ಪಾರ್ವತಿ ಪರಶಿವನ ಪತ್ನಿ. ವಿಶೇಷವಾದ ಅರ್ಥವುಳ್ಳ ಬೇರೆಬೇರೆ ಹಲವು ಹೆಸರುಗಳು ಆಕೆಗೆ ಸಲ್ಲುತ್ತವೆ. ಶಿವನಿಗೆ ‘ಭವ’ ಎಂದೂ ಹೆಸರಿದ್ದು, ಅವನ ಮಡದಿಯಾದುದರಿಂದ ‘ಭವಾನಿ’ ಎನಿಸಿದಳು. ಪರ್ವತರಾಜನ ಮಗಳಾದುದರಿಂದ ‘ಪಾರ್ವತಿ’. ಅದೇ ಅರ್ಥವುಳ್ಳ ಗಿರಿಜೆ, ಶೈಲಜೆ ಎಂದೂ ಅವಳ ಹೆಸರುಗಳು. ನಂಬಿಕೆಯಿಟ್ಟುಕೊಂಡು ಒಳ್ಳೆಯವರಾಗಿ ನಡೆಯುವವರಿಗೆ ಎಲ್ಲ ಬಗೆಯ ಮಂಗಳಗಳನ್ನು ಕರುಣಿಸುವವಳಾಗಿ ಸರ್ವಮಂಗಳ. ಬಾಲ್ಯದಲ್ಲೇ ಆಕೆ ಶಿವಭಕ್ತೆಯಾಗಿದ್ದಳು. ಶಿವನನ್ನು ಧ್ಯಾನಿಸಲು, ಜಪಮಾಡಲು ಕುಳಿತಳೆಂದರೆ, ಎಷ್ಟು ಹೊತ್ತಾದರೂ ಏಳುತ್ತಿದ್ದಿಲ್ಲ. ಇದರಿಂದ ಅವಳ ತಾಯಿ ಮೇನೆ ಬೇಸತ್ತು ‘ಎಲೈ ಪಾರ್ವತಿಯೇ ತಪಸ್ಸು ಬೇಡ’ ಎನ್ನುತ್ತಿದ್ದಳು. ಇದರಿಂದಲೇ ಮುಂದೆ ಅವಳಿಗೆ ‘ಉಮಾ’ ಎಂಬ ಹೆಸರೂ ಬಂತು ಸಂಸ್ಕೃತದಲ್ಲಿ ‘ಉ’, ಎಂದರೆ ‘ಎಲೈ’ ಎಂತಲೂ ‘ಮಾ’ ಎಂದರೆ ‘ಬೇಡ’ ಎಂತಲೂ ಅರ್ಥ. ದೊಡ್ಡವಳಾದ ಮೇಲಂತೂ ಆಕೆ ತನಗೆ ಶಿವನೇ ಗಂಡನಾಗಬೇಕೆಂದು ಕಾಡಿನಲ್ಲಿ ಕಠಿಣವಾದ ತಪಸ್ಸನ್ನು ಮಾಡಿದಳು. ಅವಳ ಕೋಮಲ ಶರೀರದ ಶ್ರಮವನ್ನು ನೋಡಲಾರದೇ ಮೇನೆ ಆಗಾಗ ಅವಳ ಹತ್ತಿರಕ್ಕೆ ಬಂದು ಉಮಾ, ಉಮಾ (ಮಗಳೇ, ಬೇಡ!) ಎನ್ನತ್ತಿದ್ದಳಂತೆ. ಮನುಷ್ಯಳಾಗಿ ಹುಟ್ಟಿದರೂ ಸಾಧನೆಯಿಂದ ಶಿವನ ಮಡದಿಯಾಗಿ ಮಹಾದೇವಿಯಾದ ಪಾರ್ವತಿಯ ಜೀವನದ ಕಥೆ ಯಾರಿಗೆ ತಾನೇ ಮೆಚ್ಚಿಕೆಯಾಗದು?

ಹಿರಿಯರಲ್ಲಿ ಪ್ರೀತಿ ವಿಧೇಯತೆಗಳು, ಸಂಪ್ರದಾಯದಲ್ಲಿ ನಿಷ್ಠೆ, ದೃಢ ನಿಶ್ಚಯ, ಶಿವಭಕ್ತಿ, ಕಷ್ಟಪಡುತ್ತಿರುವವರಲ್ಲಿ ಕರುಣೆ, ಕೈಗೊಂಡ ಒಳ್ಳೆಯ ಕೆಲಸ ಕೈಗೂಡುವವರೆಗೆ ಎಡೆಬಿಡದೆ ಸಾಧನೆ – ಇವುಗಳಿಂದ ಕೂಡಿದವಳು ಪಾರ್ವತಿ. ಈ ಕಥೆಯನ್ನೇ ಸಂಸ್ಕೃತದಲ್ಲಿ ವ್ಯಾಸರು ಶಿವ ಪುರಾಣದಲ್ಲಿ ಹೇಳಿದ್ದಾರೆ. ಕಾಳಿದಾಸ ಕವಿ ‘ಕುಮಾರ ಸಂಭವ’ ಎಂಬ ಕಾವ್ಯವಾಗಿ ಬರೆದಿದ್ದಾನೆ. ಕನ್ನಡದಲ್ಲಿ ಹರಿಹರನೆಂಬ ಕವಿ ‘ಗಿರಿಜಾ ಕಲ್ಯಾಣ’ ಎಂಬ ಚಂಪೂ ಕಾವ್ಯವಾಗಿ ರಚಿಸಿದ್ದಾನೆ.

ಪರ್ವತರಾಜಮೇನೆ

ನಮ್ಮ ಭಾರತ ದೇಶದ ಬಡಗಣ ಭಾಗದಲ್ಲಿ ಹಿಮಾಲಯ ಪರ್ವತವಿದೆ. ಅದು ಜಗತ್ತಿನಲ್ಲೇ ಹೆಚ್ಚು ಎತ್ತರವಾಗಿದ್ದು ಪೂರ್ವದಿಂದ ಪಶ್ಚಿಮಕ್ಕೆ ಹಲವು ಸಾವಿರ ಮೈಲಿಗಳ ಉದ್ದಕ್ಕೆ ಚಾಚಿದೆ. ಬಹಳ ಹಿಂದಿನ ಕಾಲದಿಂದಲೇ ಋಷಿಗಳ ತಪೋ ಭೂಮಿಯಾಗಿದೆ. ದೇವತೆಗಳು, ಗಂಧರ್ವರು, ಯಕ್ಷರು, ಕಿನ್ನರರು ಸಂಚರಿಸುವ ವಿಹರಿಸುವ ಪ್ರದೇಶ ಎಂದು ಭಾರತೀಯರು ನಂಬುತ್ತಾರೆ. ಬಗೆಬಗೆಯ ಅಮೂಲ್ಯ ರತ್ನಗಳಿಗೆ ಜ್ಯೋತಿರ್ಮತಿಯಂತಹ (ಬೆಳಕು ಕೊಡುವ) ಗಿಡಗಳಿಗೆ ತವರಾಗಿದೆ. ಪರಶಿವನ ಕೈಲಾಸವಿರುವುದೂ ಅಲ್ಲಿಯೇ ಎಂದು ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ನಂಬಿಕೆ.

ಆ ಹಿಮಾಲಯದ ತಪ್ಪಲಿನಲ್ಲಿ ನಿರ್ಮಲವಾಗಿ ಹರಿಯುವ ಗಂಗಾನದಿ. ಆಚೆ ಈಚೆ ಋಷಿಗಳ ಆಶ್ರಮಗಳು. ಸಮೀಪದಲ್ಲಿಯೇ ಪುಣ್ಯ ಸಂಪತ್ತಿನಿಂದ ತುಂಬಿದ ಔಷಧಿಪ್ರಸ್ಥ ಎಂಬ ಪಟ್ಟಣ. ಅಲ್ಲಿ ಪರ್ವತರಾಜನು ಆಳುತ್ತಿದ್ದನು. ಹಿಮಾಲಯಕ್ಕೆಲ್ಲಾ ಒಡೆಯನಾದುದರಿಂದ ಅವನನ್ನು ‘ಹಿಮವಂತ’ ನೆಂದು ಕರೆಯುತ್ತಿದ್ದರು. ಅವನು ಶಿವಭಕ್ತ. ಸಾಧು ಸತ್ಪುರಷರನ್ನು ಋಷಿಗಳನ್ನು ವಿಶೇಷವಾಗಿ ಗೌರವಿಸುತ್ತ. ಪ್ರಜೆಗಳನ್ನು ನ್ಯಾಯ-ಧರ್ಮಗಳಿಂದ ಕಾಪಾಡುತ್ತಿದ್ದನು. ಗಿರಿರಾಜ, ಶೈಲರಾಜ ಎಂತಲೂ ಅವನನ್ನು ಕರೆಯುತ್ತಿದ್ದರು.

ಗಿರಿರಾಜನ ಮಡದಿ ಮೇನಾದೇವಿ. ಆಕೆ ಪತಿವ್ರತೆ, ಸತ್ಯವಂತೆ, ಶಾಂತಸ್ವಭಾವದವಳು.

ಕೆಲವು ಕಾಲ ಕಳೆಯಲು, ಅವರಿಗೆ ಮೈನಾಕ ಎಂಬ ಮಗನಾದನು.

ಮಗಳ ಬಯಕೆ

ಹೀಗಿರಲು, ಮೇನಾದೇವಿ ತನಗೊಬ್ಬಳು ಹೆಣ್ಣು ಮಗು ಬೇಕೆಂದು ಆಸೆಪಟ್ಟಳು. ಶೀಲ, ಸೌಂದರ್ಯ, ವಿದ್ಯೆ, ವಿವೇಕಗಳುಳ್ಳ ಮಗಳಾಗಬೇಕೆಂದು ಅವಳ ಬಯಕೆ. ಪರಶಿವನ ಪತ್ನಿಯೇ ತನಗೆ ಪುತ್ರಿಯಾಗಬೇಕು ಎಂಬುದು ಅವಳ ಮಹತ್ವಾಕಾಂಕ್ಷೆ. ಅದಕ್ಕಾಗಿ ಶಿವನ ಮಡದಿ ಗೌರೀದೇವಿಯನ್ನು ಕುರಿತು ತಪಸ್ಸು ಮಾಡಲು ನಿಶ್ಚಯಿಸಿದಳು. ಗಿರಿರಾಜ ಮೊದಲೇ ಶಿವಭಕ್ತ. ಆದುದರಿಂದ ಅವನ ಅಪ್ಪಣೆಯನ್ನು ಪಡೆದುಕೊಳ್ಳಲು ಮೇನೆಗೆ ಅಷ್ಟೇನೂ ಕಷ್ಟವಾಗಲಿಲ್ಲ. ಗಂಡನಿಂದ ಒಪ್ಪಿಗೆ ಪಡೆದು ಮೇನಾದೇವಿ ಒಂದು ಪ್ರಶಾಂತವಾದ ಸ್ಥಳಕ್ಕೆ ಹೋದಳು. ಅಲ್ಲಿ ಒಂದೇ ಮನಸ್ಸಿನಿಂದ ತಪಸ್ಸು ಮಾಡಿ ದಾಕ್ಷಾಯಿಣಿಯನ್ನು ಒಲಿಸಿದಳು. ಆಕೆ ಮೇನೆಗೆ ಕಾಣಿಸಿಕೊಂಡಳು. “ನಾನು ನಿನ್ನ ಬಸಿರಿನಲ್ಲಿ ಬರುತ್ತೇನೆ.” ಎಂದು ಮಾತುಕೊಟ್ಟಳು.

ಸ್ವಲ್ಪ ಕಾಲದಲ್ಲಿಯೇ ಮೇನೆ ಗರ್ಭಿಣಿಯಾದಳು. ಒಂದು ಶುಭದಿನ ಹೆಣ್ಣುಮಗುವನ್ನು ಹೆತ್ತಳು. ಅವಳು ಬಯಸಿದಂತೆಯೇ ಆಯಿತು. ಹೂವಿನ ಮಳೆ ಸುರಿಯಿತು. ತಂಪಿನ ಕಂಪಿನ ಗಾಳಿ ಮೆಲ್ಲಗೆ ಬೀಸಿ ಸಂತೋಷಪಡಿಸಿತು. ಮಂಗಳ ವಾದ್ಯಗಳು ಮೊಳಗಿದವು. ಗಾಯಕಿಯರು ಮಾಡಿದರು. ಗಿರಿರಾಜನು ತನ್ನ ಕೈ ದಣಿಯುವಂತೆ, ಮನ ತಣಿಯುವಂತೆ ಎಲ್ಲರಿಗೂ ದಾನಧರ್ಮಗಳನ್ನು ಮಾಡಿದನು.

ಅಚ್ಚರಿಯ ಮಗು

ಮಗು ಹುಟ್ಟಿ ಒಂದೆರಡು ದಿನ ಕಳೆದರೂ ಅದು ಬಾಯಿ ಬಿಡದು! ಕಣ್ಣು ತೆರೆಯದು! ಮೊಲೆಯುಣ್ಣದು! ಏನು ಮಾಡುವುದು ಎಂಬುದೇ ಎಲ್ಲರ ಯೋಚನೆ. ಕುಲಗುರುಗಳಾದ ಗರ್ಗಮುನಿಗಳು ಹೇಳಿದಂತೆ ಪರ್ವತರಾಜನು ಮಗುವಿಗೆ ಶಿವನ ಮೂರ್ತಿಯನ್ನು ದರ್ಶನ ಮಾಡಿಸಿ, ಕಣ್ಣು ತೆರೆಯಿಸಿದನು. ಚಿಕಿತ್ಸೆ ಮಾಡಿಸಿದನು. ಮಗು ಕಣ್ಣು ತೆರೆಯಿತು, ದೇವರಿಗೆ ಕೈ ಮುಗಿಯಿತು. ದೇವರ ಪ್ರಸಾದವಾಗಿರುವ ಬೆಣ್ಣೆಯನ್ನು ಬಾಯಿಗಿಡಲು, ಅದನ್ನು ತಿಂದಿತು. ಆಮೇಲೆ ಮೊಲೆಯುಣ್ಣತೊಡಗಿತು. ಆ ಮಗುವಿನಲ್ಲಿ ಇಂತಹ ಎಳವೆಯಲ್ಲೇ ಕಾಣಿಸಿದ ಶಿವಭಕ್ತಿ ಎಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿತು. ಮುಂದೆ ಇವಳು ಶಿವನನ್ನು ಒಲಿಸಿಕೊಳ್ಳುತ್ತಾಳೆ ಎಂದು ಜನರು ಆಡಿಕೊಂಡರು.

ಅವಳ ನಾಮಕರಣದ ಮಹೋತ್ಸವ ಬಹಳ ಸಂಭ್ರಮದಿಂದ ನಡೆಯಿತು. ‘ಪಾರ್ವತಿ’ ಎಂದು ಮಗಳಿಗೆ ಹೆಸರಿಟ್ಟರು. ದಿನಗಳು, ತಿಂಗಳುಗಳು ಕಳೆದಂತೆ ಶಿವನಾಮವೇ ಅವಳ ಬಾಯಿಗೆ ಬಂದ ಬಾಲಾಕ್ಷರಗಳು. ಆಕೆ ತನ್ನ ಮನಸ್ಸಿನೊಳಗೆ ಶಿವನನ್ನು ಕಂಡಳೋ ಎಂಬಂತೆ, ಆಗಾಗ ಕಣ್ಣು ಮುಚ್ಚುತ್ತಿದ್ದಳು, ತಾನಾಗಿ ನಗುತ್ತಿದ್ದಳು, ಉತ್ಸಾಹವನ್ನೂ ಸಂತೋಷವನ್ನೂ ಪ್ರಕಟಿಸುತ್ತಿದ್ದಳು. ಇನ್ನೂ ಬೆಳೆದಾಗ, ಗಂಗಾನದಿಯ ಮರಳ ದಿಣ್ಣೆಗಳಲ್ಲಿ ಶಿವಪೂಜೆಯ ಆಟ, ಚೆಂಡಾಟಗಳಲ್ಲಿ ಆಸಕ್ತಿ ತೋರಿಸುತ್ತಿದ್ದಳು. ಸಕಾಲದಲ್ಲಿ ಆಕೆ ಯೋಗ್ಯ ಗುರುಗಳಿಂದ ವಿದ್ಯೆಯನ್ನು ಕಲಿತಳು. ವಿದ್ಯೆಯೊಂದಿಗೆ ವಿನಯ, ಶೀಲಗಳೂ ಅವಳಲ್ಲಿ ನೆಲಸಿದವು.

ಹಿಂದಿನ ಜನ್ಮದಲ್ಲಿ ಆಕೆ ದಕ್ಷನ ಮಗಳಾಗಿ ದಾಕ್ಷಾಯಿಣಿ ಎಂದು ಪ್ರಸಿದ್ಧಳಾಗಿದ್ದಳು. ಪರಶಿವನ ಮಡದಿಯಾಗಿದ್ದಳು. ತನ್ನ ತಂದೆ ಮಾಡುವ ದೊಡ್ಡ ಯಾಗದ ಸಮಾರಂಭಕ್ಕೆ ಹೋಗಿದ್ದಳು. ಅಲ್ಲಿ ದಕ್ಷನು ಗರ್ವದಿಂದ ಆ ಯಜ್ಞದ ಸಭಯೆ ಮುಂದೆ ಶಿವನನ್ನು ಹೀನಾಯವಾಗಿ ನಿಂದೆ ಮಾಡಿದ್ದನು. ಶಿವನ ಮಡದಿಯಾದ ಆಕೆಗೂ ಅವಮಾನಕರವಾಗಿ ವರ್ತಿಸಿದ್ದನು. ಇದನ್ನು ಸಹಿಸದೆ ಅವಳು ಯೋಗಾಗ್ನಿಗೆ ತನ್ನನ್ನೇ ಆಹುತಿ ಮಾಡಿದ್ದಳು. ಇದೀಗ ಪಾರ್ವತಿಯಲ್ಲಿ ಆ ಹಿಂದಿನ ಜನ್ಮದ ವಿದ್ಯೆಗಳು ತಾನಾಗಿ ಮೂಡಿಬಂದವು. ಆದುದರಿಂದಲೇ ಅವಳು ಬೇಗನೇ ವಿದ್ಯಾವತಿಯಾಗಿ ದೊಡ್ಡವಳಾದಳು. ಒಳ್ಳೆಯ ರೂಪವತಿಯೂ ಆಗಿ ತುಂಬು ಜವ್ವನದಿಂದ ಕಂಗೊಳಿಸಿದಳು.

ಪಾರ್ವತಿಗೆ ಮದುವೆಯ ವಯಸ್ಸಾಯಿತು. ಶಿವಭಕ್ತೆಯಾದ ಮಗಳನ್ನು ಶಿವನಿಗೇ ಕೊಡೋಣ ಎಂದು ಮನಸ್ಸು ಹೇಳುತ್ತಿತ್ತು. ಗಂಡಿನ ಕಡೆಯವರು ಬಂದು ಕೇಳದೆ ಕೊಡುವುದು ಹೇಗೆ? ನೀನು ಇವಳನ್ನು ಮದುವೆಯಾಗುವೆಯಾ ಎಂದು ಕೇಳೋಣವೆ? ಹಾಗೆ ಕೇಳಿದಾಗ ಒಪ್ಪದಿದ್ದರೆ? ಈ ಬಗೆಯ ಸಂಕೋಷ ಪರ್ವತರಾಜನನ್ನು ಕಾಡುತ್ತಿತ್ತು.

ತಪಸ್ವಿ ಶಿವ

ಶಿವನು ಆ ಸಮಯದಲ್ಲಿ ತನ್ನ ಕೈಲಾಸದ ಅರಮನೆಯಲ್ಲಿ ಇರಲಿಲ್ಲ. ಅವನ ಪತ್ನಿ ದಾಕ್ಷಾಯಿಣಿ ದೇಹ ತ್ಯಾಗ ಮಾಡಿದ್ದರಿಂದ ವೈರಾಗ್ಯ ತಾಳಿದ್ದನು. ಯೋಗಿಯಾಗಿದ್ದನು. ಕೈಲಾಸವನ್ನೇ ತೊರೆದು ತಪಸ್ಸು ಮಾಡುವುದಕ್ಕೆ ತಕ್ಕ ಸ್ಥಳವನ್ನು ಹುಡುಕಿಕೊಂಡು ಹಿಮಾಲಯದ ತಪ್ಪಲಿಗೆ ಬಂದು, ಔಷಧಿಪ್ರಸ್ಥದ ಸಮೀಪವೇ ಇದ್ದ ‘ಗಂಗಾವತಾರ’ ಎಂಬ ಪವಿತ್ರ ಸ್ಥಾನವನ್ನು ಸೇರಿದ್ದನು. ಆ ಸ್ಥಳವು ಗಂಗಾ ನದಿಯ ನೀರಿನಿಂದ ಹುಲುಸಾಗಿ ಬೆಳೆದ ದೇವದಾರು ಮರಗಳಿಂದಲೂ ಕಸ್ತೂರಿಯ ಸುವಾಸನೆಯಿಂದಲೂ ಕೂಡಿದ್ದಿತು. ಶಿವನು ಅಲ್ಲಿ ಅಗ್ನಿಯನ್ನು ಪ್ರತಿಷ್ಠೆ ಮಾಡಿ, ಹೊರಗಿನ ಪ್ರಪಂಚವನ್ನೇ ಮರೆತು ಆತ್ಮಧ್ಯಾನ ಮಾಡುತ್ತ ಉಗ್ರವಾದ ತಪಸ್ಸಿನಲ್ಲಿದ್ದನು.

ಇದು ಸತ್ಯ

ಒಂದು ದಿವಸ ಮುನಿಶ್ರೇಷ್ಠರಾದ ನಾರದರು ಔಷಧಿಪ್ರಸ್ಥಪುರಕ್ಕೆ ಬಂದರು. ಜೀವನದಲ್ಲಿ ಮುಂದೇನು ಮಾಡಬೇಕೆಂಬುದು ಹೊಳೆಯದೆ ಯೋಚನೆಯಲ್ಲಿರುವ ಸತ್ಪುರಷರಿಗೆ ಅವರು ಸರಿಯಾದ ದಾರಿಯನ್ನು ತೋರಿಸುತ್ತಿದ್ದರು. ಹಾಗೆಯೇ ಕೆಟ್ಟವರಿಗೆ ತಮ್ಮನ್ನು ತಾವೇ ನಾಶಮಾಡಿಕೊಳ್ಳುವ ಪಥವನ್ನು ಹಿತ ಚಿಂತಕನಂತೆಯೇ ಬಂದು ತಿಳಿಸುವುದೂ ಅವರ ವಾಡಿಕೆ. ಅದಕ್ಕಾಗಿ ಯಾವಾಗಲೂ ಮೂರು ಲೋಕಗಳಲ್ಲಿಯೂ ಸಂಚಾರ ಮಾಡುವುದು ದೇವರನಾಮ ಹಾಡುತ್ತ ಭಕ್ತಿ ಪ್ರಚಾರ ಮಾಡುವುದು ಅವರ ಅಭ್ಯಾಸ. ಅಂತಹ ನಾರದರು ಬಂದಾಗ, ಗಿರಿರಾಜನೂ ಮೇನೆಯೂ ಎದುರುಗೊಂಡರು. ವಂದಿಸಿದರು. ಸತ್ಕರಿಸಿದರು. ಪಾರ್ವತಿಯನ್ನೂ ಕರೆತಂದು ನಮಸ್ಕಾರ ಮಾಡಿಸಿದರು. ಕುಶಲ ಪ್ರಶ್ನೆಗಳಾದವು.

“ಜ್ಞಾನಿಯಾದ ನಾರದರೇ, ನನ್ನ ಮಗಳಾದ ಪಾರ್ವತಿ ಯುವತಿಯಾಗಿದ್ದಾಳೆ. ಇವಳ ಭವಿಷ್ಯವೇನು? ಇವಳನ್ನು ಮದುವೆಯಾಗುವ ಪುರುಷನು ಯಾರು?”

“ಪರ್ವತರಾಜನೇ, ಕೇಳು, ನಿನ್ನ ಮಗಳು ಪೂರ್ವ ಜನ್ಮದಲ್ಲಿ ಪತಿ ಭಕ್ತಿಯಿಂದಲೇ ಯೋಗಾಗ್ನಿಯಲ್ಲಿ ಬೆಂದುಹೊದ ದಾಕ್ಷಾಯಿಣಿ. ಇವಳ ಪತಿ ಪರಶಿವನಲ್ಲದೆ ಬೇರೆ ಯಾರೂ ಅಲ್ಲ. ಇವಳು ಶಿವನನ್ನು ವರಿಸುವುದರಲ್ಲಿ ಸಂಶಯವಿಲ್ಲ. ಶಿವನನ್ನು ಸೌಂದರ್ಯದಿಂದ, ವೈಯಾರದಿಂದ, ಮೋಹದಿಂದ ಒಲಿಸಲು ಸಾಧ್ಯವಿಲ್ಲ. ಭಕ್ತಿ, ಪೂಜೆ, ತಪಸ್ಸುಗಳೇ ಅವನನ್ನು ಒಲಿಸುವ ಸಾಧನಗಳು. ತಪಸ್ಸು ಮಾಡಿಯೇ ಇವಳು ಶಿವನನ್ನು ಒಲಿಸಿ ವರಿಸುವಳು; ಇದು ಸತ್ಯ” – ಹೀಗೆ ನಾರದರು ಗಿರಿರಾಜನಿಗೆ ತಿಳಿಸಿ, ಹೊರಟುಹೋದರು.

'ಇವಳು ಶಿವನನ್ನು ವರಿಸುವುದರಲ್ಲಿ ಸಂಶಯವಿಲ್ಲ'

ನಾರದನ ಮಾತು ಪಾರ್ವತಿಗೆ ಮೆಚ್ಚುಗೆಯಾಯಿತು. ‘ಬಯಸಿದ್ದೂ ಹಾಲು ದೊರೆತದ್ದೂ ಹಾಲು’ ಎಂಬ ಹಾಗಾಯಿತು. ಏಕೆಂದರೆ, ಶಿವನ ಸೇವೆ ತಪಸ್ಸುಗಳಲ್ಲೇ ತನ್ನ ಜೀವನವನ್ನು ಮುಂದುವರಿಸುವ ಸಂಕಲ್ಪ ಪಾರ್ವತಿಯದಾಗಿತ್ತು.

ಶಿವ ಸಂದರ್ಶನ

ಶಿವನು ಗಂಗಾವತಾರದ ತಪೋವನದಲ್ಲಿ ಇರುವ ಸಂಗತಿ ಪರ್ವತರಾಜನಿಗೆ ತಿಳಿಯಿತು. ಆ ಸ್ಥಳವು ಔಷಧಿಪ್ರಸ್ಥಕ್ಕೆ ಹೆಚ್ಚು ದೂರವಿರಲಿಲ್ಲ. ಅವನು ಶಿವನನ್ನು ಸಂದರ್ಶಿಸಲು ಹೋದನು. ಕಣ್ಣು ಮುಚ್ಚಕೊಂಡು ಧ್ಯಾನ ಮಾಡುತ್ತಿದ್ದ ಶಿವನನ್ನು ಗಿರಿರಾಜನು ಸ್ತುತಿಸಿದನು. ಶಿವನು ಒಮ್ಮೆ ಸ್ವಲ್ಪ ಕಣ್ಣು ತೆರೆದನು. ಆಗ ಗಿರಿರಾಜನು “ಮಹೇಶ್ವರನೇ, ನಾನು ನಿನ್ನ ಸೇವೆಗೆ ಸಿದ್ಧನಾಗಿದ್ದೇನೆ. ನನ್ನಿಂದ ಏನಾಗಬೇಕೆಂದು ತಿಳಿಸು” ಎಂದನು.

“ಪರ್ವತರಾಜ ನನ್ನ ತಪಸ್ಸು ಯಾವ ಅಡ್ಡಿಯೂ ಇಲ್ಲದೆ ನಡೆಯಲು ನನಗೆ ನಿನ್ನ ಸಹಾಯಬೇಕು. ನನ್ನ ಬಳಿಗೆ ನಿನ್ನ ಪಟ್ಟಣದಿಂದ ಜನರು ಬರುತ್ತಿರುತ್ತಾರೆ. ಯಾರೊಬ್ಬರೂ ಬಾರದಂತೆ ಮಾಡು. ನನಗೆ ನಿನ್ನಿಂದ ಆಗಬೇಕಾದುದು ಅಷ್ಟೇ.”

ಹಿಮವಂತನು ತನ್ನ ಅರಮನೆಗೆ ಬಂದನು. ತನ್ನ ಚಾರಕರು, ಪರಿವಾರದವರು, ಅರಮನೆಯವರು, ಹೆಂಗಸರು, ಮಕ್ಕಳು ಯಾರೂ ಸಂದರ್ಶನಕ್ಕಾಗಿ ಶಿವನ ಬಳಿಗೆ ಹೋಗಕೂಡದೆಂದು ಆಜ್ಞೆ ಮಾಡಿದನು. ಮಗಳಾದ ಪಾರ್ವತಿಯನ್ನು ಮಾತ್ರ ಹೇಗಾದರೂ ಮಾಡಿ ಶಿವನ ಸೇವೆಗೆ ನಿಯಮಿಸಬೇಕೆಂದು ಮನಸ್ಸಿನಲ್ಲೇ ನಿಶ್ಚಯಿಸಿದನು.

ಮುಂದಿನ ಬಾರಿ ಪರ್ವತರಾಜನು ಹೋಗುವಾಗ ಪಾರ್ವತಿಯನ್ನು ಕರೆದಕೊಂಡನು. ಶಿವನಿಗೆ ಅರ್ಪಣೆಗಾಗಿ ಹೂಗಳು, ಹಣ್ಣುಗಳು, ಪೂಜೆಯ ವಸ್ತುಗಳು – ಇವುಗಳೊಂದಿಗೆ ಹೋದನು. ಇಬ್ಬರೂ ಶಿವನನ್ನು ಭಕ್ತಿಯಿಂದ ಸ್ತುತಿಸಿದರು. ಬಹು ಹೊತ್ತು ಶಿವನು ಧ್ಯಾನಮಗ್ನನಾಗಿಯೇ ಇದ್ದನು. ಹೆಚ್ಚು ಹೊತ್ತಾದ ಮೇಲೆ ಹೊರನೋಟ ಬೀರಿದನು.

“ಮಹೇಶ್ವರನೇ, ನಿನ್ನ ಭಕ್ತೆಯೂ ನನ್ನ ಮಗಳೂ ಆದ ಪಾರ್ವತಿಯನ್ನು ಕರೆತಂದಿದ್ದೇನೆ. ಅವಳು ನಿನ್ನ ಆರಾಧನೆಯನ್ನು ಮಾಡದೆ ಇರಲಾರಳು. ಆದುದರಿಂದ, ಅವಳು ತನ್ನ ಗೆಳತಿಯರಾದ ಜಯೆ ವಿಜಯೆ ಎಂಬಿಬ್ಬರೊಂದಿಗೆ ನಿತ್ಯವೂ ಬಂದು ನಿನ್ನನ್ನು ಪೂಜಿಸಿ ಹಿಂದಕ್ಕೆ ಹೋಗಲು ಅಪ್ಪಣೆ ಕರುಣಿಸು.”

“ಪರ್ವತರಾಜನೇ ನನ್ನ ಸಂದರ್ಶನಕ್ಕೆ ನೀನು ನಿತ್ಯವೂ ಬೇಕಿದ್ದರೆ ಬರಬಹುದು. ನಿನ್ನ ಮಗಳನ್ನು ಮಾತ್ರ ಮನೆಯಲ್ಲೇ ಬಿಟ್ಟು ಬಾ. ನಾನು ಯೋಗಿ. ತಪಸ್ವಿ. ನನ್ನ ಮುಂದೆ ಸ್ತ್ರೀಯರು ಕಾಣಿಸುವುದೇ ಬೇಡ.”

ಹಿಮವಂತನು ಬಗೆಬೆಗೆಯಾಗಿ ಪ್ರಾರ್ಥಿಸಿಕೊಂಡನು. ಪಾರ್ವತಿಯನ್ನು ತನ್ನ ಸೇವೆಗೆ ನಿಯಮಿಸಿಕೊಳ್ಳಲು ಕೊನೆಗೆ ಶಿವನು ಒಪ್ಪಬೇಕಾಯಿತು. ಮನಸ್ಸನ್ನು ಬೇರೆ ಕಡೆ ತಿರುಗಿಸುವ ಕಾರಣವಿದ್ದರೂ ಯಾರ ಮನಸ್ಸು ದೃಢವಾಗಿರುತ್ತದೋ ಅವರು ಧೀರರು. ಶಿವನು ಅಂತಹ ಧೀರನಾಗಿದ್ದು ತಪಸ್ಸಿನಲ್ಲಿ ತಲ್ಲೀನನಾಗಿದ್ದನು.

ಪಾರ್ವತಿ ನಿತ್ಯವೂ ಉಷಃ ಕಾಲದಲ್ಲೇ ಎದ್ದು ಸಖಿಯರಾದ ಜಯೆ ವಿಜಯರೊಂದಿಗೆ ಔಷಧಿಪ್ರಸ್ಥದಿಂದ ಗಂಗಾವತಾರಕ್ಕೆ ಶಿವನ ಬಳಿಗೆ ಬರುತ್ತಿದ್ದಳು. ಪೂಜೆಯ ವಸ್ತುಗಳನ್ನು ತರುತ್ತಿದ್ದಳು. ಗಂಗಾಜಲದಿಂದ ಶಿವನ ಪಾದ ತೊಳೆದು, ಪೂಜೆ ಮಾಡುತ್ತಿದ್ದಳು, ಉಪಚರಿಸುತ್ತಿದ್ದಳು. ಆಕೆ ಬಹು ಚೆಲುವೆ. ಆದರೂ ಶಿವನು ಅವಳಿಗೆ ಮನಸೋಲಲಿಲ್ಲ. ಅವಳನ್ನು ಪತ್ನಿಯಾಗಿ ಸ್ವೀಕರಿಸಲಿಲ್ಲ.

ತಾರಕಾಸುರ

ಹಿಂದೆ ಕಶ್ಯಪನೆಂಬ ಋಷಿಯಿದ್ದನು. ಅವನ ಹೆಂಡಿರಲ್ಲಿ ಒಬ್ಬಳಾದ ದಿತಿ ಎಂಬವಳಿಂದ ರಾಕ್ಷಸರ ವಂಶ ಉಂಟಾಯಿತು. ಅವಳ ಮಗನಾದ ವಜ್ರಾಂಗನೆಂಬುವನ ಹೆಂಡತಿಯಾದ ವರಾಂಗಿ ಎಂಬವಳಲ್ಲಿ ಜನಿಸಿದವನೇ ತಾರಕನೆಂಬ ರಾಕ್ಷಸನು. ಅವನು ಉಗ್ರ ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿದನು. ಅವನಿಂದ ಎರಡು ವರಗಳನ್ನು ಪಡೆದನು. ತನ್ನನ್ನು ವೀರಿಸುವ ಬಲಿಷ್ಠರು ಯಾರೂ ಇರಬಾರದು ಎಂಬುದೇ ಮೊದಲನೆಯ ವರ. ಶಿವನಿಗೆ ಒಬ್ಬ ಮಗನು ಹುಟ್ಟಿ, ಅವನ ಹುಟ್ಟಿದ ಏಳನೆಯ ದಿನ ಸೇನಾಪತಿಯಾಗಿ ಬಂದು, ಯುದ್ಧ ಮಾಡಿದರೆ ಮಾತ್ರ ತನಗೆ ಮರಣವುಂಟಾಗಬೇಕು ಎಂಬುದು ಎರಡನೆಯ ವರ. ಶಿವನು ಆಗಲೇ ತಪಸ್ಸಿನಲ್ಲಿ ಮಗ್ನನಾಗಿ ಇದ್ದುದರಿಂದ ಮತ್ತು ಅವನಿಗೆ ಪತ್ನಿಯೇ ಇಲ್ಲದುದರಿಂದ ಮಗನು ಜನಿಸುವ ಪ್ರಶ್ನೆಯೇ ಇರದೆಂದು ತಾರಕನು ಧೈರ್ಯವಾಗಿದ್ದನು.

ತಾರಕನು ಕರುಣೆಯೇ ಇಲ್ಲದ ದುಷ್ಟ. ಯಜ್ಞ, ದಾನ, ಪರೋಪಕಾರ, ಧರ್ಮ ಎಂದರೆ ಅವನಿಗೆ ದ್ವೇಷ. ತಪಸ್ಸು ಮಾಡುವವರನ್ನು ಕಂಡರೆ ಅವನು ಸಹಿಸುತ್ತಿದ್ದಲ್ಲ. ಶಿವನು ಮಾತ್ರ ತಪಸ್ಸು ಮಾಡಬಹುದು, ಆದುದರಿಂದಲೇ ಅವನಿಗೆ ಉಪಯೋಗ. ಲೋಕದಲ್ಲಿ ಯಾರೂ ವಿದ್ಯೆ ಕಲಿಯಬಾರದು, ಬುದ್ಧಿವಂತರಾಗಬಾರದು. ಎಷ್ಟಾದರು ಮದ್ಯಪಾನ ಮಾಡಬಹುದು. ಅವನ ದರ್ಪಕ್ಕೆ ಹೆದರಿ ದೇವತೆಗಳು ಗಡಗಡನೆ ನಡುಗುತ್ತಿದ್ದರು. ಅವನ ಅಡಿಯಾಳುಗಳಂತೆ ನಡೆದುಕೊಳ್ಳುತ್ತಿದ್ದರು.

ತಾರಕನು ಧರ್ಮದಿಂದ ಪ್ರಜೆಗಳನ್ನು ಆಳುವ ರಾಜರನ್ನೆಲ್ಲ ಕೊಂದಿಕ್ಕಿದನು. ದಿಕ್ಪಾಲಕರನ್ನು ಓಡಿಸಿದನು. ದೇವತೆಗಳನ್ನು ತುಳಿದನು. ಸಾಧು ಜನರ ಮನೆ ಮಾರುಗಳಿಗೆ ಬೆಂಕಿ ಕೊಡಿಸಿದನು. ಋಷಿಗಳ ಆಶ್ರಮಗಳನ್ನು ಕೆಡವಿ ಹಾಕಿದನು. ಸಿಕ್ಕಿ ಸಿಕ್ಕಿದವರನ್ನು ನಿರ್ದಯೆಯಿಂದ ಕೊಲ್ಲಿಸಿದನು. ಮೂರು ಲೋಕದಲ್ಲಿಯೂ ಜನರ ಆರ್ತನಾದ ತುಂಬಿತು.

ಮನ್ಮಥನೇ ನೆರವಾಗಬೇಕು

ತಾರಕನ ತೊಂದರೆಯನ್ನು ಸಹಿಸಲಾರದೆ, ಸಾಧು ಜನರೂ ಋಷಿಗಳೂ ದೇವತೆಗಳೂ ಭೂಮಾತೆಯೂ ಬ್ರಹ್ಮದೇವರಿಗೆ ಮೊರೆಯಿಟ್ಟರು. ಬ್ರಹ್ಮನು ಹೀಗೆಂದನು –

“ತಾರಕನನ್ನು ಕೊಲ್ಲಲು ನನ್ನಿಂದ ಅಸಾಧ್ಯ. ಹರಿಹರರಿಂದಲೂ ಸಾಧ್ಯವಿಲ್ಲ. ಹರನ ಕುಮಾರನಿಂದ ಮಾತ್ರ ಸಾಧ್ಯ. ಹರನಿಗೆ ಕುಮಾರನು ಜನಿಸಬೇಕಾದರೆ, ಅವನು ಪಾರ್ವತಿಯನ್ನು ವರಿಸಬೇಕು. ಹರನು ಈಗ ತಪಸ್ಸಿನಲ್ಲಿದ್ದಾನೆ. ಪಾರ್ವತಿ ನಿತ್ಯವೂ ಬಂದು ಶಿವನ ಸೇವೆ ಮಾಡುತ್ತಿದ್ದಾಳೆ. ಶಿವನು ಅವಳನ್ನು ಕಣ್ಣು ತೆರೆದು ಕೂಡ ನೋಡುವುದಿಲ್ಲ. ಹೀಗಿರುವಾಗ ಅವರೊಳಗಿನ ಮದುವೆಯ ಮಾತೆಲ್ಲಿ? ತಾರಕನಿಗೆ ವರ ಕೊಟ್ಟವನು ನಾನೇ ಆದುದರಿಂದ ಅವನು ಕಾರಣವಿಲ್ಲದೆ ಪೀಡಿಸದಂತೆ ಹೇಳಿ ನೋಡುತ್ತೇನೆ.”

ಬ್ರಹ್ಮನ ಮಾತಿಗೆ ಗೌರವ ಕೊಟ್ಟು ತಾರಕನು ಸ್ವಲ್ಪ ಕಾಲ ದೇವಲೋಕಕ್ಕೆ ದಾಳಿಯಿಡದೆ ಶೋಣಿತಪುರದಲ್ಲೇ ಇದ್ದನು. ಇದರಿಂದ ದೇವತೆಗಳಿಗೆ ಆಗಾಗ ಒಟ್ಟು ಸೇರಲು, ಮುಂದಿನ ಕಾರ್ಯದ ಬಗೆಗೆ ಯೋಚನೆ ಮಾಡಲು ತುಸು ಅನುಕೂಲವಾಯಿತು. ಬ್ರಹ್ಮ, ವಿಷ್ಣು, ಇಂದ್ರರು ಸಭೆ ಸೇರಿದರು. ದೇವತೆಗಳ ಗುರುವಾದ ಬೃಹಸ್ಪತಿಯನ್ನು ತಾರಕರನ ಬಳಿಗೆ ಒಪ್ಪಂದಕ್ಕಾಗಿ ಕಳುಹಿಸಿದರು. ಆ ರಕ್ಕಸನು ಸಾಮ, ದಾನ, ಭೇದದ ಮಾತುಗಳಿಗೆ ಮಣಿಯಲಿಲ್ಲ. ಇದರಿಂದ ಯುದ್ಧವಾಯಿತು. ದೇವತೆಗಳೇ ಸೋತರು.

ಪುನಃ ದೇವತೆಗಳು ಸಭೆ ಸೇರಿದರು. ಶಿವನು ತಪಸ್ಸನ್ನು ನಿಲ್ಲಿಸಿ ಪಾರ್ವತಿಯನ್ನು ವರಿಸುವತೆ ಮಾಡಲು ಉದ್ಯುಕ್ತರಾದರು. ಅದರಂತೆ ಸುರಗುರುವನ್ನು ಮನ್ಮಥನ ಕುಸುಮಪುರಕ್ಕೆ ಕಳುಹಿಸಿ ಅವನನ್ನು ಬರಮಾಡಿದರು. ಮನ್ಮಥನು ತನ್ನ ಕಬ್ಬಿನ ಬಿಲ್ಲನ್ನೂ ಹೂವಿನ ಬಾಣಗಳನ್ನೂ ಹಿಡಿದುಕೊಂಡು ಪತ್ನಿಯಾದ ರತಿದೇವಿಯೊಂದಿಗೆ ಬಂದನು. ‘ನನ್ನಿಂದೇನಾಗಬೇಕು? ತಿಳಿಸಿ’ ಎಂದನು.

ಮನ್ಮಥನಿಗೆ ಕಾಮನೆಂತಲೂ ಹೆಸರು. ಅವನೊಡನೆ ಇಂದ್ರನು ಹೀಗೆ ಹೇಳಿದನು – “ಅಯ್ಯಾ ಕಾಮ ಚಕ್ರೇಶ್ವರಾ, ನಿನ್ನಿಂದ ಲೋಕಕ್ಕೇ ದೊಡ್ಡ ಉಪಕಾರ ಆಗಬೇಕು. ಆ ದುಷ್ಟನಾದ ತಾರಕನು ದುಷ್ಟತನ ಸಹಿಸಲು ಅಸಾಧ್ಯ. ಅವನನ್ನು ಕೊಲ್ಲುವಾತನು ಶಿವನ ಕುಮಾರ. ಅವನಿನ್ನೂ ಹುಟ್ಟಿಲ್ಲ. ಶಿವನು ತಪಸ್ಸನ್ನೇ ಬಿಟ್ಟಿಲ್ಲ. ತಪಸ್ಸನ್ನು ಬಿಡದೆ ಅವನ ಮದುವೆಯ ಮಾತಿಲ್ಲ. ಅವನ ಮಡದಿಯಾಗಲಿರುವ ಪಾರ್ವತಿ ಅವನ ಬಳಿಯಲ್ಲೇ ಇದ್ದರೂ ಶಿವನೂ ಅವಳನ್ನು ನೋಡುವುದೇ ಇಲ್ಲ. ಇದೀಗ ಶಿವನು ಪಾರ್ವತಿಯನ್ನು ಪ್ರೀತಿಸುವ ಹಾಗೆ ಮಾಡಬೇಕಾಗಿದೆ. ಅದನ್ನ ನೀನು ಮಾಡಬಲ್ಲೆ.

ಕಾಮನಿಗೆ ತನ್ನ ಹಿರಿಮೆಯ ಅರಿವಾಯಿತು. ಪುಷ್ಪಬಾಣವನ್ನು ಶಿವನ ಮೇಲೆ ಪ್ರಯೋಗಿಸಿ ಅವನನ್ನು ತಪಸ್ಸಿನಿಂದ ಬಿಡಿಸಲು ಯೋಚಿಸಿದನು. ಒಂದು ವೇಳೆ ಈ ಕಾರ್ಯದಲ್ಲಿ ತನ್ನ ಪ್ರಾಣ ಹೋದರೆ ಹೋಗಲಿ! ಲೋಕಕ್ಕೆ ದೊಡ್ಡ ಉಪಕಾರ ತನ್ನಿಂದ ಆಗುವುದಿಲ್ಲವೆ? ಹೀಗೆ ಯೋಚಿಸಿಕೊಂಡು ಕಾಮನು ರತಿಯೊಂದಿಗೆ ಶಿವನ ತಪೋವನಕ್ಕೆ ಬಂದನು.

ಕಾಮದಹನ

ಕಾಮನು ಶಿವನಿರುವಲ್ಲಿಗೆ ಬಂದುದೇ ತಡ, ಅವನ ಗೆಳೆಯನಾದ ವಸಂತ ಋತುರಾಜನ ಬಂದನು. ಗಂಗಾವತಾರ ವನಪ್ರದೇಶ ವಸಂತ ಋತುವಿನಿಂದ ತುಂಬಿತು. ಮಾವು ಹೂ ಬಿಟ್ಟಿತು. ಆಶೋಕ ಚಿಗುರಿತು. ಕೋಗಿಲೆಗಳು ಇಂಪಾಗಿ ಹಾಡಿದವು. ಮಂದಮಾರುತ ಹಿತಕರವಾಗಿ ಬೀಸಿತು. ಹೂಗಳು ಪರಿಮಳ ಹರಡಿತು. ಚಂದ್ರನ ಕಾಂತಿ ಮನಸೆಳೆಯಿತು. ಶಿವನ ತಪೋವನ ಒಂದು ವಶೀಕರಣದ ಸಾಮ್ರಾಜ್ಯದಂತೆ ಕಾಣಿಸಿತು. ಇವೆಲ್ಲದಕ್ಕೂ ಕಾರಣ ಮನ್ಮಥನ ಪ್ರಭಾವ. ಅವನು ಶಿವನ ಎದುರಿಗೆ ಬಂದು ನಿಂತನು. ಸ್ವಲ್ಪ ದೂರದಲ್ಲಿ ರತಿಯೂ ಬಂದು ನಿಂತಳು. ತನ್ನ ಗಂಡನಿಗೆ ಕೇಡಾಗದಿರಲಿ ಎಂದು ಆಕೆ ಮನಸ್ಸಿನಲ್ಲೇ ದೇವರನ್ನು ನೆನೆಸಿಕೊಂಡಳು.

ಅದೇ ವೇಳೆಗೆ ಎಂದಿನಂತೆ ಪಾರ್ವತಿ ಫಲಪುಷ್ಪಗಳೊಡನೆ ಶಿವನ ಪೂಜೆಗೆಂದು ಬಂದಿದ್ದಳು. ಅವಳ ಗೆಳತಿಯರೂ ಇದ್ದರು. ಪಾರ್ವತಿ ಕೈಮುಗಿದು ಶಿವನನ್ನು ಸ್ತುತಿಸುತ್ತ ನಿಂತಳಯ. ಅವಳ ಭಕ್ತಿಗೆ ಮೆಚ್ಚಿ, ಅವಳ ಇಂಪಾದ ಧ್ವನಿಯನ್ನು ಕೇಳಿ ಸಂತೋಷ ಹೆಚ್ಚಿ, ಶಿವನು ತನ್ನ ಧ್ಯಾನವನ್ನು ಅರೆಕ್ಷಣ ನಿಲ್ಲಿಸಿದನು. ಅವಳ ಕಡೆಗೆ ಒಮ್ಮೆ ನೋಡಿದನು. ಇದೇ ಒಳ್ಳೆ ಸಮಯವೆಂದು ಕಾಮನು ನಿಶ್ಚಯಿಸಿದನು. ಪಾರ್ವತಿಯ ಮೇಲೆ ಶಿವನಿಗೆ ಮೋಹ ಮೂಡುವಂತೆ ಮಾಡಲು ಸಿದ್ಧನಾದನು. ಹಣೆಗಣ್ಣಿನ ಶಿವನಿಗೆ ಹೆದರದೆ, ಅವನ ಎದೆಗೆ ತನ್ನ ಐದು ಹೂಬಾಣಗಳನ್ನು ಪ್ರಯೋಗಿಸಿದನು. ಶಿವನ ತಪಸ್ಸು ಭಂಗಗೊಂಡಿತು.

ಇದರಿಂದ ಶಿವನಿಗೆ ಮಹಾ ಕೋಪ ಬಂತು. ಪ್ರಚಂಡ ಅಗ್ನಿಯುಳ್ಳ ತನ್ನ ಹಣೆಗಣ್ಣನ್ನು ತೆರೆದುಬಿಟ್ಟನು. ಛಟಛಟ ಶಬ್ದವಾಯಿತು. ಧಗಧಗನೆ ಉರಿಯುವ ಭಯಂಕರ ಜ್ವಾಲೆ ಹೊರ ಹೊಮ್ಮಿತು. ಪ್ರಳಯಾಗ್ನಿಯಹಾಗಿರುವ ಆ ಬೆಂಕಿ ಕಾಮನ ದೇಹಕ್ಕೆ ಬಡಿಯಿತು. ಅವನು ನಿಂತಲ್ಲಿಯೇ ಬೂದಿಯಾದನು. ಶಿವನು ಅದೇ ಬೂದಿಯನ್ನು ಮೈಗೆ ಹಚ್ಚಿಕೊಂಡು ಅಲ್ಲಿಂದ ಮಾಯವಾದನು.

ತಪಸ್ಸೇ ಮಾರ್ಗ

ಕಾಮನು ಹರನ ಹಣೆಗಣ್ಣಿನ ಕಚ್ಚಿನಿಂದ ಸುಟ್ಟುಹೋದುದನ್ನು ಕಂಡೊಡನೆ ರತಿದೇವೆ ಮೂರ್ಛೆಹೋದಳು. ಅನಂತರ ಎಚ್ಚೆತ್ತು ಅಯ್ಯೋ ಎಂದು ನೆಲದಲ್ಲಿ ಹೊರಳಾಡಿದಳು. ಗೋಳಾಡಿದಳು. ಕಣ್ಣೀರಿನ ಕೋಡಿ ಹರಿಸಿದಳು. ‘ನನ್ನ ಗಂಡನ ಭಿಕ್ಷವನ್ನು ಕರುಣಿಸು’ ಎಂದು ಪಾರ್ವತಿಗೆ ಮೊರೆಯಿಟ್ಟಳು. ದೇವತೆಗಳನ್ನು ಬೇಡಿದಳು. ಪಾರ್ವತಿ ಕರುಣೆಯಿಂದ ಅವಳನ್ನು ಮೈದಡವಿ ಸಂತೈಸುತ್ತ “ಎಲೈ ರತಿ ದೇವಿಯೇ, ದುಃಖಿಸಬೇಡ, ನಿನ್ನ ಸಹಾಯಕ್ಕೆ ನಾನಿದ್ದೇನೆ. ನಾನು ಶಿವನನ್ನು ಬೇಡಿ, ನಿನ್ನ ಗಂಡನು ಮತ್ತೆ ಜೀವಿಸಿ ಬರುವಂತೆ ಮಾಡುವೆನು. ನೀನು ಪುನಃ ಅವನನ್ನೇ ಪತಿಯಾಗಿ ಪಡೆಯುವೆ. ನಾನು ಪುನರ್ಜನ್ಮದಲ್ಲಿ ನನ್ನ ಹಿಂದಿನ ಪತಿಯನ್ನೇ ಪಡೆಯುವ ಹಾಗೆ, ನಿನ್ನ ಪತಿ ಮರುಹುಟ್ಟನ್ನು ಪಡೆದು ಹಿಂದಿನ ಜನ್ಮದ ಸತಿಯಾದ ನಿನ್ನನ್ನೇ ಸ್ವೀಕರಿಸುವನು” ಎಂದು ಅಭಯವಿತ್ತಳು. ದೇವತೆಗಳೂ ಆಕೆಯನ್ನು ಸಮಾಧಾನಪಡಿಸಿದರು. ಪಾರ್ವತಿಗೆ ಶಿವನ ವರ್ತನೆಯ ವಿಚಾರದಲ್ಲಿ ಬಹಳ ನೋವು ಉಂಟಾಯಿತು.

“ನನ್ನ ಮೇಲೆ ದಯಾಳು ಶಿವನು ಕರುಣೆ ತೋರಿಸಲಿಲ್ಲ. ತಿರಸ್ಕರಿಸಿ ಹೋದನಲ್ಲಾ! ಅವನು ತಪಸ್ಸಿನಲ್ಲಿ ಇದ್ದಲ್ಲಿಗೆ ನಿತ್ಯವೂ ಬಂದು ಸೇವೆ ಮಾಡುತ್ತಿರುವ ನನ್ನಲ್ಲಿ ಒಂದು ಮಾತನ್ನೂ ಆಡದೆ ಎದ್ದು ಮಾಯವಾದನಲ್ಲಾ! ಶಿವನು ಭಕ್ತಿಗೆ ಒಲಿಯುವನು, ಸೌಂದರ್ಯಕ್ಕೆ ಮೋಹಕ್ಕೆ ಒಲಿಯುವವನಲ್ಲವೆಂದು ಗೊತ್ತಿದೆ. ಆದುದರಿಂದ ಭಕ್ತಿಯನ್ನು ಬಿಡೆನು. ಕಠಿಣ ತಪಸ್ಸಿನಿಂದಲೇ ಅವನನ್ನು ಮೆಚ್ಚಿಸಿ ನನ್ನ ಬಳಿಗೆ ಅವನನ್ನು ಎಳೆದು ತರುವೆನು” ಎಂದು ಪಾರ್ವತಿ ತನ್ನ ಗೆಳತಿಯರೊಡನೆ ಹೇಳಿದಳು.

ಪಾರ್ವತಿ ತನ್ನ ನಿರ್ಧಾರವನ್ನು ತಿಳಿಸಿದಾಗ ಮೇನೆ ಹೀಗೆಂದಳು – “ಮಗಳೇ, ನೀನು ಹೊರಗೆ ಹೋಗಿ ತಪಸ್ಸು ಮಾಡುವುದು ಬೇಡ. ನಿನ್ನ ಶರೀರ ಕೋಮಲ; ತಪಸ್ಸು ಅತಿ ಕಠಿಣ. ತಪಸ್ಸು ಮಾಡುವೆಯಾದರೆ ನಮ್ಮ ಮನೆಯಲ್ಲಿ ಇದ್ದುಕೊಂಡೆ ಮಾಡು” – ಹೀಗೆ ಹೇಳಿ ಅವಳನ್ನು ತಡೆಯಲು ಯತ್ನಿಸಿದಳು. ಆದರೆ, ಈ ಯತ್ನ ಫಲಕಾರಿಯಾಗಲಿಲ್ಲ.

ಹೀಗಿರಲು ಅಲ್ಲಿಗೆ ನಾರದರು ಬಂದರು. ಪರ್ವತರಾಜನು ತನ್ನ ಮಗಳ ವಿಚಾರವನ್ನು ತಿಳಿಸಿದನು. ಆಗ ನಾರದರು ಆಕೆಯ ತಪಸ್ಸಿಗೆ ಅಡ್ಡಿ ಮಾಡುವುದು ತಕ್ಕುದಲ್ಲವೆಂದು ಬೋಧಿಸಿದರು. ಪಾರ್ವತಿಯನ್ನು ಬೇರೆಯಾಗಿ ಕಂಡು, ಶಿವನು ತಪಸ್ಸು ಮಾಡಿದ ಸ್ಥಳದಲ್ಲಿಯೇ ಶಿವನನ್ನು ಕುರಿತು ತಪಸ್ಸು ಮಾಡುವಂತೆ ಹೇಳಿದರು. “ಓಂ ನಮಃ ಶಿವಾಯ” ಎಂಬ ಶಿವನ ಪಂಚಾಕ್ಷರಿ ಮಂತ್ರವನ್ನು ಉಪದೇಶ ಮಾಡಿದರು; ಹರಸಿದರು.

ಪಾರ್ವತಿಯ ತಪಸ್ಸು

ಪಾರ್ವತಿ ತನ್ನ ತಂದೆತಾಯಿಗಳಿಂದ ಅನುಮತಿಯನ್ನೂ ಆಶೀರ್ವಾದವನ್ನೂ ಪಡೆದಳು. ಗಂಗಾವತರಣದ ಪುಣ್ಯಸ್ಥಳಕ್ಕೆ ಬಂದಳು. ಅದೇ ಸ್ಥಳಕ್ಕೆ ಮುಂದೆ ‘ಗೌರೀ ಶಿಖರ’ ಎಂತಲೂ ಹೆಸರಾಯಿತು. ಅವಳ ತಪಸ್ಸಿಗೆ ಅನುಕೂಲ ಪಡಿಸುವುದಕ್ಕಾಗಿ ಜಯೆ ವಿಜಯೆಯರು ಅವಳೊಡನೆ ಬಂದರು. ಪಾರ್ವತಿಯ ತಪಸ್ಸು ಅದ್ಭುತ! ಬೇಸಿಗೆಯ ಕಡುಬಿಸಿಲಿನ ಕಾಲದಲ್ಲಿ ಅವಳು ತನ್ನ ನಾಲ್ಕು ಕಡೆಯೂ ಬೆಂಕಿಯನ್ನು ಉರಿಗೊಳಿಸಿ ಪಂಚಾಗ್ನಿಯ ನಡುವೆ ತಪಸ್ಸು ಮಾಡಿದಳು. ಮಳೆಗಾಲದಲ್ಲಿ ನೀರಿನ ಧಾರೆಗೆ ಮೈಯ್ಯೊಡ್ಡಿಕೊಂಡೇ ಬಂಡೆಗಲ್ಲಿನ ಮೇಲೆ ಕುಳಿತು ತಪಸ್ಸು ಮಾಡಿದಳು. ಚಳಿಗಾಲ ಬಂದಾಗ, ತಣ್ಣನೆಯ ಕೊಳದಲ್ಲಿ ಕಂಠದವರೆಗಿರುವ ನೀರಿನಲ್ಲಿ ನಿಂತು ತಪೋಮಗ್ನಳಾದಳು. ಯಾವ ಬಗೆಯ ಕಷ್ಟವನ್ನೂ ದುಃಖಯಾತನೆಗಳನ್ನೂ ಲೆಕ್ಕಿಸದೇ ಶಿವನಲ್ಲಿಯೇ ನಲೆಗೊಂಡ ಮನಸ್ಸಿನಿಂದ ಕೂಡಿದಳು, ನಾರುಬಟ್ಟೆಯನ್ನು ಉಟ್ಟುಕೊಂಡು, ಜಟೆಧರಿಸಿ, ಜಪಮಾಲೆಯನ್ನು ಹಿಡಿದುಕೊಂಡು ಮಂತ್ರವನ್ನು ಜಪಿಸಿದಳು. ಹಸಿವು ಬಾಯಾರಿಕೆಗಳನ್ನು ಮೀರಿಸಿದಳು. ಪ್ರಾರಂಭದಲ್ಲಿ ಆಕೆ ಫಲಾಹಾರವನ್ನು ಮಾಡುತ್ತಿದ್ದಳು. ಬರುಬರುತ್ತ ಅದನ್ನು ಬಿಟ್ಟಳು. ಪರ್ಣವನ್ನು (ಎಲೆಯನ್ನು) ತಿನ್ನುತ್ತಿದ್ದಳು. ಮತ್ತೆ ಅದನ್ನೂ ಬಿಟ್ಟು ‘ಅಪರ್ಣೆ’ ಎನಿಸಿ ಕಠಿಣ ತಪಸ್ಸನ್ನು ಎಸಗಿದಳು. ಅನೇಕರು ಆಗಾಗ ಅವಳ ತಪೋವನಕ್ಕೆ ಬಂದು, ಅವಳ ನಿಯಮನಿಷ್ಠೆಗೆ ಬೆರಗಾಗಿ, ಮರುಕಪಟ್ಟು ಹಿಂದೆರಳುತ್ತಿದ್ದರು.

ಪಾರ್ವತಿಯ ತಪದ ಮಹಿಮೆಯಿಂದ ಆ ಕಾಡಿನ ಕ್ರೂರ ಮೃಗಗಳೆಲ್ಲ ಸಾಧುಗಳಾದವು. ಹುಲ್ಲೆಮರಿಗಳು ಹುಲಿಗಳ ಮೈಮೇಲೆ ಬಿದ್ದು ನಿದ್ದೆ ಮಾಡುತ್ತಿದ್ದವು. ವಿಷಸರ್ಪಗಳು ಯಾರನ್ನೂ ಕಚ್ಚವು. ಇಲಿಗಳು ಹಾವುಗಳೊಡನೆ ಆಟಮಾಡುತ್ತಿದ್ದವು. ತಪೋವನವು ಅಹಿಂಸೆಯ ಸಾಮ್ರಾಜ್ಯವಾಯಿತು. ಪ್ರೀತಿ, ಕರುಣೆಗಳ ತಾಯಿ ಮನೆಯಾಯಿತು. ಆದರೆ, ಪಾರ್ವತಿಯ ತಪಸ್ಸಿನಿಂದ ಮೂಡಿದ ತಾಪವು ದೇವತೆಗಳನ್ನು ಸುಡತೊಡಗಿತು. ಇದರಿಂದ ಅವರೆಲ್ಲರೂ ಶಿವನನ್ನು ಪ್ರಾರ್ಥಿಸತೊಡಗಿದರು. ಪಾರ್ವತಿಗೆ ಒಲೆದು ಆಕೆಯನ್ನು ಪತ್ನಿಯಾಗಿ ಸ್ವೀಕರಿಸುವಂತೆ ಅರಿಕೆಮಾಡತೊಡಗಿದರು.

ಸತ್ವ ಪರೀಕ್ಷೆ

ಯಾವುದೇ ಕಾರ್ಯಕ್ಕೆ ಸರಿಯಾದ ಫಲ ದೊರೆಯಬೇಕಾದರೆ, ಆ ಕಾರ್ಯದ ಬೆಲೆ ಗೊತ್ತಾಗಬೇಕು. ಬೆಲೆ ಗೊತ್ತಾಗಬೇಕಾದರೆ ಅದರ ಪರೀಕ್ಷೆ ನಡೆಯಬೇಕು. ಪಾರ್ವತಿಯ ತಪಸ್ಸಿನ ಸತ್ತ್ವ-ದೃಢತೆಗಳ ಪರೀಕ್ಷೆಯ ಕಾಲ ಬಂತು. ಅವಳ ತಪಃ ಪ್ರಭಾವದಿಂದ ಶಿವನಲ್ಲಿ ದಯೆ ಅಂಕುರಿಸಿತು. ಅವನ ಮನಸ್ಸು ಮೃದುವಾಯಿತು. ಆದರೂ ಪಾರ್ವತಿಯ ಮನಸ್ಸನ್ನು ಪರೀಕ್ಷಿಸಿ ನೋಡಬೇಕೆಂದು ನಿಶ್ಚಯಿಸಿದನು. ಆಕೆಯ ದೃಢತೆಯನ್ನು ತಿಳಿದು ಬರುವುದಕ್ಕಾಗಿ ಶಿವನು ಸಪ್ತರ್ಷಿಗಳನ್ನು ಕಳುಹಿಸಿದನು.

ಬಂದ ಋಷಿಗಳಿಗೆ ಪಾರ್ವತಿ ವಂದಿಸಿದಳು. ಜಯೆ ವಿಜಯೆಯರು ಸತ್ಕಾರ ಮಾಡಿದರು. ಋಷಿಗಳು ಪಾರ್ವತಿಯ ತಪಸ್ಸಿಗೆ ಕಾರಣವೇನೆಂದೂ, ಉಪದೇಶಕರು ಯಾರೆಂದೂ ಕೇಳಿದರು. ಆಗ ಅವಳು ಎಲ್ಲವನ್ನೂ ತಿಳಿಸಿದಳು. ಅದಕ್ಕೆ ಋಷಿಗಳು ಹೀಗೆಂದರು –

“ನೀನು ಆ ನಾರದರ ಮಾತನ್ನು ಕೇಳಿ ಕೆಟ್ಟುಹೋದೆ. ಶಿವನಿಗಾಗಿ ನೀನು ತಪಸ್ಸು ಮಾಡುವುದು ಬೇಡ. ಅವನನ್ನು ವರಿಸುವುದೂ ಬೇಡ.” ಆಕೆ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ರೂಪಕ್ಕಿಂತ ಗುಣವೇ ಮೇಲೆಂದು ಅವಳ ನಿರ್ಣಯವಾಗಿತ್ತು. ನನಗೆ ಶಿವನೊಂದಿಗೆ ಮದುವೆ ಆಗಿಯೇ ಹೋಗಿದೆ; ಅವನು ಸ್ವೀಕರಿಸದಿದ್ದರೆ ನಾನು ಬೇರೆ ಮದುವೆಯಾಗುವುದಿಲ್ಲ. ನನಗಂತೂ ಎರಡು ಮದುವೆ ಇಲ್ಲ” ಎಂದು ನಿರ್ಧಾರವನ್ನು ಹೇಳಿದಳು. ಋಷಿಗಳು ಅವಳ ದೃಢತೆಗೆ ಮೆಚ್ಚಿದರು. “ನಿನ್ನ ಇಷ್ಟ ಕೈಗೂಡಲಿ” ಎಂದು ಆಶೀರ್ವಾದ ಮಾಡಿ ಕೈಲಾಸಕ್ಕೆ ತೆರಳಿದರು. ಈ ಸಂಗತಿಯನ್ನು ಶಿವನಿಗೆ ತಿಳಿಸಿದರು. ಅವಳ ಮನಸ್ಸನ್ನು ಪರೀಕ್ಷಿಸುವ ನೆವದಲ್ಲಿ ಆಕೆಯನ್ನು ದುಃಖಕ್ಕೆ ಗುರಿಪಡಿಸುವುದು ತಕ್ಕುದಲ್ಲವೆಂದು ಹೇಳಿದರು. ಶಿವನು ಈಗ ತಾನೇ ಪಾರ್ವತಿಯ ದೃಢತೆಯನ್ನು ಪರೀಕ್ಷಿಸಲು ಇಚ್ಛೆಪಟ್ಟನು.

ಅದಕ್ಕಾಗಿಯೇ ತನ್ನ ನಿಜರೂಪವನ್ನು ಮರೆ ಮಾಡಿದನು. ಓರ್ವ ವಟುವಿನ ವೇಷವನ್ನು ಧರಿಸಿದನು. ಪಾರ್ವತಿಯ ತಪೋವನಕ್ಕೆ ಬಂದನು. ಆಕೆಗೆ ಹತ್ತಿರದ ಒಂದು ಎಳೆಯ ಮಾವಿನ ಮರದ ನೆರಳಿಗೆ ಬಂದು ಕುಳಿತನು. ಓರ್ವ ಅತಿಥಿ ಬ್ರಾಹ್ಮಣ ಯುವಕ ಬಂದಿದ್ದಾನೆಂದು ಪಾರ್ವತಿಯ ಗೆಳತಿಯರು ಅವನ ಬಳಿಗೆ ಬಂದರು. ಕುಶಲವನ್ನು ಕೇಳಿದರು. ಕಾಲು ತೊಳೆಯಲು ನೀರು ಕೊಟ್ಟರು. ತಿನ್ನಲು ಒಳ್ಳೆಯ ಹಣ್ಣುಗಳನ್ನು ಇತ್ತರು. ಆಗ ಬ್ರಾಹ್ಮಣನು ಪಾರ್ವತಿಯ ಕಡೆಗೆ ಬೆರಳು ಮಾಡಿ” ಇವಳು ಯಾರು? ಈ ಯೌವನದಲ್ಲಿ ತಪಸ್ಸು ಮಾಡುವುದೇಕೆ? ಇವಳ ತಪಸ್ಸನ್ನು ತಡೆಯುವವರಿಲ್ಲವೆ? ಇವಳಿಗೆ ಕೇಳುವವರು ಹೇಳುವವರು ಯಾರು ಇಲ್ಲವೆ?” ಎಂದು ಪ್ರಶ್ನಿಸಿದನು. ಅವನ ಮಾತನ್ನು ಕೇಳಿ ಪಾರ್ವತಿಗೆ ಕೋಪ ಬಂತು. ಒಮ್ಮೆಗೆ ಧ್ಯಾನವನ್ನು ನಿಲ್ಲಿಸದಳು. ಜಪಮಾಲೆಯನ್ನು ಬದಿಗೆ ಇಟ್ಟಳು. ಕಣ್ಣುತೆರದು, ಆ ವಟುವಿನ ಕಡೆಗೆ ನೊಡಿದಳು.

ವಟು ಆಗ ದಯೆಯುಳ್ಳುವನಂತೆ ವರ್ತಿಸುತ್ತ ಪಾರ್ವತಿಯ ಕುರಿತಾಗಿ ಬಗೆಬಗೆಯ ಪ್ರಶ್ನೆಗಳನ್ನು ಕೇಳತೊಡಗಿದನು. “ಇಂತಹ ತುಂಬು ಜವ್ವನದಲ್ಲಿ ಈ ಕಾಡಿನಲ್ಲಿ ಚಳಿ, ಬಿಸಿಲು, ಮಳೆ, ಹಸಿವು, ನೀರಡಿಕೆಗಳ ಗೊಡವೆಯೇ ಇಲ್ಲದೆ ತಪಸ್ಸನ್ನು ಮಾಡುವುದು ಏಕೆ? ಎಂದು ಕೇಳಿದನು. ಪಾರ್ವತಿಯ ಕಣ್ಣಸನ್ನೆಯಂತೆ ವಿಜಯೆ ಎಲ್ಲ ವಿಚಾರವನ್ನು ಹೇಳುತ್ತ, “ನಮ್ಮ ಗೆಳತಿ ಶಿವನ ಪಡೆಯುಬೇಕೆಂದು ಬಯಸಿ ತಪಸ್ಸಿನಲ್ಲಿದ್ದಾಳೆ.” ಎಂದು ತಿಳಿಸಿದಳು. ಆಗ ಕಪಟದ ವಟು ಗೊಳ್ಳನೆ ನಕ್ಕನು. “ಓಹೋ ಗೊತ್ತಾಯಿತು. ನಾನಿನ್ನು ಹೇಳಲಿಕ್ಕೇನಿದೆ? ನಿನ್ನಿಷ್ಟ, ನಾನೀಗ ಬರುತ್ತೇನೆ” ಎಂದು ಹೊರಡಲು ಮುಂದಡಿಯಿಟ್ಟನು. ಆಗ ಪಾರ್ವತಿ ಎದ್ದು ಬಂದು ಅವನನ್ನು ವಂದಿಸದಳು. “ಹೋಗಬೇಡ, ತಡೆ, ಈ ವಿಷಯದಲ್ಲಿ ನನಗೆ ಹಿತವಾದುದನ್ನು ಹೇಳಬಾರದೆ? ಶಿವನನ್ನು ಒಲಿಸಲು ಮಾರ್ಗದರ್ಶನ ಮಾಡಬಾರದೆ? ಎಂದು ಕೇಳಿದಳು. “ಹಾಗಾದರೆ ಕೇಳು” ಎಂದು ಕಪಟ ವಟು ಅವಳೊಡನೆ ಹೇಳತೊಡಗಿದನು –

“ಅಯ್ಯೋ ಮುಗ್ಧೆಯೇ, ನಿನಗೆ ಯೌವನ ಬಂದರೂ ತಿಳಿವಳಿಕೆ ಬಂದೇ ಇಲ್ಲವಲ್ಲಾ! ನೀನು ಆ ಮುಕ್ಕಣ್ಣನನ್ನು ಏಕೆ ಬಯಸಿದೆಯೋ! ನಿನ್ನ ಗ್ರಹಚಾರ ಹೀಗಾಯಿತೇ! ಅವನ ನೆಲೆ, ರುಪ, ಸ್ವಭಾವ – ಎಲ್ಲವು ವಿಚಿತ್ರವಾಗಿದೆಯಲ್ಲಾ! ಅವನು ವಾಸ ಮಾಡುವುದು ಸ್ಮಶಾನದಲ್ಲಿ. ಅವನ ಆಭರಣವು ಹಾವು! ಕೊರಳಲ್ಲಿರುವ ಮಾಲೆ ತಲೆ ಬುರುಡೆಗಳದು! ಹಿಡಿದ ಆಯುಧವೋ ತ್ರಿಶೂಲ, ಉಟ್ಟಿರುವ ಬಟ್ಟೆ ಚರ್ಮ. ಅವನ ತಲೆ ಆಕಾಶಕ್ಕೆ ಕೆದರಿದೆ, ಉಳಿದ ಭಾಗ ಜಡೆಗಟ್ಟಿದೆ. ಕೊರಳಲ್ಲಿ ವಿಷವಿದೆ. ಮೈಗೆಲ್ಲಾ ಬೂದಿ ಬಳಿದುಕೊಂಡಿದ್ದಾನೆ. ಗಂಗೆಯನ್ನು ಚಂದ್ರನನ್ನು ತಲೆಯಲ್ಲಿ ಧರಿಸಿದ್ದಾನೆ. ಇದರಿಂದ ಏರಿದೆ! ಅವನ ಒಡನಾಡಿಗಳು ಭೂತಪ್ರೇತಗಳು! ವಾಹನ ಎತ್ತು. ಅವನು ಭಿಕ್ಷೆ ಬೇಡುವವ. ನೀನಾದರೋ ಚೆಲುವೆ, ಮೃದು; ಅವನು ಕುರೂಪಿ, ಕಠಿಣನು, ಅವನ ಯೋಚನೆ ಬಿಡು. ಶಿವನನ್ನು ವರಿಸಬೇಡ.”

ಈ ಮಾತುಗಳನ್ನು ಕೇಳಿ ಪಾರ್ವತಿಗೆ ಕೋಪ ಸಹಿಸಲಾಗಲಿಲ್ಲ. ಅವಳ ಹುಬ್ಬುಗಳ ಗಂಟಿಕ್ಕಿದವು. ಕಣ್ಣಿನ ಕೊನೆ ಕೆಂಪೇರಿತು. ತುಟಿಗಳು ಅಲುಗಿದವು. ಶಿವನಿಂದೆಯನ್ನು ಸಹಿಸಲಾರದೆ, ಉತ್ತರ ಕೊಟ್ಟಳು –

“ನೀಚನೇ, ನಿನಗೆ ಶಿವನ ವಿಚಾರ ಏನೂ ತಿಳಿಯದು. ಮಹಾತ್ಮರ ನಡತೆ ಎಲ್ಲರ ಹಾಗಿರುವುದಿಲ್ಲ. ಅದನ್ನು ತಿಳಿಯಲಾರದ ಮಂದಬುದ್ಧಯವರು ಹೀಗೆ ನಿಂದಿಸುತ್ತಾರೆ. ಶಿವನ ಮಹಿಮೆ ಬೇರೆ ಯಾರಿಗಿದೆ? ಅವನನ್ನು ನಂಬಿದವರು ತಮ್ಮ ತಪ್ಪುಗಳಿಂದ ಪಾರಾಗುತ್ತಾರೆ. ಶಿವನು ನಿರ್ಗತಿಕನಾಗಿ ತೋರಿದರೂ ಸಕಲ ಸಂಪತ್ತನ್ನೂ ಕೊಡಬಲ್ಲನು. ಸ್ಮಶಾನವಾಸಿಯಾದರೇನು? ಮೂರು ಲೋಕಕ್ಕೆ ಒಡೆಯನು. ಭಯಂಕರನಾದರೂ ಮಂಗಳಕರನು. ಅವನು ವಿಶ್ವಮೂರ್ತಿ. ಎತ್ತನ್ನು ಏರಿದ ಆತನ ಪಾದಕ್ಕೆ ಐರಾವತವನ್ನೇರಿದ ಇಂದ್ರನು ಅಡ್ಡಬೀಳುವನಲ್ಲವೆ? ಹೆಚ್ಚು ಮಾತೇಕೆ ನನ್ನ ಮನಸ್ಸು ಶಿವನಲ್ಲಿ ದೃಢವಾಗಿ ನಲೆಗೊಂಡಿದೆ. ಅದನ್ನ ಕದಲಿಸಲು ಯಾರಿಗೂ ಸಾಧ್ಯವಿಲ್ಲ. ಶಿವನ ರೂಪ-ಗುಣ-ಮಹಿಮೆ ನನಗೆ ಗೊತ್ತಿದೆ. ಅವನಿಗೆ ಯಾವ ವಿಕಾರವೂ ಇಲ್ಲ. ದೋಷವೂ ಇಲ್ಲ.”

ಪಾರ್ವತಿ ಹೀಗೆ ಹೇಳುತ್ತಿದ್ದಾಗ, ವಟು ಪುನಃ ಮಾತಾಡಲು ಬಾಯಿ ತೆರೆಯುವಂತೆ, ಅವನ ತುಟಿ ಅಲುಗುವುದು ಕಾಣಿಸಿತು. ಪಾರ್ವತಿ ತನ್ನ ಗೆಳತಿಯನ್ನು ಕರೆದಳು –

“ಮಹಾತ್ಮರನ್ನು ನಿಂದಿಸುವವರು ಹೇಗೆ ಪಾಪಿಗಳೋ, ಅಂತಹ ನಿಂದೆಯನ್ನು ಕೇಳುವವರೂ ಪಾಪಿಗಳಾಗುತ್ತಾರೆ. ಈ ಧೂರ್ತನು ಇನ್ನೂ ಏನೋ ಅಪಶಬ್ದ ಆಡಲಿಕ್ಕಿದ್ದಾನೆ! ಇವನನ್ನು ಇಲ್ಲಿಂದ ತೊಲಗಿಸು. ಅಥವಾ ನಾನೇ ಇಲ್ಲಿಂದ ಹೊರಟುಹೋಗಿಬಿಡುತ್ತೇನೆ” – ಹೀಗೆ ಹೇಳಿ ಪಾರ್ವತಿ ಅಲ್ಲಿಂದ ಹೊರಟುಹೋಗಲೆಂದು ಹೆಜ್ಜೆಯಿಟ್ಟಳು. ಆ ಕ್ಷಣವೇ ಕಪಟ ವಟು ಶಿವ ಸ್ವರೂಪ ತಾಳಿದನು. ಪಾರ್ವತಿಯ ಕೈಯನ್ನು ಹಿಡಿದನು. ಆಕೆ ತಲೆ ಬಾಗಿಸಿದಳು. ಶಿವನು ಅವಳೊಡನೆ “ಎಲೈ ತಲೆ ಬಾಗಿದ ನಾರೀಮಣಿಯೇ, ನಿನ್ನ ಪ್ರೀತಿಯನ್ನು ಮೆಚ್ಚಿದ್ದೇನೆ. ನಿನ್ನ ತಪಸ್ಸಿನಿಂದ ನನ್ನ ಮನಸ್ಸನು ಗೆದ್ದಿದ್ದೀಯೆ. ವಿನೋದಕ್ಕಾಗಿ ಬಹು ವಿಧದಿಂದ ಪರೀಕ್ಷಿಸುತ್ತ ನಿನ್ನನ್ನು ನೋಯಿಸಿದ್ದೇನೆ. ನನ್ನ ತಪ್ಪನ್ನು ಕ್ಷಮಿಸು. ಬಾ, ನನ್ನ ಕೈಲಾಸದ ಅರಮನೆಗೆ ತೆರಳೋಣ” ಎಂದು ಹೇಳಿದನು. 

'ನಿನ್ನ ತಪಸ್ಸಿನಿಂದ ನನ್ನ ಮನಸ್ಸನ್ನು ಗೆದ್ದಿದ್ದೀಯೆ.'

 ಹಿರಿಯರನ್ನು ಕೇಳು

ತಾನು ನಂಬಿದ ಮತ್ತು ತಪಸ್ಸು ಮಾಡಿ ಒಲಿಸಿದ ಶಿವನೇ ತನ್ನ ಬಳಿಗೆ ಬಂದು, ನನ್ನೊಡನೆ ಬಾ ಎಂದು ಕರೆದುದು ನಿಜ. ಆದರೆ ಆಗಲೇ ಆತನು ತನ್ನ ಗಂಡನೆಂದು ಅವನೊಡನೆ ಹೊರಟುಬಿಡುವುದು ಪಾರ್ವತಿಗೆ ಸರಿಗಾಣಲಿಲ್ಲ. ತನ್ನ ತಂದೆತಾಯಿಗಳು ಅವಳನ್ನು ವಿವಾಹ ಪೂರ್ವಕ ಧಾರೆಯೆರೆದು ಕೊಡದೆ, ತಾನೇ ಹೋಗುವುದು ಅವಳಿಗೆ ನೀತಿಯೆನಿಸಲಿಲ್ಲ.

“ದೇವಾ, ನನ್ನ ತಂದೆ ಪರ್ವತರಾಜ, ತಾಯಿ ಮೇನಾದೇವಿ ಇಬ್ಬರೂ ಇದ್ದಾರೆ. ಇತರ ಬಂಧುಗಳೂ ಇದ್ದಾರೆ. ನೀವು ನನ್ನ ತಂದೆಯಲ್ಲಿ ಕನ್ಯಾ ಯಾಚನೆ ಮಾಡಬೇಕು. ನಾನು ನನ್ನ ಹಿರಿಯರಿಗೆ ಬಂಧುಗಳಿಗೆ ಒಪ್ಪಿಗೆ ಕೊಟ್ಟು, ವಿಧಿಯಂತೆ ವಿವಾಹ ನಡೆಸಬೇಕು ಎಂದು ಪ್ರಾರ್ಥಿಸುತ್ತೇನೆ” ಎಂದಳು. ಲೋಕಾಚಾರವನ್ನು ಅನುಸರಿಸುವುದು ಸಂಸ್ಕೃತಿಯ ಲಕ್ಷಣವೆಂದು ಶಿವನು ಅವಳ ಮಾತಿಗೆ ಒಪ್ಪಿದನು.

ಅಷ್ಟು ಹೊತ್ತಿಗೆ ರತಿದೇವಿ ತನ್ನ ಗಂಡನ ಅಗಲಿಕೆಯ ದುಃಖದಿಂದ ಕಣ್ಣೀರು ಸುರಿಸುತ್ತ ಅಲ್ಲಿಗೆ ಬಂದಳು. ಶಿವನಿಗೂ ಪಾರ್ವತಿಗೂ ವಂದಿಸಿದಳು. ಪಾರ್ವತಿ ಶಿವನೊಡನೆ – “ಸ್ವಾಮಿ ಈಕೆಯ ಗಂಡನಾದ ಕಾಮನು ಲೋಕ ಹಿತಕ್ಕಾಗಿಯೇ ನಿಮ್ಮ ಹಣೆಗಣ್ಣಿನ ಬೆಂಕಿಯಿಂದ ಸುಟ್ಟು ನಾಶವಾಗಿದ್ದಾನೆ. ನಿಮ್ಮನ್ನು ಬೇಡಿ ನಾನು ಈಕೆಗೆ ಮರಳಿ ಪತಿಯನ್ನು ದೊರಕಿಸುವೆನೆಂದು ಅಭಯ ಕೊಟ್ಟಿದ್ದೇನೆ. ಮೊದಲು ನೀವು ಇವಳಿಗೆ ಕರುಣಿಸಬೇಕು” ಎಂದಳು.

ತನಗೆ ಸುಖದ ಕಾಲ ಬಂತೆಂದು ಪಾರ್ವತಿ ಇತರರ ದುಃಖವನ್ನು ಮರೆಯಲಿಲ್ಲ. ಅನ್ಯರ ದುಃಖ ನಿವಾರಣೆಯನ್ನು ಅಲಕ್ಷ್ಯ ಮಾಡಲಿಲ್ಲ. ಆಗ ಶಿವನು ಕರುಣೆಯಿಂದ ಹೀಗೆಂದನು –

“ಆಗಲಿ, ರತಿ ನೆನೆದಾಗಲೆಲ್ಲ ಮನ್ಮಥನು ಶರೀರವಿಲ್ಲದೆಯೆ (ಅನಂಗನಾಗಿ) ಬಂದು ಅವಳಿಗೆ ಸಂತೋಷವನ್ನು ಉಂಟುಮಾಡಲಿ. ಲೋಕದ ಒಳಿತಿಗಾಗಿಯೇ ಆತ್ಮಾರ್ಪಣೆ ಮಾಡಿದವನು ಮನ್ಮಥನು. ಲೋಕದ ಜನರು ಅವನನ್ನು ನೆನೆದಾಗಲೆಲ್ಲ ಕಾಣಿಸದ ಹಾಗೆ ಬಂದು ಜನಹಿತವನ್ನು ಮಾಡುತ್ತಿರಲಿ. ಮುಂದೆ ದ್ವಾಪರಯುಗದಲ್ಲಿ ಅವನು ಶ್ರೀ ಕೃಷ್ಣನ ಮಗನಾಗಿ ಹುಟ್ಟಲಿ. ಆಗ ರತಿಯ ನಿಜ ಪತಿಯಾಗಿ ಕಾಣಿಸಿಕೊಂಡು ಮೆರೆಯಲಿ!”

ಪಾರ್ವತಿಯ ಕೋರಿಕೆಯಂತೆ ಶಿವನು ಹೀಗೆ ಅನುಗ್ರಹ ಮಾಡಿ ತನ್ನ ಗಣಗಳೊಡನೆ ಕೈಲಾಸಕ್ಕೆ ತೆರಳಿದನು. ಕೈಲಾಸದಲ್ಲಿದ್ದ ಅವನ ಭಕ್ತರು, ಋಷಿಗಳು, ಗಣಗಳು ಎಲ್ಲರೂ ಸಂತೋಷ ತಾಳಿದರು. ಪಾರ್ವತಿ ತನ್ನ ಗೆಳತಿಯರೊಂದಿಗೆ ಔಷಧಿಪ್ರಸ್ಥಕ್ಕೆ ಬಂದಳು. ಶಿವನನ್ನು ಒಲಿಸಿ ಬಂದವಳೆಂಬ ಕಾರಣದಿಂದ ಅವಳನ್ನು ಅಲ್ಲಿ ಸಂಭ್ರಮದಿಂದ ಎದುರುಗೊಂಡರು.

ಶಿವಪಾರ್ವತಿಯರ ಮದುವೆ

ಶಿವನು ಜ್ಞಾನಿಗಳೂ ತಪಸ್ವಿಗಳೂ ಆದ ಸಪ್ತರ್ಷಿ (ಏಳು ಮಂದಿ ಋಷಿ) ಗಳನ್ನು ಬರಮಾಡಿಸಿ, ಅವರನ್ನು ಹಿಮವಂತನಲ್ಲಿಗೆ ಕಳುಹಿಸಿದನು. ಶಿವನಿಗೆ ಕನ್ಯೆಯನ್ನು ಕೇಳಲು ಅತಿ ಶ್ರೇಷ್ಠರಾದ ಋಷಿಗಳೇ ಬಂದರೆಂದು ಪರ್ವತರಾಜನಿಗೆ ಬಹಳ ಸಂತೋಷವಾಯಿತು.

“ನನ್ನ ಭಾಗ್ಯ ಫಲಿಸಿತು! ಪುಣ್ಯದ ಬಳ್ಳಿ ಹೂ ಬಿಟ್ಟು ಪರಿಮಳ ಬೀರಿತು! ಕುಲವೆಂಬ ಮರದಲ್ಲಿ ಹಣ್ಣು ಕಾಣಿಸಿತು” ಎಂದು ಗಿರಿರಾಜನು ಹೇಳಿಕೊಂಡನು. ವಿಶ್ವಗುರುವಾಗಿರುವ ಶಿವನಿಗೆ ಮಾವನಾಗುವೆನೆಂದು ಮನಸ್ಸಿನಲ್ಲೇ ಹಿರಿ ಹಿಗ್ಗಿದನು. ಮದುವೆ ನಿಶ್ಚಯವಾಯಿತು.

ಪರ್ವತರಾಜನು ದೇವಶಿಲ್ಪಿಯಾದ ವಿಶ್ವಕರ್ಮನನ್ನು ಬರಮಾಡಿಸಿದನು. ಅವನ ಮೂಲಕ ಆಶ್ಚರ್ಯಕರವಾದ ಸಕಲಸೌಂದರ್ಯಗಳಿಂದ ಕೂಡಿದ ಮದುವೆಮಂಟಪ ಸಿದ್ಧವಾಯಿತು. ನೂರಾರು ಯೋಜನ ವಿಸ್ತಾರವಾದ ಮದುವೆಯ ಸಭಾಂಗಣವೂ ಚಿತ್ರವಿಚಿತ್ರವಾಗಿ ರಚಿತವಾಯಿತು. ಶಿವ-ಪಾರ್ವತಿಯರ ಮದುವೆ ಸಂಭ್ರಮದಿಂದ ನಡೆಯಿತು.

ಲೋಕಕಲ್ಯಾಣ

ಶಿವ ಪಾರ್ವತಿಯರ ಕಲ್ಯಾಣ ಲೋಕಕಲ್ಯಾಣದ ನಾಂದಿಯಾಗಿತ್ತು. ಶಿವನು ಲೋಕಕ್ಕೆ ತಂದೆ. ಅವನನ್ನು ಮದುವೆಯಾಗಿ ಪಾರ್ವತಿ ಲೋಕಮಾತೆಯಾದಳು. ಪಾರ್ವತಿ ಮುಂದೆ ಪಡೆದ ಮಗನೇ ಕಾರ್ತಿಕೇಯ. ಅವನು ದೇವತೆಗಳ ಸೇನಾಪತಿಯಾಗಿ ರಾಕ್ಷಸರ ಮೇಲೆ ದಂಡೆತ್ತಿ ಅವರನ್ನು ಕೊಂದು ಧರ್ಮಸ್ಥಾಪನೆ ಮಾಡಿದನು. ತಾರಕಾಸುರನ ಸಂಹಾರವಾಯಿತು. ಪಾರ್ವತಿಯ ಇನ್ನೊಬ್ಬ ಮಗ ಗಣೇಶ. ಅವನು ಕೆಟ್ಟ ಜನರ ಕೆಟ್ಟ ಕೆಲಸಗಳಿಗೆ ಅಡ್ಡಿ ತರುವವನು. ಒಳ್ಳೆಯವರಿಗೆ ಬರುವ ತೊಂದರೆಗಳನ್ನು ನಿವಾರಿಸುವವನು. ವಿದ್ಯೆಯನ್ನು ಬುದ್ಧಿಯನ್ನು ಕೊಡುವ ಗಜಮುಖನು.

ಲೋಕದ ಜ್ಞಾನ ಬೆಳೆಯಲು

ಶಿವನು ಸರ್ವಜ್ಞ, ವಾಗೀಶ ಎಂಬ ಹೆಸರುಗಳನ್ನೂ ಪಡೆದವನು, ಮಹಾದೇವನು. ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು. ವಾಗೀಶ ಎಂದರೆ ವಿದ್ಯೆಗೆ ಒಡೆಯ. ಪಾರ್ವತಿ ತನ್ನ ವಿದ್ಯಾರ್ಜನೆಯ ಕಾಲದಲ್ಲಿ ಯೋಗ್ಯ ಗುರುಗಳಿಂದ ಲೌಕಿಕ ವಿದ್ಯೆಗಳನ್ನು, ಧಾರ್ಮಿಕ ವಿದ್ಯೆಗಳನ್ನು ಅಭ್ಯಾಸ ಮಾಡಿದ್ದರೂ ಇನ್ನೂ ಕಲಿಯುವ ಇಚ್ಛೆ ಆಕೆಗೆ. ತನ್ನ ಪತಿ ಸರ್ವಜ್ಞನೆಂದು ಅವಳಿಗೆ ಅಭಿಮಾನ ಮಾತ್ರವಲ್ಲ ಅವನಿಂದ ಹೆಚ್ಚು ವಿಚಾರಗಳನ್ನು ತಿಳಿಯುವ ಕತೂಹಲ. ತಾನು ತಿಳಿಯುವ ಮೂಲಕ ಲೋಕದಲ್ಲೆಲ್ಲ ಜ್ಞಾನ-ಕಲೆ-ವಿದ್ಯೆಗಳು ಪ್ರಸಾರವಾಗಬೇಕು – ಎಂಬ ಆಶಯ. ಶಿವನ ಸಭೆಯಲ್ಲಿ ಪಾರ್ವತಿ ಮಾತ್ರವಲ್ಲದೆ ದೇವ-ಗಂಧರ್ವರು, ಋಷಿಗಳೂ ಕೂಡ ಶಿವನು ಹೇಳಿದ ಸತ್ಕಥೆಗಳನ್ನು, ತತ್ತ್ವನೀತಿಗಳನ್ನು, ಇತಿಹಾಸ-ಕಾವ್ಯಗಳ ಅನುಭವಗಳನ್ನು ಕೇಳಿ ತಿಳಿಯುತ್ತಿದ್ದರು. ಅವನ್ನು ಹೇಳುವಂತೆ ಪ್ರಾರ್ಥಿಸುವವಳು ಪಾರ್ವತಿ.

ಪಾರ್ವತಿಯು ಶಿವನಿಂದಲೇ ಸಂಸ್ಕೃತ ಭಾಷೆಯನ್ನು ವ್ಯಾಕರಣವನ್ನು ಚೆನ್ನಾಗಿ ಕಲಿತುಕೊಂಡಳು. ಶಿವನು ಕಲಿಸಿದ ವ್ಯಾಕರಣ ಸೂತ್ರಗಳು ‘ಮಹೇಶ್ವರ ಸೂತ್ರಗಳು’ ಎಂದು ಪ್ರಸಿದ್ಧವಾಗಿವೆ. ಅವನ್ನು ಆಮೇಲೆ ಪಾಣಿನಿ ಎಂಬ ಮುನಿ ಭೂಲೋಕದಲ್ಲಿ ಪ್ರಚಾರ ಮಾಡಿದನು – ಅದು ಪಾಣಿನೀಯ ವ್ಯಾಕರಣ ಎಂದು ಪ್ರಸಿದ್ಧವಾಯಿತು.

ಕಾವ್ಯಕ್ಕೆ ಛಂದಸ್ಸು ಮುಖ್ಯ. ಅದು ಪದ್ಯ ರಚನೆಯನ್ನು ತಿಳಿಸುವ ಶಾಸ್ತ್ರ. ಪಾರ್ವತಿ ಅದನ್ನು ತಿಳಿಯಲು ಇಚ್ಛಿಸಿದ್ದರಿಂದ ಶಿವನು ಮೊದಲು ಅವಳಿಗೆ ಉಪದೇಶಿಸಿದನು. ಅದನ್ನು ಪಿಂಗಳನೆಂಬ ಮುನಿ ತಿಳಿದುಕೊಂಡು ಭೂಲೋಕದಲ್ಲಿ ಪ್ರಚಾರ ಮಾಡಿದನು. ಪಿಂಗಳನ ಛಂದಸ್ಸನ್ನೇ ಕನ್ನಡದಲ್ಲಿ ನಾಗವರ್ಮನೆಂಬ ಕವಿ (ಕ್ರಿ. ಶ. ೯೯೦) ಛಂದೋಂಬುಧಿ ಎಂಬ ಹೆಸರಿನಲ್ಲಿ ಬರೆದಿದ್ದಾನೆ. ಹೀಗೆಯೇ ಇನ್ನಿತರ ವಿದ್ಯೆಗಳನ್ನು – ನಾಟ್ಯ, ಶಿಲ್ಪ, ಜ್ಯೋತಿಷ್ಯ, ಮಂತ್ರ-ತಂತ್ರ, ಚಿತ್ರ, ಬಗೆಬಗೆಯ ಶಾಸ್ತ್ರಗಳು – ಶಿವನಿಂದ ಪಾರ್ವತಿಗೆ ಉಪದೇಶವಾಗಿ ಮತ್ತೆ ಪ್ರಚಾರಕ್ಕೆ ಬಂದುವೆಂದು ಹೇಳಿಕೆಯಿದೆ.

ತತ್ವಜ್ಞಾನವನ್ನು ತಿಳಿಯುವುದರಲ್ಲಿಯೂ ಪಾರ್ವತಿಗೆ ಬಹಳ ಕುತೂಹಲ. ಅವಳು ತನಗೆ ರಾಮಾಯಣವನ್ನು ತತ್ವಜ್ಞಾನದೊಂದಿಗೆ ತಿಳಿಸಬೇಕೆಂದು ಕೇಳಿಕೊಂಡಳು. ಇದರಿಂದ ಸಂತೋಷಗೊಂಡ ಶಿವನು ಅಧ್ಯಾತ್ಮ ರಾಮಾಯಣವನ್ನು ಅವಳಿಗೆ ಹೇಳಿದನು. ಇದನ್ನು ಬ್ರಹ್ಮನು ಕೇಳಿಕೊಂಡು ನಾರದನಿಗೆ ಉಪದೇಶಿಸಿದನು. ನಾರದನು ಈ ಕಥೆಯನ್ನು ವಾಲ್ಮೀಕಿಗೆ ಹೇಳಿದನು. ಮಾಲ್ಮೀಕಿಯು ಕುಶಲವರಿಗೆ ರಾಮಾಯಣವನ್ನು ಹೇಳಿದನು. ಇದಕ್ಕೆ ಶ್ರೀಮದ್ರಾಮಾಯಣ ಎಂದು ಹೆಸರು. ಮುಂದೆ ವೇದವ್ಯಾಸರು ಸಂಸ್ಕೃತದಲ್ಲಿ ಅಧ್ಯಾತ್ಮ ರಾಮಾಯಣವನ್ನು ರಚಿಸಿದರು. ಅದು ಇಂದಿಗೂ ಪ್ರಸಿದ್ಧವಾಗಿದೆ.

ಮಕ್ಕಳೆಲ್ಲ ಇಂದಿಗೂ ಕೇಳಿ ಸಂತೋಷಪಡುವ ನೀತಿಕಥೆಗಳಿಂದ ಕೂಡಿದ ‘ಪಂಚತಂತ್ರ’, ವಿದೆಯಲ್ಲಾ ಅದು ಕೂಡ ಮೊತ್ತಮೊದಲು ಶಿವನು ಪಾರ್ವತಿಗೆ ಹೇಳಿದ ಕಥೆಗಳ ಗೊಂಚಲು ಎಂದು ನಂಬಿಕೆ.

ಶಿವನೊಡನೆ ಆಗಾಗ ಪಾರ್ವತಿಯು ಲೋಕಾನುಭವಕ್ಕೂ ತತ್ವವಿಚಾರಕ್ಕೂ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಉತ್ತರಪಡೆದುದು ಮಾತ್ರವಲ್ಲ, ಆ ವಿಷಯದಲ್ಲಿ ತಾನೂ ಸಾಹಸಕಾರ್ಯಮಾಡಿದ ಉದಾಹರಣೆಗಳಿವೆ. ಅರ್ಜುನನ ಶೌರ್ಯವನ್ನು ಪ್ರತ್ಯಕ್ಷವಾಗಿ ಕಾಣಬೇಕೆಂಬ ಉದ್ದೇಶದಿಂದ ಶಿವನು ಇಂದ್ರಕೀಲಕಕ್ಕೆ ಶಬರನಾಯಕನಾಗಿ ಬಂದಾಗ ಆಕೆ ಶಬರಪತ್ನಿಯಾಗಿ ಬಂದಳೆಂದು ಮಹಾಭಾರತದಲ್ಲಿ ಹೇಳಿದೆ.

ಪಾರ್ವತಿಯ ಅವತಾರಗಳಲ್ಲಿ ಒಂದು ಚಾಮುಂಡೇಶ್ವರಿ ಎಂದು ನಂಬಿಕೆ ಇದೆ. ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಲು ಪಾರ್ವತಿ ಎತ್ತಿದ ಅವತಾರ ಇದು. ಮಹಿಷಾಸುರನು ದುಷ್ಟನಾಗಿ ಮನುಷ್ಯರಿಗೂ ರಾಕ್ಷಸರಿಗೂ ಹಿಂಸೆ ಕೊಡುತ್ತಿದ್ದ. ವಿಜಯದಶಮಿಯ ದಿವಸ ಚಾಮುಂಡೇಶ್ವರಿ ಅವನನ್ನು ಸಂಹರಿಸಿದಳು. ಅವನು ಆಳುತ್ತಿದ್ದ ಮಹಿಷಮಂಡಲದಲ್ಲಿ ಬೆಟ್ಟದ ಮೇಲೆ ನೆಲೆಸಿದಳು. ಇದೇ ಕರ್ನಾಟಕ ರಾಜ್ಯದ ಮೈಸೂರು ನಗರದ ಬಳಿ ಬರುವ ಚಾಮುಂಡಿ ಬೆಟ್ಟ. (ಇದು ಸಮುದ್ರಮಟ್ಟದಿಂದ ೩೪೮೯ ಅಡಿ ಎತ್ತರವಿದೆ.) ಮಹಿಷಾಸುರನಿದ್ದ ಮಹಿಷಮಂಡಲವೇ ಈಗಿನ ಮೈಸೂರು.

'ಚಾಮುಂಡೇಶ್ವರಿಯು ಮಹಿಷಾಸುರನನ್ನು ಕೊಲ್ಲುತ್ತಿರುವುದು.'

ಕಾಳಿ, ದುರ್ಗೆಯರೂ ಪಾರ್ವತಿಯ ಅವತಾರ. ಈ ಎಲ್ಲ ಅವತಾರಗಳನ್ನೂ ಪಾರ್ವತಿ ಧರಿಸಿದ್ದು ದುಷ್ಟರನ್ನು ಕೊಂದು ಒಳ್ಳೆಯವರನ್ನು ಕಾಪಾಡುವುದಕ್ಕಾಗಿ ಎಂದು ಭಕ್ತರು ನಂಬುತ್ತಾರೆ.