ವಜ್ರಾಯುಧಮಂ ಮಿಗೆ |
ಮುರಹರನಪಹರಿಸೆ ನಿರ್ಜರನಾಥಂ ||
ಸಿರಿಯಭಿದಾನದೊಳೇಕಾ |
ಕ್ಷರ ನಾಮವನಂದು ನೆನೆದು ಮರಳಿದನಾಗಳ್ ||೩೩೫||

ಶಿವ ಶಿವ ತಾನೇತಕ್ಕಾ |
ಹವಕಿಂದೈತಂದೆನೆಂದು ಮರುಗುತ ಸುರಪಂ ||
ಭವನಕ್ಕಂ ಪೋಗುತ್ತಿರೆ |
ಯುವತೀಮಣಿ ಸತ್ಯಭಾಮೆ ಜರೆದಳ್ ನಗುತಂ ||೩೩೬||

ರಾಗ ಮಧುಮಾಧವಿ ಏಕತಾಳ

ಯಾತಕೆ ಇಂದ್ರ ಪೋಗುವೆ ದೇವ |
ನಾಥನಾಗಿಯೆ ಪಾರಿ | ಜಾತವಾಬಿಟ್ಟು ನೀ || ಯಾತಕೆ ||ಪ||

ಎರಡೇಳುಲೋಕಕ್ಕೆ ಗಂಡನೆಂದೆನಿಸಿ |
ಭರದಿ ದಿಕ್ಪಾಲಕರನಿಲ್ಲಿಗೆ ಬರಿಸಿ ||
ಧುರಕನುವಾಗುತೆಲ್ಲರ ನೀನು ಕೊಲಿಸಿ |
ವರ ಪರಾಕ್ರಮವನ್ನು ತೊರೆದೀಗ ಸಹಸಿ || ಯಾತಕೆ ||೩೩೭||

ಈ ರೀತಿಯಲಿ ಮಾನ ನೀಗಿಸಿಕೊಂಡು |
ಭಾರಿ ವಜ್ರಾಯುಧ ಹೋಗಾಡಿಕೊಂಡು ||
ನಾರಿಗೆ ಮೋರೆಯ ತೋರಲು ಬಹುದೆ |
ಪಾರಿಜಾತವವ ಕೊಂಡುಪೋಗದೆ ಬರಿದೆ || ಯಾತಕೆ ||೩೩೮||

ಕಂದ

ಹರಿಯರಸಿಯ ನುಡಿಯನ್ನವ |
ಧರಿಸುತಲತಿ ಕೋಪದಿಂದಲಾ ಪುರುಹೂತಂ ||
ಭರದಿಂ ತಿರುಗಿಸಿ ಗಜಮಂ |
ಸರಸಿಜಪತ್ರೇಭನೇತ್ರೆಯೊಡನಿಂತೆಂದಂ ||೩೩೯||

ರಾಗ ಪೂರ್ವಿ ಅಷ್ಟತಾಳ

ಹರಿಯ ಕೈಯ ಹಿಡಿದೆನೆಂಬ ಗರ್ವದಿಂದ | ನಮ್ಮ |
ಜರೆದು ನುಡಿವರೇನ ಬಹಳ ಖಾತಿಯಿಂದ ||
ಪರರೆ ನಾವೀ ಸರ್ವಲೋಕನಾಯಕಂಗೆ | ನೀನು |
ಅರಿಯದಿಂತು ಪೇಳ್ವುದೊಳ್ಳಿತಲ್ಲ ಹೀಂಗೆ ||೩೪೦||

ತನಯರೊಂದು ತಪ್ಪುಮಾಡೆ ಮುನಿವದುಂಟೆ | ಜಗ |
ಜ್ಜನಕನಯ್ಯಗೆಮ್ಮ ಮೇಲೆ ಕ್ರೋಧವುಂಟೆ ||
ಜನನಿ ನೀನೆ ದನುಜೆಯಾಗಿಂತೆಂಬೆ ಯಾಕೆ | ನಿನ್ನ |
ಗುಣವನೆಲ್ಲ ಕಂಡ ಮೇಲೆ ಪೇಳ್ವುದೇಕೆ ||೩೪೧||

ಸಾಕು ಹೆಚ್ಚು ಮಾತನಾಡಬೇಡವೆಂದು | ಸ್ವರ್ಗ |
ಲೋಕನಾಥ ದಿವ್ಯ ಗಜವನಿಳಿದು ಬಂದು ||
ಭೇಕವೈರಿತಲ್ಪನಂಘ್ರಿಗೆರಗಿ ಬೇಗ | ತಾ |
ನೇಕಚಿತ್ತದಿಂದ ಭಜಿಸುತಿದ್ದನಾಗ ||೩೪೨||

ರಾಗ ಶಂಕರಾಭರಣ ರೂಪಕತಾಳ

ಜಯ ನಮೋ ಜಗನ್ನಿವಾಸ ಜಯ ಜನಾರ್ದನ |
ಜಯ ನಮೋ ಗಜೇಂದ್ರವರದ ಗರುಡವಾಹನ ||
ಜಯ ನಮೋ ಪವಿತ್ರಗಾತ್ರ ಪಾಪಮೋಚನ |
ಜಯ ನಮೋ ಫಣೀಂದ್ರಶಯನ ಪದ್ಮಲೋಚನ ||೩೪೩||

ಭಾವಜಾತಜನಕ ಸಕಲ ಭಾಗ್ಯದಾಯಕ |
ಶ್ರೀವಧೂಟಿಯರಸ ಸರ್ವಲೋಕನಾಯಕ ||
ದೇವ ನೀನು ನೋಡು ಕರುಣದೃಷ್ಟಿಯಿಂದಲಿ |
ಕಾವುದಭಯವೀವುದೆನಗೆ ವಿನಯದಿಂದಲಿ ||೩೪೪||

ಕನಕಮಯದ ಕಲ್ಪತರುವನವನಿ ಗೊಯ್ವುದೆ |
ಅನಿಮಿಷರ್ಗೆ ಘನತೆಯಲ್ಲವೆನುತ ಸೆಣಸಿದೆ ||
ಕ್ಷಣಿಕಚಿತ್ತರೆಮ್ಮ ದೋಷ ಮನಕೆ ತಾರದೆ |
ಗುಣಸಮುದ್ರ ಕ್ಷಮಿಸಬೇಕು ಮುನಿಸದೋರದೆ ||೩೪೫||

ಕೊಡುವರ್ಯಾರು ಕೊಂಬರ್ಯಾರು ಒಡೆಯರ್ಯಾರೆಲೆ |
ಒಡನೆ ಒಯ್ಯದಿಹುದು ದಯದಿ ಪೊಡವಿಗೀಗಲೆ ||
ಒಡವೆ ವಸ್ತುಗಳಿಗೆ ನೀನೆ ಒಡೆಯನೆನುತಲಿ |
ಅಡಿಗೆ ಮುಡಿಯ ಚಾಚಿ ಸುರಪ ನುಡಿದ ಮುದದಲಿ ||೩೪೬||

ರಾಗ ಭೈರವಿ ಝಂಪೆತಾಳ

ಸಿರಯರಸ ನಸುನಗುತ | ಕರುಣದಿ ಪುರಂದರನ |
ಶಿರವ ಪಿಡಿದೆತ್ತಿದನು | ಸುರರುಘೇಯೆನಲು ||೩೪೭||

ಬಾರಯ್ಯ ದಿವಿಜೇಂದ್ರ | ಬಾರೊ ಸದ್ಗುಣ ಸಾಂದ್ರ |
ಬಾರೆನುತಲಪ್ಪಿದನು | ಭೂರಿನೇತ್ರನನು ||೩೪೮||

ಕರಚರಣದಿಂದಾದ | ಪರಿಭವಕೆ ನೋವುಂಟೆ |
ಮರುಳಲಾ ನೀನಿದರ | ಪರಿಯ ಪೇಳೆನಗೆ ||೩೪೯||

ಕುಂದದಿರು ನಮ್ಮಾಜ್ಞೆ | ಯಿಂದಲೀ ತರು ಮರಳಿ |
ಬಂದಪುದು ತವ ಪುರಕೆ | ಸಂದೇಹ ಬೇಡ ||೩೫೦||

ಎನುತ ವಜ್ರವನಿತ್ತು ವಿನಯದಲಿ ಸಂತಯ್ಸಿ |
ವನಜಾಕ್ಷ ತನ್ನ ಪ | ಟಣಕೆ ನಡೆತಂದ ||೩೫೧||

ಭಾಮಿನಿ

ಸುರರು ದುಂದುಭಿ ಮೊಳಗೆ ಕರುಣಾ |
ಕರನು ಸತಿಯೊಡಗೊಂಡು ನಿರ್ಜರ |
ತರುಸಹಿತಲಯ್ತಂದ ತವಕದಿ ದ್ವಾರಕಾಪುರಕೆ ||
ಬರವ ಕಾಣುತ ಪುರದ ಜನರತಿ |
ಹರುಷದಲಿ ಬಂದಿದಿರುಗೊಳೆ ಖಗ |
ವರನನಿಳಿದರು ವಾದ್ಯಘೋಷದಿ ಪೊಕ್ಕನರಮನೆಯ ||೩೫೨||

ರಾಗ ಕಾಂಭೋಜಿ ಅಷ್ಟತಾಳ

ಬಂದರೆಲ್ಲರು ಹರುಷದಲಿ | ಗೋ |
ವಿಂದನಿದ್ದೆಡೆಗೆ ವೇಗದಲಿ ||
ವೃಂದಾರಕವೃಕ್ಷ | ದಂದವ ನೋಡುವೆ |
ವೆಂದು ಭಾಮಾದೇವಿ | ಮಂದಿರಕೆಲ್ಲರು ||೩೫೩||

ವಸುದೇವ ದೇವಕಿ ಬಲರು | ಶೋ |
ಭಿಸುವ ರೇವತಿ ಸೌಭದ್ರೆಯರು ||
ಮಿಸುನಿ ರತ್ನಗಳಿಂದ | ಲೆಸೆವ ಭೂರುಹವನು |
ಬಿಸಜಾಂಬಕನು ತಂದ | ವಸಗೆಯ ಕೇಳುತ್ತ ||೩೫೪||

ವರ ಪುರೋಹಿತರು ಜೋಯಿಸರು | ಭೂ |
ಸುರರು ತಾಪಸರು ಮಾಗಧರು ||
ನೆರೆದ ಪೃಥ್ವೀಪಾಲ | ಕರು ಯಾದವರು ಬಾಂಧ |
ವರು ಮುಖ್ಯ ಗೋಪರು | ಪುರದ ನಾರಿಯರು ||೩೫೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಂದೆತಾಯಿಗೆ ರಾಮನಿಗೆ ಸಾ | ನಂದದಲಿ ಮುನಿ ಗಾರ್ಗ್ಯನಿಗೆ ಗೋ |
ವಿಂದೆನೆರಗಲು ಪರಸಿದರು ನಲ | ವಿಂದಲವರು ||೩೫೬||

ಕಂಗೊಳಿಪ ವೃಕ್ಷವನು ನೆಡಿಸಿದ | ನಂಗಜನ ಪಿತನಧಿಕ ಹರುಷದೊ |
ಳಂಗನಾಮಣಿ ಸತ್ಯಭಾಮೆಯ | ಅಂಗಣದೊಳು ||೩೫೭||

ದೇವತರುವನು ಪೂಜಿಸೆನುತಲೆ | ದೇವದೇವನು ಬೆಸಸೆ ಭಾಮಾ |
ದೇವಿ ಬಂದಳು ಭರದಿ ರುಗ್ಮಿಣಿ | ದೇವಿಯೆಡೆಗೆ ||೩೫೮||

ಕಂದ

ತಂಗಿಯ ಬರಮಂ ಕಾಣು |
ತ್ತಂಗೋದ್ಭವಜನನಿ ತೋಷದಿಂದಾ ಕ್ಷಣದೊಳ್ ||
ಭಂಗಾರಪೀಠವೀವುತೆ |
ತುಂಗಸ್ತನೆಯೊಡನೆ ಕೇಳಿದನು ಕುಶಲಂಗಳಂ ||೩೫೯||

ರಾಗ ದೇಶಿ ಏಕತಾಳ

ಕ್ಷೇಮವೆ ಚಕೋರನೇತ್ರೆ | ಸತ್ಯಭಾವೆ || ಪೂರ್ಣ
ಸೋಮವಕ್ತ್ರೆ ಹೇಮಗಾತ್ರೆ | ಸತ್ಯಭಾವೆ ||
ಕಾಮಿನಿರತ್ನವೆ ಬಾರೆ | ಸತ್ಯಭಾವೆ || ರಂಗ |
ಧಾಮ ಪ್ರೀತಿಯಿಂದಲಿಹನೆ | ಸತ್ಯಭಾವೆ ||೩೬೦||

ಎಂದು ಇಲ್ಲದೆನ್ನ ಮನೆಗೆ | ಸತ್ಯಭಾವೆ || ನೀನು
ಬಂದುದತಿ ಚೋದ್ಯವಮ್ಮ | ಸತ್ಯಭಾವೆ ||
ಬಂದ ಕಾರ್ಯವೇನೆ ಪೇಳೆ | ಸತ್ಯಭಾವೆ || ಎ |
ನ್ನಿಂದಲಹುದೇನೆ ಸುಗುಣೆ | ಸತ್ಯಭಾವೆ ||೩೬೧||

ಬಿಸಜಗಂಧಿ ನಿನ್ನ ಮುಖದಿ | ಸತ್ಯಭಾವೆ || ಹರುಷ |
ರಸವು ತುಳುಕಿ ಶೋಭಿಸುತಿದೆ | ಸತ್ಯಭಾವೆ ||
ವಸಗೆಯೇನು ಮನೆಯೊಳಿಂದು | ಸತ್ಯಭಾವೆ || ಈಗ |
ಪುಸಿಯದೆನ್ನೊಳುಸಿರೆ ನೀರೆ | ಸತ್ಯಭಾವೆ ||೩೬೨||

ರಾಗ ನವರೋಜು ಏಕತಾಳ

ಅಕ್ಕ ಕೇಳಹಿವೇಣಿ | ನೀ | ನಕ್ಕರದಿ ಗುಣಶ್ರೇಣಿ ||
ರಕ್ಕಸದಲ್ಲಣನರ್ಧ ಶರೀರಿಣಿ | ಸಕ್ಕರೆ ಮಾತಿನ ಸರಸಿಜಪಾಣಿ ||೩೬೩||

ಖಳರುಪದ್ರಕೆ ನೊಂದು | ವರ | ಕುಲಿಶಪಾಣಿಯು ಬಂದು ||
ಸಲಹೆನೆ ಹರಿ ಮನವೊಲಿದೆನ್ನೊಡಗೊಂ | ಡಲಸದೆ ದನುಜರ ನಿಳಯಕೆ ಪೋಗಲು ||೩೬೪||

ದುರುಳರ ಸಂಹರಿಸಿದನು | ದೈ | ತ್ಯರನೆಲ್ಲಾ ಮಡುಹಿದನು ||
ನರಕನ ಶಿರವನು ತರಿದನು ಮತ್ತಾ | ಧರಣಿಯ ಮೊಮ್ಮನ ನೆರೆ ರಕ್ಷಿಸಿದನು ||೩೬೫||

ಅದಿತಿ ಕುಂಡಲಗಳನು | ಖಳ | ಸದನದಿಂ ತರಿಸಿದನು ||
ಮಧುಸೂದನ ಹರುಷದಿ ನಾಕಕ್ಕೈ | ದಿದ ಸುರಜನನಿಯ ಪದಕರ್ಪಿಸಿದನು ||೩೬೬||

ಬರುತ ಕಂಡೆನು ನಾನು | ಶ್ರೀ | ಕರ ಪಾರಿಜಾತವನು ||
ತರಹರಿಸದೆ ಮುರಹರನೊಳು ಪೇಳಲು | ಕರುಣಾಕರನೀ ಧರಣಿಗೆ ತಂದನು ||೩೬೭||

ವನಜಾಕ್ಷ ನೆಡಿಸಿದನು | ಅಂ | ಗಣದಲ್ಲೀ ವೃಕ್ಷವನು ||
ಮನಗೈತಂದಾ ಕನಕಮಯದ ತರು | ವನು ಪೂಜಿಸು ನೀನನುಮಾನಿಸದೆ ||೩೬೮||

ವಚನ

ಇಂತೆನೆ ಸಂತಸಮಂ ತಳೆದು ಕಂತುಜನನಿ ಭಾಮಾಕಾಂತೆಯೊಳ್ ಪೇಳ್ದಳದೆಂತೆನೆ –

ರಾಗ ಕೇದಾರಗೌಳ ಝಂಪೆತಾಳ

ಲೇಸಾದುದಬ್ಜನೇತ್ರೆ | ಬಂದುದೇ | ವಾಸವನ ದ್ರುಮ ಸುಗಾತ್ರೆ ||
ಏಸು ಜನ್ಮದ ಸುಕೃತವೆ | ಧರೆಯೊಳಿರು | ವೀ ಸಕಲ ಜನಕೆ ಭಾವೆ ||೩೬೯||

ಧರೆಗಮರಪಾದಪವನು | ಪೂರ್ವದಲಿ | ಬರಿಸಿದವರನು ಕಾಣೆನು ||
ತರಳೆ ನೀನು ಸಮರ್ಥೆಯು | ನಿನ್ನಿಂದ | ಹರಿಗೆ ಬಂದುದು ಕೀರ್ತಿಯು ||೩೭೦||

ನಡೆ ಬಹೆನು ವೃಕ್ಷದೆಡೆಗೆ | ನೀ ಬೇಗ | ನಡೆಯಮ್ಮ ನಿನ್ನ ಮನೆಗೆ ||
ಮಡದಿಯರನೆಲ್ಲ ಕರೆಸು | ಪೂಜಿಪಡೆ | ಪೊಡವಿಯಮರರನು ಬರಿಸು ||೩೭೧||

ಇಂತೆಂದು ತೋಷವೆತ್ತು | ವೀಳ್ಯವನು | ತಾಂ ತವಕದಿಂದಲಿತ್ತು ||
ಕಂತು ಜನನಿಯು ಕಳುಹಲು | ಭಾವೆ ಮುದ | ವಾಂತು ಮನೆಗಯ್ತಂದಳು ||೩೭೨||

ಭಾಮಿನಿ

ಕೇಳು ಧರಣಿಪ ಸತ್ಯಭಾಮೆಯು |
ಬೀಳುಗೊಂಡಲ್ಲಿಂದ ಬಂದಳು |
ನೀಲೆ ಮೊದಲಾದಖಿಳ ವಧುಗಳ ಮನೆಗಳನು ಪೊಕ್ಕು ||
ಪೇಳಿದಳು ವೃತ್ತಾಂತವನು ಸುರ |
ಸಾಲಪೂಜೆಗೆ ಬಪ್ಪುದೆನುತ ವಿ |
ಶಾಲಲೋಚನೆ ಬಂದು ತಿಳುಹಿದಲರಸಗೀ ಹದನ ||೩೭೩||

ಕಂದ

ಸುರುಭೂರುಹಮಂ ನೋಡುವ |
ಭರದಿಂ ನಡೆತಂದರಂದು ವನಿತೆಯರೆಲ್ಲರ್ ||
ಸುರುಚಿರಘನತರರತ್ನಾ |
ಭರಣಗಳಂ ತೊಟ್ಟು ಸತ್ಯಭಾಮೆಯ ಮನೆಗಂ ||೩೭೪||

ರಾಗ ಸೌರಾಷ್ಟ್ರ ಅಷ್ಟತಾಳ

ಇಂದುನಿಭಾನನೆ ಇಂದಿರೆ ವಿಭವದಿ | ಬಂದಳಾಗ || ಚೆಲ್ವ |
ಕುಂದರದನೆ ಕಾಳಿಂದಿಯು ಸಂತಸದಿಂದ | ಬಂದಳಾಗ ||೩೭೫||

ಮಂದಗಾಮಿನಿ ಮಿತ್ರವಿಂದೆ ವಿನೋದದಿ | ಬಂದಳಾಗ || ಆ |
ನಂದದಿ ಜಾಂಬವನಂದನೆ ನಲವಿಂದ | ಬಂದಳಾಗ ||೩೭೬||

ನೀಲಕುಂತಳೆ ಚಾರುತಿರೆ ಲಕ್ಷಣೆ ತಾನು | ಬಂದಳಾಗ || ರಮ್ಯ |
ಕಾಳಾಹಿವೇಣಿ ಸುಶೀಲೆ ಭದ್ರಾದೇವಿ | ಬಂದಳಾಗ ||೩೭೭||

ಲೋಲಲೋಚನೆ ಮುದ್ದು ನೀಲೆ ಸಂಭ್ರಮದಿಂದ | ಬಂದಳಾಗ || ಸ್ತ್ರೀ |
ಜಾಲವನಿದಿರ್ಗೊಂಡು ಸತ್ಯಭಾಮಾದೇವಿ | ಬಂದಳಾಗ ||೩೭೮||

ಕಂದ

ಸಿರಿ ಮೊದಲಾದಂಗನೆಯರು |
ಕರುಣಾಕರ ಕೃಷ್ಣನಂಘ್ರಿಕಮಲದ್ವಯಕಂ ||
ಕರವಂ ಮುಗಿದುರುತರ ಸುರ |
ತರುವಂ ಪೂಜಿಸುತಮಿರ್ದರತಿ ಸಂಭ್ರಮದೊಳ್ ||೩೭೯||

ರಾಗ ಢವಳಾರ ಏಕತಾಳ

ನಾರಿಯರೆಲ್ಲರು ನೆರೆದು | ಪಾರಿಜಾತಕೆ ಕೈಯ ಮುಗಿದು |
ಧಾರಿಣಿ ಯಮರರ ಮಂತ್ರವಿಧಾನದಿ | ಭೂರುಹಕನುಪಮ ಹೇಮದ ಕಲಶದಿ |
ವಾರಿಯ ತುಂಬುತಲಭಿಷೇಕವ ವಿ |
ಸ್ತಾರದಿಂದೊಲಿದು ಮಾಡಿದರು || ಶೋಭಾನೆ ||೩೮೦||

ನವ್ಯವಸ್ತುವನಲಂಕರಿಸಿ | ದಿವ್ಯ ವಿಭೂಷಗಳ ತೊಡಿಸಿ |
ಕಾವ್ಯಾಗುರುಮುಖ್ಯ ಮದ ಸಂಕುಲ | ನವ್ಯಸುಪುಷ್ಪಫಲಾನ್ವಿತ ಮುನಿಕುಲ |
ಭವ್ಯ ಸುರಾಗವಿದೆನುತಲಿ ಪೊಗಳುತ |
ನವ್ಯಕ್ತವಾಗಿ ಪೂಜಿಸಿದರು || ಶೋ ||೩೮೧||

ಗಂಧಕುಂಕುಮಾಕ್ಷತೆಯಿಂದ | ಮಂದಾರಕುಸುಮಗಳಿಂದ |
ಚಂದದಿ ಧೂಪ ಸುದೀಪಗಳಿಂದಲಿ | ಕುಂದದೆ ಭಕ್ತಿಯೊಳರ್ಚಿಸಿ ಮುದದಲಿ |
ತಂದಗಣಿತ ನೈವೇದ್ಯದ ರಾಶಿಯ |
ಮುಂದಿಟ್ಟು ಅರ್ಪಿಸಿದರೊಲವಿಂದ || ಶೋ ||೩೮೨||

ಜಂಭಾರಿ ಸತಿಯಿಂದ ಶಚಿಯಿಂದ | ರಂಭಾದಿ ನಾರಿಯರಿಂದ |
ಅಂಬರಲೋಕದಿ ಸಂತಸ ಪೂಜಿಸಿ | ಕೊಂಬ ಮಹೀರುಹವೆನುತ ಕೀರ್ತಿಸಿ |
ತಾಂಬೂಲವನರ್ಪಿಸಿ ಸಂತೋಷದೊ |
ಳಂಬುಜಾಕ್ಷಿಯರು ಪೂಜಿಸಿದರು || ಶೋ ||೩೮೩||

ಭೂರಿ ಮೌಕ್ತಿಕ ರತ್ನತತಿಯ | ಮೇರುವೆ ಕುರುಜಿನಾರತಿಯ |
ಚಾರುತರದ ಕರ್ಪೂರಸುನಿರ್ಮಲ | ಸಾರಸುಸೌರಭ್ಯ ಮೂರು ಜಗಂಗಳ |
ಪೂರಯಿಸಲು ಶತ ನೀರಾಜನಗಳ |
ನೀರೆಯರೆಲ್ಲ ಬೆಳಗಿದರು || ಶೋ ||೩೮೪||

ಪಾಡುತ ಪ್ರದಕ್ಷಿಣೆಗಳನು | ಮಾಡುತ ನಮಸ್ಕಾರವನು |
ನೋಡುತ ವೃಕ್ಷದ ಸೌಂದರ್ಯಗಳನು | ಬೇಡಿದರನುಪಮ ಕಾಮಿತಫಲವನು |
ನೀಡಿದ ರಖಿಲ ಸುವಾಸಿನಿನಿವಹಕೆ |
ಪ್ರೌಢೆಯರೆಲ್ಲ ಬಾಗಿನವ || ಶೋ ||೩೮೫||

ಗೀತ ಸುವಾದ್ಯ ನೃತ್ಯದಲಿ | ಜಾತಿ ಹೆಂಗಳ ಶೋಭಾನದಲಿ |
ಭೂತಳಮರದ ಮಂತ್ರಸುಘೋಷದಿ | ಸಾತಿಶಯದ ಸುರದುಂದುಭಿನಾದದಿ |
ಶಾತೋದರಿಯರು ಮಂತ್ರಸುಮವ ಸಂ |
ಪ್ರೀತಿಯಿಂದರ್ಪಿಸಿ ನಲಿದರು || ಶೋ ||೩೮೬||

ಭಾಮಿನಿ

ತರುಣಿಯರು ನಲವಿಂದ ನಿರ್ಜರ |
ತರುವನತಿ ಭಕ್ತಿಯೊಳು ಪೂಜಿಸಿ |
ಪರಮ ಹರುಷವ ತೋರಿ ಶೂರಕುಮಾರ ವಿಭವದಲಿ ||
ಧರಣಿಪರ ಸತ್ಕರಿಸಿ ಪೃಥ್ವೀ |
ಶ್ವರರ ಮನ್ನಿಸಿ ಬಂಧುಗಳನುಪ |
ಚರಿಸಿದನು ಬಹುವಿಧದೊಳವನೀಪಾಲ ಕೇಳೆಂದ ||೩೮೭||

ಕಂದ

ಸದಮಲ ಗಾತ್ರೆಯರನುಪಮ |
ವಧುಗಳ್ ಪದಿನಾರು ಸಾವಿರದ ಮೇಲೆ ಶತಂ |
ಸದನದೊಳಿರೆ ತತ್ ಕ್ಷಣದೊಳ್ |
ಮದುವೆಗೆ ಮದುವಣಿಗನಾದನಬ್ಜದಳಾಕ್ಷಂ ||೩೮೮||

ದ್ವಿಪದಿ

ಆ ಪೇಳೆಯೊಳೆದ್ದು ದೇವಕಿಯು ಮುದದಿ |
ಭಾವೆಯರನೊಡಗೊಂಡು ಬಹಳ ಸಂಭ್ರಮದಿ ||೩೮೯||

ತೋರುಮುತ್ತುಗಳಿಂದ ತುಂಬಿದರು ಹಸೆಯ |
ಚಾರು ಪೀಟವನಿಟ್ಟು ಚೆಲುವಿಂದ ಹರಿಯ ||೩೯೦||

ಕರೆಯಲ್ಕೆ ಕಮಲಾಕ್ಷಿ ಕಾಮಿನಿಯರುಗಳ |
ಪರಿವೇಷದಿಂ ಬಂದು ಪೊಳೆವ ರತ್ನಗಳ ||೩೯೧||

ಹಸೆಮಣೆಯೊಳೊಪ್ಪಿರಲು ಹಂಸಗಮನೆಯರು |
ಕುಶಲದಾರತಿಯ ಸಂತಸದೊಳೆತ್ತಿದರು ||೩೯೨||

ರಾಗ ಢವಳಾರ ತ್ರಿವುಡೆತಾಳ

ಮುರನರಕರ ಮಡುಹಿದ ಮಹಿಮಗೆ | ಧರಣಿಯ ಮೊಮ್ಮನ ಪೊರೆದಾತಗೆ |
ಸುರಪಾರಿಜಾತವ ತಂದವಗೆ | ಸುರತರುಣಿಯರು |
ಕುರುಜಿನಾರತಿಯ | ಬೆಳಗಿರೆ ||೩೯೩||

ವೇದವನುದ್ಧರಿಸಿದ ಮತ್ಸ್ಯಗೆ | ಭೂಧರವನು ತಾಳಿದ ಕೂರ್ಮಗೆ |
ಮೇದಿನಿಯ ತಂದ ವರಹಗೆ | (ವರಹಗೆ) ನರಸಿಂಹಗೆ ಸೊಬಗಿನ |
ಸಾದರದಾರತಿಯ | ಬೆಳಗಿರೆ ||೩೯೪||

ವಾಮನರೂಪಗೆ ಭಾರ್ಗವನಿಗೆ | ರಾಮಗೆ ಬಲನಿಗೆ ಕೃಷ್ಣನಿಗೆ ನಿ |
ಸ್ಸೀಮ ಬೌದ್ಧಂಗೆ ಕಲ್ಕ್ಯನಿಗೆ | ನವರತ್ನದಿ ರಂಜಿಪ |
ಹೇಮದಾರತಿಯ | ಬೆಳಗಿರೆ ||೩೯೫||

ಶ್ರೀಲಲನೆಗೆ ಭಾಮಾಸತಿಗೆ | ನೀಲಗೆ ಭದ್ರೆಗೆ ಲಕ್ಷಣೆಗೆ |
ಕಾಳಿಂದಿಗೆ ಜಾಂಬವನ ಕುಮಾರಿಗೆ | ಲೋಲಾಂಬಕಿ ಮಿತ್ರವಿಂದೆಗೆ ಶೀಲೆಗೆ |
ಬಾಲೆಯರೆಲ್ಲರು ನೆರೆವುತ ಹರುಷದಿ | ನೀಲದಾರತಿಯ ಬೆಳಗಿರೆ ||೩೯೬||

ಹದಿನಾರು ಸಾವಿರ ಗಣನೆಯ | ವಧುಗಳಿಗೆ ಶತಸಂಖ್ಯಾಶಶಿ |
ವದನೆಯರಿಗೆಲ್ಲ ಮುದದಿಂದ | ಮಾಧವಕೃಷ್ಣಗೆ |
ಪದುಮದಾರತಿಯ | ಬೆಳಗಿರೆ ||೩೯೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಈ ತೆರದೊಳಬುಜಾಕ್ಷ ಸಂತತ |
ಸಾತಿಶಯದಿಂದಿರ್ದನೆಂಬುದ |
ಭೂತಳೇಶ ಪರೀಕ್ಷಿತಗೆ ಮುನಿ | ನಾಥನೊಲಿದು ||೩೯೮||

ಹರುಷರಸದಲಿ ಪೇಳ್ದ ಕಥೆಯನು |
ಸುರನರೋರಗಲೋಕವಿನುತೆಯ |
ವರಮಹಾಕುಟಜಾದ್ರಿ ಸದನೆಯ | ಕರುಣದಿಂದ ||೩೯೯||

ಮಹಿಯ ಸುಮನಸಕುಲದೊಳುದಿಸಿದ |
ಮಹದಧಿಕಮತಿ ವೆಂಕಣಾರ್ಯನ |
ಮಹಿಳೆ ದೇವಮ್ಮನ ತನೂದ್ಭವ | ಮಹಿತ ಸುಗುಣ ||೪೦೦||

ನೀತಿಯುತ ಚನ್ನಯ್ಯ ವರ ಸಹ |
ಜಾತ ಸುಬ್ಬನು ಪೇಳಿದನು ಶ್ರೀ |
ನಾಥನನುಪಮ ಕಥೆಯನಿದನೀ | ಭೂತಳದಲಿ ||೪೦೧||

ಹೇಳಿ ಕೇಳಿದವರಿಗೆ ಕಾಮ್ಯವ |
ಲೋಲಲೋಚನೆ ಭಕ್ತಜನ ಪರಿ |
ಪಾಲೆ ಮೂಕಾಂಬಿಕೆಯು ಸಂತತ | ಪಾಲಿಸುವಳು ||೪೦೨||

ಮಂಗಲ

ರಾಗ ಅಹೇರಿ ಏಕತಾಳ

ಮಂಗಲಂ | ಜಯ | ಮಂಗಲಂ ||ಪ||

ಅಜಸುರ ಮನುಮುನಿವಂದಿತೆಗೆ |
ತ್ರಿಜಗತ್ಪಾಲೆಗೆ ಪಾರ್ವತಿಗೆ ||
ನಿಜಪದಭಜಕವ್ರಜವನು ರಕ್ಷಿಪ |
ಭುಜಗಾಭರಣೆಗೆ ಶಾಂಭವಿಗೆ || ಮಂಗಲಂ ||೪೦೩||

ಅಗಣಿತ ಮಹಿಮೆಗೆ ಸುರನುತಗೆ |
ಮೃಗಧರವಕ್ತ್ರೆಗೆ ಮಂಗಲೆಗೆ ||
ಖಗಭಾಸೆಗೆ ನಿಗಮಾಗಮ ವೇದ್ಯೆಗೆ |
ಸುಗುಣೆ ಸುಶೀಲೆಗೆ ಚಂಡಿಕೆಗೆ || ಮಂಗಲಂ ||೪೦೪||

ಶಂಖಸುದರ್ಶನಧಾರಿಣಿಗೆ |
ಪಂಕಜಪಾಣಿಗೆ ಪಾವನೆಗೆ ||
ಕಿಂಕರನಿವಹವ ಸಂತತ ಸಲಹುವ |
ಶಂಕರಿ ಶ್ರೀಮೂಕಾಂಬಿಕೆಗೆ || ಮಂಗಲಂ ||೪೦೫||

ಯಕ್ಷಗಾನ ಪಾರಿಜಾತ ಪ್ರಸಂಗ ಮುಗಿದುದು