ಪಾಲಕ್ ಬೀಟ್‌ರೂಟ್ ಗುಂಪಿಗೆ ಸೇರಿದ ಪೌಷ್ಠಿಕ ಸೊಪ್ಪು ತರಕಾರಿ, ಬಹುಬೇಗ ಕೊಯ್ಲಿಗೆ ಬರುತ್ತದೆ.

ಪೌಷ್ಟಿಕ ಗುಣಗಳು : ಪಾಲಕ್ ಸೊಪ್ಪಿನಲ್ಲಿ ಗಣನೀಯ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೮೫.೮ ಗ್ರಾಂ
ಶರ್ಕರಪಿಷ್ಟ – ೧೩.೬ ಗ್ರಾಂ
ಪ್ರೊಟೀನ್ – ೧೩.೬ ಗ್ರಾಂ
ಕೊಬ್ಬು – ೦.೦೧ ಗ್ರಾಂ
ಖನಿಜ ಪದಾರ್ಥ – ೧.೦ ಗ್ರಾಂ
ರಂಜಕ – ೦.೦೬ ಗ್ರಾಂ
ಕ್ಯಾಲ್ಸಿಯಂ – ೦.೨೦ ಗ್ರಾಂ
ಕಬ್ಬಿಣ – ೦.೬೦ ಗ್ರಾಂ
’ಬಿ’ ಜೀವಸತ್ವ – ೭೦ ಮಿ.ಗ್ರಾಂ
’ಸಿ’ ಜೀವಸತ್ವ – ೮೦ ಮಿ.ಗ್ರಾಂ
ಕ್ಯಾಲೊರಿಗಳು – ೬೨

ಉಗಮ ಮತ್ತು ಹಂಚಿಕೆ : ಇದರ ತವರೂರಿನ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಲವರ ಅಭಿಪ್ರಾಯದಲ್ಲಿ ಇದರ ತವರೂರು ಭಾರತವಾದರೆ ಮತ್ತೆ ಕೆಲವರ ಅಭಿಪ್ರಾಯದಲ್ಲಿ ಅದು ಚೀನಾ ಆಗಿದೆ. ಚೀನಾ ದೇಶದಲ್ಲಿ ಕ್ರಿ.ಶ. ೬೪೭ ಕ್ಕೂ ಮುಂಚೆಯೇ ಇದರ ಬಗ್ಗೆ ತಿಳಿದಿತ್ತು.

ಸಸ್ಯ ವರ್ಣನೆ : ಪಾಲಕ್ ಚಿನೊಪೋಡಿಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಮೂಲಿಕೆ. ಹೆಚ್ಚು ಎತ್ತರಕ್ಕೆ ಬೆಳೆಯದ ಹಾಗೂ ಮೃದು ಕಾಂಡದ ಸಸ್ಯ. ಎಲೆಗಳು ರಸವತ್ತಾಗಿ ಹಸುರು ಬಣ್ಣವಿರುತ್ತವೆ. ಅಂಚು ಒಡೆದಿರುವುದಿಲ್ಲ. ಹೂವು ದ್ವಿಲಿಂಗಿಗಳಿದ್ದು ಸಾಕಷ್ಟು ಬೀಜವನ್ನು ಉತ್ಪಾದಿಸುತ್ತವೆ. ಇದು ಸೊಪ್ಪಿಗಾದರೆ ಏಕವಾರ್ಷಿಕವಾಗಿಯೂ ಮತ್ತು ಬೀಜೋತ್ಪಾದನೆಗಾದರೆ ದ್ವೈವಾರ್ಷಿಕವಾಗಿಯೂ ವರ್ತಿಸುತ್ತದೆ.

ಹವಾಗುಣ : ಇದಕ್ಕೆ ಚಳಿಯಿಂದ ಕೂಡಿದ ಹವಾಗುಣವಿದ್ದರೆ ಉತ್ತಮ. ಹಿಮ ಸುರಿದರು ಈ ಬೆಳಗೆ ಹಾನಿಯಾಗದು. ಸ್ವಲ್ಪಮಟ್ಟಿನ ಬಿಸಿಲನ್ನು ಸಹಿಸಬಲ್ಲದು. ಬಿಸಿ ಹವಾಮಾನವಿದ್ದರೆ ಹೂವು ಬಹುಬೇಗ ಕಾಣಿಸಿಕೊಳ್ಳುತ್ತವೆ. ಕರ್ನಾಟಕದಲ್ಲಿ ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬಿತ್ತಿ ಬೆಳೆಯಬಹುದು. ಆದರೆ ಸೆಪ್ಟೆಂಬರ್-ನವೆಂಬರ್ ಅತ್ಯುತ್ತಮ ಗುಣಮಟ್ಟದ ಫಸಲನ್ನು ಉತ್ಪಾದಿಸಬಲ್ಲದು. ಬೆಟ್ಟ ಪ್ರದೇಶಗಳಲ್ಲಿ ಮಾರ್ಚ್-ಮೇ ಸೂಕ್ತ.

ಭೂಗುಣ : ಇದರ ಬೇಸಾಯಕ್ಕೆ ನೀರು ಬಸಿಯುವ ಯಾವುದೇ ಮಣ್ಣಿನ ಭೂಮಿ ಒಪ್ಪುತ್ತದೆಯಾದರೂ ಅದು ಫಲವತ್ತಾಗಿರಬೇಕು. ಮಣ್ಣಿನ ರಸಸಾರ ೬ ರಿಂದ ೭ ರಷ್ಟಿದ್ದರೆ ಉತ್ತಮ.

ತಳಿಗಳು :

. ಆಲ್ಗ್ರೀನ್ : ಇದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ. ಎಲೆಗಳು ಒಂದೇ ತೆರನಾದ ಹಸುರು ಬಣ್ಣ ಹೊಂದಿದ್ದು ಮೃದುವಾಗಿರುತ್ತವೆ. ಆರರಿಂದ ಏಳು ಕೊಯ್ಲುಗಳು ಸಾಧ್ಯ. ಬಿಡಿಎಲೆಗಳು ೧೫ ಸೆಂ.ಮೀ. ಉದ್ದ ಮತ್ತು ೧ ಸೆಂ.ಮೀ. ಅಗಲ ಇರುತ್ತವೆ. ಇದು ಅಧಿಕ ಇಳುವರಿ ತಳಿಯಾಗಿದೆ.

. ಪೂಸಾಜ್ಯೋತಿ : ಇದೂ ಸಹ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ. ಎಲೆಗಳು ರಸವತ್ತಾಗಿದ್ದು, ದಪ್ಪನಾಗಿ, ಮೃದುವಾಗಿರುತ್ತವೆ. ಆಲ್‌ಗ್ರೀನ್ ತಳಿಗಿಂತ ಇದು ಹೆಚ್ಚಿನ ಪ್ರಮಾಣದ ಖನಿಜ ಹಾಗೂ ಜೀವಸತ್ವಗಳನ್ನು ಹೊಂದಿರುತ್ತವೆ. ಕೊ‌ಯ್ಲುಗಳ ಸಂಖ್ಯೆ ಸುಮಾರು ೮ ರಷ್ಟಿರುತ್ತದೆ.

. ಜಾಬ್ನರ್ಗ್ರೀನ್ : ಇದು ಉದಯಪುರ ವಿಶ್ವವಿದ್ಯಾನಿಲಯದ ಕೊಡುಗೆ. ೧೯೬೪ ರಲ್ಲಿ ಇದನ್ನು ವೃದ್ಧಿಪಡಿಸಿ ಬೇಸಾಯಕ್ಕೆ ಬಿಡುಗಡೆ ಮಾಡಲಾಯಿತು. ಇದರಲ್ಲಿ ಎಲೆಗಳು ದೊಡ್ಡವಿದ್ದು ಮಂದವಾಗಿರುತ್ತವೆ. ಅವು ಆಲ್‌ಗ್ರೀನ್ ತಳಿಯ ಎಲೆಗಳಿಗಿಂತ ಮೂರು ಪಟ್ಟು ದೊಡ್ಡವಿರುತ್ತವೆ. ಅವು ಒಂದೇ ತೆರನಾಗಿದ್ದು ಹಸುರು ಬಣ್ಣದ್ದಿರುತ್ತವೆ. ಮಣ್ಣಿನಲ್ಲಿ ಹೆಚ್ಚಿನ ರಸಸಾರ (೭ ರಿಂದ ೧೦.೫) ಇದ್ದರೂ ಇದು ಸಹಿಸಬಲ್ಲದು. ಪ್ರತಿ ಎಲೆಯಲ್ಲಿ ಉದ್ದನಾದ ಕೆನ್ನೀಲಿ ಗುರುತು ಇರುತ್ತದೆ. ಹೆಕ್ಟೇರಿಗೆ ೨೦ ಟನ್ನುಗಳಷ್ಟು ಸೊಪ್ಪನ್ನು ಉತ್ಪಾದಿಸುವ ಸಾಮರ್ಥ್ಯ ಇದಕ್ಕಿದೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ೨-೩ ಮೀಟರ್ ಉದ್ದ ಹಾಗೂ ೧.೨ ಮೀಟರ್ ಅಗಲ ಇರುವ ಮಡಿಗಳನ್ನು ಸಿದ್ದಗೊಳಿಸಿ ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರ, ಮೂರನೇ ಒಂದು ಭಾಗ ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಿ ೨೦ ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜವನ್ನು ತೆಳ್ಳಗೆ ಬಿತ್ತಿ ನೀರು ಕೊಡಬೇಕು. ೧೦ ಸೆಂ.ಮೀ. ಗೊಂದರಂತೆ ಸಸಿಗಳಿದ್ದರೆ ಸಾಕು. ಹೆಕ್ಟೇರಿಗೆ ೧೫ ರಿಂದ ೨೦ ಕಿ.ಗ್ರಾಂ. ಬೇಕಾಗುತ್ತದೆ. ಅವು ಸುಮಾರು ೧೦ ದಿನಗಳಲ್ಲಿ ಮೊಳೆಯುತ್ತವೆ. ಬೀಜ ಬೇಗ ಮೊಳೆಯುವಂತೆ ಮಾಡಲು ಅವುಗಳನ್ನು ೫-೬ ತಾಸುಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

ಗೊಬ್ಬರ : ಹೆಕ್ಟೇರಿಗೆ ೨೦-೨೫ ಟನ್ ತಿಪ್ಪೆಗೊಬ್ಬರ, ೧೫೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ ರಂಜಕ ಹಾಗೂ ೧೦೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡಬೇಕು. ಸಾರಜನಕದ ಉಳಿದ ಭಾಗವನ್ನು ಎರಡು ಸಮಭಾಗ ಮಾಡಿ, ಎರಡನೇ ಹಾಗೂ ಮೂರನೇ ಕೊಯ್ಲುಗಳ ನಂತರ ಕೊಡಬೇಕು. ಬೀಜ ಮೊಳೆತ ಸುಮಾರು ೧೫ ದಿನಗಳ ನಂತರ ಹಾಗೂ ಪ್ರತಿ ಕೊಯ್ಲಿನ ನಂತರ ಶೇಕಡಾ ೧.೫ ರಷ್ಟು ಯೂರಿಯಾ ದ್ರಾವಣವನ್ನು ಸಿಂಪಡಿಸಿದರೆ ಸೊಪ್ಪು ಸೊಂಪಾಗಿ ಬೆಳೆಯುತ್ತದೆ.

ನೀರಾವರಿ : ಈ ಬೆಳೆಗೆ ಹದವರಿತು ನೀರು ಕೊಡಬೇಕು. ಪ್ರಾರಂಭದಲ್ಲಿ ಕೈ ನೀರು ಕೊಡಬಹುದು. ನೀರು ಹನಿಸುವ ಡಬ್ಬಿ ಇದ್ದರೆ ಉತ್ತಮ. ಮುಂದಿನ ದಿನಗಳಲ್ಲಿ ಹವಾ ಮತ್ತು ಭೂಗುಣಗಳನ್ನನುಸರಿಸಿ ೪-೫ ದಿನಗಳಿಗೊಮ್ಮೆ ನೀರುಕೊಡಬೇಕಾಗುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕಾಗುತ್ತದೆ. ಸೊಪ್ಪು ಬೆಳೆದಂತೆಲ್ಲಾ ಕಳೆಗಳು ಅಷ್ಟಾಗಿ ಬೆಳೆಯಲಾರವು.

ಕೊಯ್ಲು ಮತ್ತು ಇಳುವರಿ : ಬಿತ್ತನೆಯಾದ ೩೦-೪೦ ದಿನಗಳಲ್ಲಿ ಮೊದಲ ಕೊಯ್ಲು ಸಾಧ್ಯ. ಮೂರು ವಾರಗಳಿಗೊಮ್ಮೆ ಸೊಪ್ಪನ್ನು ಕೊಯ್ಲು ಮಾಡಬಹುದು. ಬೆಳೆ ಅವಧಿಯಲ್ಲಿ ೩-೪ ಕೊಯ್ಲುಗಳಿರುತ್ತವೆ. ಹೆಕ್ಟೇರಿಗೆ ಸುಮಾರು ೧೦ ಟನ್ನುಗಳಷ್ಟು ಸೊಪ್ಪು ಸಾಧ್ಯ.

ಕೀಟ ಮತ್ತು ರೋಗಗಳು :

. ಸಸ್ಯಹೇನು : ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೨೦ ಮಿ.ಲೀ. ಆಕ್ಸಿಡೆಮೆಟಾನ್ ಮೀಥೈಲ್ ಇಲ್ಲವೇ ೫ ಮಿ.ಲೀ. ಫಾಸ್ಫಮಿಡಾನ್ ಬೆರೆಸಿ ಬಿತ್ತನೆಯಾದ ಮೂರು ವಾರಗಳ ನಂತರ ಬೆಳೆಯ ಮೇಲೆ ಸಿಂಪಡಿಸಬೇಕು. ಹೆಕ್ಟೇರಿಗೆ ಸುಮಾರು ೨೫೦ ಲೀಟರ್ ಸಿಂವರಣಾ ದ್ರಾವಣಾ ಬೇಕಾಗುತ್ತದೆ.

. ಎಲೆ ತಿನ್ನುಬ ಕಂಬಳಿಹುಳು : ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮ್ಯಾಲಾಥಿಯಾನ್ ಇಲ್ಲವೇ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬಹುದು. ಒಂದೆರಡು ಸಿಂಪರಣೆಗಳಾದರೆ ಸಾಕು.

. ಸರ್ಕೊಸ್ಪೋರ ಎಲೆಚುಕ್ಕೆ : ಎಲೆಗಳ ಮೇಲೆಲ್ಲಾ ಗುಂಡಗಿನ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ತೀವ್ರ ಹಾನಿಯಿದ್ದಾಗ ಸೊಪ್ಪು ಆಕರ್ಷಣೆ ಕಳೆದುಕೊಳ್ಳುತ್ತದೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೨೫ ಗ್ರಾಂ ಜೈನೆಬ್ ಬೆರೆಸಿ ಸಿಂಪಡಿಸಬೇಕು.

. ತುಕ್ಕು : ಎಲೆಗಳ ಮೇಲೆ ಕಂದು ಬಣ್ಣದ ಧೂಳು ಕಾಣಿಸಿಕೊಳ್ಳುತ್ತದೆ. ಅಂತಹ ಎಲೆಗಳು ನಿಸ್ತೇಜಗೊಂಡು, ವಿಕಾರವಾಗುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಗ್ರಾಂ ನೀರಲ್ಲಿ ತೊಯ್ಯುವ ಗಂಧಕ ಬೆರೆಸಿ ಸಿಂಪಡಿಸಬೇಕು.

ಬೀಜೋತ್ಪಾದನೆ : ಹೆಕ್ಟೇರಿಗೆ ಸುಮಾರು ಒಂದು ಟನ್ ಬೀಜ ಸಾಧ್ಯ. ಆಲ್‌ಗ್ರೀನ್ ತಳಿ ಬಿತ್ತನೆ ಮಾಡಿದ ಸುಮಾರು ೮೦ ದಿನಗಳಲ್ಲಿ ಬೀಜೋತ್ಪತ್ತಿ ಮಾಡಬಲ್ಲದು. ಪಾಲಕ್ ಬೀಜ ಸುಮಾರು ೩-೪ ವರ್ಷಗಳವರೆಗೆ ಜೀವಂತವಿರುತ್ತವೆ.

* * *