ಜನನ : ೭-೩-೧೯೩೮ – ಬೆಂಗಳೂರು, ಮೂಲನಾಮ ಸತ್ಯನಾರಾಯಣಮೂರ್ತಿ.

ಮನೆತನ: ಕಲಾವಿದರ ಹಾಗೂ ಸಂಪ್ರಾದಾಯಸ್ಥರ ಮನೆತನ. ಮಾತಾಮಹ ಶ್ರೀಕಂಠಯ್ಯನವರಿಗೆ ಲಾವಣಿ ಹಾಡುವ ಪರಿಪಾಠವಿತ್ತು. ತಂದೆ ರಾಮಚಂದ್ರಯ್ಯ ತಾಯಿ ಪಾರ್ವತಮ್ಮ. ಮಗಳು ಅರುಣಾ ಗೋಪಿನಾಥ್ ಸಹ ಉತ್ತಮ ಗಾಯಕಿ.

ಗುರುಪರಂಪರೆ : ಶ್ರೀ ಸಿಂಗ್ (ಬಹುಶಃ ಶಿವರಾಮ್‌ಸಿಂಗ್ ಇರಬಹುದು) ಹಾಗೂ ಡೇವಿಡ್ ಎಂಬುವರಲ್ಲಿ ಸಿತಾರ್ ವಾದನ ಕಲಿಕೆ. ಡಿ.ಬಿ. ಹರೀಂದ್ರ ಅವರಲ್ಲಿ ಕೆಲವು ಕಾಲ ಹಾರ್ಮೋನಿಯಂ ವಾದನದಲ್ಲಿ ಶಿಕ್ಷಣ ತಾತ ಶ್ರೀಕಂಠಯ್ಯನವರ ಮಾರ್ಗದರ್ಶನದಲ್ಲಿ ಲಾವಣಿ – ಜಾನಪದ ಗೀತೆಗಳ ಗಾಯನ ಅಭ್ಯಾಸ.

ಸಾಧನೆ : ಸುಮಾರು ೪೦ ವರ್ಷಗಳಿಂದಲೂ ಸುಗಮ ಸಂಗೀತದ ನಾನಾ ಕ್ಷೇತ್ರಗಳಲ್ಲಿ ಲಾವಣಿ. ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಇತ್ಯಾದಿ ಪ್ರಕಾರಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಸ್ವತಃ ತಾವೇ ಹಾರ್ಮೋನಿಯಂ ನುಡಿಸಿಕೊಂಡು ಹಾಡುವ ಪರಿಪಾಠ ಇವರದು. ಬೆಂಗಳೂರು ನಗರದಲ್ಲಿ ಇವರು ಕಾರ್ಯಕ್ರಮ ನೀಡದ ವೇದಿಕೆಗಳಲ್ಲವೆಂದರೂ ಅತಿಶಯೋಕ್ತಿಯಲ್ಲ.

ಐ.ಬಿ.ಹೆಚ್. ನ ಅಮರನಾದ್ ಧ್ವನಿ ಸುರುಳಿಯ ಮುಖ್ಯ ಸಚೇತಕರಾಗಿ ಸುಮಾರು ೩೦ ಕ್ಕೂ ಮಿಕ್ಕಿ ಧ್ವನಿ ಸುರುಳಿಗಳನ್ನು ಹೊರತರುವಲ್ಲಿ ಶ್ರಮಿಸಿದ್ದಾರೆ. ಪಾರ್ವತೀಸುತ ಎಂಬ ಕಾವ್ಯನಾಮದಲ್ಲಿ ಅನೇಕ ಕವನ – ಸಾಹಿತ್ಯ ರಚನೆ ಜೊತೆಗೆ ನಾಟಕ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ಮಾಡಿದ್ದಾರೆ. ದೂರದರ್ಶನದ ಕೆಲವೊಂದು ಧಾರಾವಾಹಿಗಳಿಗೆ ಸಾಹಿತ್ಯ – ಸಂಗೀತ ನೀಡಿದ್ದಾರೆ.

ಪ್ರಶಸ್ತಿ – ಸನ್ಮಾನ : ಇವರ ೬೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕಲ್ಯಾಣ ನಗರ ಯುವಕ ಸಂಘದಿಂದ ಕಲಾತಪಸ್ವಿ ಎಂಬ ಗೌರವ, ಸ್ಮರಣ ಸಂಚಿಕೆ ಪ್ರಕಟಣೆ ಮಾಡಲಾಗಿದೆ. ಇತ್ತೀಚೆಗೆ ಇವರ ೭೦ರ ಸಮಾರಂಭವೂ ಅದ್ದೂರಿಯಿಂದ ನಡೆದು ಗೌರವಿಸಲ್ಪಟ್ಟಿದ್ದಾರೆ. ಗಾನಸುಧಾ, ಭಾರತೀಯ ಸಂಸ್ಕೃತಿ ವಿದ್ಯಾಪೀಠದಿಂದ ಗೌರವ ಸನ್ಮಾನ ಸಂದಿರುವ ಪಾರ್ವತೀಸುತ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೬-೦೭ರ ವಾರ್ಷಿಕ ಪ್ರಶಸ್ತಿ ಸಂದಿದೆ.