ತಂದೆ ವಯಸ್ಸು ೪೫. ಎಚ್..ಎಲ್. ಕಾರ್ಖಾನೆಯಲ್ಲಿ ಎಂಜಿನಿಯರ. ಕೆಲವು ವರ್ಷಗಳಿಂದ ಅವರ ಆರೋಗ್ಯ ಕ್ರಮೇಣ ಹದಗೆಡುತ್ತಿದೆ. ಮೊದಲು ಅವರ ಬಲಗೈಯಲ್ಲಿ ಸಣ್ಣ ಪ್ರಮಾಣದ ನಡುಕ ಕಂಡುಬಂದಿತು. ಮುಂದಿನ ಆರು ತಿಂಗಳಲ್ಲಿ ಎಡಗೈಯಲ್ಲೂ ನಡುಕ ಪ್ರಾರಂಭವಾಗಿರುವುದಲ್ಲೆ, ಕೈ ಕಾಲು ಸೆಳೆತ, ನಡುಕದ ಹೆಚ್ಚಳದಿಂದ ಓಡಾಡುವುದೇ ಕಷ್ಟವಾಗುತ್ತಾ ಬಂದಿದೆ. ಒಮ್ಮಿಂದೊಮ್ಮೆಗೇ ಬಿದ್ದುಬಿಡುತ್ತಾರೆ. ಯಾವಾಗಲೂ ಬಾಯಲ್ಲಿ ಜೊಲ್ಲು ಸುರಿಯಲಾರಂಭಿಸುತ್ತದೆ. ಹಿಂದೆ ಮಧ್ಯ ಸೇವನೆಯನ್ನು ಮಾಡುತ್ತಿದ್ದರು. ಈಗ ಕೆಲವೊಮ್ಮೆ ಸಿಡುಕು. ಮನಸ್ಸಿನ ತಾಳ್ಮೆಯನ್ನು ಬೇಗ ಕಳೆದುಕೊಳ್ಳುತ್ತಾರೆ. ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿಗೆ ಕರೆದೊಯ್ದು ಪರೀಕ್ಷಿಸಿದಾಗ ಪಾರ್ಕಿನ್ಸೋನಿಯನ್ ಸಿಂಡ್ರೋಮ್ ಎಂದು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಇದು ಮನೋದೈಹಿಕ ಬೇನೆಯೇ? ಮುಂದೆ ಪೂರ್ಣವಾಗಿ ವಾಸಿಯಾಗುವ ಮಾನಸಿಕ ಖಾಯಿಲೆಯೇ?

ಪಾರ್ಕಿನ್‌ಸೋನಿಯನ್ ಖಾಯಿಲೆ ಪ್ರಮುಖವಾಗಿ ನರಮಂಡಲದ ಖಾಯಿಲೆ. ಇದರಲ್ಲಿ ಕೆಲವು ಮಾನಸಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ನಿಮಗೆ ಈ ರೀತಿಯ ಅನುಮಾನ ಉಂಟಾಗಿರುವುದು ಸಾಧ್ಯ. ಜೇಮ್ಸ್ ಪಾರ್ಕಿನ್‌ಸನ್ ಎನ್ನುವ ವಿಜ್ಞಾನಿ ೧೮೧೭ ರಲ್ಲಿ ಈ ರೋಗ ಪ್ರಕಾರವನ್ನು ಗುರುತಿಸಿ ವೈದ್ಯ ವಿಜ್ಞಾನ ಪ್ರಪಂಚದ ಅರಿವಿಗೆ ತಂದನು. ಈ ಖಾಯಿಲೆಯನ್ನು ಪ್ರಮುಖವಾಗಿ ಸ್ನಾಯು ಕಾರ್ಯವೈಖರಿಯಲ್ಲಿ ಏರುಪೇರು ಉಂಟಾಗುವುದು. ಇದರಿಂದಾಗಿ ಸ್ನಾಯು ಚಲಾವಣೆ ನಿಧಾನಗತಿಯಲ್ಲಿ ಮುಂದುವರೆದು ಸ್ನಾಯು ಬಿಗಿತ, ಸೆಳೆತ, ಕೈಕಾಲು ನಡುಕ, ಮುಖ ಮರಗಟ್ಟುವಿಕೆ, ಮಾಂಸ ಖಂಡಗಳ ಚಟುವಟಿಕೆ ನಶಿಸುವುದು, ನಿಧಾನಗತ, ತೊಡರುಮಾತು, ಭಾವನಾತ್ಮಕತೆ ಈ ರೋಗ ಪ್ರಕಾರದ ಪ್ರಮುಖ ಲಕ್ಷಣಗಳು.

ಈ ಅವಸ್ಥೆಯಿಂದ ನರಳುತ್ತಿರುವ ರೋಗಿಯ ಮುಖಭಾವ ಹಾಗೂ ಆತನ ನಡಿಗೆಯನ್ನು ಗಮನಿಸುತ್ತಲೇ ರೋಗ ನಿರ್ಧಾರ ಸಾಧ್ಯ. ಮುಖದಲ್ಲಿರುವ ನರಿಗೆಗಳು ಮಾಯವಾಗುತ್ತವೆ. ಕಣ್ಣು ದಿಟ್ಟಿಸಿ ನೋಡಿದ ಹಾಗೆ, ಹೆಚ್ಚು ಕಾಲ ತೆರೆದುಕೊಂಡೇ ಇದ್ದು ಕೆಲವೊಮ್ಮೆ ಮಾತ್ರ ಪಿಳುಕಿಸುತ್ತದೆ. ಮುಖಭಾವವನ್ನು ಪ್ರಕಟಿಸುವ ಸ್ನಾಯು ಬಿಗಿತದಿಂದ ಮುಖ ಕಪ್ಪು ಹಲಗೆಯ ಹಾಗೆ ದೃಢವಾಗಿ ಕಾಣಿಸುತ್ತದೆ. ಸ್ನಾಯು ಬಿಗಿತದಿಂದ ಬೆನ್ನು ಬಾಗಿ ಕೈ ಕಾಲು ಚೊಟ್ಟವಾಗಿ ವ್ಯಕ್ತಿ ಕಷ್ಟಪಟ್ಟು ನಡೆದಾಡುತ್ತಾನೆ. ಕತ್ತು ತಿರುಗಿಸಲು ಆಗುವುದಿಲ್ಲ. ಕೈ ಬೆರಳು ಕೊಕ್ಕೆ ಹಾಕಿಕೊಳ್ಳುವುದಲ್ಲದೆ ಬೆರಳುಗಳು ಮಣಿ ಪೋಣಿಸುವ ಮತ್ತು ತಿರುಗಿಸುವ ಹಾಗೆ ಒಂದಕ್ಕೊಂದು ನಿಧಾನವಾಗಿ ಸ್ಪಂದಿಸುತ್ತಾ ಇರುತ್ತದೆ. ಬರವಣಿಗೆ ಅಸಾಧ್ಯ. ಕೈ ಅದುರಬಹುದು. ಅನ್ನವನ್ನು ಜಗಿಯುವಾಗ, ನುಂಗುವಾಗ ಉಂಟಾಗುವ ಸೆಳೆತ, ಪಚನ ಪ್ರಾರಂಭ ಕ್ರಿಯೆಯನ್ನು ನಿಧಾನಿಸುವುದಲ್ಲದೆ ಕಷ್ಟಕರ ಅನುಭವನ್ನಾಗಿ ಮಾಡುತ್ತದೆ. ಮಾತಿನಲ್ಲಿ ತೊದಲು, ಏಕತಾನತೆ. ಸ್ವರ ಕೆಳಮಟ್ಟದಲ್ಲಿದ್ದು, ಏರಿಳಿತ ಅಸಾಧ್ಯವಾಗುತ್ತದೆ. ಸೂಜಿ ಪೋಣಿಸುವುದ, ಇಸ್ಪೀಟ್ ಎಲೆ ಕಲೆಸುವುದು, ಶರಟಿನ ಗುಂಡಿ ಹಾಕಿಕೊಳ್ಳುವುದ, ತೆಗೆದುಕೊಳ್ಳುವುದು ಅಸಾಧ್ಯಾವಾಗುತ್ತದೆ. ಅಕ್ಷರ ಬರೆಯುತ್ತಾ ಹೋದ ಹಾಗೆ ಸಣ್ಣದಾಗುತ್ತಾ ಹೋಗುತ್ತದೆ. ನಡೆಯುವಾಗ, ಕಾಲು ಮತ್ತು ಕೈಬಾಗುವಿಕೆ ಸಂಘಟಿತವಾಗದೇ ವ್ಯಕ್ತಿ ಹಿಂದೆ ಅಥವಾ ಮುಂದೆ ಬಿದ್ದುಬಿಡಬಹುದು. ನಡೆಯುವಾಗ ವ್ಯಕ್ತಿ ನಿಆನವಾಗಿ ಪುಟ್ಟ ಹೆಜ್ಜೆ ಹಾಕುತ್ತಾ ಹೋಗುತ್ತಾನೆ. ಏಕಾಏಕಿ ನಿಲ್ಲಲು, ಅಥವಾ ಹಿಂತಿರುಗಲು ಅಸಾಧ್ಯವಾಗಿ ಬಿದ್ದು ಬಿಡುವ ಸಾಧ್ಯತೆಯಿದೆ. ಭೂಮಿಯ ಕೇಂದ್ರಾಕರ್ಷಣೆಗೆ ಆಕರ್ಷಿತನಾಗುತ್ತಿದ್ದಾನೆ ಎನ್ನುವ ರೀತಿಯಲ್ಲಿ ವ್ಯಕ್ತಿ ನಡೆಯುತ್ತಾನೆ. ಕೆಲವೊಂದು ಬಾರಿ ನಡೆಯುವುದು ನಿಧಾನವಾದರೂ ಹೆಚ್ಚು ಶ್ರಮವಿರುವ ಓಟವನ್ನು ವ್ಯಕ್ತಿ ಸಮರ್ಪಕವಾಗಿ ನಿಭಾಯಿಸಬಲ್ಲ. ಕೈಕಾಲು ನಡುಗುವಿಕೆ, ಪ್ರಮುಖವಾಗಿ ಕೈನಡುಗು ಈ ರೋಗದ ಪ್ರಮುಖ ಲಕ್ಷಣ. ಖಾಯಿಲೆ ಸಾಕಷ್ಟು ಬಲಿತ ನಂತರ ಪಕ್ಕೆ ಎಲಬಿನ ನೋವು, ಕೈಕಾಲು ಜೋಮುಗಟ್ಟುವಿಕೆ ಹಾಗೂ ಮಾನಸಿಕ ಅಸಮಾಧಾನ ತೋರ್ಪಡಿಸಬಹುದು. ಭಾವನೆಗಳ ಆವಿಯಾಗುವಿಕೆ, ಮರೆವು, ಖಿನ್ನತೆ ಆತ್ಮಹತ್ಯೆ ಅಭಿಲಾಷೆ, ಪುರಪ್ರಜ್ಞೆ ಈ ಖಾಯಿಲೆಯಲ್ಲಿ ಕಂಡುಬರುವ ಮಾನಸಿಕ ರೋಗದ ಪ್ರಮುಖ ಲಕ್ಷಣಗಳು.

ಈ ರೋಗದ ಮುಖ್ಯವಾದ ಕಾರಣ ನರಮಂಡಲದ, ಅದರಲ್ಲೂ ಮೆದುಳಿನ ನಶಿಸುವಿಕೆ. ನಮ್ಮ ದೇಹಗಳ ನರಪುಂಜದ ಮೂಲಕ ಪ್ರಸರಿಸಿ ಬರುವ ನಿರಂತರ ಕ್ರಯಾಸೂಚಿಗಳ ನರತಂತುಗಳ ಮೂಲಕ ಪ್ರಸರಿಸಿ ಸ್ನಾಯು ಹಿಗ್ಗುವಿಕೆ – ಕುಗ್ಗುವಿಕೆ ಹಾಗೂ ಅವುಗಳ ಸಂಘಟನೆಯನ್ನು ನಿಯಂತ್ರಿಸುತ್ತದೆ. ಈ ಕ್ರಿಯಾಸೂಚಿ ಒಂದು ನರತಂತುವಿನಿಂದ ಮತ್ತೊಂದು ನರತಂತುವಿಗೆ ಹೋಗುವಾಗ ಅವುಗಳ ಕೊನೆಯಲ್ಲಿ ಕೆಲವು ರಸಾಯನಿಕ ಪದಾರ್ಥಗಳು ಉತ್ಪತ್ತಿಯಾಗಿ ಈ ಪ್ರಸರಣ ಕಾರ್ಯಕ್ಕೆ ಸಹಾಯಕಾರಿಯಾಗುತ್ತದೆ. ಇದರಲ್ಲಿ ಡೋಪಮಿನ್ ಎನ್ನುವ ರಸಾಯನಿಕ ವಸ್ತು ಪ್ರಮುಖವಾದುದು. ಈ ರಸಾಯನಿಕ ವಸ್ತುಗಳ ಕೊರತೆಯುಂಟಾದಾಗ ಕ್ರಿಯಾಸೂಚಿಯ ಪ್ರಸರಣೆಗೆ ಅಡೆತಡೆಯುಂಟಾಗಿ ಈ ತೊಂದರೆಗಳಾಗುತ್ತವೆ. ಮುಂದೆ ಮೆದುಳು ನಶಿಸುತ್ತದೆ. ರೋಗಲಕ್ಷಣ ಪ್ರಕಟವಾಗುತ್ತವೆ.

ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಉಂಟು. ಹಿಂದೆ ಬಳಸಲಾದ ಹಲವಾರು ಔಷಧಗಳೊಂದಿಗೆ ಇತ್ತೀಚೆಗೆ ಬಳಕೆಯಲ್ಲಿರುವ ಲಿವೋಡೋವಾ ತುಂಬಾ ಸಹಕಾರಿ. ಅಲ್ಲದೆ ಔಷಧಿ ಅನುಪಯುಕ್ತವಾದರೆ, “ಕ್ರಿಯೋ ಥೆಲಮಾಟಮಿ” ಎನ್ನುವ ಶಸ್ತ್ರ ಚಿಕಿತ್ಸೆಯಿಂದಲೂ ಪರಿಹಾರ ಸಾಧ್ಯ.