ನಮ್ಮ ತಂದೆಯವರ ವಯಸ್ಸು ೫೪. ಅವರು ವೃತ್ತಿಯಲ್ಲಿ ಕೃಷಿಕರು. ಅವರಿಗೆ ಸುಮಾರು ೩ ವರ್ಷಗಳ ಹಿಂದೆ ಬಲಭಾಗದ ಸ್ವಾಧೀನ ತಪ್ಪಿ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಅವರನ್ನು ಎಲ್ಲಾ ಒಳ್ಳೆಯ ಡಾಕ್ಟರ್ಗೆ ತೋರಿಸಲಾಯಿತು. ಅಂಕೋಲಾಗೆ ಕರೆದೊಯ್ದು ವಿಶೇಷ ಚಕಿತ್ಸೆಯನ್ನು ನೀಡಲಾಯಿತು. ಆದರೂ ಬಲಗೈ ಬಲಗಾಲಿನ ಸ್ವಾಧೀನತೆ ಇಲ್ಲದೆ ಅವರು ಹಾಸಿಗೆ ಹಿಡಿದಿದ್ದಾರೆ. ಮಾತನಾಡುವಾಗ ಬಾಯಿ ತೊದಲುತ್ತದೆ, ಬಾಯಿಂದ ಎಂಜಲು ಸುರಿಯುತ್ತದೆ, ಅನ್ನವನ್ನು ಸರಿಯಾಗಿ ನುಂಗಲು ಆಗುತ್ತಿಲ್ಲ. ಇದರಿಂದ ತುಂಬಾ ನಿಶ್ಯಕ್ತರಾಗಿದ್ದಾರೆ. ಇದು ತುಂಬಾ ಯೋಚನೆಯಿಂದ ಬಂದದ್ದು, ಅವರು ಮನೋರೋಗದಿಂದ ನರಳುತ್ತಿದ್ದಾರೆ. ಅವರಿಗೆ ಮನೋಚಿಕಿತ್ಸೆಯ ಅವಶ್ಯಕತೆ ಇದೆಯೆಂದು ನನ್ನ ಸ್ನೇಹಿತರೊಬ್ಬರು ಸಲಹೆ ಇತ್ತಿದ್ದಾರೆ. ದಯವಿಟ್ಟು ಇದು ಮನೋರೋಗವೋ ದೈಹಿಕ ರೋಗವೋ ಎಂದು ತಿಳಿಸಿ. ಚಿಕಿತ್ಸೆಯ ಬಗ್ಗೆ ಸಲಹೆ ನೀಡಿ.

ಪಾರ್ಶ್ವವಾಯುವಿನ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು ಮತ್ತು ನಿಮಗೆ ಸಮರ್ಪಕವಾಗಿ ಅದರ ಬಗ್ಗೆ ಅರಿವು ಇಲ್ಲದಿರುವುದು ನಿಮ್ಮ ಈ ಪ್ರಶ್ನೆಗೆ ಕಾರಣ. ಪಾರ್ಶ್ವವಾಯು ಒಂದು ಖಾಯಿಲೆ ಅಲ್ಲ, ಬದಲಾಗಿ ನರದ ಪ್ರಮುಖ ಖಾಯಿಲೆಯ ಒಂದು ರೋಗಚಿನ್ಹೆ ಮಾತ್ರ. ಇದನ್ನು ಅರ್ಥಮಾಡಿಕೊಳ್ಳಲು ಈ ಕೆಳಕಂಡ ಉದಾಹರಣೆಯನ್ನು ಗಮನಿಸಿ. ನೀವು ವೃತ್ತಿಯಲ್ಲಿ ಕೃಷಿಕರು ಎಂದಿದ್ದೀರಿ. ನೀವು ನಿಮ್ಮ ಜಮೀನಿನಲ್ಲಿ ಒಳ್ಳೆಯ (ಪೈರನ್ನು) ಬೆಳೆಯನ್ನು ಪಡೆಯಬೇಕಾದರೆ ಅದಕ್ಕೆ ಸಮೃದ್ದ ನೀರಿನ ಸರಬರಾಜಿನ ಅವಶ್ಯಕತೆ ಇದೆ. ಈ ನೀರು ಮುಖ್ಯ ಕಾಲುವೆಯಿಂದ ಹಲವು ಉಪ ಕಾಲುವೆಗಳು, ಈ ಉಪ ಕಾಲುವೆಗಳಿಂದ ಸಣ್ಣ ಸಣ್ಣ ಕವಲು ಕಾಲುವೆಗಳಾಗಿ ಮತ್ತು ಚರಂಡಿಯ ಮೂಲಕ ನಿಮ್ಮ ಗದ್ದೆಗೆ ಬರುತ್ತದೆ. ಪ್ರಾಯಶಃ ಯಾವುದೋ ಕಾಲುವೆಯೋ ಅಥವಾ ಉಪಕಾಲುವೆಯೋ ಒಡೆದು ಹೋಗುವುದು ಅಥವಾ ಇನ್ನಿತರ ಕಾರಣಗಳಿಂದ ನೀರಿನ ಓಟದ ಗತಿಗೆ ಅಡ್ಡಿಯಾದರೆ ಆ ಮೂಲದಿಂದ ನೀರು ಪಡೆಯುತ್ತಿದ್ದ ಗದ್ದೆಯಲ್ಲಿನ ಪೈರು ನೀರಿಲ್ಲದೆ ಒಣಗುತ್ತದೆ. ಹೀಗಾಗಿ ಅದರಿಂದ ಯಾವ ಉತ್ಪತ್ತಿಯೂ ಇರುವುದಿಲ್ಲ.

ಅದೇ ರೀತಿ ಮೆದುಳಿನ ರಚನಾಕ್ರಮವನ್ನು ಗಮನಿಸಿ. ಮೆದುಳು ಎರಡು ಅರಗೋಳಗಳಾಗಿ ರಚಿಸಲ್ಪಟ್ಟಿದ್ದು ಪ್ರತಿಯೊಂದು ಅರೆಗೋಳದ ಮೇಲ್ಭಾಗವನ್ನು ಸೆರೆಬ್ರಲ್ ಕಾರ್ಟೆಕ್ಸ್ ಎಂದು ಕರೆಯಲಾಗುತ್ತದೆ. ಮೆದುಳಿನ ಜೀವಾಣುಗಳ ಮೂಲ ಈ ಕಾರ್ಟೆಕ್ಸ್‌ನಲ್ಲಿದ್ದು ಅಲ್ಲಿಂದ ಬಂದ ಎಳೆಗಳು ಮುಂದೆ ಜಡೆ ಹೆಣೆದುಕೊಂಡು ನರಗಳಾಗಿ ಮಾರ್ಪಾಡಾಗುತ್ತದೆ. ಮೆದುಳಿನ ಮಧ್ಯಭಾಗವನ್ನು ಮೆಡುಲ್ಲಾ ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ನರಗಳ ಎಳೆಗಳು ಮಾತ್ರ ಶೇಖರಿಸಲ್ಪಟ್ಟಿದ್ದು ಮೆದುಳಿನ ನರಗಳ ಎಳೆಗಳು ಬಲಭಾಗಕ್ಕೂ ವಿರುದ್ಧ ದೆಸೆಯಲ್ಲಿ ಸಾಗುತ್ತಿರುತ್ತದೆ. ಈ ರೀತಿ ಎಡಗಡೆಯ ಅರಗೋಲ ಮನುಷ್ಯನ ಬಲಭಾಗವನ್ನೂ ಬಲಗಡೆಯ ಅರೆಗೋಲ ಮನುಷ್ಯ ಎಡಭಾಗವನ್ನು ನಿಯಂತ್ರಣದಲ್ಲಿಟ್ಟಿರುತ್ತದೆ.

ಈ ವ್ಯವಸ್ಥೆಯ ಸಮರ್ಪಕ ಕಾರ್ಯ ನಿರ್ವಹಣೆಗೆ ಸಾಕಷ್ಟು ರಕ್ತ ಸಂಚಾರದ ಅವಶ್ಯಕತೆ ಇರುತ್ತದೆ. ಹೃದಯ ಒಮ್ಮೆ ಬಡಿದುಕೊಂಡಗಲೂ ಹೊರ ಬರುವ ರಕ್ತದ ಶೇಕಡ ೬೫ ಕ್ಕಿಂತ ಹೆಚ್ಚು ಭಾಗ ಮೆದುಳಿಗೆ ಅವುಗಳಿಗೆ ಮೀಸಲಾದ ರಕ್ತನಾಳಗಳ ಮೂಲಕ ಹೋಗುತ್ತದೆ. ಯಾವುದೇ ಕಾರಣದಿಂದ ಈ ರಕ್ತನಾಳಗಳು ಒಡೆದು ಹೋದಾಗ ಅಥವಾ ಕೊಬ್ಬಿನಿಂದ ಅದರ ಕವಾಟ ಮುಚ್ಚಲ್ಪಟ್ಟಾಗ ಈ ಮೂಲದಿಂದ ರಕ್ತವನ್ನು ಪಡೆಯುತ್ತಿರುವ ಮೆದುಳಿನ ಭಾಗ ಆಘಾತಕ್ಕೊಳಗಾಗುತ್ತದೆ. ಮತ್ತು ಆ ಮೂಲದಿಂದ ಹೊರಟ ನರಗಳ ಎಳೆಗಳು ನಿಷ್ಕ್ರಿಯವಾಗಿ ವ್ಯಕ್ತಿ ಪಾರ್ಶ್ವವಾಯು ಪೀಡಿತನಾಗುತ್ತಾನೆ.

ಪಾರ್ಶ್ವವಾಯುವಿನ ತೀವ್ರತೆ ಹಾಗೂ ಅದರ ಪುನಃಶ್ಚೇತನ ಕಾಲದ ಅವಧಿ, ರೋಗ ನಿವಾರಣೆಯ ಗುಣಮಟ್ಟ ಮೆದುಳಿಗೆ ಆದ ಆಘಾತದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಒಡೆದು ಹೋಗಿದ್ದು, ದೊಡ್ಡ ರಕ್ತನಾಳವೋ, ಸಣ್ಣ ರಕ್ತನಾಳವೋ ಮತ್ತು ಅದು ಘಾಸಿಗೊಳಿಸಿದ ಮೆದುಳಿನ ಆಯಾಮದ ಬಗ್ಗೆಯೂ ಅವಲಂಬಿತವಾಗಿರುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮೆದುಳಿನ ಕೆಳಭಾಗದಲ್ಲಿ ವಿರುದ್ಧ ದೆಸೆಯಲ್ಲಿ ತಿರುವಾಗಿ ಹೋಗುವ ನರಗಳು ಎಳೆಗಳು ಶೇಕಡ ೮೦ ರಷ್ಟು ಮಾತ್ರ. ಮಿಕ್ಕ ಶೇಕಡ ೨೦ ರಷ್ಟು ನರಗಳ ಎಳೆಗಳು ಅದೇ ಭಾಗದಲ್ಲಿ ಇಳಿದುಬಂದು, ಬಲ ಅರೆಗೋಳ ದೇಹದ ಬಲಭಾಗದ ಮೇಲೂ, ಎಡ ಅರೆಗೋಳ ದೇಹದ ಎಡ ಭಾಗದ ಮೇಲೂ ಅಲ್ಪ ಪ್ರಮಾಣದ ನಿಯಂತ್ರಣವನ್ನು ಇಟ್ಟುಕೊಂಡಿರುತ್ತದೆ. ಆದ್ದರಿಂದ ಮೆದುಳಿನ ಆಘಾತ ಅಲ್ಪ ಪ್ರಮಾಣವಾಗಿದ್ದರೆ ರೋಗಿ ಚೇತರಿಸಿಕೊಳ್ಳುತ್ತಾನೆ.

ಈ ರೀತಿ, ಪಾರ್ಶ್ವವಾಯುವಿನಿಂದ ನರಳುವುದಕ್ಕಿರುವ ಕೆಲವು ಸಾಮಾನ್ಯ ಕಾರಣವೆಂದರೆ ಹೆಚ್ಚಾದ ರಕ್ತದ ಒತ್ತಡ, ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವಿಕೆ, ಗುಹ್ಯ ರೋಗಕ್ಕೆ ಸಂಬಂಧಪಟ್ಟ ರೋಗಗಳಾದ ಸಕ್ಕರೆ ಖಾಯಿಲೆ ಇತ್ಯಾದಿ. ಅಪಘಾತದಲ್ಲಿ ಮೆದುಳಿಗೆ ಆಗುವ ಆಘಾತಗಳು, ಮೆದುಳಿನಲ್ಲಿ ಬೆಳೆಯುವ ಗಡ್ಡೆ ಪ್ರಮುಖವಾದದ್ದು. ರಕ್ತದ ಒತ್ತಡವನ್ನು ಸಮರ್ಪಕ ಚಿಕಿತ್ಸೆಯಿಂದ ನಿಯಂತ್ರಣದಲ್ಲಿ ಇರಿಸದಿದ್ದರೆ ಮೆದುಳಿನ ರಕ್ತನಾಳ ಯಾವ ಸಂದರ್ಭದಲ್ಲಿಯೂ ಒಡೆದು ಹೋಗಿ, ವ್ಯಕ್ತಿಯನ್ನು ಪಾರ್ಶ್ವವಾಯು ಪೀಡಿತನನ್ನಾಗಿ ಮಾಡಬಹುದು. ಸ್ನಾಯುಗಳ ಚಟುವಟಿಕೆ ನಿಧಾನಗತಿಯಲ್ಲಿದ್ದಾಗ ರಕ್ತನಾಳದಲ್ಲಿಯೇ ರಕ್ತ ಹೆಪ್ಪುಗಟ್ಟಿ ಈ ಹೆಪ್ಪು ಸಡಿಲಿಸಿಕೊಂಡು ರಕ್ತ ಸಂಚಾರದಲ್ಲಿ ಮುಂದೆ ಹೋಗಿ ರಕ್ತನಾಳವನ್ನು ಮುಚ್ಚಿ ಹಾಕುವ ಸಾಧ್ಯತೆಗಳು ಹೆಚ್ಚು. ಅದೇ ರೀತಿ ಕೊಬ್ಬು ಹೆಚ್ಚಾದಾಗ ರಕ್ತನಾಳದೊಳಗೆ ಸೇರಿಕೊಂಡು ಅದನ್ನು ಮುಚ್ಚಿ ಹಾಕುವ ಸಾಧ್ಯತೆ ಉಂಟು.

ಈಗ ನಿಮ್ಮ ತಂದೆಯವರನ್ನು ಒಳ್ಳೆಯ ನರರೋಗ ತಜ್ಞರನ್ನು ಕಂಡು ಪರೀಕ್ಷೆ ಮಾಡಿಸಿರಿ. ಈಗಿರುವ ಅವರ ಸ್ನಾಯುಗಳ ದುರ್ಬಲತೆ ಇಷ್ಟು ವರ್ಷಗಳ ನಂತರ ಚೇತರಿಕೆ ಆಗುವುದು ಕಷ್ಟಸಾಧ್ಯ. ಸಾಮಾನ್ಯವಾಗಿ ಸಿಡುಬಿನ ಖಾಯಿಲೆ ಬಂದು ಹೋದ ನಂತರವೂ ಮುಖದ ಮೇಲೆ ಕಪ್ಪು ಕಲೆಗಳು ಉಳಿದುಕೊಳ್ಳುವ ಹಾಗೆ, ಸ್ನಾಯುಗಳ ದುರ್ಬಲತೆಯೂ ಉಳಿದುಕೊಳ್ಳುವುದು. ಆದಕಾರಣದಿಂದಾಗಿ ಅವರನ್ನು ಒಳ್ಳೆಯ ಫಿಸಿಯೋ ಥೆರಪಿಸ್ಟ್‌ರನ್ನು ಕಂಡು ಅವರಿಂದ ಅಭ್ಯಾಸವನ್ನು ಕಲಿತುಕೊಂಡು ಸ್ನಾಯುಗಳ ಸ್ಥಾನಬದ್ಧತೆಯನ್ನು ಕಾಯ್ದುಕೊಳ್ಳಿ. ಹಿಂದೆ ಪಾರ್ಶ್ವವಾಯುವಿಗೆ ಕಾರಣವಾದ ಅಂಶವನ್ನು ನರರೋಗ ತಜ್ಞರಿಂದ ಕಂಡು, ತಿಳಿದು, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಮತ್ತೊಮ್ಮೆ ಪಾರ್ಶ್ವವಾಯು ಆಗುವ ಸಾಧ್ಯತೆ ತಪ್ಪೀತು.

ಆದ್ದರಿಂದ ಇದು ಪ್ರಮುಖವಾಗಿ ನರರೋಗವೇ ವಿನಾಃ ಮನೋರೋಗವಲ್ಲ. ರೋಗಿಯಲ್ಲಿರುವ ಅಸಂಬದ್ಧ ಅನುಚಿತ ವರ್ತನೆಗಳು, ವಿಕಲತೆಗಳು, ಮೆದುಳು ದುರ್ಬಲತೆಯಿಂದ ಕೆಳಗಿನ ಕೇಂದ್ರಗಳ ಮೇಲೆ ಅದು ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದು ಕಾರಣವಲ್ಲದೆ ಮನೋರೋಗವೇನಲ್ಲ. ಇದು ಹತೋಟೆ ತಪ್ಪಿದ ನಡವಳಿಕೆ ಮಾತ್ರ.