ದೇವರು ತನ್ನೆಳಮೆಯಲ್ಲಿ
ಏನೇನೋ ಗೀಚಿದನು,
ಬೆಳೆದ ಮೇಲೆ ಬರೆದ ಕೃತಿಯ
ಮುಂದೆ ಹೇಗೆ ತರುವುದಿವನು
ಎಂದು ನಾಚಿ ಕೂತನು.

ಮುಂದೆ ಲೋಕ ಅವನ ಕೃತಿಗೆ
ಮೆಚ್ಚಿ ಹೊಗಳಿ ತಲೆಯ ತೂಗೆ,
ಇಂದು ಮೆಲ್ಲನವನ ಹಳೆಯ
ಎಳೆಯಂದಿನ ಕೃತಿಗಳ,
ತಂದು ಮುಗಿಲ ಶಾಲೆಯಲ್ಲಿ
ಪ್ರದರ್ಶನಕೆ ಇಟ್ಟನೇನೊ
ಎನ್ನುವಂತೆ ವಿಕೃತ ಮೋಡ
ಬಾನಿನಲ್ಲಿ ತೇಲಿವೆ !

ಯಾರೊ ಬಂದು ಮುಗಿಲ ಕೆರೆಯ
ಸಂಜೆ ತೂಬನೆತ್ತಲು,
ಮುಗಿಲ ಕೆರೆಯ ಬೆಳಕು ನೀರು
ಸಂಜೆ ತೂಬಿನಾಚೆಯಿಂದ
ಹರಿದು ಹೋಯಿತೆನ್ನಲು,
ಅದರೊಳುಳಿದ ಕೊಳಕು ನೀರು
ನಿಂತ ಹಾಗೆ ಸಂಜೆಗೆಂಪು
ದಿಕ್ತಳದಲಿ ನಿಂತಿದೆ
ನಗರ ಮೃಗದ ಟಾರ್ ಬೀದಿಯ
ನಾಲಗೆ ಅದ ನೆಕ್ಕಿದೆ !

ಮನೆಯ ಮೂಲೆಯಲ್ಲಿ ಕೊರಗು-
ತಿರುವ ಮುದುಕಿಯಂದದಿ,
ಅದೋ ದೂರದಲ್ಲಿ ಮರದ
ತೋಪು ನರಳಿ ನಡುಗಿದೆ.

ಈ ಪಾರ್ಕಿನ ಮರಮರವೂ
ನೂರು ಹಕ್ಕಿಯಿಂಚರದಲಿ
ಗಿಲಿಗಿಚ್ಚಿಗಳಾಗಿವೆ !
ಇಳಿಯುವಿರುಳ ಕಾಡಿಗೆಯಲಿ
ಮರ ಮೆಲ್ಲನೆ ಕರಗಿವೆ.