ಮುಂಬಯಿ ಪ್ರಾಂತದ ರತ್ನಗಿರಿ ಜಿಲ್ಲೆಯ ದೇವರುಕ ಗ್ರಾಮದಲ್ಲಿ ಬಾಲಕೃಷ್ಣಜೋಷಿ ದಂಪತಿಗಳು ವಾಸಿಸುತ್ತಿದ್ದರು. ೧೮೭೦ರಲ್ಲಿ ಆ ದಂಪತಿಗಳಿಗೆ ಜನಿಸಿದ ಹೆಣ್ಣು ಮಗುವಿಗೆ ಪಾರ್ವತೀಬಾಯಿ ಎಂದು ಹೆಸರಿಟ್ಟರು. ಬಾಲಕೃಷ್ಣ ಜೋಷಿ ಶ್ರೀರಾಮನ ಭಕ್ತರು. ದೀನ-ದಲಿತರಲ್ಲಿ ತುಂಬಾ ವಿಶ್ವಾಸವಿರಿಸಿಕೊಂಡು ಪರೋಪಕಾರ ಬುದ್ಧಿಯಿಂದ ಎಲ್ಲರಿಗೂ ತಮ್ಮ ಕೈಲಾದ ಸೇವೆ ಮಾಡುತ್ತಿದ್ದರು.

ಮದುವೆಯಾಯಿತು

ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಲಿಲ್ಲ. ಅವರಿಗೆ ಆರೇಳು ವರ್ಷ ಆಗುವಷ್ಟರಲ್ಲಿ ವಿವಾಹ ಮಾಡಿಬಿಡುತ್ತಿದ್ದರು. ’ಪಾರ್ವತೀಬಾಯಿಗೆ ಹನ್ನೊಂದು ವರ್ಷ ಆದರೂ ವಿವಾಹ ಆಗದೆ ಇದ್ದಾಗ ತಮ್ಮ ಮಗಳ ಮದುವೆಯ ಬಗ್ಗೆ ನೆರೆಹೊರೆಯವರು ಆಡಿಕೊಂಡಾಗ ಆಕೆಯ ತಾಯಿ ಮನಸ್ಸಿಗೆ ತುಂಬಾ ನೊಂದುಕೊಳ್ಳುತ್ತಿದ್ದರು. ಪಾರ್ವತೀಬಾಯಿ ಆರೋಗ್ಯವಂತಾಳಾಗಿದ್ದು ಚೆನ್ನಾಗಿ ಮನೆಗೆಲಸ ಮಾಡುತ್ತಿದ್ದಳು. ಭಿಕಾಜಿ ಪಟವರ್ಧನ ಎಂಬುವವರ ಪತ್ನಿ ಪಾರ್ವತೀಬಾಯಿಗೆ ಗೆಳತಿ. ಆಕೆಯ ಬಳಗದ ಹುಡುಗ ಗೋವಾದಲ್ಲಿದ್ದ. ಪಾರ್ವತೀಬಾಯಿಯನ್ನು ಗೋವೆಯಲ್ಲಿರುವ ಆ ಹುಡುಗನಿಗೆ ಕೊಟ್ಟು ವಿವಾಹ ಮಾಡುವುದಾದರೆ ತಾವು ನೆಂಟಸ್ತನದ ಮಾತುಕತೆ ನಡೆಸುವುದಾಗಿ ಪಟವರ್ಧನರ ಪತ್ನಿ ಹೇಳಿದರು. ಜೋಷಿಯವರು ಪಾರ್ವತಿಬಾಯಿಯ ವಿವಾಹವನ್ನು ಗೋವೆಯ ಹುಡುಗನೊಡನೆ ಮಾಡಿದರು.  ಹುಡುಗನ ಮನೆಯ ಹೆಸರು ಆಠವ್ ಳೆ. ಕಾಲು ಸ್ವಲ್ಪ ಊನ ಆಗಿದ್ದುದರಿಂದ ಪಾರ್ವತೀಬಾಯಿಯ ಮನಸ್ಸಿಗೆ ಈ ವಿವಾಹ ಅಷ್ಟು ಸಂತೋಷ ತರಲಿಲ್ಲ. ವಿವಾಹಕ್ಕೆ ಮುಂಚೆ ಆಕೆಯ ಒಪ್ಪಿಗೆಯನ್ನು ಯಾರೂ ಕೇಳುವ ಗೋಜಿಗೆ ಹೋಗದೆ ವಿವಾಹ ಮಾಡಿದ್ದರು.

ಬೇಗನೆ ಬಂತು ವೈಧವ್ಯ

ಹದಿನಾಲ್ಕು ವರ್ಷದ ಪಾರ್ವತೀಬಾಯಿ ಆಠವ್ ಳೆ ಗೋವೆಯ ವರೆಗಾವ್ ಎಂಬ ಊರಿನಲ್ಲಿ ಪತಿಯೊಡನೆ ಸಂಸಾರ  ಪ್ರಾರಂಭಿಸಿದರು.

ಪಾರ್ವತೀಬಾಯಿಯ ಪತಿ ತುಂಬಾ ಮೃದು ಸ್ವಭಾವಿ, ಸಜ್ಜನ, ದೈವಭಕ್ತ, ಸತ್ಯವಂತ.

ಪಾರ್ವತೀಬಾಯಿಗೆ ಇಪ್ಪತ್ತು  ವರ್ಷ ತುಂಬುವಷ್ಟರಲ್ಲಿ ಮೂವರು ಮಕ್ಕಳಾದರು. ಇಬ್ಬರು ಮಕ್ಕಳು ಸತ್ತು ಒಂದು ಗಂಡು ಮಗು  ಮಾತ್ರ ಬದುಕಿತು. ಪಾರ್ವತೀಬಾಯಿಯ ಪತಿಯನ್ನು ವೆರಗಾವನಿಂದ ಬಾಸಿನ್ ಎಂಬ ಊರಿಗೆ ವರ್ಗ ಮಾಡಿದರು. ಪಾರ್ವತೀಬಾಯಿಯ ಪತಿಗೆ ಬಾಸಿನ್ ನ ಹವೆ ಒಗ್ಗದೆ ಮಲೇರಿಯಾ ಕಾಯಿಲೆ ಗಂಟು ಬಿದ್ದಿತು. ಆತ ಪಾರ್ವತೀಬಾಯಿಯ ತವರೂರಾದ ದೇವರುಕ ಗ್ರಾಮಕ್ಕೆ ಬಂದು ಅಲ್ಲಿ ತೀರಿಕೊಂಡ. ಪಾರ್ವತೀಬಾಯಿಗೆ ಗಂಡನ ಮನೆಯ ಆಸ್ತಿಪಾಸ್ತಿ ಏನೂ ಇರಲಿಲ್ಲ. ಆಕೆ ಮಗುವಿನೊಡನೆ ತವರು ಮನೆಯಲ್ಲೇ ಇರಬೇಕಾಯಿತು.

ಆಗಿನ ಕಾಲದ ಪದ್ಧತಿಯಂತೆ ಪಾರ್ವತಿಬಾಯಿಗೆ ತಲೆಕೂದಲು ತೆಗೆಸಿ ವಿರೂಪ ಮಾಡಿಸಿದರು. ಪಾರ್ವತೀಬಾಯಿ ವಿಧವೆಯಾಗಿ ತವರುಮನೆ ಸೇರುವ ವೇಳೆಗೆ ಮೊದಲೇ ಆಕೆಯ ಅಕ್ಕ ಆನಂದಿಬಾಯಿ ಒಂಬತ್ತನೇ ವರ್ಷಕ್ಕೇ ವಿಧವೆಯಾದಳು. ಇನ್ನೊಬ್ಬ ಅಕ್ಕನೂ ವಿಧವೆ. ಎಲ್ಲರೂ ತವರು ಮನೆ ಸೇರಿದ್ದರು. ಜೋಷಿ ದಂಪತಿಗಳು ಹಗಲೂ ರಾತ್ರಿ ಕಣ್ಣೀರು ಹರಿಸಿ ದುಃಖಿಸುತ್ತಿದ್ದರು.

ಆನಂದಿಬಾಯಿ ಮತ್ತೆ ಮದುವೆಯಾದಳು

ಆ ಸಮಯದಲ್ಲಿ ಪಂಡಿತ ರಮಾಬಾಯಿ ಎಂಬುವರು ಅಮೇರಿಕಕ್ಕೆ ಹೋಗಿ ಬಂದು ಹೆಣ್ಣು ಮಕ್ಕಳಿಗಾಗಿ ಶಾರದಾ ಸದನ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಪಾರ್ವತೀಬಾಯಿಯ ಅಣ್ಣ ನರಹರಿಪಂತರು ವಿಧವೆಯಾಗಿದ್ದ ತಮ್ಮ ಸೋದರಿ ಆನಂದಿಬಾಯಿಯನ್ನು ಓದಿಸುವುದಕ್ಕಾಗಿ ಮುಂಬಯಿಗೆ ಕರೆತಂದು ಸೇರಿಸಿದರು.

ನರಹರಿಪಂತರು ಮತ್ತು ಪ್ರೊಫೆಸರ್ ಕರ್ವೆ ಅವರು ಓದುವುದರಲ್ಲಿ ಪತ್ನಿಯರನ್ನು ಕಳೆದುಕೊಂಡಿದ್ದರು. ಒಂದು ಸಾರಿ ಕರ್ವೆ ಅವರು ದೇವರುಕ ಗ್ರಾಮಕ್ಕೆ ನರಹರಿ ಪಂತರೊಡನೆ ಹೋಗಿದ್ದರು. ಜೋಷಿ ಅವರು ಕರ್ವೆ ಅವರನ್ನು ’ಪತ್ನಿ ಸತ್ತ ನಂತರ ನೀವೇಕೆ ಮರು ಮದುವೆ ಮಾಡಿಕೊಂಡಿಲ್ಲ?’ ಕೇಳಿದರು. ಕರ್ವೆ ಅವರು ’ಸರಳವಾಗಿ, ನಿರಾಡಂಭರವಾಗಿ ಸಂತೋಷವಾಗಿ ನನ್ನೊಡನೆ ಜೀವನ ಸಾಗಿಸಲು ಒಪ್ಪುವ ವಿಧವೆ ನನ್ನನ್ನು ವಿವಾಹವಾಗಲು ಇಚ್ಛಿಸಿದರೆ ವಿವಾಹವಾಗುತ್ತೇನೆ. ಇಲ್ಲವಾದರೆ ಹೀಗೆಯೇ ಇರುತ್ತೇನೆ ಎಂದರು. ಕರ್ವೆಯವರೂ ಆನಂದಿಬಾಯಿಯೂ ಮದುವೆಯಾಗಲು ಒಪ್ಪಿದರು. ಜೋಷಿಯವರೂ ನರಹರಿಪಂತರೂ ಮದುವೆಯನ್ನು ನಡೆಸಿದರು. ಪುಣೆಯ ಪತ್ರಿಕೆಗಳಲ್ಲೆಲ್ಲಾ ಈ ಸಮಾಚಾರ ಪ್ರಕಟವಾಯ್ತು. ಆನಂದಿಬಾಯಿಯ ಅಣ್ಣ, ತಂದೆಯೇ ಮುಂದುವರಿದು ಈ ವಿವಾಹವನ್ನು  ನಡೆಸಿಕೊಟ್ಟರೆಂಬ ಸಮಾಚಾರ ದೇವರುಕ ಗ್ರಾಮದ ಜನರಿಗೆ ತಿಳಿದು ಊರಿನ ಜನರೆಲ್ಲಾ ಒಂದಾಗಿ ಜೋಷಿ ಕುಟುಂಬದವರಿಗೆ ಬಹಿಷ್ಕಾರ ಹಾಕಿದರು. ಆದರೆ ಒಂಬತ್ತು ವರ್ಷಕ್ಕೆ ವಿಧವೆಯಾದ ತಂಗಿಯ ಸಂಕಟವನ್ನು ನೋಡಿದ್ದ ನರಹರಿ ಪಂತರು ತಾವು ಮಾಡಿದುದು ಸರಿ ಎಂದು ಎಲ್ಲ ಕಷ್ಟಗಳನ್ನೂ ಧೈರ್ಯದಿಂದ ಎದುರಿಸಿದರು. ಯಾರೆಷ್ಟು ತೊಂದರೆ ಕೊಟ್ಟರೂ ಜೋಷಿ ಅವರು ಹೆದರಲಿಲ್ಲ.

ವಿದ್ಯಾಭ್ಯಾಸ ಪ್ರಾರಂಭ

ಆನಂದಿಬಾಯಿ ಮತ್ತು ಕರ್ವೆ ಅವರು ಪಾರ್ವತೀಬಾಯಿಯನ್ನು ತಮ್ಮ ಜೊತೆಗೆ ಇರುವಂತೆ ಕರೆದರು. ಸಮಾಜ ಸುಧಾರಕರಾದ ಕರ್ವೆ ಅವರ ಮನೆಗೆ ಹೋಗಲು ಪಾರ್ವತೀಬಾಯಿ ಹಿಂತೆಗೆದರು. ಮಗನ ಹಿತದೃಷ್ಟಿಯಿಂದ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವುದೆಂದು ಅಕ್ಕ, ಭಾವನ ಜತೆಗೆ ನಾನನನ್ನು ಪುಣೆಗೆ ಕಳುಹಿಸಿಕೊಟ್ಟರು.  ಕೆಲವು ದಿನಗಳ ನಂತರ ಮಗನನ್ನು ನೋಡುವ ಸಲುವಾಗಿ ಪಾರ್ವತೀಬಾಯಿ ಪುಣೆಗೆ ಹೋದರು.

’ವಿಧವೆಯರಿಗಾಗಿ ಸ್ಥಾಪಿಸುವ ಆಶ್ರಮಕ್ಕೆ ತಮ್ಮಿಂದಾಗುವ ಸಹಾಯ ಮಾಡುವಿರಾ?’ ಎಂದು ಕರ್ವೆ ಅವರು ನಾದಿನಿ ಪಾರ್ವತೀಬಾಯಿಯನ್ನು ಕೇಳಿದರು.

’ನನಗೆ ವಿದ್ಯೆ ಬಾರದು. ಆಶ್ರಮದಲ್ಲಿ ಅಡಿಗೆ ಮಾಡುತ್ತೇನೆ’ ಪಾರ್ವತೀಬಾಯಿ ಹೇಳಿದರು.

’ಆಶ್ರಮದ ಕೆಲಸ ಪ್ರಾರಂಭವಾಗುವವರೆಗೆ ಹೋಮ್ ಸ್ಕೂಲ್ ಗೆ ಹೋಗಿ ವಿದ್ಯೆ ಕಲಿಯಿರಿ ’ ಕರ್ವೆ ಹೇಳಿದರು.

’ಹೋಮ್ ಸ್ಕೂಲ್’ ಎನ್ನುವ ಇಂಗ್ಲಿಷ್ ಪದಗಳ ಅರ್ಥವನ್ನು ಆನಂದಿಬಾಯಿ ತಂಗಿಗೆ ವಿವರಿಸಿ ಹೇಳಬೇಕಾಯಿತು.

ಇಪ್ಪತ್ತಾರು ವರ್ಷದ ವಿಧವೆ ಪಾರ್ವತೀಬಾಯಿ ಮಾರುತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೋಮ್ ಸ್ಕೂಲ್ ಗೆ ವಿದ್ಯೆ ಕಲಿಯುವುದಕ್ಕಾಗಿ ಹೋದರು. ಅಲ್ಲಿಗೆ ಶ್ರೀಮಂತರ ಮನೆಯ ಹೆಂಗಸರು ಬರುತ್ತಿದ್ದರು. ಅಂತಹವರ ನಡುವೆ ತಲೆ ಕೂದಲು ತೆಗೆಸಿ ಕೆಂಪು ಸೀರೆ ಉಟ್ಟ ಪಾರ್ವತೀಬಾಯಿ ವಿದ್ಯೆ ಕಲಿಯಲು ಹೋಗಿ ಕುಳಿತಾಗ ಅಲ್ಲಿನ ಉಪಾಧ್ಯಾಯರು ಆಕೆಗೆ ಗಮನ ಕೊಟ್ಟು ಪಾಠ ಹೇಳಿಕೊಡಲಿಲ್ಲ. ಇದರಿಂದ ನೊಂದ ಪಾರ್ವತೀಬಾಯಿ ಹೋಮ್ ಸ್ಕೂಲಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟರು.

’ನಾನು ಮನೆಯಲ್ಲಿ ಇದ್ದು ಮನೆಗೆಲಸಗಳನ್ನು ಮಾಡುತ್ತೇನೆ. ನಾನನಿಗೆ ವಿದ್ಯೆ ಕಲಿಸಿ ಸಾಕು.’ ಪಾರ್ವತೀಬಾಯಿ ಅಕ್ಕನಿಗೆ ಹೇಳಿದರು. ಹೇಗಾದರೂ ಮಾಡಿ ಪಾರ್ವತೀಬಾಯಿಗೆ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಆನಂದಬಾಯಿಯವರ ಇಚ್ಛೆ.

’ನೀನು ಮನೆಗೆಲಸ ಮಾಡುವ ಅಗತ್ಯವಿಲ್ಲ. ಸ್ಕೂಲಿಗೆ ಹೋಗುವ ಇಷ್ಟ ಇಲ್ಲದೆ ಇದ್ದರೆ ಸುಮ್ಮನೆ ಕುಳಿತುಕೋ’ ಆನಂದಿಬಾಯಿ ತಂಗಿಗೆ ಹೇಳಿದರು. ಕೆಲಸ ಮಾಡಿ ಅಭ್ಯಾಸವಾದ ಪಾರ್ವತೀಬಾಯಿಗೆ ಮನೆಯಲ್ಲಿ ಸುಮ್ಮನೆ ಕೂರುವುದು ಕಷ್ಟವಾಯ್ತು. ಪುಣೆಯ ಪ್ರೊಫೆಸರ್ ಅಗರಕರ್ ಅವರ ಪತ್ನಿಗೆ ಪಾಠ ಹೇಳಿಕೊಡಲು ಮನೆಗೆ ಉಪಾಧ್ಯಾಯಿನಿ ಬರುವುದಾಗಿ ತಿಳಿಯಿತು. ಪಾರ್ವತೀಬಾಯಿ ಅಲ್ಲಿಗೆ ಹೋಗಿ ಬಾಲ ಬೋಧೆ  ಮಗ್ಗಿ ಕಲಿತರು.

ಆಕೆಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹುಟ್ಟಿತು. ತನ್ನ ಮಗನ ವಿದ್ಯಾಭ್ಯಾಸದ ಹೊಣೆ ಬೇರೆಯವರಿಗೆ ಹೊರಿಸುವುದು ಸರಿಯಲ್ಲ. ತಾನು ಹೇಗಾದರೂ ವಿದ್ಯೆ ಕಲಿತು ಉಪಾಧ್ಯಾಯಿನಿಯಾಗಿ ಮಗನನ್ನು ಸಾಕಬೇಕು ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿ ತಮ್ಮ ಅಕ್ಕನಿಗೆ ಈ ವಿಚಾರ ತಿಳಿಸಿದರು. ನಾದಿನಿ ಮಾಡಿದ ಈ ಒಳ್ಳೆಯ ಸಂಕಲ್ಪ ಕೇಳಿ ಕರ್ವೆ ಸಂತೋಷಪಟ್ಟರು. ಪುಣೆಯ ಹುಜೂರ್ ಬಾಗ್ ಎಂಬಲ್ಲಿ ಹೆಣ್ಣುಮಕ್ಕಳ ಶಾಲೆಗೆ ಹೋಗಿ ಪಾರ್ವತೀಬಾಯಿ ಓದಿ ಎರಡನೇ ತರಗತಿ ಪಾಸಾದರು. ಮುಂದೆ ಎಲ್ಲ ತರಗತಿಗಳಲ್ಲಿ ಪಾಸಾಗಿ ವಿದ್ಯಾರ್ಥಿ ವೇತನ ಗಳಿಸಿ ಉತ್ತಮ ವರ್ಗದ ಯೋಗ್ಯತಾ ಪತ್ರವನ್ನು ಪಡೆದರು.

ವಿಧವಾಶ್ರಮದ ಸೇವೆ

ಪುಣೆಯ ಬಳಿಯ ಹಿಂಗಣೆಯಲ್ಲಿ ಪ್ರೊಫೆಸರ್ ಕರ್ವೆ ವಿಧವಾಶ್ರಮ ಸ್ಥಾಪಿಸಿದರು. ಶಿಕ್ಷಣ ಮುಗಿಸಿದ ನಂತರ ವಿದ್ಯಾರ್ಥಿವೇತನ ಪಡೆದು ಮೂರು ವರ್ಷಗಳ ಕಾಲ ಸರ್ಕಾರಿ ಶಾಲೆಗಳಲ್ಲಿ ಪಾಠ ಹೇಳಬೇಕೆಂಬ ನಿಬಂಧನೆ ಇದ್ದ ಆ ಕಾಲದಲ್ಲಿ ವಿದ್ಯಾ ಇಲಾಖೆಯ ಮುಖ್ಯಾಧಿಕಾರಿಗಳಾದ ಸಿಲ್ಬಿಯವರು ಕರ್ವೆ ಅವರಿಗೆ ಯಾವ ನಿಬಂಧನೆಯೂ ಇಲ್ಲದೆ ಪಾರ್ವತೀಬಾಯಿ ವಿಧವಾಶ್ರಮದಲ್ಲಿ ಉಪಾಧ್ಯಾಯಿನಿಯಾಗಿ  ಪಾಠ ಹೇಳಿಕೊಡಲು ಅನುಮತಿ ಕೊಟ್ಟರು. ರಜಾ ದಿನಗಳಲ್ಲಿ ಪಾರ್ವತೀಬಾಯಿ ಹಿಂಗಣೆಯಿಂದ ಪುಣೆಗೆ ನಡೆದು ಹೋಗುವಾಗ ವಿಧವೆಯರ ಕಷ್ಟಗಳು, ಅವರಿಗೆ ವಿದ್ಯಾಭ್ಯಾಸದಿಂದ ಆಗುವ ಅನುಕೂಲ ಮತ್ತು ವಿಧವಾಶ್ರಮಗಳ ಸ್ಥಾಪನೆಯ ಅವಶ್ಯಕತೆಯ ಬಗ್ಗೆ ಕರ್ವೆ ಅವರು ಪಾರ್ವತೀಬಾಯಿಗೆ ತಿಳಿ ಹೇಳುತ್ತಿದ್ದರು. ಅವರ ಮಾತುಗಳು ಪಾರ್ವತೀಬಾಯಿಯ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನುಂಟು ಮಾಡಿದವು.  ಇದರ ಫಲವಾಗಿ ಜೀವಮಾನವನ್ನೆಲ್ಲ ವಿಧವಾಶ್ರಮದ ಸೇವೆಗೆ ಮುಡಿಪಾಗಿ ಇರಿಸಬೇಕೆಂದು ಆಕೆ ಸಂಕಲ್ಪ ಮಾಡಿದರು.

ಪಾರ್ವತೀಬಾಯಿ ವಿದ್ಯೆ ಕಲಿತು ವಿಧವಾಶ್ರಮದ ಕೆಲಸ ಮಾಡುವಾಗ  ’ನೀವು ಮದುವೆ ಮಾಡಿಕೊಳ್ಳುವಿರಾ?’ ಎಂದು ಅನೇಕರು ಆಕೆಯನ್ನು ಪ್ರಶ್ನಿಸಿದರು.

ಬಾಲವಿಧವೆಯಾದ ಆನಂದಿಬಾಯಿಗೆ ಪುನರ್ವಿವಾಹವಾದಾಗ ಪಾರ್ವತೀಬಾಯಿಯ ಮನಸ್ಸಿಗೂ ಆನಂದವಾಗಿತ್ತು. ಆದರೆ ತಾವು ಇದ್ದ ಒಬ್ಬ ಮಗನಿಗೆ ವಿದ್ಯಾಭ್ಯಾಸ ಮಾಡಿಸಿ ವಿಧವಾಶ್ರಮಕ್ಕೆ ಸೇವೆ ಸಲ್ಲಿಸುತ್ತಾ ಪರೋಪಕಾರದಲ್ಲಿ ಕಾಲ ಕಳೆಯಬೇಕೆಂದು ಆಕೆ ನಿರ್ಧರಿಸಿದರು.

ವಿಧವಾಶ್ರಮವು ೧೯೦೨ರಲ್ಲಿ ಪ್ರಾರಂಭವಾಯಿತು. ಮಣ್ಣಿನ ಗೋಡೆಗಳು ನಾಡಹೆಂಚಿನಿಂದ ಕಟ್ಟಿದ ಮೂರು ಕೋಣೆಗಳು ಮಾತ್ರ ಇದ್ದವು. ಹದಿನೆಂಟು ಜನ ವಿಧವೆಯರಿದ್ದರು. ಆಶ್ರಮದ ವೆಚ್ಚಕ್ಕಾಗಿ ಜನರಿಂದ ಚಂದಾ ವಸೂಲಿ ಮಾಡಬೇಕಾಗುತ್ತಿತ್ತು. ಕರ್ವೆ ಅವರು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಕಾಲೇಜಿನ ರಜಾ ದಿನಗಳಲ್ಲಿ ಮಾತ್ರ ಊರೂರು ಸುತ್ತಿ ವಿಧವಾಶ್ರಮಕ್ಕೆ ಹಣ ಶೇಖರಿಸುತ್ತಿದ್ದರು.

ಚಂದಾ ವಸೂಲಿಗಾಗಿ ಪ್ರವಾಸ

ಕರ್ವೆ ಚಂದಾ ವಸೂಲಿಗಾಗಿ ಹಿಂಗಣೆ ರಸ್ತೆಯಲ್ಲಿ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ಎತ್ತುಗಳು ಮುಗ್ಗರಿಸಿ, ಗಾಡಿ ತಲೆಕೆಳಗಾಗಿ ಕರ್ವೆ ಅವರಿಗೆ ತುಂಬಾಗಾಯಗಳಾದವು. ’ವಿಧವಾಶ್ರಮದ ಖರ್ಚಿಗಾಗಿ ಚಂದಾ ವಸೂಲಿಗಾಗಿ ಹೋಗುವವರು ಯಾರು? ವಿಧವಾಶ್ರಮದ ಗತಿ ಏನು?’ ಪಾರ್ವತಿಬಾಯಿಗೆ ಚಿಂತೆ ಹತ್ತಿತು. ಚಂದಾ ವಸೂಲಿ ಮಾಡಲು ತಾನೇ ಹೋಗುವುದಾಗಿ ಪಾರ್ವತೀಬಾಯಿ ಕರ್ವೆ ಅವರ ಅಭಿಪ್ರಾಯ ಕೇಳಿದರು. ಕರ್ವೆ ತಮ್ಮ ಸಮ್ಮತಿ ನೀಡಿದರು.

ಪಾರ್ವತೀಬಾಯಿ ಹೊರಡುವ ಮುನ್ನಾ ದಿನ ಆಕೆಯ ಮಗ ನಾನನಿಗೆ ಜ್ವರ ಬಂದು ಬಿಟ್ಟಿತು. ಆಶ್ರಮದಲ್ಲಿ ಕಾಶೀಬಾಯಿ, ವೇಣುಬಾಯಿ ಅವರ ವಶಕ್ಕೆ ಮೊಟ್ಟ ಮೊದಲು ವಿಧವಾಶ್ರಮದ ಚಂದಾ ವಸೂಲಿಗಾಗಿ ಹೊರಟರು. ಖಾಂಡವದಲ್ಲಿ  ಪುರಪ್ರಮುಖರನ್ನು ಸೇರಿಸಿ ವಿಧವಾಶ್ರಮದ ಬಗ್ಗೆ ಉಪನ್ಯಾಸ ಮಾಡಲು ಹೋದಾಗ, ತಲೆ ಕೂದಲು ತೆಗೆಯಿಸಿ ಕೆಂಪು ಸೀರೆ ಉಟ್ಟ ಈ ಮಡಿ ಹೆಂಗಸು ಭಾಷಣ ಮಾಡುವಳೇ?’ ಎಂದು ಎಲ್ಲರೂ ಹಾಸ್ಯ ಮಾಡಿ ನಕ್ಕರು. ಅಲ್ಲಿನ ಜಮೀನ್ದಾರನೊಬ್ಬ ತನ್ನ ಮನೆಗೆ ಸಂಜೆ ಮಾತುಕತೆ ಆಡಲು ಬರುವ ಜನರ ಎದುರಿನಲ್ಲಿ ಭಾಷಣ ಮಾಡಿದರು. ಅಲ್ಲಿ ಹದಿಮೂರು ರೂಪಾಯಿ ಚಂದಾಹಣ ವಸೂಲಾಯ್ತು. ’ಅಲ್ಲಿ ತನ್ನನ್ನು ಹಾಸ್ಯ ಮಾಡುವರೇನೋ!’ ಎಂದುಕೊಂಡಿದ್ದ ಆಕೆ ಎಲ್ಲರೂ ತಮ್ಮ ಭಾಷಣ ಕೇಳಿ ಚಂದಾ ನೀಡಿದ್ದಕ್ಕಾಗಿ ಪ್ರೋತ್ಸಾಹ ಸಿಕ್ಕಿದ್ದಕ್ಕಾಗಿ ತುಂಬಾ ಸಂತೋಷಪಟ್ಟರು. ಪಾರ್ವತೀಬಾಯಿ ಇಂದೂರು ಸಂಸ್ಥಾನಕ್ಕೆ ಹೋಗಿ ಅನೇಕ ಸರ್ಕಾರಿ ಅಧಿಕಾರಿಗಳನ್ನು ಕಂಡು ವಿಧವಾಶ್ರಮದ ಬಗ್ಗೆ ತಿಳಿ ಹೇಳಿದರು. ಅವರು ಯಾರೂ ಈಕೆಯ ಮಾತುಗಳನ್ನು  ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಇಂದೂರಿನ ಕಾಲೇಜ್ ವಿದ್ಯಾರ್ಥಿಗಳಿಬ್ಬರು ಈಕೆಯ ಉಪನ್ಯಾಸವನ್ನು ಏರ್ಪಡಿಸಿ ನೂರು ರೂಪಾಯಿ ಚಂದಾ ವಸೂಲಿ ಮಾಡಿಕೊಟ್ಟರು. ದೇವ್ ಎಂಬ ಊರಿಗೆ ಪಾರ್ವತೀಬಾಯಿ ಹೋಗಿ ವಿಧವೆಯರ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ಹೃದಯ ಕರಗುವಂತೆ ವಿವರಿಸಿ ಹೇಳಿದರು. ಅಲ್ಲಿ ಸಾರ್ವಜನಿಕರಿಂದ ನಾನ್ನೂರು ರೂಪಾಯಿ ಚಂದಾ ವಸೂಲಿ ಮಾಡಿಕೊಂಡು ಪಾರ್ವತೀಬಾಯಿ ಹಿಂಗಣೆ ಆಶ್ರಮಕ್ಕೆ ಹಿಂತಿರುಗಿದರು.

ವಿಧವಾಶ್ರಮಕ್ಕೆ ಚಂದಾ ವಸೂಲಿ ಮಾಡುವುದಕ್ಕಾಗಿ ಭಾರತದ ನಾನಾ ಮೂಲೆಗಳಿಗೆ ಆಕೆ ತಿರುಗಾಡಬೇಕಾಗುತ್ತಿತ್ತು. ಹಾಗೆ ಹೋದಾಗ ಆಕೆಗೆ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು. ಪಾರ್ವತೀಬಾಯಿ  ಹೋದಲ್ಲೆಲ್ಲಾ ವಿಧವೆಯರ ಕಷ್ಟಸುಖಗಳನ್ನು ಸಾವಿರ ಕಣ್ಣುಗಳಿಂದ ನೋಡುತ್ತಿದ್ದರು. ಎಳೆಯ ಬಾಲಕಿಯರಿಗೆ ಸಹ ಗಂಡ ಹೋದ ಕೂಡಲೇ ತಲೆ ಕೂದಲನ್ನು ತೆಗೆಸುವುದನ್ನು ಕಂಡು ಅವರ ಮನ ಕರಗಿತು. ಅಲ್ಲಲ್ಲೇ ಜನಗಳನ್ನು ಕೂಡಿಸಿ ’ಈ ದುಷ್ಟ ಪದ್ಧತಿಗಳನ್ನು ನಿಲ್ಲಿಸಿ. ಎಳೆಯ ವಯಸ್ಸಿನ ನಿಮ್ಮ ಹೆಣ್ಣು ಮಕ್ಕಳನ್ನು ಈ ಕಠಿಣ ಶಿಕ್ಷೆಗೆ ಗುರಿಪಡಿಸಬೇಡಿ!’ ಎಂದು ಪ್ರಾರ್ಥಿಸಿದರು.

ಜಮೀನ್ದಾರನ ಮನೆಯಲ್ಲಿ ಭಾಷಣ ಮಾಡಿದರು.

ಕ್ಷೌರಿಕರ ಸಭೆ ಸೇರಿಸಿ ’ಹೆಣ್ಣು ಮಕ್ಕಳ ತಲೆ ಕೂದಲು ತೆಗೆಯುವ ಈ ಕೆಲಸಕ್ಕೆ ಹೋಗಬೇಡಿ!’ ಎಂದು ಪ್ರಾರ್ಥಿಸಿದರು.

ದಿಟ್ಟ ಹೆಜ್ಜೆ

ಅನೇಕ ನಿಂದನೆಯ ಮಾತುಗಳನ್ನು ಕೇಳುವ ವಿಧವೆಯರ ಗೋಳನ್ನು  ನೋಡಿ ನೋಡಿ ಪಾರ್ವತೀಬಾಯಿಯ ಮನಸ್ಸು ರೋಸಿ ಹೋಗಿತ್ತು. ಆಗ ಆಕೆ ವೈಧವ್ಯದ ಚಿಹ್ನೆಗಳನ್ನು ತ್ಯಾಗ ಮಾಡಲು ನಿಶ್ಚಯ ಮಾಡಿದರು. ಮುಂದೆ ಆಕೆಯ ತಲೆ ಕೂದಲು ಬೆಳೆದಾಗ ಜನರಿಂದ ಮತ್ತೊಮ್ಮೆ ಟೀಕೆಗಳು ಪ್ರಾರಂಭವಾದವು.

ಕೆಲವರು ಆಶ್ಚರ್ಯಪಟ್ಟರು. ಕೆಲವರು ಕರ್ವೆ ಅವರ ಮುಂದೆ ಟೀಕೆ ಮಾಡಿದರು. ಮತ್ತೆ ಕೆಲವರು ಮನಸ್ಸು ತಡೆಯಲಾರದೆ ಪಾರ್ವತೀಬಾಯಿಯನ್ನೇ ನೇರವಾಗಿ ಕೇಳಿಬಿಟ್ಟರು. ಆಕೆ ’ದೇವರುಕ ಗ್ರಾಮದಲ್ಲಿ ಇದ್ದಾಗ ವೈಧವ್ಯದ ರೂಪವನ್ನು ಅನುಸರಿಸಬೇಕಾಯ್ತು. ಆನಂತರ ಆಶ್ರಮಕ್ಕೆ ಸೇರಿದ ಕೂಡಲೇ ಇದನ್ನು ತ್ಯಾಗ ಮಾಡಿದ್ದರೆ ನನಗೂ ಆಶ್ರಮಕ್ಕೂ ಕಳಂಕ ಬರುತ್ತಿತ್ತು. ಎರಡನೆಯದು ಚಿಕ್ಕ ಹುಡುಗ ನಾನನ  ಮನಸ್ಸಿನಲ್ಲಿ ನಾನಾ ರೀತಿಯ ಪರಿಣಾಮಗಳಾಗುತ್ತಿದ್ದವು. ಅದು ನನಗೆ ಇಷ್ಟವಿರಲಿಲ್ಲ. ಈಗ ನಾನನಿಗೆ ವಿಚಾರ ಮಾಡುವ ಶಕ್ತಿ ಬಂದಿದೆ. ಬೇರೆಯವರಿಗೆ ಉಪದೇಶಿಸುವ ವಿಚಾರವನ್ನು ನಾನೇ ಮಾಡಿ ತೋರಿಸಬೇಕು ಎಂದು ನನ್ನ ಮನಸ್ಸಿಗೆ ಬಂದಿದೆ. ಆದ್ದರಿಂದ ವೈಧವ್ಯದ ಚಿಹ್ನೆಗಳನ್ನು ತ್ಯಾಗ ಮಾಡಿದೆ’ ಎಂದು ಉತ್ತರ ಕೊಟ್ಟರು.

ಪಾರ್ವತೀಬಾಯಿಯ ಮಗ ನಾನನು ಒಳ್ಳೆಯ ಸಹವಾಸದಲ್ಲಿ ಇದ್ದು ಚೆನ್ನಾಗಿ ಓದಿ ಎಂ.ಎ. ಪಾಸು ಮಾಡಿದರು. ಆತನೂ ತಾಯಿಯಂತೆ ವಿಧವಾಶ್ರಮದ ಸೇವೆಗಾಗಿ ತನ್ನ ಜೀವನವನ್ನು ಮುಡುಪಿರಿಸುವುದಾಗಿ ಸಂಕಲ್ಪ ಮಾಡಿದನು. ಮಗನು ಸಂಕಲ್ಪ ಮಾಡಿದನು. ಮಗನ ಸಂಕಲ್ಪ ಪಾರ್ವತೀಬಾಯಿಗೂ ಸಂತೋಷನ್ನು ಉಂಟು ಮಾಡಿತು.

ಇಂಗ್ಲಿಷ್ ಕಲಿಯಬೇಕು

ಮಗನ ಮದುವೆ ಮಾಡಿ ಕರ್ತವ್ಯ ಪೂರೈಸಿದ ನಂತರ ಆಶ್ರಮಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಪಾರ್ವತೀಬಾಯಿಗೆ ಅವಕಾಶ ಸಿಕ್ಕಿತು. ಪಾರ್ವತೀಬಾಯಿಗೆ ಬಹಳ ದಿನಗಳಿಂದಲೂ ಇಂಗ್ಲಿಷ್ ಕಲಿಯುವ ಆಸೆ. ವಿಧವಾಶ್ರಮಕ್ಕೆ ಚಂದಾ ವಸೂಲಿ ಮಾಡುವ ಜವಾಬ್ದಾರಿ. ತಿರುಗಾಡುವ ಕೆಲಸ ಆಕೆಗೆ ಇದ್ದದ್ದರಿಂದ ಇಂಗ್ಲಿಷ್ ಕಲಿಯಲು ವೇಳೆಯೂ ಸಿಕ್ಕುತ್ತಿರಲಿಲ್ಲ. ತಿಂಗಳಿಗೆ ಮುನ್ನೂರು ರೂಪಾಯಿ ಚಂದಾ ವಸೂಲು ಮಾಡುತ್ತಿದ್ದರು. ಈ ಹಣದಿಂದ ತಿಂಗಳಿಗೆ ಐವತ್ತು ಜನ ವಿಧವೆಯರಿಗೆ ಊಟಕ್ಕೆ ಆಹಾರ ಸಾಮಗ್ರಿಗಳಾಗುತ್ತಿದ್ದವು. ’ತಾನು ಇಂಗ್ಲಿಷ್ ಕಲಿಯುವುದಕ್ಕಿಂತ ಐವತ್ತು ಜನ ವಿಧವೆಯರಿಗೆ ಊಟಕ್ಕಾಗಿ ಹಣ ಸಂಗ್ರಹಿಸುವುದೇ ಪುಣ್ಯದ ಕೆಲಸ’ ಎಂದು ಪಾರ್ವತೀಬಾಯಿ ಅಂದುಕೊಳ್ಳುತ್ತಿದ್ದರು.

ಚಂದಾ ವಸೂಲಿಗಾಗಿ ಊರೂರು ತಿರುಗುವಾಗ ಇಂಗ್ಲಿಷ್ ಬರದೆ ಆಕೆಗೆ ತೊಂದರೆಗಳಾಗುತ್ತಿದ್ದವು. ಮರಾಠಿ ಆಡದ ಪ್ರದೇಶಗಳಲ್ಲಿ ಮಾತನಾಡುವುದೇ ಕಷ್ಟವಾಗುತ್ತಿತ್ತು. ರೈಲು ನಿಲ್ದಾಣಗಳಲ್ಲಿ ಬರೆದ ಇಂಗ್ಲಿಷ್ ಹೆಸರುಗಳನ್ನು ಓದಲು ಬರದೆ ಅನೇಕ ಊರುಗಳನ್ನು ದಾಟಿ ಮುಂದಕ್ಕೆ ಹೋಗುತ್ತಿದ್ದರು. ಪಟ್ಟಣಗಳಲ್ಲಿ ಬರೆದ ಶ್ರೀಮಂತರ ಮನೆ ಬಾಗಿಲುಗಳಿಗೆ ಇಂಗ್ಲಿಷ್ ನಲ್ಲಿ ಬರೆದ ಬೋರ್ಡು ಹಾಕಿರುತ್ತಿದ್ದರು. ಆಗ ಆಕೆ ಬೇರೆಯವರ ಸಹಾಯ ಕೇಳಬೇಕಾಗುತ್ತಿತ್ತು. ತಾನು ಇಂಗ್ಲಿಷ್ ಕಲಿತರೆ ವಿಧವಾಶ್ರಮಕ್ಕೆ ಇನ್ನೂ ಹೆಚ್ಚಾಗಿ ಸೇವೆ ಮಾಡಬಹುದೆಂದು ಅನ್ನಿಸಿತು. ೧೯೧೪ರಲ್ಲಿ ಕರ್ವೆ ಅವರ ಸ್ನೇಹಿತರಾದ ಡಾಕ್ಟರ್ ಖಾಡ್ವಾಲ ಅವರು ಇಂಗ್ಲಿಷ್ ಕಾನ್ವೆಂಟಿನಲ್ಲಿ ಪಾರ್ವತೀಬಾಯಿ ಇದ್ದರೆ ಬೇಗ ಇಂಗ್ಲಿಷ್ ಕಲಿಯಬಹುದೆಂದು ಕರ್ವೆಗೆ ಪತ್ರ ಬರೆದರು. ವಿಧವಾಶ್ರಮದ ಸ್ಥಿತಿ ಸುಧಾರಿಸಿತ್ತು. ಕರ್ವೆಯವರು ಪಾರ್ವತೀಬಾಯಿಯನ್ನು ಮುಂಬಯಿಯ ಬಾಂದ್ರದ ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸಿದರು. ೪೩ ವರ್ಷದ ಪಾರ್ವತೀಬಾಯಿಗೆ ಮಕ್ಕಳ ಜತೆ ಕುಳಿತು ಇಂಗ್ಲಿಷ್ ಕಲಿಯುವುದು ಕಷ್ಟವಾಯಿತು. ಮಕ್ಕಳ ಜತೆ ಈಕೆಗೆ ಪಾಠ ಹೇಳಲು ಶಾಲಾಧಿಕಾರಿಗಳು ನಿರಾಕರಿಸಿ ಕ್ರೈಸ್ತ ಮತದ ಹುಡುಗಿಯೊಬ್ಬಳಿಂದ. ಈಕೆಗೆ ಪಾಠ ಹೇಳಿಸಿದರು. ಈಕೆಯನ್ನು ಹುಡುಗರಿಂದ ದೂರ ಇರಿಸುತ್ತಿದ್ದರು. ಖಾಂಡ್ವಾಲರು ಮುಂಬಯಿಯ ಸ್ಕಾಟಿಷ್ ಮಿಷನ್ ಶಾಲೆಗೆ ಈಕೆಯನ್ನು ಸೇರಿಸಿದರು. ಅಲ್ಲಿಯೂ ಅಧ್ಯಾಪಕರು ಮಕ್ಕಳ ಜತೆ ಸೇರಿಸದೇ ದೂರವೇ ಇರಿಸಿದರು. ಪಾರ್ವತೀಬಾಯಿ ಬಿಡುವಿನ ವೇಳೆಯಲ್ಲಿ ಆಶ್ರಮಕ್ಕೆ ಚಂದಾ ವಸೂಲಿ ಮಾಡುತ್ತಿದ್ದರು.

ಅಮೆರಿಕಕ್ಕೆ ಪ್ರಯಾಣ

ಪಾರ್ವತೀಬಾಯಿ ಅವರು ವಿಧವಾಶ್ರಮಕ್ಕಾಗಿ ಮಾಡಿದ್ದ ಕೆಲಸವನ್ನು ಕಂಡು ಕರ್ವೆಯವರಿಗೆ ಅನ್ನಿಸಿತು, ’ಈಕೆ ಹೊರದೇಶಗಳಲ್ಲಿ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ಕಂಡು, ಅನುಭವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾವತಿಯಾಗಬೇಕು. ಆಗ ಆಶ್ರಮಕ್ಕಾಗಿ ಇನ್ನೂ ಚೆನ್ನಾಗಿ ಕೆಲಸ ಮಾಡಬಲ್ಲಳು’ ಎಂದು ಆಕೆಯನ್ನು ಪಾಶ್ಚಾತ್ಯ ದೇಶಕ್ಕೆ ಕಳುಹಿಸಲು ನಿರ್ಧರಿಸಿದರು.

ಅಮೆರಿಕೆಗೆ ಪಾಲಿಭಾಷೆ ಕಲಿಸಲು ಹೋಗಲಿದ್ದ ಪ್ರೊಫೆಸರ್ ಧರ್ಮಾನಂದ ಕೊಸಾಂಬಿ ಅವರ ಜೊತೆಮಾಡಿ ಕರ್ವೆಯವರು ೧೯೧೮ರ ಆಗಸ್ಟ್ ೫ ರಂದು ಪಾರ್ವತೀಬಾಯಿಯನ್ನು ಹಡಗು ಹತ್ತಿಸಿದರು. ನಲವತ್ತೆಂಟು ವರ್ಷದ ಪಾರ್ವತೀಬಾಯಿ ತಾನು ಹುಟ್ಟಿದ ತಾಯಿ ನಾಡನ್ನು ಬಿಟ್ಟು ವಿದೇಶಕ್ಕೆ ಹೊರಟರು.

ಹಡಗು ಮುಂಬಯಿ ಬಿಟ್ಟು ದೂರ ಆದಂತೆಲ್ಲಾ ಮಾತೃಭೂಮಿಯ ಮೇಲಿನ ಪ್ರೀತಿ ಪಾರ್ವತೀಬಾಯಿಗೆ ಉಕ್ಕಿ ಬಂತು. ಆಕೆಯ ಮನಸ್ಸಿಗಾದ ದುಃಖ ಹೇಳುವಂತಿಲ್ಲ. ಪಾರ್ವತೀಬಾಯಿ ಪೂರಾ ಸಸ್ಯಾಹಾರಿಯಾದ್ದರಿಂದ ಹಡಗಿನಲ್ಲಿ ಮಾಡಿದ ಅಡಿಗೆ ಆಕೆಗೆ ಸೇರದೆ ಬ್ರೆಡ್ಡು ಹಣ್ಣು ತಿಂದುಕೊಂಡು ಆಕೆ ಇರಬೇಕಾಯ್ತು. ಅಮೆರಿಕಾಕ್ಕೆ ಹೋಗುವ ಹಡಗು ಹತ್ತಿದ ಮೇಲೆ ಊಟ ಸರಿ ಇಲ್ಲದೆ, ಹವೆ ಒಗ್ಗದೆ ಆಕೆಗೆ ಜ್ವರ ಬಂತು. ಆಕೆಯ ಬಳಿ ಬೆಚ್ಚನೆಯ ಬಟ್ಟೆಗಳಿರಲಿಲ್ಲ. ಹಡಗಿನ ಡಾಕ್ಟರು ಔಷಧಿಕೊಟ್ಟು ’ಹಾಲು ಮಾತ್ರ ಕುಡಿಯಬೇಕು’ ಎಂದರು. ಹಡಗಿನಲ್ಲಿ ಸಾಕಷ್ಟು ಹಾಲು ಸಿಕ್ಕುತ್ತಿರಲಿಲ್ಲ. ಸ್ಯಾನ್ ಫ್ರಾನ್ಸಿಸ್ಕೊ ತಲುಪಿ ಅಲ್ಲಿ ಕೊಸಾಂಬಿ ಕುಟುಂಬದವರೊಡನೆ ಪಾರ್ವತೀಬಾಯಿ ವಸತಿ ಗೃಹದಲ್ಲಿ ತಂಗಿದರು. ಕೊಸಾಂಬಿಯವರು ಜರೂರಾಗಿ ಬಾಸ್ಟನ್ ಗೆ ಹೋಗಬೇಕಾಗಿತ್ತು. ಪಾರ್ವತಿಬಾಯಿಗೆ ಅನಾರೋಗ್ಯದಿಂದಾಗಿ ಬಾಸ್ಟನ್ ವರೆಗೆ ಪ್ರಯಾಣ ಮಾಡುವ ಶಕ್ತಿ ಇರಲಿಲ್ಲ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೊಸಾಂಬಿ ಅವರಿಗೆ ಪರಿಚಯವಿದ್ದ ಕ್ರೈಸ್ತ ತರುಣಿಯರ ಸಂಘದ ಕಾರ್ಯದರ್ಶಿಯ ವಶಕ್ಕೆ ಒಪ್ಪಿಸಿ, ಆಕೆಯ ಹಣದಲ್ಲಿ ಉಳಿದಿದ್ದ ಇನ್ನೂರು ಡಾಲರ್ ಗಳನ್ನು ಕೊಟ್ಟು ’ಪಾರ್ವತೀಬಾಯಿಗೆ ಖಾಯಿಲೆವಾಸಿಯಾಗಿ ಅಮೆರಿಕಾದಲ್ಲಿ ಇರುವುದು ಸಾಧ್ಯ ಎನಿಸಿದರೆ, ಬಾಸ್ಟನ್ ಗೆ ಕಳುಹಿಸಿ ಹಿಂದಕ್ಕೆ ಹೋಗಬೇಕು ಎಂದರೆ ಭಾರತಕ್ಕೆ ವಾಪಸ್ ಕಳುಹಿಸಿ’ ಎಂದರು. ಕ್ರೈಸ್ತ ತರುಣಿಯರ ಸಂಘದಲ್ಲಿ ಪಾರ್ವತೀಬಾಯಿ ಐದು ದಿನಗಳು ಇದ್ದದ್ದಕ್ಕೆ ಐವತ್ತು ರೂಪಾಯಿಗಳು ಖರ್ಚಾದವು.

ಕಷ್ಟ ಪರಂಪರೆ

ಇಂಗ್ಲಿಷ್ ಬಾರದ ಪಾರ್ವತೀಬಾಯಿ ಅಮೆರಿಕದ ಮನೆ ಕೆಲಸಗಳನ್ನು ಮಾತ್ರ ಮಾಡಬೇಕಿತ್ತು. ಭಾರತ ದೇಶದ ಮನೆ ಕೆಲಸಕ್ಕೂ ಅಮೆರಿಕದ ಮನೆಕೆಲಸಕ್ಕೂ ಅಜಗಜಾಂತರ. ಕ್ರೈಸ್ತ ತರುಣಿಯರ ಹಾಸ್ಟೆಲ್ ನಲ್ಲಿ ಕೆಲಸದವಳು ಮಾಡುವ ಎಲ್ಲಾ ಕೆಲಸಗಳನ್ನು ಪಾರ್ವತೀಬಾಯಿ ಕುತೂಹಲದಿಂದ ನೋಡಿ ಎಷ್ಟೋ ಮನೆ ಕೆಲಸಗಳನ್ನು ಕಲಿತರು. ಕ್ರೈಸ್ತ ತರುಣಿಯರ ಸಂಘದ ಕಾರ್ಯದರ್ಶಿಯು ಓಕ್ ಲೆಂಡಿನ ಮಿಷನರಿ ವಿಶ್ರಾಂತಿ ಗೃಹದಲ್ಲಿ ಪಾರ್ವತೀಬಾಯಿಗೆ ಕೆಲಸ ಕೊಡಿಸಿದಳು. ಮಿಷನರಿಗಳ ವಿಶ್ರಾಂತಿ ಗೃಹದಲ್ಲಿ ದಿನಕ್ಕೆ ನಾನ್ನೂರು ತಟ್ಟೆಗಳನ್ನು ತೊಳೆಯಬೇಕಾಗುತ್ತಿತ್ತು. ಪ್ರಾರ್ಥನಾ ಮಂದಿರ, ಊಟದ ಮನೆ, ಪುಸ್ತಕ ಭಂಡಾರವನ್ನು ಶುಚಿಗೊಳಿಸುವ ಕೆಲಸ ಬೆಳಗಿನಿಂದ ಸಂಜೆಯವರೆಗೆ ಮಾಡಬೇಕಾಗುತ್ತಿತ್ತು. ಅಲ್ಲಿನ ಒಬ್ಬ ಮುದುಕಿ ಪಾರ್ವತೀಬಾಯಿಗೆ ಬೈಬಲ್ ಹೇಳಿಕೊಡತೊಡಗಿದಳು. ಅಲ್ಲಿನ  ಮಿಷನರಿಗಳು ಮೇಲಿಂದ ಮೇಲೆ ’ನೀನು ಕ್ರಿಸ್ತನನ್ನು ನಂಬು, ನಿನ್ನನ್ನೂ ನಿನ್ನ ದೇಶವನ್ನೂ ಉದ್ಧರಿಸಿಕೊಳ್ಳುವೆ’ ಎಂದು ಉಪದೇಶ ಕೊಡತೊಡಗಿದರು. ’ನನಗೆ ಇಂಗ್ಲಿಷ್ ಕಲಿಸಿಕೊಡಿ. ಆನಂತರ ನಾನು ಹಿಂದೂ ಧರ್ಮ ಕ್ರೈಸ್ತ ಧರ್ಮದ ತತ್ವಗಳನ್ನು ಹೋಲಿಸಿ ನೋಡಿ ನನಗೆ ಸರಿ ಕಂಡಿ ಧರ್ಮವನ್ನು ಸ್ವೀಕರಿಸುತ್ತೇನೆ’ ಎಂದರು ಪಾರ್ವತೀಬಾಯಿ. ತನ್ನ ಕೆಲಸವನ್ನೆಲ್ಲ ಮುಗಿಸಿ ರಾತ್ರಿ ವೇಳೆ ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯ ಓದಿ ’ಕೃಷ್ಣಾ! ನನ್ನನ್ನು ಈ ಕಷ್ಟದಿಂದ ಪಾರು ಮಾಡು ’ ಎಂದು ಪ್ರಾರ್ಥಿಸುತ್ತಿದ್ದರು.

ಭಾರತೀಯ ವಿದ್ಯಾರ್ಥಿಗಳೊಡನೆ

ಪುಣೆಯ ವಿಧವಾಶ್ರಮದಲ್ಲಿ ಪಾಠ ಹೇಳುತ್ತಿದ್ದ ಪ್ರೊಫೆಸರ್ ಚಿಪಳೂಣಕರ್ ರವರು, ಅಮೆರಿಕದಲ್ಲಿದ್ದ ಡಾಕ್ಟರ್ ಕೊಕಟನೂರರ ವಿಳಾಸವನ್ನು ಪಾರ್ವತೀಬಾಯಿಗೆ ಕೊಟ್ಟಿದ್ದರು. ಪಾರ್ವತೀಬಾಯಿ ದೇವರ ಮೇಲೆ ಭಾರ ಹಾಕಿ, ತನ್ನ ಕಷ್ಟ ಹೇಳಿಕೊಂಡು ಕೊಕಟನೂರರಿಗೆ ಪತ್ರ ಬರೆದರು. ನ್ಯೂಯಾರ್ಕ್‌ನಲ್ಲಿ ಲಾಲಲಜಪತರಾಯರು ನಡೆಸುತ್ತಿದ್ದ ’ಯಂಗ್ ಇಂಡಿಯಾ’ ಪತ್ರಿಕೆಗೆ ಕೊಕಟನೂರರು ಪತ್ರ ಕಳಹಿಸಿದರು.

’ಯಂಗ್ ಇಂಡಿಯಾ’ ಕಛೇರಿಯ ಡಾಕ್ಟರ್ ಎನ್.ಎಸ್. ಹರ್ಡಿಕರರು ಸ್ಯಾನ್ ಫ್ರಾನ್ಸಿಸ್ಕೋ ಬರ್ಕ್‌ಲಿಯಲ್ಲಿ ಇದ್ದ ಭಾರತೀಯ ವಿದ್ಯಾರ್ಥಿಗಳು ವರ್ತಕರು ಎಲ್ಲರಿಗೂ ತೊಂದರೆಯಲ್ಲಿರುವ ಈ ಮಹಿಳೆಗೆ ಸಹಾಯ ಮಾಡಿ’ ಎಂದು ತಂತಿ ವರ್ತಮಾನ ಕಳುಹಿಸಿದರು.  ಇದರ ಪರಿಣಾಮವಾಗಿ ದಾಮೋದರ್, ವಾಸುದೇವ್, ದೇಶವರಾವ್ ಎಂಬ ಮೂವರು ಮಹಾರಾಷ್ಟ್ರದ ವಿದ್ಯಾರ್ಥಿಗಳು ಮಿಷನರಿ ವಿಶ್ರಾಂತಿ ಗೃಹಕ್ಕೆ ಬಂದು ಪಾರ್ವತೀಬಾಯಿಯನ್ನು ಕರೆದುಕೊಂಡು ಹೋದರು. ತನ್ನನ್ನು ಉದ್ಧರಿಸಲು ಬಂದ ದೇವರ ಪ್ರತಿ ರೂಪವೇ ಈ ವಿದ್ಯಾರ್ಥಿಗಳು ಎಂದು ಪಾರ್ವತೀಬಾಯಿ ತಿಳಿಸಿದರು. ಮಹಾರಾಷ್ಟ್ರದ ವಿದ್ಯಾರ್ಥಿಗಳೊಡನೆ ಪಾರ್ವತೀಬಾಯಿ ತನ್ನ ಮಾತೃಭಾಷೆ ಮರಾಠಿಯಲ್ಲಿ ಮನಸಾರೆ ಮಾತನಾಡಿ ತೃಪ್ತಿ ಪಟ್ಟರು.

ವಿದ್ಯಾರ್ಥಿಗಳ ಊಟ ಉಪಚಾರದ ಹೊಣೆಯನ್ನು ಪಾರ್ವತೀಬಾಯಿ ಹೊತ್ತರು. ವಿದ್ಯಾರ್ಥಿಗಳು ಆಕೆಯನ್ನು ತಮ್ಮ ತಾಯಿ ಎಂಬಂತೆ ಆದರ ಗೌರವದಿಂದ ಕಾಣುತ್ತಿದ್ದರು. ವಿದ್ಯಾರ್ಥಿಗಳಿಗೆ ಹಣದ ಆಡಚಣೆ ಇತ್ತು. ’ತಾನು ವಿದ್ಯಾರ್ಥಿಗಳಿಗೆ ಭಾರವಾದೆನಲ್ಲ?’ ಎಂದು ಆಕೆ ಸಂಕೋಚಪಟ್ಟುಕೊಳ್ಳುತ್ತಿದ್ದರು. ತಾನು ಅಮೆರಿಕಕ್ಕೆ ಬಂದ ಉದ್ದೇಶ ನೆರವೇರಲಿಲ್ಲ. ವಿಧವಾಶ್ರಮದ ಕೆಲಸ ಏನೂ ಮಾಡಲಾಗಲಿಲ್ಲ. ಇಂಗ್ಲಿಷ್ ಕಲಿಯಲಾಗಲಿಲ್ಲವಲ್ಲಾ ಎಂದು ಕೊರಗುತ್ತಿದ್ದರು. ಬೆಳಿಗ್ಗೆ ಹೋದರೆ ರಾತ್ರಿ ವೇಳೆಗೆ ಸುಸ್ತಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪಾರ್ವತೀಬಾಯಿಗೆ ಇಂಗ್ಲಿಷ್ ಹೇಳಿಕೊಡಲು ಪುರುಸೊತ್ತು ಸಿಕ್ಕುತ್ತಿರಲಿಲ್ಲ.

ಗೋಖಲೆಯವರಲ್ಲಿಗೆ

ಒಂದು ದಿನ ಪಾರ್ವತೀಬಾಯಿ ವಿದ್ಯಾರ್ಥಿಗಳ ಮೇಜು ಒರೆಸುವಾಗ ಅಮೆರಿಕದಲ್ಲಿರುವ ಭಾರತೀಯರ ವಿಳಾಸವಿದ್ದ ಪುಸ್ತಕ ಕಂಡಿತು. ಅದರಲ್ಲಿ ಪ್ರೊಫೆಸರ್ ಗೋಖಲೆ ಅವರ ವಿಳಾಸವಿತ್ತು. ಕೇಶವರಾವ್ ಸಹಾಯದಿಂದ ಪಾರ್ವತೀಬಾಯಿ ತನ್ನ ಉದ್ದೇಶ ತಿಳಿಸಿ ಗೋಖಲೆ ಅವರಿಗೆ ಪತ್ರ ಬರೆದರು. ಪಾರ್ವತೀಬಾಯಿಯ ಪತ್ರ ನೋಡಿ ಆಕೆ ಬರಬೇಕೆಂದು ಗೋಖಲೆ ಆಹ್ವಾನಿಸಿದರು. ಪಾರ್ವತೀಬಾಯಿಯ ಬಳಿ ನೂರು ಡಾಲರ್ ಮಾತ್ರ ಇತ್ತು. ಬರ್ಕಲಿಯಿಂದ ನ್ಯೂಯಾರ್ಕಗೆ ಟಿಕೆಟಿಗೆ ನೂರ ಐವತ್ತು ಡಾಲರ್. ತನ್ನ ಬಳಿ ಇರುವ ಹಣ ಸಾಲದೆಂದು ಗೋಖಲೆಯವರಿಗೆ ಪತ್ರ ಬರೆದರು. ರೈಲಿನ ವೆಚ್ಚಕ್ಕೆ ಬೇಕಾಗುವ ಹಣವನ್ನು ಗೋಖಲೆ ಕಳುಹಿಸಿಕೊಟ್ಟರು. ನ್ಯೂಯಾರ್ಕ್‌ಗೆ ಹೋಗುವ ಟಿಕೆಟನ್ನು ಕೊಂಡು, ಕೇಶವರಾವ್, ಪಾರ್ವತೀಬಾಯಿಯನ್ನು ರೈಲಿನಲ್ಲಿ ಎಲ್ಲೆಲ್ಲಿ ಬದಲಾಯಿಸಬೇಕೆಂದು ಹೇಳಿದರು.

ಆರು ದಿನಗಳ ಕಾಲ ಸಸ್ಯಾಹಾರ ಊಟ ಸಿಕ್ಕದೆ ಬಿಸ್ಕತ್ತು ಹಣ್ಣು ಕಡೆಲಕಾಯಿ ಬೀಜ ತಿಂದುಕೊಂಡು, ಭಾಷೆ ತಿಳಿಯದೆ ಎರಡು ಕಡೆ ರೈಲು ಬದಲಾಯಿಸಬೇಕಾದಾಗ ಬೇರೆಯವರ ಸಹಾಯ ಕೇಳಿ ಪಾರ್ವತೀಬಾಯಿ ಷೆನೆಕ್ಟಡಿ  ಪಟ್ಟಣವನ್ನು ತಲುಪಿದರು. ಆಕೆ ಯಾವ ರೈಲಿನಲ್ಲಿ ಬರುವರೆಂದು ಗೋಖಲೆಯವರಿಗೆ ತಿಳಿದಿರಲಿಲ್ಲವಾದ್ದರಿಂದ ಗೋಖಲೆ ಸ್ಟೇಷನ್ನಿಗೆ ಬಂದಿರಲಿಲ್ಲ.

ಸ್ಟೇಷನ್ನಿನಿಂದ ತಮ್ಮ ಮನೆಗೆ ಬರುವ ನಕ್ಷೆಯನ್ನು ಬರೆದು ಗೋಖಳೆ ಪಾರ್ವತೀಬಾಯಿಗೆ ಕಳುಹಿಸಿಕೊಟ್ಟರು. ಭಾಷೆ ತಿಳಿಯದ ಆಕೆ ಮನೆ ಹುಡುಕಿಕೊಂಡು ಹೋಗುವುದು ಕಷ್ಟವಾಯಿತು. ಸ್ಟೇಷನ್ ಮಾಸ್ಟರ ಸಹಾಯ ಕೇಳಿದಾಗ ಆತ ಮನೆ ತೋರಿಸಲು ಜವಾನನೊಬ್ಬನನ್ನು ಕಳಹಿಸಿದರು. ಅಂತೂ ಮನೆ ತಲುಪಿದರು. ಗೋಖಲೆ ಬಂದು ಪಾರ್ವತೀಬಾಯಿಯನ್ನು ಆದರದಿಂದ ಮನೆಗೆ ಕರೆದುಕೊಂಡು ಹೋಗಿ, ತಮ್ಮ ಮನೆಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುವ ಮಿಸೆಸ್ ಸಿಕೋರ್ ಗೆ ಪಾರ್ವತೀಬಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದರು.

ಇಪ್ಪತ್ತಾರು ಸಾವಿರ ಜನ ಕೆಲಸಗಾರರಿದ್ದ ನ್ಯೂಯಾರ್ಕಿನ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಇಂಜಿನಿಯರಾಗಿದ್ದ ಗೋಖಲೆ ಉದ್ಧಾರಕ್ಕಾಗಿ ವಿರಾಮ ವೇಳೆಯನ್ನು ವಿನಿಯೋಗಿಸುತ್ತಿದ್ದರು. ’ನಿರುದ್ಯೋಗ’ ಎಂಬ ಪುಸ್ತಕ ಬರೆದಿದ್ದರು. ಗೋಖಲೆ ಅವರನ್ನು ಕೇಳಿ ಈ ನಿರುದ್ಯೋಗ ಪುಸ್ತಕಗಳನ್ನು ಮಾರಲು ಪಾರ್ವತೀಬಾಯಿ ಹೋದಾಗ ಅನೇಕರ ಪರಿಚಯವಾಯ್ತು. ಮಿಸೆಸ್ ಅನಿಸ್ ಎಂಬುವವರಲ್ಲಿ ಆಕೆ ಕೆಲಸಕ್ಕೆ ಸೇರಿದರು. ಐದಾರು ವಾರ ಕೆಲಸ ಮಾಡುವಷ್ಟರಲ್ಲಿ ಮಿಸ್ಟರ್ ಅನಿಸ್ ರವರಿಗೆ ಬ್ಯಾಸ್ಟನ್ ಗೆ ವರ್ಗವಾಯ್ತು.

ವಿಶ್ವಾಸದ ಕುಟುಂಬದೊಡನೆ

ಆನಿಸರ ಮನೆ ಬಿಟ್ಟ ಮೇಲೆ ಗೋಖಲೆ ಮತ್ತು ಮಿಸೆಸ್ ಸಿಕೋರರ ಸಹಾಯದಿಂದ ವಾರಕ್ಕೆ ಹದಿನೈದು ಡಾಲರ್ ಸಂಬಳದಂತೆ ಆಸ್ಪತ್ರೆಯಲ್ಲಿ ತಟ್ಟೆ ತೊಳೆಯುವ ಕೆಲಸ ಸಿಕ್ಕಿತು. ಆಗ ಪಾರ್ವತೀಬಾಯಿ ಆರೋಗ್ಯ ಚೆನ್ನಾಗಿರಲಿಲ್ಲ. ಪಾರ್ವತೀಬಾಯಿ ತಟ್ಟೆ ತೊಳೆಯುತ್ತಿದ್ದಾಗ ಜ್ಞಾನತಪ್ಪಿ ಬಿದ್ದು ಬಿಟ್ಟರು. ತಟ್ಟೆ ತೊಳೆಯುವ ಕೆಲಸಕ್ಕಾಗಿ ಆಸ್ಪತ್ರೆ ಸೇರಿದ ಪಾರ್ವತಿಬಾಯಿ ರೋಗಿಯಾಗಿ ಆಕೆಯ ತಟ್ಟೆಯನ್ನೇ ಬೇರೆಯವರು ತೊಳೆಯುವಂತಾಯ್ತು. ಆಸ್ಪತ್ರೆಯ ಯಜಮಾನಿ ತುಂಬಾ ವಿಶ್ವಾಸದಿಂದ ಆಕೆಯನ್ನು ಉಪಚರಿಸಿ ಔಷಧಿ ಕೊಡಿಸಿದರು. ಪಾರ್ವತೀಬಾಯಿಯ ಆರೋಗ್ಯ ಸುಧಾರಿಸಿದ ನಂತರ ಆಸ್ಪತ್ರೆಯ ಯಜಮಾನಿ ’ಆಸ್ಪತ್ರೆಯಲ್ಲಿ ‘ತಟ್ಟೆ ತೊಳೆಯುವ ಕೆಲಸ ನಿಮಗೆ ಸರಿ ಇಲ್ಲ’’ ಎಂದು ಹೇಳಿ, ತಮಗೆ ಪರಿಚಯವಿದ್ದ ಬಾಲ್ಡ್ ವಿನ್ ಎಂಬುವವರಲ್ಲಿ ಆಕೆಯನ್ನು ಕೆಲಸಕ್ಕೆ ಸೇರಿಸಿದರು. ಬಾಲ್ಡ್ ವಿನ್ನರ ಪತ್ನಿ ತುಂಬಾ ಒಳ್ಳೆಯ ಹೆಂಗಸು. ಪಾರ್ವತೀಬಾಯಿಯನ್ನು ತುಂಬಾ ವಿಶ್ವಾಸದಿಂದ ಕಂಡು, ಆಕೆ ಸಸ್ಯಾಹಾರ ತಯಾರಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಕೊಠಡಿ ಕೊಟ್ಟರು. ಬಾಲ್ಡ್ ವಿನ್ನರ ಇಬ್ಬರು ಮಕ್ಕಳನ್ನು ಪಾರ್ವತೀಬಾಯಿ ನೋಡಿಕೊಳ್ಳುತ್ತಿದ್ದರು.

ವಿದ್ಯಾರ್ಥಿಯೊಬ್ಬರ ಅನಗತ್ಯ ಪ್ರವೇಶ

ಭಾರತದ ಬಂಗಾಳದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿಯಲು ಬಂದ ವಿದ್ಯಾರ್ಥಿಯೊಬ್ಬನಿಗೆ ಪಾರ್ವತೀಬಾಯಿ ಬಾಲ್ಡ್ ವಿನ್ನರ ಮನೆಯಲ್ಲಿ ಕೆಲಸ ಮಾಡುವ ಸಮಾಚಾರ ತಿಳಿದು ಆಕೆಯನ್ನು ತನ್ನ ಮನೆಗೆ ಕರೆಯಿಸಿ ‘’ಕರ್ವೆ ಅವರು ತಮ್ಮನ್ನು ಅಮೆರಿಕೆಗೆ ಕಳುಹಿಸಿ, ಭಾರತದ ಹೆಣ್ಣು ಮಗಳಾದ ತಾವು ವಿದೇಶೀಯರ ಮನೆಗಳಲ್ಲಿ ಕೆಲಸ ಮಾಡುವುದು, ಭಾರತೀಯನಾದ ನನಗೆ ಅವಮಾನ. ದಯವಿಟ್ಟು ತಾವು ಭಾರತಕ್ಕೆ ಮರಳಿ ಹೋಗಿ! ‘’ ಎಂದ.

‘’ಅಮೆರಿಕೆಯಲ್ಲಿನ ವಿದ್ಯಾಸಂಸ್ಥೆಗಳನ್ನು ನೋಡಿ, ಇಂಗ್ಲಿಷು ಕಲಿತು, ಕಷ್ಟಪಟ್ಟು ಸಂಪಾದಿಸಿ, ಬಿಡುವು ಸಿಕ್ಕಿದಾಗ ವಿಧವಾಶ್ರಮದ ಬಗ್ಗೆ ಜನಕ್ಕೆ ತಿಳಿಸಲು ಯತ್ನಿಸುತ್ತೇನೆ. ಇದು ಅಪಮಾನದ ಕೆಲಸವಲ್ಲ. ನಾನೂ ಸದಾ ವಿದ್ಯಾರ್ಥಿನಿಯೇ, ಸ್ವಾಲಂಬಿಯಾಗಿದ್ದೇನೆ. ನನಗೂ ದೇಶಾಭಿಮಾನವಿದೆ’ ‘ಪಾರ್ವತೀಬಾಯಿ ವಾದಿಸಿದರು.

‘’ನಿಮಗೆ ಅವಮಾನವಾಗದೆ ಇದ್ದರೂ ವಿದೇಶಿಯರ ಎಂಜಲು ತಟ್ಟೆಗಳನ್ನು ನೀವು ತೊಳೆಯುವುದು ಸರಿ ಇಲ್ಲ, ನೀವು ಭಾರತಕ್ಕೆ ಹಿಂತಿರುಗಲೇಬೇಕು’’ ವಿದ್ಯಾರ್ಥಿ ಒತ್ತಾಯದಿಂದ ಹೇಳಿದ.

‘’ನನ್ನಲ್ಲಿ ಭಾರತಕ್ಕೆ ವಾಪಸ್ ಹೋಗಲು ಹಣವಿಲ್ಲ’ ‘ ಪಾರ್ವತೀಬಾಯಿ ಹೇಳಿದರು.

ವಿದ್ಯಾರ್ಥಿ ಗೋಖಲೆ ಅವರಿಗೆ  ತನ್ನ ಸ್ವದೇಶ ಪ್ರೇಮ, ಪಾರ್ವತೀಬಾಯಿಯ ಬಗ್ಗೆ ತನಗಿರುವ  ಕನಿಕರ ಎಲ್ಲಾ ವಿವರಿಸಿದ. ಪಾರ್ವತೀಬಾಯಿ ಸ್ವದೇಶಕ್ಕೆ ಮರಳಲು ಗೋಖಲೆ ಹಣ ಕೊಟ್ಟರು. ಬರ್ಮಾ ವಿದ್ಯಾರ್ಥಿಯೊಬ್ಬನೊಡನೆ ಪಾರ್ವತೀಬಾಯಿಯನ್ನು ಕಳುಹಿಸಲು ಆಕೆಯ ಅನುಮತಿ ಕೇಳದೆ ಹಡಗಿನ ಟಿಕೆಟ್ ಕೊಂಡು ಪ್ರಯಾಣದ ಸಿದ್ಧತೆ ಮಾಡಿಯೇ ಬಿಟ್ಟ. ಕೆಲವರು ಭಾರತೀಯರ ನೆರವಿನಿಂದ ಪಾರ್ವತೀಬಾಯಿ ಸ್ವಲ್ಪ ನಷ್ಟದ ಮೇಲೆ ಹಡಗಿನ ಟಿಕೆಟ್ ಬೇರೆಯವರಿಗೆ ಮಾರಿ ಗೋಖಲೆಯವರಿಗೆ ಹಣವನ್ನು ಹಿಂತಿರುಗಿಸಿದರು.

ವಿಸ್ತಾರವಾದ ಕಾರ್ಯಕ್ಷೇತ್ರ

ಪುನಃ ಷೆನೆಕ್ಟಡಿಗೆ ಹೋಗಲು ಪಾರ್ವತೀಬಾಯಿ ಇಷ್ಟಪಡದೆ ಕೆಲಸ ಹುಡುಕಿಕೊಂಡು ನ್ಯೂಯಾರ್ಕನಲ್ಲೇ ಇರಲು ಇಷ್ಟಪಟ್ಟರು. ಯಂಗ್‌ ಇಂಡಿಯಾ ಕಚೇರಿಗೆ ಬಂದಿದ್ದ ಮಿಸ್ ಓರಲಿ ಎಂಬಾಕೆಯನ್ನು ಹರ್ಡೀಕರ್ ಎಂಬುವರು ಪಾರ್ವತಿಬಾಯಿಗೆ ಪರಿಚಯ ಮಾಡಿಸಿದರು. ವಾಷಿಂಗ್ ಟನ್ ನಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಮಹಿಳಾ ಕೆಲಸಗಾರರ ಪ್ರತಿನಿಧಿಯಾಗಿ ಪಾರ್ವತೀಬಾಯಿಯನ್ನು ಕಳುಹಿಸಬೇಕೆಂದು’ ಮಿಸ್ ಓರಲಿ ಹರ್ಡೀಕರರನ್ನು ಕೇಳಿದರು. ಪಾರ್ವತೀಬಾಯಿಯನ್ನು ಅಲ್ಲಿಗೆ ಕಳುಹಿಸುವಷ್ಟು ನನ್ನಲ್ಲಿ ಹಣವಿಲ್ಲ;’ ಎಂದು ಹರ್ಡೀಕರರು ಹೇಳಿದರು. ಪಾರ್ವತೀಬಾಯಿಯ ವಾಷಿಂಗ್ ಟನ್ ನ ಪ್ರವಾಸದ ವೆಚ್ಚವನ್ನು ಮಿಸ್ ಓರಲಿ ಅವರೇ ಕೊಟ್ಟರು. ೧೯೧೯ರಲ್ಲಿ ವಾಷಿಂಗ್ ಟನ್ನಿನಲ್ಲಿ ನಡೆದ ಈ ಅಂತರ ರಾಷ್ಟ್ರೀಯ ಮಹಿಳಾ ಕೆಲಸಗಾರರ ಸಮ್ಮೇಳನಕ್ಕೆ ಭಾರತದಿಂದ ಬಿ.ಪಿ. ವಾಡಿಯಾ, ಮಲ್ಹಾರ ನಾರಾಯಣ ಜೋಶಿ ಬಂದಿದ್ದರು. ಭಾರತೀಯರ ಪೈಕಿ ಮಹಿಳಾ ಪ್ರತಿನಿಧಿಯಾಗಿ ಪಾರ್ವತೀಬಾಯಿ ಒಬ್ಬರೇ. ಸಮ್ಮೇಳನ ಐದು ದಿನ ನಡೆಯಿತು. ಹದಿನೆಂಟು ರಾಷ್ಟ್ರಗಳಿಂದ ಪ್ರತಿನಿಧಿಗಳು ಬಂದಿದ್ದರು. ಪಾರ್ವತೀಬಾಯಿ ಮರಾಠಿಯಲ್ಲಿ ಮಾತನಾಡಿದರು. ಮರಾಠಿ ಭಾಷಣದ ಇಂಗ್ಲಿಷ್ ಅನುವಾದವನ್ನು ಮಿಸ್ ಓರಲಿ ಓದಿದರು. ಇದರಿಂದ ಪಾರ್ವತೀಬಾಯಿಗೆ ಅನೇಕರ ಪರಿಚಯವಾಯ್ತು. ಪಾರ್ವತೀಬಾಯಿ ಭಾರತದ ಮಹಿಳೆಯಾಗಿ ಗೌರವ ತಂದುಕೊಟ್ಟರು. ಪ್ರತಿದಿನ ಸಮ್ಮೇಳನ ಮುಗಿದ ನಂತರ ಮಿಸ್ ಓರಲಿ, ವಾಷಿಂಗ್ ಟನ್ನಿನ ಪ್ರೇಕ್ಷಣೀಯ ಸ್ಥಳಗಳಿಗೆ ಪಾರ್ವತೀಬಾಯಿಯನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತಿದ್ದರು.

ಅಂತರರಾಷ್ಟ್ರೀಯ ಮಹಿಳಾ ಕೆಲಸಗಾರರ ಸಮ್ಮೇಳನದಲ್ಲಿ ಭಾಷಣ

ಮಿಸ್ ಓರಲಿ ಅವರು ಪಾರ್ವತೀಬಾಯಿಯನ್ನು ಬ್ರುಕ್ಲಿನ್ ನಲ್ಲಿರುವ ತಮ್ಮ ತಾಯಿಯ ಬಳಿಗೆ ಕರೆದುಕೊಂಡು ಹೋದರು. ಮಿಸ್ ಓರಲಿಯವರ ವಯಸ್ಸು ಐವತ್ತ್ಮೂರು. ಆಕೆಯ ತಾಯಿಯ ವಯಸ್ಸು ಎಂಬತ್ತು. ಮಿಸ್ ಓರಲಿ ಇಂಗ್ಲಿಷ್ ಬಾಲಬೋಧೆ ತಂದು ಪಾರ್ವತೀಬಾಯಿಗೆ ಪಾಠ ಹೇಳಿಕೊಡತೊಡಗಿದರು. ಮಿಸ್ ಓರಲಿ ಅನೇಕ ಸಮಾಜ ಸೇವಾಕಾರ್ಯಗಳನ್ನು ಮಾಡುತ್ತಿದ್ದುದರಿಂದ  ಆಕೆಯನ್ನು ಅನೇಕ ಸಭೆ ಸಮಾರಂಭಗಳಿಗೆ ಕ್ಲಬ್ ನಲ್ಲಿ ಮಾತನಾಡುವುದೇ ಗೌರವ ಎಂಬುವಂತಹ ಸಂಸ್ಥೆಯಲ್ಲಿ ಮಾತನಾಡುವುದೇ ಗೌರವ ಎಂಬುವಂತಹ ಸಂಸ್ಥೆಯಲ್ಲಿ ಪಾರ್ವತೀಬಾಯಿ ಭಾಷಣ ಮಾಡಿದರು. ಪ್ರೊಫೆಸರ್ ಕರ್ವೆ ಸ್ಥಾಪಿಸಿದ ವಿಧವಾಶ್ರಮ ಮತ್ತು ಸ್ತ್ರೀ ವಿದ್ಯಾಭ್ಯಾಸದ ಬಗ್ಗೆ ತಿಳಿಸಿದರು.

ಒಂದು ಸಾರಿ ಮಹಿಳೆಯರ ಸಭೆಯೊಂದರಲ್ಲಿ ’ಕರ್ವೆ ಅವರ ವಿಧವಾಶ್ರಮದ ಕೆಲಸಕ್ಕಾಗಿ ಬಹಳ ನಡೆಯಬೇಕಾಗುತ್ತದೆ’ ಎಂದು ಪಾರ್ವತೀಬಾಯಿ ಹೇಳಿದಾಗ, ಅಲ್ಲಿನ ಮಹಿಳೆಯರೆಲ್ಲಾ ಸೇರಿ ಹಣ ಕೂಡಿಸಿ ಒಂದು ಕಾರನ್ನು ಕೊಂಡು ಕರ್ವೆ ಅವರಿಗೆ ಕಳುಹಿಸಿದರು.  ಅನೇಕ ಸಂಘ ಸಂಸ್ಥೆಗಳಲ್ಲಿ ಪಾರ್ವತೀಬಾಯಿ ವಿಧವಾಶ್ರಮ, ಸ್ತ್ರೀವಿದ್ಯಾಭ್ಯಾಸದ ಬಗ್ಗೆ ಮನಮುಟ್ಟುವಂತೆ ಉಪನ್ಯಾಸ ಮಾಡಿದ್ದರ ಫಲವಾಗಿ ಮೂರು ಸಾವಿರ ರೂಪಾಯಿಗಳವರೆಗೆ ಚಂದಾ ವಸೂಲಾಯ್ತು.

ಈ ವೇಳೆಗೆ ಭಾರತದಲ್ಲಿ ಮಹಾತ್ಮಾಗಾಂಧೀ ಅವರ ಅಸಹಕಾರ ಚಳವಳಿ ಪ್ರಾರಂಭವಾಯ್ತು. ಮಹಾತ್ಮರು ಬರೆದ ’ಅಸಹಕಾರ’ ಕೈಪಿಡಿಯನ್ನು ಅಮೆರಿಕೆಯ ’ಯಂಗ್ ಇಂಡಿಯಾ’ ಸಂಸ್ಥೆಯವರೂ ಹಂಚಲು ತರಿಸಿದ್ದರು. ಪಾರ್ವತೀಬಾಯಿ ಅದನ್ನು ತಂದು ಮಿಸ್ ಓರಲಿ ಅವರಿಗೂ ಒಂದು ಪ್ರತಿ ಕೊಟ್ಟರು.  ಭಾರತದ ರಾಜಕೀಯ ಹೋರಾಟದ ಬಗ್ಗೆ ಮಿಸ್ ಓರಲಿ ಅವರಿಗೂ ತಿಳಿಯಿತು.

ಕರ್ವೆ ಅವರು ಪಾರ್ವತೀಬಾಯಿ ಭಾರತಕ್ಕೆ ವಾಪಸಾಗಬೇಕೆಂದು ಪತ್ರ ಬರೆದರು. ಪಾರ್ವತೀಬಾಯಿ ಹೊರಡುವ ಸುದ್ದಿ ಕೇಳಿ ನ್ಯೂಯಾರ್ಕ್‌ನ ಅನೇಕ ಸ್ನೇಹಿತೆಯರು ಆಕೆಗೆ ಸಂತೋಷ ಕೂಟವನ್ನು ಏರ್ಪಡಿಸಿದರು.

ಒಡಹುಟ್ಟಿದ ಸೋದರಿಯಂತೆ ಕಂಡ ಮಿಸ್ ಓರಲಿ, ಅವರ ತಾಯಿ ಶಾಂತಿಸಾಗರದಂತೆ ಇದ್ದ ಅವರ ಮನೆಯನ್ನು ಬಿಟ್ಟು ಹೊರಡುವಾಗ ಪಾರ್ವತೀಬಾಯಿಗೆ ಹೃದಯ ಹಿಂಡಿದಂತಾಯ್ತು.

ಮರಳಿ ಭಾರತಕ್ಕೆ

೧೯೨೦ ಏಪ್ರಿಲ್ ೨೦. ವೈಟ್ ಸ್ಟಾರ್ ಒಲಿಂಪಿಕ್ ಎಂಬ ಹಡಗಿನಲ್ಲಿ ಪಾರ್ವತೀಬಾಯಿ ಭಾರತಕ್ಕೆ ಹೊರಟರು. ಪಾರ್ವತೀಬಾಯಿ ಲಂಡನ್ನಿನಲ್ಲಿ ಇಳಿದು ಹಿಂಗೆಣೆ ವಿಧವಾಶ್ರಮದಲ್ಲಿ ವಿದ್ಯಾರ್ಥಿನಿಯಾಗಿದ್ದ ದ್ವಾರಕಾ ಬಾಲಚಂದ್ರ ಅವರಲ್ಲಿಗೆ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿ ಭಾರತದ ಮಿತ್ರರಾದ ಪೋಲಕ್ ಅವರನ್ನು ಕಂಡರು. ಕೆಲವು ಸಭೆಗಳಲ್ಲಿ ವಿಧವಾಶ್ರಮದ ಬಗ್ಗೆ ಉಪನ್ಯಾಸ ಮಾಡಿ ಹಣ ಸಂಗ್ರಹಿಸಿದರು.

ಪಾರ್ವತೀಬಾಯಿ ೧೯೨೦ರ ಜುಲೈ ೧೫ ರಂದು ಮುಂಬಯಿ ತಲುಪಿದರು. ಮುಂಬಯಿಯಲ್ಲಿ ಎರಡು ಮೂರು ದಿನಗಳಿದ್ದು ತಮಗೆ ಅತ್ಯಂತ ಪ್ರಿಯವಾದ ಹಿಂಗಣೆ ವಿಧವಾಶ್ರಮಕ್ಕೆ ಮರಳಿದರು. ವಿಧವಾಶ್ರಮದ ಚಂದಾ ವಸೂಲಿಗಾಗಿ ಪಾರ್ವತೀಬಾಯಿ ಎಷ್ಟೋ ಕಡೆ ತಿರುಗಾಡಿದ್ದರಿಂದ ವಿದೇಶ ಪ್ರವಾಸವನ್ನೂ ಮಾಡಿ ಅಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ತಿಳಿದುಬಂದಿದ್ದರಿಂದ ಆಕೆ ಹಗಲೂ ರಾತ್ರಿ ವಿಧವೆಯರ ಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಚಿಂತಿಸಿ ಅದೇ ಕೆಲಸಕ್ಕಾಗಿ ಶ್ರಮಿಸುತ್ತಿದ್ದರು.

ವಿಚಾರ ರೀತಿ – ಸೇವೆಯ ಜೀವನ

ವಿದ್ಯೆಯಿಂದ ಅಜ್ಞಾನ ದೂರವಾಗುತ್ತದೆ. ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತು, ಸದ್ಗುಣ, ಘನತೆಯನ್ನು ತಾಯಿ ಚಿಕ್ಕಂದಿನಿಂದಲೇ ಕಲಿಸುತ್ತಾ ಬರಬೇಕು. ಗೃಹಿಣಿಯರಿಗೆ ಮುಖ್ಯವಾಗಿ ಬೇಕಾದ ಗೃಹ ವಿಜ್ಞಾನ, ಆಹಾರ ವಿಜ್ಞಾನ, ಶಿಶು ಸಂರಕ್ಷಣೆ, ಗೃಹ ವೈದ್ಯ, ಪ್ರಥಮ ಚಿಕಿತ್ಸೆ, ಗೃಹಶುದ್ಧಿ, ಹೊಲಿಗೆ ಇವುಗಳಲ್ಲಿ ಶಿಕ್ಷಣ ಕೊಡಬೇಕು. ಪಾಶ್ಚಾತ್ಯರಿಂದ ಕಲಿಯಬೇಕಾದ ವಿಷಯಗಳು ಶುಚಿತ್ವ, ಕಾರ್ಯತತ್ಪರತೆ, ಮಕ್ಕಳ ಪೋಷಣೆ, ವಂಶಗೌರವವನ್ನು ಉಳಿಸಿಕೊಳ್ಳಲು ಪಡುವ ಶ್ರಮ, ಅದನ್ನು  ಬಿಟ್ಟು ಪಾಶ್ಚಾತ್ಯರ ಬಾಹ್ಯ ಆಡಂಬರಗಳು ಅಲಂಕಾರಗಳನ್ನು ನಮ್ಮ ಹವಾಗುಣಕ್ಕೆ, ಧರ್ಮಕ್ಕೆ ಒಗ್ಗದೆ ಇದ್ದರೂ ಅನುಸರಿಸುವುದು ಹಾಸ್ಯಾಸ್ಪದ.

’ಮನೆ ಶುಚಿಯಾಗಿರಬೇಕು, ಅಲ್ಲಿ ಪ್ರೀತಿ, ಸಂತೋಷಗಳು ಬೆಳಗಬೇಕು’

ವಿದೇಶೀ ಮಹಿಳೆಯರು ವಿವಾಹದ ನಂತರವೂ ಸಂಸಾರದ ಕೆಲಸ ಜತೆಗೆ ಲೇಖನಗಳನ್ನು ಬರೆಯುವುದು, ಸಭೆಗಳಲ್ಲಿ ಉಪನ್ಯಾಸ ಮಾಡುವುದು, ನಗರ ನೈರ್ಮಲ್ಯ ಕೂಲಿ ಹೆಂಗಸರ ಬಗ್ಗೆ ಸುಧಾರಣೆ ಕಾರ್ಯಗಳಲ್ಲಿ ತೊಡಗುತ್ತಾರೆ. ’ಕೇವಲ ಅವಿವಾಹಿತ ಮಹಿಳೆಯರು, ವಿಧವೆಯರು ಮಾತ್ರ ಸಮಾಜಸೇವೆ ಸಲ್ಲಿಸಬೇಕು’ ಎನ್ನುವುದು ಹೋಗಿ ಸಮಾಜಸೇವೆಯಲ್ಲಿ ವಿವಾಹಿತ ಮಹಿಳೆಯರೂ ಪಾಲಗೊಂಡಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆದು, ಸಂಘ ಸಂಸ್ಥೆಗಳ ಗೌರವವೂ ಹೆಚ್ಚುತ್ತದೆ. ಸಕಲ ಸಂತೋಷಕ್ಕೂ ಮೂಲ ಕಾರಣ ಮನೆ. ಇದನ್ನು ಅಂದವಾಗಿ ಶುಚಿಯಾಗಿ ಇಡಲು ಹೆಂಗಸು ಶ್ರಮಿಸಬೇಕು. ಮನೆಯಲ್ಲಿ ಪ್ರೀತಿ ಸಂತೋಷಗಳು ಬೆಳಗಬೇಕು. ಚೊಕ್ಕಟವಾಗಿ, ಶಿಸ್ತಾಗಿ, ಸರಳವಾಗಿ, ಅಂದವಾಗಿ ಉಡುಪು ಧರಿಸಬೇಕು. ತೀರ ವಯಸ್ಸಾದ ನಂತರ ವಿವಾಹ ಮಾಡುವುದು, ಪಾಶ್ಚಾತ್ಯ ರೀತಿಯಲ್ಲಿ ವಿವಾಹವಾಗುವುದೂ ಸರಿ ಇಲ್ಲ. ಮಕ್ಕಳಿಗೆ ವಿವಾಹದ ಬಗ್ಗೆ, ವಿವಾಹದ ಪವಿತ್ರ ಉದ್ದೇಶಗಳ ಬಗ್ಗೆ ತಾಯಿ ತಂದೆಯರು ಸರಿಯಾಗಿ ತಿಳಿ ಹೇಳಬೇಕು. ಈ ವಿಚಾರ ರೀತಿಯನ್ನು ಭಾರತದಲ್ಲಿ ಪ್ರಸಾರಮಾಡಲು ಪಾರ್ವತೀಬಾಯಿ ತಮ್ಮ ಉಳಿದ ಆಯಸ್ಸಿನಲ್ಲಿ ಶ್ರಮಿಸಿದರು. ಆಕೆಯ ಕಣ್ಮುಂದೆಯೇ ಹಿಂಗಣೆಯ ವಿಧವಾಶ್ರಮವು ಅತ್ಯುನ್ನತ ಮಟ್ಟಕ್ಕೆ ಏರಿತು.

ಪಾರ್ವತೀಬಾಯಿ ತಮ್ಮ ಜೀವನವನ್ನೆಲ್ಲಾ ವಿಧವಾಶ್ರಮದ ಸೇವೆಗಾಗಿ, ಮಹಿಳೆಯರ ಉದ್ಧಾರಕ್ಕಾಗಿಯೇ ಸವೆಯಿಸಿದರು. ವಿಧವೆಯರ ಕಷ್ಟಗಳನ್ನು ಕಂಡು ಅವರ ಸ್ಥಿತಿ ಸುಧಾರಿಸಲು ಹೆಣಗಿದ ಪಾರ್ವತೀಬಾಯಿ ತುಂಬು ಜೀವನವನ್ನು ನಡೆಸಿದರು. ಆಕೆ ಅಮೆರಿಕೆಯಿಂದ ಬಂದ ಅನಂತರವೂ ವರ್ಷದಲ್ಲಿ ಎಂಟು ಒಂಬತ್ತು ತಿಂಗಳು ಪ್ರವಾಸ ಮಾಡಿ ಹಿಂಗಣೆ ಆಶ್ರಮಕ್ಕೆ ಚಂದಾ ತರುತ್ತಿದ್ದರು. ಆಶ್ರಮದ ನಿರ್ವಹಣೆಯಲ್ಲಿ ಬಹು ಭಾಗ ಅವರದೇ. ಹಿಂಗಣೆ ಸ್ತ್ರೀ ಶಿಕ್ಷಣ ಸಂಸ್ಥೆಯಿಂದ ಆಕೆಗೆ ಎಪ್ಪತ್ತೈದು ರೂಪಾಯಿ ಮಾಸಿಕ ವೇತನ ಕೊಡುತ್ತಿದ್ದರು.

ಮಹಿಳೆಯರಿಗೆ ಆದರ್ಶ

ತೀರ ವಯಸ್ಸಾಗಿ ಆಕೆ ೧೯೪೧ರಲ್ಲಿ ಹಿಂಗಣೆ ಆಶ್ರಮದಿಂದ ನಿವೃತ್ತರಾದರು. ಆನಂತರ ಆಕೆಗೆ ಮುವ್ವತ್ತೈದು ರೂಪಾಯಿ ಮಾಸಿಕ ವಿಶ್ರಾಂತಿ ವೇತನ ಕೊಡುತ್ತಿದ್ದರು. ಆಕೆ ತೋಟದ ಕೆಲಸ, ಗಿಡಗಳನ್ನು ಬೆಳೆಸುವುದರಲ್ಲಿ ವೇಳೆ ಕಳೆಯುತ್ತಿದ್ದರು.

ವಿಶ್ರಾಂತಿ ಪಡೆದ ನಂತರವೂ ಸಮಾಜ ಸುಧಾರಣೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ವಿಧವೆಯರಿಗೆ ಸಂಬಂಧಿಸಿದ ಸಭೆಗಳಿಗೆ ಹೋಗುತ್ತಿದ್ದರು.

ಸಮಾಜ ಸುಧಾರಣೆಯ ಬಗ್ಗೆ, ಸ್ತ್ರೀ ಶಿಕ್ಷಣದಲ್ಲಿ ಇದ್ದಷ್ಟು ಆಸಕ್ತಿ ಆಕೆಗೆ ಪೂಜೆ ಪುನಸ್ಕಾರಗಳಲ್ಲಿ ಇರಲಿಲ್ಲ. ಆಕೆ ತುಂಬು ಜೀವನವನ್ನು ನಡೆಯಿಸಿ ೧೯೫೫ರ ಅಕ್ಟೋಬರ್ ೧೦ ರಂದು ಕಾಲವಶವಾದರು.

ಸಂಪ್ರದಾಯ ಮನೆತನದಲ್ಲಿ ಹುಟ್ಟಿ ಹೆಚ್ಚಿನ ಶಿಕ್ಷಣವಿಲ್ಲದೆ ಸಮಾಜ ಸುಧಾರಣೆಗಾಗಿ, ಸ್ತ್ರೀ ಶಿಕ್ಷಣಕ್ಕಾಗಿ ಜೀವನವನ್ನೆಲ್ಲಾ  ಮುಡಿಪಿಟ್ಟು ಹೋರಾಡಿದ ಪಾರ್ವತೀಬಾಯಿ ಆಠವ್ ಳೆವರ ಬದುಕು ಮಹಿಳೆಯರಿಗೆ ಆದರ್ಶ.